ಮಕ್ಕಳ ಕತೆ : ಹುಚ್ಚನ ಸಲಹೆ

ವೆಂಕಟೇಶ ಚಾಗಿ.

ಸಾಮ್ರಾಜ್ಯ, kingdom

ಗೋರಕಪುರ ಎಂಬ ರಾಜ್ಯದಲ್ಲಿ ಮಹಾವದನ ಎಂಬ ರಾಜ ಆಳ್ವಿಕೆ ಮಾಡುತ್ತಿದ್ದನು. ಗೋರಕಪುರ ರಾಜ್ಯವು ನೈಸರ‍್ಗಿಕ ಸಂಪತ್ತಿನಿಂದ ಸಮ್ರುದ್ದವಾಗಿತ್ತು. ಜನರು ಸುಕ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು. ಮಹಾವದನನು ತನ್ನ ರಾಜ್ಯವನ್ನು ವಿಸ್ತರಣೆ ಮಾಡುವ ಗೋಜಿಗೆ ಹೋಗದೆ ತನ್ನ ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದನು. ಯತಾ ರಾಜ ತತಾ ಪ್ರಜಾ ಎನ್ನುವಂತೆ ಪ್ರಜೆಗಳು ಸಹ ಯಾವುದೇ ಅತಿಯಾದ ಆಸೆ ಮಾಡದೆ ತಮ್ಮ ಕೆಲಸಕಾರ‍್ಯಗಳಲ್ಲಿ ತ್ರುಪ್ತಿ ಕಾಣುತ್ತಾ ಸಂತೋಶದಿಂದ ಬದುಕುತ್ತಿದ್ದರು.

ಒಮ್ಮೆ ಗೋರಕಪುರ ರಾಜ್ಯಕ್ಕೆ ಮಹಾ ಕಾಯಿಲೆಯೊಂದು ಆವರಿಸಿತು. ಗೋರಕಪುರದ ಜನತೆ ಈ ಮಹಾ ಕಾಯಿಲೆಗೆ ತುತ್ತಾಗಿ ನರಳತೊಡಗಿದರು. ರಾಜ ಮಹಾವದನನು ತನ್ನ ಪ್ರಜೆಗಳನ್ನು ಬೇಟಿಯಾಗಿ ಪರಿಸ್ತಿತಿಯ ಬಗ್ಗೆ ವಿಚಾರಿಸಿದನು. ಅನೇಕ ವೈದ್ಯರನ್ನು ಕರೆಯಿಸಿ ತನ್ನ ಪ್ರಜೆಗಳ ಚಿಕಿತ್ಸೆಗೆ ನೇಮಿಸಿದನು. ಆದರೂ ಮಹಾಕಾಯಿಲೆಯು ಉಲ್ಬಣಗೊಳ್ಳತೊಡಗಿತು. ತನ್ನ ಮಂತ್ರಿಗಳನ್ನು ಕರೆದು ಕಾಯಿಲೆಗೆ ಕಾರಣವನ್ನು ಪತ್ತೆ ಹಚ್ಚಲು ಹಾಗೂ ಅದಕ್ಕೆ ಸೂಕ್ತ ಪರಿಹಾರವನ್ನು ಕಂಡುಹಿಡಿಯಲು ತಿಳಿಸಿದನು.

ಹಲವರು ತಮ್ಮದೇ ಆದ ವಿಚಾರಗಳನ್ನು ರಾಜನಿಗೆ ತಿಳಿಸಿದರು. ಕೆಲವರು ದೇವರ ಶಾಪವೆಂದೂ, ಮತ್ತೆ ಕೆಲವರು ಕಾಲದಿಂದ ಕಾಲಕ್ಕೆ ಬರುವ ಗಂಡಾಂತರವೆಂದೂ, ಮತ್ತೆ ಕೆಲವರು ದೂಮಕೇತುವಿನ ಪ್ರಬಾವವೆಂದು, ಮತ್ತೆ ಕೆಲವರು ಯಾರೋ ಮಾಟ-ಮಂತ್ರ ಮಾಡಿಸಿರಬೇಕು ಎಂದು ತಿಳಿಸಿದರು. ಆದರೆ ರಾಜನಿಗೆ ಈ ಯಾವ ಕಾರಣಗಳು ಸೂಕ್ತವೆನಿಸಲಿಲ್ಲ. ಎಲ್ಲ ಕಾರಣಗಳು ಪ್ರತಿವರ‍್ಶ ಎಲ್ಲರೂ ಹೇಳುವಂತಹ ಹಾಗೂ ಮೂಡನಂಬಿಕೆಯ ಕಾರಣಗಳಾಗಿವೆ. ಆದರೆ ಈ ಮಹಾ ಕಾಯಿಲೆಗೆ ಬೇರೊಂದು ಕಾರಣವಿರಬಹುದು ಎಂದು ರಾಜನಿಗೆ ಅನಿಸಿತು. ಈ ಕಾಯಿಲೆಗೆ ಸೂಕ್ತ ಕಾರಣ ಹಾಗೂ ಪರಿಹಾರವನ್ನು ಹೇಳಿದವರಿಗೆ ಬಹುಮಾನ ನೀಡುವುದಾಗಿ ರಾಜ ಗೋಶಿಸಿದನು.

ದಿನಗಳು ಕಳೆದರೂ ಯಾರೂ ಕೂಡ ಮಹಾ ಕಾಯಿಲೆಯ ಕಾರಣ ಹಾಗೂ ಪರಿಹಾರವನ್ನು ತಿಳಿಸಲಿಲ್ಲ . ಒಂದು ದಿನ ರಾಜ ಮಾರುವೇಶದಲ್ಲಿ ರಾಜ್ಯವನ್ನು ಸುತ್ತುತ್ತಿರುವಾಗ ದಾರಿಯಲ್ಲಿ ಒಬ್ಬ ಹುಚ್ಚ ಕಂಡನು. ಜನರು ಅವನನ್ನು “ಹುಚ್ಚ ಹೋಗು ” ಎಂದು ಬೈದು ಕಳಿಸುತ್ತಿದ್ದರು. ಹುಚ್ಚ ಮಾತ್ರ ಎಲ್ಲರಿಗೂ ” ಸ್ವಚ್ಚವಾಗಿರ‍್ರೋ ಸ್ವಚ್ಚವಾಗಿರ‍್ರೋ” ಎಂದು ಕಿರುಚುತ್ತಾ ಓಡಾಡುತ್ತಿದ್ದನು. ರಾಜ ಅವನನ್ನು ನಿಲ್ಲಿಸಿ ಸರಿಯಾಗಿ ಹೇಳು ಎಂದು ಕೇಳಲು, ಹುಚ್ಚನು ರಾಜನನ್ನು ಕುರಿತು “ಹೇ ಹುಚ್ಚ, ಮೊದಲು ಸ್ವಚ್ಚವಾಗಿರು ಎಲ್ಲಾ ಸರಿ ಹೋಗುತ್ತೆ.” ಎಂದು ಕೂಗುತ್ತಾ ಓಡಿ ಹೋದನು. ರಾಜನಿಗೆ ಅವನ ಮಾತಿನಲ್ಲಿ ಏನೋ ಸತ್ಯ ಅಡಗಿದೆ ಎಂದು ಅನಿಸಿತು. ಅರಮನೆಗೆ ತೆರಳಿ ತನ್ನ ಮಂತ್ರಿ ಸಾಮಂತರನ್ನು ಕರೆದು ರಾಜ್ಯದ ಪ್ರತಿ ನಗರಗಳನ್ನು ,  ಹಳ್ಳಿಗಳನ್ನು ಸ್ವಚ್ಚವಾಗಿಡಲು ಆಗ್ನೆ ಮಾಡಿದನು. ಹಾಗೂ ತನ್ನ ಪ್ರಜೆಗಳೆಲ್ಲರೂ ಸ್ವಚ್ಚವಾಗಿ ಇದ್ದು ಸ್ವಚ್ಚತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದನು. ರಾಜನ ಆಗ್ನೆಯನ್ನು ಪಾಲಿಸದವರಿಗೆ ಸೂಕ್ತ ದಂಡನೆಯನ್ನು ಕೂಡ ನೀಡಲು ತಿಳಿಸಿದನು.

ಅಂದಿನಿಂದ ರಾಜ್ಯದ ಎಲ್ಲಾ ಪ್ರಜೆಗಳು ರಾಜನು ಸೂಚಿಸಿದ ಸ್ವಚ್ಚತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸತೊಡಗಿದರು. ದಿನಗಳು ಉರುಳಿದಂತೆ ಗೋರಕಪುರ ರಾಜ್ಯದಲ್ಲಿ ಸಾಂಕ್ರಾಮಿಕ ರೋಗಗಳು ಕ್ಶೀಣಿಸಿದವು. ಜನರ ಆರೋಗ್ಯದಲ್ಲಿ ಬಹುತೇಕ ಚೇತರಿಕೆ ಕಂಡುಬಂದಿತು. ಹುಚ್ಚನ ಸಲಹೆಯಂತೆ ಸ್ವಚ್ಚತೆಗೆ ನೀಡಿದ ಮಹತ್ವವು ಪಲಿಸಿತು.

( ಚಿತ್ರಸೆಲೆ : ancient-origins.net )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: