ಅಕ್ಕಮಹಾದೇವಿಯ ವಚನದಿಂದ ಆಯ್ದ ಸಾಲುಗಳ ಓದು – 2ನೆಯ ಕಂತು
– ಸಿ.ಪಿ.ನಾಗರಾಜ.
ಕಲ್ಲ ಹೊತ್ತು ಕಡಲೊಳಗೆ ಮುಳುಗಿದಡೆ
ಎಡರಿಂಗೆ ಕಡೆಯುಂಟೆ ಅವ್ವಾ. (148-801)
ಕಲ್ಲ್+ಅ; ಕಲ್ಲು=ಶಿಲೆ/ಅರೆ/ಬಂಡೆ; ಹೊರು=ತೂಕವಾಗಿರುವ ವಸ್ತುವನ್ನು ತಲೆಯ ಮೇಲೆ ಇಲ್ಲವೇ ಹೆಗಲ ಮೇಲೆ ಇಟ್ಟುಕೊಳ್ಳುವುದು; ಹೊತ್ತು=ಹೊತ್ತುಕೊಂಡು; ಕಡಲ್+ಒಳಗೆ; ಕಡಲು=ಸಮುದ್ರ/ಸಾಗರ; ಕಡಲೊಳಗೆ=ಕಡಲಿನಲ್ಲಿ; ಮುಳುಗು=ನೀರಿನಲ್ಲಿ ದೇಹವನ್ನು ಅದ್ದುವುದು/ನೀರಿನಲ್ಲಿ ಈಜನ್ನು ಹೊಡೆಯಲು ಹೋಗುವುದು; ಮುಳುಗಿದಡೆ=ಮುಳುಗಿದರೆ; ಎಡರು=ಅಡಚಣೆ/ಅಡ್ಡಿ/ಆಪತ್ತು/ಗಂಡಾಂತರ/ವಿಪತ್ತು; ಎಡರಿಂಗೆ=ಅಪಾಯಕ್ಕೆ; ಕಡೆ+ಉಂಟೆ; ಕಡೆ=ಕೊನೆ/ಅಂತ್ಯ; ಉಂಟು=ಇರುವುದು; ಕಡೆಯುಂಟೆ=ಕೊನೆಯಿರುವುದೆ; ಎಡರಿಂಗೆ ಕಡೆಯುಂಟೆ=ಅಪಾಯ ತಪ್ಪಿದ್ದಲ್ಲ/ದುರಂತಕ್ಕೆ ಕೊನೆಯಿಲ್ಲ; ಅವ್ವ=ತಾಯಿ/ಅಮ್ಮ/ಹಿರಿಯರಾದ ಹೆಂಗಸನ್ನು ಮಾತನಾಡಿಸುವಾಗ ಬಳಸುವ ಪದ;
“ತಲೆಯ ಮೇಲೆ ದೊಡ್ಡದಾದ ಹಾಗೂ ತೂಕವಾಗಿರುವ ಕಲ್ಲಿನ ದಿಂಡನ್ನು ಹೊತ್ತುಕೊಂಡು, ಸಮುದ್ರದಲ್ಲಿ ಈಜಲು ಇಲ್ಲವೇ ಮುಳುಗಲು ಹೋಗುವ ವ್ಯಕ್ತಿಯು ಒಂದಲ್ಲ ಒಂದು ಬಗೆಯ ಗಂಡಾಂತರಕ್ಕೆ ಒಳಗಾಗುವುದು ನಿಶ್ಚಿತ.” ಎಂಬ ಸಂಗತಿಯು ಒಂದು ರೂಪಕವಾಗಿ ಬಳಕೆಯಾಗಿದೆ.
ಇತರರಿಗೆ ಕೇಡನ್ನು ಬಗೆಯುವ ಉದ್ದೇಶವನ್ನು ಹೊಂದಿರುವ ಕೆಟ್ಟ ನಡೆನುಡಿಯುಳ್ಳ ವ್ಯಕ್ತಿಯು ಸಹಮಾನವರೊಡನೆ ಮತ್ತು ಸಮಾಜದೊಡನೆ ವ್ಯವಹರಿಸಲು ತೊಡಗಿದಾಗ ಒಂದಲ್ಲ ಒಂದು ಬಗೆಯ ಸಂಕಟಕ್ಕೆ ಗುರಿಯಾಗಿ ನರಳುವುದು ನಿಶ್ಚಿತ. ಏಕೆಂದರೆ ಅವನ ಮನಸ್ಸಿನಲ್ಲಿ ಕೆಟ್ಟ ಒಳಮಿಡಿತಗಳೇ ಹೆಚ್ಚಾಗಿ ತುಂಬಿರುತ್ತವೆ ಎಂಬ ತಿರುಳನ್ನು ಈ ರೂಪಕ ಸೂಚಿಸುತ್ತಿದೆ.
ದೇಹ ಉಳ್ಳನ್ನಕ್ಕರ ಲಜ್ಜೆ ಬಿಡದು
ಅಹಂಕಾರ ಬಿಡದು
ದೇಹದೊಳಗೆ ಮನ ಉಳ್ಳನ್ನಕ್ಕರ
ಅಭಿಮಾನ ಬಿಡದು
ನೆನಹಿನ ವ್ಯಾಪ್ತಿ ಬಿಡದು. (236-810)
ದೇಹ=ಮಯ್/ಶರೀರ; ಉಳ್ಳ್+ಅನ್ನಕ್ಕರ; ಉಳ್ಳ್=ಇರು; ಅನ್ನಕ್ಕರ=ವರೆಗೆ/ತನಕ; ಉಳ್ಳನ್ನಕ್ಕರ=ಇರುವ ತನಕ; ಲಜ್ಜೆ=ನಾಚಿಕೆ/ಸಿಗ್ಗು/ಸಂಕೋಚ; ಬಿಡು=ತೊರೆ/ತ್ಯಜಿಸು;
ಬಿಡದು=ಹೋಗುವುದಿಲ್ಲ; ಅಹಂಕಾರ=ಗರ‍್ವ/ಸೊಕ್ಕು/ಹಮ್ಮು/ಕೊಬ್ಬು; ದೇಹದ+ಒಳಗೆ; ದೇಹದೊಳಗೆ=ದೇಹದಲ್ಲಿ; ಮನ=ಮನಸ್ಸು/ಚಿತ್ತ; ಅಭಿಮಾನ=ಹೆಚ್ಚಿನ ವ್ಯಾಮೋಹ/ತಾನು ತನ್ನದು ಎಂಬ ಮೋಹ; ನೆನಹು=ಸ್ಮರಣೆ/ಚಿಂತನೆ; ವ್ಯಾಪ್ತಿ=ವಿಸ್ತಾರ/ಹರಹು/ಹಬ್ಬುವಿಕೆ;
ವ್ಯಕ್ತಿಗೆ ತನ್ನ ದೇಹ ಮತ್ತು ಸಮಾಜದ ಬಗ್ಗೆ ಅರಿವು ಬಂದ ಕಾಲದಿಂದ ಹಿಡಿದು, ಅವನ ಸಾವಿನ ಕೊನೆ ಗಳಿಗೆಯ ತನಕ ದೇಹದ ಬಗೆಗಿನ ಕಾಮದ ಲಜ್ಜೆ ; ನಾನು ನನ್ನಿಂದಲೇ ಎಂಬ ಅಹಂಕಾರ ; ನನ್ನದು ನನ್ನವರು ಎಂಬ ಮೋಹ ಮತ್ತು ಜೀವನದ ಏಳುಬೀಳುಗಳಲ್ಲಿ ಕಂಡುಂಡ ಒಲವು ನಲಿವು ನೋವಿನ ನೆನಪುಗಳು ಮನದಲ್ಲಿ ಸದಾಕಾಲ ಹಾದುಹೋಗುತ್ತಿರುತ್ತವೆ.
ಯಾವುದೇ ವ್ಯಕ್ತಿಯು “ ತಾನು ಎಲ್ಲ ಬಗೆಯ ಆಸೆಗಳನ್ನು ಬಿಟ್ಟವನು; ಕಾಮವನ್ನು ಗೆದ್ದವನು; ತನ್ನ ಮನದಲ್ಲಿ ಯಾವುದೇ ಬಗೆಯ ಚಂಚಲತೆಯು ಇಲ್ಲವೆಂದು “ ಹೇಳಿದರೆ, ಅಂತಹ ಮಾತುಗಳಿಂದ ಆತ ತನ್ನನ್ನು ತಾನು ವಂಚಿಸಿಕೊಳ್ಳುವುದಲ್ಲದೆ, ಲೋಕವನ್ನು ವಂಚಿಸುತ್ತಿರುತ್ತಾನೆ.
ನೊಂದವರ ನೋವ
ನೋಯದವರೆತ್ತ ಬಲ್ಲರೊ. (286-815)
ನೊಂದ+ಅವರ್+ಅ; ನೋವು=ಬೇನೆ/ಶೂಲೆ/ಯಾತನೆ/ತೊಂದರೆ/ವೇದನೆ/ಸಂಕಟ; ನೊಂದವರ=ನೋವನ್ನು ತಿಂದವರ/ಸಂಕಟವನ್ನು ಪಟ್ಟವರ; ನೋವ=ನೋವನ್ನು; ನೋಯದ+ಅವರ್+ಎತ್ತ; ನೋಯದವರು=ಸಂಕಟವನ್ನು ಪಡದವರು/ನೋವನ್ನು ತಿನ್ನದವರು/ತೊಂದರೆಗೆ ಒಳಗಾಗದವರು; ಎತ್ತ=ಯಾವ ಕಡೆ/ಯಾವ ದಿಕ್ಕು/ಯಾವ ರೀತಿ/ಯಾವ ಬಗೆ; ಬಲ್=ತಿಳಿ/ಅರಿ/ಗ್ರಹಿಸು; ಬಲ್ಲರೊ=ತಿಳಿದಿರುವರೋ ; ಎತ್ತ ಬಲ್ಲರೋ=ಹೇಗೆ ತಾನೆ ತಿಳಿಯಬಲ್ಲರು. ಅಂದರೆ ತಿಳಿಯಲು ಆಗುವುದಿಲ್ಲ;
ಅಕ್ಕಮಹಾದೇವಿಯು ಸಾವ ಕೆಡುವ ಲೋಕದ ಗಂಡರನ್ನು ನಿರಾಕರಿಸಿ , ದೇವರಾದ ಚೆನ್ನಮಲ್ಲಿಕಾರ‍್ಜುನನ್ನು ತನ್ನ ಗಂಡನನ್ನಾಗಿ ಮನದಲ್ಲಿ ಕಲ್ಪಿಸಿಕೊಂಡು, ಅವನನ್ನು ಕಾಣಲು ಕೂಡಲು ಸದಾಕಾಲ ಪರಿತಪಿಸುತ್ತಿದ್ದಳು . ಅಕ್ಕನ ಮಯ್ ಮನದಲ್ಲಿ ಉಂಟಾಗುತ್ತಿರುವ ನೋವನ್ನು ಇತರರು ಅರಿಯಲಾರದವರಾಗಿದ್ದರು ಮತ್ತು ಇತರರಿಗೆ ಅವಳ ಬಯಕೆಯು ಅಸಹಜವಾಗಿಯೂ ಹಾಗೂ ವಿಚಿತ್ರವಾಗಿಯೂ ಕಾಣುತ್ತಿತ್ತು.
ಇಂತಹ ಸನ್ನಿವೇಶದಲ್ಲಿ ಅಕ್ಕನು ಆಡಿರುವ “ ನೊಂದವರ ನೋವನ್ನು ನೋಯದವರು ಹೇಗೆ ತಾನೆ ಅರಿಯಬಲ್ಲರು ” ಎಂಬ ಮಾತುಗಳನ್ನು ಮತ್ತೊಂದು ರೀತಿಯಲ್ಲಿಯೂ ವಿವರಿಸಿಕೊಳ್ಳಬಹುದು.
ಮಾನವ ಸಮುದಾಯದ ನೋವಿನ ಆಳದಿಂದ ಮೂಡಿಬಂದ ಗೋಳಿನ ದನಿಯೇ ಅಕ್ಕನ ಬಾಯಲ್ಲಿ ಈ ಬಗೆಯ ನುಡಿಯಾಗಿ ಹೊರಹೊಮ್ಮಿರುವಂತೆ ಕಂಡು ಬರುತ್ತಿದೆ.
ಪ್ರತಿನಿತ್ಯ ಹೊಟ್ಟೆ ತುಂಬ ಉಣ್ಣುವುದಕ್ಕೆ ಗತಿಯಿಲ್ಲದೆ ಹಸಿವಿನಿಂದ ನರಳುತ್ತಿರುವ; ಜಾತಿ ಮತದ ಕಾರಣದಿಂದಾಗಿ ವಿದ್ಯೆ, ಉದ್ಯೋಗ ಮತ್ತು ಸಂಪತ್ತಿನಿಂದ ವಂಚಿತರಾಗಿ ಬಡತನದ ಬೇಗೆಯಲ್ಲಿ ಬೇಯುತ್ತಿರುವ; ಮೇಲು ಜಾತಿಯವರ ಮತ್ತು ಮೇಲು ವರ‍್ಗದವರ ಕ್ರೂರವಾದ ಹಲ್ಲೆಗೆ ಗುರಿಯಾಗಿ ಸಾವು ನೋವುಗಳಿಗೆ ನಿತ್ಯವೂ ಬಲಿಯಾಗುತ್ತಿರುವ ಕೆಳ ಜಾತಿಯವರ ಮತ್ತು ಕೆಳ ವರ‍್ಗದವರ ಕೊನೆಗಾಣದ ನೋವನ್ನು ಹೊಟ್ಟೆ ತುಂಬಿದ, ಮೇಲು ಜಾತಿಯ ಮತ್ತು ಮೇಲುವರ‍್ಗದ ಜನರು ತಿಳಿಯಲಾರರು ಹಾಗೂ ತಮ್ಮ ಮನದಲ್ಲಿ ಊಹಿಸಿಕೊಳ್ಳಲಾರರು. ಏಕೆಂದರೆ ಮೇಲು ಜಾತಿ, ಸಂಪತ್ತು ಮತ್ತು ಆಡಳಿತದ ಗದ್ದುಗೆಯು ಉಳ್ಳವರನ್ನು ಕುರುಡರನ್ನಾಗಿ, ಕಿವುಡರನ್ನಾಗಿ ಮತ್ತು ಕರುಣೆಯಿಲ್ಲದವರನ್ನಾಗಿ ಮಾಡಿದೆ.
( ಚಿತ್ರಸೆಲೆ : srisailamonline.com )
ಇತ್ತೀಚಿನ ಅನಿಸಿಕೆಗಳು