ನಾವೇಕೆ ಬಯ್ಯುತ್ತೇವೆ? – 2ನೆಯ ಕಂತು

– ಸಿ.ಪಿ.ನಾಗರಾಜ.

(ಕಂತು -1)

ಇದ್ದಕ್ಕಿದ್ದಂತೆಯೇ ಉಂಟಾದ ಅಡೆತಡೆಗಳಿಂದ ಕೆರಳಿದ ಮನದ ಉದ್ವೇಗ, ಹತಾಶೆ, ನೋವು , ಕೋಪ ತಾಪವನ್ನು ಕಡಿಮೆ ಮಾಡಿಕೊಳ್ಳುವುದು ಮಾತ್ರವಲ್ಲ , ಜನರು ತಮ್ಮ ನಿತ್ಯ ಜೀವನದ ಆಗುಹೋಗುಗಳಲ್ಲಿ ಇನ್ನು ಅನೇಕ ಉದ್ದೇಶಗಳಿಗಾಗಿ ಬಯ್ಗುಳಗಳನ್ನು ಬಳಸುತ್ತಾರೆ. ಉದಾಹರಣೆಯಾಗಿ ಇನ್ನು ಕೆಲವು ಪ್ರಸಂಗಗಳನ್ನು ಗಮನಿಸೋಣ.

ಪ್ರಸಂಗ – 5

ಮನೆಯೊಳಗಿನ ಒಂದು ಸನ್ನಿವೇಶ. ಬಿ.ಎ. ಓದಿರುವ ಮಗ ಇತ್ತ ಹೊಲಗದ್ದೆಯಲ್ಲಿ ದುಡಿಮೆಯನ್ನು ಮಾಡದೆ, ಅತ್ತ ಸಂಪಾದನೆಯ ಯಾವ ದಾರಿಯನ್ನು ಹಿಡಿಯದೆ, ಅಲ್ಲಿ ಇಲ್ಲಿ ಕುಂತಿದ್ದು, ಉಣ್ಣುವ ಸಮಯಕ್ಕೆ ಸರಿಯಾಗಿ ಮನೆಗೆ ಬಂದು ಹೋಗುತ್ತಿರುತ್ತಾನೆ. ಇದರಿಂದ ನೊಂದು ಬೆಂದು ಆಕ್ರೋಶಗೊಂಡಿದ್ದ ಬೋರಪ್ಪನವರು ಎಂದಿನಂತೆ ಈ ದಿನವೂ ತಮ್ಮ ಹೆಂಡತಿ ಮಾದಮ್ಮನ ಮುಂದೆ ಮಗನನ್ನು ಬಯ್ಯುತ್ತ ಕುಳಿತಿದ್ದಾರೆ.

ಬೋರಪ್ಪ : ಇವತ್ತು ಬರಲಿ ಆ ಚಂಗ್ಲು ನನ್ಮಗ. ಏನಾದ್ರು ಒಂದು ಗೇಮೆ ಅಂತ ಮಾಡ್ಕೊಂಡು ಇರೋದಾದ್ರೆ ಅಟ್ಟೀಲಿರು. ಇಲ್ದೇದ್ರೆ ನಿನ್ ಪಾಡು ನೀನ್ ನೋಡ್ಕೊ ಅಂತೀನಿ.

ಮಾದಮ್ಮ: ಬೆಳ್ದು ಕಯ್ಯಿಗೆ ಬಂದಿರು ಮಗನ್ನ ಹಂಗೆಲ್ಲಾ ಅನ್ನೂಕೆ ಹೋಗ್ಬೇಡಿ. ಆಮ್ಯಾಲೆ ಒಂದಕ್ಕೋಗಿ ಮತ್ತೊಂದಕ್ಕೆ ತಿರೀಕೊಂಡದು.

ಬೋರಪ್ಪ : ತೂ… ಸುಮ್ಮನಿರು ಕತ್ತೆಮುಂಡೆ. ನಿನ್ನಿಂದಲೆ ಅವನು ಹಾಳಾಗೋದ.

ಮಾದಮ್ಮ: ಮಾತೆತ್ತಿದರೆ ಸಾಕು ನಿಮ್ಮ ಬಾಯಲ್ಲಿ ನನ್ನ ಮುಂಡೆ, ಚಿನಾಲಿ ಅನ್ನೋದು ಬುಟ್ರೆ ಇನ್ನೇನ್ ತಾನೆ ಕಡದದು?

( ಈ ಮಾತುಕತೆ ನಡೆಯುತ್ತಿರುವಾಗ ಮನೆಯೊಳಕ್ಕೆ ಮಗ ಬರುತ್ತಾನೆ.)

ಬೋರಪ್ಪ : ಲೇ ನಿಂತ್ಕೊಳ್ಳ… ನಿಂಗೇನ್ ಮಾನಮರ‍್ವಾದೆ ಅಂತ ಏನೂ ಇಲ್ವೇ? ಊರಲ್ಲಿರೋ ಅಲಾಲ್ ಟೋಪಿ ನನ್ಮಕ್ಳ ಜೊತೇಲಿ ತಿರೀಕೊಂಡು ನಿಂತಿದ್ದೀಯಲ್ಲ. ಹಿಂಗಾದ್ರೆ ಮನೆ ಉಳದದೇನ್ಲಾ?

ಮಗ : ಈಗ ನಾನ್ ಅಂತಾದ್ದೇನ್ ಮಾಡ್ದೆ ಅಂತ ಹಿಂಗಾಡಿಯೆ ನೀನು?

ಬೋರಪ್ಪ : ಏನ್ ಮಾಡ್ದೆ ಅಂತ ಕೇಳ್ತಿಯಲ್ಲ. ವಂಶಗೇಡಿ ನನ್ಮಗ್ನೆ. ಒಂಚೂರಾದ್ರು ಮನೆ ಜವಾಬ್ದಾರಿ ಅನ್ನೋದು ಇದೆಯೇನ್ಲಾ ನಿಂಗೆ? ಅಡ್ನಾಡಿ ನನ್ಮಗ್ನೆ, ಮೊದಲು ಏನಾದ್ರು ಒಂದು ಗೇಮೆ ಅಂತ ಮಾಡೋದು ಕಲಿ.

ಮಾದಮ್ಮ: ಹೋಗ್ಲಿ ಸುಮ್ನಿರಿ ಈಗ. ಮಾಡೂ ಕಾಲಕ್ಕೆ ಮಾಡ್ತನೆ.

ಬೋರಪ್ಪ : ಬೇವರ‍್ಸಿ ಮುಂಡೆ… ಸುಮ್ನೆ ನಿಂತ್ಕೋ. ಎಲ್ಲದುಕ್ಕೂ ಬಾಯಾಕೊಂಡು ಬರಬ್ಯಾಡ.

ಮಗ: ಕೆಲಸಕ್ಕೆ ಮೊನ್ನೆ ಇಂಟರ್ ವ್ಯೂ ಬಂದಿದ್ದಾಗ ಎರಡು ಲಕ್ಶ ರೂಪಾಯಿ ನೀ ಕೊಟ್ಟಿದ್ರೆ. ನಂಗೆ ಸರ‍್ಕಾರಿ ಕೆಲ್ಸ ಸಿಕ್ಕಿತಿರಲಿಲ್ವೇ? ಕೆಲಸ ಸಿಕ್ಕಿದ್ರೆ ನಾನ್ಯಾಕೆ ಹಿಂಗೆ ಇರ‍್ತಿದ್ದೆ.

ಬೋರಪ್ಪ : ಯಾರ ಮನೆಗೆ ಕನ್ನ ಹಾಕಿ ತರಲಪ್ಪ ಎರಡು ಲಕ್ಶ ರೂಪಾಯ! ನಿನ್ನಂತ ಏತ್ಲಾಂಡಿಗೆ ಯಾರ ತಾನೆ ಕೆಲಸ ಕೊಡ್ತರೆ? ಸಿಗದೇ ಇರೂ ಕೆಲಸದ ನೆಪ ತಕೊಂಡು ಕಾಲ ಕಳೀಬ್ಯಾಡ. ಹಿರೀಕರು ಬುಟ್ಟೋಗಿರು ಗದ್ದೆಹೊಲದಲ್ಲಿ ಗೇಮೆ ಮಾಡ್ಕೊಂಡು ಉಣ್ಣೋದು ಕಲಿ.

(ಎಂದು ಮಗನನ್ನು ಎಚ್ಚರಿಸುತ್ತ ಬೋರಪ್ಪನವರು ಮಾತನಾಡುತ್ತಲೇ ಇದ್ದರು. ತಂದೆಯ ಮಾತಿಗೆ ಪ್ರತಿಯಾಡದೆ ಮಗ ಮನೆಯೊಳಕ್ಕೆ ಹೋದನು.)

***

ಪ್ರಸಂಗ – 6

ಕಾಳಮುದ್ದನದೊಡ್ಡಿಯಲ್ಲಿ ನಾನು ವಾಸವಿದ್ದ ಮನೆಯ ಅಂಚಿನಲ್ಲಿ ರಾಗಿ ಅವರೆ ತೊಗರಿ ನವಣೆ ಮುಂತಾದ ಬೆಳೆಗಳಿಂದ ಕೂಡಿದ್ದ ಹೊಲವಿತ್ತು. ರಾಗಿ ಕುಯ್ಯಲು ಮುಗಿದ ನಂತರ ಸಂಕ್ರಾಂತಿ ಹಬ್ಬದ ತನಕ ಸಾಲಾರಂಬದ ಬೆಳೆಗಳಾದ ಅವರೆ ತೊಗರಿ ನವಣೆ ಜೋಳದ ಗಿಡಗಳಿದ್ದವು .ಆ ಹೊಲದ ಒಡತಿಯು ಪ್ರತಿ ದಿನ ಬೆಳಗ್ಗೆ ಹೊಲಕ್ಕೆ ಬಂದಾಗಲೆಲ್ಲಾ ಯಾರನ್ನಾದರೂ ಒಂದೇ ಸಮನೆ ಬಯ್ಯುತ್ತಿದ್ದರು. ಕಿಟಕಿಯ ಮೂಲಕ ನಾನು ನೋಡುತ್ತಿದ್ದಾಗ ಅಲ್ಲಿ ಬೇರೆ ಯಾರೂ ಕಾಣುತ್ತಿರಲಿಲ್ಲ. ಅವರೆಕಾಯಿ ಇಲ್ಲವೇ ತೊಗರಿಕಾಯನ್ನು ಕುಯ್ಯುತ್ತಾ ಹೊಲದಲ್ಲಿ ನಡುನಡುವೆ ನಿಂತು ಬಯ್ಯುವಿಕೆಯಲ್ಲಿ ತೊಡಗುತ್ತಿದ್ದರು. ಅವರ ಬಯ್ಗುಳಗಳು ಈ ರೀತಿ ಇದ್ದವು .

“ಕಂತ್ರಿ ಮುಂಡೇರು..ಹಾದರ‍್ಗಿತ್ತಿ ಮುಂಡೇರು..ಅವರ‍್ಗೆ ಮೊಲ್ಲಾಗ್ರು ಬರ. ಅವರೆಕಾಯಿ ತೊಗರಿಕಾಯಿ ಕದ್ದುಕುಯ್ಯೋ ಅವರ ಕಯ್ ಸೇದೋಗ. ಅವರ ಕಯ್ಗೆ ಕ್ವಾಶ್ಟತ್ತ. ಹಾಳ್ ಮನೆಯವರ‍್ಗೆ ನನ್ ಹೊಲವೇ ಆಗ್ಬೇಕೆ? ಅವರ ಮಕ್ಳ ತಿನ್ನ. ನನ್ ಕಣ್ಗೆ ಏನಾರ ಬಿದ್ದಿದ್ದರೆ, ಅವರ ಸಾಲೆ ಕಿತ್ತು ನಾಕು ಜನದ ಮುಂದೆ ಮಾನ ತೆಗಿತಿದ್ದೆ. ಅವರ ಮನೆ ಗೆಡ್ಡೆ ಕಿತ್ತೋಗ. ”

ಒಂದು ದಿನ ಆಕೆಯ ಬಯ್ಗುಳವನ್ನು ಕೇಳಲಾಗದೆ ಹೊರಕ್ಕೆ ಬಂದು, ಅವರ ಜತೆ ಮಾತಿಗೆ ತೊಡಗಿದೆ.

ನಾನು : ಹೊಲತ್ತಕೆ ಬಂದಾಗಲೆಲ್ಲ ಹಿಂಗೆ ಬಯ್ತೀರಲ್ಲ ಯಾಕ್ರಮ್ಮ?

ಒಡತಿ : ಅಯ್ಯೋ ಬನ್ನಿ ಮೇಸ್ಟ್ರೆ, ಜಾತ್ಕೆಟ್ ಲವುಡಿ ಮುಂಡೇರು ನನ್ ಹೊಲನೆಲ್ಲಾ ಹೆಂಗೆ ತಕ್ಕಲು ಮಾಡವ್ರೆ ನೋಡ್ ಬನ್ನಿ.

ನಾನು : ನೀವಲ್ಲದೆ ಇನ್ನೊಬ್ಬರು ಹೊಲಕ್ಕೆ ಬಂದು ಕಾಯಿ ಕಿತ್ತಿದ್ದನ್ನು ನಾನು ಕಂಡೇ ಇಲ್ಲ ಕಣ್ರಮ್ಮ.

ಒಡತಿ : ನೀವೇನು ಮೂರೊತ್ತು ಮನೆ ತಾವೇ ಇದ್ದೀರ. ಎಡಹೊತ್ತಲಿ ಬಂದು ಹಿಂಗೆ ಕುಯ್ಕೊಂಡೊಯ್ತರೆ. ನಾ ಸುಳ್ಳು ಹೇಳನೆ. ಬಾಪ್ಪ ಇತ್ತಗೆ. ಇಲ್ನೋಡಪ್ಪ. ಹೆಂಗೆ ಗೊನ್ ಗೊನೇನೆ ತರದಾಕ್ಬುಟ್ಟವ್ರೆ. ಊರೇಸ್ದ ನನ್ ಸವ್ತೀರು. ಅವರ ಮಕ್ಳ ಸಾಲ್ ಸಮಾದಿ ಮಾಡ. .

ನಾನು : ಬರೀ ಹೆಂಗಸರನ್ನೇ ಬಯ್ತಿದ್ದೀರಲ್ಲ. ಗಂಡಸರು ಕದ್ದು ಕಾಯಿ ಕೀಳಲ್ವೋ?

ಒಡತಿ : “ಆ ಮನಾಳ್ ನನ್ ಮಕ್ಳು ಬಂದ್ರೆ ಬುಡ ಸಮೇತ ಗಿಡನೇ ಕುಯ್ಕೊಂಡ್ ಹೊಯ್ತರೆ ಕಣಪ್ಪ. ಇದೇನಿದ್ರೂ ನಮ್ ಮನೆ ತಾವು ಒಂದಿಬ್ಬರು ಹೆಂಗಸ್ರು ಅವ್ರೆ. . ಆ ನನ್ ಸವ್ತಿರೇ ಹಿಂಗೆ ಕುಯ್ಯುರು. ಅವರ ಚಟ್ಟ ಕಟ್ಟ. ಅವರ‍್ಗೆ ಬರಬಾರದ್ದು ಬರ” ಎಂದು ಹಿಡಿಹಿಡಿ ಶಾಪ ಹಾಕುವುದನ್ನು ಮುಂದುವರಿಸಿದರು.

ಒಂದು ದಿನ ಎಂದಿನಂತೆ ನಮ್ಮ ಮನೆಗೆ ಹಾಲನ್ನು ಹಾಕುವ ಅಮ್ಮ ಬಂದಿದ್ದಾಗ ಹೊಲದ ಒಡತಿಯ ಬಯ್ಗುಳಗಳು ಕೇಳಿಬರುತ್ತಿದ್ದವು. ಆಗ ಹಾಲಿನಮ್ಮ ಹೇಳಿದರು “ಈ ಕಲ್ಕೇತಿ ಯಾವಾಗಲೂ ಹಿಂಗೆ ಕಣಪ್ಪ. ಇವಳ ಹೊಲದಲ್ಲಿ ಯಾರೂ ಕಾಯ್ನು ಕೀಳೂದಿಲ್ಲ ಏನೂ ಇಲ್ಲ. ಹಿಂಗೆ ಬಯ್ತಿದ್ದರೆ ತನ್ನ ಗಂಟಲಿಗೆ ಹೆದರ‍್ಕೊಂಡು ಯಾರೂ ಬರದೆ ಇರಲಿ ಅಂತ ಹಿಂಗೆ ಬಯ್ತ ಆಡ್ತಾ ಇರ‍್ತಳೆ” ಎಂದರು.

***

ಪ್ರಸಂಗ – 7

ಸಂಜೆ ಏಳರ ಸಮಯ. ಹಳ್ಳಿಯೊಂದರ ತಮ್ಮ ಗುಡಿಸಲಿನ ಮುಂದೆ ನಿಂತಿರುವ ಹೆಂಗಸೊಬ್ಬರು ದೊಡ್ಡ ದನಿಯಲ್ಲಿ ಬಯ್ಯುತ್ತಿದ್ದಾರೆ. ನೆನ್ನೆ ಮೇಯುವುದಕ್ಕೆಂದು ಹೋಗಿದ್ದ ಅವರ ಕೋಳಿಯು ಇಂದು ಸಂಜೆಯಾದರೂ ಮನೆಗೆ ಬಾರದಿದ್ದಾಗ, ಅದನ್ನು ಯಾರೋ ಕದ್ದು ಮುರಿದುಕೊಂಡಿರುವುದು ದಿಟವಾಗಿದೆ. ತಮ್ಮ ಹೊಟ್ಟೆಯುರಿಯನ್ನು ಕಾರಿಕೊಳ್ಳುತ್ತಾ- “ತೂ ನನ್ ಸವ್ತೀರ. ಆ ನನ್ ಕೋಳಿ ತಿನ್ನೂದ ನನ್ ಹೇಲ್ ತಿನ್ನೂರಿ. ನನ್ ಗಲ್ಲೆ ತಿನ್ನೂರಿ. ನನ್ ಕೋಳಿ ಮುರ‍್ಕೊಂಡೋರ ಬಾಯ್ಲಿ ಹುಳ ಬೀಳ. ಅವರ‍್ಗೆ ವಾಂತ್ಬೇದಿ ಬರ. . ಅವರ‍್ಗೆ ಹೊತಾರೆ ಹೊತ್ಗೆ ಚಟ್ಟ ಕಟ್ಟ. ಅವರ ಬಾಯ್ಗೆ ನನ್ ರತ್ತ ಉಯ್ಯ. ಕಟ್ನಾವ್ ಕಡಿಯ. ನಾಗ್ರಾವು ಕಡಿಯ. ತೂ ಅವರ ಬಾಳ್ಗೆ ಬೆಂಕಿ ಎಟ್ಟ” ಹೀಗೆ ಸುಮಾರು ಹೊತ್ತು ಬಗೆಬಗೆಯ ಬಯ್ಗುಳಗಳನ್ನು ಅವರು ಆಡುತ್ತಲೇ ಇದ್ದರು.

***

ಪ್ರಸಂಗ – 8

ಜಿಲ್ಲಾ ಕೇಂದ್ರವೊಂದರ ಪಾರ‍್ಕಿನಲ್ಲಿ ಸಂಜೆ ಆರರ ಸಮಯದಲ್ಲಿ ಅರವತ್ತಕ್ಕಿಂತ ಹೆಚ್ಚಿನ ವಯಸ್ಸಾಗಿದ್ದ ನಾಲ್ಕಾರು ಮಂದಿ ಗಂಡಸರು ಬೆಂಚುಗಲ್ಲಿನ ಮೇಲೆ ಕುಳಿತುಕೊಂಡು ಲೋಕಾಬಿರಾಮವಾಗಿ “ಅದು-ಇದು” ಮಾತನಾಡುವುದರಲ್ಲಿ ತೊಡಗಿದ್ದಾರೆ. ಕರ‍್ನಾಟಕ ರಾಜ್ಯದಲ್ಲಿ ಸರ‍್ಕಾರಿ ಬಸ್ಸಿನ ಪ್ರಯಾಣಿಕರ ದರಗಳು ಒಂದೆರಡು ದಿನಗಳ ಹಿಂದೆ ಹೆಚ್ಚಾಗಿದ್ದವು. ಅದರ ಬಗ್ಗೆ ಮಾತನಾಡುತ್ತಾ.

ಒಬ್ಬರು : ಕೇಂದ್ರದಲ್ಲಿ ಆ ಕಚಡಾ ನನ್ಮಕ್ಳು ಪ್ರತಿನಿತ್ಯ ಪೆಟ್ರೋಲ್ ಡೀಸಲ್ ಬೆಲೆ ಏರಿಸ್ಕೊಂಡು ಹೊಯ್ತಾವ್ರೆ ಅಂತ. ಈ ಕಿರಾತ್ ನನ್ಮಕ್ಕಳು ರಾಜ್ಯದಲ್ಲಿ ಬಸ್ ಚಾರ‍್ಜನ್ನ ಹಿಂಗೆ ಏರಿಸ್ಬುಟ್ರು.

ಮತ್ತೊಬ್ಬರು : ಇನ್ನೇನ್ ಮಾಡರಪ್ಪ. ಮೇಲೆ ಇರೋರು ನುಂಗಬೇಕಲ್ಲ. ಅದಕ್ಕೆ ಹಿಂಗೆ ಏರಿಸ್ತಲೇ ಅವ್ರೆ. ಬಡ್ಡತ್ತವ್ಕೆ ನ್ಯಾಯವಾಗಿ ಆಳೂಕೆ ಬಂದಿದ್ರೆ ನಮ್ಮ ದೇಶ ಯಾಕಿಂಗಾಗೂದು.

ಇನ್ನೊಬ್ಬರು : ಇಲ್ಲಿ ಕೊಳ್ಳೆಹೊಡುದ್ ದುಡ್ಡನೆಲ್ಲಾ ಅಲ್ಲೆಲ್ಲೋ ಸ್ವಿಸ್ ಬ್ಯಾಂಕ್ ನಲ್ಲಿ ಇಟ್ಟಿದ್ದರಂತಲ್ಲಾ ಕಳ್ ನನ್ ಮಕ್ಳು.

ಮಗದೊಬ್ಬರು : ದೇಶ ಹಾಳಾಗೋಯ್ತು ಬಿಡಿ. ಆ ಪಾರ‍್ಟಿ ಈ ಪಾರ‍್ಟಿ ಅಂತ ಯಾವ ವ್ಯತ್ಯಾಸನೂ ಇಲ್ಲ ಕಣ್ರಿ. ಎಲ್ಲಾ ಪಾರ‍್ಟಿಯವರು ದಗಾಕೋರ್ ನನ್ಮಕ್ಳು.

(ಮುಂದುವರಿದ ಅವರ ಮಾತುಕತೆಯ ಉದ್ದಕ್ಕೂ ಬಯ್ಗುಳದ ನುಡಿಗಳು ಒಂದೇ ಸಮನೆ ಬಳಕೆಯಾಗುತ್ತಿದ್ದವು.)

***

ಮೇಲ್ಕಂಡ ನಾಲ್ಕು ಪ್ರಸಂಗಗಳು ಮೊದಲಿನ ನಾಲ್ಕು ಪ್ರಸಂಗಗಳಿಗಿಂತ ಬೇರೆಯ ರೀತಿಯಲ್ಲಿವೆ. ಈ ಪ್ರಸಂಗಗಳಲ್ಲಿ ಬಯ್ಯುವುದಕ್ಕೆ ಕಾರಣವಾದ ಸಂಗತಿಗಳು ಮತ್ತು ಬಯ್ಯುವ ಉದ್ದೇಶಗಳು ಈ ರೀತಿಯಲ್ಲಿವೆ.

ಪ್ರಸಂಗ-5 ರಲ್ಲಿ ಬೋರಪ್ಪನವರು ಮಗನಿಗೆ ಎಚ್ಚರಿಕೆಯನ್ನು ನೀಡಿ, ಅವನು ಯಾವುದಾದರೊಂದು ಬಗೆಯ ಕೆಲಸದಲ್ಲಿ ತೊಡಗುವಂತೆ ಮಾಡುವುದಕ್ಕಾಗಿ ಬಯ್ಯುತ್ತಿದ್ದಾರೆ. ಮಗನ ಪರವಾಗಿ ಮಾತನಾಡಲು ತೊಡಗಿದ ಹೆಂಡತಿಯನ್ನು ತಮ್ಮ ಮಾತಿಗೆ ಅಡ್ಡಬರದಂತೆ ತಡೆಯುವ ಉದ್ದೇಶದಿಂದ ಬಯ್ಗುಳವನ್ನು ಬಳಸಿದ್ದಾರೆ. ಈ ಪ್ರಸಂಗದಲ್ಲಿ ಬಯ್ಗುಳವು ಇತರರನ್ನು ವ್ಯಕ್ತಿಯು ತನ್ನ ಇಚ್ಚೆಗೆ ತಕ್ಕಂತೆ ನಿಯಂತ್ರಿಸುವ ಮತ್ತು ನಡೆದುಕೊಳ್ಳುವಂತೆ ಒತ್ತಾಯಿಸುವ ಒಂದು ಉಪಕರಣವಾಗಿ ಬಳಕೆಗೊಂಡಿದೆ.

ಪ್ರಸಂಗ-6 ರಲ್ಲಿ ಅವರೆಕಾಯಿ ಹೊಲದ ಒಡತಿಯು ತನ್ನ ಬೆಳೆಯನ್ನು ಕಾಪಾಡಿಕೊಳ್ಳಲೆಂದು ಬಯ್ಯುತ್ತಿದ್ದಾಳೆ. ಇವಳು ಆಡುವ ಬಯ್ಗುಳಕ್ಕೆ ಹೆದರಿಕೊಂಡು ಯಾರೊಬ್ಬರೂ ಹೊಲದ ಬಳಿ ಸುಳಿಯದಿರಲೆಂಬ ಉದ್ದೇಶದಿಂದ ಬಯ್ಗುಳವನ್ನು ಬಳಸುತ್ತಿದ್ದಾಳೆ. ಈ ಪ್ರಸಂಗದಲ್ಲಿ ಬಯ್ಗುಳವು ಇತರರಿಂದ ಬೆಳೆಯು ಕಳುವಾಗುವುದನ್ನು ತಡೆಗಟ್ಟುವ ಒಂದು ಹತಾರವಾಗಿ ಬಳಕೆಯಾಗಿದೆ.

ಪ್ರಸಂಗ-7 ರಲ್ಲಿ ಬೆಲೆಬಾಳುವ ಕೋಳಿಯನ್ನು ಕಳೆದುಕೊಂಡಿರುವ ಹೆಂಗಸು ಬಯ್ಗುಳಗಳನ್ನು ಆಡುವುದರ ಮೂಲಕ ತನ್ನ ಒಡಲಿನ ಸಂಕಟವನ್ನು ಹೊರಹಾಕುತ್ತ, ಕೋಳಿಯನ್ನು ಮುರಿದುಕೊಂಡಿರುವವರಿಗೆ ಕೇಡು ತಟ್ಟಲೆಂಬ ಉದ್ದೇಶದಿಂದ ಬಯ್ಗುಳವನ್ನು ಬಳಸಿದ್ದಾರೆ.

ಪ್ರಸಂಗ-8 ರಲ್ಲಿ ಮಾತಿನಲ್ಲಿ ತೊಡಗಿರುವವರು ಯಾರೊಬ್ಬರೂ ವೈಯಕ್ತಿಕ ನೆಲೆಯಲ್ಲಿ ಯಾವುದೇ ಒಬ್ಬ ವ್ಯಕ್ತಿಯ ಬಗ್ಗೆ ತಮ್ಮ ಮನಸ್ಸಿನ ಆಕ್ರೋಶವನ್ನು ಕಾರುತ್ತಿಲ್ಲ. ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಮಾತನಾಡುತ್ತ, ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವಾಗ ಬಯ್ಗುಳದ ನುಡಿಗಳನ್ನಾಡುತ್ತಿದ್ದಾರೆ. ನಾವೆಲ್ಲರೂ ಇತರರ ನಡೆನುಡಿಯಲ್ಲಿನ ತಪ್ಪುಗಳನ್ನು ಕುರಿತು ಮಾತನಾಡುವಾಗ ಬಯ್ಗುಳಗಳನ್ನು ಯಾವುದೇ ಅಡೆತಡೆಯಿಲ್ಲದೆ ಬಳಸುತ್ತೇವೆ. ಇಂತಹ ಸನ್ನಿವೇಶಗಳಲ್ಲಿ ಬಳಕೆಯಾಗುವ ಬಯ್ಗುಳಗಳು ಇತರರ ಬಗ್ಗೆ ನಮ್ಮ ಮನದ ಬಾವನೆಯು ಯಾವ ಬಗೆಯದು ಎಂಬುದನ್ನು ಜತೆಗಾರರಿಗೆ ತಿಳಿಸುತ್ತವೆ.

ಇದನ್ನು ಓದುತ್ತಿರುವ ನಿಮಗೆ ಇಂತಹ ಹತ್ತಾರು ಬಗೆಯ ಮತ್ತು ಇದಕ್ಕಿಂತಲೂ ಬೇರೆ ಬೇರೆ ಬಗೆಗಳಲ್ಲಿ ಮತ್ತು ಬೇರೆ ಬೇರೆ ಉದ್ದೇಶಗಳಿಗಾಗಿ ಬಳಕೆಯಾಗಿರುವ ಬಯ್ಗುಳದ ಪ್ರಸಂಗಗಳು ನೆನಪಾಗಬಹುದು. ಕುಟುಂಬದ ನೆಲೆಯಲ್ಲಿ, ದುಡಿಮೆಯ ನೆಲೆಯಲ್ಲಿ ಮತ್ತು ಸಾರ‍್ವಜನಿಕ ನೆಲೆಯಲ್ಲಿ ನಡೆಯುವ ಮಾತುಕತೆಗಳ ಸನ್ನಿವೇಶಗಳಲ್ಲಿ ನಾವೆಲ್ಲರೂ ಆಡುವ ಮತ್ತು ಕೇಳುವ ಬಯ್ಗುಳಗಳು ಸಾಮಾನ್ಯವಾಗಿ ಈ ಕೆಳಕಂಡ ಎರಡು ಬಗೆಗಳಲ್ಲಿ ಬಳಕೆಗೊಳ್ಳುತ್ತವೆ.

1. ಇದ್ದಕ್ಕಿದ್ದಂತೆಯೇ ಬಯ್ಯುವುದು:

ಯಾವ ಸನ್ನಿವೇಶದಲ್ಲಿ ಯಾವ ರೀತಿಯಲ್ಲಿ ಯಾರಿಗೆ ಇಲ್ಲವೇ ಯಾವುದಕ್ಕೆ ನಾವೇಕೆ ಬಯ್ಯುತ್ತೇವೆ ಎಂದು ನಮಗೆ ಗೊತ್ತಿರುವುದಿಲ್ಲ.

ನಿತ್ಯಜೀವನದ ಆಗುಹೋಗುಗಳಲ್ಲಿ ಯಾವುದೇ ಮುನ್ಸೂಚನೆಯಿಲ್ಲದೆ ಆಕಸ್ಮಿಕವಾಗಿ ಅಡ್ಡಿ, ಆತಂಕ, ಪೆಟ್ಟು,ನೋವು ಉಂಟಾಗಿ , ನಮ್ಮ ಮಯ್ ಮನ ಗಾಸಿಗೊಂಡಾಗ ಮರುಗಳಿಗೆಯಲ್ಲಿಯೇ ನಾನಾ ಬಗೆಗಳಲ್ಲಿ ಪ್ರತಿಕ್ರಿಯಿಸತೊಡಗುತ್ತೇವೆ. ಅಂತಹ ಪ್ರತಿಕ್ರಿಯೆಗಳಲ್ಲಿ ಮಾತಿನ ರೂಪದ ಬಯ್ಗುಳವೂ ಒಂದು ಬಗೆಯದು. ನೋವು, ಹತಾಶೆ, ಆತಂಕ, ಹೆದರಿಕೆ, ಕೋಪದಿಂದ ಉಂಟಾಗುವ ಒಳಮಿಡಿತಗಳನ್ನು ಬಯ್ಗುಳದ ಮೂಲಕ ಹೊರಹಾಕಿದಾಗ , ವ್ಯಕ್ತಿಯ ಮಯ್ ಮನದಲ್ಲಿ ಒಂದು ಬಗೆಯ ಸಮತೋಲನ ಉಂಟಾಗಿ , ತುಸು ಮಟ್ಟಿನ ನಿರಾಳತೆಯು ಉಂಟಾಗುತ್ತದೆ.

ಉದಾಹರಣೆ: ಮೊದಲನೆಯ ಕಂತಿನ ನಾಲ್ಕು ಪ್ರಸಂಗಗಳು.

2. ಉದ್ದೇಶಪೂರ‍್ವಕವಾಗಿ ಬಯ್ಯುವುದು:

ಜೀವನದಲ್ಲಿ ನಡೆದಿರುವ, ನಡೆಯುತ್ತಿರುವ ಮತ್ತು ನಡೆಯಲಿರುವ ಆಗುಹೋಗುಗಳ ಬಗ್ಗೆ ನಮ್ಮ ಮನದಲ್ಲಿ ಉಂಟಾಗುವ ತೀವ್ರವಾದ ಯಾತನೆ, ಹತಾಶೆ, ಕೋಪ, ಆತಂಕ, ಹಗೆತನ , ಸೇಡಿನ ಒಳಮಿಡಿತಗಳನ್ನು ಹೊರಹಾಕಲು ಉದ್ದೇಶಪೂರ‍್ವಕವಾಗಿ ಬಯ್ಯುವಿಕೆಯಲ್ಲಿ ತೊಡಗುವುದು.

“ಯಾವ ವ್ಯಕ್ತಿಯನ್ನು ಯಾವ ರೀತಿಯಲ್ಲಿ, ಎಲ್ಲಿ , ಯಾವಾಗ ಬಯ್ಯಬೇಕು? ಬಯ್ಯುವಾಗ ಯಾವ ಯಾವ ಬಗೆಯ ಬಯ್ಗುಳಗಳನ್ನು ಬಳಸಬೇಕು?” ಎಂಬ ಲೆಕ್ಕಾಚಾರವನ್ನು ಮೊದಲೇ ಹಾಕಿಕೊಂಡು ಬಯ್ಯಲಾಗುತ್ತದೆ. ಈ ಬಗೆಯ ಬಯ್ಯುವಿಕೆಯಲ್ಲಿ ಇತರ ಬಗ್ಗೆ ನಮ್ಮ ಕೋಪತಾಪಗಳನ್ನು ಕಾರಿಕೊಳ್ಳುವ; ಇತರರನ್ನು ನಮ್ಮ ಹತೋಟಿಯಲ್ಲಿಟ್ಟುಕೊಂಡು ನಮಗೆ ಬೇಕಾದಂತೆ ಅವರನ್ನು ತಿದ್ದುವ ಇಲ್ಲವೇ ನಡೆಸಿಕೊಳ್ಳುವ; ಇತರರ ಮೇಲೆ ನಮ್ಮ ಹಗೆತನವನ್ನು ಕಾರುವ; ಇತರರ ವ್ಯಕ್ತಿತ್ವವನ್ನು ಕಡೆಗಣಿಸಿ ಅಲ್ಲಗಳೆಯುವ; ನಮಗೆ ಹಾನಿಯನ್ನು ಮಾಡಿರುವವರಿಗೆ ಕೇಡು ತಟ್ಟಲೆಂದು ಶಪಿಸುವ ಉದ್ದೇಶದಿಂದ ಬಯ್ಗುಳವನ್ನು ಒಂದು ಬಗೆಯ ಹತಾರವನ್ನಾಗಿ ಬಳಸುತ್ತೇವೆ.

ಉದಾಹರಣೆ: ಎರಡನೆಯ ಕಂತಿನ ಪ್ರಸಂಗ 5 ರಿಂದ 8.

ಬಯ್ಗುಳಗಳನ್ನು ಕೆಟ್ಟದ್ದು ಎಂದು ಬಾಯಲ್ಲಿ ಹೇಳುತ್ತಿದ್ದರೂ ಮಾತು ಬಲ್ಲ ಮಾನವರಾದ ನಾವೆಲ್ಲರೂ ಒಂದಲ್ಲ ಒಂದು ಬಗೆಯ ಬಯ್ಗುಳವನ್ನು ಬಳಸದೇ ಇರಲು ಆಗುವುದಿಲ್ಲ. ಏಕೆಂದರೆ ಬಯ್ಗುಳಗಳು ನಮ್ಮ ಮನದಲ್ಲಿ ತುಡಿಯುವ ಬಾವನೆಗಳನ್ನು/ಒಳಮಿಡಿತಗಳನ್ನು ತೀವ್ರತರವಾದ ರೀತಿಯಲ್ಲಿ ಹೊರಹಾಕಲು ಉಪಯುಕ್ತವಾದ ನುಡಿ ಸಾಮಗ್ರಿಯಾಗಿವೆ.

ಕಳೆದ ಎಪ್ಪತ್ತು ವರುಶಗಳಿಂದ ನರ ವಿಜ್ನಾನ ( Neurology) , ಮನೋ ವಿಜ್ನಾನ ( Psychology) , ಮನೋ ನುಡಿ ವಿಜ್ನಾನ ( Psycho-linguistics), ಸಮಾಜೋ ನುಡಿ ವಿಜ್ನಾನ (Socio-linguistics) ಮತ್ತು ಸಾಂಸ್ಕ್ರುತಿಕ ಮಾನವಶಾಸ್ತ್ರ ( Cultural-Anthropology) ರಂಗಗಳಲ್ಲಿ ನಡೆದಿರುವ ಸಂಶೋದನೆಯ ಸಂಗತಿಗಳಿಂದ ತಿಳಿದು ಬಂದಿರುವ ಅರಿವಿನಿಂದ “ನಾವೇಕೆ ಬಯ್ಯುತ್ತೇವೆ? ಮತ್ತು ಬಯ್ಯುವಾಗ ಯಾವ ಬಗೆಯ ನುಡಿಸಾಮಗ್ರಿಗಳನ್ನು ಅಂದರೆ ಪದಗಳನ್ನು ಮತ್ತು ವಾಕ್ಯಗಳನ್ನು ಬಯ್ಗುಳವಾಗಿ ಬಳಸುತ್ತೇವೆ? ” ಎಂಬುದರ ಬಗ್ಗೆ ಹೆಚ್ಚಿನ ಓದು ನಡೆಯುತ್ತಿದೆ.

ಬಯ್ಯುವಿಕೆಯಲ್ಲಿ ತೊಡಗಿದಾಗ ನಮ್ಮ ಮಯ್ ಮನದಲ್ಲಿ ಉಂಟಾಗುವ ಕ್ರಿಯೆಗಳು ಯಾವುವು ಮತ್ತು ನಮ್ಮ ಮೆದುಳಿನ ನರಮಂಡಲ ವ್ಯವಸ್ತೆ, ನಾವು ಹುಟ್ಟಿ ಬೆಳೆದು ಬಾಳುತ್ತಿರುವ ಸಮಾಜದ ರಚನೆ ಮತ್ತು ಸಂಸ್ಕ್ರುತಿಯ ಆಚರಣೆಯ ಸಂಗತಿಗಳು ಬಯ್ಯುವಿಕೆಯಲ್ಲಿ ಹೇಗೆ ಒಂದರೊಡನೆ ಮತ್ತೊಂದು ಹೆಣೆದುಕೊಂಡಿವೆ ಎಂಬುದರ ಬಗ್ಗೆ ವಿಜ್ನಾನಿಗಳು ಅನೇಕ ಬಗೆಯ ವಿವರಣೆಗಳನ್ನು ನೀಡತೊಡಗಿದ್ದಾರೆ. ಇನ್ನು ಮುಂದಿನ ಕಂತುಗಳಲ್ಲಿ ಈ ಬಗೆಗಿನ ವಿಚಾರಗಳನ್ನು ತಿಳಿಸುತ್ತೇನೆ.

(ಚಿತ್ರ ಸೆಲೆ: learnitaliango.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: