ಚಿಕ್ಕ ಚಿಕ್ಕ ಕತೆಗಳು

ವೆಂಕಟೇಶ ಚಾಗಿ.

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಮಿಸ್ಡ್ ಕಾಲ್

ರಮೇಶನಿಗೆ ಮದುವೆ ನಿಶ್ಚಯವಾಗಿತ್ತು. ಕೆಲಸಕ್ಕೆ ಎರಡು ವಾರಗಳ ರಜೆ ಹಾಕಿ ಊರ ಹಾದಿ ಹಿಡಿದ. ಬಸ್ಸಿನ ಪ್ರಯಾಣದ ಜೊತೆಗೆ ತನ್ನ ಕೈ ಹಿಡಿಯುವ ಬಾಳಸಂಗಾತಿಯೊಂದಿಗೆ ಚಾಟ್ ಮಾಡುತ್ತಾ ನಿದ್ದೆ ಹೋದ. ಎಚ್ಚರವಾದಾಗ ಬಸ್ ನಿಂತಿತ್ತು. ಆ ದಾರಿಯಲ್ಲಿ ಅಪಗಾತವಾಗಿದ್ದರಿಂದ ಜನ ಸುತ್ತುವರಿದು ನೋಡುತ್ತಾ ನಿಂತಿದ್ದರು. ರಮೇಶ ಆ ದ್ರುಶ್ಯದ ವಿಡಿಯೊ ಮಾಡಲು ಮುಂದಾದ. ಮೊಬೈಲ್‌ ನಲ್ಲಿ ಬಾಳಸಂಗಾತಿಯ ಮಿಸ್ ಕಾಲ್ ಕಂಡು ಕರೆ ಮಾಡಿದ. ಅಪಗಾತದಲ್ಲಿ ನರಳುತ್ತಿದ್ದವರ ಮದ್ಯೆ ಮೊಬೈಲ್ ರಿಂಗ್ ಕೇಳಿಸಿತು.

ಮರಳು

ಅವನಿಗೆ ತನ್ನ ಸ್ನೇಹಿತರನ್ನು ನೋಡಲೇಬೆಕೆಂಬ ಹಂಬಲ ಹೆಚ್ಚಾಯಿತು. ತುಂಬಾ ವರ‍್ಶಗಳ ನಂತರ ಹಳ್ಳಿಗೆ ತೆರಳಿದ. ಹಳ್ಳಿ ಬದಲಾಗಿತ್ತು. ದೊಡ್ಡ ಮನೆಗಳು, ಸುಂದರ ರಸ್ತೆಗಳು ಮಾರ‍್ಕೆಟ್ ಕಂಡುಬಂದಿತು. ಪ್ರತಿ ಬಾರಿ ಸ್ನೇಹಿತರ ಮನೆಗೆ ತೆರಳಿದಾಗಲೂ ಸಮಯ ಅದೇಕೋ ಬೇಗ ಮುಗಿಯುತ್ತಿತ್ತು. ಮರಳಿ ತನ್ನ ಊರಿಗೆ ಮರಳಬೇಕೆಂದುಕೊಂಡಾಗ ಊರ ಮದ್ಯೆ ಇದ್ದ ಹರಟೆಯ ಅರಳಿ ಮರ ನೋಡಬೇಕೆನಿಸಿತು. ಆದರೆ ಅದು ಕಾಣಲಿಲ್ಲ. ನಗರದ ಪ್ರಬಾವದಿಂದಾಗಿ ಮರದ ಸುಳಿವಿರಲಿಲ್ಲ. ಹಳೆ ಸ್ನೇಹದ ನೆನಪುಗಳೊಂದಿಗೆ ತನ್ನ ಊರಿಗೆ ಅಂದೇ ಮರಳಬೇಕಾಯಿತು.

ಸಾಲ

ಹೊಸ ವರ‍್ಶದ ಸಂಬ್ರಮಕ್ಕಾಗಿ ಅವನು ಸಕಲ ಸಿದ್ದತೆಗಳನ್ನು ಮಾಡಿಕೊಂಡ. ಅದ್ದೂರಿಯಾಗಿ ಹೊಸ ವರ‍್ಶವನ್ನು ಬರಮಾಡಿಕೊಳ್ಳಬೇಕೆಂದು ನಿರ‍್ದರಿಸಿ ಸಾಲ ಮಾಡಿ ತನ್ನ ಗೆಳೆಯರೊಂದಿಗೆ ಬಂದುಗಳೊಂದಿಗೆ ಅದಿಕ ವೆಚ್ಚದಲ್ಲಿ ಸಂಬ್ರಮವನ್ನು ಆಚರಿಸಿದ. ಆದರೆ ಒಂದು ದಿನದ ಕುಶಿಗಾಗಿ ಮಾಡಿದ್ದ ಅವನ ಸಾಲ ಇಡೀ ವರ‍್ಶ ಅವನನ್ನು ಬಾದಿಸಿತು. ದುಂದುವೆಚ್ಚದ ಪರಿಣಾಮವಾಗಿ ಆ ವರ‍್ಶ ಪೂರ‍್ತಿ ಸಾಲಗಾರನಾಗಿಯೇ ಜೀವನ ಸಾಗಿಸಬೇಕಾಯಿತು.

ಹೊಸ ವರುಶ

ಹೊಸ ವರುಶ ಬಂದಿತೆಂದು ಅವನಿಗೆ ತುಂಬ ಕುಶಿ. ಹೊಸ ವರ‍್ಶದ ಸಡಗರ ಬರ‍್ಜರಿಯಾಗಬೇಕೆಂಬುದು ಅವನ ಅಬಿಲಾಶೆ. ಅದರಂತೆ ತನ್ನ ಸ್ನೇಹಿತರೊಂದಿಗೆ ಸೇರಿ ದೊಡ್ಡ ಔತಣಕೂಟವನ್ನೆ ಏರ‍್ಪಡಿಸಿದ. ಮೋಜು ಮಸ್ತಿಯೊಂದಿಗೆ ಪಾರ‍್ಟಿ ಜೋರಾಗಿಯೇ ಆಯ್ತು. ಹೊಸ ವರ‍್ಶಕ್ಕೆ ಹೊಸ ಕ್ಯಾಲೆಂಡರ‍್ ಕರೀದಿಸಿದ. ಹೊಸ ಡೈರಿಯೊಂದನ್ನು ಕರೀದಿ ಮಾಡಿದ. ಡೈರಿಯ ಮೊದಲ ಪುಟದಲ್ಲಿ ತಾನು ಈ ವರ‍್ಶದಲ್ಲಿ ಮಾಡಲೇಬೇಕೆಂಬ ಕೆಲಸಗಳನ್ನು ಪಟ್ಟಿ ಮಾಡಿದ. ಸನ್ನಡತೆ, ನೈತಿಕತೆ, ಉತ್ತಮ ಹವ್ಯಾಸ, ಉಳಿತಾಯ ಮುಂತಾದ ಗುಣಗಳನ್ನು ರೂಡಿಸಿಕೊಳ್ಳಲೇಬೇಕು ಎಂದು ಬರೆದ. ಕಳೆದ ವರ‍್ಶದ ಡೈರಿಯನ್ನು ಕೊನೆಯ ಬಾರಿ ಅವಲೋಕನ ಮಾಡಿದಾಗ ಈ ವರ‍್ಶಕ್ಕೆ ಮಾಡಿದ್ದ ಪ್ರತಿಜ್ನೆಯೇ ಆ ಡೈರಿಯಲ್ಲೂ ಇತ್ತು!

ಸಂಬ್ರಮ

ಆ ಊರಿನಲ್ಲಿ ಹೊಸ ವರ‍್ಶದ ಸಂಬ್ರಮ ಎಲ್ಲೆಡೆಯೂ ತುಂಬಿತ್ತು. ಪಟಾಕಿಗಳ ಸದ್ದು ಜೋರಾಗಿಯೇ ಇತ್ತು. ಜನರು ತಮ್ಮ ತಮ್ಮ ನಡುವೆ ಹೊಸ ವರ‍್ಶದ ಶುಬಾಶಯಗಳನ್ನು ಹಂಚಿಕೊಳ್ಳುತ್ತಿದ್ದರು. ಮೋಜು ಮಸ್ತಿಯಲ್ಲೇ ತೇಲಾಡಿದ ಊರಿನ ಜನ ಅದೊಂದು ಹಬ್ಬದ ರೀತಿಯಲ್ಲಿ ಸಂಬ್ರಮಿಸಿದರು. ಜನರ ಈ ಗದ್ದಲಕ್ಕೆ ಹಕ್ಕಿಗಳು ಗೂಡು ಸೇರಿದ್ದವು. ಪ್ರಾಣಿಗಳು ಹೆದರಿ ಮೌನವಾಗಿದ್ದವು. ಗಾಳಿ ಸ್ತಬ್ದವಾಗಿತ್ತು. ಗಿಡಮರಗಳು ಕಲ್ಲಾಗಿದ್ದವು. ಆದರೆ ದಿನಗಳು ಉರುಳಿ ಯುಗಾದಿ ಹತ್ತಿರವಾಗುತ್ತಿದ್ದಂತೆ ಹಕ್ಕಿಗಳ ಮೌನ ದೂರಾಗಿತ್ತು. ಗಾಳಿ ತಂಪಾಯಿತು. ಗಿಡಮರಗಳು ಚಿಗುರಿದವು. ಹೊಸ ವರ‍್ಶದ ಸಂಬ್ರಮ ಎಲ್ಲೆಡೆ ಮೌನವಾಗಿ ಹರಡಿತ್ತು.

( ಚಿತ್ರಸೆಲೆ : professionalstudies.educ.queensu.ca )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: