ಕನ್ನಡ ತಾಯಿ, Kannada tayi

ಕವಿತೆ : ಹರಸು ತಾಯ್ ಕನ್ನಡ ತಾಯ್

ಅಮರ್.ಬಿ.ಕಾರಂತ್.

ಕನ್ನಡ ತಾಯಿ, Kannada tayi

ನಡೆ ನಡೆ ನಡೆ ಬೆಳಗಲಿ
ನಮ್ಮಯ ಬಗೆ ಒಲವ ಬೀರಲಿ
ಹರಸು ತಾಯ್, ಕನ್ನಡ ತಾಯ್
ಹರಸು ತಾಯ್, ಕನ್ನಡ ತಾಯ್

ಏಳಿ ಮಲೆಯ ಕುಡಿಗಳೆ, ಏಳಿ ಬಯಲ ಕಿಡಿಗಳೆ
ಏಳಿ ಹೊಳೆವ ಅಲೆಗಳಂತೆ ಮುನ್ನೀರಿನ ಮಣಿಗಳೆ
ಕೀಳುತನದ ಕತ್ತಲೆಯನು ನಾಡಿನಾಚೆ ನೂಂಕಿರಿ
ಏರುತನದ ಆರ‍್ಪನುಂಡು ಅಣ್ಮು ಬೆಳಕ ತುಂಬಿರಿ
ಕನ್ನಡ ತಾಯ್, ಹರಸು ತಾಯ್

ನಾಡ ಹಿರಿಮೆ ಹಳಮೆಯನ್ನು ಹೀರಿ ಬಿರಿದ ಹೂಗಳೆ
ನುಡಿಯ ಚೆನ್ನಲರ‍್ಪುಗಳಿಗೆ ಅಮಲೇರಿದ ಹುಳುಗಳೆ
ತಾಯ ಅರಳೆ ಅಡಿಗಳಲ್ಲಿ ಮುಡಿಪಾಗುತ ನೋನಿರಿ
ಕನ್ನಾಡಿನ ನಾಳೆಗಳಿಗೆ ಕಲೆತು ಮಲೆತು ದುಡಿಯಿರಿ
ಕನ್ನಡ ತಾಯ್, ಹರಸು ತಾಯ್

ನಮ್ಮ ನಡಿಗೆ ಹೋದಲೆಲ್ಲ ಕನ್ನಡ ತೆನೆ ಸೋಂಕಲಿ
ನಮ್ಮ ಉಸಿರು ಸುಯ್ದಲೆಲ್ಲ ಕನ್ನಡ ಕೆನೆಗಟ್ಟಲಿ
ಅಂಕೆಯಿರದ ಓರಿನಲ್ಲು ಕೊನರಿ ಬರಲಿ ಕನ್ನಡ
ಎಲ್ಲೆಯಿರದ ಅರಿವಿನಲ್ಲು ಮೊಳಗುತಿರಲಿ ಕನ್ನಡ
ಹರಸು ತಾಯ್, ಕನ್ನಡ ತಾಯ್

( ಚಿತ್ರ ಸೆಲೆ: feelsomu.blogspot.com )

1 ಅನಿಸಿಕೆ

  1. ಅಣ್ಣೆಗನ್ನಡದ ಈ ಹಾಡು ತುಂಬಾ ಸೊಗಸಾಗಿದೆ.

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: