ಪಂಪ ಬಾರತ ಓದು – 5ನೆಯ ಕಂತು

– ಸಿ.ಪಿ.ನಾಗರಾಜ.

(ಪಂಪನ ವಿಕ್ರಮಾರ‍್ಜುನ ವಿಜಯ ಕಾವ್ಯದ ಮೊದಲನೆಯ ಆಶ್ವಾಸದ 99 ನೆಯ ಪದ್ಯದಿಂದ 105 ನೆಯ ಪದ್ಯ ಮತ್ತು ಗದ್ಯದ ವರೆಗಿನ ಪಟ್ಯವನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.)

ಪಾತ್ರಗಳು

ಕರ್ಣ – ಸೂರ‍್ಯದೇವ ಮತ್ತು ಕುಂತಿಯ ಮಗ. ಈಗ ಸೂತ ಮತ್ತು ರಾದೆ ದಂಪತಿಗಳ ಸಾಕು ಮಗ.
ಇಂದ್ರ – ದೇವಲೋಕದಲ್ಲಿನ ದೇವತೆಗಳ ಒಡೆಯ.
ವಟು – ಇಂದ್ರನು ಈ ರೂಪದಲ್ಲಿ ಬಂದು ಕರ‍್ಣನ ಕವಚ ಕುಂಡಲಗಳನ್ನು ಬೇಡಿ ಪಡೆಯುತ್ತಾನೆ.
ಪರಶುರಾಮ – ಒಬ್ಬ ರಿಸಿ. ಜಮದಗ್ನಿ ಮತ್ತು ರೇಣುಕಾದೇವಿಯ ಮಗ.
ಸೂತ – ಕರ‍್ಣನ ಸಾಕು ತಂದೆ.

============================

ಕರ್ಣನ ಬೆಳವಣಿಗೆ

ನವಯೌವನ ಆರಂಭದೊಳ್ ಆತನ್ ಶಸ್ತ್ರಶಾಸ್ತ್ರವಿದ್ಯೆಯೊಳ್ ಅತಿ ಪರಿಣತನಾಗಿ, ಬಿಲ್ಲ ಜೇವೊಡೆಯೆ ಮೀಱುವ ವೈರಿ ನರೇಂದ್ರರನ್ ಪೊಡೆದುದು. ಬುಧ ಮಾಗಧ ವಂದಿಜನಕ್ಕೆ ನಿರಂತರಮ್ ಕಡಿಕಡಿದು ಇತ್ತ ಪೊನ್ನ ಕೊಟ್ಟ ಕೋಡು ಸಿಡಿಲ್ವೊಡೆದವೊಲ್ ಅಟ್ಟಿ ಮುಟ್ಟಿ ಆದ ಎಡರನ್ ಕಡಿದು ಇಕ್ಕಿದುದು. ಎಡರದೆ ಬೇಡಿಮ್ ಓಡಿಮ್. ಇದು ಕರ್ಣನಾ ಚಾಗದ ಬೀರದ ಮಾತು. ಅಂತು ಭುವನ ಭವನಕ್ಕೆಲ್ಲಮ್ ನೆಗಳ್ದ ಕರ್ಣನ ಪೊಗಳ್ತೆಯಮ್ ನೆಗಳ್ತೆಯುಮುನ್ ಇಂದ್ರನ್ ಕೇಳ್ದು..

ಇಂದ್ರ: ( ತನ್ನಲ್ಲಿಯೇ) ತನ್ನಂಶದೊಳ್ ಪುಟ್ಟುವ ಅರ್ಜುನಂಗಮ್ ಆತಂಗಮ್ ಮುಂದೆ ದ್ವಂದ್ವಯುದ್ಧಮ್ ಉಂಟು.
(ಎಂಬುದಮ್ ತನ್ನ ದಿವ್ಯ ಜ್ಞಾನದಿಂದಮ್ ಅಱಿದು )

ಬೇಡಿದೊಡೆ ಕರ್ಣನ್ ಬಲದ ಬರಿಯುಮನ್ ಉಗಿದು ಈಡಾಡುಗುಮ್ . ಇಂತಲ್ಲದೆ ಈತನನ್ ಗೆಲಲ್ ಬಾರದು.
(ಎಂದು ಆಗಳೆ ಕೈಗೂಡಿದ ವಟುವಾಕೃತಿಯೊಳೆ ಆ ಸಹಜ ಕವಚಮನ್ ಕುಂಡಳಮನ್ ಬೇಡಿದನ್.)

ಕರ್ಣ: ಬೇಡಿದುದನ್ ಅರಿದುಕೊಳ್.

ಇಂದ್ರ: ಬೇಡಿದುದನ್ ಎನಗೆ ಮುಟ್ಟಲಾಗದು.

ಕರ್ಣ: (ನೆಗಳ್ದು ಅಲ್ಲಾಡದೆ ಕವಚಮನ್ ಅರಿದು) ಕೊಳ್
(ಎಂದು ಇಂದ್ರಂಗೆ ಈಡಾಡಿದನ್ )

ಇಂದ್ರ: (ತನ್ನಲ್ಲಿಯೇ) ಎಂದುಮ್ ಪೋಗು ಎಂದನೆ… ಮಾಣ್ ಎಂದನೆ… ಪೆಱತೊಂದನ್ ಈವೆನ್ ಎಂದನೆ… ನೊಂದಃ ಎಂದನೆ… ಸೆರಗಿಲ್ಲದೆ ಪಿಡಿ ಎಂದನ್… ಇದೇನ್ ಕಲಿಯೊ ಚಾಗಿಯೊ ರವಿತನಯನ್.

( ಅಂತು ತನ್ನ ಸಹಜ ಕವಚಮನ್ ನೆತ್ತರ್ ಪನ ಪನ ಪನಿಯೆ ತಿದಿಯುಗಿವಂತೆ ಉಗಿದು ಕೊಟ್ಟೊಡೆ, ಇಂದ್ರನ್ ಆತನ ಕಲಿತನಕೆ ಮೆಚ್ಚಿ…)

ಇಂದ್ರ: ಸುರ ದನುಜ ಭುಜಗ ವಿದ್ಯಾಧರ ನರಸಂಕುಲದೊಳ್ ಆರನ್ ಆದೊಡಮ್ ಏನೋ, ಧುರದೊಳ್ ನಿಜ ವಿರೋಧಿಯನ್ ಇದು ಗರ ಮುಟ್ಟೆ ಕೊಲ್ಗುಮ್
(ಎಂದು ಶಕ್ತಿಯನ್ ಇತ್ತನ್. ಅಂತು ಇಂದ್ರನ್ ಇತ್ತ ಶಕ್ತಿಯನ್ ಕೈಕೊಂಡು ನಿಜಭುಜ ಶಕ್ತಿಯನ್ ಪ್ರಕಟಮ್ ಮಾಡಲೆಂದು ರೇಣುಕಾನಂದನನ್ ಅಲ್ಲಿಗೆ ಪೋಗಿ ಉಗ್ರ ಪರಶು ಪಾಟಿತ ರಿಪು ವಂಶಾರಾಮನನ್ ಆ ರಾಮನನ್ ಗುರು ಶುಶ್ರೂಷೆಯೊಳ್ ಕೂರಿಸೆ, ವೈಕರ್ತನನಾ ಬಲ್ಮೆ ಇಷುವಿದ್ಯಾ ಪಾರಗನ್ ಎನಿಸಿದುದು.

ಅಂತು ಧನುರ್ಧರ ಅಗ್ರಗಣ್ಯನಾಗಿ ಇರ್ದ ಒಂದು ದಿವಸಮ್ ತನ್ನ ತೊಡೆಯ ಮೇಲೆ ತಲೆಯನ್ ಇಟ್ಟು ಪರಶುರಾಮನ್ ಮಱೆದು ಒಱಗಿದ ಆ ಪಸ್ತಾವದೊಳ್ ಆ ಮುನಿಗೆ ಮುನಿಸನ್ ಮಾಡಲೆಂದು ಇಂದ್ರನು ಉಪಾಯದೊಳ್ ಅಟ್ಟಿದ ವಜ್ರಕೀಟಂಗಳ್ ಕರ‍್ಣನ ಎರಡುಮ್ ತೊಡೆಯುಮನ್ ಉಳಿಯನ್ ಊಱಿ ಕೊಡಂತಿಯೊಳ್ ಬೆಟ್ಟಿದಂತೆ ಅತ್ತಮ್ ಇತ್ತಮ್ ಉರ್ಚಿ ಪೋಗೆಯುಮ್ , ಗುರುಗೆ ನಿದ್ರಾಭಿಘಾತಮ್ ಅಕ್ಕುಮ್ ಎಂದು ಅದನ್ ಅಱಿಯದಂತೆ ತಲೆಯನ್ ಉಗುರಿಸುತ್ತುಮ್ ಇರೆಯಿರೆ , ಅತಿ ವಿಶದ ವಿಶಾಲ ಊರುಕ್ಷತದಿಂದ ಒಱೆದು ಅನಿತು ಜಡೆಯುಮನ್ ನಾಂದಿ ಆ ವಂದ ಉತ್ಥಿತಮ್ ಅಸ್ರಮಿಶ್ರ ಗಂಧಮ್ ಮನಃಕ್ಷತದೊಡನೆ ಮುನಿಯನ್ ಎಳ್ಚಱಿಸಿದುದು.

ಅಂತು ಎಳ್ಚತ್ತು ನೆತ್ತರ ಪೊನಲೊಳ್ ನಾಂದು, ನನೆದ ಮೆಯ್ಯುಮನ್ ತೊಯ್ದು ತಳ್ಪೊಯ್ದ ಜಡೆಯುಮನ್ ಕಂಡು…)

ಪರಶುರಾಮ: ಈ ಧೈರ್ಯಮ್ ಕ್ಷತ್ರಿಯಂಗಲ್ಲದೆ ಆಗದು. ಪಾರ್ವನ್ ಎಂದು ಎನ್ನೊಳ್ ಪುಸಿದು ವಿದ್ದೆಯನ್ ಕೈಕೊಂಡುದರ್ಕೆ ದಂಡಮ್ ಪೆರತಿಲ್ಲ. ನಿನಗೆ ಆನ್ ಇತ್ತ ಬ್ರಹ್ಮಾಸ್ತ್ರಮ್ ಎಂಬ ದಿವ್ಯಾಸ್ತ್ರಮ್ ಅವಸಾನಕಾಲದೊಳ್ ಬೆಸಕೆಯ್ಯದೆ ಇರ್ಕೆ.

( ಎಂದು ಶಾಪಮನ್ ಇತ್ತನ್. ಅಂತು ಕರ್ಣನುಮ್ ಶಾಪಹತನಾಗಿ ಮಗುಳ್ದು ಬಂದು ಸೂತನ ಮನೆಯೊಳ್ ಇರ್ಪನ್ನೆಗಮ್…)

============================

ಪದ ವಿಂಗಡಣೆ ಮತ್ತು ತಿರುಳು

ನವ=ಹೊಸದಾದ; ಯೌವನ=ಹರೆಯ; ಆರಂಭ+ಒಳ್; ಆರಂಭ=ಮೊದಲು; ಆತನ್=ಕರ‍್ಣನು;

ಶಸ್ತ್ರ=ಬಿಲ್ಲು ಬಾಣ, ಕತ್ತಿ ಗುರಾಣಿ, ಗದೆ ಮೊದಲಾದ ಹತಾರಗಳು; ಶಾಸ್ತ್ರ=ಜನರು ತಮ್ಮ ನಿತ್ಯ ಜೀವನದಲ್ಲಿ ಜಾತಿ ಮತದ ಕಟ್ಟಲೆಗಳನ್ನು ಅನುಸರಿಸುವಾಗ, ದೇವರನ್ನು ಪೂಜಿಸುವಾಗ ಮತ್ತು ಬಹುಬಗೆಯ ಕಸುಬುಗಳನ್ನು ಮಾಡುವಾಗ ಆಚರಿಸಬೇಕಾದ ಸಂಪ್ರದಾಯಗಳು: ವಿದ್ಯೆ+ಒಳ್; ವಿದ್ಯೆ=ಅರಿವು; ಒಳ್+ಅಲ್ಲಿ; ಪರಿಣತನ್+ಆಗಿ; ಪರಿಣತ=ನಿಪುಣ/ನುರಿತವನು;

ನವಯೌವನ ಆರಂಭದೊಳ್ ಆತನ್ ಶಸ್ತ್ರಶಾಸ್ತ್ರವಿದ್ಯೆಯೊಳ್ ಅತಿ ಪರಿಣತನಾಗಿ=ಕರ‍್ಣನು ಹರೆಯಕ್ಕೆ ಕಾಲಿಡುತ್ತಿದ್ದಂತೆಯೇ ಶಸ್ತ್ರಶಾಸ್ತ್ರವಿದ್ಯೆಯನ್ನು ಚೆನ್ನಾಗಿ ಕರಗತಮಾಡಿಕೊಂಡು ನಿಪುಣನಾಗಿ;

ಜೇ+ಪೊಡೆ; ಜೇ=ಬಿಲ್ಲಿನ ಹೆದೆ/ಬಿಲ್ಲಿಗೆ ಕಟ್ಟಿರುವ ಹುರಿ; ಪೊಡೆ=ಬಾಣವನ್ನು ಬಿಡು; ಬಿಲ್ಲ ಜೇವೊಡೆ=ಬಿಲ್ಲಿನ ಹೆದೆಗೆ ಬಾಣವನ್ನು ಹೂಡಿ ಹುರಿಯನ್ನು ಹಿಂದಕ್ಕೆ ಎಳೆದು ಬಾಣವನ್ನು ಬಿಟ್ಟಾಗ ಕೇಳಿಬರುವ ದನಿ; ಮೀಱು=ಎದುರಾಗುವ; ವೈರಿ=ಹಗೆ/ಶತ್ರು; ನರೇಂದ್ರರ್+ಅನ್; ನರೇಂದ್ರ=ರಾಜ; ಅನ್=ಅನ್ನು; ಪೊಡೆ=ಹೊಡೆ/ಅಪ್ಪಳಿಸು/ಬಡಿ;

ಬಿಲ್ಲ ಜೇವೊಡೆಯೆ ಮೀಱುವ ವೈರಿ ನರೇಂದ್ರರನ್ ಪೊಡೆದುದು=ಕರ‍್ಣನು ಬಿಲ್ಲಿಗೆ ಬಾಣವನ್ನು ಹೂಡಿ ಬಿಟ್ಟಾಗ ಉಂಟಾದ ದನಿಯೇ ಕಾದಾಡಲೆಂದು ಎದುರು ಬಂದ ಶತ್ರು ರಾಜರನ್ನು ಬಡಿದಪ್ಪಳಿಸಿತು; ಕರ‍್ಣನ ಪರಾಕ್ರಮವನ್ನು ಬಣ್ಣಿಸಲು ಈ ರೀತಿ ಅತಿಶಯವಾದ ನುಡಿಯನ್ನು ಬಳಸಲಾಗಿದೆ;

ಬುಧ=ಪಂಡಿತ; ಮಾಗಧ=ಹೊಗಳುವುದನ್ನೇ ಕಸುಬನ್ನಾಗಿ ಮಾಡಿಕೊಂಡವರು; ವಂದಿ=ಕೊಂಡಾಡುವ/ಹೊಗಳುವ; ಮಾಗಧ ವಂದಿಜನ=ಗದ್ದುಗೆಯಲ್ಲಿರುವವರನ್ನು ಮತ್ತು ಸಿರಿವಂತರನ್ನು ಹೊಗಳುವುದನ್ನೇ ಕಸುಬನ್ನಾಗಿ ಮಾಡಿಕೊಂಡಿರುವ ಜನರು;

ನಿರಂತರ=ಸದಾಕಾಲ/ಯಾವಾಗಲೂ; ಕಡಿ+ಕಡಿದು; ಕಡಿ=ಕತ್ತರಿಸು; ಇತ್ತ=ಕೊಟ್ಟ; ಪೊನ್=ಹೊನ್ನು/ಚಿನ್ನ; ಕೊಟ್ಟ=ನೀಡಿದ; ಕೋಡು=ದಾನ;

ನಿರಂತರಮ್ ಕಡಿಕಡಿದು ಇತ್ತ ಪೊನ್ನ ಕೊಟ್ಟ ಕೋಡು=ಸದಾಕಾಲ ತೆಗೆತೆಗೆದು ದಾನವಾಗಿ ನೀಡಿದ ಚಿನ್ನ;

ಸಿಡಿಲ್+ಪೊಡೆ+ವೊಲ್; ಸಿಡಿಲು=ಮೋಡಗಳು ಒಂದಕ್ಕೊಂದು ಬಡಿದಾಗ ಉಂಟಾಗುವ ವಿದ್ಯುತ್ ಶಕ್ತಿ ಮತ್ತು ಕೇಳಿಬರುವ ದನಿ; ವೊಲ್=ಅಂತೆ/ಹಾಗೆ; ಅಟ್ಟು=ಬೆನ್ನು ಹತ್ತು/ಓಡಿಸು; ಮುಟ್ಟು=ತಲುಪು/ಸೇರು; ಆದ=ಉಂಟಾಗಿರುವ; ಎಡರು=ಅಡಚಣೆ/ಅಡ್ಡಿ; ಕಡಿದು=ಕತ್ತರಿಸಿ; ಇಕ್ಕು=ಇಡು; ಕಡಿದಿಕ್ಕಿದುದು=ಕತ್ತರಿಸಿ ಹಾಕಿತು;

ಬುಧ ಮಾಗಧ ವಂದಿಜನಕ್ಕೆ ನಿರಂತರಮ್ ಕಡಿಕಡಿದು ಇತ್ತ ಪೊನ್ನ ಕೊಟ್ಟ ಕೋಡು ಸಿಡಿಲ್ವೊಡೆವೊಲ್ ಅಟ್ಟಿ ಮುಟ್ಟಿ ಆದ ಎಡರನ್ ಕಡಿದು ಇಕ್ಕಿದುದು=ಸಿಡಿಲು ಬಡಿದ ಜಾಗದಲ್ಲಿ ಏನೊಂದು ಉಳಿಯದೆ ಎಲ್ಲವೂ ಸುಟ್ಟು ಬೂದಿಯಾಗುತ್ತದೆ. ಅಂತೆಯೇ ಕರ‍್ಣನು ಸದಾಕಾಲ ದಾನವಾಗಿ ನೀಡಿದ ಅಪಾರವಾದ ಚಿನ್ನದ ಸಂಪತ್ತು ಪಂಡಿತರ ಮತ್ತು ತನ್ನನ್ನು ಕೊಂಡಾಡುವ ಜನಸಮುದಾಯವರ ಬಡತನವನ್ನು ಸಂಪೂರ‍್ಣವಾಗಿ ತೊಡೆದುಹಾಕಿತು;

ಎಡರು=ಅಡಚಣೆ/ಅಡ್ಡಿ/ಎದುರಿಸು; ಎಡರದೆ=ಯಾವುದೇ ರೀತಿಯಲ್ಲಿ ಹಿಂಜರಿಯದೆ/ಎದುರಿಸಿದೆ; ಬೇಡು=ಯಾಚಿಸು/ಕೇಳು; ಓಡು=ಪಲಾಯನ ಮಾಡು;

ಎಡರದೆ ಬೇಡಿಮ್ ಓಡಿಮ್=ನೀವು ಬಡವರಾಗಿದ್ದರೆ ಯಾವುದೇ ಸಂಕೋಚವಿಲ್ಲದೆ ಕರ‍್ಣನನ್ನು ಕೇಳಿ ಸಂಪತ್ತನ್ನು ಪಡೆಯಿರಿ ಇಲ್ಲವೇ ಕರ‍್ಣನಿಗೆ ಎದುರಾಳಿಯಾಗಿದ್ದರೆ ಮತ್ತೊಂದನ್ನು ಯೋಚಿಸದೆ ಪಲಾಯನ ಮಾಡಿರಿ;

ಚಾಗ=ತ್ಯಾಗ/ವ್ಯಕ್ತಿಯು ತನ್ನಲ್ಲಿರುವುದನ್ನು ಇತರರಿಗೆ ದಾನವಾಗಿ ನೀಡುವುದು; ಬೀರ=ಪರಾಕ್ರಮ/ಕಲಿತನ;

ಇದು ಕರ್ಣನಾ ಚಾಗದ ಬೀರದ ಮಾತು=ಕರ‍್ಣನ ತ್ಯಾಗ ಮತ್ತು ಕಲಿತನದ ಬಗ್ಗೆ ಜನಸಮುದಾಯದ ಮಾತು ಇದೇ ಆಗಿದೆ;

ಅಂತು=ಆ ರೀತಿ; ಭುವನ=ಜಗತ್ತು/ಪ್ರಪಂಚ; ಭವನಕ್ಕೆ+ಎಲ್ಲಮ್; ಭವನ=ಜಾಗ; ನೆಗಳ್=ಹೆಸರುವಾಸಿಯಾಗು/ಕೀರ‍್ತಿಯನ್ನು ಹೊಂದು; ಪೊಗಳ್ತೆ=ಹೊಗಳಿಕೆ; ನೆಗಳ್ತೆ+ಉಮ್+ಅನ್; ನೆಗಳ್ತೆ=ಕೀರ‍್ತಿ; ಉಮ್=ಊ; ಅನ್=ಅನ್ನು; ಇಂದ್ರ=ದೇವತೆಗಳ ಒಡೆಯ; ದೇವಲೋಕದಲ್ಲಿ ದೇವತೆಗಳು, ಬೂಲೋಕದಲ್ಲಿ ಮಾನವರು ಮತ್ತು ಪಾತಾಳ ಲೋಕದಲ್ಲಿ ಹಾವುಗಳು ನೆಲೆಸಿವೆ ಎಂಬ ಕಲ್ಪನೆಯು ಜನಮನದಲ್ಲಿದೆ;

ಅಂತು ಭುವನ ಭವನಕ್ಕೆಲ್ಲಮ್ ನೆಗಳ್ದ ಕರ್ಣನ ಪೊಗಳ್ತೆಯಮ್ ನೆಗಳ್ತೆಯುಮುನ್ ಇಂದ್ರನ್ ಕೇಳ್ದು=ಜಗತ್ತಿನ ಎಲ್ಲೆಡೆಯಲ್ಲಿಯೂ ಆ ರೀತಿಯಲ್ಲಿ ಹಬ್ಬಿದ ಕರ‍್ಣನ ನಡೆನುಡಿಯ ಬಗೆಗಿನ ಹೊಗಳಿಕೆಯನ್ನು ಮತ್ತು ಕೀರ‍್ತಿಯನ್ನು ಕೇಳಿದ ದೇವತೆಗಳ ಒಡೆಯನಾದ ಇಂದ್ರನು;

ತನ್ನ+ಅಂಶ+ಒಳ್; ಅಂಶ=ಪಾಲು; ಒಳ್=ಅಲ್ಲಿ; ತನ್ನಂಶದೊಳ್=ತನ್ನ ಮತ್ತು ಕುಂತಿಯ ಕೂಡುವಿಕೆಯಿಂದ; ಪುಟ್ಟು=ಹುಟ್ಟು; ದ್ವಂದ್ವಯುದ್ಧ=ಇಬ್ಬರ ನಡುವೆ ನಡೆಯುವ ಕಾಳಗ; ಉಂಟು=ಇದೆ; ಎಂಬುದಮ್=ಎನ್ನುವುದನ್ನು; ದಿವ್ಯ=ಉತ್ತಮವಾದುದು; ಜ್ಞಾನ+ಇಂದ+ಅಮ್; ಜ್ಞಾನ=ಅರಿವು/ತಿಳುವಳಿಕೆ; ದಿವ್ಯಜ್ಞಾನ=ಮುಂದೆ ನಡೆಯಲಿರುವುದನ್ನು ಅರಿಯವುದು; ಅಱಿ=ತಿಳಿ;

ತನ್ನಂಶದೊಳ್ ಪುಟ್ಟುವ ಅರ್ಜುನಂಗಮ್ ಆತಂಗಮ್ ಮುಂದೆ ದ್ವಂದ್ವಯುದ್ಧಮ್ ಉಂಟು ಎಂಬುದಮ್ ತನ್ನ ದಿವ್ಯ ಜ್ಞಾನದಿಂದಮ್ ಅಱಿದು=ತನ್ನ ಮತ್ತು ಕುಂತಿಯ ಕೂಡುವಿಕೆಯಿಂದ ಹುಟ್ಟುವ ಅರ‍್ಜುನನಿಗೂ ಕರ‍್ಣನಿಗೂ ಮುಂದೆ ಕಾಳಗವು ನಡೆಯುತ್ತದೆ ಎಂಬುದನ್ನು ತನ್ನ ದಿವ್ಯನೋಟದಿಂದ ಅರಿತುಕೊಂಡು;

ಬೇಡಿದೊಡೆ=ಕೇಳಿಕೊಂಡರೆ/ಯಾಚಿಸಿದರೆ; ಬರಿ+ಉಮ್+ಅನ್; ಬರಿ=ಹೊಟ್ಟೆಯ ಇಬ್ಬದಿಯಲ್ಲಿಯೂ ಇರುವ ಮೂಳೆ/ಪಕ್ಕೆಲುಬು; ಉಗಿ=ಸೀಳಿ; ಈಡಾಡು=ಕಿತ್ತು ಬಿಸಾಡು;

ಬೇಡಿದೊಡೆ ಕರ್ಣನ್ ಬಲದ ಬರಿಯುಮನ್ ಉಗಿದು ಈಡಾಡುಗುಮ್=ಬೇಡಿಕೊಂಡರೆ ಕರ‍್ಣನು ತನ್ನ ಬಲದ ಪಕ್ಕೆಲುಬನ್ನೇ ಸೀಳಿ ಕೊಡುವನು;

ಇಂತು+ಅಲ್ಲದೆ; ಇಂತು=ಹೀಗೆ; ಅಲ್ಲದೆ=ಹೊರತು ಪಡಿಸಿ; ಈತನನ್=ಈ ಕರ‍್ಣನನ್ನು; ಗೆಲಲ್=ಗೆಲ್ಲುವುದಕ್ಕೆ; ಬಾರದು=ಆಗುವುದಿಲ್ಲ;

ಇಂತಲ್ಲದೆ ಈತನನ್ ಗೆಲಲ್ ಬಾರದು ಎಂದು=ಕರ‍್ಣನನ್ನು ಕಾಪಾಡಲೆಂದೇ ಹುಟ್ಟಿನಿಂದ ಅವನ ದೇಹದ ಜತೆಗೂಡಿ ಬಂದಿರುವ ಕವಚವನ್ನು ನಾನು ಈಗ ಬೇಡಿ ಪಡೆಯದಿದ್ದರೆ, ಅರ‍್ಜುನನು ಕರ‍್ಣನನ್ನು ಮುಂದೆ ಬರಲಿರುವ ಕಾಳಗದಲ್ಲಿ ಗೆಲ್ಲಲಾಗುವುದಿಲ್ಲ ಎಂದುಕೊಂಡು;

ಆಗಳೆ=ಆ ಗಳಿಗೆಯಲ್ಲಿಯೇ; ಕೈಗೂಡು=ಅನುಕೂಲವಾಗು; ವಟು+ಆಕೃತಿಯೊಳೆ; ವಟು=ಗುರುವಿನ ಬಳಿ ವಿದ್ಯೆಯನ್ನು ಕಲಿಯಲು ಬಂದಿರುವ ತರುಣ; ಆಕೃತಿ=ರೂಪ/ವೇಶ; ಸಹಜ=ಹುಟ್ಟಿನಿಂದ ಬಂದ; ಕವಚಮ್+ಅನ್; ಕವಚ=ದೇಹವನ್ನು ಕಾಪಾಡಲು ತೊಡುವ ಲೋಹದ ಅಂಗಿ; ಕುಂಡಳಮ್+ಅನ್; ಕುಂಡಳ=ಕಿವಿಯ ಓಲೆ; ಬೇಡಿದನ್=ಯಾಚಿಸಿದನು;

ಆಗಳೆ ಕೈಗೂಡಿದ ವಟುವಾಕೃತಿಯೊಳೆ ಆ ಸಹಜ ಕವಚಮನ್ ಕುಂಡಳಮನ್ ಬೇಡಿದನ್=ಮರುಗಳಿಗೆಯಲ್ಲಿಯೇ ದೇವೇಂದ್ರನು ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳುವುದಕ್ಕಾಗಿ ಅನುಕೂಲಕರವಾದ ವಟುವಿನ ರೂಪವನ್ನು ತಳೆದು, ಕರ‍್ಣನ ಬಳಿಗೆ ಬಂದು ಕವಚ ಕುಂಡಲಗಳನ್ನು ದಾನವಾಗಿ ಕೊಡುವಂತೆ ಬೇಡಿದನು;

ಅರಿ=ಕತ್ತರಿಸು;

ಬೇಡಿದುದನ್ ಅರಿದುಕೊಳ್=ಬೇಡಿದ್ದನ್ನು ನೀನೇ ಕತ್ತರಿಸಿ ತೆಗೆದುಕೊ;

ಎನಗೆ=ನನಗೆ; ಮುಟ್ಟಲ್+ಆಗದು; ಮುಟ್ಟು=ಪಡೆ/ಹೊಂದು;

ಬೇಡಿದುದನ್ ಎನಗೆ ಮುಟ್ಟಲಾಗದು=ನಾನು ಬೇಡಿದ್ದನ್ನು ನಾನೇ ಕತ್ತರಿಸಿ ತೆಗೆದುಕೊಳ್ಳಬಾರದು. ನೀನೇ ಅದನ್ನು ದಾನವಾಗಿ ನನಗೆ ನೀಡಬೇಕು;

ನೆಗಳ್=ತೊಡಗು; ಅಲ್ಲಾಡು=ಅಲುಗಾಡು/ನಡುಗು/ಬೆದರು/ಬೆಚ್ಚು; ಅರಿದು=ಕತ್ತರಿಸಿ;

ನೆಗಳ್ದು ಅಲ್ಲಾಡದೆ ಕವಚಮನ್ ಅರಿದು=ವಟು ಕೇಳಿದ್ದನ್ನು ಕರ‍್ಣನು ಕೊಡಲು ತೊಡಗಿ, ತುಸುವಾದರೂ ಬೆದರದೆ ಬೆಚ್ಚದೆ ಕವಚವನ್ನು ಸೀಳಿ ತೆಗೆದು;

ಕೊಳ್=ತೆಗೆದುಕೊ;

ಕೊಳ್ ಎಂದು ಇಂದ್ರಂಗೆ ಈಡಾಡಿದನ್=ತೆಗೆದುಕೊ ಎಂದು ಇಂದ್ರನಿಗೆ ನೀಡಿದನು;

ಎಂದುಮ್=ಎಂದಾದರೂ/ಯಾವತ್ತಾದರೂ; ಪೋಗು=ಹೋಗು; ಎಂದನೆ=ಎಂದು ಹೇಳಿದನೆ. ಅಂದರೆ ಹೇಳಲಿಲ್ಲ;

ಎಂದುಮ್ ಪೋಗು ಎಂದನೆ=ತನ್ನ ಬಳಿ ಬೇಡಿಬಂದವರನ್ನು ಯಾವತ್ತಾದರೂ ಬರಿಗಯ್ಯಲ್ಲಿ ಹೋಗಿ ಎಂದನೆ;

ಮಾಣ್=ನುಣುಚಿಕೊಳ್ಳು/ಜಾರಿಕೊಳ್ಳು;

ಮಾಣ್ ಎಂದನೆ=ದಾನವನ್ನು ಕೊಡದೆ ಸಬೂಬನ್ನು ಹೇಳಿ ನುಣುಚಿಕೊಂಡನೆ;

ಪೆಱತು=ಮತ್ತೊಂದು/ಬೇರೆಯದು; ಈ=ಕೊಡು; ಈವೆನ್=ಕೊಡುವೆನು;

ಪೆಱತೊಂದನ್ ಈವೆನ್ ಎಂದನೆ=ಯಾಚಕರು ಕೇಳಿದ್ದನ್ನು ಕೊಡದೆ, ಮತ್ತೊಂದನ್ನು ಕೊಡುವುದಾಗಿ ಹೇಳಿದನೆ;

ನೊಂದು+ಅಃ; ನೊಂದು=ಸಂಕಟದಿಂದ ಬೇಯುತ್ತ; ಅಃ=ಅಯ್ಯೋ ಅಯ್ಯೋ ಎನ್ನುತ್ತ ನರಳುವುದು;

ನೊಂದಃ ಎಂದನೆ=ದೇಹದ ತೊಗಲಿನೊಡನೆ ಸೇರಿಕೊಂಡಿದ್ದ ಕವಚವನ್ನು ಸೀಳಿ ಕಿತ್ತು ತೆಗೆಯುವಾಗ ಉಂಟಾದ ಯಾತನೆಯಿಂದ ನೊಂದು ನರಳಿದನೆ;

ಸೆರಗು+ಇಲ್ಲದೆ; ಸೆರಗು=ಅಪಾಯದ ಶಂಕೆ/ಏನಾಗುವುದೋ ಎಂಬ ಹೆದರಿಕೆ; ಪಿಡಿ=ತೆಗೆದುಕೊಳ್ಳುವುದು/ಹಿಡಿಯುವುದು;

ಸೆರಗಿಲ್ಲದೆ ಪಿಡಿ ಎಂದನ್=ಯಾವುದೇ ಬಗೆಯ ಅಂಜಿಕೆಯಾಗಲಿ ಇಲ್ಲವೇ ಅಳಲು ಇಲ್ಲದೆ “ತೆಗೆದುಕೊ” ಎಂದು ನುಡಿದು ಕವಚ ಕುಂಡಲಗಳನ್ನು ವಟುವಿಗೆ ನೀಡಿದನು;

ಇದು+ಏನ್; ಇದೇನ್=ಇಂತಹ ನಡೆನುಡಿಯು ಯಾವ ಬಗೆಯದು ಎಂಬ ಅಚ್ಚರಿಯನ್ನು ಸೂಚಿಸುವಾಗ ಹೇಳುವ ಪದ; ಕಲಿ=ಶೂರ; ಚಾಗಿ=ದಾನಿ/ತ್ಯಾಗಿ; ರವಿ=ಸೂರ‍್ಯ; ತನಯ=ಮಗ; ರವಿತನಯ=ರವಿಯ ಮಗನಾದ ಕರ‍್ಣ;

ಇದೇನ್ ಕಲಿಯೊ ಚಾಗಿಯೊ ರವಿತನಯನ್=ಸೂರ‍್ಯಪುತ್ರನಾದ ಕರ‍್ಣನು ಎಂತಹ ಕಲಿಯಾಗಿದ್ದಾನೆ ತ್ಯಾಗಿಯಾಗಿದ್ದಾನೆ;

ನೆತ್ತರ್=ರಕ್ತ; ಪನಿ=ಹನಿ ಹನಿಯಾಗಿ ಬೀಳು/ತೊಟ್ಟಿಕ್ಕು; ಪನ ಪನ ಪನಿಯೆ=ಹನಿ ಹನಿಯಾಗಿ ತೊಟ್ಟಿಕ್ಕುತ್ತಿರಲು; ತಿದಿ+ಉಗಿ+ಅಂತೆ; ತಿದಿ=ತೊಗಲು/ಚರ‍್ಮ; ಉಗಿ=ಸೀಳು; ತಿದಿಯುಗಿವಂತೆ=ತೊಗಲನ್ನು ಸುಲಿಯುವ ಹಾಗೆ; ಉಗಿದು=ಸೀಳಿ; ಕೊಟ್ಟೊಡೆ=ಕೊಡಲು;

ಅಂತು ತನ್ನ ಸಹಜ ಕವಚಮನ್ ನೆತ್ತರ್ ಪನ ಪನ ಪನಿಯೆ ತಿದಿಯುಗಿವಂತೆ ಉಗಿದು ಕೊಟ್ಟೊಡೆ=ಆ ಬಗೆಯಲ್ಲಿ ಕರ‍್ಣನು ತನ್ನ ಮಯ್ಯಿಗೆ ಹುಟ್ಟಿನಿಂದಲೇ ಜತೆಯಾಗಿದ್ದ ಕವಚವನ್ನು ದೇಹದ ಚರ‍್ಮವನ್ನು ಸುಲಿಯುವಂತೆ ಸುಲಿದು, ನೆತ್ತರು ಹನಿಹನಿಯಾಗಿ ತೊಟ್ಟಿಕ್ಕುತ್ತಿದ್ದರೂ ಲೆಕ್ಕಿಸದೆ ಇಂದ್ರನಿಗೆ ನೀಡಲು;

ಕಲಿತನ=ಪರಾಕ್ರಮ/ಶೂರತನ; ಮೆಚ್ಚು=ಒಲಿ/ಕೊಂಡಾಡು/ಪ್ರಸನ್ನನಾಗು;

ಇಂದ್ರನ್ ಆತನ ಕಲಿತನಕೆ ಮೆಚ್ಚಿ=ಕರ‍್ಣನ ಕಲಿತನವನ್ನು ಕಂಡು ಮೆಚ್ಚಿಕೊಂಡ ಇಂದ್ರನು;

ಸುರ=ದೇವತೆ; ದನುಜ=ರಕ್ಕಸ; ಭುಜಗ=ಹಾವು/ನಾಗ; ವಿದ್ಯಾಧರ=ದೇವತೆಗಳಲ್ಲಿ ಒಂದು ವರ‍್ಗಕ್ಕೆ ಸೇರಿದವನು; ನರ=ಮಾನವ; ಸಂಕುಲ+ಒಳ್; ಸಂಕುಲ=ಸಮೂಹ/ಗುಂಪು; ಆರನ್=ಯಾರನ್ನು; ಆದೊಡಮ್=ಆದರೂ; ಏನೋ=ಯಾವುದೋ;

ಸುರ ದನುಜ ಭುಜಗ ವಿದ್ಯಾಧರ ನರಸಂಕುಲದೊಳ್ ಆರನ್ ಆದೊಡಮ್ ಏನೋ=ದೇವತೆಗಳು, ರಕ್ಕಸರು, ನಾಗರು, ವಿದ್ಯಾದರರು ಮತ್ತು ಮಾನವರ ಗುಂಪಿನಲ್ಲಿ ಅವರು ಯಾರಾದರೂ ಆಗಿರಲಿ ;

ಧುರ+ಒಳ್; ಧುರ=ಕಾಳಗ; ನಿಜ=ನಿನ್ನ; ವಿರೋಧಿ+ಅನ್; ವಿರೋಧಿ=ಹಗೆ/ಶತ್ರು; ಗರ=ಗ್ರಹ/ದೆವ್ವ; ‘ಗರ ಮುಟ್ಟು  ಎಂಬ ಪದಕಂತೆಯು ಒಂದು ನುಡಿಗಟ್ಟಾಗಿ ಬಳಕೆಯಾಗಿದೆ. ಗರ ಹಿಡಿಯಲಿ ಇಲ್ಲವೇ ಗರಬಡಿಯಲಿ ಎನ್ನುವುದಕ್ಕೆ ಕೇಡಾಗಲಿ ಎಂಬ ತಿರುಳಿದೆ; ಶಕ್ತಿ+ಅನ್; ಶಕ್ತಿ=ತುಂಬಾ ಕಸುವುಳ್ಳ ಶಸ್ತ್ರದ ಹೆಸರು/ಕತ್ತಿ. ಇಂದ್ರನ ಬಳಿ ಇದ್ದ ಹತಾರ; ಇತ್ತನ್=ನೀಡಿದನು;

ಧುರದೊಳ್ ನಿಜ ವಿರೋಧಿಯನ್ ಇದು ಗರ ಮುಟ್ಟೆ ಕೊಲ್ಗುಮ್ ಎಂದು ಶಕ್ತಿಯನ್ ಇತ್ತನ್=ಕಾಳಗದಲ್ಲಿ ನಿನ್ನ ಹಗೆಯನ್ನು ಕೇಡಿಗೆ ಗುರಿಮಾಡಿ ಯಾವ ಕಾರಣದಿಂದಲೂ ಹಗೆಯು ಪಾರಾಗಲು ಬಿಡದೆ ಕೊಲ್ಲುವುದು ಎಂದು ಹೇಳಿ ಶಕ್ತಿಯೆಂಬ ಶಸ್ತ್ರವನ್ನು ಇಂದ್ರನು ಕರ‍್ಣನಿಗೆ ನೀಡಿದನು;

ಅಂತು ಇಂದ್ರನ್ ಇತ್ತ ಶಕ್ತಿಯನ್ ಕೈಕೊಂಡು=ಆ ರೀತಿಯಲ್ಲಿ ಇಂದ್ರನು ಕೊಟ್ಟ ಶಕ್ತಿಯೆಂಬ ಹೆಸರಿನ ಶಸ್ತ್ರವನ್ನು ಪಡೆದುಕೊಂಡು;

ನಿಜ=ತನ್ನ; ಭುಜ=ತೋಳು; ಶಕ್ತಿ+ಅನ್; ಶಕ್ತಿ=ಕಸುವು/ಬಲ; ಪ್ರಕಟ=ಬಹಿರಂಗವಾದುದು; ಮಾಡಲ್+ಎಂದು;

ನಿಜಭುಜ ಶಕ್ತಿಯನ್ ಪ್ರಕಟಮ್ ಮಾಡಲೆಂದು=ತನ್ನ ತೋಳ್ಬಲ ಎಂತಹುದು ಎಂಬುದನ್ನು ಜಗತ್ತಿಗೆ ತೋರಿಸಲು ಇನ್ನೂ ಹೆಚ್ಚಿನ ವಿದ್ಯೆಯನ್ನು ಕಲಿಯಬೇಕೆಂದು;

ರೇಣುಕಾ+ನಂದನ+ಅನ್; ರೇಣುಕೆ=ಜಮದಗ್ನಿ ಎಂಬ ರಿಸಿಯ ಹೆಂಡತಿ; ನಂದನ=ಮಗ; ರೇಣುಕಾನಂದನ=ಪರಶುರಾಮ; ಪೋಗಿ=ಹೋಗಿ;

ರೇಣುಕಾನಂದನನ್ ಅಲ್ಲಿಗೆ ಪೋಗಿ=ಪರಶುರಾಮನ ಬಳಿಗೆ ಹೋಗಿ;

ರಾಮನ್+ಅನ್;

ಉಗ್ರ=ಪ್ರಚಂಡ/ಶಕ್ತಿಯಿಂದ ಕೂಡಿದ; ಪರಶು=ಕೊಡಲಿ; ಪಾಟಿತ=ಸೀಳಿದ; ರಿಪು=ಶತ್ರು/ಹಗೆ; ವಂಶ+ಆರಾಮನ್+ಅನ್; ಆರಾಮ=ತೋಟ;

ಉಗ್ರ ಪರಶು ಪಾಟಿತ ರಿಪು ವಂಶಾರಾಮನನ್ ಆ ರಾಮನನ್=ತನ್ನ ಪ್ರಚಂಡವಾದ ಕೊಡಲಿಯಿಂದ ಹಗೆಗಳ ವಂಶವೆಂಬ ತೋಟವನ್ನೇ ಸೀಳಿ ಸವರಿದ ಕಡುಗಲಿಯಾದ ಆ ಪರಶುರಾಮನನ್ನು; ಪರಶುರಾಮನು ಇಪ್ಪತೊಂದು ಬಾರಿ ನಾಡೆಲ್ಲವನ್ನೂ ಸುತ್ತಿ ರಾಜವಂಶದವರನ್ನೆಲ್ಲಾ ತನ್ನ ಕೊಡಲಿಯಿಂದ ಕತ್ತರಿಸಿ ಹಾಕಿದನು ಎಂಬ ಪುರಾಣದ ಕತೆಯು ಜನಮನದಲ್ಲಿದೆ;

ಗುರು=ತನ್ನ ಬಳಿ ಬಂದ ವ್ಯಕ್ತಿಗಳಿಗೆ ವಿದ್ಯೆಯನ್ನು ನೀಡಿ, ಒಳ್ಳೆಯ ನಡೆನುಡಿಗಳನ್ನು ಕಲಿಸುವವನು; ಶುಶ್ರೂಷೆ+ಒಳ್; ಶುಶ್ರೂಷೆ=ಉಪಚಾರ/ಸೇವೆ; ಒಳ್=ಅಲ್ಲಿ; ಕೂರ್=ಒಪ್ಪು/ಮೆಚ್ಚು; ಕೂರಿಸೆ=ಮೆಚ್ಚಿಸಲು;

ಗುರು ಶುಶ್ರೂಷೆಯೊಳ್ ಕೂರಿಸೆ=ಗುರುವಿನ ಮೆಚ್ಚುಗೆಗೆ ಪಾತ್ರನಾಗುವಂತೆ ಸೇವೆಯನ್ನು ಮಾಡಲು;

ವಿಕರ್ತನ=ಸೂರ‍್ಯ; ವೈಕರ್ತನ=ಸೂರ‍್ಯನ ಮಗ ಕರ‍್ಣ; ಬಲ್ಮೆ=ಬಲ/ಶಕ್ತಿ/ಹಿರಿಮೆ; ಇಷು=ಬಾಣ; ಇಷುವಿದ್ಯೆ=ಬಿಲ್ಲಿಗೆ ಬಾಣವನ್ನು ಹೂಡಿ ಪ್ರಯೋಗಿಸುವ ವಿದ್ಯೆ; ಪಾರಗ=ನಿಪುಣ; ಎನಿಸು=ಎನ್ನುವ ಹಾಗೆ ಮಾಡು;

ವೈಕರ್ತನನಾ ಬಲ್ಮೆ ಇಷುವಿದ್ಯಾ ಪಾರಗನ್ ಎನಿಸಿದುದು=ಕರ‍್ಣನ ಬಿಲ್ಲು ವಿದ್ಯೆಯ ಹಿರಿಮೆಯು ಅವನಿಗೆ ಬಿಲ್ಲು ವಿದ್ಯೆಯಲ್ಲಿ ಅಪಾರವಾದ ನಿಪುಣತೆಯನ್ನು ಪಡೆದವನು ಎಂಬ ಹೆಸರನ್ನು ತಂದಿತು;

ಅಂತು=ಹಾಗೆ; ಧನುರ್ಧರ=ಬಿಲ್ಲನ್ನು ಹಿಡಿದಿರುವವನು; ಅಗ್ರ+ಗಣ್ಯನ್+ಆಗಿ; ಅಗ್ರ=ಮೊದಲಿನ/ಮುಂಚೂಣಿಯ; ಗಣ್ಯ=ಗಣನೀಯ/ಮಾನ್ಯ; ಅಗ್ರಗಣ್ಯನ್=ದೊಡ್ಡ ವ್ಯಕ್ತಿ; ಇರ್ದ=ಇರುವಾಗ;

ಅಂತು ಧನುರ್ಧರ ಅಗ್ರಗಣ್ಯನಾಗಿ ಇರ್ದ=ಬಿಲ್ಲಿನ ವಿದ್ಯೆಯಲ್ಲಿ ದೊಡ್ಡ ಪರಿಣತನಾಗಿ ಇರುವಾಗ;

ಮಱೆದು=ಎಚ್ಚರವಿಲ್ಲದೆ/ನಿದ್ರೆಯನ್ನು ಮಾಡುತ್ತ; ಒಱಗು=ಮಲಗು; ಪ್ರಸ್ತಾವ+ಒಳ್; ಪ್ರಸ್ತಾವ=ಸಮಯ;

ಒಂದು ದಿವಸಮ್ ತನ್ನ ತೊಡೆಯ ಮೇಲೆ ತಲೆಯನ್ ಇಟ್ಟು ಪರಶುರಾಮನ್ ಮಱೆದು ಒಱಗಿದ ಆ ಪಸ್ತಾವದೊಳ್= ಒಂದು ದಿನ ಕರ‍್ಣನ ತೊಡೆಯ ಮೇಲೆ ತಲೆಯನ್ನಿಟ್ಟು ಪರಶುರಾಮನು ನಿದ್ರಿಸುತ್ತಿರುವ ಸಮಯದಲ್ಲಿ;

ಮುನಿ=ರಿಸಿ; ಮುನಿಸು=ಕೋಪ/ಸಿಟ್ಟು; ಮಾಡಲ್+ಎಂದು;

ಆ ಮುನಿಗೆ ಮುನಿಸನ್ ಮಾಡಲೆಂದು=ಪರಶುರಾಮನಿಗೆ ಕರ‍್ಣನ ಬಗ್ಗೆ ಕೋಪ ಬರುವಂತೆ ಮಾಡಲೆಂಬ ಉದ್ದೇಶದಿಂದ;

ಉಪಾಯ+ಒಳ್; ಉಪಾಯ=ಯುಕ್ತಿ/ಕುತಂತ್ರ; ಅಟ್ಟು=ಕಳುಹಿಸು; ವಜ್ರ=ದೊಡ್ಡದಾದ/ಬಲವಾದ; ಕೀಟ=ಹುಳು/ದುಂಬಿ/ತುಂಬಿ; ವಜ್ರಕೀಟ=ಯಾವುದನ್ನಾದರೂ ಆಳವಾಗಿ ಕೊರೆದು ತುಂಡು ಮಾಡುವ ಶಕ್ತಿಯಿರುವ ದೊಡ್ಡ ದುಂಬಿ;

ಇಂದ್ರನು ಉಪಾಯದೊಳ್ ಅಟ್ಟಿದ ವಜ್ರಕೀಟಂಗಳ್=ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳುವುದಕ್ಕಾಗಿ ಇಂದ್ರನು ಕಳುಹಿಸಿದ ದೊಡ್ಡ ಗಾತ್ರದ ದುಂಬಿಗಳು;

ಕರ್ಣನ ಎರಡುಮ್ ತೊಡೆಯುಮನ್=ಕರ‍್ಣನ ಎರಡು ತೊಡೆಗಳನ್ನು;

ಉಳಿ=ಕಬ್ಬಿಣದ ಲೋಹದಿಂದ ಮಾಡಿರುವ ಚೂಪಾದ ಮೊನೆಯುಳ್ಳ ಒಂದು ಉಪಕರಣ. ಕಲ್ಲಿನ ಮೇಲೆ ಇದನ್ನು ಇಟ್ಟು ಸುತ್ತಿಗೆಯಿಂದ ಹೊಡೆಯತೊಡಗಿದರೆ, ಕಲ್ಲಿನಲ್ಲಿಯೂ ಗುಳಿಯುಂಟಾಗುತ್ತದೆ; ಊಱಿ=ನೇರವಾಗಿ ನಿಲ್ಲಿಸಿ ಬಿಗಿಯಾಗಿ ಹಿಡಿದುಕೊಂಡು; ಕೊಡಂತಿ+ಒಳ್; ಕೊಡಂತಿ=ಸುತ್ತಿಗೆ; ಬೆಟ್ಟು+ಅಂತೆ; ಬೆಟ್ಟು=ಹೊಡೆ/ಬಡಿ/ಕಡಿ/ಕತ್ತರಿಸು; ಬೆಟ್ಟಿದಂತೆ=ಕೊರೆದು ಕತ್ತರಿಸುವಂತೆ; ಅತ್ತಮ್=ಆ ಕಡೆ; ಇತ್ತಮ್=ಈ ಕಡೆ; ಉರ್ಚು=ಚುಚ್ಚು/ತಿವಿ/ಸೀಳುಕೊಂಡು ಬರುವುದು; ಪೋಗೆ+ಉಮ್; ಪೋಗು=ಹೋಗು; ಪೋಗೆಯುಮ್=ಹೋಗಲು;

ಉಳಿಯನ್ ಊಱಿ ಕೊಡಂತಿಯೊಳ್ ಬೆಟ್ಟಿದಂತೆ ಅತ್ತಮ್ ಇತ್ತಮ್ ಉರ್ಚಿ ಪೋಗೆಯುಮ್ =ಉಳಿಯನ್ನು ಬಿಗಿಯಾಗಿ ಊರಿ ಸುತ್ತಿಗೆಯಿಂದ ಹೊಡೆದು ಗುಳಿ ಮಾಡಿ ಕತ್ತರಿಸುವಂತೆ ತೊಡೆಯ ಎರಡು ಕಡೆಗಳಲ್ಲೂ ಕೊರೆಕೊರೆದು ದುಂಬಿಗಳು ಸೀಳಿಕೊಂಡು ಹೋಗಲು;

ನಿದ್ರಾ+ಅಭಿಘಾತಮ್; ಅಭಿಘಾತ=ಹಾನಿ/ಗಾಸಿ; ಅಕ್ಕುಮ್=ಆಗುವುದು; ಅದನ್=ಅದನ್ನು; ಅಱಿಯದ+ಅಂತೆ; ಅಱಿ=ತಿಳಿ; ಉಗುರಿಸು=ಉಗುರಿನಿಂದ ಕೆರೆಯುವುದು; ಇರೆ+ಇರೆ;

ಗುರುಗೆ ನಿದ್ರಾಭಿಘಾತಮ್ ಅಕ್ಕುಮ್ ಎಂದು ಅದನ್ ಅಱಿಯದಂತೆ ತಲೆಯನ್ ಉಗುರಿಸುತ್ತುಮ್ ಇರೆಯಿರೆ=ತನ್ನ ತೊಡೆಗಳನ್ನು ಕೊರೆಯುತ್ತಿರುವ ದುಂಬಿಗಳ ಮೊರೆತದಿಂದ ಗುರುವಿನ ನಿದ್ರೆಗೆ ಹಾನಿಯು ಉಂಟಾಗುತ್ತಿರುವುದನ್ನು ಕರ‍್ಣನು ಅರಿತು, ಅದನ್ನು ಗುರುಗಳು ತಿಳಿಯದಂತಿರಲಿ ಎಂದು ಗುರುವಿನ ತಲೆಯನ್ನು ತನ್ನ ಕಯ್ಗಳಿಂದ ಮೆಲ್ಲನೆ ನೇವರಿಸುತ್ತ , ತನ್ನ ನೋವನ್ನು ತಾನೇ ತಿನ್ನುತ್ತಿರಲು;

ಅತಿ=ಬಹಳ ಹೆಚ್ಚಾದ; ವಿಶದ=ನಿಚ್ಚಳವಾಗಿ ಕಂಡುಬರುತ್ತಿರುವ; ವಿಶಾಲ=ದೊಡ್ಡದು; ಊರು=ತೊಡೆ; ಕ್ಷತ=ಗಾಯ; ಒಱೆ=ಜಿನುಗು;

ಅತಿ ವಿಶದ ವಿಶಾಲ ಊರುಕ್ಷತದಿಂದ ಒಱೆದು=ದೊಡ್ಡ ರೀತಿಯಲ್ಲಿ ಉಂಟಾದ ತೊಡೆಯ ಗಾಯದಿಂದ ಜಿನುಗುತ್ತಿರುವ ರಕ್ತವು;

ಅನಿತು=ಅಶ್ಟು; ಜಡೆ+ಉಮ್+ಅನ್; ಜಡೆಯುಮನ್=ಜಡೆಯನ್ನು; ನಾಂದಿ=ಒದ್ದೆಗೊಳಿಸಿ/ನೆನೆಯುವಂತೆ ಮಾಡಿ;

ಅನಿತು ಜಡೆಯುಮನ್ ನಾಂದಿ=ಮುನಿಯ ಜಡೆಯನ್ನೆಲ್ಲಾ ಒದ್ದೆಮಾಡಿ;

ಆ ವಂದ=ಆ ರೀತಿ ಹೊರಬಂದ; ಉತ್ಥಿತ=ಹೆಚ್ಚಾಗುತ್ತಿರುವ; ಅಸ್ರ=ರಕ್ತ; ಮಿಶ್ರ=ಕೂಡಿದ; ಗಂಧ=ವಾಸನೆ;

ಆ ವಂದ ಉತ್ಥಿತಮ್ ಅಸ್ರಮಿಶ್ರ ಗಂಧಮ್=ಆ ರೀತಿಯಲ್ಲಿ ಹೆಚ್ಚಾಗಿ ಹರಿದುಬರುತ್ತಿರುವ ರಕ್ತದಿಂದ ಕೂಡಿದ ವಾಸನೆಯು;

ಮನಃಕ್ಷತ+ಒಡನೆ; ಮನಃಕ್ಷತ=ಮನಸ್ಸಿಗೆ ಉಂಟಾದ ಗಾಸಿ; ಒಡನೆ=ಕೂಡಲೇ; ಎಳ್ಚಱಿಸು=ಎಚ್ಚರಗೊಳಿಸು;

ಮುನಿಯನ್ ಮನಃಕ್ಷತದೊಡನೆ ಎಳ್ಚಱಿಸಿದುದು=ಮುನಿಯ ಮನಸ್ಸನ್ನು ಗಾಸಿಗೊಳಿಸಿ ಎಚ್ಚರಗೊಳ್ಳುವಂತೆ ಮಾಡಿತು;

ಎಳ್ಚತ್ತು=ಎಚ್ಚರಗೊಂಡು;

ಅಂತು ಎಳ್ಚತ್ತು=ಆ ಕಾರಣದಿಂದ ಎಚ್ಚರಗೊಂಡವನಾಗಿ;

ನೆತ್ತರು=ರಕ್ತ; ಪೊನಲ್+ಒಳ್; ಪೊನಲ್=ಪ್ರವಾಹ/ಕೋಡಿ; ನಾಂದು=ಒದ್ದೆಯಾಗು; ನನೆ=ಒದ್ದೆಯಾಗು; ಮೆಯ್ಯುಮ್+ಅನ್; ತೊಯ್=ಒದ್ದೆಯಾಗುವುದು; ತಳ್ಪು+ಒಯ್ದ; ತಳ್ಪು=ಒಂದಕ್ಕೊಂದು ಕೂಡಿಕೊಂಡಿರುವುದು; ತಳ್ಪೊಯ್ದ=ಒಂದಕ್ಕೊಂದು ಅಂಟಿಕೊಂಡಿರುವ;

ನೆತ್ತರ ಪೊನಲೊಳ್ ನಾಂದು ನನೆದ ಮೆಯ್ಯುಮನ್ ತೊಯ್ದು ತಳ್ಪೊಯ್ದ ಜಡೆಯುಮನ್ ಕಂಡು=ಕರ‍್ಣನ ತೊಡೆಗಳಿಂದ ಹರಿಯುತ್ತಿದ್ದ ನೆತ್ತರಿನ ಕೋಡಿಯಲ್ಲಿ ಒದ್ದೆಯಾಗಿರುವ ತನ್ನ ಮಯ್ಯನ್ನು ಮತ್ತು ಒದ್ದೆಗೊಂಡು ಒಂದಕ್ಕೊಂದು ಅಂಟಿಕೊಂಡು ಮುದ್ದೆಯಾಗಿರುವ ತನ್ನ ಜಡೆಯನ್ನು ಕಂಡು;

ಈ=ಇಂತಹ; ಧೈರ್ಯ=ಎದೆಗಾರಿಕೆ/ಕೆಚ್ಚು; ಕ್ಷತ್ರಿಯಂಗೆ+ಅಲ್ಲದೆ; ಅಲ್ಲದೆ=ಹೊರತು ಪಡಿಸಿ;

ಈ ಧೈರ್ಯಮ್ ಕ್ಷತ್ರಿಯಂಗಲ್ಲದೆ ಆಗದು=ಮಯ್ಯಿಂದ ನೆತ್ತರು ಒಂದೇ ಸಮನೆ ಹರಿಯುತ್ತಿದ್ದರೂ ಅದಕ್ಕಾಗಿ ಅಂಜದೆ ಅಳುಕದೆ ಎಲ್ಲ ಬಗೆಯ ನೋವನ್ನು ತಡೆದುಕೊಳ್ಳುವ ಎದೆಗಾರಿಕೆಯು ಕ್ಶತ್ರಿಯ ಕುಲದಲ್ಲಿ ಹುಟ್ಟಿದವನಿಗಲ್ಲದೆ ಬೇರೆಯವರಲ್ಲಿ ಇರುವುದಿಲ್ಲ;

ಪಾರ್ವ=ಬ್ರಾಹ್ಮಣ; ಎನ್ನ+ಒಳ್; ಎನ್ನ=ನನ್ನ; ಪುಸಿ=ಸುಳ್ಳು; ವಿದ್ದೆ+ಅನ್; ವಿದ್ದೆ=ವಿದ್ಯೆ; ಕೈಕೊಂಡುದರ್ಕೆ=ಪಡೆದುಕೊಂಡಿರುವುದಕ್ಕಾಗಿ; ದಂಡ=ಯಾತನೆ ಇಲ್ಲವೇ ನೋವಿಗೆ ಗುರಿಪಡಿಸುವುದು; ಪೆರತು+ಇಲ್ಲ; ಪೆರತು=ಮತ್ತೊಂದು/ಬೇರೆಯದು;

ಪಾರ್ವನ್ ಎಂದು ಎನ್ನೊಳ್ ಪುಸಿದು ವಿದ್ದೆಯನ್ ಕೈಕೊಂಡುದರ್ಕೆ ದಂಡಮ್ ಪೆರತಿಲ್ಲ=ಬ್ರಾಹ್ಮಣನೆಂದು ನನ್ನೊಡನೆ ನೀನು ಸುಳ್ಳನ್ನು ಹೇಳಿ ನನ್ನಿಂದ ವಿದ್ಯೆಯನ್ನು ಕಲಿತುಕೊಂಡಿರುವುದಕ್ಕೆ ನಿನಗೆ ಮತ್ತಾವ ಬಗೆಯ ದಂಡನೆಯನ್ನು ನಾನು ನೀಡುವುದಿಲ್ಲ;

ಆನ್=ನಾನು; ಇತ್ತ=ಹೇಳಿಕೊಟ್ಟಿರುವ/ನೀಡಿರುವ; ಎಂಬ=ಎನ್ನುವ; ದಿವ್ಯ+ಅಸ್ತ್ರಮ್; ದಿವ್ಯ=ಬಹು ದೊಡ್ಡದಾದ/ಉತ್ತಮವಾದ; ಅಸ್ತ್ರ=ಆಯುದ/ಹತಾರ; ಅವಸಾನ+ಕಾಲ+ಒಳ್; ಅವಸಾನ=ಸಾವು/ಮರಣ; ಅವಸಾನಕಾಲದೊಳ್=ಸಾವಿನ ಕೊನೆಗಳಿಗೆಯಲ್ಲಿ/ನಿನ್ನ ಜೀವಕ್ಕೆ ಬಹು ದೊಡ್ಡ ಗಂಡಾಂತರವು ಬಂದೊದಗಿದ ಸಮಯದಲ್ಲಿ; ಬೆಸ=ಕೆಲಸ/ಆದೇಶ/ಅಪ್ಪಣೆ; ಕೆಯ್=ಮಾಡು; ಬೆಸಕೆಯ್=ಹೇಳಿದ ಕೆಲಸವನ್ನು ಮಾಡುವುದು; ಬೆಸಕೆಯ್ಯದೆ=ನಿನ್ನ ಆದೇಶವನ್ನು ಪಾಲಿಸದೆ; ಇರ್ಕೆ=ಇರಲಿ;

ನಿನಗೆ ಆನ್ ಇತ್ತ ಬ್ರಹ್ಮಾಸ್ತ್ರಮ್ ಎಂಬ ದಿವ್ಯಾಸ್ತ್ರಮ್ ಅವಸಾನಕಾಲದೊಳ್ ಬೆಸಕೆಯ್ಯದೆ ಇರ್ಕೆ=ನಾನು ನಿನಗೆ ನೀಡಿರುವ ದಿವ್ಯವಾದ ಬ್ರಹ್ಮಾಸ್ತ್ರವು ನಿನ್ನ ಸಾವಿನ ಸಮಯದಲ್ಲಿ ನಿನ್ನ ಆದೇಶವನ್ನು ಪಾಲಿಸದಿರಲಿ;

ಶಾಪ=ವ್ಯಕ್ತಿಗೆ ಕೇಡಾಗಲೆಂದು ಬಯಸುವ ನುಡಿಗಳು;

ಎಂದು ಶಾಪಮನ್ ಇತ್ತನ್=ಎಂದು ಪರಶುರಾಮನು ಕರ‍್ಣನಿಗೆ ಶಾಪವನ್ನು ನೀಡಿದನು;

ಹತ=ಬಡಿದ/ಹೊಡೆದ/ನಾಶವಾದ; ಶಾಪಹತ=ಶಾಪಕ್ಕೆ ಗುರಿಯಾಗಿ/ಶಾಪ ತಟ್ಟಿದವನಾಗಿ; ಮಗುಳ್=ಹಿಂತಿರುಗು; ಇರ್ಪ+ಅನ್ನೆಗಮ್; ಇರ್ಪ=ಇರುವ; ಅನ್ನೆಗಮ್=ವರೆಗೆ;

ಅಂತು ಕರ್ಣನುಮ್ ಶಾಪಹತನಾಗಿ ಮಗುಳ್ದು ಬಂದು ಸೂತನ ಮನೆಯೊಳ್ ಇರ್ಪನ್ನೆಗಮ್=ಆ ರೀತಿಯಲ್ಲಿ ಪರಶುರಾಮನಿಂದ ಶಾಪಕ್ಕೆ ಗುರಿಯಾದ ಕರ‍್ಣನು ಅಲ್ಲಿಂದ ಹಿಂತಿರುಗಿ ಬಂದು ತನ್ನ ಸಾಕು ತಂದೆಯಾದ ಸೂತನ ಮನೆಯಲ್ಲಿರುವಾಗ…

(ಚಿತ್ರ ಸೆಲೆ: kannadadeevige.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks