ಗೊರವನಹಳ್ಳಿ ಶ್ರೀ ಮಹಾಲಕ್ಶ್ಮಿ ದೇವಾಲಯ

– ಶ್ಯಾಮಲಶ್ರೀ.ಕೆ.ಎಸ್.

ಗೊರವನಹಳ್ಳಿ ಮಹಾಲಕ್ಶ್ಮಿ ದೇವಸ್ತಾನ / Goravanahalli Mahalakshmi Temple

ಮನುಶ್ಯ ತನಗೆ ಕಶ್ಟಗಳು ಎದುರಾದಾಗ ದೇವರನ್ನು ಅರಸಿ ಹೋಗುವುದು ಲೋಕಾರೂಡಿ. ಹೀಗೆ ತನ್ನೆಡೆಗೆ ಬರುವ ಬಕ್ತರನ್ನು ಕಾಪಾಡಲೆಂದೇ ಅನೇಕ ದೇವಾಸ್ತಾನಗಳು, ಮಂದಿರಗಳು ಸ್ತಾಪಿಸಲ್ಪಟ್ಟಿವೆ. ಅಂತಹವುಗಳಲ್ಲಿ ಬಕ್ತರ ಸಂಕಶ್ಟಗಳನ್ನು ನೀಗಿಸಿ ಅನುಗ್ರಹಿಸಲು ನೆಲೆಸಿರುವ ನಮ್ಮ ಕರುನಾಡಿನ ಅನೇಕ ದೇವಾಲಯಗಳಲ್ಲಿ ಗೊರವನಹಳ್ಳಿಯ ಶ್ರೀ ಮಹಾಲಕ್ಶ್ಮಿ ದೇವಸ್ತಾನವೂ ಒಂದಾಗಿದೆ.

ಸ್ತಳ ಹಿನ್ನೆಲೆ

ಈ ದಿವ್ಯ ಕ್ಶೇತ್ರವು ತುಮಕೂರು ಜಿಲ್ಲೆಯ, ಕೊರಟಗೆರೆ ತಾಲ್ಲೂಕಿನ, ಗೊರವನಹಳ್ಳಿ ಎಂಬ ಗ್ರಾಮದಲ್ಲಿ ಇದೆ.  ಪ್ರತೀತಿಯ ಪ್ರಕಾರ , ಸುಮಾರು ವರ‍್ಶಗಳ ಹಿಂದೆ ಅಬ್ಬಯ್ಯ ಎಂಬ ದನ ಕಾಯುವ ಹುಡುಗನಿಗೆ ಲಕ್ಶ್ಮಿ ದೇವಿಯ ಶಿಲೆ ದೊರೆತು, ಆ ಶಿಲೆಯು ಆತನಿಂದ  ಪೂಜಿಸಲ್ಪಟ್ಟು, ಆತನು ಸಿರಿವಂತನಾದನು. ಆತನ ಮರಣದ ನಂತರ ಆತನ ಸಹೋದರ ತೋಟದಪ್ಪನು ಆ ಶಿಲೆಯನ್ನು ಪೂಜಿಸುತ್ತಿದ್ದನು ಎಂದು ಹೇಳಲಾಗಿದೆ. ಒಮ್ಮೆ ಕನಸಿನಲ್ಲಿ ಬಂದು ಹೇಳಿದ ದೇವಿಯ ಅಣತಿಯಂತೆ ತೋಟದಪ್ಪನು ಊರ ಹೊರಗೆ ಮಣ್ಣಿನ ಮಂಟಪ ನಿರ‍್ಮಿಸಿ ದೇವಿಯ ವಿಗ್ರಹವನ್ನಿರಿಸಿ ಆರಾದಿಸುತ್ತಿದ್ದನು ಎಂಬ ನಂಬಿಕೆ ಇದೆ. ಅಬ್ಬಯ್ಯ ಸಹೋದರರ ತರುವಾಯ, ದೇವಿಗೆ ಕೆಲ ಕಾಲ ಪೂಜೆ ನಿಂತು ಹೋಗಿತ್ತು. ಆ ಸಂದರ‍್ಬಲ್ಲಿ ಹಣಕಾಸಿನ ಲೇವಾದೇವಿಯೊಂದಿಗೆ ನೇಯ್ಗೆ ಕಾಯಕ ಮಾಡುತ್ತಿದ್ದ ಚೌಡಯ್ಯ ಎಂಬುವವನು ನಿತ್ಯವೂ ದೇವಿಗೆ ಪೂಜಿಸುತ್ತಿದ್ದನು ಹಾಗೂ ತನ್ನ ಲೇವಾದೇವಿಯ ಹಣವನ್ನೆಲ್ಲಾ ಒಂದು ತಾಮ್ರದ ಕೊಡದಲ್ಲಿಟ್ಟು ದೇವರ ಪಕ್ಕದಲ್ಲಿ ಹಳ್ಳ ತೋಡಿ ಹೂತಿಟ್ಟಿದ್ದನು. ಹೀಗಿರುವಾಗ, ಒಮ್ಮೆ ಚೌಡಯ್ಯನು ಆ ಹಣವನ್ನು ಹೊರತೆಗೆಯಲು ಹೋದಾಗ ಗಟಸರ‍್ಪವೊಂದು ಆ ಕೊಡದ ಸುತ್ತಾ ಸುತ್ತಿಹಾಕಿಕೊಂಡಿದ್ದನ್ನು ಕಂಡನು. ಇದಾದ ನಂತರ, ಚೌಡಯ್ಯನು ತನ್ನ ಲೇವಾದೇವಿ ವ್ಯವಾಹಾರವನ್ನು ತ್ಯಜಿಸಿ ಲಕ್ಶ್ಮೀ ಪೂಜೆಯಲ್ಲೇ ಕಾಲ ಕಳೆದು ದೈವಾದೀನನಾದನು ಎಂಬ ಪ್ರತೀತಿ ಇದೆ. ದೇವಿಯ ಪಕ್ಕದಲ್ಲಿನ ಈ ಕೊಡದ ಸುತ್ತಾ ಹುತ್ತ ಬೆಳೆಯಿತೆಂಬ ಮಾತಿದೆ. ಇದನ್ನೇ ‘ಮಂಚಾಲೆ ನಾಗಪ್ಪ’ ದೇವಿಯ ಹುತ್ತ ಎನ್ನುವರು.

ಸ್ತಳ ಮಹಾತ್ಮೆ ಮತ್ತು ಹತ್ತಿರದ ಇತರ ದೇವಸ್ತಾನಗಳು

ಚೌಡಯ್ಯನ ಕಾಲಾನಂತರ ಪೂಜೆಯು ಹಲವು ವರ‍್ಶಗಳ ಕಾಲ ನಿಂತು ಹೋಯಿತೆಂಬುದಾಗಿ ಹೇಳಲಾಗಿದೆ. ಸುಮಾರು ವರ‍್ಶಗಳ ಬಳಿಕ ಗೊರವನಹಳ್ಳಿಯ ಶಾನುಬೋಗರಾಗಿದ್ದ ಸುಬ್ಬರಾಯರ ಪತ್ನಿ, ದೈವಬಕ್ತೆ ದಿವಂಗತ ಕಮಲಮ್ಮನವರು ಪಾಳುಬಿದ್ದ ಸ್ತಿತಿಯಲ್ಲಿದ್ದ ಗೊರವನಹಳ್ಳಿಯ ಮಹಾಲಕ್ಶ್ಮೀ ದೇವಿಯ ದೇವಸ್ತಾನವನ್ನು ಪುನರುಜ್ಜೀವನಗೊಳಿಸಿದ್ದರ ಪರಿಣಾಮ ನಿತ್ಯ ಪೂಜೆ ಸಂಕಲ್ಪಗಳು, ಅನ್ನ ಸಂತರ‍್ಪಣೆಗಳು ಜರುಗುತ್ತಿವೆ. ಈಗ ಇರುವ ದೇವಸ್ತಾನದಲ್ಲಿ ಶ್ರೀ ಲಕ್ಶ್ಮೀ ದೇವಿಯ ಮೂರ‍್ತಿ ಮತ್ತು ಮಂಚಾಲೆ ನಾಗಪ್ಪನ ಹುತ್ತಕ್ಕೆ ಬೇರೆ ಬೇರೆ ಗರ‍್ಬ ಗುಡಿಗಳಿವೆ. ತಾಯಿ ಕಮಲಮ್ಮನವರನ್ನು ಬಕ್ತರು ದೇವಿಯ ಸ್ವರೂಪವೆಂದೂ ಬಾವಿಸಿ ಆಶೀರ‍್ವಾದ ಪಡೆಯುತ್ತಿದ್ದರು. ಅಶ್ಟೇ ಅಲ್ಲದೆ ಅವಿವಾಹಿತ ಹೆಣ್ಣು ಮಕ್ಕಳು, ಸಂತಾನ ಹೀನ ಮಹಿಳೆಯರು ಆಕೆಯ ಕೈಯಿಂದ ಕರಿಮಣಿಗಳನ್ನು ಪಡೆದು ದೇವಿಯ ಕ್ರುಪೆಗೆ ಪಾತ್ರರಾಗುತ್ತಿದ್ದರು. ಕಮಲಮ್ಮನವರು ದೈವಾದೀನರಾದ ನಂತರ ಆಕೆಯ ಕುಟುಂಬಸ್ತರು ದೇವಸ್ತಾನದ ಪೂಜಾಕಾರ‍್ಯಗಳನ್ನು ವೈಬವೋಪೆತವಾಗಿ ನಡೆಸಿಕೊಂಡು  ಬರುತ್ತಿದ್ದಾರೆ. ಮಂಗಳವಾರ ಮತ್ತು ಶುಕ್ರವಾರ ಗೊರವನಹಳ್ಳಿಯ ದೇವಿಯ ಕ್ಶೇತ್ರದಲ್ಲಿ ವಿಶೇಶ ಪೂಜೆಗಳು ಜರುಗುವವು ಹಾಗೂ ಬಕ್ತರು ಹೆಚ್ಚಿನ ಸಂಕ್ಯೆಯಲ್ಲಿ ಪಾಲ್ಗೊಳ್ಳುವರು. ಈ ಪುಣ್ಯಕ್ಶೇತ್ರವು ಬೆಂಗಳೂರಿನಿಂದ ಸುಮಾರು 87 – 88 ಕಿ.ಮೀ ಅಂತರದಲ್ಲಿದೆ.

ಈ ಕ್ಶೇತ್ರದ ಹಿಂದೆ ಮಾರಿಕಾಂಬ ದೇವಾಲಯವಿದೆ. ಅಶ್ಟೇ ಅಲ್ಲದೆ, ಗೊರವನಹಳ್ಳಿಯಲ್ಲಿ ಶ್ರೀ ರೇಣುಕಾದೇವಿ ದೇವಾಲಯವಿದ್ದು, ಓಣಿ ನಾಗಪ್ಪನ ಪುಟ್ಟ ದೇವಾಲಯವೂ ಕೂಡ ಇದೆ. ಸುತ್ತ ಮುತ್ತಲಿನ ಕೆಲವು ಗ್ರಾಮಸ್ತರು ಈ ನಾಗಪ್ಪನಿಗೆ ಗೌರೀ ಹಬ್ಬ, ಯುಗಾದಿ ಹಬ್ಬದ ಸಮಯದಲ್ಲಿ ವಿಶೇಶ ಪೂಜೆಗಳನ್ನು ಸಲ್ಲಿಸುತ್ತಾರೆ ಹಾಗೂ ಜಯಮಂಗಲಿ ನದಿಗೆ ನಿರ‍್ಮಿಸಿರುವ ತೀತಾ ಡ್ಯಾಮ್ ಗೊರವನಹಳ್ಳಿಯ ಬಳಿಯಲ್ಲಿಯೇ ಇರುವುದು ಒಂದು ವಿಶೇಶ.

(ಚಿತ್ರ ಸೆಲೆ:  templepurohit.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: