‘ನೀತಿಯ ನೆಲೆಗಟ್ಟಿಲ್ಲದ ವಾದವು ಮಾತಿನ ವ್ಯಬಿಚಾರ!’

“ವ್ಯಬಿಚಾರ” ಎನ್ನುವ ಶಬ್ದ ಕೇಳಿದೊಡನೆ ಮನಸಿಗೆ ಏನನ್ನಿಸುತ್ತದೆ? ತಪ್ಪು, ಅನೈತಿಕ, ಅದರ‍್ಮ ಹೀಗೆ ಮುಂತಾದ ವಿಚಾರಗಳು ಮನದಲ್ಲಿ ಒಮ್ಮೆ ಹಾದು ಹೋಗುತ್ತವೆ. ಸರಿ ತಾನೇ! ಹಾಗೆಯೇ, ಯಾವುದೇ ವಿಚಾರ ತೆಗೆದುಕೊಳ್ಳಿ, ಪರಸ್ಪರ ಸಹಮತ ಬರುವ ಮೊದಲು ಒಂದು ವಾದ, ಬಿನ್ನಾಬಿಪ್ರಾಯ ಇದ್ದೇ ಇರುತ್ತದೆ. ಪ್ರತಿ ಮನುಜನ ಆಲೋಚನಾ ವಿದಾನ, ಅವಲೋಕನದ ಪರಿ ವಿಬಿನ್ನವಾಗಿರುತ್ತದೆ. ವಾದ ವಿವಾದ, ನೀತಿ ಅನೀತಿ, ನಗು, ಅಳು ಇವೆಲ್ಲ ನಮ್ಮೆಲ್ಲರ ಜೀವನದ ಒಂದು ಅವಿಬಾಜ್ಯ ಅಂಗ. ಪರಸ್ಪರ ಬಿನ್ನಾಬಿಪ್ರಾಯವಿಲ್ಲದ ಮನೆ, ಊರನ್ನು ಯಾರಾದ್ರೂ ಕಂಡ್ದಿದೀರಾ? ಬಹಳ ಅಪರೂಪ, ಇಲ್ಲ ಇಲ್ಲವೇ ಇಲ್ಲ ಅನ್ನಬಹುದೇನೋ. ಆದರೆ ನಮ್ಮ ಹಿರಿಯರು ಯಾವಾಗಲು ಒಂದು ಮಾತು ಹೇಳುತ್ತಿರುತ್ತಾರೆ. ಆರೋಗ್ಯಕರ ಚರ‍್ಚೆ ಯಾವಾಗಲು ಒಳ್ಳೆಯದು ಅಂತ. ಇಲ್ಲಿ ಆರೋಗ್ಯಕರ ಎನ್ನುವ ಪದವನ್ನು ಗಮನಿಸಬೇಕು. ಅದು ತುಂಬಾ ಮುಕ್ಯ.

ಕನ್ನಡದ ಪ್ರಸಿದ್ದ ಲೇಕಕ ಎಸ್ ಎಲ್ ಬೈರಪ್ಪನವರು ಒಂದು ಕಡೆ ಹೇಳ್ತಾರೆ “ನೀತಿಯ ನೆಲೆಗಟ್ಟಿಲ್ಲದ ವಾದವು ಮಾತಿನ ವ್ಯಬಿಚಾರ “. ಎಶ್ಟೊಂದು ಅರ‍್ತಪೂರ‍್ಣ ಮಾತಲ್ಲವೇ ಇದು. ನೀತಿಯ ವಿರುದ್ದ ಪದ ಯಾವುದು? ಅನೀತಿ. ವ್ಯಬಿಚಾರ, ಅದರ‍್ಮ, ಅನೈತಿಕ! ನಮ್ಮ ವಾದದಲ್ಲಿ ಪ್ರಾಮಾಣಿಕತೆಯ ಕೊರತೆಯಿದ್ದು, ಸುಮ್ಮನೆ ನಮ್ಮ ಮೂಗಿನ ನೇರಕ್ಕೆ ಯೋಚಿಸಿ, ನಾವು ತಪ್ಪು ಎನ್ನುವ ಅರಿವಿದ್ದೂ ನಾವು ಹೇಳುವುದೇ ಸರಿ ಎಂದು ಸಾದಿಸ ಹೊರಡುವ ಹಾಗೆ ನಮ್ಮ ವಾದದ ಮಾತು ಇದ್ದರೆ ಅದು ಅನೀತಿ. ಅಂದ್ರೆ ವ್ಯಬಿಚಾರದಶ್ಟೇ ತಪ್ಪು ಎನ್ನುವುದು ಲೇಕಕರ ಮಾತಿನ ಸಾರ. ಎಶ್ಟೊಂದು ನಿಜ ಅಲ್ವ!

ಯಾವಾಗ ವಾದ ಗೆಲ್ಲಲು ನೀತಿಯನ್ನು ಮರೆತು, ಅನೀತಿಯ ಮಾರ‍್ಗದಲ್ಲಿ ವಾದಕ್ಕೆ ನಿಲ್ಲುತ್ತೇವೆಯೋ, ಅಲ್ಲಿ ಗೆದ್ದರೂ ಅದು ವ್ಯಬಿಚಾರಕ್ಕೆ ಸಮಾನ. ಅಂತ ಗೆಲುವಿಗೆ ಯಾವುದೇ ಅರ‍್ತವಿಲ್ಲ. ಸಾಮಾಜಿಕ ಮಾದ್ಯಮಗಳಲ್ಲಿ ನಡೆಯುವ ಅನಾರೋಗ್ಯಕರ ರಾಜಕೀಯ, ದಾರ‍್ಮಿಕ ಚರ‍್ಚೆ ವಾದಗಳನ್ನೇ ಗಮನಿಸಿ. ಅರ‍್ತವಿದೆಯಾ ಇವುಗಳಿಗೆ! ಸತ್ತು, ಮಣ್ಣಾಗಿ ಹೋಗಿರುವ ಜನರನ್ನು ಕೂಡ ಬಿಡದೆ ಎಳೆದು ತಂದು ಅವರ ಜನುಮ ಜಾಲಾಡಿ ಬಿಡುತ್ತಾರೆ. ಸತ್ತ ಮೇಲೆ ಮುಗಿತು, ನಾವೆಶ್ಟು ಬೊಬ್ಬೆ, ಹೊಡೆದರೂ, ಸತ್ತು ಹೋದ ಯಾವ ವ್ಯಕ್ತಿಯೂ, ಅವನು ಒಂದು ವೇಳೆ ತಪ್ಪೇ ಮಾಡಿದ್ದರೂ, ಮರಳಿ ಬಂದು ಸರಿಮಾಡಲು ಆಗಲ್ಲ.  ಈಗ ತಾನೇ ಮೀಸೆ ಬಲಿಯುತಿರುವ ಹುಡುಗರು, ದೇಶಕ್ಕಾಗಿ ಹೋರಾಡಿದ, ಮಡಿದ, ಇಲ್ಲವೇ ಉನ್ನತ  ಹುದ್ದೆಯನ್ನಲಂಕರಿಸಿದ ನಾಯಕರ ಬಗ್ಗೆ, ಕೆಟ್ಟದಾಗಿ ಸಾಮಾಜಿಕ ಮಾದ್ಯಮದಲ್ಲಿ ಬರೆಯುವುದನ್ನು ನೋಡುವಾಗ ವ್ಯತೆಯಾಗುತ್ತದೆ. ತಮ್ಮ ವಾದ ಗೆಲ್ಲಲು ಅನೀತಿಯ ವಾದ ಮಂಡನೆಯ ಅಗತ್ಯ ನಿಜವಾಗ್ಲೂ ಬೇಕೇ?

ಎರಡು ವರುಶಗಳ ಹಿಂದಿನ ಮಾತು. ನಾನು ಹುಟ್ಟಿ ಬೆಳೆದ ಊರಿನ ಒಂದು ವಾಟ್ಸಪ್ ಗ್ರೂಪಿಗೆ ಸೇರಲು ಆಮಂತ್ರಣ ದೊರಕಿತ್ತು ನನಗೆ. ನಮ್ಮಊರಿನ ಬಗ್ಗೆ ಗುಂಪು ಎಂದು ಸಂತೋಶದಿಂದ ಸೇರಿಕೊಂಡೆ. ಆದರೆ ಎರಡೇ ದಿನದಲ್ಲಿ ಬ್ರಮನಿರಸನವಾಯಿತು. ಹೆಸರಿಗೆ ಮಾತ್ರ ನಮ್ಮ ಊರು ಅನ್ನುವ ವಾಟ್ಸಪ್ ಗುಂಪು! ಆದರೆ ಅಲ್ಲಿ ನಡೆಯುತ್ತಿದ್ದದ್ದು ಬರೀ ರಾಜಕೀಯದ ಚರ‍್ಚೆ, ಊರಿನ ಬಗ್ಗೆ ಮಾತೇ ಇಲ್ಲ! ಆದ್ರೂ ಪರ‍್ವಾಗಿರ‍್ಲಿಲ್ಲ. ಒಬ್ಬ ಪ್ರಸಿದ್ದ ಸಿನಿಮಾ ನಟ. ಅವರು ಇಂದು ಏರಿರುವ ಎತ್ತರಕ್ಕೆ ಏರಲು ಅದೆಶ್ಟೋ ಶ್ರಮ ಪಟ್ಟಿದ್ದಾರೆ. ಅವರಲ್ಲಿರುವ ಪ್ರತಿಬೆ ಅವರನ್ನು ಆ ಎತ್ತರಕ್ಕೆ ಏರಿಸಿದೆ. ಸರಿ ರಾಜಕೀಯಕ್ಕೆ ಹೋದಮೇಲೆ ಬಿನ್ನ ವಿಚಾರ ಲಹರಿ ಇರೋದು ಸಹಜ. ಆದರೆ ಈ ವಾಟ್ಯಾಪ್ ಗ್ರೂಪ್ನಲ್ಲಿ ಯಾರೋ ಒಬ್ಬ ಹುಡುಗ ತುಂಬಾ ಕೆಟ್ಟ ಬಾಶೆ ಬಳಸಿ ಆ ನಟನ ತೇಜೋವದೆಯನ್ನು ಮಾಡುತ್ತಾನೆ. ಇದು ನೀತಿಯ ನೆಲೆಗಟ್ಟಿನ ಮೇಲೆ ಮಂಡಿಸಿದ ವಾದವೇ? ಆ ನಟ ಈ ಗುಂಪಿನಲ್ಲಿ ಇಲ್ಲ, ಈ ಹುಡುಗನಿಗೂ ಆ ನಟನಿಗೂ ಯಾವುದೇ ಸಂಬಂದವಿಲ್ಲ. ವಿಚಾರದಲ್ಲಿ ಬಿನ್ನಾಬಿಪ್ರಾಯವಿಟ್ಟುಕೊಂಡೇ, ಆ ನಟನ ವಿಚಾರದಾರೆ ಯಾಕೆ ತಪ್ಪು , ನನ್ನದು ಯಾಕೆ ಸರಿ ಎಂಬುದನ್ನು ಬರೆದು ಅರಿವು ಮೂಡಿಸುವ ಪ್ರಯತ್ನ ಮಾಡಬಹುದಿತ್ತು. ಅದನ್ನು ಬಿಟ್ಟು ವಯಕ್ತಿಕವಾಗಿ ತೇಜೋವದೆ ಮಾಡಿ ಒಂದು ನಾಲ್ಕು ಜನರ ಮೆಚ್ಚುಗೆ ಪಡೆದ ಮಾತ್ರಕ್ಕೆ ನೈತಿಕವಾಗಿ ಸರಿ ಎಂದು ಹೇಳಲು ಸಾದ್ಯವಿದೆಯೆ? ಒಂದು ದೊಡ್ಡ ನಮಸ್ಕಾರ ಹೇಳಿ ಗುಂಪಿನಿಂದ ಹೊರಗೆ ಬಂದೆ.

ನಮ್ಮ ವಾದ ಗೆಲ್ಲಬೇಕೆಂದು ನಾವು ಕೀಳುಮಟ್ಟಕ್ಕೆ ಇಳಿಯುವುದು ಎಶ್ಟರ ಮಟ್ಟಿಗೆ ಸಮರ‍್ತನೀಯ? ನಮಗೆ ಆತ್ಮ ಸಾಕ್ಶಿ ಇಲ್ಲವೇ. ನಮ್ಮ ವಾದ ಸರಿಯೇ ಇರಬಹುದು, ಆದರೆ ಅದನ್ನು ನೇರವಾಗಿ, ಸರಿಯಾದ ದಾರಿಯಲ್ಲಿ ಹೋರಾಡಿ ಸಮರ‍್ತಿಸಿಕೊಳ್ಳಬೇಕಲ್ಲವೇ? ವಯಸ್ಸಿಗೂ ಮರ‍್ಯಾದೆ ಕೊಡದೆ, ಅತಿ ಕೆಟ್ಟದಾಗಿ ಇನ್ನೊಬ್ಬರ ಬಗ್ಗೆ, ಮಹನೀಯರ ಬಗ್ಗೆ  ಸಾಮಾಜಿಕ ಮಾದ್ಯಮಗಳಲ್ಲಿ ಬರೆಯುತ್ತಾರೆ. ಜನರಿಗೆ ಸರಿ ತಪ್ಪಿನ ಅರಿವಿದ್ರು ಒಪ್ಪಿಕೊಳ್ಳಲು ಯಾರೂ ತಯಾರಿಲ್ಲದಂತಾಗಿದೆ ಇಂದಿನ ಸಮಾಜದ ಪರಿಸ್ತಿತಿ. ಎಲ್ಲರೂ ತಮ್ಮ ತಮ್ಮ ಮೂಗಿನ ನೇರಕ್ಕೆ ವಿಚಾರ ಮಂಡಿಸುವವರೇ. ಶಾಲೆಯಲ್ಲಿ ಕಲಿತ ಪಾಟ, ಓದಿದ ನೀತಿ ಕತೆಗಳು ಎಲ್ಲವೂ ಮರೆತು ಹೋಗಿಬಿಟ್ಟಿವೆ. ನಾವೆಲ್ಲ ಪುಸ್ತಕಗಳನ್ನು, ಒಳ್ಳೆಯ ವಿಚಾರದಾರೆಗಳನ್ನು ಓದುವುದನ್ನು ಮರೆತೇ ಬಿಟ್ಟಿದೇವೆ. ಎಲ್ಲರೂ, ಸಾಮಾಜಿಕ ಮಾದ್ಯಮಗಳ ಗುಲಾಮರಾಗಿಬಿಟ್ಟಿದ್ದೇವೆ. ಇಂತಿರುವಾಗ ನಮ್ಮ ವಾದಗಳಲ್ಲಿ ನೀತಿ ಕಂಡುಬರಲು ಹೇಗೆ ಸಾದ್ಯ?

ಹಿಂದಿನ ಜಗತ್ತೇ ಚೆನ್ನಾಗಿತ್ತು. ಪರಸ್ಪರ ಪ್ರೀತಿ ವಿಶ್ವಾಸ ಇತ್ತು. ಪುಸ್ತಕಗಳು ಪ್ರಪಂಚವಾಗಿತ್ತು. ದೇಶ ಸುತ್ತು ಕೋಶ ಓದು ಮಂತ್ರವಾಗಿತ್ತು. ಆದರೆ ಈಗ ‘ಮೊಬೈಲ್ ನೋಡು ಕಾಮೆಂಟ್ ಮಾಡು’ ಮಂತ್ರವಾಗಿದೆ. ಆದರೂ, ನೈತಿಕತೆ, ನ್ಯಾಯ, ವಿನಯ, ಹಿರಿಯರಿಗೆ ಗೌರವ ಕೊಡುವ ಕಾಲ ಕಂಡಿತ ಇವತ್ತಲ್ಲ ನಾಳೆ ಬರುತ್ತದೆ, ಕಾಲವೇ ಎಲ್ಲದಕ್ಕೂ ಉತ್ತರ ಹೇಳುತ್ತದೆ ಎಂಬ ನಂಬಿಕೆ ಇದೆ. ಏಕೆಂದರೆ ಬದಲಾವಣೆ ಎಂಬುದು ನಿರಂತರ ಮತ್ತು ಅದೇ ಶಾಶ್ವತ!

(ಚಿತ್ರ ಸೆಲೆ: wallpaperflare.com

1 ಅನಿಸಿಕೆ

  1. ವ್ಯಭಿಚಾರದ ವಿಚಾರ ಪ್ರಸ್ತಾಪಿಸಿ ಅದಕ್ಕೊಂದು ನೈಜ ಅರ್ಥ ಕಲ್ಪಿಸುವಲ್ಲಿ ನಿಮ್ಮ ಪ್ರಯತ್ನ ನಿಜಕ್ಕೂ ಶ್ಲಾಗನೀಯ… ಬರವಣಿಗೆ ಮುಂದುವರೆಯಲಿ. ಶುಭಾಶಯಗಳು ?

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.