ಹೊಂಗೆ ಮರ

ಶ್ಯಾಮಲಶ್ರೀ.ಕೆ.ಎಸ್.

ಹೊಂಗೆ ಮರ, Millettia Pinnata

ರಸ್ತೆಯ ಬದಿಗಳಲ್ಲಿ ಹಸಿರಿನಿಂದ ಚಂದವಾಗಿ ಕಾಣುವ ಈ ಮರವು ಸಾಮಾನ್ಯವಾಗಿ ಎಲ್ಲರಿಗೂ ಚಿರಪರಿಚಿತ. ಅದುವೇ ಹೊಂಗೆ ಮರ. ಸಸ್ಯಶಾಸ್ತ್ರದಲ್ಲಿ ‘ಪೊಂಗಾಮಿಯ ಪಿನ್ನಾಟ’ (Pongamia Pinnata) ಎಂದು ಕರೆಯಲ್ಪಡುವ ಈ ಮರ ಪ್ರಕ್ರುತಿಯ ಬಹಳಶ್ಟು ಚಂದದ ಕೊಡುಗೆಗಳಲ್ಲಿ ಒಂದು. ಹಳ್ಳಿಗಳಲ್ಲಿ ಹೆಚ್ಚಾಗಿ ಹೊಲದ ಬದುಗಳಲ್ಲಿ, ರಸ್ತೆ ಬದಿಯಲ್ಲಿ ಕಾಣಬಹುದು. ಇದರ ಸಸಿ ಎರಡು ವರ‍್ಶಕ್ಕೆ ಮರವಾಗಿ ಬೆಳೆಯುತ್ತದೆ.

ಹೊಂಗೆ ಎಲೆಯು ನೋಡಲು ಬಹಳ ಸುಂದರ. ರೈತರು ಹೊಂಗೆ ಸೊಪ್ಪನ್ನು(ಎಲೆ) ನೈಸರ‍್ಗಿಕ ಗೊಬ್ಬರವಾಗಿ ತಮ್ಮ ಬೆಳೆಗಳಿಗೆ ಬಳಸುತ್ತಾರೆ. ಹೊಂಗೆ ಸೊಪ್ಪನ್ನು ಹೊಲದಲ್ಲಿ ಹಾಕುವುದರಿಂದ ಅದು ಅಲ್ಲಿಯೇ ಕೊಳೆತು ನೈಸರ‍್ಗಿಕ ಗೊಬ್ಬರವಾಗಿ ಬೆಳೆಗಳು ಸೊಂಪಾಗಿ ಬೆಳೆಯುತ್ತವೆ. ’ಹೊಂಗೆ ನೆರಳು, ತಾಯಿಯ ಮಡಿಲು’ ಎಂಬ ಮಾತಿದೆ. ಹೊಂಗೆ ಮರ ಎಂತಹ ಆಯಾಸವನ್ನು ಕೂಡ ಕಡಿಮೆ ಮಾಡುತ್ತದೆ.

ಹೊಂಗೆ ಮರದ ಗಾಳಿಯು ತಂಪಾಗಿಯೂ ಆರೋಗ್ಯಕರವಾಗಿಯೂ ಇರುವುದು. ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಹೊಂಗೆ ಮರ ಪ್ರಮುಕ ಪಾತ್ರವಹಿಸುತ್ತದೆ. ಹೊಂಗೆ ಮರದ ಹೂವು ಗಾಡ ನೀಲಿಯ ಬಣ್ಣದ್ದಾಗಿದ್ದು ಅದರ ರಸವು ಅನೇಕ ಔಶದಿ ತಯಾರಿಕೆಯಲ್ಲಿ ಬಳಕೆಯಾಗುತ್ತದೆ. ಹೊಂಗೆ ಕಡ್ಡಿಯನ್ನು ಹಲ್ಲುಗಳ ಕೊಳೆ ತೆಗೆಯಲು, ಒಸಡನ್ನು ಗಟ್ಟಿಯಾಗಿಸಲು ಬಳಸಲಾಗುತ್ತದೆ. ಮದುಮೇಹ ನಿಯಂತ್ರಣಕ್ಕೂ ಹೊಂಗೆ ಎಲೆಯನ್ನು ಬಳಸಲಾಗುತ್ತದೆ.

ಹೊಂಗೆ ಬೀಜವನ್ನು ಒಣಗಿಸಿ ಬೇಯಿಸಿ ಹೊಂಗೆ ಎಣ್ಣೆಯನ್ನು ತಯಾರಿಸುತ್ತಾರೆ. ಹಳ್ಳಿಗಳಲ್ಲಿ ಈ ಎಣ್ಣೆಯ ಬಳಕೆ ಹೆಚ್ಚು. ಹೊಂಗೆ ಎಣ್ಣೆಯಿಂದ ದೀಪ ಹಚ್ಚಿದರೆ ಸೊಳ್ಳೆ, ನೊಣದಂತಹ ಯಾವುದೇ ಕ್ರಿಮಿ ಕೀಟಗಳೂ ಬರದೇ ಇರುವುದು ಒಂದು ಸೋಜಿಗ. ಬಿದ್ದಾಗ ಆಗುವ ಗಾಯಗಳಿಗೆ ಹೊಂಗೆ ಎಣ್ಣೆಯನ್ನು ಲೇಪಿಸುವುದರಿಂದ ನೋವು ಕಡಿಮೆಯಾಗುತ್ತದೆ. ಹೊಂಗೆ ಎಣ್ಣೆಯನ್ನು ವಾಹನಗಳಿಗೆ ಉಪಯೋಗಿಸುವ ಎಂಜಿನ್ ಆಯಿಲ್ ತಯಾರಿಕೆಯಲ್ಲೂ ಸಹ ಬಳಸುತ್ತಾರೆ. ಹೊಂಗೆ ಮರದ ಬೇರನ್ನು ಅನೇಕ ಔಶದಿ ತಯಾರಿಕೆಯಲ್ಲಿ ಬಳಸುವರು. ಹೊಂಗೆ ಮರದ ಕೊಂಬೆಗಳನ್ನು ಸೌದೆಯಾಗಿ ಉಪಯೋಗಿಸುವರು.

( ಚಿತ್ರಸೆಲೆ : territorynativeplants.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.