ಕವಿತೆ : ಚೈತನ್ಯವಿದ್ದರೆ ಉತ್ತರಿಸು ಗೆಳೆಯಾ

– ಕಾಂತರಾಜು ಕನಕಪುರ.

ನೀ ಹೋಗಿ ಆಗಲೇ ಈ ಬೂಮಿ ಸೂರ‍್ಯನ
ಸುತ್ತಲೂ ಪ್ರದಕ್ಶಿಣೆ ಹಾಕಿ ಮತ್ತಲ್ಲಿಗೇ ಬಂದಿದೆ,
ನೀ ಮೆರೆದಾಡಿದ ಮಣ್ಣಿನಡಿಯಲ್ಲಿಯೇ
ನಿನ್ನ ಹೆಮ್ಮೆಯ ದೇಹವು ಕರಗಿ ಹೋಗುತ್ತಿದೆ

ಒಂದಶ್ಟು ಜೀವಗಳು ನಿನ್ನ ಹಾದಿಯಲ್ಲಿ ಬಂದಿವೆ
ಇನ್ನಶ್ಟು ಜೀವಗಳು ಈ ಬೂಮಿಯನು ತುಂಬಿವೆ
ನಿನ್ನಿಶ್ಟದ ಕುರ‍್ಚಿಯನ್ನು ಅವನು ತುಂಬಿದ್ದಾನೆ
ನಿನ್ನದೇ ಪಟಾಲಮ್ಮು ಈಗ ಅವನ ವಶವಾಗಿದೆ

ನೀ ಕುಳಿತು ಗರ‍್ಜಿಸಿದ ಕೋಣೆ-ಕುರ‍್ಚಿಗಳಿಗಾಗಿ
ಶಕ್ತ್ಯಾನುಸಾರ ಪೂಜೆ-ಪುಣ್ಯಾಹವನು ʼಸಲ್ಲಿಸಿʼ
ಅವನು ಅಲ್ಲಿ ಪ್ರತಿಶ್ಟಾಪನೆಗೊಂಡು
ನಿನ್ನದೇ ತದ್ರೂಪಿಯಾಗುವ ಹವಣಿಕೆಯಲ್ಲಿ ನಿರತ

ಕುರ‍್ಚಿಯಲಿ ಕುಳಿತ ಕಾರಣಕ್ಕಾಗಿ ನಿನಗೆ ಸಂದ
ಕಾಣಿಕೆಗಳು ಕಪಾಟಿನಂಚಿನಲಿ ಕಣ್ಮರೆಯಾಗಿವೆ
ಕುರ‍್ಚಿಯಲ್ಲಿ ಕುಳಿತು ಗತ್ತಿನಿಂದ ನೀ ಒತ್ತಿದ ದಸ್ತಕಗಳನು
ಹೊತ್ತ ಕಡತಗಳು ದಪ್ತರುಗಳ ಕೋಣೆಯಲಿ ದೂಳು ತಿನ್ನುತ್ತಿವೆ

ನಿನ್ನ ಆರ‍್ಬಟಕ್ಕಂಜಿ ಅವಿತಿದ್ದ ಮಡದಿ-ಮಕ್ಕಳು ಸದ್ಯ
ಅವರವರದೇ ಬದುಕಿನ ಹುಡುಕಾಟದಲ್ಲಿ ಮಗ್ನರು
ಉದ್ದೇಶಕ್ಕಾಗಿ ಗೆಳೆಯರೆನಿಸಿಕೊಂಡವರು ಅವರದೇ
ಗೋಜಲುಗಳಲ್ಲಿರುವಾಗ ನಿನ್ನ ನೆನಪಿಗೆ ಪುರುಸೊತ್ತೆಲ್ಲಿ?

ನಿನ್ನದಾಗಿದ್ದ ಮನೆಯಲ್ಲಿ ತೂಗಿರುವ ಚಿತ್ರಪಟವೂ
ಜೇಡನಾಶ್ರಯದಿಂದ ತೂಗಿಹುದೋ ಎನಿಸುತಿದೆ
ನಿನ್ನ ನೆನಪು ಕೂಡಾ ದಿನಕಳೆದಂತೆ ಎಲ್ಲರ
ನೆನಪಿನಂಗಳದಿಂದ ಅಳಿಸಿಹೋಗುತ್ತಿದೆ

ಚೈತನ್ಯ ಉಳಿದಿದ್ದರೆ,
ಈಗ ಉತ್ತರಿಸು ಗೆಳೆಯಾ
ಕುರ‍್ಚಿ ಕಾರಣಕ್ಕೆ ಅಹಂ ಹುತ್ತವಾಗಿ
ಸಹಜೀವಿಗಳು ನಿನ್ನ ಕಣ್ಣಿಗೆ ತುಚ್ಚವಾಗಿ
ಪೊಳ್ಳು ಗೌರವದ ಗುಳ್ಳೆಯೊಳಗೆ
ನೀ ಬದುಕಿದ್ದು ಒಂದು ಬದುಕೇ?

( ಚಿತ್ರಸೆಲೆ : pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: