ತೋಂಟದ ಸಿದ್ದಲಿಂಗ ಶಿವಯೋಗಿಯ ವಚನದಿಂದ ಆಯ್ದ ಸಾಲುಗಳ ಓದು

ಸಿ.ಪಿ.ನಾಗರಾಜ.

ತೋಂಟದ ಸಿದ್ಧಲಿಂಗ ಶಿವಯೋಗಿ, tontada siddalinga shivayogi

ಹೆಸರು : ತೋಂಟದ ಸಿದ್ಧಲಿಂಗ ಶಿವಯೋಗಿ
ಕಾಲ : ಕ್ರಿ.ಶ. 15ನೆಯ ಶತಮಾನ
ದೊರೆತಿರುವ ವಚನಗಳು : 701
ಅಂಕಿತ ನಾಮ : ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭು

ಮಾತಿಗೆ ಮಾತು ಕಲಿತು
ನುಡಿಗೆ ನುಡಿಯ ಕಲಿತು
ತರ್ಕಮರ್ಕಟರಂತೆ ಹೋರುವ
ಬಯಲ ಸಂಭ್ರಮದ ತರ್ಕಿಗಳ ಕಂಡರೆ
ಮಾಗಿಯ ಕೋಗಿಲೆಯಂತೆ
ಮುಖ ಮುನಿಸಾಗಿರಿಸಯ್ಯಾ ( 218/330/ ವಚನ ಸಂಪುಟ-2 )

ಮಾತು=ನುಡಿ/ಸೊಲ್ಲು; ಕಲಿ=ತಿಳಿದುಕೊಂಡು/ಕರಗತ ಮಾಡಿಕೊಂಡು;

ನುಡಿ=ಬಾಶೆ; ತರ್ಕ+ಮರ್ಕಟರ+ಅಂತೆ; ತರ್ಕ=ಚರ‍್ಚೆ/ವಾದ; ಮರ್ಕಟ=ಕೋತಿ/ಮಂಗ/ಕಪಿ; ತರ್ಕಮರ್ಕಟರು=ವಾದಕ್ಕೆ ಪ್ರತಿವಾದವನ್ನು ಒಡ್ಡುವವರು; ಅಂತೆ=ಹಾಗೆ/ಆ ರೀತಿ; ಹೋರು=ಕಾದಾಡು/ಸೆಣಸು/ಜಗಳವಾಡು;

ಬಯಲು=ಬೆಟ್ಟ ಗುಡ್ಡಗಳಿಲ್ಲದ ಸಮತಟ್ಟಾದ ವಿಸ್ತಾರವಾದ ಜಾಗ; ಸಂಭ್ರಮ=ಉತ್ಸಾಹ/ಸಡಗರ/ಹೆಚ್ಚಿನ ಆನಂದ ; ಬಯಲ ಸಂಭ್ರಮ=ಇತರರ ಮುಂದೆ ಸಡಗರದಿಂದ ಮೆರೆಯುವುದು; ತರ್ಕಿಗಳು=ತಾವು ಹೇಳುತ್ತಿರುವುದೇ ಅಂತಿಮ ಸತ್ಯವೆಂದು ವಾದವನ್ನು ಮಾಡುವವರು/ತಮ್ಮದೇ ಕಡೆಯ ಮಾತಾಗಬೇಕೆಂದು ಮೊಂಡುವಾದವನ್ನು ಮಾಡುವವರು; ಕಂಡರೆ=ನೋಡಿದರೆ;

ಮಾಗಿ=ಚಳಿಗಾಲ; ಕೋಗಿಲೆ+ಅಂತೆ; ಕೋಗಿಲೆ=ಒಂದು ಬಗೆಯ ಹಕ್ಕಿ; ಮಾಗಿಯ ಕೋಗಿಲೆ=ಚಳಿಗಾಲದಲ್ಲಿ ಕೋಗಿಲೆಯು ಇಂಪಾದ ದನಿಯನ್ನು ಮಾಡದೆ ಮುದುಡಿಕೊಂಡು ಮೂಕವಾಗಿರುತ್ತದೆ ಎಂಬ ಒಂದು ಕಲ್ಪನೆಯಿದೆ;

ಮುನಿಸು+ಆಗಿ+ಇರಿಸು+ಅಯ್ಯಾ; ಮುನಿಸು=ಕೋಪ/ಸಿಟ್ಟು; ಮುಖ ಮುನಿಸು=ಮಾತನಾಡದೆ ಸುಮ್ಮನಿರುವುದು/ವಾದಕ್ಕೆ ಪ್ರತಿವಾದವನ್ನೊಡ್ಡದೆ ಸುಮ್ಮನಿರುವುದು; ಅಯ್ಯಾ=ಗಂಡಸರನ್ನು ನಯ ವಿನಯದಿಂದ ಮಾತನಾಡಿಸುವಾಗ ಬಳಸುವ ಪದ;

ತಾವು ಹೇಳುತ್ತಿರುವುದೇ ಸರಿಯೆಂದು ವಾದವನ್ನು ಮಾಡುತ್ತ, ಬೇರೆಯವರ ಯಾವುದೇ ಬಗೆಯ ಅರಿವಿನ ಮಾತುಗಳಿಗೂ ಕಿವಿಗೊಡದೆ, ಎಲ್ಲವನ್ನೂ ಮತ್ತು ಎಲ್ಲರನ್ನೂ ಕಡೆಗಣಿಸಿ ವಾದ ಮಾಡುವ ವ್ಯಕ್ತಿಗಳ ಜತೆಯಲ್ಲಿ ಮಾತನ್ನು ಬೆಳೆಸಬಾರದು. ಏಕೆಂದರೆ ಅಂತಹ ವ್ಯಕ್ತಿಗಳು ಮಾತಿನ ಮಲ್ಲರೇ ಹೊರತು, ಇತರರ ಬಗ್ಗೆ ಪ್ರೀತಿ, ಕರುಣೆ ಮತ್ತು ಗೆಳೆತನದ ಒಳಮಿಡಿತಗಳಿಲ್ಲದ ಒರಟರಾಗಿರುತ್ತಾರೆ. ಮಾಗಿಯ ಕೋಗಿಲೆಯು ಚಳಿಗಾಲದಲ್ಲಿ ಹೇಗೆ ಮೂಕವಾಗಿರುತ್ತದೆಯೋ ಅಂತೆಯೇ ಇಂತಹ ಮೊಂಡುವಾದಿಗಳ ಮುಂದೆ ಮಾತನಾಡದೆ ಸುಮ್ಮನಿರುವುದು ಲೇಸು.

ನುಡಿವಂತೆ ನಡೆಯದವರ
ನಡೆದಂತೆ ನುಡಿಯದವರ
ಎಂತು ಶಿವಶರಣರೆಂಬೆ ವಾಚಾಳಿಕರ. (325/346/ವಚನ ಸಂಪುಟ-2)

ನುಡಿವ+ಅಂತೆ; ನುಡಿ=ಮಾತು/ಸೊಲ್ಲು; ನಡೆ=ಮಾಡುವ ಕೆಲಸ/ವ್ಯವಹಾರ/ವರ‍್ತನೆ; ಎಂತು=ಯಾವ ರೀತಿ; ಶಿವಶರಣರು+ಎಂಬೆ; ಶಿವಶರಣ=ಒಳ್ಳೆಯ ನಡೆನುಡಿಗಳನ್ನೇ ಶಿವನೆಂದು ನಂಬಿ ಬಾಳುತ್ತಿರುವ ವ್ಯಕ್ತಿ; ಎಂಬೆ=ಎನ್ನುವೆ/ಎಂದು ಹೇಳುವೆ;

ವಾಚಾಳಿಕರು=ಅತಿಯಾಗಿ ಮಾತನಾಡುವವರು/ಕಾಡು ಹರಟೆಯಲ್ಲಿ ತೊಡಗಿದವರು;

ವ್ಯಕ್ತಿಯು ತಾನಾಡುವ ಮಾತುಗಳಿಗೆ ತಕ್ಕಂತೆ ಒಳ್ಳೆಯ ಕೆಲಸವನ್ನು ಮಾಡಿದಾಗ ಮಾತ್ರ ಅವನು ಶಿವಶರಣನಾಗುತ್ತಾನೆ. ಆಡುವುದೇ ಒಂದು, ಮಾಡುವುದೇ ಮತ್ತೊಂದಾಗಿರುವ ವ್ಯಕ್ತಿಯು ಕೇವಲ ಗೊಡ್ಡು ಹರಟೆಯಲ್ಲಿ ಕಾಲ ಕಳೆಯುವವನೇ ಹೊರತು, ಆತ ಎಂದೆಂದಿಗೂ ಒಳ್ಳೆಯವನಾಗಿ ಬಾಳಲಾರ ಎಂಬ ನಿಲುವನ್ನು ವಚನಕಾರರು ಹೊಂದಿದ್ದರು.

( ಚಿತ್ರಸೆಲೆ : lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: