ವಿಶ್ವದ ಅತಿ ದೊಡ್ಡ ಅರಮನೆ – ಇಸ್ತಾನಾ ನೂರುಲ್ ಇಮಾನ್

– .

ಆಗ್ನೇಯ ಏಶಿಯಾದಲ್ಲಿರುವ ಪುಟ್ಟ ನಾಡು ಬ್ರೂನಿಯ ಸುಲ್ತಾನ ಹಸ್ಸನಾಲ್ ಬೊಲ್ಕಯ್ಯನ ‘ಇಸ್ತಾನಾ ನೂರುಲ್ ಇಮಾನ್’ ಅರಮನೆ ವಿಶ್ವದ ಅತಿ ದೊಡ್ಡ ಅರಮನೆ ಎಂದು ಹೆಗ್ಗಳಿಗೆ ಪಡೆದಿದೆ. ಇಸ್ತಾನಾ ನೂರುಲ್ ಇಮಾನ್ ಎಂದರೆ ‘ನಂಬಿಕೆ ಬೆಳಕಿನ ಅರಮನೆ’ ಎಂಬ ಹುರುಳಿದೆ. 1.4 ಶತಕೋಟಿ ಡಾಲರ್ ವೆಚ್ಚದ ಈ ಬ್ರುಹತ್ ಅರಮನೆ ರಾಶ್ಟ್ರದ ಮುಕ್ಯಸ್ತನ ವಾಸದ ಮನೆ ಎಂಬ ಹೆಗ್ಗಳಿಕೆಯಿಂದಾಗಿ ಗಿನ್ನೆಸ್ ಬುಕ್ ಆಪ್ ರೆಕಾರ‍್ಡ್ಸನ್ನಲ್ಲಿ ಸ್ತಾನ ಗಿಟ್ಟಿಸಿದೆ.  ಬ್ರೂನಿ, ಬೋರ‍್ನಿಯೋ ದ್ವೀಪದಲ್ಲಿನ ಒಂದು ಸಣ್ಣ ರಾಶ್ಟ್ರವಾಗಿದೆ. ದಕ್ಶಿಣ ಚೀನಾ ಸಮುದ್ರದ ಕರಾವಳಿ ಒಂದೆಡೆಯಾದರೆ, ಉಳಿದೆಡೆ ಮಲೇಶ್ಯಾ ದೇಶ ಸುತ್ತುವರೆದಿದೆ. ಇದರ ಕರಾವಳಿ ಜೀವ ವೈವಿದ್ಯ ಮಳೆಕಾಡಿಗೆ ಹೆಸರುವಾಸಿಯಾಗಿದ್ದು, ಬ್ರೂನಿಯ ಬೂ ಪ್ರದೇಶದಲ್ಲಿ ಅಗೆದಲ್ಲೆಲ್ಲಾ ಕಚ್ಚಾ ತೈಲದ ಬಾವಿಗಳೇ ಸಿಗುತ್ತವೆ. ಹಾಗಾಗಿ ಇದು ಜಗತ್ತಿನ ಅತ್ಯಂತ ಶ್ರೀಮಂತ ರಾಶ್ಟ್ರಗಳ ಸಾಲಿನಲ್ಲಿ ನಿಲ್ಲುತ್ತದೆ. ಬಂದರ್ ಸೆರಿ ಬೆಗವಾನ್ ನಗರ ಬ್ರೂನಿಯ ರಾಜದಾನಿ. ಇಸ್ತಾನಾ ನೂರುಲ್ ಇಮಾನ್ ಅರಮನೆ ರಾಜದಾನಿಯ ದಕ್ಶಿಣಕ್ಕೆ ಹಲವಾರು ಕಿಲೋಮೀಟರ್ ದೂರದಲ್ಲಿ ಬ್ರೂನೀ ನದಿಯ ದಡದ ಮೇಲಿದೆ.

ಬ್ರೂನಿ ಸುಲ್ತಾನ ಹಸ್ಸನಾಲ್ ಬೊಲ್ಕಯ್ ವಿಶ್ವದಲ್ಲೇ ಆಗರ‍್ಬ ಶ್ರೀಮಂತ. ಅದ್ದರಿಂದ ಈತ ವಿಶ್ವಮಾನ್ಯ ವಾಸ್ತು ಶಿಲ್ಪಿ ಪಿಲಿಪಿನೋ ವಿಯಾಂಡ್ರೋ ಲೊಕ್ಸಿನ್ನನ್ನು ತನ್ನ ಅರಮನೆಗೆ ಹೊಸ ಬಗೆಯ ವಿನ್ಯಾಸ ರಚನೆಗೆ ನೇಮಿಸಿಕೊಳ್ಳಲು ಸಾದ್ಯವಾಯಿತು. ಸುಲ್ತಾನನ ಆಸೆಗೆ ಸ್ಪಂದಿಸಿದ ಲೊಕ್ಸಿನ್ ಈ ಅರಮನೆಗೆ ಹೊಸದಾದ ಆಯಾಮವನ್ನೇ ನೀಡಿದ. ಯೂರೋಪಿನ್ ಶೈಲಿ ಹಾಗೂ ಮಲೇಶ್ಯಾ ಸಂಪ್ರದಾಯವನ್ನು ಸೇರಿಸಿ ಲೊಕ್ಸಿನ್ ಹುಟ್ಟು ಹಾಕಿದ ಹೊಸ ವಿನ್ಯಾಸಕ್ಕೆ ಈ ಅರಮನೆ ಸಾಕ್ಶಿಯಾಗಿದೆ. ದುಬೈನ ಅತ್ಯಂತ ಎತ್ತರದ ಕಟ್ಟಡದಲ್ಲಿ ಒಂದಾದ ಬುರ‍್ಜ್ ಆಲ್ ಅರಬ್ನ ಒಳಾಂಗಣ ವಿನ್ಯಾಸಕಾರ ಕೌನ್ ಚ್ಯು ಇದರ ಒಳಾಂಗಣ ವಿನ್ಯಾಸಕ್ಕೆ ಕೈ ಜೋಡಿಸಿದ್ದನು. ಎರಡು ವರ‍್ಶಗಳ ಕಾಲ ತೆಗೆದುಕೊಂಡ ಈ ಅರಮನೆಯ ನಿರ‍್ಮಾಣ 1984ರ ವೇಳೆಗೆ ಪೂರ‍್ಣಗೊಂಡಿತು. ಇದು ಬ್ರಿಟೀಶರ ಆಡಳಿತದಿಂದ ಮುಕ್ತವಾಗಿ ಸ್ವಾತಂತ್ರ ಪಡೆದ ದಿನವಾದ ಜನವರಿ 1 ರಂದು ಲೋಕಾರ‍್ಪಣೆಯಾಯಿತು. ಇಸ್ತಾನಾ ನೂರುಲ್ ಇಮಾನ್ ಅರಮನೆ ಅತ್ಯಂತ ಬ್ರುಹತ್ ಕಟ್ಟಡವಾಗಿದೆ. ಇಂಗ್ಲೆಂಡಿನ ಮಹಾರಾಣಿ ಎಲಿಜೆಬತ್ ವಾಸಿಸುವ ಬಕಿಂಗ್ಹ್ಯಾಮ್ ಪ್ಯಾಲೆಸ್ಗಿಂತ ಅನೇಕ ಪಟ್ಟು ದೊಡ್ಡದು. ಇಡೀ ಕಟ್ಟಡ ಸಂಪೂರ‍್ಣ ಬಿಳಿ ಬಣ್ಣದ್ದಾಗಿದೆ. ಅನೇಕ ಬಂಗಾರದ ಬಣ್ಣದ ಗುಮ್ಮಟಗಳು ಮತ್ತು ಸ್ತಂಬ ಗೋಪುರಗಳು ಈ ಅರಮನೆಯ ಕಟ್ಟಡದಲ್ಲಿರುವುದು ವಿಶೇಶ.

ಅರಮನೆಯ ಒಳಾಂಗಣ ವಿಸ್ತೀರ‍್ಣ, ವಿನ್ಯಾಸ ಮತ್ತು ಅಲಂಕಾರ

ಅರಮನೆ ಸಂಕೀರ‍್ಣದ ಒಟ್ಟು ವಿಸ್ತೀರ‍್ಣ 2 ಲಕ್ಶ ಚದರ ಮೀಟರ್. ಇದೇ ಸಂಕೀರ‍್ಣದಲ್ಲಿರುವ ಮಸೀದಿ 1,500 ಜನ ನಮಾಜ್ ಮಾಡುವಶ್ಟು ವಿಶಾಲವಾಗಿದೆ. ಅರಮನೆಯಲ್ಲಿ ಔತಣಕೂಟಕ್ಕೆ ಮೀಸಲಿರುವ ಜಾಗ ಸಹ ಅತ್ಯಂತ ವಿಶಾಲವಾಗಿದೆ. ಅಂದಾಜು 4,000 ಜನರಿಗೆ ಒಮ್ಮೆಲೆ ಇಲ್ಲಿ ಆತಿತ್ಯ ನೀಡಬಹುದು. ಇಸ್ತಾನಾ ನೂರುಲ್ ಇಮಾನ್ ಅರಮನೆಯಲ್ಲಿನ ಒಟ್ಟು ಕೊಟಡಿಗಳ ಸಂಕ್ಯೆ 1788. ಪ್ರತಿಯೊಂದೂ ವಿಶಾಲವಾದ ಕೊಟಡಿಗಳು. ಇದರೊಂದಿಗೆ ಸರ‍್ವಾಲಂಕ್ರುತವಾದ 257 ಸ್ನಾನ ಗ್ರುಹಗಳು, 5 ಈಜು ಕೊಳಗಳು ಮತ್ತು 18 ಎಲಿವೇಟರ‍್ಗಳು ಈ ಅರಮನೆಯಲ್ಲಿವೆ. ಈಗ ಇಶ್ಟೊಂದಕ್ಕೆ ಸ್ತಳಾವಕಾಶ ನೀಡಿರುವ ಈ ಅರಮನೆಯ ಬ್ರುಹತ್ ವಿಸ್ತೀರ‍್ಣದ ಬಗ್ಗೆ ಕೊಂಚ ಕಲ್ಪನೆ ಬಂದಿರಲಿಕ್ಕೆ ಸಾಕು!

ಇದರೊಡನೆ ಸಾಂಪ್ರದಾಯಿಕ ವಾಸ್ತು ಶಿಲ್ಪ ಹಾಗೂ ಐಶಾರಾಮಿ ಅಲಂಕಾರಗಳನ್ನು ಅರಮನೆಯ ಒಳಾಂಗಣ ವಿನ್ಯಾಸದಲ್ಲಿ ಬೆರಸಲಾಗಿದೆ. ಇಟಾಲಿಯನ್ ಮಾರ‍್ಬಲ್, ಶಾಂಗೈನ ಗ್ರಾನೈಟ್, ಇಂಗ್ಲೆಂಡಿನ ಗಾಜುಗಳು, ಚೀನಾದ ಅತ್ಯಂತ ದುಬಾರಿ ರೇಶ್ಮೆ, ಚಿನ್ನ ಮತ್ತು ಅಮ್ರುತಶಿಲೆ ಅರಮನೆಯ ಮುಕ್ಯ ಅಲಂಕಾರಿಕ ಸಾಮಗ್ರಿಗಳ ಪಟ್ಟಿಯಲ್ಲಿ ಮಂಚೂಣಿಯಲ್ಲಿ ಸೇರಿವೆ. ಒಳಾಂಗಣ ವಿನ್ಯಾಸ ಮತ್ತು ಅಲಂಕಾರದಲ್ಲಿ 28 ವಿವಿದ ಬಗೆಯ ಅಮ್ರುತಶಿಲೆಗಳನ್ನು ಬಳಸಲಾಗಿದೆ. ಈ ಅರಮನೆಯಲ್ಲಿನ ಮಹಡಿಮನೆ ತಲುಪಲು ವಿವಿದ ಸ್ತಳಗಳಲ್ಲಿ ಪೂರ‍್ಣ ಅಮ್ರುತಶಿಲೆಯಿಂದ ನಿರ‍್ಮಿಸಲಾದ 44 ಮೆಟ್ಟಲುಗಳ ಸಮೂಹವಿದೆ. ಜಗತ್ತಿನಲ್ಲಿ ಲಬ್ಯವಿರುವ ಅತ್ಯಂತ ಐಶಾರಾಮಿ ಅಲಂಕಾರಿಕ ವಸ್ತುಗಳನ್ನು ಈ ಅರಮನೆಯಲ್ಲಿ ಕಾಣಬಹುದು.ಇಶ್ಟಕ್ಕೇ ಈ ಅರಮನೆಯ ಪೂರ‍್ಣ ವರ‍್ಣನೆ ಮುಗಿಯಲಿಲ್ಲ. ನಾವೀಗ ವೈಬವೋಪೂರಿತ ಅರಮನೆಯ ಬವ್ಯತೆಯಲ್ಲಿ ಕೆಲವಶ್ಟನ್ನು ಮಾತ್ರ ಗಮನಿಸಿದಂತಾಯ್ತು!

ಸುಲ್ತಾನನಿಗಿರುವ ಕಾರು ಮತ್ತು ಕುದುರೆಗಳ ಮೇಲಿನ ಪ್ರೀತಿ

ಬ್ರೂನಿಯ ರಾಜನಿಗೆ ಕಾರುಗಳನ್ನು ಕಂಡರೆ ಅಪಾರ ಪ್ರೀತಿ ಮತ್ತು ಅವುಗಳನ್ನು ಹೊಂದುವ ತಣಿಯದ ಆಸೆ. ಅದಕ್ಕೆ ಪೂರಕವಾಗಿ ಆತನ ಸುಪರ‍್ದಿಯಲ್ಲಿ 5೦೦೦ಕ್ಕೂ ಹೆಚ್ಚು ಕಾರುಗಳಿವೆ. ಇವುಗಳಲ್ಲಿ ಅತ್ಯಂತ ಐಶಾರಾಮಿ 153 ಕಾರುಗಳು ಸೇರಿವೆ. ಸುಲ್ತಾನನಿಗೆ ವೈಶಿಶ್ಟ್ಯಪೂರ‍್ಣ ಕಾರುಗಳ ಬಗ್ಗೆ ಹೆಚ್ಚಿನ ಒಲವು. ಈತನ ಬಳಿಯಿರುವ ಸಾವಿರಾರು ಕಾರುಗಳಲ್ಲಿ ಸುಲ್ತಾನನಿಗಾಗಿಯೇ ಕಾರ್ ಕಂಪೆನಿಗಳು ತಯಾರಿಸಿದ್ದು ಕೆಲವಾದರೆ ಮತ್ತೆ ಕೆಲವು ಸೀಮಿತ ಅವ್ರುತ್ತಿಯ ಕಾರುಗಳು. ಬ್ರೂನಿ ರಾಜನ ಅವಶ್ಯಕತೆಗೆ ತಕ್ಕಂತೆ ಅವನ ಇಶ್ಟಾನುಸಾರ ತಯಾರಾದ ಕಾರುಗಳಲ್ಲಿ ಕೆಲವು ಕಾರುಗಳು ಬೆಲೆ ಊಹಿಸಲು ಅಸಾದ್ಯ. ಇಶ್ಟೆಲ್ಲಾ ಕಾರುಗಳನ್ನು ಹೊಂದಿರುವುದರಿಂದ ಹಾಗೂ ವರ‍್ಶದಿಂದ ವರ‍್ಶಕ್ಕೆ ಇದಕ್ಕೆ ಸೇರುತ್ತಿರುವ ಹೊಸ ಹೊಸ ಮಾದರಿಯ ಕಾರುಗಳ ನಿಲುಗಡೆಗೆ ಅರಮನೆಯ ಆವರಣದಲ್ಲಿ ಸ್ತಳಾವಕಾಶ ಬೇಕಲ್ಲವೆ? ಅದಕ್ಕಾಗಿ ಅರಮನೆಯ ವಿನ್ಯಾಸದಲ್ಲಿ ಒಂದು ಚದರ ಕಿಲೋಮೀಟರ‍್ನಶ್ಟು ವಿಶಾಲವಾದ ನೆಲಮಾಳಿಗೆಯ ಗ್ಯಾರೇಜನ್ನು ಕಾರುಗಳ ನಿಲುಗಡೆಗಾಗಿಯೇ ಮೀಸಲಿಡಲಾಗಿದೆ. ಸುಲ್ತಾನನಿಗೆ ಕಾರಿನಂತೆ ಕುದುರೆಗಳನ್ನು ಕಂಡರೆ ಕೂಡ ಬಹಳ ಪ್ರೀತಿ. ಹಾಗಾಗಿ ಈತ ದಶ್ಟಪುಶ್ಟ 2೦೦ ಕುದುರೆಗಳ ಒಡೆಯನಾಗಿದ್ದಾನೆ. ಬೇಸಿಗೆಯ ಉರಿ ಬಿಸಿಲಿಗೆ ತನ್ನ ನೆಚ್ಚಿನ ಕುದುರೆಗಳು ಬಸವಳಿಯದಿರಲಿ ಎಂದು ಆತ ಅವುಗಳಿಗಾಗಿ ಹವಾನಿಯಂತ್ರಿತ ಲಾಯದ ವ್ಯವಸ್ತೆ ಮಾಡಿದ್ದಾನೆ. ವಿವಿದ ಮಾದರಿಯ ಕಾರಿನಂತೆ ವಿವಿದ ತಳಿಯ ಕುದುರೆಗಳನ್ನು ಹೊಂದುವುದು ಸುಲ್ತಾನನಿಗೆ ಇರುವ ಮತ್ತೊಂದು ದೌರ‍್ಬಲ್ಯ.

ಈ ಅರಮನೆಯನ್ನು ಸಿಂಗಾರಗೊಳಿಸಲು ವರ‍್ಣ ಚಿತ್ರಗಳ ದೊಡ್ಡ ಸಂಗ್ರಹವೇ ಸುಲ್ತಾನನ ಬಳಿ ಇದೆ. ಇದರಲ್ಲಿ 7೦ಮಿಲಿಯನ್ ಡಾಲರ್ ತೆತ್ತು ಕರೀದಿಸಿದ ರೆನೋಯರ‍್ನ ವರ‍್ಣ ಚಿತ್ರ ಸಹ ಸೇರಿದೆ. ಬ್ರೂನಿಯ ಸುಲ್ತಾನ ಕಾರು, ಕುದುರೆಗಳನ್ನೊಳಗೊಂಡ ಐಶಾರಾಮಿ ಮತ್ತು ವೈಬವದ ಜೀವನವನ್ನು ಬಹಳವಾಗಿ ಇಶ್ಟಪಡುತ್ತಾರೆ. ಹಾಗಾಗಿ ಈ ಐಶಾರಾಮಿ ಅರಮನೆಯಲ್ಲಿ ಎಲ್ಲೆಲ್ಲಿ ಸಾದ್ಯವೋ ಅಲ್ಲೆಲ್ಲಾ ಅಪ್ಪಟ ಚಿನ್ನವನ್ನೇ ಸಮ್ರುದ್ದವಾಗಿ ಬಳಸಿ ಅಲಂಕರಿಸಲಾಗಿದೆ. ಕಿಟಕಿ ಬಾಗಿಲುಗಳ ಅಂಚುಗಳು, ಹಿಡಿಕೆಗಳು ಅಪ್ಪಟ ಚಿನ್ನದಿಂದ ಮಾಡಲ್ಪಟ್ಟಿವೆ. ವಿಶ್ವದಲ್ಲೇ ಅತ್ಯಂತ ಸಿರಿವಂತನಾದ ಬ್ರೂನಿಯ ಸುಲ್ತಾನನಿಗೆ ತನ್ನ ಎಲ್ಲಾ ವಾಸ ಸ್ತಾನದಲ್ಲೂ ಚಿನ್ನದ ಮೆರಗು ಮತ್ತು ಅಮ್ರುತಶಿಲೆಯ ಹಾಸನ್ನು ಹೊದಿಸುವುದು ದುಬಾರಿ ಎನಿಸಿಲ್ಲ.

ವರುಶದಲ್ಲಿ 3 ದಿನ ಮಾತ್ರ ಈ ಅರಮನೆ ನೋಡಲು ಅವಕಾಶ!

ಬವ್ಯ ಅರಮನೆಯ ಬಾಗಿಲು ಸಾರ‍್ವಜನಿಕರಿಗೆ ವರ‍್ಶದಲ್ಲಿ ಮೂರು ದಿನ ಮಾತ್ರ ತೆರೆದುಕೊಳ್ಳುತ್ತದೆ. ಈ ಮೂರು ದಿನ ಸುಲ್ತಾನ ಮತ್ತು ಆತನ ಕುಟುಂಬ ವರ‍್ಗದವರು ಕುದ್ದಾಗಿ ಬರುವ ಎಲ್ಲಾ ಅತಿತಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ ವೈಯುಕ್ತಿಕವಾಗಿ ಒಬ್ಬೊಬ್ಬರನ್ನು ಗಮನಿಸುತ್ತಾರೆ. ಮುಸ್ಲೀಮರಿಗೆ ನಮಾಜ್ ಮತ್ತು ಮತ್ತಿತರ ದೇವತಾ ಕಾರ‍್ಯಗಳನ್ನು ಮಾಡಲು ರಂಜಾನ್ ತಿಂಗಳಿನಲ್ಲಿ ಹತ್ತು ದಿನ ಹೆಚ್ಚಿಗೆ ಅರಮನೆ ಪ್ರವೇಶಿಸಲು ಅವಕಾಶ ನೀಡುವ ಪರಿಪಾಟ ಇಲ್ಲಿದೆ. ಇಸ್ತಾನಾ ನೂರುಲ್ ಇಮಾನ್ನ ವೀಕ್ಶಣೆಗೆ ಬಂದವರು ಹಲವು ಶಿಶ್ಟಾಚಾರ ಪಾಲಿಸದೆ ವಿದಿಯಿಲ್ಲ. ಉದ್ದನೆಯ ಸರತಿಯಲ್ಲಿ ನಿಂತು ವೈದ್ಯಕೀಯ ತಪಾಸಣೆ ಒಳಗಾಗಲೇಬೇಕು. ಒಂದುವೇಳೆ ವೈದ್ಯಕೀಯ ತಪಾಸಣೆಗೆ ಒಳಗಾಗದಿದ್ದಲ್ಲಿ ಸುಲ್ತಾನನಿಗೆ ‘ಹಲೋ’ ಹೇಳಲು ಅವಕಾಶವಿಲ್ಲ. ಅರಮನೆ ಪ್ರವೇಶಿಸಿದ ಪ್ರತಿಯೊಬ್ಬರಿಗೂ ತಿಂಡಿತಿನಿಸು ಮತ್ತು ಉಡುಗೊರೆ ನೀಡುವ ಪದ್ದತಿಯನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಮಕ್ಕಳಿಗೆ ವಿಶೇಶವಾದ ಹಣ ತುಂಬಿದ ಹಸಿರು ಬಣ್ಣದ ಚೀಲವನ್ನು ನೀಡುವುದು ಸುಲ್ತಾನನ ಸಂಪ್ರದಾಯ.ಬ್ರೂನಿ ಸುಲ್ತಾನ ಹಸ್ಸನಾಲ್ ಬೊಲ್ಕಯ್ಯನ ವಾಸಸ್ತಾನ ಈ ಇಸ್ತಾನಾ ನೂರುಲ್ ಇಮಾನ್ ಅರಮನೆ. ಹಾಗೆಯೇ ಸುಲ್ತಾನ ಬ್ರೂನಿ ರಾಜ್ಯವನ್ನು ಮುನ್ನಡೆಸಲು ಅವಶ್ಯವಿರುವ ಸರ‍್ಕಾರಿ ಕಚೇರಿಗಳೂ ಸಹ ಈ ಅರಮನೆಯಲ್ಲೇ ಇರುವುದೊಂದು ವಿಶೇಶ ಸಂಗತಿಯಾಗಿದೆ.

( ಮಾಹಿತಿ ಮತ್ತು ಚಿತ್ರ ಸೆಲೆ: atlasobscura.com , guinnessworldrecords.com , lonelyplanet.com , wikimedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: