ಜೈಲಿನ ಅನುಬವ ನೀಡುವ ಹೋಟೆಲ್ – ಕರೋಸ್ಟಾ
ಲಾಟ್ವಿಯಾ ಯುರೋಪಿಯನ್ ಒಕ್ಕೂಟದ ಪುಟ್ಟ ನಾಡು. ಇಲ್ಲಿನ ಲಿಪಾಜಾ ನಗರದಲ್ಲಿರುವ ಕರೋಸ್ಟಾ ಜೈಲನ್ನು ಇಂದು ಹೋಟೆಲ್ ಆಗಿ ಮಾರ್ಪಡಿಸಲಾಗಿದೆ. ಅತ್ಯಂತ ವಿಶಿಶ್ಟ ಪ್ರವಾಸಿ ತಾಣವಾಗಿರುವ ಈ ಜೈಲು-ಹೋಟೆಲ್ ತನ್ನದೇ ಆದ ವೈಶಿಶ್ಟ್ಯವನ್ನು ಹೊಂದಿದೆ. ಹಿಂದೆಮಿಲಿಟರಿಯವರು ಕೈದಿಗಳನ್ನು ಉಪಚರಿಸುತ್ತಿದ್ದ ರೀತಿಯಲ್ಲೇ ಈ ಹೋಟೆಲ್ಗೆ ಬರುವ ಗ್ರಾಹಕರನ್ನು ಇಂದಿಗೂ ಉಪಚರಿಸುವ ವ್ಯವಸ್ತೆಯನ್ನು ಚಾಚೂ ತಪ್ಪದಂತೆ ಹಾಗೇ ಉಳಿಸಿಕೊಂಡಿರುವುದು ಇದರ ವಿಶೇಶತೆ. ಈ ಕಾರಣದಿಂದ ಇದು ಅತ್ಯಂತ ವಿಶಿಶ್ಟ ಪ್ರವಾಸಿ ಆಕರ್ಶಣೆಯಾಗಿ ಉಳಿದಿದೆ. ಇಪ್ಪತ್ತನೇ ಶತಮಾನದ ಆದಿ ಬಾಗದಲ್ಲಿ ಯುದ್ದ ಕೈದಿಗಳನ್ನು ಹೇಗೆ ಉಪಚಾರ ಮಾಡಲಾಗುತ್ತಿತ್ತು ಎಂಬುದನ್ನು ಪ್ರತ್ಯಕ್ಶವಾಗಿ ಅನುಬವಿಸಲು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.
ಕರೋಸ್ಟಾ ಜೈಲಿನ ಇತಿಹಾಸ ಗಮನಿಸಿದರೆ, 20ನೇ ಶತಮಾನದಲ್ಲಿ ಬಹುಪಾಲು ನಾಜಿ ಮತ್ತು ಸೋವಿಯತ್ ಮಿಲಿಟರಿ ಕಾರಾಗ್ರುಹವಾಗಿ ಇದನ್ನು ಬಳಸಲಾಗಿತ್ತು. ಇದರಲ್ಲಿ ಸಾವಿರಾರು ಕೈದಿಗಳು ವಿವಿದ ಕಾರಣಗಳಿಂದ ಸಾವನ್ನಪ್ಪಿದ್ದರು. ಕೆಲವರು ಅಸಹನೀಯ ನೋವು, ಹಸಿವು-ನೀರಡಿಕೆಯಿಂದ ಅಸುನೀಗಿದ್ದರೆ, ಮತ್ತೆ ಕೆಲವರನ್ನು ಅನಾರೋಗ್ಯ ಬಲಿ ತೆಗೆದುಕೊಂಡಿತ್ತು. ಇವರನ್ನು ಹೊರತು ಪಡಿಸಿ ಸತ್ತವರಲ್ಲಿ ಅನೇಕ ಕೈದಿಗಳ ತಲೆಗೆ ಗುಂಡಿಟ್ಟು ನಿರ್ದಯವಾಗಿ ಕೊಲೆ ಮಾಡಲಾಗಿತ್ತು. ಇಂತಹ ಬಯಾನಕ, ಮೈನಡುಗಿಸುವ ಸಾವಿನ ಕತೆಯನ್ನು ಹೇಳುವ ಈ ಕಾರಾಗ್ರುಹ, ಇಂದು ಹೋಟೆಲ್ ಆಗಿ ಪರಿವರ್ತನೆಗೊಂಡಿದೆ.
ಪ್ರವಾಸಕ್ಕೆ ಬರುವವರು ಈ ಕಾರಾಗ್ರುಹವನ್ನು ಸುತ್ತಿ ಹಳೆಯ ಜೈಲು ಸೌಲಬ್ಯಗಳ ಬಗ್ಗೆ ಹಾಗೂ ಸ್ತಳದ ಬಯಾನಕ ಚರಿತ್ರೆಯನ್ನು ತಿಳಿಯಲು ಅವಕಾಶ ಕಲ್ಪಿಸಲಾಗಿದೆ. ಜೈಲು ಸಂಗ್ರಹಾಲಯಕ್ಕೂ ಬೇಟಿ ನೀಡಬಹುದು. ಜೈಲಿನಂತಿರುವ ಈ ಹೋಟೆಲ್ನಲ್ಲಿ ಉಳಿಯಲು ಇಚ್ಚಿಸುವವರು ಸೆಲ್ ಒಂದನ್ನು ಸಹ ಕಾಯ್ದಿರಿಸಬಹುದು.
ವಿಶ್ವದಲ್ಲಿ ಹೋಟೆಲ್ ಆಗಿ ಪರಿವರ್ತನೆಗೊಂಡ ಏಕೈಕ ಜೈಲು ಇದೊಂದೇ ಅಲ್ಲ. ಇನ್ನೂ ಹಲವಿವೆ. ಕಮ್ಯೂನಿಸ್ಟ್ ಕಾಲದಲ್ಲಿನ ಜೈಲು ಜೀವನದ ನೈಜ್ಯತೆಯನ್ನು ತೋರಿಸುವ ಕಾರಣದಿಂದ ‘ಕರೋಸ್ಟಾ ಕಾರಾಗ್ರುಹ’ ಹೋಟೆಲ್ ಆಗಿ ರೂಪಾಂತರಗೊಂಡ ಇತರೆ ಕಾರಾಗ್ರುಹಗಳಿಗಿಂತ ಬಿನ್ನವಾಗಿ ನಿಲ್ಲುತ್ತದೆ. ನೈಜತೆಯೇ ಇದರ ವಿಶೇಶತೆ ಎಂದರೆ ತಪ್ಪಿಲ್ಲ. ಪ್ರವಾಸಿಗರನ್ನು ಆಕರ್ಶಿಸಲು ಇದು ಒಂದು ಗಿಮಿಕ್ನಂತೆ ಕಾಣಬಹುದು. ಅದು ಸತ್ಯವೂ ಹೌದು. ಎಲ್ಲಾ ಐಶಾರಾಮಿ ಹೋಟೆಲ್ ಗಳಂತೆ ಇದು ಉದ್ಯಾನವನ, ಈಜುಕೊಳ ಮುಂತಾದ ಸೌಲಬ್ಯಗಳನ್ನು ಹೊಂದಿಲ್ಲ. ಇಲ್ಲಿ ಉಳಿಯಲು ಬಯಸುವವರು ಇಲ್ಲಿನ ರೀತಿ ನೀತಿಗಳಿಗೆ, ಕೆಲವು ಉಪಚಾರಗಳಿಗೆ ಯಾವುದೇ ತಕರಾರಿಲ್ಲ ಎಂದು ಒಪ್ಪಿ ಹೋಟೆಲ್ನ ಆಡಳಿತದೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಉಳಿಯಲು ಅವಕಾಶವಿಲ್ಲ. ಇಲ್ಲಿ ಮರದ ಹಲಗೆಗಳ ಮೇಲೆ ಹಾಸಿರುವ ಹಳೆಯ ಹಾಸಿಗೆಯ ಮೇಲೆ ಮಲಗಬೇಕು. ಬಾಗಿಲಿನಲ್ಲಿನ ಕಿಂಡಿಯ ಮೂಲಕ ಸರಬರಾಲು ಮಾಡುವ ಊಟ ತಿಂಡಿಯನ್ನೇ ಸೇವಿಸಬೇಕು. ಕಾವಲುಗಾರರು ಕೆಟ್ಟ ಮಾತಿನಿಂದ, ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲಿ ಮರುಮಾತನಾಡದೆ ಸಹಿಸಿಕೊಳ್ಳಬೇಕು. ಎದುರಾಡದೆ ಅವರುಗಳ ಆದೇಶ ಪಾಲಿಸಬೇಕು ಹಾಗೂ ಅಲ್ಲಿಯ ಕಾನೂನು ಕಟ್ಟಳೆಗಳನ್ನು ಚಾಚೂ ತಪ್ಪದೆ ಅನುಸರಿಸಬೇಕು. ಇಂತಹ ಹಲವು ಕಟಿಣ ನೀತಿ ಸಂಹಿತೆಯನ್ನು ಪಾಲಿಸಲು ವಿಪಲವಾದರೆ, ದೈಹಿಕ ದಂಡನೆಯ ಜೊತೆ ಜೈಲಿನ ಸುತ್ತ ಸ್ವಚ್ಚತೆಯ ಕಾರ್ಯ ನಿರ್ವಹಿಸುವ ಶಿಕ್ಶೆ ವಿದಿಸಲಾಗುತ್ತದೆ.
ರೋಸ್ಟಾ ಬಂದಿಕಾನೆಯ ಅನುಬವ ಅತಿ ಕ್ರೂರ. ಇದು ವನ್ನಾಬೆಂ ಕೈದಿಗಳನ್ನು ನೆನೆಪಿಗೆ ತರುತ್ತದೆ ಎನ್ನುತ್ತದೆ ಇದೇ ಕಾರಾಗ್ರುಹದ ವೆಬ್ಸೈಟ್. ಇಲ್ಲಿಯ ವಿಚಿತ್ರ ಶಿಕ್ಶೆಗಳ ಅನುಬವ ಅತಿತಿಗಳನ್ನು ಹೆದರಿಸುವುದಲ್ಲದೆ, ಜೈಲು ಸಿಬ್ಬಂದಿ ಈ ಹೋಟೆಲ್ನಲ್ಲಿ ನಡೆಯುವ ಬೂತ ಚೇಶ್ಟೆಯ ಚಟುವಟಿಕೆಗಳ ಕತೆಗಳನ್ನು ರಸವತ್ತಾಗಿ ಹೇಳಿ ‘ಇನ್ ಮೇಟ್’ಗಳ ಮನದಲ್ಲಿ ಮತ್ತಶ್ಟು ಹೆದರಿಕೆ ಉಂಟುಮಾಡುತ್ತಾರೆ. ಇದ್ದಕ್ಕಿದ್ದಂತೆ ದೀಪದ ಬಲ್ಬುಗಳು ಕೆಳಕ್ಕೆ ಉದುರುವುದು, ಸೆಲ್ಲಿನ ಬಾಗಿಲುಗಳು ರಾತ್ರಿಯಲ್ಲಿ ಪಟಪಟನೆ ತಾಂತಾನೇ ತೆಗೆದುಕೊಳ್ಳುವುದು, ಮುಚ್ಚಿಕೊಳ್ಳುವುದು, ಸಬಾಂಗಣದಲ್ಲಿ ಸರಪಳಿಗಳ ಸಪ್ಪಳ ಪ್ರತಿದ್ವನಿಸುವುದು, ವಿಪರೀತ ಶೀತಗಾಳಿ ಬೀಸುವುದು, ಎಲ್ಲಾ ಇಲ್ಲಿ ಸಾಮಾನ್ಯ. ಇವೆಲ್ಲಾ ಇಲ್ಲಿ ಪ್ರಾಣ ತೆತ್ತ ಕೈದಿಗಳ ಆಟ, ಇವೇ ಮುಂತಾದ ಕೆಲವು ವಿಶಯಗಳನ್ನು ಕುರಿತು ಕತೆಗಳನ್ನು ಕಟ್ಟಿ ಅಲ್ಲಿನ ಸಿಬ್ಬಂದಿ ವರ್ಣಿಸುವಾಗ ಎಂತಹ ಗಂಡೆದೆಯಲ್ಲೂ ನಡುಕ, ಬಯ ಹುಟ್ಟುವುದರಲ್ಲಿ ಅನುಮಾನವೇ ಇಲ್ಲ.
ಈ ಕಟ್ಟವಡವನ್ನು 1900ರಲ್ಲಿ ನಿರ್ಮಿಸಿದ್ದು ಆಸ್ಪತ್ರೆಗಾಗಿ. ಸೋವಿಯತ್ ಮತ್ತು ನಾಜಿ ಆಡಳಿತಗಳು ಇದನ್ನು ಮಿಲಿಟರಿ ಕಾರಾಗ್ರುಹವಾಗಿ ಉಪಯೋಗಿಸಿತ್ತಿದ್ದವು. ಎರಡನೆಯ ಮಹಾಯುದ್ದದ ಸಮಯದಲ್ಲಿ, ನಾಜಿಗಳು ಲಾಟ್ವಿಯನ್ ತೊರೆದವರಿಗೆ ಮರಣದಂಡನೆ ವಿದಿಸಿ, ಇಲ್ಲಿನ ಪ್ರದೇಶದಲ್ಲಿ ಗಲ್ಲಿಗೇರಿಸುತ್ತಿದ್ದರು.
ಇಲ್ಲಿಗೆ ಬರುವ ಪ್ರವಾಸಿಗರಿಗೆ, ಇದು ನಿಜವಾದ ಕಾರಾಗ್ರುಹವಾಗಿದ್ದಾಗ ಇಲ್ಲಿದ್ದ ಬಂದಿಗಳು ಇದನ್ನು ಹೇಗೆ ಕಂಡಿದ್ದರು ಎನ್ನವುದನ್ನು ತಿಳಿಸಲು ಏಕಾಂತದ ಬಂದನದ ಸೆಲ್ನ ಬಾಗಿಲ ಮೇಲೆ ಒಂದು ಸಂದೇಶವಿದೆ. ಆ ಸಂದೇಶ ಲಾಟ್ವಿಯನ್ ಬಾಶೆಯಲ್ಲಿದ್ದು ಅದನ್ನು ಕನ್ನಡಕ್ಕೆ ತರ್ಜುಮೆಗೊಳಿಸಿದಾಗ ‘ನರಕದಿಂದ ನಿರ್ಗಮಿಸಲು” ಎಂಬರ್ತ ಬರುತ್ತದೆ. ಈ ಕಾರಾಗ್ರುಹ ಹೋಟೆಲ್ ಪ್ರತಿ ವರ್ಶ ಮೇ 1ರಿಂದ ಅಕ್ಟೋಬರ್ 30ರವರೆಗೆ ತೆರೆದಿರುತ್ತದೆ. ಉಳಿದ ಸಮಯದಲ್ಲಿ ಇಲ್ಲಿ ಇರಬಯಸುವವರು ಮೊದಲೇ ಕಾಯ್ದಿರಿಸುವುದು ಅವಶ್ಯಕ.
(ಮಾಹಿತಿ ಮತ್ತು ಚಿತ್ರ ಸೆಲೆ: atlasobscura.com, odditycentral.com)
ಇತ್ತೀಚಿನ ಅನಿಸಿಕೆಗಳು