ಹುಣಸೆ ಮತ್ತು ಅದರ ಹಲವು ಉಪಯೋಗಗಳು

– ಶ್ಯಾಮಲಶ್ರೀ.ಕೆ.ಎಸ್.

ಹುಣಸೆ

ಊಟದಲ್ಲಿ ಉಪ್ಪು, ಕಾರ ಮತ್ತು  ಹುಳಿ ಈ ಮೂರು ಸಮಪ್ರಮಾಣದಲ್ಲಿ ಇದ್ದರೆ ಊಟ ರುಚಿಕರವಾಗಿರುತ್ತದೆ. ಈ ಮೂರರಲ್ಲಿ ಯಾವುದು ಕಡಿಮೆಯಾದರೂ ಊಟ ರುಚಿಸುವುದಿಲ್ಲ. ದಕ್ಶಿಣ ಬಾರತದಲ್ಲಿ ಅದರಲ್ಲೂ ಕರ‍್ನಾಟಕದ ನಾನಾ ಕಡೆ ಊಟದಲ್ಲಿ ಉಪ್ಪು ಕಾರದ ಜೊತೆ ಹುಳಿಗೂ ಬಹಳ ಮಹತ್ವವನ್ನು ನೀಡುತ್ತಾರೆ. ಅಡುಗೆಯಲ್ಲಿ ಹುಳಿಗಾಗಿ, ಹುಳಿ ಟೊಮಾಟೊ ಹೊರತಾಗಿ ಹುಣಸೆ ಹಣ್ಣನ್ನು  ಸಹ ಬಳಸಲಾಗುವುದು.

ಹುಣಸೆ ಇದು ಒಂದು ಸಾಂಬಾರ್ ಪದಾರ‍್ತವಾಗಿದ್ದು, ಹುಳಿ, ಸಿಹಿ ಅತವಾ ಹುಳಿ ಮತ್ತು ಸಿಹಿ ಮಿಶ್ರಿತವಾಗಿರುತ್ತದೆ. ಹುಣಸೆ ಹುಳಿಯನ್ನು ಸಾರಿಗೆ ಸೇರಿಸಿದಲ್ಲಿ ರುಚಿ ಅದ್ಬುತವಾಗಿರುತ್ತದೆ. ಹುಣಸೆಯನ್ನು ಬಹಳ ಹಿಂದೆಯೇ ಆಪ್ರಿಕಾದ ಪೂರ‍್ವ ಬಾಗದಿಂದ ಬಾರತಕ್ಕೆ ತರಲಾಯಿತು ಮತ್ತು ಸಾಮಾನ್ಯವಾಗಿ ಹುಣಸೆ ಮರಗಳು ಉತ್ತರ ಬಾರತಕ್ಕಿಂತ ದಕ್ಶಿಣ ಬಾರತದಲ್ಲಿ ಅತೀ ಹೆಚ್ಚಾಗಿ ಕಾಣಸಿಗುತ್ತವೆ. ಹಳ್ಳಿಗಳಲ್ಲಿ ಹೊಂಗೆ ತೋಪಿನ ಹಾಗೆಯೇ ಹುಣಸೆ ಮರದ ತೋಪುಗಳು ಕೂಡ ಅಲ್ಲಲ್ಲಿ ಕಂಡುಬರುತ್ತವೆ. ಹುಣಸೆ ಸಸಿಗಳು ಹೆಮ್ಮರವಾಗಿ ದೊಡ್ಡಗಾತ್ರದಲ್ಲಿ ಬೆಳೆಯಬಲ್ಲವು. ಸಾಮಾನ್ಯವಾಗಿ ಹುಣಸೆ ಮರಗಳನ್ನು ದಿಣ್ಣೆಗಳಲ್ಲಿ, ಹೊಲದ ಬದುಗಳಲ್ಲಿ, ರಸ್ತೆ ಪಕ್ಕದಲ್ಲಿ ಹೆಚ್ಚಾಗಿ ಕಾಣಬಹುದು. ವಾಣಿಜ್ಯ ಬೆಳೆಗಳಲ್ಲಿ ಹುಣಸೆಯು ಪ್ರಾಮುಕ್ಯತೆ ಪಡೆದಿದ್ದು, ಇದನ್ನು ರೈತನ ಆಪತ್ಬಾಂದವ ಎಂದೇ ಹೇಳಬಹುದು. ಹೈಬ್ರಿಡ್ ತಳಿಯ ಹುಣಸೆ ಸಸಿಗಳಿಗೆ ನೀರು, ಗೊಬ್ಬರ ಹಾಕಿ ಆರೈಕೆ ಮಾಡಿದರೆ ಸುಮಾರು 4-5 ವರ‍್ಶಕ್ಕೆ ಮರವಾಗಿ ಪಸಲನ್ನು ನೀಡಲು ಆರಂಬಿಸುತ್ತವೆ. ಆದರೆ ನಾಟಿ ತಳಿಯ ಸಸಿಗಳು ಬೆಳೆದು ಪಸಲು ನೀಡಲು 8 ರಿಂದ 10 ವರ‍್ಶಗಳು ಬೇಕಾಗುತ್ತದೆ. ಹುಣಸೆ ಮರವು ಹಳೆಯದಾದಶ್ಟು ಹೆಚ್ಚು ಇಳುವರಿ ನೀಡುವುದರಿಂದ  ಹೆಚ್ಚು  ಲಾಬದಾಯಕ ಆಯ್ಕೆಯಾಗಿದೆ.

ಸಸ್ಯಶಾಸ್ತ್ರದಲ್ಲಿ ಹುಣಸೆಗೆ ‘ಟ್ಯಾಮರಿಂಡಸ್ ಇಂಡಿಕಾ (Tamarindous Indica)‘ ಎಂಬ ಹೆಸರಿದೆ. ಹುಣಸೆ ಮರದ ಕಾಂಡವು ದಪ್ಪನೆಯ ಗಾತ್ರ ಹೊಂದಿದ್ದು, ದೊಡ್ಡ-ದೊಡ್ಡ ರೆಂಬೆ ಕೊಂಬೆಗಳಿಂದ ಕೂಡಿರುತ್ತದೆ ಮತ್ತು ಇದರ ಹೂ ಗುಲಾಬಿ ಬಣ್ಣದಲ್ಲಿರುತ್ತದೆ. ಹುಣಸೆಕಾಯಿಯು ದಪ್ಪದಾದ ತೊಗಟೆಯನ್ನು ಹೊಂದಿದ್ದು ಕಂದು ಬಣ್ಣದ ಹುಣಸೆ ಹಣ್ಣಿನಿಂದ ತುಂಬಿರುತ್ತದೆ. ಹುಣಸೆಹಣ್ಣು ಹಳೆಯದಾದಂತೆ ಈ ಕಂದು ಬಣ್ಣವು ಕಪ್ಪು ಬಣ್ಣಕ್ಕೆ ತಿರುಗುತ್ತದೆ ಮತ್ತು ಕಪ್ಪು ಹುಣಸೆಯು ಸ್ವಲ್ಪ ಸಿಹಿ ಮಿಶ್ರಿತವಾಗಿರುತ್ತದೆ. ಹುಣಸೆ ಹಣ್ಣಿನಲ್ಲಿ  ಕಡು ಕೆಂಪು ಬಣ್ಣದಲ್ಲಿರುವ ಹುಣಸೆ ಬೀಜಗಳಿರುತ್ತವೆ. ಈ ಬೀಜಗಳೆಂದರೆ ಪುಟ್ಟ ಮಕ್ಕಳಿಗೆ ತುಂಬಾ ಇಶ್ಟವಾಗಿರುತ್ತದೆ . ಅಳಗುಳಿಮನೆ, ಚೌಕಾಬಾರದಂತಹ ಆಟಕ್ಕೆ ಇದನ್ನು ಬಳಸುತ್ತಾರೆ. ಹುಣಸೆ ಮರದ ಕೊಂಬೆಗಳು ದಪ್ಪನಾಗಿರುವುದರಿಂದ ಉಯ್ಯಾಲೆ ಅತವಾ ಜೋಕಾಲಿಗಳನ್ನು ಕಟ್ಟಿ ಆಡಿದರೆ ಮಕ್ಕಳಿಗೆ ತುಂಬಾ ಆನಂದದಾಯಕವಾಗಿರುತ್ತದೆ.

ಹುಣಸೆಯ ಉಪಯೋಗ

ರಿಪೈನ್ಡ್ ಎಣ್ಣೆಯ ತಯಾರಿಕೆಯಲ್ಲಿ , ವಾರ‍್ನಿಶ್ಗಳ ತಯಾರಿಕೆಯಲ್ಲಿ, ಬಣ್ಣಗಳ ತಯಾರಿಕೆಯಲ್ಲಿ ಮತ್ತು ಅನೇಕ ಔಶದಿಗಳ ತಯಾರಿಕೆಯಲ್ಲಿ ಹುಣಸೆ ಬೀಜಗಳ ಬಳಕೆಯನ್ನು ಹೆಚ್ಚಾಗಿ ಕಾಣಬಹುದು. ನೆನೆಸಿದ ಹುಣಸೆ ಬೀಜಗಳನ್ನು ಸಾಕು ಹಂದಿಗಳಿಗೆ ಆಹಾರವಾಗಿ ನೀಡಲಾಗುತ್ತದೆ. ಹಚ್ಚ ಹಸಿರಸಿರಾಗಿರುವ ಹುಣಸೆ ಎಲೆ ಅತವಾ ಹುಣಸೆ ಚಿಗುರು ನೋಡಲು ಮೊಟ್ಟೆಯ ಆಕಾರದಲ್ಲಿದ್ದು, ಪುಟ್ಟ ಗಾತ್ರದಲ್ಲಿರುತ್ತದೆ. ಹಚ್ಚ ಹಸಿರಿನ ಈ ಎಲೆಗಳಿಂದ ಮರವು ಬಹಳ ಸುಂದರವಾಗಿ ಎದ್ದು ಕಾಣುತ್ತದೆ. ಹಳ್ಳಿಯ ಕಡೆ ಈ ಚಿಗುರನ್ನು ಬಳಸಿ ಒಂದು ಬಗೆಯ ಹುಳಿ ಸೊಪ್ಪಿನ ಸಾರು ಮಾಡುತ್ತಾರೆ ಮತ್ತು ಇದು ಸವಿಯಲು ಬಹಳ ರುಚಿಕರವಾಗಿರುತ್ತದೆ. ಹುಣಸೆ ಹಣ್ಣಿನಿಂದ ಮಾಡುವ ಹುಣಸೆ ತೊಕ್ಕು, ಬಾಯಿಯಲ್ಲಿ ನೀರೂರಿಸುವುದು. ಅಶ್ಟೇ ಅಲ್ಲದೆ ಜೀರಿಗೆ, ಮೆಣಸು , ಬೆಲ್ಲವನ್ನು ಜಜ್ಜಿ ಹುಣಸೆ ಹಣ್ಣಿನೊಂದಿಗೆ ಮಿಶ್ರಣ ಮಾಡಿ ಉಂಡೆ ಆಕಾರದಲ್ಲಿ ನೀಡಿದರೆ ಮಕ್ಕಳಿಗೆ ಬಹಳ ಇಶ್ಟವಾಗುವುದಲ್ಲದೆ ಆರೋಗ್ಯಕರವಾಗಿ ಕೂಡ ಇರುತ್ತದೆ. ಹುಣಸೆ ರಸದಲ್ಲಿ ಟಾರ‍್ಟಾರಿಕ್ ಆಮ್ಲವು ಅದಿಕವಾಗಿರುವುದರಿಂದ ಇದು ಪಿತ್ತ, ಅಜೀರ‍್ಣ , ಆಮಶಂಕೆ ಮುಂತಾದ ಕಾಯಿಲೆಗಳಿಗೆ ರಾಮಬಾಣವಾಗಿದೆ. ಹುಣಸೆ ಹಣ್ಣಿನಲ್ಲಿ ಕ್ಯಾಲ್ಸಿಯಂ ,ಮೆಗ್ನೀಶಿಯಂ ,ವಿಟಮಿನ್ ಬಿ6 ,ಬಿ2, ಬಿ3  ಹೇರಳವಾಗಿರುತ್ತದೆ. ಹುಣಸೆ ಮರಗಳು ನೂರಕ್ಕಿಂತ ಹೆಚ್ಚು ಏಡು ಬದುಕುತ್ತವೆ ಮತ್ತು ಅಂತಹ ಹಳೆಯ ಮರಗಳು ಇರುವ ನಿದರ‍್ಶನಗಳನ್ನು ನಾವು ಈಗಲೂ ಕಾಣಬಹುದು.

( ಚಿತ್ರ ಸೆಲೆ: wikipedia.org  )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.