ಕವಿತೆ: ಪುಟ್ಟ ಪುಟ್ಟ ನೆನಪುಗಳು

– ಮಾರಿಸನ್ ಮನೋಹರ್.

ಮನಸು, Mind, memories, ನೆನಪು

ಮುಂಜಾವಿನಲ್ಲಿ ಎಳೆಹುಲ್ಲಿನ ತುದಿಯ
ಮೇಲಿನ ಇಬ್ಬನಿಗಳ ಕೂಡಿಸಿಕೊಂಡೆ
ನೆನಪುಗಳ ದಾರದಿಂದ ಪೋಣಿಸಿ
ಕಟ್ಟಿದ ಸರವು ನಿನಗಾಗಿಯೇ

ಅದಕ್ಕೆ ಗಮವನ್ನು ಹೇಗೆ ಸೇರಿಸಲಿ?
ಅದಕ್ಕೆ ಸುವಾಸನೆ ಬರಿಸುವದು ಹೇಗೆ?
ಹೊತ್ತು ಮುಳುಗಿತು ತಂಗಾಳಿ ಬೀಸಿತು
ಹೊತ್ತು ತಂದಿತು ನಿನ್ನ ಗುಲಾಬಿ ಕಂಪು

ಸಂಜೆ ಹೊತ್ತು ಬಾನೆಲ್ಲ ಹಳದಿ ಕೆಂಪು
ನನ್ನ ಕಣ್ಣಲ್ಲಿ ಸಾವಿರ ಕನಸು ತುಂಬಿತು
ಅದೇ ರಂಗಿನಲ್ಲಿ ಸರವನ್ನು ಅದ್ದಿ ತೆಗೆದೆ
ಸರದಿಂದ ನಿನ್ನ ಚೆಲುವು ಹೆಚ್ಚಾಯಿತು
ನಿನ್ನಿಂದ ಸರದ ಚೆಲುವು ಹೆಚ್ಚಾಯಿತು
ನಿಮ್ಮಿಬ್ಬರಲ್ಲಿ ನನ್ನ ಹುಚ್ಚು ಹೆಚ್ಚಾಯಿತು

ಇರುಳು ಚುಕ್ಕಿ ಚಂದಿರ ಬರುವರು
ಎದೆಯ ಬಾಗಿಲು ಬಡಿವ ತುಂಟರು
ಬಾಗಿಲು ತೆರೆದು ಹೊರಗೆ ಬಂದೆ
ಓಡಿಹೋದರು ಹೆದರಿ ಈ ದುರುಳರು

ಸದ್ದಿಗೆ ಎದ್ದವು ಪುಟ್ಟ ಪುಟ್ಟ ನೆನಪುಗಳು
ರಚ್ಚೆ ಹಿಡಿಯುತ್ತವೆ ಮಲಗುವುದೇ ಇಲ್ಲ
ತೊಟ್ಟಿಲಲ್ಲಿ ಹಾಕಿದೆ ಕೈಯಿಂದ ತೂಗಿದೆ
ರಮಿಸಿ ಸುಮ್ಮನಾಗಿಸಲು ನನ್ನಿಂದಾಗಲಿಲ್ಲ
ಅಳುವುದನ್ನು ನೋಡಲೂ ಆಗಲಿಲ್ಲ

ರಂಪಾಟ ಹುಚ್ಚಾಟ ತುಂಟಾಟ ಮಾಡಿದವು
ಹುಚ್ಚೆದ್ದು ಕುಣಿದು ಕುಪ್ಪಳಿಸಿ ನಕ್ಕು ಅತ್ತವು
ಸುಸ್ತಾಗಿ ಸಾಕಾಗಿ ಶಾಂತವಾಗಿ ಮಲಗಿದವು
ಆಗ ನಾನು ಚಿವುಟಿ ಇವುಗಳನ್ನು ಎಬ್ಬಿಸಿದೆ

( ಚಿತ್ರಸೆಲೆ : sloanreview.mit.edu )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: