ತೋತಾಪುರಿ ಮಾವಿನಕಾಯಿಯ ಅಪ್ಪೆ ಸಾರು (ಅಪ್ಪೆ ಹುಳಿ)

ಕಲ್ಪನಾ ಹೆಗಡೆ.

ಅಪ್ಪೆ ಸಾರು, ಅಪ್ಪೆಹುಳಿ, Appe Saaru, Appe huLi

ಅಪ್ಪೆಸಾರನ್ನು ಚಿಕ್ಕ ಮಾವಿನಕಾಯಿ ಅತವಾ ಸ್ವಲ್ಪ ಹುಳಿ ಇರುವ ತೋತಾಪುರಿ ಮಾವಿನಕಾಯಿಯಿಂದಲೂ ಮಾಡಬಹುದು. ಈ ಅಪ್ಪೆಸಾರು ಅನ್ನದೊಂದಿಗೂ ಹಾಗೂ ಕುಡಿಯಲೂ ತುಂಬಾ ರುಚಿಯಾಗಿರುತ್ತದೆ. ಊಟದ ಕೊನೆಯಲ್ಲಿ ಅನ್ನದೊಂದಿಗೆ ಸೇವಿಸಿದರೆ ಅತವಾ ಹಾಗೆ ಕುಡಿದರೆ ಆಹಾರ ಚೆನ್ನಾಗಿ ಜೀರ‍್ಣವಾಗತ್ತದೆ ಹಾಗೂ ಚೆನ್ನಾಗಿ ನಿದ್ದೆ ಬರುತ್ತದೆ.

ಏನೇನು ಬೇಕು?

  • 1 ಮಾವಿನಕಾಯಿ
  • 1 ಚಮಚ ಎಣ್ಣೆ
  • 3 ಚಮಚ ಸಕ್ಕರೆ ಅತವಾ ಬೆಲ್ಲ
  • 2 ಹಸಿಮೆಣಸಿನಕಾಯಿ
  • 1 ಒಣಮೆಣಸಿನಕಾಯಿ
  • ಚಿಟಿಕೆ ಅರಿಶಿಣ ಪುಡಿ
  • ಕಾಲು ಚಮಚ ಸಾಸಿವೆ
  • ಇಂಗು
  • ಕರಿಬೇವು
  • ರುಚಿಗೆ ತಕ್ಕಶ್ಟು ಉಪ್ಪು

ಮಾಡುವ ಬಗೆ

ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ, ಅದಕ್ಕೆ ಮಾವಿನಕಾಯಿಯನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ಆರಿದ ನಂತರ ಮಾವಿನಕಾಯಿಯನ್ನು ಚೆನ್ನಾಗಿ ಕಿವುಚಿಕೊಳ್ಳಿ. ರುಚಿಗೆ ತಕ್ಕಶ್ಟು ಉಪ್ಪು, ಅದಕ್ಕೆ ತಗಲುವಶ್ಟು ನೀರನ್ನು ಹಾಕಿ ತುಂಬಾ ತೆಳ್ಳಗೆ ಮಿಕ್ಸ್ ಮಾಡಿಕೊಳ್ಳಿ. ಅದಕ್ಕೆ ಸಕ್ಕರೆ ಅತವಾ ಬೆಲ್ಲವನ್ನು ಹಾಕಿ. ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಕಾಲು ಚಮಚ ಸಾಸಿವೆ, ಇಂಗು, ಹಸಿಮೆಣಸಿನಕಾಯಿ, ಒಣಮೆಣಸಿನಕಾಯಿ, ಅರಿಶಿಣ ಪುಡಿ, ಕರಿಬೇವನ್ನು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ತಯಾರಿಸಿದ ಅಪ್ಪೆ ಸಾರು ಅತವಾ ಅಪ್ಪೆಹುಳಿಯನ್ನು ಅನ್ನದೊಂದಿಗೆ ಸವಿಯಲು ಅತವಾ ಕುಡಿಯಲು ನೀಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: