ಕವಿತೆ: ಮೌನ
– ವಿನು ರವಿ.
ತಾಯ ಮಡಿಲ ತುಂಬಿ
ನಿದಿರ ಕಣ್ಣಲಿ ನಗುವ
ಕಂದನ ತುಟಿಯಂಚಲಿ
ಒಂದು ಮುದ್ದು ಮೌನ
ಹಸಿರು ಎಲೆಗಳ ಬಲೆಯಲಿ
ಮ್ರುದುಲ ದಳಗಳ ಬಿರಿದು
ಸಮ್ಮೋಹನಿ ಸುಮರಾಣಿಯ
ಒಂದು ಸುರಬಿ ಮೌನ
ನಲ್ಲೆಯ ಮುಗಿಯದ ಮಾತಿಗೆ
ಕಣ್ಣಂಚಲೇ ಹುಸಿನಗೆ
ಬೀರುತ ನಗುವ ನಲ್ಲನ
ಒಂದು ತುಂಟ ಮೌನ
ದೇಗುಲದಿ ಶಿರಬಾಗಿ
ಇಶ್ಟ ಕಶ್ಟ ಗಳ ನಿವೇದಿಸುತಾ
ಕಣ್ಮುಚ್ಚಿ ನಿಂತ ಬಕ್ತನ
ಒಂದು ದಿವ್ಯ ಮೌನ
ನೂರು ತಾರೆಗಳಿದ್ದರೂ
ಜೊತೆಯಾಗಿ ಯಾರೂ ಬರದ
ಚೆಲುವ ಚಂದಿರನ
ಒಂದು ಒಂಟಿ ಮೌನ
ಅನಂತ ವಿಲಾಸದಲಿ
ಅನನ್ಯ ಚೆಲುವಿನಲಿ ಯಾರ
ಹೊಗಳಿಕೆಯ ಬಯಸದ ಬೂರಮೆಯ
ಒಂದು ರಮ್ಯ ಮೌನ
ಬಾಳಿನ ಬವಣೆಯ ನಡುವೆ
ಬಾವ ಕೊಳಲಿನ ಮೋಹನ
ರಾಗಕೆ ಮಿಡಿದು ಹಾಡುವ
ಒಂದು ಕವಿಯ ಮೌನ
( ಚಿತ್ರ ಸೆಲೆ : blog.pshares.org )
nice