ಇದು ಮಾಟಗಾತಿಯರ ಮಾರುಕಟ್ಟೆ!
– ಕೆ.ವಿ.ಶಶಿದರ.
ಬಗೆ ಬಗೆಯ ಮಾರುಕಟ್ಟೆಗಳ ಕುರಿತು ನಾವು ಕೇಳಿದ್ದೇವೆ. ಅಕ್ಕಿ ಪೇಟೆ, ಬಳೆ ಪೇಟೆ, ಕಾಟನ್ ಪೇಟೆ, ಚಿಕ್ಕ ಪೇಟೆ… ಹೀಗೆ. ದಕ್ಶಿಣ ಅಮೆರಿಕಾದ ಪೆರುವಿನಲ್ಲೊಂದು ಪೇಟೆಯಿದೆ. ಅದು ಏತಕ್ಕೆ ಹೆಸರುವಾಸಿಯಾಗಿದೆ ಎಂದು ತಿಳಿದರೆ ಅಚ್ಚರಿಯಾಗುವುದು.
ಮಾಟಗಾತಿಯರ ಮಾರುಕಟ್ಟೆ ಎಂದೇ ಹೆಸರುವಾಸಿಯಾಗಿರುವ ದಿ ಮೆರ‍್ಕಾಡೋ ಡಿ ಬ್ರೂಜಸ್ ನಲ್ಲಿ ಮಾರಾಟವಾಗುವ ವಸ್ತುಗಳು ಸಾಮಾನ್ಯವಾಗಿ ಊಹಿಸಲಾಗದಂತಹವು. ಹಾವಿನ ಕೊಬ್ಬು, ಕಪ್ಪೆಗಳನ್ನು ಸೇರಿಸಿ ವಿಚಿತ್ರ ಮೂಲಿಕೆಗಳಿಂದ ಔಶದದ ಗುಟುಕುಗಳು, ಇವುಗಳ ಜೊತೆಗೆ ಆರೋಗ್ಯ ವ್ರುದ್ದಿಗಾಗಿ ಅನೇಕ ಮಸಾಲೆ ಪದಾರ‍್ತಗಳಿಗೆ ಇದು ಹೆಸರುವಾಸಿ. ಇಲ್ಲಿ ಸಿಗುವ ಹಲವು ವಸ್ತುಗಳು ಸಂದಿವಾತ ನಿವಾರಣೆಗೆ ಉಪಯುಕ್ತ ಎಂದು ಹೇಳಲಾಗುತ್ತದೆ. ಶಾಪ ವಿಮೋಚನೆ ಮಾಡುವ ಕಪ್ಪು ಮೇಣದ ಬತ್ತಿಗಳು ಹಾಗೂ ಇನ್ನೂ ಚಿತ್ರ ವಿಚಿತ್ರ ಮತ್ತು ಆಕರ‍್ಶಕ ವಸ್ತುಗಳನ್ನು ಈ ಮಾರುಕಟ್ಟೆಯಲ್ಲಿ ಕಾಣಬಹುದು.
ಈ ಮಾರುಕಟ್ಟೆಯಲ್ಲಿರುವ ಮಾಟಗಾತಿಯರು, ಸಾಮಾನ್ಯವಾಗಿ ಮಾಟಗಾತಿಯರು ಹಾಕುವ ನಿರ‍್ದಿಶ್ಟವಾದ ಉದ್ದನೆಯ ಟೋಪಿಗಳನ್ನು ದರಿಸಿರುವುದಿಲ್ಲ. ಕೈಯಲ್ಲಿ ಮಾಟಗಾತಿಯರ ದಂಡವನ್ನೂ ಹಿಡಿದಿರುವುದಿಲ್ಲ. ಹಾಗಾಗಿ ಅವರುಗಳು ಇದನ್ನೆಲ್ಲಾ ಮಾಡುತ್ತಾರೆ ಎಂದು ನಂಬುವುದೂ ಕಶ್ಟವಾಗುತ್ತದೆ. ಅವರುಗಳು ಅತ್ಯಂತ ಪರಿಣಾಮಕಾರಿ ಹಾಗೂ ಶಕ್ತಿಯುತ ಔಶದಗಳನ್ನು ವಿವಿದ ಮೂಲಿಕೆಗಳಿಂದ ತಯಾರಿಸುವುದರೊಂದಿಗೆ, ಜಾನಪದ ಪರಿಹಾರೋಪಾಯಗಳನ್ನೂ ಮೈಗೂಡಿಸಿಕೊಂಡಿದ್ದಾರೆ. ಪೆರುವಿನ ಹೆಚ್ಚಿನ ಜನಸಂಕ್ಯೆಯ ದೈಹಿಕ ಹಾಗೂ ಆದ್ಯಾತ್ಮಿಕ ತೊಂದರೆಗಳನ್ನು ಗುಣಪಡಿಸಲು ಇಲ್ಲಿನ ಮಾರುಕಟ್ಟೆ ನೆರವಾಗುತ್ತದೆ ಎಂದು ನಂಬಿದ್ದಾರೆ.
ಈ ಮಾರುಕಟ್ಟೆಯು ‘ಗಮರಾ’ ನಿಲ್ದಾಣದ ಕೆಳಗೆ, ನೆಲಮಹಡಿಯಲ್ಲಿ ಹರಡಿಕೊಂಡಿದೆ. ಈ ಕಾರಣದಿಂದಾಗಿ ಬಹಳಶ್ಟು ಸ್ತಳೀಯರಿಗೇ ಇದರ ಇರುವಿಕೆಯ ಬಗ್ಗೆ ತಿಳಿದಿಲ್ಲ. ಇದರ ಅಸ್ತಿತ್ವದ ಬಗ್ಗೆ ಯಾವುದೇ ಕಲ್ಪನೆ ಸಹ ಅವರುಗಳಿಗೆ ಇಲ್ಲ. ಪುರಾಣ ಕತೆಗಳು ಹೇಳುವಂತೆ ಕೆಲವೇ ಹಣವಂತರಿಗೆ ಮಾತ್ರ ಮೀಸಲಾದ ಮಾರುಕಟ್ಟೆ ಇದು. ಜನ ಸಾಮಾನ್ಯರೂ ಹೋಗಿ ತಮಗೆ ಬೇಕಾದ, ಇಶ್ಟವಾದ ಅವಶ್ಯ ವಸ್ತುಗಳನ್ನು ನಿರಾಯಾಸವಾಗಿ ಇಲ್ಲಿ ಕರೀದಿಸಬಹುದು. ಈ ಮಾರುಕಟ್ಟೆ ಹೊರಗಿನ ಪ್ರಪಂಚದಿಂದ ಕೇಲವ ಒಂದೇ ಒಂದು ಗೆರೆಯಿಂದ ಬೇರ‍್ಪಡಿಸಲ್ಪಟ್ಟಿದೆ. ಈ ಮಾರುಕಟ್ಟೆಯೊಳಗೆ ಅಡಿಯಿಟ್ಟೊಡನೆ ಕಾಣಬರುವುದು, ಗಾಜಿನ ಗೂಡಿನಲ್ಲಿ ಪ್ರದರ‍್ಶನಕ್ಕೆ ಇಟ್ಟಿರುವ ವಿವಿದ ಅಳತೆಯ ಗಾತ್ರದ ಹಾವಿನ ಚರ‍್ಮಗಳು.
‘ದಿ ಮೆರ‍್ಕಾಡೋ ಡಿ ಬ್ರೂಜಸ್’ – ಮಾಟಗಾತಿಯರ ಮಾರುಕಟ್ಟೆಯ ಹಿಂದಿರುವ ಅತಿ ಮುಕ್ಯ ಹಾಗೂ ಪ್ರಮುಕ ಉದ್ದೇಶ, ಪೆರುವಿನ ಪ್ರಾಚೀನ ಸಂಪ್ರದಾಯಗಳನ್ನು ಮರಳಿ ಮುನ್ನೆಲೆಗೆ ತರುವುದು. ಇದರೊಂದಿಗೆ ಅಲ್ಲಿನ ಜನ ಸಾಂಪ್ರದಾಯಿಕ ಔಶದಿಗಳನ್ನು ಉಪಯೋಗಿಸುವ ಅಬ್ಯಾಸವನ್ನು ಹೆಚ್ಚಿಸುವುದು. ನೋಡಲು ವಿಚಿತ್ರವಾಗಿ ಕಂಡು ಬಂದರೂ, ಈ ವೈದ್ಯಕೀಯ ಪದ್ದತಿಗಳು ಸ್ತಳೀಯರ ಬದುಕಿನಲ್ಲಿ ಹಾಸುಹೊಕ್ಕಾಗಿವೆ.
ಈ ಮಾರುಕಟ್ಟೆಯಲ್ಲಿ ಅನೇಕ ದಾರ‍್ಮಿಕ ಪೂಜೆ ಪುನಸ್ಕಾರಗಳಿಗೆ ಅವಶ್ಯವಿರುವ ಸಾಮಾನುಗಳು, ದೇವರ ಅರ‍್ಪಣೆಗೆ ಬೇಕಿರುವ ವಸ್ತುಗಳು ಯತೇಚ್ಚವಾಗಿ ಕಾಣಸಿಗುತ್ತವೆ. ದಾರ‍್ಮಿಕ ಕಾರ‍್ಯಗಳಲ್ಲಿ ಬಳಕೆಯಾಗುವ ಹೆಬ್ಬಾವಿನ ಚರ‍್ಮ, ಸಮುದ್ರ ಚಿಪ್ಪುಗಳು, ಇದರೊಂದಿಗೆ ಸ್ತಳೀಯವಾಗಿ ಸಿಗುವ ಕೊಳಕು, ಕಲ್ಲುಗಳು, ಮಸಾಲೆ ಪದಾರ‍್ತಗಳು ಮತ್ತು ಹಲವು ಬೀಜಗಳು ಸೇರಿ ತಯಾರಿಸಿದ, ಸ್ತಳೀಯ ಬಾಶೆಯಲ್ಲಿ “ಹತಮ್ ಹಂಪಿ” ಎನ್ನುವ ಮಿಶ್ರಣ ಇಲ್ಲಿ ಮಾರಾಟವಾಗುತ್ತದೆ. ಈ ಮಾರುಟ್ಟೆಯಲ್ಲಿ ಬಗೆಬಗೆಯ ಕಳ್ಳಿ ಎಲೆಗಳೂ ಸಿಗುತ್ತವೆ.
ಈ ಮಾರುಕಟ್ಟೆಯಲ್ಲಿ ಹಲವು ಮಂತ್ರ ವೈದ್ಯರು ಹಾಗೂ ನೋವನ್ನು ಕಡಿಮೆಗೊಳಿಸುವ ಮಂತ್ರವಾದಿಗಳು ಗ್ರಾಹಕರ ಸೇವೆಗೆ ಲಬ್ಯವಿರುತ್ತಾರೆ. ಅಗತ್ಯವಿರುವವರು ಅವರುಗಳೊಡನೆ ವಿಚಾರಣೆ ಮಾಡಿ ಮಾರ‍್ಗದರ‍್ಶನ ಸಹ ಪಡೆಯಬಹುದು. ಗಮಾರಾ ಮಾರುಕಟ್ಟೆಯೆಡೆಗೆ ಇರುವ ದಾರಿಯಲ್ಲಿ ಕುಳಿತ ಮಾರಾಟಗಾರರು ಮೈಕ್ರೊಪೋನುಗಳನ್ನು ಬಳಸಿ ಬರುವ ಗ್ರಾಹಕರನ್ನು ಸೆಳೆಯುವ ದ್ರಶ್ಯ ಕಾಣಬಹುದು.
(ಮಾಹಿತಿ ಮತ್ತು ಚಿತ್ರ ಸೆಲೆ: thecriticalspace.wordpress.com, atlasobscura.com)
ಇತ್ತೀಚಿನ ಅನಿಸಿಕೆಗಳು