ಅಕ್ಕಮ್ಮನ ವಚನದಿಂದ ಆಯ್ದ ಸಾಲುಗಳ ಓದು – 2ನೆಯ ಕಂತು

ಸಿ.ಪಿ.ನಾಗರಾಜ.

ವಚನಗಳು, Vachanas

ಅಂಗಕ್ಕೆ ಆಚಾರ
ಮನಕ್ಕೆ ಅರಿವು
ಅರಿವಿಂಗೆ ಜ್ಞಾನ ನಿರ್ಧಾರವಾಗಿ
ಕರಿಗೊಂಡುದೆ ವ್ರತ. (481/838)

ಅಂಗ=ಮಯ್/ದೇಹ/ಶರೀರ; ಆಚಾರ=ಒಳ್ಳೆಯ ವರ‍್ತನೆ ; ಮನ=ಮನಸ್ಸು/ಚಿತ್ತ; ಅರಿವು=ತಿಳುವಳಿಕೆ; ಅರಿವಿಂಗೆ=ಅರಿವಿಗೆ; ಜ್ಞಾನ=ಅರಿವು/ತಿಳುವಳಿಕೆ ; ನಿರ್ಧಾರ+ಆಗಿ; ನಿರ್ಧಾರ=ನಿಶ್ಚಯ; ಕರಿಗೊಳ್ಳು=ಗಟ್ಟಿಗೊಳ್ಳು;

ವ್ರತ=ಮಿಂದು ಮಡಿಯುಟ್ಟು, ಉಪವಾಸವಿದ್ದು ದೇವರ ಹೆಸರನ್ನು ಉಚ್ಚರಿಸುತ್ತಾ, ಹೂ ಹಣ್ಣು ಕಾಯಿ ಅನ್ನ ಪಾನಗಳನ್ನು ದೇವರ ಮುಂದೆ ಎಡೆಯಾಗಿ ಇಟ್ಟು, ದೀಪ ದೂಪಗಳಿಂದ ಪೂಜಿಸುವ ಆಚರಣೆ;

ಶಿವಶರಣಶರಣೆಯರ ಪಾಲಿಗೆ ವ್ರತವೆಂಬುದು ದೇವರನ್ನು ಪೂಜಿಸುವಾಗ ಹಿಂದಿನಿಂದಲೂ ಆಚರಿಸಿಕೊಂಡು ಬಂದಿರುವ ಸಂಪ್ರದಾಯವನ್ನು ಚಾಚುತಪ್ಪದೆ ಅನುಸರಿಸುವ ಕ್ರಿಯೆಯಾಗಿರಲಿಲ್ಲ. ವ್ರತವೆಂಬುದು ದೇಹಕ್ಕೆ ಒಳ್ಳೆಯ ಕಸುವನ್ನು ಪಡೆದುಕೊಳ್ಳುವ, ಮನಸ್ಸಿಗೆ ಒಳ್ಳೆಯ ಅರಿವನ್ನು ಗಳಿಸಿಕೊಳ್ಳುವ , ಅರಿವಿನಿಂದ ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ನಡೆನುಡಿಯ ಆಚರಣೆಯಾಗಿತ್ತು.

ಪರಸ್ತ್ರೀ ಪರಧನಂಗಳಲ್ಲಿ
ದುರ್ವಿಕಾರ ದುಶ್ಚರಿತ್ರದಲ್ಲಿ
ಒಡಗೂಡದಿಪ್ಪುದೆ ಭರಿತಾರ್ಪಣ. (460/835)

ಪರ=ಇತರ/ಬೇರೆಯ/ಅನ್ಯ; ಸ್ತ್ರೀ=ಹೆಂಗಸು; ಪರಸ್ತ್ರೀ=ಮತ್ತೊಬ್ಬನ ಹೆಂಡತಿ/ಮತ್ತೊಬ್ಬ ಹೆಂಗಸು; ಪರ+ಧನಂಗಳ್+ಅಲ್ಲಿ; ಧನ=ಸಂಪತ್ತು/ಒಡವೆ ವಸ್ತು/ಹಣಕಾಸು/ಆಸ್ತಿಪಾಸ್ತಿ; ಪರಧನ=ಬೇರೆಯವರಿಗೆ ಸೇರಿದ ಸಂಪತ್ತು; ದುರ್ವಿಕಾರ=ಇತರರನ್ನು ವಂಚಿಸುವ, ಇತರರಿಗೆ ಕೇಡನ್ನು ಬಗೆಯುವ ಕೆಟ್ಟ ಉದ್ದೇಶಗಳಿಂದ ಕೂಡಿರುವ ಮನಸ್ಸು; ದುಶ್ಚರಿತ್ರ+ಅಲ್ಲಿ; ದುಶ್ಚರಿತ್ರ=ಕೆಟ್ಟ ನಡೆನುಡಿಯವನು/ನೀಚತನವುಳ್ಳವನು;

ಒಡಗೂಡದೆ+ಇಪ್ಪುದೆ; ಒಡ+ಕೂಡು; ಒಡ=ಜತೆಯಾಗಿ; ಕೂಡು=ಸೇರು; ಒಡಗೂಡು=ಜತೆಸೇರು; ಇಪ್ಪುದೆ=ಇರುವುದೆ; ಒಡಗೂಡದಿಪ್ಪುದೆ=ಜತೆ ಸೇರದಿರುವುದೇ; ಭರಿತ+ಅರ್ಪಣ; ಭರಿತ=ತುಂಬಿರುವುದು/ಪರಿಪೂರ‍್ಣವಾಗಿರುವುದು; ಅರ್ಪಣ=ಒಪ್ಪಿಸುವುದು/ನೀಡುವುದು/ಕೊಡುವುದು;

ಭರಿತಾರ್ಪಣ=ದೇವರ ಮುಂದೆ ದೊಡ್ಡ ಪ್ರಮಾಣದಲ್ಲಿ ಉಣಿಸು ತಿನಸುಗಳನ್ನು ಎಡೆಯಾಗಿ ಇಡುವುದು/ದೇವರಿಗೆ ಸಲ್ಲಿಸುವ ಕಾಣಿಕೆ;

ವ್ಯಕ್ತಿಯು ಇತರರ ಸಂಪತ್ತನ್ನು ದೋಚದೆ ಮತ್ತು ಹೆಣ್ಣು ಮಕ್ಕಳ ಬಾಳನ್ನು ಹಾಳುಮಾಡದೆ ಒಳ್ಳೆಯ ನಡೆನುಡಿಗಳಿಂದ ಬಾಳುವುದೇ ದೇವರಿಗೆ ಸಲ್ಲಿಸುವ ನಿಜವಾದ ಕಾಣಿಕೆಯಾಗುತ್ತದೆ ಎಂಬ ನಿಲುವನ್ನು ಶಿವಶರಣಶರಣೆಯರು ಹೊಂದಿದ್ದರು.

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. chandrakanth patil says:

    ??

ಅನಿಸಿಕೆ ಬರೆಯಿರಿ:

%d bloggers like this: