ಕವಿತೆ : ಒಂದು ಪುಸ್ತಕದ ಕೊಲೆ

ವೆಂಕಟೇಶ ಚಾಗಿ.

ದೂಳಿನ ಹೊತ್ತಗೆ, dusty book

ಆ ಒಂದು ನೋಟಿನಿಂದ
ಕೊಂಡು ತಂದ ಪುಸ್ತಕದ ಬೆಲೆ
ಆ ನೋಟಿಗೇನು ಗೊತ್ತು?
ನೋಟಿನ ಮೇಲೆ ಮುದ್ರಿಸಲಾದ
ಅಕ್ಶರಗಳು ಹಾಗೂ ಸಂಕ್ಯೆ
ಕೂಗಿ ಹೇಳುತ್ತಿದ್ದವು
ನಿನ್ನ ಬೆಲೆ ಇಶ್ಟೇ ಎಂದು!

ಆ ಪುಸ್ತಕ
ಅಗಾದವಾದ ಬಂಡವಾಳ
ತಿಂದಿ ತೇಗಿದ್ದಂತೂ ಸತ್ಯ
ಅದರ ಮಸ್ತಕದ ಜ್ನಾನ ಅದಕ್ಕೇ ಗೊತ್ತು;
ಆ ಪುಸ್ತಕ ಹುಟ್ಟುವಾಗ
ನೂರು ಆಣೆಕಟ್ಟುಗಳ ಸಮಯವನ್ನು
ನುಂಗಿಹಾಕಿತ್ತು
ಗಡಿಯಾರದ ಮುಳ್ಳುಗಳನ್ನು
ತಿರುಗಿಸಿತ್ತು ಸುದರ‍್ಶನ ಚಕ್ರದಂತೆ!

ಮಸ್ತಕವಂತೂ ಸುದೀರ‍್ಗ ವಿಶ್ರಾಂತಿಗಾಗಿ
ಹಾತೊರೆಯುತ್ತಿತ್ತು;
ಮಾಸಿ, ಹರಿದು, ಕೊಳೆತು
ಮಣ್ಣಾಗಿ ಮತ್ತೊಮ್ಮೆ ಹುಟ್ಟಿಬರುವ ಕನಸು
ತೊಟ್ಟ ಬಟ್ಟೆಗಳಿಗೆ
ತನಗಾದ ಅನ್ಯಾಯಕ್ಕೆ
ಗಾಂದಿಯ ಹಾದಿ ಹಿಡಿದಿತ್ತು
ಅಂತೂ ಇಂತೂ ಗೂಡು ಸೇರಿತ್ತು
ದೂಳು, ಹೊಗೆ, ಮಣ್ಣು, ಎಣ್ಣೆಯೊಂದಿಗೆ!

ಮೊದಲೆರಡು ಪುಟಗಳು,
ಓದಿಸಿಕೊಳ್ಳಲು ಕಾಯುವುದೇ ಆಯಿತು
ಶುಬ ಮುಹೂರ‍್ತಕ್ಕಾಗಿ;
ನೂರು ಮುಕಗಳ ಪರಿಚಯ
ಆ ಎರಡು ಪುಟಗಳಿಗಶ್ಟೇ.
ಬಲವಂತದ ಕುಂಬಕರ‍್ಣನ ನಿದ್ದೆ
ಅಂದೇ ಆವರಿಸಿತ್ತು ಪಾಪದ ಪುಸ್ತಕಕ್ಕೆ
ನಿದ್ದೆಯಲ್ಲೇ ಪುಟಗಳ ಕೊಲೆ
ಗೆದ್ದಲಿಗಾಗಿ, ತಿಂಡಿಗಾಗಿ
ಮಕ್ಕಳ ಆಟಿಕೆಗಳಿಗಾಗಿ!

ಅಂತೂ ಕೊಲೆಯ ಕಾರ‍್ಯವೂ ಮುಗಿಯಿತು
ಯಾರಿಗೂ ತಿಳಿಯದಂತೆ ಮಾಡಲಾಯ್ತು
ಒಂದು ಪುಸ್ತಕದ ಕೊಲೆ!

( ಚಿತ್ರಸೆಲೆ : abc.net.au )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: