ದೆವ್ವಗಳ ಅತಿ ದೊಡ್ಡ ಸಂಗ್ರಹಾಲಯ!

ಕೆ.ವಿ. ಶಶಿದರ.

ದೆವ್ವಗಳ ತೋರುಮನೆ, Devils Museum

ವಿಶ್ವದಲ್ಲಿ ಅನೇಕ ವಸ್ತು ಸಂಗ್ರಹಾಲಯಗಳಿವೆ. ತಾಂತ್ರಿಕ ವಸ್ತುಗಳ, ಬಾಹ್ಯಾಕಾಶದ ವಸ್ತುಗಳ, ಇನ್ನಿತರೆ ವಸ್ತುಗಳ ಸಂಗ್ರಹಾಲಯಗಳು ಬಹಳಶ್ಟಿವೆ. ಅದರಂತೆ ಬೂತ/ದೆವ್ವಗಳ ವಸ್ತ ಸಂಗ್ರಹಾಲಯಗಳು ಸಾಕಶ್ಟಿವೆ. ಆದರೆ ಇವುಗಳಲ್ಲಿ ಕೌನಾಸ್ ನಲ್ಲಿರುವ ದೆವ್ವಗಳ ಸಂಗ್ರಹಾಲಯದಲ್ಲಿದ್ದಶ್ಟು ವೈವಿದ್ಯಮಯ ದೊಡ್ಡ ಸಂಕ್ಯೆಯ ‘ದೆವ್ವಗಳು’ ಬೇರಾವುದೇ ಸಂಗ್ರಹಾಲಯದಲ್ಲಿ ನೋಡಲು ಸಿಗುವುದಿಲ್ಲ 🙂

ಇಲ್ಲಿರುವ ದೆವ್ವಗಳಲ್ಲಿ ವೈವಿದ್ಯತೆಯಿದೆ. ಸಾವಿರಾರು ತಮಾಶೆಯ, ಬುದ್ದಿವಂತ, ಆಸಕ್ತಿದಾಯಕ, ಬಯಾನಕ ಮತ್ತು ತುಂಟತನದ ದೆವ್ವಗಳ ಆಗರ ಈ ಸಂಗ್ರಹಾಲಯ. ಇಲ್ಲಿರುವ ದೆವ್ವ ಬೂತಗಳ ಬಗ್ಗೆ ನಂಬಲಾಗದ ಕತೆಗಳು, ದಂತ ಕತೆಗಳು, ಜಾನಪದ ಕತೆಗಳು ಈ ವಸ್ತು ಸಂಗ್ರಹಾಲಯ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕೇಳಿಬರುತ್ತವೆ. ಲಿತುವೇನಿಯಾದ ಕೌನಾಸ್‍ನಲ್ಲಿರುವ ಈ ದೆವ್ವಗಳ ತೋರುಮನೆಯನ್ನು(museum) ವಿಶ್ವದ ಅತ್ಯಂತ ವಿಶಿಶ್ಟ ಸಂಗ್ರಹಾಲಯದ ಪಟ್ಟಿಯಲ್ಲಿ ಸೇರಿಸಲಾಗಿದೆ. ಮೂರು ಮಹಡಿಗಳನ್ನು ಹೊಂದಿರುವ ಈ ಸಂಗ್ರಹಾಲಯದಲ್ಲಿ ಸುಮಾರು ಒಂದು ಸಾವಿರದಶ್ಟು ದೆವ್ವ್ವಗಳ ಬೊಂಬೆಗಳಿವೆ. ಜಗತ್ತಿನ ಎಲ್ಲ ಕಡೆಯಿಂದ ಸಂಗ್ರಹಿಸಲಾದ ಈ ಬೊಂಬೆಗಳಲ್ಲಿ ಬಗೆ ಬಗೆಯ ಆಕಾರದ, ಗಾತ್ರದ, ಬಣ್ಣಗಳ ಹಾಗೂ ವಿಬಿನ್ನ ವಸ್ತುಗಳಿಂದ ತಯಾರಿಸಿದ ದೆವ್ವಗಳಿವೆ. ಒಂದೊಂದರಲ್ಲೂ ವೈವಿದ್ಯತೆ ಇರುವುದರಿಂದ ಈ ಸಂಗ್ರಹಾಲಯ ಅನನ್ಯವಾಗಿದೆ.

ಕೆಲವೊಂದು ಬೊಂಬೆಗಳು ಚೇಶ್ಟೆಯಿಂದ ನಗುತ್ತಿರುವುದು, ಮತ್ತೆ ಕೆಲವು ಕತ್ತಲ ಮೂಲೆಯಿಂದ ಹೆದರಿಸುವಂತೆ ಇಣುಕುತ್ತಿರುವುದು, ದುಶ್ಟರು ನಗುವಂತೆ ನಗುತ್ತಿರುವುದು, ಕಿರುಚುವಂತೆ ಇರುವುದು, ಇನ್ನೂ ಅನೇಕವನ್ನು ಇಲ್ಲಿ ಕಾಣಬಹುದು. ಅವುಗಳಲ್ಲಿ ಕೆಲವು ಸಾಮಾನ್ಯ ಮನುಶ್ಯರಂತೆ ಕಂಡುಬಂದರೂ, ಅವುಗಳ ತಲೆಯ ಮೇಲಿರುವ ಕೊಂಬಿನಿಂದಲಾದರೂ ಅತವಾ ಬಾಲದಿಂದಾದರೂ ಅವನ್ನು ದೆವ್ವ ಎಂದು ಪ್ರತ್ಯೇಕಿಸಬಹುದು. ಅವುಗಳ ಮುಕದ ಚಹರೆಯನ್ನು ಸೂಕ್ಶ್ಮವಾಗಿ ಗಮನಿಸಿದರೆ, ನರಕದಿಂದ ತಪ್ಪಿಸಿಕೊಂಡು ಬಂದು ಇಲ್ಲಿ, ಕೌನಾಸ್‍ನಲ್ಲಿ ನೆಲೆಸಿರುವುದಕ್ಕೆ ಸಂತೋಶಪಟ್ಟಂತೆ ಇವೆ!!!

ಮೊದಲ ಮಹಡಿ

ಸಂಗ್ರಹಾಲಯದ ಮೊದಲ ಮಹಡಿ ಪೂರ‍್ಣವಾಗಿ ಲಿತುವೇನಿಯನ್ ದೆವ್ವಗಳಿಗೆ ಮೀಸಲಿಡಲಾಗಿದೆ. ಇಲ್ಲಿ ಮಾನವನ ಮತ್ತು ಕೊಂಬಿನ ಜೀವಿಗಳ ನಡುವಿನ ಸಂಗರ‍್ಶ ಕಂಡು ಬರುತ್ತದೆ. ಇದು ಹೆಚ್ಚು ಬಯಂಕರ ಮತ್ತು ಬಯಾನಕವಾಗಿದೆ. ಹೆಚ್ಚಿನ ದೆವ್ವಗಳು ಕಲೆಯ ನೈಜ ಕ್ರುತಿಗಳು. ಕೆಲವೊಂದನ್ನು ಕ್ಯಾನ್ವಾಸ್ ಅತವ ನುಣುಪಾದ ಬಟ್ಟೆಯ ಮೇಲೆ ಚಿತ್ರಿಸಲಾಗಿದೆ. ಕೆಲವೊಂದನ್ನು ಮರದಲ್ಲಿ ಕೆತ್ತಲಾಗಿದೆ. ಮತ್ತೆ ಕೆಲವು ಸೆರಾಮಿಕ್ ಅತವಾ ಕಲ್ಲಿನಲ್ಲಿ ಮಾಡಲ್ಪಟ್ಟಿದೆ.

ಇಲ್ಲಿರುವ ಅನೇಕ ಗೊಂಬೆಗಳ ತಲೆಯ ಮೇಲೆ ಕೊಂಬಿನ ಜೊತೆ ಪುದೆಯ ಕೂದಲುಗಳು ಇರುವಂತೆ ಕೆತ್ತಲಾಗಿದೆ. ಒಂದೊಂದು ಬೊಂಬೆಯ ಸುತ್ತ ಒಂದೊಂದು ಕತೆಗಳನ್ನು ಹಣೆಯಲಾಗಿದೆ. ದೆವ್ವದ ಹೆಚ್ಚು ಚಿತ್ರಗಳು ಕಂಡುಬಂದಿರುವುದು ದೈನಂದಿನ ಕೆಲಸ ಕಾರ‍್ಯಗಳಿಗೆ ಬಳಸುವ ಪಾತ್ರೆ ಪಗಡಗಳಿಂದ, ಮನೆಯಲ್ಲಿ ಅಲಂಕಾರಕ್ಕಾಗಿ ಬಳಸುವ ಹೂದಾನಿಗಳಿಂದ, ಪಲಕಗಳಿಂದ, ಉಪ್ಪು ಮೆಣಸು ಮುಂತಾದ ಪದಾರ‍್ತಗಳನ್ನು ಹಾಕಿಡುವ ಡಬ್ಬಿಗಳಿಂದ, ಮರದಿಂದ ಮಾಡಿದ ವಸ್ತುಗಳಿಂದ ಮತ್ತು ನಳಿಕೆಗಳ ಹಿಡಿಕಟ್ಟಿನಿಂದ. ಇದರ ಮೇಲಿರುವ ದೆವ್ವಗಳು ಬೀತಿ ಹುಟ್ಟಿಸುವುದಕ್ಕಿಂತ ಮುಕದಲ್ಲಿ ನಗು ಅರಳಿಸುವ ದೆವ್ವವೇ ಹೆಚ್ಚು. ಇಲ್ಲಿಗೆ ಬರುವ ಪ್ರೇಕ್ಶಕರು ನಿಲ್ಲುವುದು, ಸಣ್ಣ ಚಿನ್ನದ ದೆವ್ವದ ಬಳಿ. ಇದು ಎಶ್ಟು ಸಣ್ಣದೆಂದರೆ ಅದನ್ನು ಗಾತ್ರ ಹೆಚ್ಚಿಸುವ ಗಾಜಿನ ಮೂಲಕ ಮಾತ್ರ ನೋಡಬೇಕು, ಬರಿಗಣ್ಣಿಗೆ ಕಾಣುವುದಿಲ್ಲ. ಮೊದಲ ಮಹಡಿಯಲ್ಲಿ ಪ್ರದರ‍್ಶನಕ್ಕೆ ಇಟ್ಟಿರುವ ಎಲ್ಲಾ ಲಿತುವೇನಿಯನ್ ದೆವ್ವಗಳು ಬೈಬಲ್ ಕಾಲದ ದೆವ್ವದಿಂದ ರಕ್ಶಿಸಲ್ಪಟ್ಟಿದೆ. ಈ ದೆವ್ವ ಹಿಂದೊಮ್ಮೆ ದೇವಲೋಕದಲ್ಲಿ ದೇವಾನುದೇವತೆಗಳ ರಕ್ಶಕನಾಗಿದ್ದನಂತೆ. ದೇವರುಗಳಿಗೆ ಇವನ ಮೇಲೆ ಅಸೂಯೆ ಬಂದ ಕಾರಣ ಪಿತೂರಿ ಮಾಡಿ ಅವನನ್ನು ಸ್ವರ‍್ಗದಿಂದ ಹೊರ ನೂಕಿದರು ಎಂಬ ದಂತಕತೆಯನ್ನು ಅಲ್ಲಿನವರು ಹೇಳುತ್ತಾರೆ. ಇದೊಂದೇ ಗೊಂಬೆ ಅಲ್ಲ,ಈ ಸಂಗ್ರಹಾಲಯದಲ್ಲಿರುವ ಎಲ್ಲಾ ಗೊಂಬೆಗಳು ತಮ್ಮ ಹಿಂದೆ ಒಂದಲ್ಲಾ ಒಂದು ಕತೆ ಹೊಂದಿವೆ.

ಎರಡನೇ ಮಹಡಿ

ಎರಡನೇ ಮಹಡಿಗೆ ಕಾಲಿಡುತ್ತಿದ್ದಂತೆ ಸಂದರ‍್ಶಕರನ್ನು ಬ್ರುಹತ್ ಮರದ ದೆವ್ವ ಸ್ವಾಗತಿಸುತ್ತದೆ. ಈ ಮರದ ದೆವ್ವಗಳಿಂದ ಅನೇಕ ವಿಪತ್ತುಗಳನ್ನು ಎದುರಿಸಿದ ಜನ ತಮ್ಮ ಕಾಣಿಕೆಯಾಗಿ ಇದನ್ನು ಈ ಸಂಗ್ರಹಾಲಯಕ್ಕೆ ದಾನವಾಗಿ ನೀಡಿದ್ದಾರೆ. ಈ ದೆವ್ವದಿಂದಲೇ ಅವರುಗಳಿಗೆ ಕಶ್ಟಗಳು ಎದುರಾದವು ಎಂಬ ನಂಬಿಕೆ ಅವರಲ್ಲಿತ್ತು. ಈ ಕಾರಣದಿಂದ ಇಂತಹ ಮರದ ದೆವ್ವಗಳನ್ನು ಅವರುಗಳು ಮನೆಯಲ್ಲಿ ಇರಿಸಿಕೊಳ್ಳಲು ಬಯಸಲಿಲ್ಲ.

ಎರಡನೆಯ ಮಹಡಿ ಹಾಸ್ಯದ ದೆವ್ವಗಳಿಗೆ ಮತ್ತು ಎಲ್ಲಾ ರೀತಿಯ ಅಪರಿಚಿತ ದೆವ್ವಗಳಿಗೆ ಮೀಸಲಾಗಿದೆ. ಇಲ್ಲಿ ಪ್ರದರ‍್ಶನಕ್ಕಿಟ್ಟ ದೆವ್ವಗಳಲ್ಲಿ, ಅಲ್ಲಿನ ಜನರು ಸಂಗ್ರಹಿಸಿದ್ದ, ದೆವ್ವಗಳ ಆಕ್ರುತಿ ಹೋಲುವ ಬೆಣಚುಕಲ್ಲುಗಳು, ಸಣ್ಣ ತೆಳು ರಂಬೆಗಳನ್ನು ಹೋಲುವ ದೆವ್ವಗಳು, ಅಚ್ಚುಕಟ್ಟಾಗಿ ನುಣುಪಾಗಿಸಿ ಹೊಳೆಯುವಂತೆ ಮಾಡಿರುವ ದೆವ್ವದ ಆಕಾರ ಹೊಂದಿರುವ ಮರದ ಕಾಂಡಗಳು ಈ ಮಹಡಿಯಲ್ಲಿ ಕಾಣ ಸಿಗುತ್ತವೆ. ಇಲ್ಲಿರುವ ಬಹಳಶ್ಟು ದೆವ್ವಗಳ ಗೊಂಬೆಗಳು ನೈಸರ‍್ಗಿಕವಾಗಿ ಸಿಕ್ಕಿರುವಂತಹುದು. ಇದು ಅಪ್ಪಟ ಪ್ರಕ್ರುತಿಯ ಕೆಲಸ. ದೆವ್ವಗಳ ಸ್ನೇಹಿತರಾದ ಮಾಟಗಾತಿಯರೂ ಸಹ ಇದೇ ಮಹಡಿಯಲ್ಲಿ ದೆವ್ವಗಳ ಜೊತೆ ಸಹಬಾಳ್ವೆ ನಡೆಸುತ್ತಿರುವುದು ವಿಶೇಶ!

ಮೂರನೇ ಮಹಡಿ

ಇಲ್ಲಿ ವಿದೇಶಿ ದೆವ್ವಗಳಿಗೆ ಇರಲು ಅವಕಾಶ ಕಲ್ಪಿಸಲಾಗಿದೆ. ಹೊರ ದೇಶದಿಂದ ಬರುವ ವೀಕ್ಶಕರು ಹಲವಾರು ತುಂಟತನದ ದೆವ್ವದ ಗೊಂಬೆಗಳನ್ನು, ತಮ್ಮಲ್ಲಿ ವಿಶೇಶವಾದ, ಅಲ್ಲಿ ಹೆಸರುವಾಸಿಯಾದ ದೆವ್ವಗಳನ್ನು ತಂದು ಇಲ್ಲಿಗೆ ದಾನವಾಗಿ ನೀಡಿರುವ ಕಾರಣ ದಿನೇ ದಿನೇ ಇಲ್ಲಿಯ ದೆವ್ವದ ಬೊಂಬೆಗಳ ಸಂಕ್ಯೆ ಹೆಚ್ಚುತ್ತಿದೆ.

ಮಾನವ ತನ್ನ ಬ್ರಮೆ ಮತ್ತು ಯೋಚನಾ ಶಕ್ತಿಗೆ, ತನ್ನಲ್ಲಿರುವ ಹೆದರಿಕೆಗೆ, ತಾನೇ ಕೊಟ್ಟಿರುವ ರೂಪಕ್ಕೆ ಕುರುಹಾದ ಈ ಸಂಗ್ರಹಾಲಯ ನಿಜಕ್ಕೂ ಅನನ್ಯ.

( ಮಾಹಿತಿ ಸೆಲೆ : lithuania.travel, wikivisually.com, dark-tourism.com, atlasobscura.com )
( ಚಿತ್ರಸೆಲೆ : viator.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.