ಸಂಜೀವಿನಿ ಜೇನು
ವಸಂತ ರುತು ಅಂದ್ರೆ ನೆನಪಿಗೆ ಬರುವುದು ಯುಗಾದಿ, ಬೇವು-ಬೆಲ್ಲ, ಚಿಗುರೊಡೆದು ಹಸನಾಗಿ ಕಾಣುವ ಮರಗಳು. ಆದರೆ ಇದರ ಜೊತೆ ಜೊತೆಯಲ್ಲಿ ನಮಗೆ ಅರಿವಿಲ್ಲದಂತೆ ಇನ್ನೂ ಒಂದು ವಿಶೇಶವಾದ ಬದಲಾವಣೆ ಪ್ರಕ್ರುತಿಯಲ್ಲಿ ಆಗುತ್ತದೆ. ಪ್ರಕ್ರುತಿಯಿಂದ ಸ್ವಸ್ರುಶ್ಟಿಸಲ್ಪಟ್ಟ ನಾಟಿ ಔಶದಿ ‘ಜೇನುತುಪ್ಪ’ ತಯಾರಾಗುವ ಕಾಲ ವಸಂತ.
ಆಹಾರ ಮತ್ತು ಕ್ರುಶಿ ಪದವಿ ಓದುವ ವಿದ್ಯಾರ‍್ತಿಗಳಾದ ನಮಗೆ ಜೇನುಹುಳುಗಳ ಬಗ್ಗೆ ಪ್ರತ್ಯೇಕವಾಗಿ ತರಗತಿಗಳೇ ಇರುತ್ತಿತ್ತು. ಜೇನುಹುಳುಗಳ ಹಾರಾಟ, ಚೀರಾಟ, ಓಡಾಟ, ಜೇಂಕಾರ, ಅವುಗಳ ನೋವು-ನಲಿವುಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೆವು, ಜೇನುಹುಳುಗಳ ಮದ್ಯೆ ಸಂವಹನಕ್ಕಾಗಿ ಬಳಸುವ ನ್ರುತ್ಯ ಬಲು ಆಸಕ್ತಿಕರ ವಿಶಯ. ಜೇನು ಮತ್ತು ಅವುಗಳ ಬಗ್ಗೆ ಒಂದಶ್ಟು ಆಸಕ್ತಿಯ ಪುಟಗಳನ್ನು ನಿಮ್ಮ ಜೊತೆ ಹಂಚಿಕೊಳ್ಳುವ ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ.
ಜೇನುತುಪ್ಪಕ್ಕಾಗಿ ಮಾತ್ರ ಜೇನು ಸಾಕಾಣಿಕೆ ಮಾಡುತ್ತಾರೆ ಎನ್ನುವ ತಿಳುವಳಿಕೆ ಹಲವರಲ್ಲಿ ಉಂಟು. ಆದರೆ ಅದು ಕೇವಲ ಜೇನು ಮಾರಾಟಕ್ಕೆ ಮಾತ್ರ ಸೀಮಿತವಲ್ಲ. ಆಹಾರ ಉತ್ಪಾದನೆಯಲ್ಲಿ ಅತವಾ ಕ್ರುಶಿ ತೋಟಗಾರಿಕಾ ಕ್ಶೇತ್ರಕ್ಕೆ ಇದರಿಂದಾಗುವ ಉಪಯೋಗ ಅಪರಿಮಿತ. ಅದರಲ್ಲೂ ಸಾವಯವ ಕ್ರುಶಿಕರಿಗೆ ಇದೊಂದು ವರದಾನ. ಜೇನು ಇಲ್ಲದಿದ್ದರೆ ನಾವುಗಳಿಲ್ಲ.
ನಾವೆಲ್ಲರೂ ದಿನನಿತ್ಯ ಆಹಾರ ಸೇವನೆ ಮಾಡುತ್ತೇವೆ. ಆದರೆ ಅದರ ಒಳಾಂಶವನ್ನು ಅಶ್ಟು ತೀಕ್ಶ್ಣವಾಗಿ ಅರಿಯಲು ಇಚ್ಚಿಸುವುದಿಲ್ಲ. ಕ್ರುಶಿ ಎಂದಮೇಲೆ ಅದರಲ್ಲಿ ಹಲವು ಮೆಟ್ಟಿಲುಗಳಿವೆ. ಬೂಮಿಯಲ್ಲಿ ನೆಟ್ಟ ಸಸಿ ಬೆಳೆದು, ಮೊದಲಿಗೆ ಹೂವಾಗಿ ಮತ್ತೆ ಕಾಯಿಯಾಗಿ ನಂತರ ಹಣ್ಣಾಗಿ (ಪಲ) ರೈತನ ಕೈ ಸೇರುತ್ತದೆ. ಆದರೆ ಈ ಹೂವಾಗುವುದು ಹೇಗೆ? ಅಲ್ಲಿದೆ ಜೇನುಹುಳುಗಳ ನಿಯತ್ತಿನ ದುಡಿಮೆ.
ಪರಾಗಗಳನ್ನು ಹೊತ್ತು ತರುವ ಜೇನುನೊಣಗಳು ಅವುಗಳನ್ನು ತಮ್ಮ ಗೂಡಿನಲ್ಲಿ ಸಂಗ್ರಹಿಸುತ್ತವೆ. ಈ ಜೇನುನೊಣಗಳು ಮಕರಂದಕ್ಕಾಗಿ ಹಾರಾಡುವಾಗ ಪರಾಗಗಳು ಅವುಗಳಿಗೆ ಅಂಟಿಕೊಂಡಿರುತ್ತದೆ. ಬೇರೆ ಹೂವಿನ ಮೇಲೆ ಕುಳಿತಾಗ ಹೂವಿನ ಶಲಾಕಾಗ್ರಗಳ ಮೇಲೆ ಬಿದ್ದು ಪರಾಗಸ್ಪರ‍್ಶ ಕ್ರಿಯೆ ನಡೆಯುತ್ತದೆ. ಈ ಪ್ರಕ್ರಿಯೆ ಕ್ರುಶಿ ಮತ್ತು ತೋಟಗಾರಿಕಾ ಬೆಳೆಗಳ ಇಳುವರಿ ಹೆಚ್ಚಿಸುವಲ್ಲಿ ಪಾತ್ರ ವಹಿಸುತ್ತದೆ. ಮುಕ್ಯವಾಗಿ ಮಳೆಗಾಲದ ಸೋನೆ ಮುಗಿದ ಬಳಿಕ ಮತ್ತು ಚಳಿಗಾಲದಲ್ಲಿ ಇಬ್ಬನಿ ಆವಿಗಟ್ಟುವಿಕೆ ಕೊನೆಯಾದ ಕಾಲಗಟ್ಟದಲ್ಲಿ ಜೇನುಹುಳುಗಳು ತಮ್ಮ ಕಾರ‍್ಯಾಚರಣೆ ಆರಂಬಿಸುತ್ತವೆ. ಈ ಜೇನುಹುಳಗಳ ಪರಾಗ ಸ್ಪರ‍್ಶ ಕ್ರಿಯೆಯಿಂದ ಬೆಳೆಯ ಇಳುವರಿ ಮಾಮೂಲಿಗಿಂತ ಶೇಕಡ 20 ರಶ್ಟು ಹೆಚ್ಚಾಗುತ್ತದೆ. ಹೀಗಾಗಿ ಪ್ರತಿಯೊಬ್ಬ ಜೀವಿಯೂ ತಿನ್ನುವ ಆಹಾರದ ಅಡಿಪಾಯದ ಗುಟ್ಟು ಈ ಜೇನುಹುಳುಗಳ ಜೇಂಕಾರ. ಅರ‍್ದ ಕಿಲೋ ಜೇನುತುಪ್ಪ ಉತ್ಪತ್ತಿಗಾಗಿ 20 ಲಕ್ಶ ಹೂವುಗಳನ್ನು ಸ್ಪರ‍್ಶಿಸಿ ಬರುವ ಏಕಮೇವ ಹಾರುವ ಜೀವಿ ಜೇನುನೊಣ.
ಈ ಜೇನಿನಲ್ಲಿಯೂ ಹಲವು ಬಗೆಗಳಿವೆ. ಹೆಜ್ಜೇನು, ಕೋಲು ಜೇನು, ತೊಡುವೆ ಜೇನು, ಯುರೋಪಿಯನ್ ಜೇನು – ಹೀಗೆ ಆಯಾಯ ಪ್ರದೇಶಕ್ಕೆ ಸೀಮಿತವಾಗಿ ಹುಳುಗಳ ಸಂತತಿ ಇರುತ್ತದೆ. ಸಾಮಾನ್ಯವಾಗಿ ನಮಗೆ ಕಂಡುಬರುವುದು ಹೆಜ್ಜೇನು. ಬೆಳದಿಂಗಳ ರಾತ್ರಿಯಲ್ಲಿಯೂ ಆಹಾರ ಸಂಗ್ರಹಣೆಯಲ್ಲಿ ತೊಡಗುವುದು ಇವುಗಳ ವಿಶೇಶತೆ. ಈ ಎಲ್ಲಾ ಹುಳುಗಳಿಗೆ ಹೂವಿನ ಪರಾಗವೇ ಮೂಲ ಆಹಾರ. ಪರಾಗದಲ್ಲಿ ಪೌಶ್ಟಿಕಾಂಶಗಳು ಹೆಚ್ಚಿನ ಮಟ್ಟದಲ್ಲಿರುತ್ತದೆ. ಇದರಿಂದಲೇ ಜೇನು ದ್ರವ ಸೇವನೆ ಶರೀರಕ್ಕೆ ಪುಶ್ಟಿದಾಯಕ. ಶೀತ ವಾತಾವರಣದಲ್ಲಿ ಅತವಾ ಇತರ ಆಹಾರ ಮೂಲಗಳು ವಿರಳವಾದ ಹೊತ್ತಿನಲ್ಲಿ ಜೇನುಹುಳಗಳು ತಾನು ಸಂಗ್ರಹಿಸಿದ ಜೇನುತುಪ್ಪವನ್ನು ಆಹಾರವಾಗಿ ಬಳಸಿಕೊಳ್ಳುತ್ತವೆ.
ಜೇನು ತುಪ್ಪದ ಬಳಕೆ ಅವುಗಳ ಚಟುವಟಿಕೆ ಮತ್ತು ಉತ್ಪಾದನೆಯ ಬಗ್ಗೆ ದೀರ‍್ಗ ಮತ್ತು ವೈವಿದ್ಯಮಯ ಇತಿಹಾಸವನ್ನು ಪ್ರಾಚೀನಕಾಲದಿಂದಲೂ ಅಂದರೆ ಸರಿ ಸುಮಾರು 800 ವರ‍್ಶಗಳ ಹಿಂದೆಯೇ ಜೇನುತುಪ್ಪದ ಬಗ್ಗೆ ಉಲ್ಲೇಕವಿದೆ. ಸಹಸ್ರಾರು ವರ‍್ಶಗಳಿಂದ ಜೇನುತುಪ್ಪ ಅಡುಗೆ ಮನೆಯ ಒಂದು ವಿಶೇಶ ಆಹಾರ ಹಾಗೂ ಪ್ರಮುಕ ವೈದ್ಯಕೀಯ ಪರಿಹಾರವಾಗಿದೆ. ಮನೆಯಲ್ಲಿ ಯಾರಿಗಾದರೂ ನೆಗಡಿ, ಕೆಮ್ಮು ಕಂಡುಬಂದಲ್ಲಿ ಮೊದಲಿಗೆ ಜೇನುತುಪ್ಪಕ್ಕೆ ಕಾಳುಮೆಣಸು ಪುಡಿ ಸೇರಿಸಿ ದಿನಕ್ಕೆ ಎರಡು ಬಾರಿ ತಿನ್ನಿಸುತ್ತಾರೆ. ಇನ್ನು ಚರ‍್ಮಕ್ಕೆ ಗಾಯವಾದರೆ ಅತವಾ ಸುಟ್ಟ ಗಾಯ, ಹುಣ್ಣುಗಳು ಕಂಡುಬಂದಲ್ಲಿ ನೈಸರ‍್ಗಿಕ ಬ್ಯಾಂಡೇಜ್ ಆಗಿ ಜೇನನ್ನು ಬಳಸುತ್ತಾರೆ.
ಇನ್ನೂ ಆರೋಗ್ಯಕ್ಕಾಗಿ ಜೇನುತುಪ್ಪದ ಪ್ರಯೋಜನಗಳು ಹಲವು. ಜೇನುತುಪ್ಪ ನಮ್ಮ ರಕ್ತಕ್ಕೆ ಬಹಳ ಒಳ್ಳೆಯ ಆಹಾರ. ಕೆಂಪು ರಕ್ತಕಣಗಳನ್ನು ಹೆಚ್ಚಿಸುವಲ್ಲಿ ಮುಕ್ಯ ಪಾತ್ರ ವಹಿಸುತ್ತದೆ. ರಕ್ತದ ಹಿಮೋಗ್ಲೋಬಿನ್ ಮಟ್ಟವು ಹೆಚ್ಚಿಸಿ ರಕ್ತಹೀನತೆಯನ್ನು ಗುಣಪಡಿಸುತ್ತದೆ. ಬಿಸಿನೀರಿನ ಜೊತೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿದರೆ ದೇಹದ ತೂಕ ಕಡಿಮೆಯಾಗುತ್ತದೆ. ಇದಂತೂ ಅತ್ಯಂತ ಪರಿಣಾಮಕಾರಿ.
ಜೇನುತುಪ್ಪ ಸಕ್ಕರೆಗಿಂತ ಸುರಕ್ಶಿತ. ಸಕ್ಕರೆಯಶ್ಟೇ ಸಿಹಿ ಅಂಶ ಹೊಂದಿರುವ ಜೇನುತುಪ್ಪ ಸಕ್ಕರೆಗೆ ಉತ್ತಮ ಪರ‍್ಯಾಯ, ಹಾಗೆಯೇ ಸೇವನೆಗೆ ಸುರಕ್ಶಿತ. ಏಕೆಂದರೆ ಸಕ್ಕರೆ ಹಾಗೂ ಜೇನುತುಪ್ಪದ ರಾಸಾಯನಿಕ ರಚನೆ ಬೇರೆಯಾಗಿದೆ. ಇದು ಸರಳ ಸಕ್ಕರೆಗಳಾದ (monosaccharides) ಪ್ರಕ್ಟೋಸ್ (40%) , ಗ್ಲೂಕೋಸ್ (30%)ಅಲ್ಲದೇ ಇತರ ಸಂಕೀರ‍್ಣ ಸಕ್ಕರೆಗಳನ್ನು(30%) ಮತ್ತು dextrin ಎಂಬ ಪಿಶ್ಟದ ನಾರನ್ನು ಸಹ ಹೊಂದಿದೆ. ಈ ಸಂಯೋಜನೆ ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಅಂತೆಯೇ ನಮ್ಮ ಕರುಳಿನ ಬಾಗದಲ್ಲಿ ಸೂಕ್ಶ್ಮಾಣು ಜೀವಿಗಳಿಂದ ಸ್ರುಶ್ಟಿಸಲ್ಪಟ್ಟ ಮೈಕೊಟಾಕ್ಸಿನ್(mycotoxin) ನಂತಹ ವಿಶಕಾರಿ ಪದಾರ‍್ತಗಳನ್ನು ನಾಶ ಮಾಡಿ, ಶುಚಿಗೊಳಿಸುವ ವ್ಯವಸ್ತೆಯನ್ನು ಮಾಡುತ್ತದೆ.
ಇನ್ನೂ ಸಾಂಪ್ರದಾಯಿಕ ಅತವಾ ನಾಟಿ ಚಿಕಿತ್ಸೆಯ ಪ್ರಕಾರ ಜೇನುತುಪ್ಪ ಉಸಿರಾಟದ ಸೋಂಕಿಗೆ ಪ್ರಬಾವಕಾರಿ. ಕಪ ಮತ್ತು ಅಸ್ತಮಾದಂತಹ ಸಮಸ್ಯೆಗಳಿಗೆ ದಿನನಿತ್ಯ ಜೇನುತುಪ್ಪ ಸೇವಿಸುವಂತೆ ಆಯುರ‍್ವೇದ ತಗ್ನರು ತಿಳಿಸುತ್ತಾರೆ. ಜೇನುತುಪ್ಪ ಮಲಬದ್ದತೆ, ಹೊಟ್ಟೆ ಉಬ್ಬರ ಹಾಗೂ ವಾಯು ಸಮಸ್ಯೆಯನ್ನು ತಡೆಗಟ್ಟಲು ಸಹಾಯಕಾರಿ. ಆಹಾರ ಪದಾರ‍್ತಗಳ ತಯಾರಿಕೆಯಲ್ಲಿ ಜೇನಿನ ಸಹಕಾರ ಬಹಳ. ಜೇನು ಬಳಸಿ ಮಾಡಲ್ಪಟ್ಟ ಬೇಕರಿ ಆದಾರಿತ ಆಹಾರ ಪದಾರ‍್ತಗಳ ಜೀವಿತಾವದಿ ಹೆಚ್ಚಾಗುತ್ತದೆ. ಇನ್ನೂ ಹಲವು ಜಾಮ್, ಜೆಲ್ಲಿ, ಸ್ಕ್ವಾಶ್ ಗಳಂತಹ ಆಹಾರ ಪದಾರ‍್ತಗಳಲ್ಲೂ ಜೇನು ಬಳಸುತ್ತಾರೆ. ಹೀಗಾಗಿ ಅಡುಗೆ ಮನೆಯ ವೈವಿದ್ಯತೆ ಹೆಚ್ಚಿಸುವಲ್ಲಿ ವೈಶಿಶ್ಟ್ಯತೆ ಹೊಂದಿದೆ.
ಜೀನುತುಪ್ಪದ ಸೇವನೆಯು ರೋಗ ನಿರೋದಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರತಿಕಾಯಗಳನ್ನು ಪ್ರಚೋದಿಸುತ್ತದೆ. ಹಾಗೆಯೇ ಸೂಕ್ಶ್ಮಾಣು ಜೀವಿಗಳ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಪ್ರಮುಕ ಪಾತ್ರ ವಹಿಸುತ್ತದೆ. ಇದರಿಂದಲೇ ಇದನ್ನು “ಔಶದೀಯ ಉಡುಗೊರೆ” ಎಂದು ಕರೆಯಲ್ಪಡುವುದು. ಹೆಚ್ಚಿನ ಸೂಕ್ಶ್ಮಾಣುಜೀವಿಗಳು ಜೇನುತುಪ್ಪದಲ್ಲಿ ಬೆಳೆಯುವುದಿಲ್ಲ. ಸರಿಯಾದ ರೀತಿಯಲ್ಲಿ ಜೇನುತುಪ್ಪವನ್ನು ಶೇಕರಣೆ ಮಾಡಿದರೆ, ಸಾವಿರಾರು ವರ‍್ಶಗಳ ನಂತರವೂ ಕೂಡ ಜೇನುತುಪ್ಪ ಹಾಳಾಗುವುದಿಲ್ಲ! ಅಂತಹ ಗುಣವಿರುವ ಜೇನುತುಪ್ಪ ಸಂಜೀವಿನಿಗೆ ಸಮ.
ಕೇವಲ ಆಹಾರ ಆರೋಗ್ಯ ವಿಚಾರದ್ದಲ್ಲಿ ಮಾತ್ರವಲ್ಲ. ನಮ್ಮ ಜೀವನಕ್ಕೆ ಅನುಸಾರವಾಗಿಯೂ ಜೇನುಹುಳಗಳಿಂದ ಕಲಿಯಲು ಬಹಳಶ್ಟು ಉಂಟು. ಅವುಗಳ ಒಗ್ಗಟ್ಟು, ಶಿಸ್ತಿನ ಕಾರ‍್ಯಪ್ರವ್ರುತ್ತಿ, ಸಮಯ ನಿರ‍್ವಹಣೆ, ರಕ್ಶಣಾ ಕೌಶಲ್ಯ, ಅವುಗಳು ಗೂಡುಕಟ್ಟುವ ಪರಿಯಂತೂ ಬಹಳ ಅದ್ಬುತ, ರಾಣಿಜೇನು ಸೂಚಿಸಿದಂತೆ ಉಳಿದ ಜೇನುನೊಣಗಳು ರಾಣಿ ಜೇನಿನ ಆಗ್ನೆಯನ್ನು ಚಾಚೂತಪ್ಪದೆ ಸೈನಿಕರಂತೆ ಪಾಲಿಸುವ ಪರಿಯಂತೂ ಅಮೋಗ. ಹಲವು ಬಗೆಯಲ್ಲಿ ಜೇನು ನಮ್ಮ ಜೀವನಕ್ಕೆ ಮಾದರಿಯಾಗಿದೆ. ಶ್ರಮವಹಿಸಿ ದುಡಿದಲ್ಲಿ ಸಿಹಿ ಸಿಕ್ಕೇ ಸಿಗುತ್ತದೆ ಎನ್ನುವ ಪಾಟವನ್ನು ಜೇನುಗಳಿಂದ ಕಲಿಯಬಹುದಾಗಿದೆ.
(ಚಿತ್ರ ಸೆಲೆ: unsplash.com)
ಇತ್ತೀಚಿನ ಅನಿಸಿಕೆಗಳು