ತುಪ್ಪಳದ ಚಿಟ್ಟೆ

ಕೆ.ವಿ. ಶಶಿದರ.

ತುಪ್ಪಳದ ಚಿಟ್ಟೆ, Poodle Moth

ವೆನಿಜುವೆಲಾದಲ್ಲಿನ ತುಪ್ಪಳದ ಚಿಟ್ಟೆ, ನೋಡುವವರಿಗೆ ಸಂತೋಶ ಕೊಡುತ್ತದೆ ಹಾಗೂ ಅಶ್ಟೇ ಒಗಟಾಗಿದೆ. ಸಾಮಾನ್ಯವಾಗಿ ನಾಯಿಮರಿಗಳಲ್ಲಿ ಕಂಡುಬರುವ ತುಪ್ಪಳ ಈ ಚಿಟ್ಟೆಯಲ್ಲಿ ಕಾಣುತ್ತದೆ. ಹಾಗಾಗಿ ಇದು ಅದ್ಬುತ, ವಿಚಿತ್ರ ಮತ್ತು ಎಲ್ಲಕ್ಕೂ ಮಿಗಿಲಾಗಿ ಆಕರ‍್ಶಕ. ಕಪ್ಪು ಕಣ್ಣುಗಳು, ಮೀಸೆಯಂತಹ ಹುಬ್ಬುಗಳನ್ನು ಹೊಂದಿರುವ ಈ ಪುಟ್ಟ ಜೀವಿ ಹಿಮ ಪ್ರದೇಶದಲ್ಲಿನ ಬಿಳಿ ನಾಯಿಮರಿಯಂತೆ ತುಪ್ಪಳವನ್ನು ಹೊದ್ದಿರುವುದರಿಂದ ಇದು ಮುದ್ದಾದ ನಿಗೂಡ ಜೀವಿ. ಇದು ಈ ಜಗತ್ತಿನಲ್ಲೇ ಅತ್ಯಂತ ಆಕರ‍್ಶಕ ಸುಂದರ ಚಿಟ್ಟೆ.

ಈ ತುಪ್ಪಳದ ಚಿಟ್ಟೆಯನ್ನು ವೆನಿಜುವೆಲಾದ ಕ್ಯಾನಿಮಾ ರಾಶ್ಟ್ರೀಯ ಉದ್ಯಾನವನದಲ್ಲಿ 2009ರಲ್ಲಿ ಜರ‍್ಮನಿಯ ಚಾಯಾಗ್ರಾಹಕ ಆರ‍್ತರ‍್ ಅಂಕರ‍್ ಪತ್ತೆ ಹಚ್ಚಿದರು. ಈ ನಿಗೂಡ ಚಿಟ್ಟೆಯ ಹಲವಾರು ಚಿತ್ರಗಳನ್ನು ತೆಗೆದು, ಅವುಗಳನ್ನು ಅಂತರ‍್ಜಾಲದಲ್ಲಿ ಹರಿಯ ಬಿಟ್ಟರು. ಅಂತರ‍್ಜಾಲದಲ್ಲಿ ಇದರ ಆಕರ‍್ಶಣೆಗೆ ತುತ್ತಾದ ಲಕ್ಶಗಟ್ಟಲೆ ಜನ ನೋಡಿ ಕುಶಿಪಟ್ಟರು. ಹಾಗಾಗಿ ಇದರ ಇರುವಿಕೆ ಜಗಜ್ಜಾಹೀರಾಯಿತು. ಅಂತರ‍್ಜಾಲದಲ್ಲಿ ಕಂಡ ಇದು, ನಂತರ ಕಂಡು ಬಂದಿದ್ದು ನಿಯತಕಾಲಿಕೆಗಳ ಮುಕಪುಟದಲ್ಲಿ. ಇದು ಜೀವಶಾಸ್ತ್ರಜ್ನರಲ್ಲಿ ಕುತೂಹಲ ಕೆರಳಿಸಿತು. ಕಾರಣ ಇಂತಹ ಚಿಟ್ಟೆ ಇರುವ ಬಗ್ಗೆ ಅವರಲ್ಲಿದ್ದ ಅಜ್ನಾನ. ಇದೊಂದೇ ಅಲ್ಲ. ಈ ಬೂಮಿಯ ಮೇಲ್ಮೈನಲ್ಲಿ ಹಾಗೂ ಸಮುದ್ರಗಳಲ್ಲಿ ಇನ್ನೂ ಅನೇಕ ಜೀವರಾಶಿಗಳು ಮಾನವನ ದುರ‍್ಬೀನು ಕಣ್ಣನ್ನು ತಪ್ಪಿಸಿ ಹಾಯಾಗಿವೆ!!! ಇದರಿಂದಾಗಿ ಅವುಗಳ ಸಂತತಿ ಇನ್ನೂ ಜೀವಂತವಾಗಿದೆ. ಹೀಗೆ ಇರಲಿ ಎಂದು ಹಾರೈಸುವವರಲ್ಲಿ ನಾನು ಮೊದಲಿಗನಾಗ ಬಯಸುತ್ತೇನೆ.

ಹಿಮದಂತಹ ಬಿಳಿಯ ಈ ತುಪ್ಪಳದ ಚಿಟ್ಟೆ ಅಂತಿಮವಾಗಿ ‘ಪೂಡಲ್” ಎಂದು ಹೆಸರಾಗಿರುವುದು ಅದರ ಮೇಲಿರುವ ತುಪ್ಪಳದ ಪದರದಿಂದ. ವಿಶ್ವದಲ್ಲಿರುವ ಇಪ್ಪತ್ತೆಂಟಕ್ಕೂ ಹೆಚ್ಚು ಜಾತಿಯ ತುಪ್ಪಳದ ನಾಯಿಮರಿಗಳಂತೆ ಇದರ ತುಪ್ಪಳ ಸಹ ಇರುವುದು ಇದಕ್ಕೆ ವಿಶೇಶತೆ ತಂದು ಕೊಟ್ಟಿದೆ. ಹೆಚ್ಚಿನ ಸಸ್ತನಿಗಳು ಕೂದಲನ್ನು ಹೊಂದಿರುತ್ತವೆ. ಇದಕ್ಕೆ ಸ್ಪಶ್ಟವಾದ ಕೆಲಸವಿದೆ. ಸಸ್ತನಿಗಳು ತಮ್ಮ ದೇಹದ ಚಟುವಟಿಕೆಗಳನ್ನು ಸರಿಯಾಗಿ ನಿರ‍್ವಹಿಸಲು, ದೇಹದ ಉಶ್ಣತೆ ನಿರ‍್ದಿಶ್ಟ ತಾಪಮಾನದಲ್ಲಿ ಇರಬೇಕು. ಈ ಕೂದಲುಗಳ ದೇಹದ ತಾಪಮಾನವನ್ನು ರಕ್ಶಿಸುತ್ತದೆ. ಕೀಟಗಳಲ್ಲಿನ ಕೂದಲುಗಳು ಬೇರೆಯದೇ ಕಾರ‍್ಯ ನಿರ‍್ವಹಿಸುತ್ತವೆ. ಅವುಗಳ ಕೂದಲುಗಳು ಉಶ್ಣತೆಯನ್ನು ಉಳಿಸಿಕೊಳ್ಳುವ ಉದ್ದೇಶ ಹೊಂದಿಲ್ಲ. ಏಕೆಂದರೆ ಕೀಟಗಳು ಶೀತ-ರಕ್ತದ ಪ್ರಾಣಿಗಳು. ಆದರೆ ಈ ತುಪ್ಪಳದ ಕಾರ‍್ಯವ್ಯಾಪ್ತಿ ಇನ್ನೂ ಹೆಚ್ಚಿದೆ. ಪರಿಸರದ ಸಂವೇದನೆಯಿಂದ ಹಿಡಿದು, ವಾಸನೆಯನ್ನು ಕಂಡು ಹಿಡಿಯುವವರೆಗೂ ಇದು ಕೆಲ ಕೀಟಗಳಲ್ಲಿ ಕೆಲಸ ನಿರ‍್ವಹಿಸುತ್ತದೆ. ಪರಬಕ್ಶಕಗಳಿಂದ ತಮ್ಮನ್ನು ತಾವು ರಕ್ಶಿಸಿಕೊಳ್ಳಲು, ಅನೇಕ ಕೀಟಗಳು ತಮ್ಮ ಕೂದಲುಗಳನ್ನು ಬಳಸಿಕೊಳ್ಳುತ್ತವೆ. ಒಂದು ರೀತಿಯ ಆತ್ಮರಕ್ಶಣೆ.

ಅಂಟಾರ‍್ಟಿಕಾದಲ್ಲಿ ವಾಸಿಸುವ ಚಿಟ್ಟೆಗೆ ಹೊದಿಕೆ ಹಾಕಿದಂತೆ ಕಾಣುತ್ತದೆ ಈ ಚಿಟ್ಟೆಯ ಮೇಲಿರುವ ತುಪ್ಪಳ. ಅಲ್ಲಿಯ ಚಳಿ ವಾತಾವರಣಕ್ಕೆ ಇದು ಹೇಳಿ ಮಾಡಿಸಿದಂತಹ ಪ್ರಾಣಿಯಾದರೂ ಇದು ಇರುವುದು ಉಶ್ಣವಲಯದ ವೆನೆಜುವೆಲಾದಲ್ಲಿ. ಹಾಗಾಗಿ ವಾತಾವರಣದ ಉಶ್ಣತೆಯಿಂದ ಬಚಾವಾಗಲು ಈ ಚಿಟ್ಟೆ ತುಪ್ಪಳ ಹೊಂದಿಲ್ಲ ಎಂಬುದು ಸರ‍್ವವಿದಿತ.

2009ರಲ್ಲಿ ಪತ್ತೆಯಾದ ಈ ತುಪ್ಪಳದ ಚಿಟ್ಟೆ ಯಾವ ಕಾರಣಕ್ಕಾಗಿ ತುಪ್ಪಳವನ್ನು ಹೊಂದಿದೆ  ಎಂಬುದು ಇನ್ನೂ ನಿಗೂಡವಾಗಿಯೇ ಇದೆ. ಇದರಿಂದ ಅವುಗಳಿಗಾಗುವ ಪ್ರಯೋಜನವಾದರೂ ಏನು? ಯಾಕಾಗಿ ಅವುಗಳ ದೇಹಕ್ಕೆ ತುಪ್ಪಳದ ಹೊದಿಕೆ ಇದೆ? ಇವೇ ಮುಂತಾದ ವಿಶಯಗಳನ್ನು ಅರಿಯಲು ಹಲವು ಅದ್ಯಯನಗಳನ್ನು ಕೈಗೊಳ್ಳಲಾಗಿದೆ. ಅವುಗಳ ಹುಟ್ಟಿನಿಂದ ಸಾವಿನವರೆಗೂ ಅದರ ಪ್ರತಿ ನಿಮಿಶದ ಚಟುವಟಿಕೆಯನ್ನು ಗಮನಿಸಿ, ನಂತರವಶ್ಟೇ ಅದರ ನಿಗೂಡತೆಯನ್ನು ಬೇದಿಸಬಹುದು.

( ಮಾಹಿತಿ ಮತ್ತು ಚಿತ್ರಸೆಲೆ : science-explained.com, thedodo.com, dailymail.co.uk )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: