ಕವಿತೆ : ಕರುಣಾಳು ಬಂದುಬಿಡು ಒಮ್ಮೆ

– ವಿನು ರವಿ.

ಪ್ರಾರ‍್ತನೆ, Prayer

ಓ ದೇವರೆ
ನೀ ಕರುಣಾಳು
ಯುಗ ಯುಗಗಳಲಿ
ಕರೆದಾಗ ಬಂದಿರುವೆ

ನಿನ್ನ ನಂಬಿದವರು ಎಂದೂ
ಸೋತಿಲ್ಲ ಅಲ್ಲವೇ
ಬಂದುಬಿಡು ಒಮ್ಮೆ
ಯಾವ ರೂಪದಲ್ಲಾದರೂ

ಯಾವ ರೀತಿಯಲ್ಲಾದರೂ
ರಾಮನೊ ನರಸಿಂಹನೊ
ದೇವಿಯೊ ಮಹಾದುರ‍್ಗಿಯೊ
ಅಲ್ಲಾನೊ ಯೇಸುವೊ

ಬಂದುಬಿಡು ಒಮ್ಮೆ
ಆತಂಕದಲ್ಲಿರುವರು ನರರು
ಇದು ಸುರಾಸುರರ ಸಂಗರ‍್ಶವಲ್ಲ
ರಾಜ ಮಹಾರಾಜರ ಕಚ್ಚಾಟವಲ್ಲ
ದರ‍್ಮಾದರ‍್ಮಗಳ ಪೈಪೋಟಿಯಲ್ಲ

ನರನಿಂದ ನರನನ್ನೆ ಕಾಡುತಿದೆ
ವಿಶಾಸುರ ವೈರಾಣು ಬಯಂಕರ
ನರರ ನುಂಗಿ ನೊಣೆಯಲು
ಹರಡಿದೆ ಕಣ್ಣಿಗೆ ಕಾಣದ ಜಾಲ

ಅತಳ ವಿತಳ ಪಾತಾಳದಲ್ಲಡಗಿದರೂ
ಬಿಡದೆ ಹಿಡಿಯುವೆನೆಂದು
ಶಪತ ಮಾಡಿದೆ
ಅದಾವ ಅಸ್ತ್ರ ತರುವೆಯೊ

ಅದಾವ ರೂಪದಲಿ ಬರುವೆಯೊ
ಅದು ಹೇಗೆ ಸಂಹರಿಸುವೆಯೊ
ಕಾದಿರುವರು ನರರು ನಿನಗಾಗಿ
ಕೈ ಮುಗಿಯುತಿರುವರು

ನೀ ನೀಡುವ ವರವ ಬೇಡಿ
ಬಂದುಬಿಡು ಒಮ್ಮೆ
ಕಲಿಯುಗದ ಹಂತಕನ ಹೊಸಕಿ ಹಾಕಲು
ನಿನ್ನ ನಂಬಿದವರ ಕಾಪಾಡಲು
ಅಶಾಂತಿ ತೊಲಗಿ ಶಾಂತಿ ನೆಲಸಲು

(ಚಿತ್ರ ಸೆಲೆ: wikihow)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: