ಎಚ್. ನರಸಿಂಹಯ್ಯ – ಹೋರಾಟದ ಬದುಕು

– ರಾಮಚಂದ್ರ ಮಹಾರುದ್ರಪ್ಪ.

ಅದು 1980 ರ ಪೆಬ್ರವರಿ 16ನೇ ತಾರೀಕು, ಅಂದು ಸಂಪೂರ‍್ಣ ಸೂರ‍್ಯಗ್ರಹಣವಿತ್ತು. ಮದ್ಯಾಹ್ನ 3:30 ಕ್ಕೆಬೆಂಗಳೂರಿನಲ್ಲಿ ಎಲ್ಲೆಡೆ ಕತ್ತಲು ಆವರಿಸಿತ್ತು. ಆ ವೇಳೆ 60ರ ಹರೆಯದ ಒಬ್ಬ ವ್ಯಕ್ತಿ ಹೊರಬಂದು ನ್ಯಾಶನಲ್ ಕಾಲೇಜ್ ನ ಸುತ್ತಮುತ್ತಲಿನ ರಸ್ತೆಯಲ್ಲೆಲ್ಲಾ ಅಂಜಿಕೆ ಇಲ್ಲದೆ ಅಡ್ಡಾಡುತ್ತಾ, ಹೊರಗೆ ಒಬ್ಬ ನರಪಿಳ್ಳೆಯೂ ಇಲ್ಲದ್ದದ್ದನ್ನು ಕಂಡು ಆಶ್ಚರ‍್ಯಗೊಳ್ಳುತ್ತಾರೆ. ಸೂರ‍್ಯ ಗ್ರಹಣದ ವೇಳೆ ಊಟ ಮಾಡಿ ಅದರಿಂದ ದೇಹಕ್ಕೆ ಯಾವುದೇ ಅಪಾಯವಿಲ್ಲ ಎಂದು ಕೂಡ ತೋರಿಸಿದರು. ಗ್ರಹಣದ ಬಗ್ಗೆ ಯಾವುದೇ ದಿಗಿಲಿಲ್ಲದೆ ಹಸು, ಎಮ್ಮೆ, ನಾಯಿಗಳೆಲ್ಲಾ ಎಂದಿನಂತೆ ತಮ್ಮ ಕಾರ‍್ಯಗಳಲ್ಲಿ ತೊಡಗಿರುವಾಗ ಓದು ಬರಹ ತಿಳಿದಿರುವ ಮನುಶ್ಯ ಮಾತ್ರ ಏಕೆ ಹೊರಬರದೆ ಮನೆಯಲ್ಲಿ ಅವಿತು ಕುಳಿತ? ಗ್ರಹಣ ಒಂದು ಸಹಜ ವೈಗ್ನಾನಿಕ ಕ್ರಿಯೆ ಎಂಬುದು ಹೈಸ್ಕೂಲ್ ವಿದ್ಯಾರ‍್ತಿಗೂ ಗೊತ್ತು. ಆದರೂ ಅದರ ಬಗ್ಗೆ ಈ ತಪ್ಪು ತಿಳುವಳಿಕೆ ಯಾಕೆ ಎಂದು ಯೋಚಿಸುತ್ತಾ ತಮ್ಮ ಕೊಟಡಿಗೆ ಮರಳುತ್ತಾರೆ. ತಮ್ಮ ಬದುಕಿನಾದ್ಯಂತ ಜನರಲ್ಲಿ ವಿಗ್ನಾನದ ಅರಿವು ಮೂಡಿಸುತ್ತಾ, ಪ್ರಶ್ನೆ ಮಾಡದೆ ಏನನ್ನೂ ಒಪ್ಪದಿರಿ ಎಂದು ಹೇಳುತ್ತಾ, ಶಿಕ್ಶಕನಾಗಿ, ಶಿಕ್ಶಣತಗ್ನನಾಗಿ ಕನ್ನಡದ ಹಲವು ಪೀಳಿಗೆಯ ವಿದ್ಯಾರ‍್ತಿಗಳ ಮೇಲೆ ಪ್ರಬಾವ ಬೀರಿದವರೇ ನಮ್ಮ ನಾಡಿನ ಹೆಮ್ಮೆ ಡಾ. ಎಚ್. ನರಸಿಂಹಯ್ಯನವರು (ಎಚ್.ಎನ್).

ಹುಟ್ಟು – ಎಳವೆಯ ಬದುಕು

ಗೌರಿಬಿದನೂರು ಬಳಿ ಇರುವ ಹೊಸೂರು ಎಂಬ ಪುಟ್ಟ ಹಳ್ಳಿಯಲ್ಲಿ ಹನುಮಂತಪ್ಪ ಹಾಗೂ ವೆಂಕಟಮ್ಮ ದಂಪತಿಗಳ ಮಗನಾಗಿ ಒಂದು ಬಡ ಕುಟುಂಬದಲ್ಲಿ ಜೂನ್ 6, 1920 ರಂದು ಎಚ್.ನರಸಿಂಹಯ್ಯನವರು ಹುಟ್ಟಿದರು. ಅವರ ತಂದೆಗೆ ಕಲಿಕೆಯ ಬೆಲೆ ತಿಳಿದಿದ್ದರಿಂದ ತಮ್ಮ ಮಗನನ್ನು ಹೊಸೂರಿನ ಸರ‍್ಕಾರಿ ಪ್ರಾತಮಿಕ ಶಾಲೆಗೆ ಸೇರಿಸಿದರು. ಎಳವೆಯಿಂದಲೂ ಓದಿನ ಬಗ್ಗೆ ಆಸಕ್ತಿಯಿದ್ದ ಎಚ್.ಎನ್., ಮೊದಲ ಹಂತದಿಂದಲೂ ಶ್ರದ್ದೆಯಿಂದ ಕಲಿತರು. ಅವರ ನೆಚ್ಚಿನ ಕಲಿಸುಗರಾದ ಎಸ್. ವೆಂಕಟಾಚಲಯ್ಯ ಹಾಗೂ ಎಂ. ಎಸ್. ನಾರಾಯಣರಾಯರ ಗರಡಿಯಲ್ಲಿ ಪಳಗಿದರು. ಓದಿನ ಜೊತೆ ಅವರ ಬದುಕಿನ ಕ್ರಮದ ಮೇಲೆಯೂ ಇವರಿಬ್ಬರು ಪ್ರಬಾವ ಬೀರಿದರು. ಅಪ್ಪಟ ಹಳ್ಳಿ ವಾತಾವರಣದಲ್ಲಿ ಸುತ್ತಲೂ ಇದ್ದ ಮೌಡ್ಯ, ಅಂದಕಾರದ ನಡುವೆ ಎಚ್.ಎನ್. ಸಣ್ಣ ಪ್ರಾಯದಿಂದಲೂ ವೈಗ್ನಾನಿಕ ಚಿಂತನೆಗಳನ್ನು ಮೈಗೂಡಿಸಿಕೊಂಡೇ ಬೆಳೆದರು. ಜೊತೆಗೆ ಮಹಾತ್ಮ ಗಾಂದಿಯವರ ತತ್ವಗಳಿಂದ ಎಳವೆಯಿಂದಲೂ ಪ್ರಬಾವಿತರಾಗಿದ್ದ ಎಚ್.ಎನ್ ತಮ್ಮ ಬದುಕಲ್ಲಿ ಅವುಗಳನ್ನು ಅಳವಡಿಸಿಕೊಂಡರು. ಅವರು 14 ವರುಶದ ಹುಡುಗನಾಗಿದ್ದಾಗಲೇ, ನಂದಿಬೆಟ್ಟಕ್ಕೆ ವಿಶ್ರಾಂತಿಗೆಂದು ಬಂದಿದ್ದ ಗಾಂದಿಯವರನ್ನು ಬೇಟಿ ಮಾಡಿದ್ದರು. ಅಂದಿನಿಂದಲೇ ಕಾದಿ ಮತ್ತು ಗಾಂದಿ ಟೋಪಿ ಅವರ ಉಡುಪಾಯಿತು. ಊರಿನಲ್ಲಿ ಮೊದಲ ಹಂತದ ಕಲಿಕೆ ನಂತರ ಹೈಸ್ಕೂಲ್ ಶಿಕ್ಶಣಕ್ಕೆ ನಾರಾಯಣರಾಯರ ಸಹಾಯದಿಂದ ಬೆಂಗಳೂರಿನ ನ್ಯಾಶನಲ್ ಶಾಲೆ ಸೇರಿದರು. ಮನೆಯಿಂದ ತಮ್ಮ ತಾಯಿಯ ಬಳಿ ರೊಟ್ಟಿ ಬುತ್ತಿ ಕಟ್ಟಿಸಿಕೊಂಡು ಹೊಸೂರಿನಿಂದ ಸುಮಾರು 85 ಕಿಮೀ ದೂರದಲ್ಲಿರುವ ಬೆಂಗಳೂರಿಗೆ ಮೊದಲ ಬಾರಿ ಎಚ್.ಎನ್. ಕಾಲ್ನಡಿಗೆಯಲ್ಲಿ ಬಂದರು.

ಬೆಂಗಳೂರು – ವಿದ್ಯಾರ‍್ತಿ ಬದುಕು

ಬಡಹುಡುಗರ ವಿದ್ಯಾರ‍್ತಿನಿಲಯದಲ್ಲಿ ಉಳಿದುಕೊಂಡು ನ್ಯಾಶನಲ್ ಹೈಸ್ಕೂಲ್ ನ ಕನ್ನಡ ಮಾದ್ಯಮದಲ್ಲಿ ಹತ್ತನೇ ತರಗತಿಯನ್ನು ಮೊದಲ ದರ‍್ಜೆಯಲ್ಲಿ ಪಾಸ್ ಮಾಡಿ ಆ ಬಳಿಕ ಎಚ್.ಎನ್. ವಿಗ್ನಾನದಲ್ಲಿ (PCM) ಇಂಟರ‍್ಮೀಡಿಯೆಟ್ ಕಲಿಕೆಗೆ 1938 ರಲ್ಲಿ ಸರ‍್ಕಾರಿ ಜೂನಿಯರ್ ಕಾಲೇಜಿಗೆ ಸೇರಿದರು. ಆಗ ಚಾಮರಾಜಪೇಟೆಯ ಮರಿಯಪ್ಪ ಉಚಿತ ಹಾಸ್ಟೆಲ್ ನಲ್ಲಿ ಉಳಿದುಕೊಳ್ಳಲು ನೆಲೆ ಸಿಕ್ಕಿತು. ಇಂಟರ್ ಮೀಡಿಯಟ್ ನಲ್ಲೂ ಎಂದಿನಂತೆ ಶ್ರದ್ದೆಯಿಂದ ಕಲಿತು ರಾಜ್ಯಕ್ಕೆ 11ನೇ ಸ್ತಾನ ಪಡೆದರು. ಇಂಜಿನೀಯರಿಂಗ್ ಅತವಾ ಮೆಡಿಕಲ್ ಯಾವುದನ್ನಾದರೂ ಆರಿಸಿಕೊಳ್ಳುವ ಅವಕಾಶವಿದ್ದರೂ ಅಶ್ಟು ಹಣ ಇಲ್ಲದ ಕಾರಣ ಕಡಿಮೆ ಕರ‍್ಚಾಗುವ, ಕಡಿಮೆ ಅವದಿಯ ಬಿ.ಎಸ್ಸಿ. ಆನರ‍್ಸ್ ಪಿಸಿಕ್ಸ್ ಗೆ ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಸೇರಿದರು. ರಾಮಕ್ರಿಶ್ಣ ಸ್ಟೂಡೆಂಟ್ಸ್ ಹೋಮ್ ಉಚಿತ ವಿದ್ಯಾರ‍್ತಿ ನಿಲಯ ಇವರ ವಾಸ ಸ್ತಳವಾಯಿತು.

ಕ್ವಿಟ್ ಇಂಡಿಯಾ ಚಳುವಳಿ

ಎಳವೆಯಿಂದಲೂ ಗಾಂದಿಯವರ ಅನುಯಾಯಿಯಾಗಿದ್ದ ಎಚ್.ಎನ್. ತಮ್ಮ ಪದವಿ ಶಿಕ್ಶಣದ ವೇಳೆ 1942 ರಲ್ಲಿ ಗಾಂದಿರವರ ಕರೆಗೆ ಓಗೊಟ್ಟು, ಮುಂದೆ ತಮ್ಮ ಬದುಕಿನಲ್ಲಿ ಆಗಬಹುದಾದ ತೊಡಕುಗಳ ಬಗ್ಗೆ ಕೂಡ ಯೋಚಿಸದೆ ಕ್ವಿಟ್ ಇಂಡಿಯಾ ಚಳುವಳಿಗೆ ದುಮುಕಿದರು. ಮೊದಲು ಮೈಸೂರು ಜೈಲ್, ಆ ನಂತರ ಪುಣೆಯ ಯರವಾಡ ಜೈಲಿನಲ್ಲಿ ಸೆರೆವಾಸ ಅನುಬವಿಸಿದರು. ಇದರಿಂದ ಎರಡು ವರುಶಗಳ ಕಾಲ ಅವರ ಪದವಿ ಶಿಕ್ಶಣ ನಿಂತಿತು.

ಬಿಡುಗಡೆಯ ಬಳಿಕ 1944 ರಲ್ಲಿ ತಮ್ಮ ಬಿ.ಎಸ್ಸಿ ಪದವಿಯ ಕಡೇ ವರ‍್ಶದ ಕಲಿಕೆಗೆ ಕಾಲೇಜಿಗೇನೋ ಸೇರುತ್ತಾರೆ ಆದರೆ ಅವರಿದ್ದ ಉಚಿತ ವಿದ್ಯಾರ‍್ತಿ ನಿಲಯದಲ್ಲಿ ಉಳಿದುಕೊಳ್ಳಲು ಅವಕಾಶ ಸಿಗುವುದಿಲ್ಲ. ಆ ವೇಳೆ ಅದ್ರುಶ್ಟ ಕೈಗೂಡಿ ರಾಮಕ್ರಿಶ್ಣ ಆಶ್ರಮದಲ್ಲಿ ತಂಗುವ ಅವಕಾಶ ಸಿಗುತ್ತದೆ. ನರಸಿಂಹಯ್ಯನವರು ಕಟಿಣ ಪರಿಶ್ರಮದಿಂದ ಬಿ.ಎಸ್ಸಿ ಆನರ‍್ಸ್ ಪದವಿಯನ್ನು ಮೊದಲ ದರ‍್ಜೆಯಲ್ಲಿ ಪಾಸಾಗುತ್ತಾರೆ. ನಂತರ ಪಿಸಿಕ್ಸ್ ನಲ್ಲಿ ಮೊದಲ ದರ‍್ಜೆಯಲ್ಲಿ ಎಂ.ಎಸ್ಸಿ ಪದವಿ ಪಡೆದು ತಮ್ಮ ನೆಚ್ಚಿನ ನ್ಯಾಶನಲ್ ಕಾಲೇಜಿನಲ್ಲಿ ಅದ್ಯಾಪಕರಾಗಿ ತಮ್ಮ ವ್ರುತ್ತಿ ಬದುಕು ಮೊದಲು ಮಾಡುತ್ತಾರೆ.

ಮೈಸೂರು ಚಲೋ

1947 ರಲ್ಲಿ ಬಾರತಕ್ಕೆ ಸ್ವಾತಂತ್ರ ಬಂದರೂ ಮೈಸೂರಿನಲ್ಲಿ ಮಾತ್ರ ದಿವಾನರ ಆಡಳಿತ ಮುಂದುವರಿಯುತ್ತಿದ್ದನ್ನು ಕಂಡು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ನರಸಿಂಹಯ್ಯನವರು ಮೈಸೂರು ಚಲೋ ಚಳುವಳಿಯಲ್ಲಿ ಪಾಲ್ಗೊಳ್ಳುತ್ತಾರೆ. ತಮ್ಮ ಗೆಳೆಯರೊಂದಿಗೆ “ಇನ್ ಕಿಲಾಬ್” ಎಂಬ ಬೂಗತ ಪತ್ರಿಕೆಯನ್ನು ಪ್ರಕಟಿಸುತ್ತಾರೆ. ಸುತ್ತಲ್ಲೂ ನಡೆಯುತ್ತಿದ್ದ ಆಗುಹೋಗುಗಳು ಹಾಗೂ ಚಳುವಳಿಯ ಮಹತ್ವವನ್ನು ವಿವರಿಸುತ್ತಾ 31 ಸಂಚಿಕೆಗಳನ್ನು ಹೊರತರುತ್ತಾರೆ. ನಂತರ ಚಳುವಳಿ ಯಶಸ್ವಿಯಾದ ಮೇಲೆ ಮತ್ತೊಮ್ಮೆ ನ್ಯಾಶನಲ್ ಕಾಲೇಜಿನಲ್ಲಿ ತಮ್ಮ ಅದ್ಯಾಪಕರಾಗಿ ಕೆಲಸ ಮುಂದುವರೆಸುತ್ತಾರೆ.

ಅಮೇರಿಕಾದಲ್ಲಿ ಡಾಕ್ಟರೇಟ್

ಏಳೆಂಟು ವರುಶ ಅದ್ಯಾಪಕರಾಗಿ ದುಡಿಯುವ ಹೊತ್ತಿನ್ನಲ್ಲಿ ತಮ್ಮ ಕೆಲವು ಸಹೋದ್ಯೋಗಿಗಳು ಡಾಕ್ಟರೇಟ್ ಪದವಿ ಪಡೆದದ್ದನ್ನು ಕಂಡು ತಾವೂ ಕೂಡ ಹೊರದೇಶದಲ್ಲಿ ಡಾಕ್ಟರೇಟ್ ಪಡೆಯುವುದು ಸೂಕ್ತ ಎಂದು ತೀರ‍್ಮಾನ ಮಾಡಿ 1956 ರಲ್ಲಿ ಅಮೇರಿಕಾದ 8-10 ವಿಶ್ವವಿದ್ಯಾಲಯಗಳಿಗೆ ಎಚ್.ಎನ್. ಅರ‍್ಜಿ ಹಾಕುತ್ತಾರೆ. ಸಂಪೂರ‍್ಣ ಸ್ಕಾಲರ್‌ಶಿಪ್ ನೀಡಲು ಒಪ್ಪಿದ ಕೊಲಂಬಸ್ ನ ಓಹಿಯೋ ವಿಶ್ವವಿದ್ಯಾನಿಲಯದಲ್ಲಿ Nuclear Spectroscopy ವಿಶಯದಲ್ಲಿ ಡಾಕ್ಟರೇಟ್ ಮಾಡುವುದಾಗಿ ತೀರ‍್ಮಾನ ಮಾಡುತ್ತಾರೆ. ಪ್ರಯಾಣದ ಕರ‍್ಚಿಗೂ ಅವರ ಬಳಿ ದುಡ್ಡಿಲ್ಲದ ಕಾರಣ ಉನ್ನತ ಕಲಿಕೆಗೆ ಹೋಗುವ ವಿದ್ಯಾರ‍್ತಿಗಳಿಗೆ ನೀಡುವ Fulbright Travel Grant ನ ನೆರವು ಪಡೆಯುತ್ತಾರೆ. ನ್ಯಾಶನಲ್ ಕಾಲೇಜ್ ನ ಅದ್ಯಾಪಕರು ವಿದೇಶದಲ್ಲಿ ಡಾಕ್ಟರೇಟ್ ಪಡೆದ ನಂತರ ಹಿಂದಿರುಗಿ ಇಂತಿಶ್ಟು ವರುಶ ಕಾಲೇಜ್ ನಲ್ಲಿ ಕೆಲಸ ಮಾಡಲೇಬೇಕು ಎಂಬ ಕಟ್ಟಳೆ ಇರುತ್ತದೆ. ಹಾಗಾಗಿ ಇದರ ಬಗ್ಗೆ ಮುಚ್ಚಳಿಕೆ ಪತ್ರವೊಂದನ್ನು ಕಾಲೇಜ್ ನ ಪ್ರಾಂಶುಪಾಲರಿಗೆ ಎಚ್.ಎನ್. ನೀಡಲು ಹೋದಾಗ, “ಇಲ್ಲಿಗೆ ಬರದೆ ಇನ್ನೆಲ್ಲಿಗೆ ಹೋಗುತ್ತೀರಾ? ನಿಮ್ಮ ಮೇಲೆ ವಿಶ್ವಾಸ ಇದೆ. ಮುಚ್ಚಳಿಕೆಯ ಅಗತ್ಯವಿಲ್ಲ” ಎಂದು ಪ್ರಾಂಶುಪಾಲರು ಔದಾರ‍್ಯ ತೋರಿಸುತ್ತಾರೆ. ನಂತರ ಅವರು ಬೊಂಬಾಯಿಗೆ ರೈಲಿನಲ್ಲಿ ಹೊರಡುವ ವೇಳೆ ಬೀಳ್ಕೊಡಲು ಪ್ಲಾಟ್ಪಾರ‍್ಮ್ ತುಂಬಾ ಅವರ ವಿದ್ಯಾರ‍್ತಿಗಳು, ಸಹೋದ್ಯೋಗಿಗಳು, ಹಿತೈಶಿಗಳೇ ತುಂಬಿರುತ್ತಾರೆ! ಆ ಮಟ್ಟದ ಪ್ರೀತಿ ಎಲ್ಲರಿಗೂ ನರಸಿಂಹಯ್ಯನವರನ್ನು ಕಂಡರೆ.

ಬೊಂಬಾಯಿಯಲ್ಲಿ ವಿಮಾನ ಏರಿ ಲಂಡನ್ ಮಾರ‍್ಗವಾಗಿ ಕೊಲಂಬಸ್ ತಲುಪುತ್ತಾರೆ. ಅಲ್ಲಿನ ಓಹಿಯೋ ವಿಶ್ವವಿದ್ಯಾಲಯದಲ್ಲಿ ಎಮ್.ಎಲ್ ಪೂಲ್ ರ ಮಾರ‍್ಗದರ‍್ಶನದಲ್ಲಿ Nuclear Spectroscopy ಯಲ್ಲಿ ತಮ್ಮ ಡಾಕ್ಟರೇಟ್ ಕಲಿಕೆ ಮೊದಲು ಮಾಡುತ್ತಾರೆ. ಅಲ್ಲಿನ ಕಲಿಕಾ ವ್ಯವಸ್ತೆಗೆ ಬೇಗನೆ ಹೊಂದಿಕೊಂಡ ಅವರು ಎಲ್ಲಾ ಸವಾಲುಗಳನ್ನು ಎದುರಿಸಿ ಮೂರೇ ವರುಶಗಳಲ್ಲಿ ತಮ್ಮ ಡಾಕ್ಟರೇಟ್ ಪದವಿ ಪಡೆಯುತ್ತಾರೆ. ಶುದ್ದ ಸಸ್ಯಹಾರಿಯಾಗಿದ್ದ ಎಚ್.ಎನ್. ಅಮೇರಿಕಾದಲ್ಲಿ ತಾವಿದ್ದ ಮೂರು ವರುಶಗಳಲ್ಲಿ ಮೂರೂ ಹೊತ್ತು ತಾವೇ ಮಾಡುತ್ತಿದ್ದ ಉಪ್ಪಿಟ್ಟನ್ನಶ್ಟೇ ತಿಂದುಕೊಂಡು ಇದ್ದದ್ದು ಒಂದು ಸ್ವಾರಸ್ಯಕರ ವಿಶಯ. ಡಾಕ್ಟರೇಟ್ ಬಳಿಕ ಅವರ ಪ್ರೊಪೆಸರ್ ಪೂಲ್ ಅವರು ಒಂದೆರಡು ವರುಶ ಇಲ್ಲೇ Post Doctoral Fellow ಆಗಿ ಕೆಲಸ ಮಾಡಿ ಎಂದು ಒತ್ತಾಯ ಮಾಡಿದರೂ ಕಿವಿಗೊಡದೆ ಡಾಕ್ಟರೇಟ್ ಪದವಿಯೊಂದಿಗೆ ಡಾ. ಎಚ್. ನರಸಿಂಹಯ್ಯ ಆಗಿ ತಾಯ್ನಾಡಿಗೆ ಮರಳುತ್ತಾರೆ.

ನ್ಯಾಶನಲ್ ಕಾಲೇಜ್ ಪ್ರಿನ್ಸಿಪಾಲ್ ಆಗಿ ಎಚ್.ಎನ್.

ಅಮೇರಿಕಾದಿಂದ ಮರಳಿದ ವರ‍್ಶವೇ (1961) ನರಸಿಂಹಯ್ಯನವರಿಗೆ ಕಾಲೇಜಿನ ಪ್ರಿನ್ಸಿಪಾಲರಾಗಿ ಬಡ್ತಿ ಸಿಗುತ್ತದೆ. ಬದ್ದತೆಗೆ ಇನ್ನೊಂದು ಹೆಸರಾಗಿದ್ದ ಅವರೇ ಈ ಹುದ್ದೆಗೆ ಸೂಕ್ತ ಎಂದು ಆಡಳಿತ ವರ‍್ಗ ಅವರನ್ನು ಅವಿರೋದವಾಗಿ ಆಯ್ಕೆ ಮಾಡುತ್ತದೆ. ಎಚ್.ಎನ್. ಪ್ರಿನ್ಸಿಪಾಲ್ ಆಗುತ್ತಿದ್ದಂತೆಯೇ ಕಾಲೇಜ್ ನಲ್ಲಿ ಹಲವಾರು ಮಹತ್ವದ ಮಾರ‍್ಪಾಡುಗಳನ್ನು ಮಾಡುತ್ತಾರೆ. ಕೋ-ಎಜುಕೇಶನ್ ಶುರು ಮಾಡುವುದರ ಜೊತೆಗೆ ಅದ್ಯಾಪಕರಿಗೆ ಇದ್ದ ಹಾಜರಾತಿ ಸಹಿ ನಿಯಮವನ್ನು ತಗೆದು ಹಾಕುತ್ತಾರೆ. ವಿದ್ಯಾರ‍್ತಿಗಳಿಗೆ ಕಾಲೇಜು ಪಟ್ಯದ ಶಿಕ್ಶಣ ಒಂದೇ ಶಿಕ್ಶಣವಲ್ಲ ಎಂದು ಬಲವಾಗಿ ನಂಬಿದ್ದ ಅವರು ಕಲೆ, ನಾಟಕ, ಸಂಗೀತ ಹಾಗೂ ಆಟೋಟಗಳಲ್ಲಿಯೂ ತೊಡಗಿಕೊಳ್ಳುವಂತೆ ತಮ್ಮ ವಿದ್ಯಾರ‍್ತಿಗಳಿಗೆ ಪ್ರೋತ್ಸಾಹಿಸಿದರು. ಕನ್ನಡದ ಹಲವಾರು ಮೇರುನಟರು ಹಾಗೂ ಅಂತರಾಶ್ಟ್ರೀಯ ಕ್ರಿಕೆಟ್ ನಲ್ಲಿ ಪ್ರಪಂಚದಾದ್ಯಂತ ಹೆಸರು ಮಾಡಿರುವ ಎರಾಪಲ್ಲಿ ಪ್ರಸನ್ನ ಮತ್ತು ಬಿ.ಎಸ್ ಚಂದ್ರಶೇಕರಿಗೆ ನೀಡಿದ ಪ್ರೋತ್ಸಾಹ ಹಾಗೂ ಸಹಾಯವನ್ನು ಈ ದಿಗ್ಗಜರು ಈಗಲೂ ನೆನೆಯುತ್ತಾರೆ. ತಿಂಗಳಿಗೊಮ್ಮೆ ಬೆಂಗಳೂರಿನ ಬಳಿ ಇರುವ ಯಾವುದಾದರೂ ಒಂದು ಹಳ್ಳಿಗೆ ವಿದ್ಯಾರ‍್ತಿಗಳೊಂದಿಗೆ ಹೋಗಿ ಅಲ್ಲಿ ಸ್ವಚ್ಚತಾ ಕೆಲಸಗಳನ್ನು ಮಾಡಿಸಿ ಅದರ ಅರಿವು ಮೂಡಿಸುತ್ತಿದ್ದರು. ತಮ್ಮ ಕಾಲೇಜಿಗೆ ಸದಾ ಪೈಪೋಟಿ ನೀಡುತ್ತಾ ಒಳ್ಳೆ ಪಲಿತಾಂಶ ಪಡೆಯುತ್ತಿದ್ದ ವಿಜಯಾ ಕಾಲೇಜ್ ಮಟ್ಟಕ್ಕೆ ನ್ಯಾಶನಲ್ ಕಾಲೇಜ್ ಕೆಲವೇ ವರುಶಗಳೊಳಗೆ ಬೆಳೆಯುವಲ್ಲಿ ಎಚ್.ಎನ್‌.ರ ವಿಶೇಶ ಟ್ಯುಟೋರಿಯಲ್ ಪದ್ದತಿ ಮಹತ್ವದ ಪಾತ್ರ ವಹಿಸಿತು. ವೈಗ್ನಾನಿಕ ಅರಿವು ಮೂಡಿಸುವುದರ ಸಲುವಾಗಿ ಕಾಲೇಜ್ ‘ಸೈನ್ಸ್ ಪೋರಮ್’ ಹುಟ್ಟುಹಾಕಿ ವಿದ್ಯಾರ‍್ತಿಗಳು ವಿಗ್ನಾನ ಲೋಕದ ಆಗುಹೋಗುಗಳ ಬಗ್ಗೆ ಚರ‍್ಚೆ ಮಾಡಲು ವೇದಿಕೆ ಕಲ್ಪಿಸಿಕೊಟ್ಟಿದ್ದು ಒಂದು ವಿಶೇಶ ಬೆಳವಣಿಗೆ. ನ್ಯಾಶನಲ್ ಕಾಲೇಜ್ ಗೆ ಒಳ್ಳೆ ಹೆಸರು ಬರುತ್ತಿದ್ದಂತೆಯೇ ಸೀಟು ಪಡೆಯಲು ರಾಜಕೀಯ ಹಾಗೂ ನಾನಾ ವಲಯಗಳ ಪ್ರಬಾವಿ ವ್ಯಕ್ತಿಗಳಿಂದ ಒತ್ತಡ ಬರಲಾರಂಬಿಸಿದರೂ ಯಾವುದಕ್ಕೂ ಜಗ್ಗದೆ ಅತ್ಯಂತ ಪಾರದರ‍್ಶಕವಾಗಿ ಆಯ್ಕೆ ಪ್ರಕ್ರಿಯೆ ಹಾಗೂ ಸೀಟು ಹಂಚಿಕೆ ನಡಿಯುವಂತೆ ನರಸಿಂಹಯ್ಯನವರು ಎಚ್ಚರಿಕೆ ವಹಿಸುತ್ತಿದ್ದರು. ಆರು ವರ‍್ಶಗಳಲ್ಲಿ ಕಾಲೇಜ್ ನ ಏಳಿಗೆ ಮುಗಿಲು ಮುಟ್ಟಿತ್ತು ಎಂದರೆ ತಪ್ಪಾಗಲಾರದು.

ಪ್ರಾದ್ಯಾಪಕನಾಗಿ ಮರಳಿ ಅಮೇರಿಕಾಕ್ಕೆ

1967 ರಲ್ಲಿ Southern Illinois University ಯಲ್ಲಿ ಸಂದರ‍್ಶಕ ಪ್ರಾದ್ಯಾಪಕನಾಗುವ ಅವಕಾಶ ಎಚ್.ಎನ್. ರಿಗೆ ಒಲಿದು ಬರುತ್ತದೆ. ಪಾಟ ಮಾಡುತ್ತಾ ಅಲ್ಲಿನ ಶಿಕ್ಶಣ ನೀತಿಯನ್ನು ಇನ್ನೂ ಆಳವಾಗಿ ಅರಿಯುವುದರ ಜೊತೆಗೆ 1970 ರಲ್ಲಿನಡೆಯಲಿದ್ದ ನ್ಯಾಶನಲ್ ಕಾಲೇಜಿನ ಬೆಳ್ಳಿ ಹಬ್ಬಕ್ಕೆ ಅಮೇರಿಕಾದಲ್ಲಿರುವ ತಮ್ಮ ಹಳೇ ವಿದ್ಯಾರ‍್ತಿಗಳ ಬಳಿ ಚಂದಾ ಪಡೆಯುವ ಉದ್ದೇಶದೊಂದಿಗೆ ಅಮೇರಿಕಾಕ್ಕೆ ಪ್ರಯಾಣ ಬೆಳೆಸುತ್ತಾರೆ. ಕರ‍್ನಾಟಕದ ಪುಟ್ಟ ಹಳ್ಳಿಯೊಂದರಲ್ಲಿ ಸರ‍್ಕಾರಿ ಕನ್ನಡದ ಮಾದ್ಯಮ ಶಾಲೆಯಲ್ಲಿ ಕಲಿತ ನರಸಿಂಹಯ್ಯನವರು ಅಮೇರಿಕಾದ ಪ್ರಸಿದ್ದ ವಿಶ್ವವಿದ್ಯಾಲಯವೊಂದರಲ್ಲಿ ಪಾಟ ಮಾಡಿದ್ದು ಮೈನವಿರೇಳಿಸುವಂತ ವಿಶಯ ಎಂದರೆ ತಪ್ಪಾಗಲಾರದು. ಒಂದು ವರ‍್ಶ ತಮ್ಮ ಪ್ರಾದ್ಯಾಪಕ ಕೆಲಸವನ್ನು ಯಶಸ್ವಿಯಾಗಿ ಪೂರೈಸಿ ಅಲ್ಲಿನವರಿಂದ ಪ್ರಶಂಸೆ ಕೂಡ ಗಳಿಸುತ್ತಾರೆ. ವಿದ್ಯಾರ‍್ತಿಯಾಗಿ ಅಲ್ಲಿಗೆ ತೆರಳಿದ್ದವೇಳೆ ಇದ್ದ ಒತ್ತಡ ಈಗ ಇಲ್ಲದ್ದುದ್ದರಿಂದ ಅಮೇರಿಕಾದ ಹಲವಾರು ರಾಜ್ಯಗಳು ಹಾಗೂ ಅಲ್ಲಿನ ಪ್ರಸಿದ್ದ ವಿಶ್ವವಿದ್ಯಾಲಯಗಳಿಗೆ ಬೇಟಿ ನೀಡಿ ಅಲ್ಲಿನ ಕಲಿಕೆಯ ಬಗ್ಗೆ ತಿಳಿಯುತ್ತಾರೆ. ಹಾಗೇ ಅಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಹಳೇ ವಿದ್ಯಾರ‍್ತಿಗಳನ್ನೂ ಬೇಟಿ ಮಾಡಿ ಕಾಲೇಜಿನ ಬೆಳ್ಳಿ ಹಬ್ಬದ ತಯಾರಿಯನ್ನು ಮಾಡಿಕೊಂಡು ಒಂದು ವರ‍್ಶದ ಬಳಿಕ ಬೆಂಗಳೂರಿಗೆ ಹಿಂದಿರುಗುತ್ತಾರೆ. ಮರಳಿದ ಮೇಲೆ ಕಾಲೇಜಿನ ಪ್ರಿನ್ಸಿಪಾಲರಾಗಿ 1969 ರಲ್ಲಿ ಗಾಂದಿ ಶತಮಾನೋತ್ಸವ ಹಾಗೂ 1970 ರಲ್ಲಿ ಕಾಲೇಜಿನ ಬೆಳ್ಳಿ ಹಬ್ಬವನ್ನು ಯಶಸ್ವಿಯಾಗಿ ಆಚರಿಸಿ ಎಲ್ಲರ ಮೆಚ್ಚುಗೆ ಗಳಿಸುತ್ತಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ

1972 ರ ಡಿಸಂಬರ್ ನಲ್ಲಿ ನರಸಿಂಹಯ್ಯನವರು ಬೆಂಗಳೂರು ವಿವಿಯ ಉಪಕುಲಪತಿಯಾಗಿ ಆಯ್ಕೆಯಾಗುತ್ತಾರೆ. ಬೇಡದ ಮನಸ್ಸಿನಿಂದಲೇ ಉಪಕುಲಪತಿಯ ಹೊಣೆ ಹೊತ್ತ ಅವರು ಹಿಂದೆ ನ್ಯಾಶನಲ್ ಕಾಲೇಜ್‌ನಲ್ಲಿ ಮಾಡಿದಂತೆಯೇ ವಿವಿಯಲ್ಲೂ ಹಲವಾರು ಮಾರ‍್ಪಾಡುಗಳನ್ನು ಮಾಡಿ ಯಶಸ್ಸು ಕಾಣುತ್ತಾರೆ. ಸೆಮಿಸ್ಟರ್ ಪದ್ದತಿ ಜಾರಿಗೆ ತರುತ್ತಾರೆ. ವಿವಿಯನ್ನು ಮೈಸೂರು ರಸ್ತೆಯಲ್ಲಿರುವ ಗ್ನಾನ ಬಾರತಿಯ ಹೊಸ ಆವರಣಕ್ಕೆ ಸ್ತಳಾಂತರಿಸಿ ಎಲ್ಲಾ ವಿಬಾಗಗಳ ಪಾಟಗಳು ತೊಡಕಿಲ್ಲದೆ ಅಲ್ಲೇ ನಡೆಯುವಂತೆ ನೋಡಿಕೊಳ್ಳುತ್ತಾರೆ. ಉಪಕುಲಪತಿಯಾಗಿದ್ದಾಗಲೂ ಸರ‍್ಕಾರಿ ಕಾಲೇಜಿನಲ್ಲಿ ಮೂರನೇ ವರ‍್ಶದ ಬಿ.ಎಸ್ಸಿ. ವಿದ್ಯಾರ‍್ತಿಗಳಿಗೆ ವಾರಕ್ಕೆ ಒಂದು ದಿನ ಪಾಟ ಮಾಡಿದ್ದು ಎಚ್.ಎನ್. ತಮ್ಮ ಮೂಲ ವ್ರುತ್ತಿಯನ್ನು ಎಶ್ಟು ಪ್ರೀತಿಸುತ್ತಿದ್ದರು ಎಂಬುದಕ್ಕೆ ಎತ್ತುಗೆ. ಗ್ನಾನ ಬಾರತಿ ಆವರಣದಲ್ಲಿ ನಡೆದ ಮೊದಲ ಪದವಿ ಪ್ರದಾನ ಸಮಾರಂಬಕ್ಕೆ ಕುವೆಂಪುರವರನ್ನು ಮುಕ್ಯ ಅತಿತಿಯಾಗಿ ಕರೆತಂದ ಹೆಗ್ಗಳಿಕೆ ಕೂಡ ಅವರದೇ.

ಮೂಡನಂಬಿಕೆಗಳ ವಿರುದ್ದ ಎಚ್.ಎನ್.

“ಮೂಡನಂಬಿಕೆಯುಳ್ಳ ವಿದ್ಯಾವಂತ, ಅವಿದ್ಯಾವಂತ ಮೂಡನಂಬಿಕಸ್ತನಿಗಿಂತ ಸಮಾಜಕ್ಕೆ ಹೆಚ್ಚು ಅಪಾಯಕಾರಿ” ಎಂದು ನರಸಿಂಹಯ್ಯನವರು ಪ್ರತಿಪಾದಿಸುತ್ತಿದ್ದರು. ಉಪಕುಲಪತಿಯಾಗಿ ಮೂರು ವರ‍್ಶದ ಅವದಿಯ ಬಳಿಕ ಮತ್ತೊಮ್ಮೆ ಮರು ಆಯ್ಕೆಯಾದಾಗ ಪವಾಡಗಳನ್ನು ಪರೀಕ್ಶಿಸಲು ಮತ್ತು ಮೂಡನಂಬಿಕೆಗಳನ್ನು ಹೋಗಲಾಡಿಸಲು 1976 ರಲ್ಲಿ ಒಂದು ಆಯೋಗ ನೇಮಿಸಿ ವರ‍್ಶಕ್ಕೆ 25,000 ರೂಗಳನ್ನು ವಿವಿಯ ಬಡ್ಜೆಟ್ ನಲ್ಲಿ ಮೀಸಲಿಡುತ್ತಾರೆ. 70 ರ ದಶಕದಲ್ಲಿ ದೇವಮಾನವ ಎಂದು ಪ್ರಸಿದ್ದಿ ಗಳಿಸಿ ಬೂದಿಯಿಂದ ಕೈಗಡಿಯಾರ, ಚಿನ್ನದ ಸರ ಹೀಗೇ ನಾನಾ ವಸ್ತುಗಳನ್ನು ಸ್ರುಶ್ಟಿಸುತ್ತಿದ್ದ ಸತ್ಯ ಸಾಯಿ ಬಾಬಾ ಅವರಿಗೆ ಬೂದಿಯಿಂದ ಕುಂಬಳಕಾಯಿ ಸ್ರುಶ್ಟಿಸಿ ಕೊಡಿ ಎಂದು ಸವಾಲು ಒಡ್ಡಿ ಪತ್ರದ ಮೇಲೆ ಪತ್ರಗಳನ್ನು ಬರೆದರೂ ಅವರಿಂದ ಪ್ರತ್ಯುತ್ತರ ಬರುವುದಿಲ್ಲ. ಅವರನ್ನು ಬೇಟಿ ಮಾಡಲೂ ಅವರ ಸಂಗಡಿಗರು ಬಿಡುವುದಿಲ್ಲ. ಎಲ್ಲಾ ವಲಯಗಳಲ್ಲಿಯೂ ಹಲವಾರು ಪ್ರಬಾವಿ ವ್ಯಕ್ತಿಗಳನ್ನು ಬೆಂಬಲಿಗರಾಗಿ, ಬಕ್ತಾದಿಗಳಾಗಿ ಪಡೆದ್ದಿದ್ದ ಸತ್ಯಸಾಯಿ ಅವರ ವರ‍್ಚಸ್ಸನ್ನು ಲೆಕ್ಕಿಸದೇ ಪ್ರಶ್ನಿಸುವ ತಮ್ಮ ಕೆಲಸವನ್ನು ಅಂಜದೆ ಮಾಡಿದ ಎಚ್.ಎನ್. ರ ದೈರ‍್ಯ ಆ ಹೊತ್ತಿನಲ್ಲಿ ತೀವ್ರ ಚರ‍್ಚೆಗೆ ಗ್ರಾಸವಾಯಿತು. ದರ‍್ಮವಿರೋದಿ ಎಂಬ ಟೀಕೆಗಳು ಕೇಳಿಬಂದರೂ ಅವರು ಹೆದರುವುದಿಲ್ಲ. ಸತ್ಯಸಾಯಿ ಬಾಬಾರಂತೆಯೇ ಜನಪ್ರಿಯತೆ ಗಳಿಸಿದ್ದ, ಹೋಮ ಮಾಡಿ ಮಳೆ ಸುರಿಸುತ್ತೇವೆ ಎಂದೆಲ್ಲಾ ಪೊಳ್ಳು ಹಚ್ಚಿ ಪ್ರಕ್ಯಾತರಾಗಿದ್ದ ಕೆಲವು ಪವಾಡ ಪುರುಶರು ಎಚ್.ಎನ್. ಅವರೊಡ್ಡಿದ ಸವಾಲು ಸ್ವೀಕರಿಸಿ ಮಣ್ಣು ಮುಕ್ಕಿದ್ದು ವಿಗ್ನಾನಕ್ಕೆ ಸಂದ ಗೆಲುವು ಎಂದೇ ಹೇಳಬೇಕು. ಬಳಿಕ 1977 ರಲ್ಲಿ ರಾಜಕೀಯ ಒತ್ತಡಗಳಿಂದ ಬೇಸತ್ತು ತಮ್ಮ ಉಪಕುಲಪತಿ ಪದವಿಗೆ ರಾಜೀನಾಮೆ ಕೊಟ್ಟು ಎಚ್.ಎನ್. ಹೊರನಡೆಯುತ್ತಾರೆ.

ಶಾಸಕರಾಗಿ ಎಚ್.ಎನ್.

ಗುಂಡೂರಾಯರು ಮುಕ್ಯಮಂತ್ರಿಯಾಗಿದ್ದಾಗ ನರಸಿಂಹಯ್ಯನವರನ್ನು ಮೇಲ್ಮನೆ ವಿದಾನ ಪರಿಶತ್ ಸದಸ್ಯರಾಗಿ ಆಯ್ಕೆ ಮಾಡುತ್ತಾರೆ. ನೀವೀಗ ಕಾಂಗ್ರೆಸ್ ಪಕ್ಶದ ಶಾಸಕರು ಎಂದು ಹೇಳುತ್ತಿದ್ದವರಿಗೆಲ್ಲಾ ಎಚ್.ಎನ್. ಅವರು ನಯವಾಗಿ “ನಾನು ಯಾವ ಪಕ್ಶಕ್ಕೂ ಸೇರಿದವನಲ್ಲ. ವಿಗ್ನಾನ ಹಾಗೂ ಶೈಕ್ಶಣಿಕ ವಿಚಾರಗಳ ಕುರಿತು ಸಲಹೆ, ಸೂಚನೆ ನೀಡುವುದಕ್ಕಾಗಿ ಮುಕ್ಯಮಂತ್ರಿಗಳು ನನ್ನನ್ನು ಆರಿಸಿದ್ದಾರೆ. ನಾನು ‘ವಿಗ್ನಾನದ ಪಕ್ಶ’ ಎಂದೇ ಹೇಳುತ್ತಿದ್ದರು”. ಮೇಲ್ಮನೆ ಶಾಸಕರಾಗಿ ಅವರ 6 ವರ‍್ಶದ ಅವದಿಯಲ್ಲಿ, ಸದನದಲ್ಲಿ ತಾಯ್ನುಡಿ ಶಿಕ್ಶಣ ಒಳಗೊಂಡಂತೆ ಕಲಿಕಾ ವ್ಯವಸ್ತೆ, ಮೂಡನಂಬಿಕೆ ಹತ್ತಿಕ್ಕುವ ಹಾಗೂ ಬಾನಾಮತಿಯಂತಹ ವಿಶಯಗಳ ಬಗೆಗೆ ಹಲವಾರು ಬಾರಿ ವಾದ ಮಂಡಿಸಿದರೂ ಅವರ ಸಲಹೆಗಳನ್ನು ಕಾಟಾಚಾರಕ್ಕಶ್ಟೇ ಕೇಳಿ ಸುಮ್ಮನಾಗುತ್ತಿದ್ದ ವ್ಯವಸ್ತೆ ಅವರಲ್ಲಿ ರೇಜಿಗೆ ಹುಟ್ಟಿಸಿತು. ಸದನದಲ್ಲಿ ಶಾಸಕರೇ ಪಾಲಿಸುತ್ತಿದ್ದ ರಾಹುಕಾಲ, ಗುಳಿಕಕಾಲ, ಅಮಾವಾಸೆ ಬಗೆಯ ಮೂಡನಂಬಿಕೆಗಳನ್ನು ಕಂಡು ಬೇಸತ್ತಿದ್ದರು. ಬಹುತೇಕ ಶಾಸಕರಿಗೆ ಸಮಯ ಪ್ರಗ್ನೆ ಇಲ್ಲ. ಶೇ 50 ಕ್ಕಿಂತಲೂ ಹೆಚ್ಚು ಶಾಸಕರು ಸದನಕ್ಕೆ ಗೈರು ಹಾಜರಾಗುತ್ತಾರೆ, ಇನ್ನುಳಿದವರಲ್ಲಿ ಹೆಚ್ಚಿನವರು ಸರ‍್ಕಾರದ ದುಡ್ಡಲ್ಲಿ ಎಲ್ಲಾ ಸವಲತ್ತು ಪಡೆದು ಸುಮ್ಮನೆ ಬಂದು ಇಲ್ಲಿ ಕಾಲಹರಣ ಮಾಡುತ್ತಾರಲ್ಲ ಎಂದು ನೊಂದುಕೊಂಡರು. ಕಡೆಗೆ ತಮ್ಮ ಅವದಿ ಪೂರೈಸಿದಾಗ ಮರು ಆಯ್ಕೆಗೆ ಅವಕಾಶವಿದ್ದರೂ ತಿರಸ್ಕರಿಸಿ ತಮ್ಮ ಶಾಸಕ ಸ್ತಾನಕ್ಕೆ ರಾಜೀನಾಮೆ ಇತ್ತರು.

ಕನ್ನಡ ಅಬಿವ್ರುದ್ದಿ ಪ್ರಾದಿಕಾರದ ಅದ್ಯಕ್ಶ ಎಚ್.ಎನ್.

ಕನ್ನಡದಲ್ಲಿ ತಮ್ಮ ಮೊದಲ ಹಂತದ ಶಿಕ್ಶಣ ಪಡೆದ್ದಿದ್ದ ಎಚ್.ಎನ್., ತಾಯ್ನುಡಿ ಕಲಿಕೆಯನ್ನು ಪ್ರತಿಪಾದಿಸುತ್ತಿದ್ದರು. ಕನ್ನಡ ಅಬಿವ್ರುದ್ದಿ ಪ್ರಾದಿಕಾರದ ಅದ್ಯಕ್ಶರಾಗಿ ಕನ್ನಡವನ್ನು ಎಲ್ಲಡೆ ಬಲಗೊಳಿಸುವತ್ತ ದುಡಿದರು. ಎಚ್.ಎನ್. ರವರ ಮನೆಯ ಮಾತು ತೆಲುಗು ಅನ್ನುವುದು ಸ್ವಾರಸ್ಯಕರ ವಿಶಯ. ಆದರೆ ಮನೆಮಾತು ಯಾವುದೇ ಇರಲಿ, ಕರ‍್ನಾಟಕದಲ್ಲಿರುವ ಪ್ರತಿಯೊಬ್ಬರೂ ಕನ್ನಡಿಗರೇ ಎಂದು ಅವರು ನಂಬಿದ್ದರು. ಅದ್ಯಕ್ಶರಾಗಿ ಕನ್ನಡ ಮಾದ್ಯಮ ಶಿಕ್ಶಣಕ್ಕೆ ಹೆಚ್ಚು ಒತ್ತು ಕೊಟ್ಟು ಕನ್ನಡ ಕಡ್ಡಾಯ ಮಾಡುವ ಬಗ್ಗೆ ಯೋಚಿಸಿದರು. ನಾವು ನಮ್ಮ ನುಡಿ ಕನ್ನಡದಲ್ಲಿ ಕಲಿಸ್ತೀವಿ ಅನ್ನೋದು ತಪ್ಪೇ? ಕನ್ನಡ ಮಾದ್ಯಮ ಬೇಡ ಎನ್ನಲು ನಾವೇನೋ ಅಪರಾದ ಮಾಡಿದ್ದೀವಿ ಎಂಬಂತೆ ನಮ್ಮನ್ನು ಕೋರ‍್ಟ್ ಗೆ ಎಳೆಯುತ್ತಾರಲ್ಲ ಎಂದು ಕಾಸಗಿ ಶಿಕ್ಶಣ ಸಂಸ್ತೆಗಳ ಬಗ್ಗೆ ಬೇಸರದ ಮಾತುಗಳಾಡುತ್ತಿದ್ದರು. ಎಚ್.ಎನ್., ಒಬ್ಬ ಕನ್ನಡದ ಕಟ್ಟಾಳು ಕೂಡ ಆಗಿದ್ದರು. ಕನ್ನಡದಲ್ಲೇ ಹಲವಾರು ವಿಗ್ನಾನ ಬರಹಗಳನ್ನು ಬರೆದ ಹೆಗ್ಗಳಿಕೆ ಅವರದು. ಬೆಂಗಳೂರಿನಲ್ಲಿ ಕನ್ನಡಕ್ಕೆ ಬಂದಿರೋ ದುಸ್ತಿತಿಯನ್ನು ಕಂಡು ‘ಅಬಿಮಾನ್ಯ ಶೂನ್ಯ ಬೆಂಗಳೂರು’ ಎಂಬ ಲೇಕನ ಬರೆದು ಕುವೆಂಪುರವರಿಂದ ಮೆಚ್ಚುಗೆ ಗಳಿಸಿದ್ದರು. ಪ್ರತಿದಿನ ಲಾಲ್ ಬಾಗ್ ಗೆ ವಾಕಿಂಗ್ ಹೋಗುತ್ತಿದ್ದ ಅವರು ಬೆಂಗಳೂರಿನ ಪ್ರತಿಶ್ಟಿತ ಬಡಾವಣೆಯ ಜನರೆಲ್ಲಾ ತಮ್ಮ ನಾಯಿಗಳನ್ನೂ ಇಂಗ್ಲಿಶ್ ನಲ್ಲೇ ಮಾತಾಡಿಸುತ್ತಾರೆ. ಇಶ್ಟು ದಿನಗಳಲ್ಲಿ ಲಾಲ್ ಬಾಗ್ ನಲ್ಲಿ ಒಂದೂ ಕನ್ನಡ ಮೀಡಿಯಮ್ ನಾಯಿ ನೋಡಲಿಲ್ಲ, ಎಲ್ಲಾ ಇಂಗ್ಲಿಶ್ ಮೀಡಿಯಮ್ ನಾಯಿಗಳೇ ಎಂದು ತಮಾಶೆ ಮಾಡುತ್ತಿದ್ದರು.

ಪ್ರಾದಿಕಾರದ ಅವದಿಯ ಬಳಿಕ 2002 ರಲ್ಲಿ ಬಿ.ಎಂ.ಎಸ್ ವಿದ್ಯಾಸಂಸ್ತೆ ಟ್ರಸ್ಟ್ ನ ಅದ್ಯಕ್ಶರಾಗಿ ನೇಮಕಗೊಂಡರು. ಯಲಹಂಕ ಬಳಿ ಇರುವ, ಈಗ ರಾಜ್ಯದ ಪ್ರತಿಶ್ಟಿತ ಇಂಜಿನಿಯರಿಂಗ್ ಕಾಲೇಜ್ ಗಳಲ್ಲೊಂದಾಗಿ ಗುರಿತಿಸಲ್ಪಡುವ (BMSIT) ಯನ್ನು ಹುಟ್ಟುಹಾಕುವಲ್ಲಿ ಎಚ್.ಎನ್. ಅವರ ಪಾತ್ರ ದೊಡ್ಡದು.

ಎಚ್.ನರಸಿಂಹಯ್ಯನವರಿಗೆ ಸಂದ ಪ್ರಶಸ್ತಿಗಳು

1984 ರಲ್ಲಿ ನರಸಿಂಹಯ್ಯನವರನ್ನು ಕರ‍್ನಾಟಕ ಸರ‍್ಕಾರ ಪದ್ಮಶ್ರೀ ಪ್ರಶಸ್ತಿಗೆ ಶಿಪಾರಸ್ಸು ಮಾಡಿರುತ್ತದೆ. ಆಗಿನ ಪ್ರದಾನಿ ಇಂದಿರಾ ಗಾಂದಿಯವರು ಎಚ್.ಎನ್. ರ ಸಾದನೆ, ಸಮಾಜಕ್ಕೆ ಅವರ ಕೊಡುಗೆಯನ್ನು ಅರಿತು ಪದ್ಮಶ್ರೀ ಬದಲಿಗೆ ‘ಪದ್ಮಬೂಶಣ‘ ಪ್ರಶಸ್ತಿ ನೀಡಿ ಗೌರವಿಸುತ್ತಾರೆ. ಈ ರೀತಿ ಪ್ರದಾನಿ ಪ್ರಶಸ್ತಿಯಲ್ಲಿ ಯಾರಿಗಾದರೂ ಬಡ್ತಿ ನೀಡಿರುವ ಎತ್ತುಗೆಗಳು ಇದಕ್ಕೂ ಮೊದಲಾಗಲಿ ಆನಂತರವಾಗಲಿ ಇಲ್ಲ. ಇಂತಹ ಹೆಗ್ಗಳಿಕೆ ನಮ್ಮ ಎಚ್.ಎನ್. ಅವರದು. ಕರ‍್ನಾಟಕ ಸರ‍್ಕಾರದಿಂದ ರಾಜ್ಯೋತ್ಸವ ಹಾಗೂ ಬಸವ ಪುರಸ್ಕಾರಗಳೂ ಅವರಿಗೆ ಸಂದಿವೆ. ನಾಡೋಜ ಪ್ರಶಸ್ತಿಗೆ ಕೂಡ ಅವರು ಬಾಜನರಾದರು. ವಿಗ್ನಾನ ಕ್ಶೇತ್ರದಲ್ಲಿ ಹೆಸರು ಮಾಡಿದ್ದ ಅಮೇರಿಕಾದ ಪಾಲ್ ಕರ‍್ಟ್ಜ್ ಅವರು ಹುಟ್ಟುಹಾಕಿದ್ದ Committee for the scientific investigation of claims of the paranormal (CSICOP International) ಗೆ fellow ಆಗಿ ಆಯ್ಕೆಯಾದ ಏಕೈಕ ಬಾರತೀಯ ಎಂಬ ಹಿರಿಮೆ ಎಚ್.ಎನ್. ರವರಿಗೆ ಸಲ್ಲುತ್ತದೆ. ಅವರ ಹೊತ್ತಗೆಗಳಾದ ‘ತೆರದ ಮನ‘ ಹಾಗೂ ಆತ್ಮಕತೆ ‘ಹೋರಾಟದ ಹಾದಿ‘ ಗೆ ಸಾಹಿತ್ಯ ಅಕಾಡೆಮಿಯ ಪಾರಿತೋಶಕಬಂದವು. ಜೊತೆಗೆ ದೇಶದ ಹಲವಾರು ಕಾಸಗಿ ಸಂಗ ಸಂಸ್ತೆಗಳು ಅವರಿಗೆ ಗೌರವ ಪುರಸ್ಕಾರಗಳು ನೀಡಿವೆ.

ನರಸಿಂಹಯ್ಯನವರ ಬದುಕು – ಹೋರಾಟದ ಹಾದಿ

ಎಚ್. ಎನ್. ರವರ ಬದುಕು ಒಂದು ಪವಾಡ ಎಂದೇ ಹೇಳಬೇಕು. ನಮ್ಮ ನಾಡಿನ ಒಂದು ಹಳ್ಳಿಯಲ್ಲಿ ಕಡುಬಡತನದಲ್ಲಿ 15 ಅಡಿ ಉದ್ದಗಲದ ಒಂದು ಪುಟ್ಟ ಮರಳಿನ ಮನೆಯಲ್ಲಿ ಹುಟ್ಟಿ. ಅವರು ಹೋರಾಟದಿಂದ ಬದುಕಿನಲ್ಲಿ ತಲುಪಿದ ಮಟ್ಟ, ಮಾಡಿದ ಸಾದನೆ ನಿಜಕ್ಕೂ ಅದ್ವಿತೀಯ. ತಮ್ಮ ಹುಟ್ಟೂರು ಹೊಸೂರಿನಲ್ಲಿ ಒಂದು ಶಾಲೆ ಕಟ್ಟಿ ಊರಿನ ರುಣವನ್ನೂ ತೀರಿಸಿದರು. ಮದುವೆ ಮಾಡಿಕೊಳ್ಳದೆ ತಮ್ಮ ಬದುಕನ್ನೆಲ್ಲಾ ನ್ಯಾಶನಲ್ ಕಾಲೇಜ್ ನ ಒಂದುಪುಟ್ಟ ಕೋಣೆಯಲ್ಲಿ ಕಳೆದು ವಿಗ್ನಾನಕ್ಕೆ, ಶಿಕ್ಶಣಕ್ಕೆ ಕನ್ನಡ ಸಮಾಜಕ್ಕೆ ದುಡಿದ ಎಚ್.ಎನ್. ನಿಜವಾಗಿಯೂ ಕರ‍್ನಾಟಕ ರತ್ನ. 2005 ರ ಜನವರಿ 31 ರಂದು 85 ವರ‍್ಶದ ಹೋರಾಟದ ಬದುಕು ನಡೆಸಿ ಅವರು ನಮ್ಮನ್ನೆಲ್ಲಾ ಅಗಲಿದರು. ಜೂನ್ 2020 ರಲ್ಲಿ ಅವರ ಜನ್ಮಶತಮಾನೋತ್ಸವದಂದು ಸರ‍್ಕಾರ ಅವರನ್ನು ನೆನೆಯಿತು. ಆದರೆ ಅವರನ್ನು, ಅವರ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಸರ‍್ಕಾರ ಹಾಗೂ ಕನ್ನಡ ಸಮಾಜ ಸಂಪೂರ‍್ಣ ಸೋತಿದೆ ಅನ್ನುವುದು ದಿಟ. ಈಗಿನ ಪೀಳಿಗೆಯ ಮಕ್ಕಳಿಗೆ ಅವರ ಪರಿಚಯವೇ ಇಲ್ಲ ಎಂದರೆ ಅದಕ್ಕಿಂತ ದೊಡ್ಡ ದುರಂತ ಬೇರೊಂದಿಲ್ಲ. ಮೂಡನಂಬಿಕೆಗಳನ್ನು ಹೋಗಲಾಡಿಸಿ, ವೈಗ್ನಾನಿಕ ಅರಿವು ಬೆಳೆಸಿಕೊಂಡು, ಪ್ರಶ್ನಿಸದೆ ಏನನ್ನು ಒಪ್ಪದೆ, ನಾವು ಬದುಕು ನಡೆಸುವುದೇ ಎಚ್. ನರಸಿಂಹಯ್ಯನವರಿಗೆ ನಾವು ಕೊಡಬಹುದಾದ ಮರ‍್ಯಾದೆ. ಇಂತಹ ಒಬ್ಬ ಮಹಾನ್ ಸಾದಕನನ್ನು ನಮ್ಮ ನಾಡು ಎಂದೂ ಮರೆಯದಂತೆ ನೋಡಿಕೊಳ್ಳುವ ಹೊಣೆ ಕನ್ನಡಿಗರಾದ ನಮ್ಮೆಲ್ಲರ ಮೇಲಿದೆ.

(ಚಿತ್ರ ಸೆಲೆ: facebook.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ವಿನಯ ಕುಮಾರ್ ಹನುಮಂತಪ್ಪ says:

    ಬಹಳ ಚೆನ್ನಾಗಿ ನಮ್ಮ ಡಾ. ಹೆಚ್ಚ್.ಎನ್. ರವರ ಬಗ್ಗೆ ವಿವರಿಸಿದ್ದೀರಾ, ನಿಮಗೆ ಧನ್ಯವಾದಗಳು.

ಅನಿಸಿಕೆ ಬರೆಯಿರಿ:

%d bloggers like this: