ಲಾಲಿಬೆಲಾ – ಏಕಶಿಲಾ ಚರ‍್ಚುಗಳು

– .

Unique monolithic rock-hewn Church of St. George (Bete Giyorgis) UNESCO World heritage Lalibela Ethiopia.

ವಿಶ್ವದ ಅತಿ ದೊಡ್ಡ ಏಕಶಿಲಾ ಚರ‍್ಚುಗಳ ಸಮುಚ್ಚಯ’ ಎಂದು ಯುನಸ್ಕೋ ವಿಶ್ವ ಪರಂಪರೆಯ ತಾಣದಲ್ಲಿ ದಾಕಲಾಗಿರುವ ಈ ಸ್ತಳ ಇರುವುದು, ಇತಿಯೋಪಿಯಾದ ಹ್ರುದಯ ಬಾಗದಲ್ಲಿ. ಇದನ್ನು ‘ಲಾಲಿಬೆಲಾ’ ಎಂದು ಕರೆಯಲಾಗುತ್ತದೆ. ಇದರಲ್ಲಿ, ಒಂದಲ್ಲಾ, ಎರಡಲ್ಲಾ ಒಟ್ಟಾರೆ ಹನ್ನೊಂದು ಏಕಶಿಲಾ ಚರ‍್ಚುಗಳಿವೆ. ಇದನ್ನು ಯುನಸ್ಕೋದ ವಿಶ್ವ ಪಾರಂಪರಿಕ ತಾಣದಲ್ಲಿ ದಾಕಲಿಸಿದ್ದರೂ, ಅವುಗಳ ಹಿಂದಿರುವ ಹಲವಾರು ನಿರ‍್ಮಾಣ ರಹಸ್ಯಗಳು ಇಂದಿಗೂ ರಹಸ್ಯಗಳಾಗೇ ಉಳಿದಿವೆ!

ಲಾಲಿಬೆಲಾ ಹೆಸರಿನ ಹಿನ್ನೆಲೆ

ಚರ‍್ಚುಗಳ ನಿರ‍್ಮಾಣದ ರಹಸ್ಯಗಳಲ್ಲಿ ಪ್ರಮುಕವಾಗಿರುವುದು,  ಈ ಚರ‍್ಚುಗಳ ನಿರ‍್ಮಾಣದ ಸರಿಯಾದ ಕಾಲಮಾನ. ಕ್ರಿಸ್ತಶಕ ಹದಿಮೂರನೇ ಶತಮಾನದ ಆರಂಬದಲ್ಲಿ ಇತಿಯೋಪಿಯಾವನ್ನು ಆಳಿದ ಗೆಬ್ರೆ ಮೆಸ್ಕೆಲ್ ಲಾಲಿಬೆಲಾನ ಆಳ್ವಿಕೆಯಲ್ಲಿ ಇವುಗಳ ಉತ್ಕನನ ನಡೆಯಿತು ಎಂದು ದಂತಕತೆಗಳಲ್ಲಿ ಉಲ್ಲೇಕ ಇದೆ. ಆದರೆ ಇದಕ್ಕೆ ಪೂರಕ ದಾಕಲೆಗಳು ದೊರೆತಿಲ್ಲ. ಗೆಬ್ರೆ ಮೆಸ್ಕೆಲ್ ಎಂದರೆ ‘ಜೇನು ನೊಣಗಳು ಸಹ ಅವನನ್ನು ರಾಜನೆಂದು ಗುರುತಿಸುತ್ತವೆ’ ಎಂಬುದಾಗಿದೆ.

ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ, ಆಪ್ರಿಕನ್ ಪುರಾತತ್ವ ಶಾಸ್ತ್ರದ ಪ್ರಾದ್ಯಾಪಕ ಡೇವಿಡ್ ಪಿಲಿಪ್ಸನ್ ಪ್ರಕಾರ ಇಲ್ಲಿರುವ ಮಾರ‍್ಕೊರಿಯೋಸ್, ಗೇಬ್ರಿಯಲ್-ರುಪೆಲ್ ಮತ್ತು ದಾನಗೆಲ್ ಚರ‍್ಚುಗಳನ್ನು ಅರ‍್ದ ಸಹಸ್ರಮಾನಕ್ಕೂ ಮುನ್ನವೇ ಒಂದೇ ಬಂಡೆಯಲ್ಲಿ ಕೆತ್ತಲಾಗಿದೆ ಎಂದಿದ್ದಾರೆ. ಲಾಲಿಬೆಲಾ, ಇದರ ಉತ್ಕನನದಲ್ಲಿ ಪ್ರಮುಕ ಪಾತ್ರ ವಹಿಸಿದ ಕಾರಣ, ಅವನ ಮರಣದ ನಂತರ ಈ ಪ್ರದೇಶಕ್ಕೆ ಅವನ ಹೆಸರನ್ನೇ ಇಡಲಾಯಿತು ಎಂಬುದು ವಾಡಿಕೆ.

ಚರ‍್ಚುಗಳ ವಿಂಗಡಣೆ

ಈ ಸಂಕೀರ‍್ಣದಲ್ಲಿರುವ ಹನ್ನೊಂದು ಚರ‍್ಚುಗಳನ್ನು ಉತ್ತರದ ಗುಂಪು ಮತ್ತು ಪೂರ‍್ವದ ಗುಂಪು ಎಂದು ಎರಡು ಬಾಗಗಳಾಗಿ, ವಿಂಗಡಿಸಲಾಗಿದೆ. ಉತ್ತರ ಗುಂಪಿನಲ್ಲಿ ಬೀಟ್ ಮೇದೇನ್ ಆಲೆಮ್, ಬೀಟ್ ಮಾರ‍್ಯಮ್, ಬೀಟ್ ಗೋಲ್ಗೋತಾ ಮಿಕೈಲ್, ಬೀಟ್ ಮೆಸ್ಕೇಲ್, ಬೀಟ್ ದೆನಾಗಲ್ ಎಂಬ ಹೆಸರಿನ ಚರ‍್ಚುಗಳಿವೆ. ಪೂರ‍್ವದ ಗುಂಪಿನಲ್ಲಿ ಬೀಟ್ ಅಮಾನ್ಯುಯಲ್, ಬೀಟ್ ಕುದ್ದಸ್ ಮೆರ‍್ಕೂರೆಸ್, ಬೀಟ್ ಅಬ್ಬಾ ಲಿಬಾನೂಸ್, ಬೀಟ್ ಗೇಬ್ರಿಲ್-ರೆಪಲ್, ಬೀಟ್ ಲೆಹ್ಮನ್‍ ಎಂಬ ಹೆಸರಿನ ಚರ‍್ಚುಗಳಿದ್ದರೆ, ಪಶ್ಚಿಮದಲ್ಲಿ ಸೇಂಟ್ ಜಾರ‍್ಜ್ ಚರ‍್ಚು ಇದೆ. ಈ ಎರಡೂ ಬಾಗಗಳಿಗೂ ಹನ್ನೊಂದು ಮೀಟರ‍್ ಆಳದಲ್ಲಿನ ಓಣಿ ಸಂಪರ‍್ಕ ಕಲ್ಪಿಸಲಾಗಿದೆ. ಇದರಲ್ಲಿರುವ ಚರ‍್ಚುಗಳಲ್ಲಿ ಅತಿ ದೊಡ್ಡದಾದ ಚರ‍್ಚ್  ಎಂದರೆ ಅದು ‘ದಿ ಹೌಸ್ ಆಪ್ ಮೇದೇನ್’ ಚರ‍್ಚ್ ಆಗಿದೆ. ಇದು 10 ಮೀಟರ‍್ (33 ಅಡಿ) ಎತ್ತರ, 33 ಮೀಟರ‍್ (108 ಅಡಿ) ಉದ್ದ ಹಾಗೂ 22 ಮೀಟರ‍್ (72 ಅಡಿ) ಅಗಲವಿದೆ. ಇದರ ಅಳತೆಯನ್ನು ಮನದಲ್ಲಿ ಕಲ್ಪಿಸಿಕೊಂಡರೆ ಚರ‍್ಚಿನ ನಿಜವಾದ ಅಗಾದತೆ ಅರಿವಾಗುತ್ತದೆ ಮತ್ತು ಮೇದೇನ್ ಚರ‍್ಚ್ ಕೆತ್ತಿರುವ ಆ ಏಕಶಿಲೆಯ ಗಾತ್ರದ ಚಿತ್ರಣ ತಿಳಿದು ಬರುತ್ತದೆ. ಈ ಚರ‍್ಚುಗಳಲ್ಲಿ ಒಂದಾದ ಬೆಟ್ ಜಿಯೋರ‍್ಜಿಸ್, ಚರ‍್ಚ್ ಅನ್ನು ಸೇಂಟ್ ಜಾರ‍್ಜ್ಗೆ ಸಮರ‍್ಪಿಸಲಾಗಿದೆ. ಇದಕ್ಕೆ ಕಾರಣ ಇದರ ನಿರ‍್ಮಾಣ ಕಾರ‍್ಯವನ್ನು ಸೇಂಟ್ ನಿರ‍್ದೇಶಿಸಿದರು ಎಂಬ ನಂಬಿಕೆಯಾಗಿದೆ.

ಚರ‍್ಚುಗಳ ನಿರ‍್ಮಾಣದ  ಹಿಂದಿನ ದಂತಕತೆಗಳು

ಇತಿಯೋಪಿಯಾದಲ್ಲಿ ಚರ‍್ಚುಗಳ ನಿರ‍್ಮಾಣದ ಕುರಿತು ದಂತಕತೆಗಳಿವೆ.  ಅದರ ಪ್ರಕಾರ ಒಬ್ಬ ದೇವದೂತ ಚರ‍್ಚುಗಳನ್ನು ನಿರ‍್ಮಿಸಲು ಲಾಲಿಬೆಲಾನನ್ನು ಕೇಳಿಕೊಂಡಾಗ, ಇದರ ನಿರ‍್ಮಾಣದಲ್ಲಿ ಪುರುಶರು ಮತ್ತು ದೇವದೂತರು ಜೊತೆ ಜೊತೆಯಾಗಿ ಕೆಲಸ ನಿರ‍್ವಹಿಸಿದರು ಎಂಬುದಾಗಿದೆ. ಇದರ ಕೆತ್ತನೆಯ ಕೆಲಸದಲ್ಲಿ ಪುರುಶರು ಹಗಲಿನಲ್ಲಿ ಕೆಲಸ ನಿರ‍್ವಹಿಸಿದರೆ, ದೇವದೂತರು ರಾತ್ರಿಯಿಡೀ ಕೆಲಸ ಮಾಡುತ್ತಿದ್ದರಂತೆ. ಈ ಚರ‍್ಚುಗಳನ್ನು ಮೇಲಿನಿಂದ ಕೆಳಕ್ಕೆ ದೊಡ್ಡ ಬಂಡೆಯಲ್ಲಿ ವಿಬಿನ್ನ ಶೈಲಿಯಲ್ಲಿ ಕೆತ್ತಲಾಯಿತು. ಪುರಾಣಗಳ ಪ್ರಕಾರ ಇದರ ನಿರ‍್ಮಾಣಕ್ಕೆ ನಲವತ್ತು ಸಾವಿರ ಜನ, ಇಪ್ಪತ್ತ್ಮೂರು ವರ‍್ಶಗಳು ಕಾಲ ಕೆಲಸ ನಿರ‍್ವಹಿಬೇಕಾಗಿ ಬಂದಿತ್ತು ಎಂಬುದಾಗಿದೆ. ಆದರೆ ಈ ಸಿದ್ದಾಂತಕ್ಕೆ ಪುರಾತತ್ವ ಶಾಸ್ತ್ರಗ್ನರ ಆಕ್ಶೇಪಣೆ ಇದೆ.

ಪುರಾತತ್ವ ಶಾಸ್ತ್ರಗ್ನರ ಅನಿಸಿಕೆ

ಇಶ್ಟು ಅಗಾದವಾದ ಕಾರ‍್ಯಕ್ಕೆ ಅಶ್ಟು ಸಮಯ ಅತ್ಯಲ್ಪವಾಗಿದ್ದು, ದೇವದೂತರು ರಾತ್ರಿ ಪಾಳಿಯಲ್ಲಿ ಕೆತ್ತನೆಯ ಕಾರ‍್ಯ ನಿರ‍್ವಹಿಸಿದರು ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎಂಬುದು ಅವರ ಇಂಗಿತವಾಗಿದೆ. ಈ ಎಲ್ಲಾ ಸಿದ್ದಾಂತಗಳಿಗೆ ಅವರುಗಳ ಅಬಿಮತವೇನೆಂದರೆ – ಪ್ರಸ್ತುತದ ಅತ್ಯಂತ ಗಟ್ಟಿ ಹಾಗೂ ಚೂಪಾದ ಉಳಿ ಹಾಗೂ ಡೈಮಂಡ್ ಬ್ಲೇಡ್ಗಳನ್ನು ಬಳಸಿ, ಕಲ್ಲಿನ ಕೆತ್ತನೆ ಮಾಡಿದರೂ ಸಹ ಅಶ್ಟು ಅಲ್ಪ ಸಮಯದಲ್ಲಿ ಇಶ್ಟೊಂದು ಚರ‍್ಚುಗಳ ನಿರ‍್ಮಾಣ ಅಸಾದ್ಯ ಎನ್ನುವುದಾಗಿದೆ. ಅದಲ್ಲದೇ, ಬೂಮಿಯೊಳಗೆ ಇಶ್ಟು ದೊಡ್ಡ ಪ್ರಮಾಣದ ಚರ‍್ಚುಗಳ ನಿರ‍್ಮಾಣಕ್ಕಾಗಿ, ಬಾರಿ ಪ್ರಮಾಣದ ಮಣ್ಣು ಹಾಗೂ ಚರ‍್ಚಿನ ಒಳಬಾಗದ ಕೆತ್ತನೆಯಲ್ಲಿ ಹೊರಬಂದ ಕಲ್ಲಿನ ಚೂರು ಮತ್ತು ಪುಡಿಯನ್ನು ಸಾಗಿಸಲೇ ಸಾಕಶ್ಟು ಸಮಯ ವ್ಯರ‍್ತವಾಗಿರುತ್ತದೆ ಎಂಬುದು ಸಹ ಅವರ ಲೆಕ್ಕಾಚಾರದಲ್ಲಿ ಸೇರಿದೆ. ಹಾಗಾಗಿ ಇದರ ನಿರ‍್ಮಾಣದ ಪೂರ‍್ಣ ರಹಸ್ಯ ಇನ್ನೂ ಬಯಲಾಗಬೇಕಿದೆ.

ಲಾಲಿಬೆಲಾ – ವಿಶಿಶ್ಟ ಅನುಬವ ನೀಡುವ ಸ್ತಳ

ಲಾಲಿಬೆಲಾ ಪ್ರವಾಸಿಗರಿಗೆ ಬೇಟಿ ನೀಡಲು ಒಂದು ಅಸಾದಾರಣ ಸ್ತಳವಾಗಿದೆ. ಇಂತಹ ತಾಣ ವಿಶ್ವದಲ್ಲಿ ಬೇರೆಲ್ಲೂ ಕಾಣಿಸದಂತಹ ವಿಶಿಶ್ಟ ಅನುಬವನ್ನು ನೀಡುತ್ತದೆ. ಇಂತಹ ಅದ್ಬುತ ಕಟ್ಟಡಗಳ ಉತ್ಕನನ, ಅನೇಕ ಪ್ರಮುಕ ಪ್ರಶ್ನೆಗಳಿಗೆ ನಾಂದಿ ಹಾಡಿದೆ. ಅಂದಿನ ದಿನಗಳಲ್ಲಿ ಅತ್ಯಂತ ಸರಳ ಸಾದನ ಬಳಸಿ ಇಂತಹ ದೊಡ್ಡ ಕಟ್ಟಡಗಳನ್ನು ನಿರ‍್ಮಿಸಿದ್ದಾದರೂ ಹೇಗೆ? ಅಶ್ಟೊಂದು ಬಾರಿ ಪ್ರಮಾಣದ ಮಣ್ಣು ಮತ್ತು ಕಲ್ಲನ್ನು ಸಾಗಿಸಿದ್ದಾದರೂ ಎಲ್ಲಿಗೆ?. ದೇವದೂತರು ಬಂದಿದ್ದು, ಪುರುಶರ ಜೊತೆ ಜೊತೆಯಾಗಿ ಕೆಲಸ ನಿರ‍್ವಹಿಸಿದರು ಎಂಬುದನ್ನು ನಂಬಲು ಅಸಾದ್ಯವಲ್ಲವೆ? ಇವೆಲ್ಲವೂ ಉತ್ತರಗಳು ಸಿಗದ ಪ್ರಶ್ನೆಗಳಾಗಿವೆ. ಇತಿಹಾಸದ ಒಡಲನ್ನು ಮೊಗೆಯುತ್ತಾ ಹೋದಲ್ಲಿ ಇನ್ನೂ ಇಂತಹ ಅನೇಕ ಉತ್ತರವಿಲ್ಲದ ಪ್ರಶ್ನೆಗಳು ಉದ್ಬವಿಸುತ್ತವೆ ಹಾಗೂ ಅವುಗಳಿಗೆ  ಕಾಣುವ ಉತ್ತರಗಳು ಇನ್ನೂ ಗೋಜಲಾಗುತ್ತಾ ಸಾಗುವುದು.

(ಮಾಹಿತಿ ಸೆಲೆ: ancient-origins.netethiopiantour.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: