ಕವಿತೆ: ಅಮ್ಮ
– ವಿನು ರವಿ.
ಅಮ್ಮಾ ಮತ್ತೊಮ್ಮೆ ನಿನ್ನಾ
ಮಡಿಲಲಿ ಮಗುವಾಗಿ ಬಳಿ ಸೇರುವಾಸೆ
ಬದುಕಿನಾ ವನವಾಸದಲಿ
ಬಳಲಿದೆ ಜೀವ
ನಿನ್ನೊಡಲ ಗರ‍್ಬದಲಿ
ಜಗದ ಸುಕವೆಲ್ಲಾ ಮಲಗಿದೆ
ಕರೆದುಬಿಡೆ ಒಮ್ಮೆ
ಬಾ ಮಗುವೇ
ಬಂದು ನನ್ನೊಡಲ
ಸೇರಿಕೊ ಎಂದು
ತಪ್ಪುಗಳ ಸರಿಪಡಿಸುತ್ತಾ
ಸೋಲುಗಳ ಗೆಲ್ಲಿಸುತ್ತಾ
ಜೀವನದ ತುದಿಯ
ಅರಸುತ್ತಾ ನಿಟ್ಟುಸಿರು ಗಳ ನಡುವೆ
ಕಳೆದು ಹೋಗಿರುವೆನಮ್ಮಾ
ನೂರು ಕನಸುಗಳ
ಮಹಡಿಯನೇರಿ
ಆಸೆಗಳ ದೀಪ ಹಚ್ಚಿ
ಗೆಲುವಿನಾ ತಾರೆಯ
ಎಟುಕಿಸಲು ಕೈ ಚಾಚಿ
ಸೋತಿರುವೆನಮ್ಮಾ
ನಿನ್ನಾ ಪ್ರೇಮದ ಸುದೆಯೊಂದೆ
ಬದುಕಿನ ನಿಜಚೇತನ
ತವಕಿಸುತಿದೆ ಮನ
ಕೈ ಚಾಚಿ ಬಳಿಗೆಳೆದು
ಎದೆಗಪ್ಪಿ ಮ್ರುದುವಾಗಿ
ನೇವರಿಸಿ ಸಂತೈಸಿಬಿಡು ಸಾಕು
ಎಲ್ಲಾ ಜಂಜಡಗಳ ತೊರೆದು
ಮೈಮರೆತು ಮಗುವಾಗಿ
ಮುದುಡಿ ನಿನ್ನೊರಗಿ ಬಿಡುವೆ
ಸುಕವಾಗಿ ಹಿತವಾಗಿ ಕರಗಿ ಬಿಡುವೆ
ಒಮ್ಮೆ ನಿನ್ನ ಬಳಿ ಕರೆದುಕೊಳ್ಳೆ ಅಮ್ಮಾ
(ಚಿತ್ರ ಸೆಲೆ: sparkthemagazine.com )
ಇತ್ತೀಚಿನ ಅನಿಸಿಕೆಗಳು