ಕವಿತೆ: ಅಂತೂ ಹಾರಿದೆ ನಾನು
– ಶರತ್ ಕುಮಾರ್.
ಅಂತೂ ಹಾರಿದೆ ನಾನು
ಬಹು ಎತ್ತರಕೆ ರೆಕ್ಕೆ ಬಿಚ್ಚಿ
ಸುತ್ತಲೂ ಗೂಡಿನ ಗೋಡೆ
ಎತ್ತ ನೋಡಿದರೂ ನನ್ನವ್ವ ಕಾಣುತಿಲ್ಲ
ನನ್ನಪ್ಪನ ಸದ್ದೂ ಕೇಳುತಿಲ್ಲ
ಬಡಿದಾಡಿದೆ, ಹೊರಳಾಡಿದೆ
ಅಂತೂ ಎಲ್ಲಿಂದಲೋ ಹೊರಬಿದ್ದೆ
ಅವ್ವ ಹೋಗುತ್ತಿದ್ದಳು
ದೂರ ಬಹುದೂರ
ನನಗೆಂದು ಹುಳ ಹಿಡಿದು ತರಲು
ನನ್ನ ಹೊಟ್ಟೆಯ ತುಂಬಿಸಲು
ಪರದಾಡಿದಳು
ನನ್ನಪ್ಪನೂ ಹೋದ
ನನಗೇನಾದರು ತರಲು
ಅಗೋ, ಅಲ್ಲಿ
ನನ್ನಪ್ಪ ನನ್ನವ್ವ
ನನಗೇನೋ ತಂದರು
ನನ್ನ ಹೊಟ್ಟೆಯ ತುಂಬಿಸಲು
ನನ್ನ ಗಟ್ಟಿ ಮಾಡಲು
ದಿನಗಳು ಕಳೆದವು
ನನ್ನಪ್ಪ ನನ್ನವ್ವ
ನನ್ನ ನೋಡಲು ಸರಿಯಾಗಿ ಬರುತ್ತಿಲ್ಲ
ಕೂಗಿದೆ…ಕೂಗಿದೆ
ಅವ್ವಾ… ನನ್ನವ್ವ ಎಂದು
ಅಪ್ಪಾ…ನನ್ನಪ್ಪ ಎಂದು
ಆದರೂ ಅವರು ಬರಲಿಲ್ಲ
ಅಂದು ಅವರು ನನಗೆ ಕೊಟ್ಟ
ತುತ್ತೇ ಕೊನೆಯದ್ದು
ಎಂದು ತಿಳಿಲೇ ಇಲ್ಲ
ಕೂಗಿದೆ
ನನ್ನಪ್ಪ ನನ್ನವ್ವರನು
ನನ್ನವರಿಗಾಗಿ
ಕಾದೆ ಆದರೆ
ಕೇಳಬೇಕಲ್ಲ ನನ್ನ ಹೊಟ್ಟೆ
ಹೇಳಿತು – ರೆಕ್ಕೆಯ ಬಿಚ್ಚೆಂದು
ಆಕಾಶಕೆ ಹಾರೆಂದು
ರೆಕ್ಕೆಯ ಬಿಚ್ಚಲು
ಗಾಳಿ ಮಳೆಗೆ ನನ್ನೊಂದಿಗೆ
ಆಡುವ ಹಟ
ಹಾಗಾಗಿ ಹಾರಲಿಲ್ಲ
ಆದರೂ ನಾ ಬಿಡಲಿಲ್ಲ
ಕೊಂಬೆಯಿಂದ ಕೊಂಬೆಗೆ
ಟೊಂಗೆಯಿಂದ ಟೊಂಗೆಗೆ
ಜಿಗಿದೆ, ಹಾರಿದೆ, ರೆಕ್ಕೆ ಬಡಿದೆ
ಆಗಲಿಲ್ಲ
ಆದರೂ ನಾ ಬಿಡಲಿಲ್ಲ
ಕೊನೆಗೂ ನಾ ಹಾರಿದೆ
ಮರದಿಂದ ಮರಕ್ಕೆ
ಬಾನ ನೀಲಿಯಲಿ ಬೆರೆತೆ
ಹಾರಿದೆ ಇನ್ನೂ ಹಾರಿದೆ
ಅಕಾಶದೆತ್ತರಕೆ
ರೆಕ್ಕೆ ಬಿಚ್ಚಿ ಹಾರಿದೆ
ಬಾನೆತ್ತರಕೆ ಹಾರಿದೆ
ಅಂತೂ ಹಾರಿದೆ ನಾನು.. ಹಾರಿದೆ
ಬಾನೆತ್ತರಕ್ಕೆ ಹಾರಿದೆ ನಾನು
(ಚಿತ್ರ ಸೆಲೆ: pxfuel.com)
ಇತ್ತೀಚಿನ ಅನಿಸಿಕೆಗಳು