ಬೋಗಣ್ಣನ ವಚನದಿಂದ ಆಯ್ದ ಸಾಲುಗಳ ಓದು

ಸಿ.ಪಿ.ನಾಗರಾಜ.

ವಚನಗಳು, Vachanas

ಹೆಸರು: ಬೋಗಣ್ಣ
ಕಾಲ: ಕ್ರಿ.ಶ.12ನೆಯ ಶತಮಾನ
ದೊರೆತಿರುವ ವಚನಗಳು: 22
ಅಂಕಿತ ನಾಮ: ನಿಜಗುರು ಭೋಗೇಶ್ವರ

ಮಾತಿನ ಮಾಲೆಯ ಸರವನಿಕ್ಕಿಕೊಂಡು
ವಾಚಾಳಿಗತನದಿಂದ
ಒಡಲ ಹೊರೆವವರೆಲ್ಲರೂ ಶರಣಪ್ಪರೆ. (419/1402)

ಮಾಲೆ=ಹಾರ; ಮಾತಿನ ಮಾಲೆ=ಇದೊಂದು ನುಡಿಗಟ್ಟು. ಕೇಳುಗರ ಮನಸೆಳೆಯುವಂತೆ ಸೊಗಸಾಗಿ ಮಾತನಾಡುವ ಕಲೆಯಲ್ಲಿ ನಿಪುಣತೆಯನ್ನು ಹೊಂದಿರುವುದು ಎಂಬ ತಿರುಳಿನಲ್ಲಿ ಬಳಕೆಯಾಗಿದೆ; ಸರವನ್+ಇಕ್ಕಿಕೊಂಡು; ಸರ=ಮಾಲೆ/ಹಾರ; ಅನ್=ಅನ್ನು; ಇಕ್ಕಿಕೊಂಡು=ಕೊರಳಲ್ಲಿ ಹಾಕಿಕೊಂಡು;

ವಾಚಾಳಿಗತನ+ಇಂದ; ವಾಚಾಳಿಗ=ಅತಿಯಾಗಿ ಮಾತನಾಡುವವನು/ಹರಟೆಮಲ್ಲ/ವಾಕ್ಪಟು/ಮಾತಿನ ಮಲ್ಲ; ವಾಚಾಳಿಗತನ=ಮಾತುಗಾರಿಕೆಯಲ್ಲಿ ನಿಪುಣತೆ/ಕುಶಲತೆ;

ಒಡಲು=ಹೊಟ್ಟೆ/ದೇಹ/ಶರೀರ; ಹೊರೆವವರು+ಎಲ್ಲರೂ; ಹೊರೆ=ಕಾಪಾಡು/ಸಲಹು; ಒಡಲ ಹೊರೆಯುವುದು=ಹೊಟ್ಟೆ ಪಾಡನ್ನು ನೀಗಿಕೊಳ್ಳುವುದು. ಅಂದರೆ ಜೀವನಕ್ಕೆ ಬೇಕಾದ ವಸ್ತು ಒಡವೆ ಹಣವನ್ನು ಸಂಪಾದಿಸುವುದು; ಶರಣರ್+ಅಪ್ಪರೆ; ಶರಣ=ಒಳ್ಳೆಯ ನಡೆನುಡಿಗಳನ್ನೇ ಶಿವನೆಂದು ನಂಬಿ ಬಾಳುವವನು ; ಅಪ್ಪರೆ=ಆಗುತ್ತಾರೆಯೆ; ಶರಣರಪ್ಪರೆ=ಶರಣರಾಗಿ ಬಾಳಲಾರರು;

ಒಳ್ಳೆಯ ಕೆಲಸಗಳನ್ನು ಮಾಡದೆ, ಸೊಗಸಾದ ಮಾತುಗಾರಿಕೆಯಿಂದ ಜನಮನವನ್ನು ಗೆಲ್ಲುತ್ತಾ, ಜನರನ್ನು ಮರುಳು ಮಾಡಿ ಹೊಟ್ಟೆಯನ್ನು ಹೊರೆದುಕೊಳ್ಳುವವನು ಎಂದಿಗೂ ಶರಣನಾಗಲಾರ. ಏಕೆಂದರೆ ಶರಣನಾದವನು ಒಳ್ಳೆಯ ನುಡಿಗಳನ್ನಾಡುವಂತೆಯೇ ಒಳ್ಳೆಯ ದುಡಿಮೆಯನ್ನು ಮಾಡಬೇಕು.

ಮನವನ್ಯಾಯಪಾತಕದೊಳಗೆ
ಸಿಲುಕಿಹುದು
ಮಾತಿನಲ್ಲಿ ಭಕ್ತಿ ವಿನಯ
ಉಪಚಾರವ ನುಡಿವರು. (433/1405)

ಮನ+ಅನ್ಯಾಯ+ಪಾತಕ+ಒಳಗೆ; ಮನ=ಮನಸ್ಸು/ಚಿತ್ತ; ಅನ್ಯಾಯ=ಕೆಟ್ಟದ್ದು/ನ್ಯಾಯವಲ್ಲದ್ದು; ಪಾತಕ=ಪಾಪದ ಕೆಲಸ/ಇತರರಿಗೆ ಕೇಡನ್ನು ಮಾಡುವುದು; ಸಿಲುಕಿ+ಇಹುದು; ಸಿಲುಕಿ=ಒಳಗಾಗಿ; ಇಹುದು=ಇರುವುದು;

ಭಕ್ತಿ=ಒಳ್ಳೆಯ ನಡೆನುಡಿಗಳನ್ನೇ ಶಿವನೆಂದು ತಿಳಿದು ಬಾಳುವುದು; ವಿನಯ=ಇತರರ ಮುಂದೆ ಅಹಂಕಾರವನ್ನು ತೋರಿಸಿಕೊಳ್ಳದೆ ನಮ್ರತೆಯಿಂದ ನಡೆದುಕೊಳ್ಳುವುದು; ಉಪಚಾರ=ಸೇವೆ/ಆರೈಕೆ; ನುಡಿ=ಆಡುವರು/ಹೇಳುವರು;

ಒಳಗೊಂದು ಹೊರಗೊಂದು ಬಗೆಯ ನಡೆನುಡಿಗಳನ್ನುಳ್ಳ ಸೋಗಲಾಡಿಗಳು ತಮ್ಮ ಜೀವನದಲ್ಲಿ ಆಡುವುದೇ ಒಂದು; ಮಾಡುವುದೇ ಮತ್ತೊಂದಾಗಿರುತ್ತದೆ. ಮನದೊಳಗೆ ಕೆಟ್ಟ ಆಲೋಚನೆಗಳನ್ನು ಮತ್ತು ಇತರರಿಗೆ ಕೆಡುಕನ್ನು ಮಾಡುವ ಉದ್ದೇಶವನ್ನು ಹೊಂದಿದ್ದರೂ, ಬಾಯಲ್ಲಿ ಮಾತ್ರ ತುಂಬಾ ನಯ ವಿನಯ ಉಪಚಾರದಿಂದ ಕೂಡಿದ ನುಡಿಗಳನ್ನಾಡುವರು. ಇಂತಹ ನಯವಂಚಕರು ಮನದೊಳಗೆ ನಂಜನ್ನು ತುಂಬಿಕೊಂಡು ಮಾತಿನಲ್ಲಿ ತುಪ್ಪವನ್ನು ಸುರಿಸುತ್ತಾರೆ.

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: