ಟೊಮೋಟೊ ಆಮ್ಲೇಟ್ ಸ್ಯಾಂಡ್ ವಿಚ್
– ಸವಿತಾ.
ಸ್ಯಾಂಡ್ ವಿಚ್ ಮಾಡಲು ಬೇಕಾಗುವ ಸಾಮಾನುಗಳು
- ಬ್ರೆಡ್ ಹೋಳು – 6
- ಬೆಣ್ಣೆ – 5/6 ಚಮಚ
- ಗಜ್ಜರಿ ತುರಿ – 1 ಬಟ್ಟಲು
- ಸೌತೆಕಾಯಿ ತುರಿ – 1 ಬಟ್ಟಲು
- ಈರುಳ್ಳಿ ಹೋಳು – 1 ಬಟ್ಟಲು
- ಟೊಮೋಟೊ ಹೋಳು – 1 ಬಟ್ಟಲು
- ಚೀಸ್ ತುರಿ – (ಬೇಕಾದರೆ)
- ಎಲೆ ಕೋಸು ತುರಿ – (ಇದ್ದರೆ)
ಟೊಮೋಟೊ ಆಮ್ಲೇಟ್ ಮಾಡಲು ಬೇಕಾಗುವ ಸಾಮಾನುಗಳು
- ಟೊಮೋಟೊ – 3
- ಬೆಳ್ಳುಳ್ಳಿ ಎಸಳು – 4
- ಹಸಿಮೆಣಸಿನ ಕಾಯಿ – 2
- ಈರುಳ್ಳಿ – 1
- ಕಡಲೆಹಿಟ್ಟು – 1 ಬಟ್ಟಲು
- ಜೀರಿಗೆ – 1/2 ಚಮಚ
- ಒಣ ಕಾರದ ಪುಡಿ – 1 ಚಮಚ
- ಹಸಿ ಶುಂಟಿ – 1/4 ಇಂಚು
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಉಪ್ಪು – ರುಚಿಗೆ ತಕ್ಕಶ್ಟು
ಹಸಿರು ಚಟ್ನಿ ಮಾಡಲು ಬೇಕಾಗುವ ಸಾಮಾನುಗಳು
- ಹಸಿಮೆಣಸಿನ ಕಾಯಿ – 4
- ಜೀರಿಗೆ – 1/4 ಚಮಚ
- ಕೊತ್ತಂಬರಿ ಪುಡಿ – 1/4 ಚಮಚ
- ನಿಂಬೆಹಣ್ಣು – 1/2 ಹೋಳು
- ಕತ್ತರಿಸಿದ ಕೊತ್ತಂಬರಿ ಸೊಪ್ಪು – 1 ಬಟ್ಟಲು
- ಕತ್ತರಿಸಿದ ಪುದೀನಾ ಸೊಪ್ಪು – 1 ಬಟ್ಟಲು
- ಉಪ್ಪು – ರುಚಿಗೆ ತಕ್ಕಶ್ಟು
ಟೊಮೋಟೊ ಚಟ್ನಿ ಮಾಡಲು ಬೇಕಾಗುವ ಸಾಮಾನುಗಳು
- ಟೊಮೋಟೊ – 5
- ಸಕ್ಕರೆ – 1 ಚಮಚ
- ಎಣ್ಣೆ – 3 ಚಮಚ
- ಒಣ ಕಾರದ ಪುಡಿ – 2 ಚಮಚ
- ಗರಮ್ ಮಸಾಲೆ ಪುಡಿ – 1 ಚಮಚ
- ಉಪ್ಪು ರುಚಿಗೆ ತಕ್ಕಶ್ಟು
ಹಸಿರು ಚಟ್ನಿ ಮಾಡುವ ಬಗೆ
ಹುರಿದ ಕೊತ್ತಂಬರಿ ಕಾಳು ಅತವಾ ಕೊತ್ತಂಬರಿ ಪುಡಿಗೆ ಉಳಿದ ಎಲ್ಲ ಸಾಮಗ್ರಿ, ಪುದೀನಾ ಎಲೆ, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಜೀರಿಗೆ, ಉಪ್ಪು, ಸ್ವಲ್ಪ ನೀರು ಮತ್ತು ನಿಂಬೆ ರಸ ಸೇರಿಸಿ ಮಿಕ್ಸರ್ ನಲ್ಲಿ ರುಬ್ಬಿ ಇಟ್ಟುಕೊಳ್ಳಿ.
ಟೊಮೋಟೊ ಚಟ್ನಿ ಮಾಡುವ ಬಗೆ
ಟೊಮೋಟೊ ಹಣ್ಣನ್ನು ಸಣ್ಣಗೆ ಕತ್ತರಿಸಿ, ಉಳಿದ ಎಲ್ಲ ಸಾಮಗ್ರಿ, ಉಪ್ಪು, ಒಣ ಕಾರದ ಪುಡಿ, ಸಕ್ಕರೆ ಮತ್ತು ಗರಮ್ ಮಸಾಲೆ ಪುಡಿ ಸೇರಿಸಿ ರುಬ್ಬಿ ಇಟ್ಟುಕೊಳ್ಳಿ. ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ರುಬ್ಬಿದ ಮಿಶ್ರಣವನ್ನು ಹಾಕಿ ಸ್ವಲ್ಪ ನೀರು ಸೇರಿಸಿ ಒಂದು ಕುದಿ ಕುದಿಸಿ ಇಳಿಸಿ.
ಟೊಮೋಟೊ ಆಮ್ಲೇಟ್ ಮಾಡುವ ಬಗೆ
ಟೊಮೋಟೊ ಮತ್ತು ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿ ಇಟ್ಟುಕೊಳ್ಳಿ. ಸ್ವಲ್ಪ ಹಸಿ ಶುಂಟಿ ಮತ್ತು ಬೆಳ್ಳುಳ್ಳಿ ಎಸಳು ಬಿಡಿಸಿ ಸೇರಿಸಿ. ಕೊತ್ತಂಬರಿ ಸೊಪ್ಪು, ಉಪ್ಪು, ಜೀರಿಗೆ, ಹಸಿ ಮೆಣಸಿನಕಾಯಿ ಮತ್ತು ಒಣ ಕಾರದ ಪುಡಿ ಸೇರಿಸಿ ಮಿಕ್ಸರ್ ನಲ್ಲಿ ರುಬ್ಬಿ ಒಂದು ಪಾತ್ರೆಗೆ ಹಾಕಿಕೊಳ್ಳಿ. ಸ್ವಲ್ಪ ಕಡಲೆಹಿಟ್ಟು ಮತ್ತು ನೀರು ಸೇರಿಸಿ. ಈ ಹಿಟ್ಟನ್ನು ಕಾದ ತವೆ ಮೇಲೆ ಸ್ವಲ್ಪ ಎಣ್ಣೆ ಸವರಿ ಒಂದೊಂದೇ ತಾಲಿಪೆಟ್ಟು ಮಾಡಿ ಇಟ್ಟುಕೊಳ್ಳಿ. ಈಗ ತಯಾರಾದ ಟೊಮೋಟೊ ಆಮ್ಲೇಟ್ ಮಡಚಿ ನಾಲ್ಕು ಬಾಗ ಮಾಡಿ ಇಟ್ಟುಕೊಳ್ಳಿ.
ಸ್ಯಾಂಡ್ ವಿಚ್ ಮಾಡುವ ಬಗೆ
ತರಕಾರಿಗಳನ್ನು ತುರಿದು ಇಟ್ಟುಕೊಳ್ಳಿ. ಗಜ್ಜರಿ, ಸೌತೆಕಾಯಿ, ಎಲೆಕೋಸು, ಟೊಮೋಟೊ ಮತ್ತು ಈರುಳ್ಳಿಯನ್ನು ದುಂಡನೆಯ ಹೋಳುಗಳಾಗಿ ಕತ್ತರಿಸಿ ಇಟ್ಟುಕೊಳ್ಳಿ, ಚೀಸ್ ತುರಿ ಬೇಕಾದರೆ ಸೇರಿಸಿ. ಬ್ರೆಡ್ ಹೋಳುಗಳಿಗೆ ಬೆಣ್ಣೆ ಹಚ್ಚಿ ಎರಡು ಬದಿ ಬೇಯಿಸಿ ತೆಗೆಯಿರಿ. ಒಂದು ಹೋಳು ಬ್ರೆಡ್ ಗೆ ಹಸಿರು ಚಟ್ನಿ ಸವರಿ ಟೊಮೋಟೊ ಆಮ್ಲೇಟ್ ತುಂಡುಗಳನ್ನು ಹಾಕಿ. ತುರಿದ ತರಕಾರಿಗಳನ್ನು ಇದರ ಮೇಲೆ ಹರಡಿ, ಟೊಮೋಟೊ ಚಟ್ನಿ ಹಚ್ಚಿದ ಒಂದು ಬ್ರೆಡ್ ಹೋಳು ಹಾಕಿ ತ್ರಿಕೋನ ಆಕಾರ ಬರುವಂತೆ ಕತ್ತರಿಸಿ. ಈಗ ಟೊಮೋಟೊ ಆಮ್ಲೇಟ್ ಬ್ರೆಡ್ ಸ್ಯಾಂಡ್ ವಿಚ್ ಸವಿಯಲು ಸಿದ್ದ. ಬೇಕಾದರೆ ಹಸಿರು ಚಟ್ನಿ ಮತ್ತು ಟೊಮೋಟೊ ಚಟ್ನಿ ಸೇರಿಸಿಕೊಂಡು ಸವಿಯಿರಿ.
ಇತ್ತೀಚಿನ ಅನಿಸಿಕೆಗಳು