ವಿಶ್ವದ ಅತ್ಯಂತ ದುಬಾರಿ ಹೂದಾನಿ
– ಕೆ.ವಿ.ಶಶಿದರ.
ಚೀನಾ ದೇಶದ ಬಹಳ ಪ್ರಸಿದ್ದ ಕ್ವಿಂಗ್ ರಾಜವಂಶದ ಚಕ್ರವರ‍್ತಿ ಕಿಯಾನ್ಲಾಂಗ್ 1735 ರಿಂದ 1796ರವರೆಗೆ ಆಳ್ವಿಕೆ ನಡೆಸಿದ. ಈ ಕಾಲದ್ದೆಂದು ಹೇಳಲಾದ ಹೂದಾನಿ ಇತ್ತೀಚೆಗೆ ನಡೆದ ಹರಾಜಿನಲ್ಲಿ ಅತ್ಯಂತ ದುಬಾರಿ ಬೆಲೆಗೆ, ಅಂದರೆ 83 ಮಿಲಿಯನ್ ಪೌಂಡ್ (ಸುಮಾರು 800 ಕೋಟಿಗೂ ಹೆಚ್ಚು) ಬೆಲೆಗೆ ಮಾರಾಟವಾಗಿದೆ. ಈ ಹೂದಾನಿ ಇಶ್ಟು ದುಬಾರಿ ಬೆಲೆಗೆ ಮಾರಾಟವಾಗಬೇಕಾದರೆ ಅದರಲ್ಲೇನಾದರೂ ವಿಶೇಶತೆ ಇರಲೇಬೇಕಲ್ಲವೇ? ಈ ಹೂದಾನಿಯ ಮೇಲೆ ಮೀನು ಮತ್ತು ಹೂವಿನ ಚಿತ್ರಗಳನ್ನು ಬಿಡಿಸಲಾಗಿದೆ. ಹೂದಾನಿಯ ಕುತ್ತಿಗೆಯ ಸುತ್ತಾ ಹೂವುಗಳು, ನಡು ಬಾಗದಲ್ಲಿ ನೀರಿನಲ್ಲಿ ಈಜುತ್ತಿರುವ ಮೀನುಗಳನ್ನು ಅತ್ಯಂತ ಸುಂದರವಾಗಿ ಬಿಡಿಸಲಾಗಿದೆ. ಅವುಗಳನ್ನು ಬಿಡಿಸಲು ಉಪಯೋಗಿಸಿರುವ ಬಣ್ಣಗಳೂ ಸಹ ಕಣ್ಮನ ಸೆಳೆಯುತ್ತವೆ. ಪಿಂಗಾಣಿಯ ಈ ಹೂದಾನಿ ಅದರ ಶುದ್ದತೆಗೆ ಹಾಗೂ ಸೌಂದರ‍್ಯಕ್ಕೆ ಹೆಸರುವಾಸಿ. ಇದನ್ನು ಕಂಡ ಪ್ರತಿಯೊಬ್ಬರು ವ್ಯಾಪಕವಾಗಿ ಪ್ರಶಂಸಿಸಿದ್ದಾರೆ.
ಕ್ವಿಂಗ್ ರಾಜವಂಶದ ಹದಿನಾರು ಇಂಚಿನ ಈ ಪಿಂಗಾಣಿ ಹೂದಾನಿ ವಿಶ್ವದ ಅತ್ಯಂತ ದುಬಾರಿ, ಪ್ರಾಚೀನ ವಸ್ತುಗಳಲ್ಲಿ ಒಂದಾಗಿದೆ. ಇದರ ಮೇಲೆ ಕೆತ್ತಿರುವ ಗೋಲ್ಡನ್ ಪಿಶ್, ಅದಕ್ಕೆ ಉಪಯೋಗಿಸಿರುವ ಆಕಾಶ ನೀಲಿ ಬಣ್ಣ ಮತ್ತು ಕ್ವಿಂಗ್ ಚಕ್ರಾದಿಪತ್ಯದ ಹಳದಿ ಬಣ್ಣಗಳು ಅದರ ಮೆರುಗನ್ನು ಹೆಚ್ಚಿಸಿದೆ. ಬಣ್ಣಗಳ ಸಂಯೋಜನೆ ಸಹ ಕಣ್ಣಿಗೆ ಹಿತವಾಗಿದೆ. ಎರಡು ಶತಮಾನವಾದರೂ, ಇಂದಿಗೂ ಈ ಹೂದಾನಿಯ ಮೇಲಿರುವ ಆಕಾಶ ನೀಲಿ ಮತ್ತು ಹಳದಿ ಬಣ್ಣ ಮಸುಕಾಗದಿರುವುದು ಇದರ ಶ್ರೇಶ್ಟತೆಗೆ ಹಿಡಿದ ಕನ್ನಡಿ. ಇದು ತಯಾರಾದ ಕಾಲದಲ್ಲಿ ಚೀನಾ ಪಿಂಗಾಣಿ ವಸ್ತುಗಳ ತಯಾರಿಕೆಯಲ್ಲಿ ಮಂಚೂಣಿಯಲ್ಲಿತ್ತು. ಕಿಯಾನ್ಲಾಂಗ್ ದೊರೆಯ ವೈಯುಕ್ತಿಕ ಸಂಗ್ರಹಕ್ಕಾಗಿ ತಯಾರಿಸಲ್ಪಟ್ಟ ಈ ಹೂದಾನಿಯ ಮೇಲೆ ಸಾಮ್ರಾಜ್ಯಶಾಹಿಯ ಮುದ್ರೆ ಸಹ ಇದೆ. ಇದನ್ನು ಪರಿಶೀಲಿಸಿದ ಪುರಾತತ್ವ ತಗ್ನರು ಇದು ಅಸಾದಾರಣ ತುಣುಕು ಎಂದು ವರ‍್ಗೀಕರಿಸಿದ್ದಾರೆ.
ಈ ಹೂದಾನಿ ದೊರಕಿದ್ದು ಇಂಗ್ಲೆಂಡಿನ ಲಂಡನ್ ಬಳಿಯಿರುವ ಪಿನ್ನರ‍್‌ನಲ್ಲಿ. ಪಿನ್ನರ‍್ ಲಂಡನ್ನಿನಿಂದ ಸರಿ ಸುಮಾರು ಹನ್ನೆರಡು ಮೈಲಿಗಳಶ್ಟು ದೂರವಿರುವ ಸಣ್ಣ ಪಟ್ಟಣ. ಚೀನಾ ದೇಶದ ಈ ಹೂದಾನಿ ಇಂಗ್ಲೆಂಡಿನ ಈ ಸಣ್ಣ ಪಟ್ಟಣಕ್ಕೆ ಬಂದಿದ್ದಾದರೂ ಹೇಗೆ ಎನ್ನುವ ವಿಚಾರಕ್ಕೆ ಯಾವುದೇ ಪುರಾವೆ ದೊರಕಿಲ್ಲ, ಈ ವಿಶಯ ಇನ್ನೂ ನಿಗೂಡವಾಗಿದೆ. ಲಂಡನ್ನಿನ ಪಿನ್ನರ‍್ ಉಪನಗರದಲ್ಲಿ ತನ್ನ ಒಡಹುಟ್ಟಿದವಳ ಮನೆಯನ್ನು ಸ್ವಚ್ಚಗೊಳಿಸುವಾಗ ಸಿಕ್ಕ ಈ ಹೂದಾನಿಯನ್ನು ಅಕ್ಕ ತೆಗೆದಿರಿಸಿದ್ದಳು. ಇದು ವರ‍್ಶಾನುಗಟ್ಟಲೆ ಯಾರ ಕಣ್ಣಿಗೂ ಗೋಚರಿಸದೆ ಅನಾತವಾಗಿತ್ತು. ಬೈನ್ ಬ್ರಿಡ್ಜಸ್ ನವರು ಇದನ್ನು ಹರಾಜು ಹಾಕಿದಾಗ ದಾಕಲೆ ಮೊತ್ತಕ್ಕೆ ಮಾರಾಟವಾಗಿ ವಿಶ್ವ ವಿಕ್ಯಾತಿಯಾಯಿತು.
(ಮಾಹಿತಿ ಮತ್ತು ಚಿತ್ರ ಸೆಲೆ: justcollecting.com, alux.com)
ಇತ್ತೀಚಿನ ಅನಿಸಿಕೆಗಳು