ಅಮುಗೆ ರಾಯಮ್ಮನ ವಚನದಿಂದ ಆಯ್ದ ಸಾಲುಗಳ ಓದು – 2ನೆಯ ಕಂತು
– ಸಿ.ಪಿ.ನಾಗರಾಜ.
ಕೋಟ್ಯನುಕೋಟಿಯನೋದಿದಡೇನು
ಸಾತ್ವಿಕರಾಗಬಲ್ಲರೆ. (636-859)
ಕೋಟಿ+ಅನುಕೋಟಿ+ಅನ್+ಓದಿದಡೆ+ಏನು; ಕೋಟಿ=ಒಂದು ನೂರು ಲಕ್ಶದ ಮೊತ್ತವನ್ನು ಸೂಚಿಸುವ ಪದ; ಕೋಟ್ಯನುಕೋಟಿ=ಕೋಟಿಗಟ್ಟಲೆ/ತುಂಬಾ/ಬಹಳ/ಅತಿ ಹೆಚ್ಚಾಗಿ; ಅನ್=ಅನ್ನು; ಓದು=ಲಿಪಿರೂಪದ ಬರಹದ ಮೂಲಕ ಅರಿವನ್ನು ಪಡೆಯುವುದು; ಓದಿದಡೆ=ಓದಿದರೆ/ಓದುವುದರಿಂದ; ಏನು=ಯಾವುದು;
ಸಾತ್ವಿಕರ್+ಆಗಬಲ್ಲರೆ; ಸಾತ್ವಿಕ=ಒಳ್ಳೆಯ ನಡೆನುಡಿಯಿಂದ ಬಾಳುತ್ತಿರುವವನು/ಗುಣವಂತ; ಆಗು=ರೂಪುಗೊಳ್ಳುವುದು; ಆಗಬಲ್ಲರೆ=ಆಗುತ್ತಾರೆಯೆ;
ತುಂಬಾ ಓದಿಕೊಂಡ ಮಾತ್ರಕ್ಕೆ ವ್ಯಕ್ತಿಯು ಒಳ್ಳೆಯವನಾಗುವುದಿಲ್ಲ. ಏಕೆಂದರೆ ಯಾವ ವ್ಯಕ್ತಿಯು ತಾನು ಓದಿ ಪಡೆದ ಅರಿವಿನಿಂದ ತನ್ನ ಮತ್ತು ತನ್ನ ಕುಟುಂಬದ ಹಿತವನ್ನು ಕಾಪಾಡಿಕೊಳ್ಳುವಂತೆಯೇ ಸಹಮಾನವರ ಮತ್ತು ಸಮಾಜದ ಒಳಿತನ್ನು ಕಾಪಾಡುತ್ತಾನೆಯೋ ಅಂತಹ ವ್ಯಕ್ತಿಯನ್ನು ಮಾತ್ರ ಒಳ್ಳೆಯವನೆಂದು ಗುರುತಿಸಬೇಕು.
ವ್ಯಕ್ತಿಗೆ ಒಳ್ಳೆಯತನವೆಂಬುದು ಕೇವಲ ಓದಿನಿಂದ ಬರುವುದಿಲ್ಲ. ಸಹಮಾನವರ ಬಗ್ಗೆ ಆತನು ಹೊಂದಿರುವ ಒಲವು, ಕರುಣೆ, ಸಹನೆ ಮತ್ತು ಗೆಳೆತನದ ನಡೆನುಡಿಯಿಂದ ಬರುತ್ತದೆ.
ಗರಡಿಯಲ್ಲಿ ಸಾಮುವ ಮಾಡುವರಲ್ಲದೆ
ಕಾಳಗದಲ್ಲಿ ಸಾಮುವ ಮಾಡುವರೆ. (639-859)
ಗರಡಿ+ಅಲ್ಲಿ; ಗರಡಿ=ದೇಹವನ್ನು ಗಟ್ಟಿಮುಟ್ಟಾಗಿ ಇಟ್ಟುಕೊಂಡು ಕುಸ್ತಿಯನ್ನು ಮಾಡಲು ಅಗತ್ಯವಾದ ತರಬೇತಿಯನ್ನು ನೀಡುವ ಶಾಲೆ/ರಣರಂಗದಲ್ಲಿ ಹಗೆಗಳೊಡನೆ ಹೋರಾಡಲು ಬೇಕಾದ ದೊಣ್ಣೆ, ಕತ್ತಿ, ಬಿಲ್ಲುಬಾಣ , ಗದೆ ಗುರಾಣಿ ಮುಂತಾದ ಹತಾರಗಳನ್ನು ಬಳಸುವ ತರಬೇತಿಯನ್ನು ನೀಡುವ ನೆಲೆ;
ಸಾಮು=ದೇಹವನ್ನು ದಂಡಿಸಿ ಮಾಡುವ ವ್ಯಾಯಾಮ/ಕಸರತ್ತು; ಮಾಡುವರ್+ಅಲ್ಲದೆ; ಅಲ್ಲದೆ=ಹೊರತು ಪಡಿಸಿ; ಕಾಳಗ+ಅಲ್ಲಿ; ಕಾಳಗ=ಕದನ/ಸಮರ; ಮಾಡುವರೆ=ಮಾಡುತ್ತಾರೆಯೆ;
ಗರಡಿ ಮನೆಯಲ್ಲಿ ಮಾಡುವ ವ್ಯಾಯಾಮವನ್ನು ರಣರಂಗದಲ್ಲಿ ಮಾಡತೊಡಗಿದರೆ ದುರಂತ ಕಟ್ಟಿಟ್ಟ ಬುತ್ತಿ. ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಯಾಗಿವೆ.
ಯಾವ ಯಾವ ಸನ್ನಿವೇಶಗಳಲ್ಲಿ ಯಾವ ಕೆಲಸಗಳನ್ನು ಮಾಡಬೇಕು ಇಲ್ಲವೇ ಮಾಡಬಾರದು ಎಂಬ ಮುಂದಾಲೋಚನೆ, ಎಚ್ಚರ ಮತ್ತು ವಿವೇಕವನ್ನು ವ್ಯಕ್ತಿಯು ಹೊಂದಿರಬೇಕು.
ಧೀರನೆಂದು ಬೀದಿಯಲ್ಲಿ ನುಡಿಯಲೇಕೆ
ಕಾವಲ್ಲಿ ಕಾಣಬಹುದು (650-860)
ಧೀರನ್+ಎಂದು; ಧೀರ=ಕೆಚ್ಚುಳ್ಳವನು/ಎದೆಗಾರ/ಅಂಜಿಕೆಯಿಲ್ಲದವನು; ಬೀದಿ+ಅಲ್ಲಿ; ಬೀದಿ=ಹಾದಿ/ದಾರಿ; ನುಡಿಯಲ್+ಏಕೆ; ನುಡಿ=ಹೇಳು/ಮಾತನಾಡು; ಏಕೆ=ಯಾವುದಕ್ಕಾಗಿ; ಕಾ+ಅಲ್ಲಿ; ಕಾ=ಕಾಪಾಡು/ಕಾವಲಿರು/ಸಲಹು; ಕಾವಲ್ಲಿ=ಹಗೆಯ ಎದುರು ಹೋರಾಡುವಾಗ/ರಣರಂಗದಲ್ಲಿ ಕಾದಾಡುವಾಗ; ಕಾಣ್=ನೋಡು/ತಿಳಿ; ಕಾಣಬಹುದು=ನೋಡಿ ತಿಳಿಯಬಹುದು/ಅರಿಯಬಹುದು;
ವ್ಯಕ್ತಿಯು ತನ್ನ ಶೂರತನವನ್ನು ಮಾತಿನಲ್ಲಿ ತೋರಿಸುವ ಬದಲು ರಣರಂಗದಲ್ಲಿ ಹಗೆಗಳ ಎದುರು ಹೋರಾಡುವುದರ ಮೂಲಕ ತೋರಿಸಬೇಕು. ಈ ಸಂಗತಿಯು ಒಂದು ರೂಪಕದ ತಿರುಳಿನಲ್ಲಿ ಬಳಕೆಯಾಗಿದೆ.
ವ್ಯಕ್ತಿಯು ಆಡಂಬರದ, ಜಂಬದ ಮತ್ತು ಹೆಮ್ಮೆಯ ಮಾತುಗಳನ್ನಾಡುವ ಬದಲು ಒಳ್ಳೆಯ ಕೆಲಸವನ್ನು ಮಾಡಿ ತೋರಿಸಬೇಕು.
( ಚಿತ್ರ ಸೆಲೆ: lingayatreligion.com )
ಇತ್ತೀಚಿನ ಅನಿಸಿಕೆಗಳು