ವಿಶ್ವದ ಅತಿ ಉದ್ದದ ಕುದಿಯುವ ನದಿ

– .

ವಿಶ್ವದ ಅತಿ ಉದ್ದದ ಕುದಿಯುವ ನೀರಿನ ನದಿ ಇರುವುದು ಪೆರುವಿನ ಹ್ರುದಯ ಬಾಗದಲ್ಲಿರುವ ಮಳೆಕಾಡಿನಲ್ಲಿ. ಈ ಕುದಿಯುವ ನದಿಯು ಸರಿ ಸುಮಾರು ನಾಲ್ಕು ಮೈಲಿಗಳಶ್ಟು ದೂರ ಹರಿಯುತ್ತದೆ. ಇಶ್ಟು ಉದ್ದದಲ್ಲಿ ಅದು, ಅತಿ ಹೆಚ್ಚು ಅಂದರೆ ಎಂಬತ್ತು ಅಡಿಯಶ್ಟು ಅಗಲ ಹಾಗೂ ಹದಿನಾರು ಅಡಿಯಶ್ಟು ಆಳ ಇರುವುದು ಕಂಡು ಬಂದಿದೆ. ಈ ನದಿಯ ನೀರು ಕುದಿಯಲು ಅದು ಜ್ವಾಲಾಮುಕಿಯ ಬಳಿ ಇರಬಹುದು ಎಂಬ ಸಂಶಯವಿದ್ದಲ್ಲಿ ಅದನ್ನು ಮನದಿಂದ ತೆಗೆದುಬಿಡಿ. ಏಕೆಂದರೆ, ಹತ್ತಿರದ ಸಕ್ರಿಯ ಜ್ವಾಲಾಮುಕಿ ಇರುವುದು ಕನಿಶ್ಟ ಏಳು ನೂರು ಕಿಲೋಮೀಟರ‍್ ದೂರದಲ್ಲಿ.

‘ಕುದಿಯುವ ನದಿ’ ಎಂದು ಕರೆಯಲ್ಪಡುವ ಈ ನದಿಯ ಬಳಿ ಇನ್ನೆರೆಡು ಬಿಸಿ ನೀರಿನ ನದಿಗಳಿದ್ದು ಅವುಗಳಲ್ಲಿ ಒಂದು ಉಪ್ಪುನೀರಿನ ನದಿಯಾದರೆ, ಮತ್ತೊಂದು ಸಿಹಿನೀರಿನದ್ದು. ಇವೆರೆಡು ಕುದಿಯುವ ನದಿಗಿಂತ ಬಹಳ ಸಣ್ಣವು. ಜ್ವಾಲಾಮುಕಿಯಿಲ್ಲದ ಪ್ರದೇಶದಲ್ಲಿ ಇವುಗಳಿರುವುದು ಅಸಾಮಾನ್ಯ. ಕುದಿಯುವ ನದಿಗೆ, ಬಿಸಿ ಬಿಸಿಯಾದ ನೀರು ಹರಿದು ಬರುವುದು ಅದು ಹರಿಯುವ ಪ್ರದೇಶದಲ್ಲಿರುವ ಬಿಸಿ ನೀರಿನ ಬುಗ್ಗೆಗಳಿಂದ. ಇದರಲ್ಲಿ ಹಲವು ಕುದಿಯುವ ನೀರಿನ ಬುಗ್ಗೆಗಳಾದರೆ ಮತ್ತೆ ಕೆಲವು ಬಿಸಿ ನೀರಿನ ಬುಗ್ಗೆಗಳು. ಆ ಬುಗ್ಗೆಗಳಿಂದ ಹರಿದು ಬರುವ ನೀರಿನ ಕಾವು 200 ಡಿಗ್ರಿ ಪ್ಯಾರನ್ಹೀಟ್ (ಸುಮಾರು 93 ಡಿಗ್ರಿ ಸೆಲ್ಸಿಯಸ್) ಇರುವುದು ಕಂಡು ಬಂದಿದೆ. ಈ ಕುದಿಯುವ ನದಿ ಹರಿಯುವಾಗ ಹಲವಾರು ಸಣ್ಣ ಜಲಪಾತಗಳು ಸ್ರುಶ್ಟಿಯಾಗಿವೆ. ಅದರಲ್ಲಿ ಇಪ್ಪತ್ತು ಅಡಿ ಆಳದಲ್ಲಿನ ಕೊಳಕ್ಕೆ ದುಮುಕುವ ಜಲಪಾತ ಪ್ರಮುಕವಾದದ್ದು. ಕೊಳದ ನೀರೂ ಸಹ ಅತಿ ಬಿಸಿಯಾಗಿರುವುದಾಗಿ ಕಂಡು ಬಂದಿದೆ.

ಕುದಿಯುವ ನದಿಯು ಸರಿ ಸುಮಾರು ಒಂಬತ್ತು ಕಿಲೋಮೀಟರ‍್ (5.5 ಮೈಲಿ) ಉದ್ದವಿದ್ದು, ಅದರಲ್ಲಿ ಕೊನೆಯ 3.8 ಕಿಲೋಮೀಟರ‍್ ನಲ್ಲಿ ನೀರು ಅತ್ಯಂತ ಬಿಸಿಯಾಗಿರುತ್ತದೆ. ಅದರ ಮೇಲಿನಿಂದ ಹೊರ ಹೊಮ್ಮುವ ಆವಿಯೇ ಇದಕ್ಕೆ ಸಾಕ್ಶಿ. ಹರಿಯುವ ಕೆಲವು ಸ್ತಳಗಳಲ್ಲಿ ನೀರಿನ ಉಶ್ಣಾಂಶ ಬಹಳ ಬಿಸಿಯಾಗಿದ್ದು, ಅಪ್ಪಿ ತಪ್ಪಿ ಅದರಲ್ಲಿ ಬಿದ್ದ ಪ್ರಾಣಿಗಳು ಜೀವಂತವಾಗಿ ಬೆಂದು ಹೋಗುತ್ತವೆ ಎಂಬ ಅಂಶವನ್ನು ಬೂ ವಿಗ್ನಾನಿ ಆಂಡ್ರೆಸ್ ರುಜೊ ತಿಳಿಸಿದ್ದಾರೆ. ತಲೆತಲಾಂತರದಿಂದ ಸ್ತಳೀಯರು ಇದನ್ನು ‘ಶನಾಯ್ ಟಿಂಪಿಸ್ಕಾ’ ಎನ್ನುತ್ತಿದ್ದರಂತೆ. ಇದರರ‍್ತ ‘ಸೂರ‍್ಯನ ಶಾಕದಿಂದ ಬಿಸಿಯಾದದ್ದು’ ಎಂದು. ಅನೇಕ ದಂತಕತೆಗಳು, ಆದ್ಯಾತ್ಮಿಕತೆ ಹಾಗೂ ಅತೀಂದ್ರಿಯಗಳ ಸಂಗಮದಿಂದ ಆವ್ರುತವಾಗಿರುವ ಈ ಕುದಿಯುವ ನದಿಯನ್ನು ಸ್ತಳೀಯರು ಪವಿತ್ರ ಸ್ತಳವೆಂದು ಪರಿಗಣಿಸಿದ್ದಾರೆ.

ಸ್ಯಾಂಟುವಾರಿಯೊ ಹುಯಿಸ್ಟೀನ್ ಮತ್ತು ಮಾಯಾಂಟಿಯಾಕು ಎಂಬ ಎರಡು ಸ್ತಳೀಯ ಸಮುದಾಯದವರು ಈ ನದಿಯ ದಡದಲ್ಲಿ ವ್ಯಾಪಕವಾಗಿ ವಸಾಹತುವನ್ನು ಕಂಡುಕೊಂಡಿದ್ದಾರೆ. ಅವರುಗಳು ಇದನ್ನು ಅತ್ಯಂತ ಪವಿತ್ರ ಹಾಗೂ ಆದ್ಯಾತ್ಮಿಕ ಶಕ್ತಿಗಳ ತಾಣ ಎಂದು ಪರಿಗಣಿಸಿದ್ದಾರೆ. ಅತ್ಯಂತ ಶಕ್ತಿಶಾಲಿ ವೈದ್ಯರು ಮಾತ್ರ ಇಲ್ಲಿನ ಆತ್ಮಗಳೊಂದಿಗೆ ಸಂವಹನ ನಡೆಸಲು ಬೇಟಿ ನೀಡುತ್ತಾರೆ. ಈ ಸಂವಹನದಲ್ಲಿ ಅವರುಗಳು ಗುಣಪಡಿಸುವ ರಹಸ್ಯವನ್ನು ಮತ್ತು ಅದರ ಆಚರಣೆಗಳ ಬಗ್ಗೆ ತಿಳಿಯುತ್ತಾರೆ ಎಂದು ಸ್ತಳೀಯರು ನಂಬಿದ್ದಾರೆ. ಈ ನದಿಯ ನೀರಿಗೆ ಅನೇಕ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದೆ ಎಂದು ಪ್ರತೀತಿಯಿದೆ.

ಈ ಅತ್ಯಂತ ಉದ್ದದ ಕುದಿಯುವ ನೀರಿನ ನದಿ ಎದುರಿಸುತ್ತಿರುವ ಅತಿ ದೊಡ್ಡ ಅಪಾಯವೆಂದರೆ ಅದರ ಸುತ್ತ ಮುತ್ತಲಿನ ಅರಣ್ಯ ನಾಶ. ಇದರ ಬಗ್ಗೆ ಸೂಕ್ತ ಕ್ರಮ ಜರುಗಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಂಪೂರ‍್ಣವಾಗಿ ಈ ಕುದಿಯುವ ನದಿ ಇತಿಹಾಸದ ಪುಟ ಸೇರುವುದರಲ್ಲಿ ಅನುಮಾನ ಇಲ್ಲ ಎನ್ನುತ್ತಾರೆ ರುಜೊ. ಕುದಿಯುವ ನದಿಯನ್ನು ಪೆರೂವಿಯನ್ ರಾಶ್ಟ್ರೀಯ ಸ್ಮಾರಕವೆಂದು ಗೋಶಿಸುವುದು, ಇದರ ಸುತ್ತ ಮುತ್ತಲಿನ ಕಾಡಿನ ಸಂರಕ್ಶಣೆ, ಜವಾಬ್ದಾರಿಯುತ ಪ್ರವಾಸೋದ್ಯಮವನ್ನು ಉತ್ತೇಜಿಸುವುದು, ಈ ಎಲ್ಲಾ ಕಾರ‍್ಯಕ್ರಮಗಳನ್ನು ಅನುಶ್ಟಾನಗೊಳಿಸಿದಲ್ಲಿ ಮಾತ್ರ ಇದನ್ನು ರಕ್ಶಿಸಬಹುದು ಎಂಬುದು ಈ ನದಿ ಯೋಜನೆಯ ರೂವಾರಿ ರುಜೊ ಆಶಯ.

ಈ ಅತ್ಯಂತ ವಿಶಿಶ್ಟ ನದಿಗೆ ಬೇಟಿ ನೀಡ ಬಯಸುವ ಪ್ರವಾಸಿಗರು ನೇರವಾಗಿ boilingriver.org‌ ಅನ್ನು ಸಂಪರ‍್ಕಿಸಲು ಶಿಪಾರಸ್ಸು ಮಾಡಲಾಗಿದೆ. ಈ ತಾಣದಲ್ಲಿ ಪ್ರವಾಸಿಗರಿಗೆ ಬೇಕಾದ ಪ್ರಯಾಣದ ವಿವರ, ಸುರಕ್ಶತಾ ಸಲಹೆ, ಮತ್ತು ಸಂಬಾವ್ಯ ಅಂತರ‍್ಗತ ಅಪಾಯಗಳ ಬಗ್ಗೆ ಎಚ್ಚರಿಕೆ ದೊರೆಯುತ್ತದೆ. ಆಯತಪ್ಪಿ ಇಲ್ಲಿಯ ನೀರಿನಲ್ಲಿ ಬಿದ್ದರೆ ಕ್ಶಣ ಮಾತ್ರದಲ್ಲಿ ಅತಿ ಗಂಬಿರವಾದ ಎರಡನೇ ಮತ್ತು ಮೂರನೇ ಹಂತದ ಸುಟ್ಟ ಗಾಯಕ್ಕೆ ತುತ್ತಾಗಬೇಕಾತ್ತದೆ. ವೈಯುಕ್ತಿಕ ಸುರಕ್ಶತೆಯ ಸಂಪೂರ‍್ಣ ಜವಾಬ್ದಾರಿ ಪ್ರವಾಸಿಗರದ್ದು ಆಗಿರುತ್ತದೆ ಎಂಬ ಅಂಶವನ್ನು ತಿಳಿಸಲು ಅವರುಗಳು ಮರೆಯುವುದಿಲ್ಲ. ಈ ಕಾಡಿನ ಪ್ರವೇಶ ಸಹ ಪ್ರವಾಸಿಗರದ್ದೇ ಜವಾಬ್ದಾರಿ. ಇಲ್ಲಿ ನಡೆದಾಡಲು ಹಲಗೆಗಳಿಲ್ಲ, ಬೀಳದಂತೆ ಸುರಕ್ಶಿತವಾಗಿ ನಡೆಯಲು ಕೈಹಿಡಿಯಾಗಲಿ, ಆಸರೆಗಾಗಿ ಹಗ್ಗಗಳಾಗಲಿ ಇಲ್ಲ. ಕುದಿಯುವ ನದಿಯು ಒಂದು ರೀತಿಯಲ್ಲಿ ಸ್ವೇಚ್ಚಾಚಾರಿ, ಹಾಗಾಗಿ ಅದಕ್ಕೆ ಯಾವುದೇ ಕಡಿವಾಣ ಇಲ್ಲ. ಇದರಿಂದಾಗಿ ಪ್ರವಾಸಿಗರಾರೂ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂದು ಎಚ್ಚರಿಕೆ ನೀಡಲಾಗುತ್ತದೆ.

(ಮಾಹಿತಿ ಮತ್ತು ಚಿತ್ರ ಸೆಲೆ: nationalgeographic.comatlasobscura.com, sciencealert.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Raghuramu N.V. says:

    ಉಪಯುಕ್ತ ಮಾಹಿತಿ. ವಂದನೆಗಳು.

ಅನಿಸಿಕೆ ಬರೆಯಿರಿ: