ಮೆರೆಮಿಂಡಯ್ಯನ ವಚನದಿಂದ ಆಯ್ದ ಸಾಲುಗಳ ಓದು

ಸಿ.ಪಿ.ನಾಗರಾಜ.

ವಚನಗಳು, Vachanas

ಹೆಸರು : ಮೆರೆಮಿಂಡಯ್ಯ
ಕಾಲ : ಕ್ರಿ.ಶ. 12ನೆಯ ಶತಮಾನ
ದೊರೆತಿರುವ ವಚನಗಳು : 109
ಅಂಕಿತ ನಾಮ : ಐಘಟದೂರ ರಾಮೇಶ್ವರಲಿಂಗ

ಐಶ್ವರ್ಯವುಳ್ಳವಂಗೆ ನಿಜಭಕ್ತಿಯಿಲ್ಲ
ಡಂಬಕದ ವೇಷಧಾರಿಗೆ ನಿಜತತ್ವದ ಜ್ಞಾನವಿಲ್ಲ. (1308/1506)

ಐಶ್ವರ್ಯ+ಉಳ್ಳ್+ಅವಂಗೆ; ಐಶ್ವರ್ಯ=ಸಂಪತ್ತು/ಆಸ್ತಿಪಾಸ್ತಿ/ಒಡವೆ ವಸ್ತು/ಹಣಕಾಸು; ಉಳ್=ಇರು; ಅವಂಗೆ=ಅವನಿಗೆ; ಐಶ್ವರ್ಯವುಳ್ಳವಂಗೆ=ಸಿರಿವಂತನಿಗೆ;

ನಿಜ+ಭಕ್ತಿ+ಇಲ್ಲ; ನಿಜ=ದಿಟ/ವಾಸ್ತವ/ಸತ್ಯ; ಭಕ್ತಿ=ಒಳ್ಳೆಯ ನಡೆನುಡಿಗಳನ್ನೇ ದೇವರೆಂದು ನಂಬಿ ಬಾಳುವುದು; ನಿಜಭಕ್ತಿ=ಒಳ್ಳೆಯ ನಡೆನುಡಿ; ಡಂಬ=ಮೋಸ/ವಂಚನೆ/ಬೂಟಾಟಿಕೆಯ ನಡೆನುಡಿ; ಡಂಬಕದ=ಬೂಟಾಟಿಕೆಯಿಂದ ಕೂಡಿದ/ಸೋಗಲಾಡಿತನದ ನಡೆನುಡಿ;

ವೇಷಧಾರಿ=ನಯವಂಚಕ/ಇತರರ ಮುಂದೆ ಬಹಳ ಒಳ್ಳೆಯವನಂತೆ ನಡೆದುಕೊಳ್ಳುತ್ತ, ಒಳಗೊಳಗೆ ಕೆಟ್ಟ ಕೆಲಸಗಳನ್ನು ಮಾಡುವವನು; ತತ್ವ=ನಿಯಮ/ತಿರುಳು; ನಿಜತತ್ವ=ಒಳ್ಳೆಯ ನೀತಿ ನಿಯಮ; ಜ್ಞಾನ+ಇಲ್ಲ; ಜ್ಞಾನ=ಅರಿವು/ತಿಳುವಳಿಕೆ;

ಇತರರ ಮುಂದೆ ತಾನು ಸಿರಿವಂತನೆಂದು ತೋರಿಸಿಕೊಳ್ಳುವುದಕ್ಕಾಗಿ ಅತಿಯಾಗಿ ಹಣವನ್ನು ವೆಚ್ಚಮಾಡುತ್ತ, ಆಡಂಬರದಿಂದ ದೇವರನ್ನು ಪೂಜಿಸುವ ವ್ಯಕ್ತಿಯಲ್ಲಿ ಯಾವುದೇ ಒಳ್ಳೆಯ ನಡೆನುಡಿಗಳು ಇರುವುದಿಲ್ಲ. ಏಕೆಂದರೆ ಆತ ದೇವರನ್ನು ಒಳಗೊಂಡಂತೆ ಎಲ್ಲವನ್ನೂ ಮತ್ತು ಎಲ್ಲರನ್ನೂ ಹಣದಿಂದಲೇ ಅಳೆಯುತ್ತಾನೆ.

ಬಾಯಲ್ಲಿ ಒಳ್ಳೆಯ ಮಾತುಗಳನ್ನಾಡುತ್ತ, ದಿನನಿತ್ಯದ ವ್ಯವಹಾರದಲ್ಲಿ ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡನ್ನು ಬಗೆಯುತ್ತಿರುವ ನಯವಂಚಕನಾದ ವ್ಯಕ್ತಿಯು ಒಳ್ಳೆಯ ಅರಿವನ್ನು ಪಡೆದಿರುವುದಿಲ್ಲ. ಏಕೆಂದರೆ ಒಳ್ಳೆಯ ಅರಿವು ಅವನಲ್ಲಿ ಇದ್ದಿದ್ದರೆ, ಆತ ಸೋಗಲಾಡಿತನದ ವರ‍್ತನೆಯನ್ನು ತೊರೆದು ಸರಳವಾದ ಮತ್ತು ನೇರವಾದ ನಡೆನುಡಿಗಳಿಂದ ಬಾಳುತ್ತಿದ್ದನು.

ತನ್ನ ತಾನರಿದಡೆ
ತನ್ನರಿವೆ ಗುರು
ತಾನೆ ಲಿಂಗ
ತನ್ನ ನಿಷ್ಠೆಯೇ ಜಂಗಮ.(1336/1508)

ತಾನ್+ಅರಿದಡೆ; ತನ್ನ ತಾನ್=ವ್ಯಕ್ತಿಯು ತನ್ನನ್ನು ತಾನು; ಅರಿ=ತಿಳಿ/ಗ್ರಹಿಸು; ಅರಿದಡೆ=ತಿಳಿದುಕೊಂಡರೆ; ತನ್ನ+ಅರಿವೆ; ಅರಿವು=ತಿಳಿವಳಿಕೆ; ಗುರು=ತನ್ನ ಬಳಿ ಬಂದ ವ್ಯಕ್ತಿಗಳಿಗೆ ವಿದ್ಯೆಯನ್ನು ಕಲಿಸಿ, ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸುವವನು; ತಾನೆ=ವ್ಯಕ್ತಿಯೇ/ಅವನೇ;

ಲಿಂಗ=ಈಶ್ವರ/ದೇವರು/ಜೀವನದಲ್ಲಿ ಬರುವ ಎಡರು ತೊಡರುಗಳನ್ನು ಪರಿಹರಿಸಿ, ಒಳಿತನ್ನು ಮಾಡುವ ಶಕ್ತಿಯನ್ನು ಇಲ್ಲವೇ ವ್ಯಕ್ತಿಯನ್ನು ದೇವರೆಂದು ಮಾನವ ಸಮುದಾಯ ನಂಬಿದೆ; ನಿಷ್ಠೆ=ಅಚಲವಾದ ನಂಬಿಕೆ;

ಜಂಗಮ=ಒಳ್ಳೆಯ ನಡೆನುಡಿಗಳಲ್ಲಿ ಶಿವನನ್ನು ಕಾಣುವ ಮತ್ತು ಸದಾಕಾಲ ಸಂಚರಿಸುತ್ತ ಜನರ ಮನಸ್ಸಿನಲ್ಲಿ ಒಳ್ಳೆಯ ನಡೆನುಡಿಗಳಿಗೆ ಪ್ರೇರಣೆಯಾಗುವಂತಹ ಸಾಮಾಜಿಕ ಅರಿವು ಮತ್ತು ಎಚ್ಚರವನ್ನು ಮೂಡಿಸುವವನು;

ವ್ಯಕ್ತಿಯು ತನ್ನನ್ನು ತಾನು ಅರಿತುಕೊಂಡು ಬಾಳುವಂತಾದರೆ, ಗುರು ಲಿಂಗ ಜಂಗಮದಿಂದ ಪಡೆಯವುದನ್ನು ತಾನೇ ಪಡೆಯಬಲ್ಲವನಾಗುತ್ತಾನೆ. ಅಂದರೆ ವ್ಯಕ್ತಿಯು ತನ್ನ ವ್ಯಕ್ತಿತ್ವವನ್ನು ಒಳ್ಳೆಯ ರೀತಿಯಲ್ಲಿ ತಾನೇ ರೂಪಿಸಿಕೊಳ್ಳಬಲ್ಲ ಅರಿವನ್ನು ಪಡೆಯುತ್ತಾನೆ.

“ತನ್ನನ್ನು ತಾನು ಅರಿಯುವುದು” ಎಂದರೆ ಮಾನವ ಸಮುದಾಯದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜೀವನವು ನಿಸರ‍್ಗದ ಆಗುಹೋಗು ಮತ್ತು ಸಮಾಜದ ಕಟ್ಟುಪಾಡುಗಳಿಗೆ ಒಳಪಟ್ಟಿದೆ. ಆದ್ದರಿಂದಲೇ ತನ್ನನ್ನೂ ಒಳಗೊಂಡಂತೆ ಎಲ್ಲ ವ್ಯಕ್ತಿಗಳ ಮಯ್ ಮನದಲ್ಲಿ ಒಳಿತು ಕೆಡುಕಿನ ಒಳಮಿಡಿತಗಳು ಸದಾಕಾಲ ಇದ್ದೇ ಇರುತ್ತವೆ ಎಂಬ ವಾಸ್ತವವನ್ನು ಅರಿತುಕೊಂಡು, ಜೀವನದ ಉದ್ದಕ್ಕೂ ಕೆಡುಕಿನ ಒಳಮಿಡಿತಗಳನ್ನು ಹತ್ತಿಕ್ಕಿಕೊಂಡು, ಒಳ್ಳೆಯವನಾಗಿ ಬಾಳಬೇಕೆಂಬ ಎಚ್ಚರವನ್ನು ಹೊಂದುವುದು ಮತ್ತು ತನ್ನ ಜೀವನದ ಒಳಿತು ಕೆಡುಕು ಸಮಾಜದಲ್ಲಿ ಉಂಟಾಗುವ ಒಳಿತು ಕೆಡುಕನ್ನು ಅವಲಂಬಿಸಿದೆ ಎಂಬ ವಾಸ್ತವವನ್ನು ಅರಿತು ಬಾಳುವುದು;

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *