ಗ್ಲಾಸ್ ವಿಂಡೋ ಸೇತುವೆ – ಬಹಮಾಸ್

– .

ಗ್ಲಾಸ್ ವಿಂಡೋ ಸೇತುವೆ

ಬೂಮಿಯ ಮೇಲೆ ಇರುವ ಅತ್ಯಂತ ಕಿರಿದಾದ ಸ್ತಳ ಯಾವುದೆಂಬುದು ತಿಳಿದಿದೆಯೇ? ಎಂದು ಪ್ರಶ್ನಿಸಿದಲ್ಲಿ, ಕೇಳುಗರು ತಬ್ಬಿಬ್ಬಾಗುವುದು ಸಹಜ. ಬೂಮಿ ಅಶ್ಟು ವಿಶಾಲವಾಗಿದ್ದರೂ, ಅದರ ಮೇಲೆ ಅತಿ ಕಿರಿದಾದ ಸ್ತಳ ಇರಲು ಸಾದ್ಯವೇ? ಈ ಪ್ರಶ್ನೆ ತಮಾಶೆ ಎನಿಸುತ್ತದೆಯಲ್ಲವೇ? ನಿಜ. ಆದರೆ, ಇಂತಹದೊಂದು ಅಡ್ಡ ಹೆಸರಿನಿಂದ ಕರೆಯಲ್ಪಡುವ ಸ್ತಳ ಬಹಮಾಸ್‍ನ ರಾಜದಾನಿ ನಸೌನಿಂದ ಪೂರ‍್ವಕ್ಕೆ 80 ಕಿಲೋಮೀಟರ್ ದೂರದಲ್ಲಿರುವ, ಬಹಮಾಸ್ ದ್ವೀಪ ಸಮೂಹದಲ್ಲಿನ ಎಲುತೆರಾದಲ್ಲಿದೆ. ಎಲುತೆರಾ ದ್ವೀಪವು ಬಹಮಾಸ್ ದ್ವೀಪ ಸಮೂಹದಲ್ಲಿನ ದ್ವೀಪಗಳಲ್ಲಿ ಬಹಳ ಉದ್ದವಾದ ದ್ವೀಪವಾಗಿದೆ. ಇದರ ಉದ್ದ 180 ಕಿಲೋಮೀಟರ‍್‍‍‍ಗಳಶ್ಟಿದೆ. ಉದ್ದಕ್ಕೆ ಹೋಲಿಸಿದಲ್ಲಿ, ಅಗಲ ಅತ್ಯಂತ ಕಿರಿದಾಗಿದ್ದು, ಕೇವಲ 1.6 ಕಿಲೋಮೀಟರ್‍‍ನಶ್ಟಿದೆ. ಇದೇ ಕಾರಣದಿಂದಾಗಿ ಇದನ್ನು ಅತಿ ತೆಳ್ಳಗಿನ, ಬಳಕುವ ದ್ವೀಪ ಎನ್ನಲಾಗುತ್ತದೆ.

ಸಾಗರಗಳ ಸಮಾಗಮದ ನಡುವೆ ಎಲುತೆರಾ ದ್ವೀಪ

ಎಲುತೆರಾ ದ್ವೀಪದ ಒಂದು ಬದಿಯಲ್ಲಿ ಆಳವಿಲ್ಲದ ತಿಳಿನೀಲಿ ಬಣ್ಣದ ಕೆರೆಬಿಯನ್ ಸಮುದ್ರವಿದ್ದು, ಇದಕ್ಕೆ ಸಂಪೂರ‍್ಣ ವ್ಯತಿರಿಕ್ತವಾಗಿ ಮತ್ತೊಂದು ಬದಿಯಲ್ಲಿ ಬಹಳ ಆಳವಾದ, ಗಾಡ ನೀಲಿ ಬಣ್ಣದ ಅಟ್ಲಾಂಟಿಕ್ ಮಹಾಸಾಗರವಿದೆ. ಕಣ್ಣಿಗೆ ಹಬ್ಬದಂತಿರುವ ಈ ಎರಡು ವ್ಯತಿರಿಕ್ತ ಸಾಗರಗಳ ಸಮಾಗಮವನ್ನು ನೋಡಿ ಆನಂದಿಸಲು ಅತ್ಯಂತ ಪ್ರಶಸ್ತ ಸ್ತಳವೆಂದರೆ ಅದು ‘ಗ್ಲಾಸ್ ವಿಂಡೋ ಸೇತುವೆ’. ಗ್ಲಾಸ್ ವಿಂಡೋ ಸೇತುವೆ, ಅಪ್ಪರ್ ಬೋಗ್‍ನಿಂದ ಪೂರ‍್ವಕ್ಕೆ ಎರಡು ಮೈಲಿ ದೂರದಲ್ಲಿದೆ. ಇದು ದ್ವೀಪದ ಅತಿ ಕಿರಿದಾದ ಸಪೂರ ಪ್ರದೇಶದಲ್ಲಿದ್ದು, ಅಪ್ಪರ್ ಬೋಗ್‍ನಿಂದ ಲೋಯರ್ ಬೋಗ್‍ನ ಗ್ರೆಗೊರಿ ಟೌನ್ ಸಂಪರ‍್ಕಿಸುತ್ತದೆ. ಸೇತುವೆಯ ಎರಡೂ ಬದಿಯನ್ನು 30 ಅಡಿ ಅಗಲದ ಕಲ್ಲು ಬಂಡೆಯಿಂದ ಕೂಡಿದ ಪ್ರದೇಶ ಬೇರ‍್ಪಡಿಸಿದೆ. ಶತಮಾನಗಳಿಂದ ಉತ್ತರ ಮತ್ತು ದಕ್ಶಿಣ ಎಲುತೆರಾ ನಡುವೆ ನೈಸರ‍್ಗಿಕ ಕಲ್ಲಿನ ಸೇತುವೆಯ ಸಂಪರ‍್ಕವಿತ್ತು. 1940ರ ದಶಕದಲ್ಲಿ ಈ ಪ್ರಾಕ್ರುತಿಕ ಸೇತುವೆ ಅವ್ಯಾಹತವಾಗಿ ಬೀಸುವ ಚಂಡಮಾರುತಗಳ ಹಾವಳಿಯಿಂದ ಶಿತಿಲವಾಗಿ ಹಾಳಾಗಿದ್ದು, ಇದೇ ಸ್ತಳದಲ್ಲಿ ಕಲ್ಲಿನ ಸೇತುವೆಯ ಬದಲಿಯಾಗಿ ಕಾಂಕ್ರೀಟ್ ಸೇತುವೆಯನ್ನು ನಿರ‍್ಮಿಸಲಾಗಿದೆ. ಸಮುದ್ರದ ನೀರಿನ ನಿರಂತರ ಹೊಡೆತ ಹಾಗೂ ಚಂಡಮಾರುತಗಳಿಂದ ಈ ಕಾಂಕ್ರೀಟ್ ಸೇತುವೆಯನ್ನು ರಕ್ಶಿಸಲು ಆವರ‍್ತಕ ದುರಸ್ತಿ ಕಾರ‍್ಯವನ್ನು ಕ್ರಿಯಾಶೀಲವಾಗಿ ಇರಿಸಲಾಗಿತ್ತು. 1999ರ ನಂತರ ಬೀಸಿದ ಪ್ಲಾಯ್ಡ್ ಚಂಡಮಾರುತ ಈ ಗ್ಲಾಸ್ ವಿಂಡೋ ಮೂಲ ಸೇತುವೆಯನ್ನು ಸಂಪೂರ‍್ಣವಾಗಿ ನಾಶಮಾಡಿತು. ತದನಂತರ ಈ ಸೇತುವೆಯನ್ನು ಕೆಲವೇ ತಿಂಗಳುಗಳಲ್ಲಿ ಹೊಸದಾಗಿ ನಿರ‍್ಮಿಸಿ ಕ್ವೀನ್ಸ್ ಹೆದ್ದಾರಿಯನ್ನು ಪುನರ್ ಸ್ತಾಪಿಸಿದರು. ಇಶ್ಟಾಗಿಯೂ ಸಮುದ್ರ ಮತ್ತು ಮಹಾಸಾಗರದ ಎಡೆಬಿಡದ ಹೊಡೆತಗಳಿಂದ ರಕ್ಶಿಸಲು, ಸವೆದು ಹೋದ ಬಾಗಗಳನ್ನು ಆಸ್ಪಾಲ್ಟ್ ನಿಂದ ಮತ್ತೆ ತುಂಬಿ, ತೀರವನ್ನು ಬಲಪಡಿಸುವ ಕಾರ‍್ಯದಲ್ಲಿ ಕಾರ‍್ಮಿಕರು ಸದಾ ನಿರತರಾಗಿರುತ್ತಾರೆ.

ಗ್ಲಾಸ್ ವಿಂಡೋ ಸೇತುವೆ ಮತ್ತು ಸುತ್ತಮುತ್ತಲಿನ ಬಂಡೆಯ ಪ್ರದೇಶಗಳಿಗೆ ಬೇಟಿ ನೀಡುವಾಗ ಹೆಚ್ಚಿನ ಕಾಳಜಿ ಅವಶ್ಯಕ. ಅಟ್ಲಾಂಟಿಕ್ ಮಹಾಸಾಗರದ ದೈತ್ಯ ಹಾಗೂ ರಾಕ್ಶಸಗಾತ್ರದ ಅಲೆಗಳು ಯಾವ ಸಮಯದಲ್ಲಾದರೂ ಅನಿರೀಕ್ಶಿತವಾಗಿ ಬಂಡೆಗಳಿಗೆ ಅಪ್ಪಳಿಸಬಹುದು. ಈ ದೈತ್ಯ ಅಲೆಗಳ ಬಲವನ್ನು ತಗ್ಗಿಸಲು ಸಮುದ್ರದಲ್ಲಿ ಯಾವುದೇ ಬಾರೀ ಗಾತ್ರದ ಬಂಡೆಗಳು ಇಲ್ಲದ ಕಾರಣ, ಪೂರ‍್ಣ ಪ್ರಮಾಣದ ಶಕ್ತಿ ಈ ಕಲ್ಲಿನ ಬಂಡೆಗಳ ಮೇಲೇ ಅನಾವರಣಗೊಳ್ಳುತ್ತದೆ. ಈ ಬ್ರುಹದಾಕಾರದ ಅಲೆಗಳ ಹೊಡೆತ ಹಲವಾರು ಬಾರಿ ರಸ್ತೆಯಲ್ಲಿ ಓಡಾಡುವ ಬಾರಿ ವಾಹನಗಳನ್ನು ಸಹ ಸಮುದ್ರಕ್ಕೆ ಒಯ್ದಿರುವ ಹಾಗೂ ಜನರಿಗೆ ಮಾರಣಾಂತಿಕವಾಗಿರುವ ಉದಾಹರಣೆಗಳಿವೆ. ಗ್ಲಾಸ್ ವಿಂಡೋ ಸೇತುವೆ ಎಲುತೆರಾದ ಹೆಚ್ಚು ಜನಪ್ರಿಯ ಆಕರ‍್ಶಣೆಗಳಲ್ಲಿ ಒಂದಾಗಿದೆ.

( ಚಿತ್ರಸೆಲೆ ಮತ್ತು ಮಾಹಿತಿ ಸೆಲೆ: flickr.com , atlasobscura.com , amusingplanet.com , bahamas.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: