ಚಮರೆಲ್ – ಏಳು ಬಣ್ಣಗಳ ಬೂಮಿ

– .

ಮಾರಿಶಸ್ ನಲ್ಲಿರುವ ಏಳು ಬಣ್ಣದ ಬೂಮಿಯು ನೈಸರ‍್ಗಿಕ ವಿದ್ಯಮಾನವಾಗಿದ್ದು, ಪ್ರಮುಕ ಪ್ರವಾಸಿ ಆಕರ‍್ಶಣೆಯಾಗಿದೆ. ಬಸಾಲ್ಟಿಕ್ ಲಾವಾ ಮಾರ್‍ಪಾಟಾಗಿ ಜೇಡಿ ಮಣ್ಣಿನ ಕನಿಜಗಳಾಗಿ ಇಲ್ಲಿನ ಬಣ್ಣಗಳು ವಿಕಸನಗೊಂಡಿವೆ. ಇದು ಮರಳು ದಿಬ್ಬಗಳಿಂದ ಕೂಡಿದ ಸಣ್ಣ ಪ್ರದೇಶವಾಗಿದ್ದು, ಏಳು ವಿಬಿನ್ನ ಬಣ್ಣಗಳ ಮರಳನ್ನು ಒಳಗೊಂಡಿದೆ (ಕೆಂಪು, ಕಂದು, ನೇರಳೆ, ಹಸಿರು, ನೀಲಿ, ನೇರಳೆ ಮತ್ತು ಹಳದಿ).

ಈ ಮರಳಿನ ದಿಬ್ಬಗಳು ಉಶ್ಣವಲಯದ ಹವಾಮಾನ ಪರಿಸ್ತಿತಿಗಳಿಂದಾಗಿ ಉಂಟಾಗಿವೆ. ಸಿಲಿಕಾನ್ ಡೈಆಕ್ಸೈಡ್ ನಂತಹ ನೀರಿನಲ್ಲಿ ಕರಗುವ ಅಂಶಗಳು ಮಣ್ಣಿನಿಂದ ತೊಳೆಯಲ್ಪಟ್ಟ ಬಳಿಕ ಉಳಿದ ಕಪ್ಪು ಕಬ್ಬಿಣದಿಂದ ಕೆಂಪು ಮತ್ತು ಅಲ್ಯೂಮಿನಿಯಂ ಆಕ್ಸೈಡ್ಗಳಿಂದಾಗಿ ನೀಲಿ ಮತ್ತು ನೇರಳೆ ಬಣ್ಣಗಳು ಉಂಟಾಗಿ ಇಂತಹ ನೈಸರ‍್ಗಿಕ ಅದ್ಬುತ ಸ್ರುಶ್ಟಿಯಾಗಿದೆ. ಹೀಗೆ ಬೇರೆ ಬೇರೆ ರಸಾಯನಿಕಗಳ ಸಂಯೋಜನೆಗಳಿಂದಾಗಿ ವಿವಿದ ಬಣ್ಣಗಳು ಅಬಿವ್ರುದ್ದಿಯಾಗಿವೆ.

ಇಲ್ಲಿನ ಬೇರೆ ಬೇರೆ ಬಣ್ಣದ ಮರಳನ್ನು ಒಟ್ಟಿಗೆ ಬೆರೆಸಿದರೆ, ಅವು ಅಂತಿಮವಾಗಿ ಪ್ರತ್ಯೇಕ ಪದರಗಳಾಗಿ ನೆಲೆಗೊಳ್ಳುತ್ತದೆ. ಕಳೆದ ಹಲವು ಸಹಸ್ರಮಾನಗಳಲ್ಲಿ, ದೊಡ್ಡ ಕಲ್ಲುಗಳು ಪುಡಿಯಾಗಿ ಮರಳಾಗಿ ಮಾರ್‍ಪಾಟಾಗಿದೆ. ಈ ಮರಳು ವಿಬಿನ್ನ ಪದರಗಳಾಗಿ ಹೊಂದಿಕೊಳ್ಳುವ ಅದ್ಬುತ ಗುಣವನ್ನು ಹೊಂದಿದೆ. ಏಳು ಬೇರೆ ಬಣ್ಣಗಳ ಮರಳನ್ನು ತೆಗೆದುಕೊಂಡು ಅವುಗಳನ್ನು ಒಟ್ಟಿಗೆ ಬೆರೆಸಿದರೆ, ಕೆಲವು ವರುಶಗಳಲ್ಲಿ ಅದು ಅಂತಿಮವಾಗಿ ವರ‍್ಣರಂಜಿತ ವರ‍್ಣಪಟಲವಾಗಿ ಪ್ರತ್ಯೇಕಗೊಳ್ಳುತ್ತವೆ, ಪ್ರತಿ ಪ್ರತ್ಯೇಕ ಬಣ್ಣದ ಮರಳು ತನ್ನದೇ ಬಣ್ಣದ ಮರಳಿನ ಜೊತೆಗೆ ಮತ್ತೆ ಸೇರಿಕೊಳ್ಳುತ್ತದೆ. ಕಾಮನಬಿಲ್ಲಿನ ಹಲವು ಬಣ್ಣಗಳು ಇರುವ ಹಾಗೆ ಈ ಮರಳಿನ ಸಾಲುಗಳು ಕಾಣುತ್ತವೆ.

ಬೂಮಿಯು ಮೊದಲು ಬಿಸಿಲು-ಮಳೆಗೆ ತೆರೆದುಕೊಂಡಾಗ, ಬೆಟ್ಟಗಳ ಕೊರೆತದಿಂದಾಗಿ ಹಲವು ಪದರಗಳಂತಹ ರಚನೆಯು ಉಂಟಾಯಿತು. ಬೆಟ್ಟಗಳ ಮೇಲೆ ಈ ಪದರಗಳ ನೆರಳುಗಳು ಕಾಣುತ್ತವೆ, ಇದೇ ಬಣ್ಣಗಳ ಬ್ರಮೆಯನ್ನು ಸ್ರುಶ್ಟಿಸುತ್ತದೆ. ಆದರೆ ಕೂಡಲೇ ಬಣ್ಣಗಳು ನಿಜ ಮತ್ತು ನೆರಳುಗಳು ಬ್ರಮೆ ಎಂದು ತಿಳಿದುಬರುತ್ತದೆ.

ಈ ಬಣ್ಣದ ಬೂಮಿಯನ್ನು ನೋಡಲು ಸೂರ‍್ಯೋದಯ ಅತ್ಯುತ್ತಮ ಸಮಯ. ಬಹು-ಬಣ್ಣದ ಚಂದ್ರನಂತಹ ಬೂದ್ರುಶ್ಯದ ರೋಲಿಂಗ್ ದಿಬ್ಬಗಳಿಂದ ಬೂವಿಜ್ನಾನಿಗಳೂ ಅಚ್ಚರಿಗೊಂಡಿದ್ದಾರೆ. ದಾರಾಕಾರ ಮಳೆ ಮತ್ತು ಪ್ರತಿಕೂಲ ಹವಾಮಾನದ ಹೊರತಾಗಿಯೂ ಕೆಂಪು, ಕಂದು, ನೇರಳೆ, ಹಸಿರು, ನೀಲಿ, ನೇರಳೆ ಮತ್ತು ಹಳದಿ ಬಣ್ಣಗಳು ಎಂದಿಗೂ ಸವೆದು ಹೋಗುವುದಿಲ್ಲ.

ಕಲರ‍್ಡ್ ಅರ‍್ತ್ ಆಪ್ ಚಮರೆಲ್ 1960 ರ ದಶಕದಿಂದಲೂ ಮಾರಿಶಸ್ ನ ಪ್ರಮುಕ ಪ್ರವಾಸಿ ಆಕರ‍್ಶಣೆಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ, ದಿಬ್ಬಗಳನ್ನು ಮರದ ಬೇಲಿಯಿಂದ ರಕ್ಶಿಸಲಾಗಿದ್ದು, ಪ್ರವಾಸಿಗಳು ಅವುಗಳ ಮೇಲೆ ಏರಲು ಅನುಮತಿಸಲಾಗುವುದಿಲ್ಲ, ಆದರೂ ಬೇಲಿಯ ಉದ್ದಕ್ಕೂ ಇರಿಸಲಾಗಿರುವ ವೀಕ್ಶಣಾ ಹೊರಟಾಣೆಗಳಿಂದ ದ್ರುಶ್ಯಾವಳಿಗಳನ್ನು ನೋಡಬಹುದು. ಈ ಪ್ರದೇಶದಲ್ಲಿನ ಕ್ಯೂರಿಯೊ ಅಂಗಡಿಗಳು ಬಣ್ಣದ ಬೂಮಿಯಿಂದ ತುಂಬಿದ ಸಣ್ಣ ಗಾಜಿನ ಟ್ಯೂಬ್ಗಳನ್ನು ಮಾರಾಟ ಮಾಡುತ್ತವೆ. ಆವರಣದಲ್ಲಿ, ಮಕ್ಕಳ ಆಟದ ಮೈದಾನ ಮತ್ತು ಕೆಲವು ದೈತ್ಯ ಆಮೆಗಳನ್ನು ಸಹ ಕಾಣಬಹುದಾಗಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: wikipedia.org, mauritiusattractions.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks