ಅಕ್ಕಮಹಾದೇವಿಯ ವಚನದಿಂದ ಆಯ್ದ ಸಾಲುಗಳ ಓದು – 1ನೆಯ ಕಂತು

ಸಿ.ಪಿ.ನಾಗರಾಜ.

ಅಕ್ಕ ಮಹಾದೇವಿ, Akka Mahadevi

ಎಲ್ಲ ಎಲ್ಲವನರಿದು ಫಲವೇನಯ್ಯಾ
ತನ್ನ ತಾನರಿಯಬೇಕು. (112-798)

ಎಲ್ಲ=ಸಕಲ/ಸಮಗ್ರ/ಸಂಪೂರ‍್ಣ; ಎಲ್ಲ+ಅನ್+ಅರಿದು; ಅನ್=ಅನ್ನು; ಅರಿದು=ತಿಳಿದುಕೊಂಡು/ಕಲಿತುಕೊಂಡು; ಫಲ+ಏನ್+ಅಯ್ಯಾ; ಫಲ=ಪ್ರಯೋಜನ/ಪರಿಣಾಮ/ಗಳಿಸಿದುದು/ದೊರಕಿದುದು; ಏನ್=ಯಾವುದು; ಅಯ್ಯಾ=ಇತರರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ;

ತಾನ್+ಅರಿಯ+ಬೇಕು; ತನ್ನ ತಾನ್=ತನ್ನನ್ನು ತಾನು; ಬೇಕು=ಅಗತ್ಯ/ಅವಶ್ಯಕ ; ಅರಿಯಬೇಕು=ತಿಳಿಯಬೇಕು; ತನ್ನ ತಾನರಿಯಬೇಕು=ತನ್ನನ್ನು ತಾನು ತಿಳಿದುಕೊಳ್ಳುವುದು/ತನ್ನ ವ್ಯಕ್ತಿತ್ವದ ಇತಿಮಿತಿಗಳನ್ನು ಅರಿತುಕೊಳ್ಳುವುದು;

ಜೀವನದಲ್ಲಿ ಉಂಟಾಗುವ ನೋವು ನಲಿವಿನ ಸನ್ನಿವೇಶಗಳಲ್ಲಿ ಪಾಲ್ಗೊಳ್ಳುವುದರಿಂದ, ಒಳಿತು ಕೆಡುಕಿನ ಪ್ರಸಂಗಗಳನ್ನು ನೋಡುವುದರಿಂದ, ಕೇಳುವುದರಿಂದ ಮತ್ತು ಓದುವುದರಿಂದ ವ್ಯಕ್ತಿಯು ಪಡೆಯುವ ತಿಳುವಳಿಕೆಯೇ ದೊಡ್ಡದಲ್ಲ. ಎಲ್ಲಕ್ಕಿಂತ ಮಿಗಿಲಾಗಿ ವ್ಯಕ್ತಿಯು ತನ್ನ ನಡೆನುಡಿಗಳನ್ನು ರೂಪಿಸಿ ನಿಯಂತ್ರಿಸುತ್ತಿರುವ ಸಂಗತಿಗಳು ಯಾವುವು ಎಂಬುದನ್ನು ಮೊದಲು ಮನದಟ್ಟು ಮಾಡಿಕೊಳ್ಳಬೇಕು. ಇದನ್ನೇ ವಚನಕಾರರು “ ತನ್ನ ತಾನರಿಯುವುದು “ ಎನ್ನುತ್ತಾರೆ.

“ತನ್ನ ತಾನರಿಯುವುದು” ಎಂದರೆ ಮಾನವ ಸಮುದಾಯದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜೀವನವು ನಿಸರ‍್ಗದಲ್ಲಿ ಉಂಟಾಗುವ ಸಂಗತಿಗಳಿಗೆ ಮತ್ತು ಸಮಾಜದ ಸಂಪ್ರದಾಯ ಹಾಗೂ ಕಟ್ಟುಪಾಡುಗಳಿಗೆ ಒಳಪಟ್ಟಿದೆ. ತನ್ನನ್ನೂ ಒಳಗೊಂಡಂತೆ ಎಲ್ಲ ವ್ಯಕ್ತಿಗಳ ಮಯ್ ಮನದಲ್ಲಿ ಒಳಿತು ಕೆಡುಕಿನ ಒಳಮಿಡಿತಗಳು ಸದಾಕಾಲ ಇದ್ದೇ ಇರುತ್ತವೆ. ಆದ್ದರಿಂದ ಜೀವನದ ಉದ್ದಕ್ಕೂ ಕೆಡುಕಿನ ಒಳಮಿಡಿತಗಳನ್ನು ಹತ್ತಿಕ್ಕಿಕೊಂಡು, ಒಳ್ಳೆಯವನಾಗಿ ಬಾಳಬೇಕೆಂಬ ಅರಿವನ್ನು ಹೊಂದುವುದು.

ತನ್ನ ಜೀವನದ ಏಳು ಬೀಳು ಸಮಾಜದಲ್ಲಿ ಉಂಟಾಗುವ ಒಳಿತು ಕೆಡುಕನ್ನು ಅವಲಂಬಿಸಿದೆ ಮತ್ತು ಸಮಾಜದೊಡನೆ ಹೆಣೆದುಕೊಂಡಿದೆ. ತಾನು ಸಮಾಜದ ಒಂದು ಕೊಂಡಿ ಎಂಬ ವಾಸ್ತವವನ್ನು ವ್ಯಕ್ತಿಯು ಅರಿತುಕೊಂಡು ಬಾಳುವುದು;

ಎಲ್ಲಿ ಹೋದಡೆ ಕಲಿಗೆ ಭಯವಿಲ್ಲ
ಹಂದೆಗೆ ಸುಖವಿಲ್ಲ ಕಾಣಿರಣ್ಣಾ. (115-798)

ಎಲ್ಲಿ=ಯಾವ ಕಡೆ/ಯಾವ ಜಾಗ; ಹೋಗು=ತೆರಳು/ಗಮಿಸು; ಹೋದಡೆ=ಹೋದರೆ/ಹೋದರೂ; ಕಲಿ=ಶೂರ/ವೀರ/ಕೆಚ್ಚುಳ್ಳವನು; ಕಲಿಗೆ=ಕೆಚ್ಚೆದೆಯುಳ್ಳವನಿಗೆ; ಭಯ+ಇಲ್ಲ; ಭಯ=ಹೆದರಿಕೆ/ಅಂಜಿಕೆ/ಪುಕ್ಕಲು; ಹಂದೆ=ಅಂಜುಬುರಕ/ಪುಕ್ಕಲ/ಹೇಡಿ; ಸುಖ+ಇಲ್ಲ; ಸುಖ=ನಲಿವು/ನೆಮ್ಮದಿ/ಆನಂದ/ಸಂತಸ; ಕಾಣಿರಿ+ಅಣ್ಣಾ; ಕಾಣ್=ನೋಡು/ಚಿಂತಿಸಿ ತಿಳಿ; ಕಾಣಿರಿ=ನೋಡಿರಿ/ತಿಳಿಯಿರಿ; ಅಣ್ಣ=ಇತರರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ;

ಕಲಿಯಾದವನು ಅಂದರೆ ಮಾನಸಿಕವಾಗಿ ಗಟ್ಟಿಗನಾದವನು ಜೀವನದಲ್ಲಿ ಯಾವುದೇ ಬಗೆಯ ಅಡೆತಡೆ, ತೊಂದರೆ, ಆಪತ್ತು ಉಂಟಾದರೂ ಅದನ್ನು ವಾಸ್ತವದ ನೆಲೆಗಟ್ಟಿನಲ್ಲಿ ಕೆಚ್ಚೆದೆಯಿಂದ ಎದುರಿಸಿ ಹೋರಾಡುತ್ತಾನೆಯೇ ಹೊರತು ಅಳುಕಿನಿಂದ ಹಿಂಜರಿಯುವುದಿಲ್ಲ.

ಆದರೆ ಹೇಡಿಯಾದವನು ಅಂದರೆ ಮಾನಸಿಕವಾಗಿ ಗಟ್ಟಿತನವಿಲ್ಲದವನು “ ಇಲ್ಲದ್ದನ್ನು ಇದೆಯೆಂದು, ಇರುವುದನ್ನು ಇಲ್ಲವೆಂದು “ ಮನದಲ್ಲಿ ಕಲ್ಪಿಸಿಕೊಂಡು, ಜೀವನದ ಪ್ರತಿಯೊಂದು ಗಳಿಗೆಯಲ್ಲಿಯೂ ಕಳವಳ, ತಲ್ಲಣ,ಅನುಮಾನ, ಗಾಬರಿ ಮತ್ತು ಆತಂಕಕ್ಕೆ ಗುರಿಯಾಗಿ ತತ್ತರಿಸುತ್ತ, ಇಡೀ ಬದುಕನ್ನೇ ಸಂಕಟಮಯಗೊಳಿಸಿಕೊಂಡು ಯಾವಾಗಲೂ ನರಳುತ್ತಿರುತ್ತಾನೆ.

ಒಂದೂರ ಭಾಷೆಯೊಂದೂರಲಿಲ್ಲ
ಒಂದೂರಲ್ಲಿ ಕೊಂಡಂಥ ಆಹಾರ
ಮತ್ತೊಂದೂರಲಿಲ್ಲ. (308-817)

ಒಂದು+ಊರ್+ಅ; ಊರು=ಜನರು ವಾಸಿಸುವ ನೆಲೆ/ಹಳ್ಳಿ/ಗ್ರಾಮ; ಒಂದೂರ=ಒಂದು ಊರಿನ; ಭಾಷೆ+ಒಂದು+ಊರ್+ಅಲ್ಲಿ+ಇಲ್ಲ; ಭಾಷೆ=ನುಡಿ/ಸೊಲ್ಲು/ಮಾತು; ಒಂದ್+ಊರ್+ಅಲ್ಲಿ; ಕೊಂಡ+ಅಂಥ; ಕೊಳ್ಳು=ಸ್ವೀಕರಿಸುವ/ಪಡೆಯುವ; ಕೊಂಡ=ಸ್ವೀಕರಿಸಿದ/ಪಡೆದ; ಅಂಥ=ಅಂತಹ/ಆ ಬಗೆಯ/ಆ ರೀತಿಯ; ಆಹಾರ=ತಿನಸು ಉಣಿಸು; ಮತ್ತು+ಒಂದ್+ಊರ್+ಅಲ್ಲಿ+ಇಲ್ಲ; ಮತ್ತೊಂದು=ಬೇರೆಯಾಗಿರುವ; ಮತ್ತೊಂದೂರು=ಬೇರೆ ಊರು;

ಜಗತ್ತಿನಲ್ಲಿ ನೆಲೆಸಿರುವ ಬಹುಬಗೆಯ ಜನಸಮುದಾಯಗಳು ತಮ್ಮ ತಮ್ಮ ನೆಲದ ಪರಿಸರಕ್ಕೆ ತಕ್ಕಂತೆ ತಮ್ಮದೇ ಆದ ನುಡಿಯನ್ನು ಆಡುತ್ತಾರೆ ಮತ್ತು ಆಹಾರವನ್ನು ಸೇವಿಸುತ್ತಾರೆ. ಆದ್ದರಿಂದಲೇ ಪ್ರತಿಯೊಂದು ಊರಿನ ಜನರು ದಿನನಿತ್ಯ ಆಡುವ ನುಡಿಯಾಗಲಿ ಮತ್ತು ತಿನ್ನುವ ಉಣ್ಣುವ ಕುಡಿಯುವ ವಸ್ತುಗಳಾಗಲಿ ಮತ್ತೊಂದು ಊರಿನ ಜನರಿಗಿಂತ ತುಸುಮಟ್ಟಿಗಾದರೂ ಬೇರೆ ಬೇರೆಯಾಗಿರುತ್ತವೆ. ಊರುಗಳ ನಡುವಣ ಅಂತರ ಹೆಚ್ಚಾದಂತೆಲ್ಲಾ ಜನರು ಆಡುವ ನುಡಿರಚನೆಯಲ್ಲಿ ಮತ್ತು ಸೇವಿಸುವ ಆಹಾರದಲ್ಲಿ ಹೆಚ್ಚಿನ ವ್ಯತ್ಯಾಸಗಳು ಕಂಡುಬರುತ್ತವೆ.

ಜಗತ್ತಿನಲ್ಲಿರುವ ಕೋಟಿಗಟ್ಟಲೆ ಜನರು ದಿನ ನಿತ್ಯ ಆಡುತ್ತಿರುವ ಸಾವಿರಾರು ಬಗೆಯ ನುಡಿಗಳಲ್ಲಿ ಯಾವುದೇ ಒಂದು ನುಡಿ ಮತ್ತೊಂದು ನುಡಿಗಿಂತ ಹಾಗೂ ಸೇವಿಸುತ್ತಿರುವ ಆಹಾರದಲ್ಲಿ ಯಾವುದೇ ಒಂದು ಆಹಾರವೂ ಮತ್ತೊಂದಕ್ಕಿಂತ ಮೇಲಲ್ಲ ಇಲ್ಲವೇ ಕೀಳಲ್ಲ.

ಆದರೆ ಹತ್ತಾರು ಬಗೆಯ ಮತಗಳು ಮತ್ತು ನೂರೆಂಟು ಬಗೆಯ ಜಾತಿಗಳಿಂದ ವಿಂಗಡಣೆಗೊಂಡಿರುವ ಜನಸಮುದಾಯಗಳು ತಮ್ಮ ತಮ್ಮ ಜಾತಿ, ಮತ, ಪ್ರಾಂತ್ಯಗಳ ಮೇಲರಿಮೆಯನ್ನು ಎತ್ತಿ ಸಾರಲೆಂದು ” ತಾವಾಡುವ ನುಡಿಯೇ ಉತ್ತಮ ಮತ್ತು ತಾವು ಸೇವಿಸುವ ಉಣಿಸು ತಿನಸುಗಳೇ ಎಲ್ಲಕ್ಕಿಂತ ಶುಚಿ ರುಚಿ ” ಎಂದು ಹೇಳಿಕೊಳ್ಳುತ್ತಿರುತ್ತಾರೆ. ಇದು ಜಾತಿ, ಮತ ಮತ್ತು ಪ್ರಾಂತ್ಯಗಳ ಬಗೆಗಿನ ಅತಿಯಾದ ಮೋಹದಿಂದ ಜನಮನದಲ್ಲಿ ನಾಟಿಕೊಂಡಿರುವ ತಪ್ಪು ಕಲ್ಪನೆಯೇ ಹೊರತು ವಾಸ್ತವವಲ್ಲ ಎಂಬುದನ್ನು ಅಕ್ಕನ ವಚನದ ಸಾಲುಗಳು ಸಾರುತ್ತಿವೆ.

( ಚಿತ್ರಸೆಲೆ : srisailamonline.com )

 

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. K.V Shashidhara says:

    ಬಹಳ ಸೊಗಸಾಗಿ ಮೂಡಿಬಂದಿದೆ ಸರ್. ಸಾಕಷ್ಟು ಕಲಿತಂತಾಯಿತು.

    • C.P.Nagaraja says:

      ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು.

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *