ಚಿನ್ನವೋ, ಬೆಳ್ಳಿಯೋ? ಯಾವುದು ತುಟ್ಟಿ?
– ಕೆ.ವಿ.ಶಶಿದರ.
ಆತ ಒಬ್ಬ ಮಹಾನ್ ಗಣಿತಶಾಸ್ತ್ರಗ್ನ. ಸುತ್ತ ಹತ್ತು ಊರಿನಲ್ಲಿ ಅವನ ಪ್ರಸಿದ್ದಿ ಹರಡಿತ್ತು. ಅಲ್ಲಿನ ರಾಜ ಸಹ ತನ್ನೆಲ್ಲಾ ಆರ‍್ತಿಕ ವ್ಯವಹಾರಕ್ಕೆ ಈತನನ್ನೇ ಸಂಪರ‍್ಕಿಸುತ್ತಿದ್ದ. ಈತ ಕೊಟ್ಟ ಸಲಹೆಗೆ ರಾಜಮರ‍್ಯಾದೆ ಇತ್ತು. ಇವನ ಕ್ಯಾತಿ ಹೊರರಾಜ್ಯಗಳಿಗೂ ಹರಡಿತ್ತು.
“ನೀವು ಮಹಾರಾಜರಿಗೆ ಆರ‍್ತಿಕ ವಿಶಯಗಳ ಬಗ್ಗೆ ಸಲಹೆ ಕೊಟ್ಟ ಮಹಾನ್ ಗಣಿತ ಹಾಗೂ ಅರ‍್ತಶಾಸ್ತ್ರಗ್ನರೇ ಇರಬಹುದು. ಆದರೆ, ನಿಮ್ಮ ಮಗನಿಗೆ ಚಿನ್ನ ಅತವಾ ಬೆಳ್ಳಿಯ ಮೌಲ್ಯ ತಿಳಿದಿಲ್ಲ” ಎಂದು ಆತ ವಾಸಿಸುತ್ತಿದ್ದ ಗ್ರಾಮದ ಮುಕ್ಯಸ್ತ ಒಮ್ಮೆ ಅವರನ್ನು ಅವಮಾನಿಸಿದ್ದ. ಗಣಿತಶಾಸ್ತ್ರಗ್ನನಿಗೆ ಬಹಳ ಬೇಸರವಾಯಿತು. ತನ್ನ ಮಗನನ್ನು ಕರೆದು “ಚಿನ್ನ, ಬೆಳ್ಳಿ ಇವುಗಳಲ್ಲಿ ಹೆಚ್ಚು ಮೌಲ್ಯಯುತವಾದದ್ದು ಯಾವುದು?” ಎಂದು ನೇರವಾಗಿ ಪ್ರಶ್ನಿಸಿದ್ದ. ಕಣ್ಣು ಮಿಟುಕಿಸುವುದರಲ್ಲಿ ಮಗ “ಚಿನ್ನ” ಎಂದಿದ್ದ.
“ಇದು ಸರಿ. ಆದರೆ ಗ್ರಾಮದ ಮುಕ್ಯಸ್ತ ನನ್ನನ್ನು ಗೇಲಿ ಮಾಡಿ, ನಿನಗೆ ಚಿನ್ನ ತುಟ್ಟಿಯೋ, ಬೆಳ್ಳಿ ತುಟ್ಟಿಯೋ ತಿಳಿಯದು ಎನ್ನುತ್ತಾನೆ. ಇದರ ಬಗ್ಗೆ ಊರಿನ ಹಿರಿಯರಲ್ಲಿ ಹೇಳುತ್ತಾ, ಮಗನನ್ನು ದಿವ್ಯ ನಿರ‍್ಲಕ್ಶ್ಯ ಮಾಡುವ ಅಪ್ಪ ಎಂದು ನನ್ನನ್ನು ಅವಮಾನಿಸುತ್ತಾನೆ. ನನ್ನ ಬೆನ್ನ ಹಿಂದೆ ಅವರೆಲ್ಲರೂ ನಗಾಡುತ್ತಾರೆ. ಇದು ನನಗೆ ಅತೀವ ದುಕ್ಕ ಹಾಗೂ ನೋವುಂಟು ಮಾಡುತ್ತದೆ. ಹೆಚ್ಚು ಬೆಲೆಬಾಳುವುದು ಚಿನ್ನ ಎಂದು ತಿಳಿದಿದ್ದರೂ ನೀನು ಅವರ ಬಳಿ ತಿಳಿಯದಂತೆ ವರ‍್ತಿಸುವುದು ಏಕೆ ಹೇಳು?” ಎಂದು ಮಗನನ್ನು ಕೇಳಿದ.
ಮಗನ ಮುಕದಲ್ಲಿ ಮುಗುಳುನಗೆ ಹೊರಹೊಮ್ಮಿತು. “ಅಪ್ಪ ಗ್ರಾಮದ ಮುಕ್ಯಸ್ತನಿಗೆ ಈ ಅನಿಸಿಕೆ ಬರಲು ಕಾರಣವಿದೆ. ಅದೇನೆಂದರೆ, ಪ್ರತಿದಿನ ನಾನು ಶಾಲೆಗೆ ಹೋಗುವಾಗ ಗ್ರಾಮದ ಮುಕ್ಯಸ್ತ ನನ್ನನ್ನು ತನ್ನ ಮನೆಗೆ ಕರೆಯುತ್ತಾನೆ. ಅಲ್ಲಿದ್ದ ಎಲ್ಲಾ ಗ್ರಾಮದ ಹಿರಿಯರ ಮುಂದೆ, ಒಂದು ಕೈಯಲ್ಲಿ ಚಿನ್ನದ ನಾಣ್ಯ ಮತ್ತು ಮತ್ತೊಂದು ಕೈಯಲ್ಲಿ ಬೆಳ್ಳಿ ನಾಣ್ಯ ಹಿಡಿದು ಇದರಲ್ಲಿ ಹೆಚ್ಚು ಮೌಲ್ಯಯುತವಾದದನ್ನು ತೆಗೆದುಕೋ ಎನ್ನುತ್ತಾನೆ. ಪ್ರತಿದಿನ ನಾನು ಬೆಳ್ಳಿ ನಾಣ್ಯವನ್ನು ಆರಿಸಿ ತೆಗೆದುಕೊಳ್ಳುತ್ತೇನೆ. ಗ್ರಾಮದ ಮುಕ್ಯಸ್ತ ಗಹಗಹಿಸಿ ನಗುತ್ತಾನೆ. ಅಲ್ಲಿ ನೆರೆದಿದ್ದ ಗ್ರಾಮದ ಎಲ್ಲಾ ಹಿರಿಯರೂ, ನನ್ನನ್ನು ಗೇಲಿ ಮಾಡುತ್ತಾ ನಗುತ್ತಾರೆ. ನನ್ನ ಪಾಡಿಗೆ ನಾನು ಶಾಲೆಗೆ ಹೋಗುತ್ತೇನೆ, ಇದು ಪ್ರತಿದಿನ ನಡೆಯುತ್ತಿದೆ. ಇದೇ ಕಾರಣಕ್ಕೆ ಅವರು ನನಗೆ ಚಿನ್ನ, ಬೆಳ್ಳಿಯ ಮೌಲ್ಯ ತಿಳಿದಿಲ್ಲ ಎನ್ನುತ್ತಾರೆ” ಎಂದು ವಿವರಿಸಿದ.
ಮಗನ ಮಾತು ಕೇಳಿದ ತಂದೆಗೆ ಗೊಂದಲವಾಯಿತು. ಚಿನ್ನ, ಬೆಳ್ಳಿಯ ಮೌಲ್ಯ ತಿಳಿದಿದ್ದರೂ, ಇವನ ವರ‍್ತನೆ ತಂದೆಗೆ ಒಗಟಾಗಿತ್ತು. ಇವನು ಏಕೆ ಹೀಗೆ ಮಾಡುತ್ತಿದ್ದಾನೆ? ಚಿನ್ನದ ಮೌಲ್ಯ ಗೊತ್ತಿದ್ದೂ ಬೆಳ್ಳಿಯ ನಾಣ್ಯವನ್ನೇ ಏಕೆ ಆರಿಸಿಕೊಳ್ಳುತ್ತಾನೆ? ಎಂಬ ಅನುಮಾನ ಅವನನ್ನು ಕಾಡತೊಡಗಿತು. ಮಗನನ್ನು ಕುರಿತು, “ಮೌಲ್ಯ ತಿಳಿದಿದ್ದೇ ಆದರೆ, ಚಿನ್ನದ ನಾಣ್ಯ ಬಿಟ್ಟು ಬೆಳ್ಳಿಯನ್ನೇ ಆಯ್ಕೆ ಮಾಡುವ ಉದ್ದೇಶವಾದರು ಏನು?” ಎಂದು ಪ್ರಶ್ನಿಸಿದ. ತಂದೆಯ ಪ್ರಶ್ನೆಗೆ ಪ್ರತಿಕ್ರಿಯಿಸುವ ಮುನ್ನ ಮಗ ಅವನನ್ನು ತನ್ನ ರೂಮಿಗೆ ಕರೆದುಕೊಂಡು ಹೋಗಿ, ಅಲ್ಲಿದ್ದ ಡಬ್ಬವನ್ನು ಅವರ ಕೈಗೆ ಕೊಟ್ಟ. ಅದರಲ್ಲಿ ನೂರಾರು ಬೆಳ್ಳಿ ನಾಣ್ಯಗಳಿದ್ದವು. ಅಪ್ಪ, ಪ್ರಶ್ನಾರ‍್ತಕವಾಗಿ ಮಗನ ಮುಕ ನೋಡಿದ. “ಅಪ್ಪಾ ಈ ಆಟ ಬಹಳ ದಿನಗಳಿಂದ ನಡೆಯುತ್ತಿದೆ. ಯಾವ ದಿನ ನಾನು ಹೆಚ್ಚು ಮೌಲ್ಯಯುತವಾದ ಚಿನ್ನದ ನಾಣ್ಯವನ್ನು ಎತ್ತಿಕೊಳ್ಳುತ್ತೇನೋ, ಅಂದಿಗೆ ಈ ಆಟಕ್ಕೆ ತೆರೆ ಬೀಳುತ್ತದೆ. ಅವರು ತನ್ನನ್ನು ಗೇಲಿ ಮಾಡುವುದನ್ನು ನಿಲ್ಲಿಸುತ್ತಾರೆ. ಬೆಳ್ಳಿ ನಾಣ್ಯ ನನಗೆ ಸಿಗುವುದು ನಿಲ್ಲುತ್ತದೆ. ಅದಕ್ಕಾಗಿ ನಾನು ಅವರುಗಳ ಮುಂದೆ ಬೆಳ್ಳಿ ನಾಣ್ಯವೇ ತುಟ್ಟಿ ಎಂದು ಅದನ್ನೇ ಎತ್ತಿಕೊಳ್ಳುತ್ತಿರುವೆ!” ಎಂದಾಗ ಮಗನ ಬುದ್ದಿವಂತಿಕೆಗೆ, ಮಹಾನ್ ಗಣಿತಶಾಸ್ತ್ರಗ್ನ ತಲೆದೂಗಿದ್ದ.
ಇದರಿಂದ ನಾವು ತಿಳಿದುಕೊಳ್ಳುವುದೇನೆಂದರೆ, ನಮ್ಮ ಸುತ್ತ ಮುತ್ತಲಿರುವವರನ್ನು ಗೆಲ್ಲಲು ಬಿಡಬೇಕು. ಅವರ ಮನದಲ್ಲಿ ನಾವು ಸೋತಿರಬಹುದು. ಆದರೆ ದಿಟವಾಗಿ ನಾವೇ ಗೆದ್ದಿರುತ್ತೇವೆ. ಅವರುಗಳು ಸೋತಿದ್ದರೂ, ಗೆದ್ದ ಬ್ರಮೆಯಲ್ಲಿರುತ್ತಾರೆ.
(ಮಾಹಿತಿ ಮತ್ತು ಚಿತ್ರ ಸೆಲೆ: smilepls.com, pxhere.com)
ಇತ್ತೀಚಿನ ಅನಿಸಿಕೆಗಳು