ಕವಿತೆ: ಎದೆಯ ಸುಡುವ ಶೋಕ

– ಚಂದ್ರಗೌಡ ಕುಲಕರ‍್ಣಿ.

ಮಕ್ಕಳ ಬೆನ್ನಿನ ಸ್ವರ‍್ಗ ಏರದೆ
ಕಂಗಾಲಾಗಿದೆ ಬ್ಯಾಗು
ಗೆದ್ದಲು ಹತ್ತಿ ಕಾಲ ಕಳೆವುದು
ಗೋಳಲಿ ಹಾಗು ಹೀಗು

ವರುಶದಿಂದ ಕೊರಗುತಲಿಹುದು
ಶಾಲೆಯ ನೆಲದ ಹಾಸು
ಮಕ್ಕಳ ಪಾದ ಸ್ಪರ‍್ಶವಿಲ್ಲದೆ
ಅಳುತಿದೆ ಎಂಟ್ಹತ್ ತಾಸು

ಕಳವಳಗೊಂಡ ಟೀಚರ್ ಬಳಗದಿ
ಮಾಸಿಹೋಗಿದೆ ನಗುವು
ತುಂಟರ ತಂಟೆಯ ಉಸಿರೇ ಇರದಿರೆ
ಏತಕೆ ಬೇಕೀ ಜಗವು

ದೂಳು ಮೆತ್ತಿ ಬೂಳಸುಗಟ್ಟಿದೆ
ಚಂದದ ಕಪ್ಪು ಹಲಗೆ
ಪುಟ್ಟರ ಕಲರವ ಜೋಗುಳ ಇಲ್ಲದೆ
ಬದುಕುವುದಾದರು ಹೇಗೆ

ಮಸಣದಂತೆ ಮಂಕಾಗಿಹುದು
ಶಾಲೆಯ ಆಟದ ಬಯಲು
ಚಿಣ್ಣರ ಚಿಲಿಪಿಲಿ ದ್ವನಿಯನು ಕೇಳದೆ
ದಿಟ್ಟಿಸುತಿಹುದು ಮುಗಿಲು

ಕೊರೋನಾ ಹೊಡೆತಕೆ ನಲುಗಿ ಹೋಗಿದೆ
ಪುಟಾಣಿ ಪುಟ್ಟರ ಲೋಕ
ಇನ್ನೂ ಎಂದಿಗೆ ತೊಲಗುವುದೇನೊ
ಎದೆಯನು ಸುಡುವ ಶೋಕ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: