ಕಿಂಗ್‌ಸ್ಟನ್‌ನ ವಿಮೋಚನಾ ಉದ್ಯಾನವನ
– ಕೆ.ವಿ.ಶಶಿದರ.
ದ್ವೀಪರಾಶ್ಟ್ರವಾದ ಜಮೈಕಾದ ರಾಜದಾನಿ ನ್ಯೂ ಕಿಂಗ್‌ಸ್ಟನ್ ಕೆರಿಬಿಯನ್ ದ್ವೀಪ ಸಮೂಹದಲ್ಲಿ ಇದೊಂದು ಸಣ್ಣ ದ್ವೀಪ. ಇದರ ಹ್ರುದಯ ಬಾಗದಲ್ಲಿರುವ ವಿಮೋಚನಾ ಪಾರ‍್ಕ್ ಬಹಳ ಆಸಕ್ತಿದಾಯಕ, ಐತಿಹಾಸಿಕ, ಸಾರ‍್ವಜನಿಕ ಉದ್ಯಾನವನವಾಗಿದೆ. ಇದು ನ್ಯೂ ಕಿಂಗ್‌ಸ್ಟನ್ ಅಂತರರಾಶ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ ಮೂವತ್ತು ನಿಮಿಶದ ಪ್ರಯಾಣ. ಈ ಉದ್ಯಾನವನದಲ್ಲಿ ವಾಕಿಂಗ್ ಹಾಗೂ ಜಾಗಿಂಗ್ ಟ್ರ್ಯಾಕ್ ಜೊತೆಗೆ, ಜಮೈಕಾ ಮತ್ತು ಕೆರೆಬಿಯನ್ನಿನ ದ್ವೀಪರಾಶ್ಟ್ರಗಳಲ್ಲಿ ಲಬ್ಯವಿರುವ ಎಲ್ಲಾ ಮಾದರಿಯ ಸಣ್ಣ ಪುಟ್ಟ ವಿದವಿದವಾದ ಸಸ್ಯಗಳ ಮಾದರಿಯನ್ನು ಕಾಣಬಹುದು. ಈ ಉದ್ಯಾನವನ ಸವಿಸ್ತಾರವಾಗಿದ್ದು ಹೆಚ್ಚಿನ ಜನ ಸೇರುವ, ದೊಡ್ಡ ದೊಡ್ಡ ಕಾರ‍್ಯಕ್ರಮಗಳ ಆಯೋಜನೆಗೆ ಸೂಕ್ತ ಸ್ತಳವಾಗಿದೆ.
ಈ ವಿಮೋಚನಾ ಪಾರ‍್ಕ್ ಅದಿಕ್ರುತವಾಗಿ 31ನೇ ಜುಲೈ 2002ರಂದು ಸಾರ‍್ವಜನಿಕರಿಗೆ ತೆರೆಯಲಾಯಿತು. ಗುಲಾಮಗಿರಿಗೆ ಒಳಗಾಗಿದ್ದ ಆಪ್ರಿಕನ್ ಮೂಲದ ಜನರ ವಿಮೋಚನಾ ದಿನವನ್ನು, ಅವರ ಗೌರವಾರ‍್ತ ಜುಲೈ 30ರಂದು ಆಚರಿಸಲಾಗುತ್ತದೆ. ವಿಮೋಚನಾ ದಿನದ ನಂತರದ ದಿನ ಇದು ಸಾರ‍್ವಜನಿಕರಿಗೆ ಮುಕ್ತವಾದ ಕಾರಣ ಈ ಉದ್ಯಾನವನಕ್ಕೆ “ವಿಮೋಚನಾ ಉದ್ಯಾನವನ” (Emancipation Park) ಎಂದು ಹೆಸರಿಸಲಾಗಿದೆ.
ಈ ಉದ್ಯಾನವನದ ವೈಶಿಶ್ಟ್ಯವೆಂದರೆ ಮುಕ್ಯದ್ವಾರದಲ್ಲಿರುವ ‘ರಿಡೆಂಪ್ಶನ್ ಸಾಂಗ್’ ಎಂಬ ಹೆಸರಿನ ದೊಡ್ಡ ಶಿಲ್ಪ. ಈ ಮೂರು ಮೀಟರ್ (ಅಂದಾಜು ಹನ್ನೊಂದು ಅಡಿ) ಎತ್ತರದ ಕಂಚಿನ ವಿಗ್ರಹವನ್ನು ರಚಿಸಿದ ಕಲಾವಿದೆ ಜಮೈಕಾದ ಲಾರಾ ಪೇಸಿ ಕೂಪರ್. ವಿಶ್ವ ವಿಕ್ಯಾತ ಗಾಯಕ ಬಾಬ್ ಮಾರ‍್ಲಿ ಬರೆದು ಹಾಡಿದ ‘ರಿಡೆಂಪ್ಶನ್ ಸಾಂಗ್’ ಹೆಸರನ್ನು ಈ ಶಿಲ್ಪಕ್ಕೆ ಇಡಲಾಗಿದೆ. ಈ ಶಿಲ್ಪದಲ್ಲಿ ಎದುರು ಬದರು ನಿಂತಿರುವ ಕಪ್ಪುಜನಾಂಗದ ಗಂಡು, ಹೆಣ್ಣಿನ ಎರಡು ವಿಗ್ರಹಗಳಿವೆ. ಅವರಿಬ್ಬರ ದ್ರುಶ್ಟಿಯೂ ಆಗಸದತ್ತ ನೆಟ್ಟಿರುವಂತೆ ಚಿತ್ರಿಸಿದೆ. ಗುಲಾಮಗಿರಿಯ ಬೀಕರತೆಯ ಮೇಲೆ ಸಾದಿಸಿದ ಸ್ವಾತಂತ್ರ್ಯದ ವಿಜಯಪತಾಕೆಯನ್ನು ಬಾನಿನಲ್ಲಿ ಕಾಣುತ್ತಿರುವಂತಿದೆ ಅವರ ಆ ನೋಟ.
ಈ ವಿಮೋಚನಾ ಉದ್ಯಾನವನದಲ್ಲಿ ‘ಅದಿಂಕ್ರಾಸ್’ ಎಂದು ಕರೆಯಲಾಗುವ, ಪಶ್ಚಿಮ ಆಪ್ರಿಕಾದ ಆದ್ಯಾತ್ಮಿಕ ಚಿನ್ಹೆಗಳನ್ನು ಪ್ರದರ‍್ಶಿಸುವ, ಆಸಕ್ತಿದಾಯಕ ವಿವರಗಳನ್ನೂ ಸಹ ಕಾಣಬಹುದು. ಕಾಮೌ ಕಾಂಬುಯಿ ರಚಿಸಿರುವ ಈ ಚಿನ್ಹೆಗಳು ಉದ್ಯಾನವನವನ್ನು ಅಲಂಕರಿಸುವ ಇತರೆ ಕಲೆಗಳ ಜೊತೆಗೆ ಹಾಸು ಹೊಕ್ಕಾಗಿ ಹಣೆದುಕೊಂಡಿದೆ. ಉದ್ಯಾನವನದ ಮದ್ಯ ಬಾಗದಲ್ಲಿ ಅತ್ಯಂತ ವಿಶಾಲವಾದ ವೇದಿಕೆಯಿದೆ. ಅಶ್ಟು ದೊಡ್ಡದಿದ್ದರೂ ಸಹ ಅದು ಪ್ರವಾಸಿಗರಿಗೆ ವೀಕ್ಶಕರಿಗೆ ಯಾವುದೇ ಅಡಚಣೆ ಉಂಟುಮಾಡುವುದಿಲ್ಲ. ಲೈವ್ ಮನರಂಜನಾ ಕಾರ‍್ಯಕ್ರಮಗಳಿಗೆ ಇದು ಅತ್ಯಂತ ಪ್ರಶಸ್ತವಾದ ಸ್ತಳ. ವಿಮೋಚನಾ ದಿನ ರಾತ್ರಿ ಸ್ತಳೀಯ ಸಂಗೀತ ಕಲಾವಿದರಿಂದ ಇಡೀ ರಾತ್ರಿ ಮನರಂಜನಾ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ವೇದಿಕೆಯ ಮುಂಬಾಗದಲ್ಲಿ ನೀರಿನ ಕಾರಂಜಿಯಿದ್ದು, ಮನಸೆಳೆಯುವ ನೀರಿನ ಪ್ರದರ‍್ಶನವನ್ನು ನೋಡಿ ಆನಂದಿಸಬಹುದು.
ವಿಮೋಚನಾ ಉದ್ಯಾನವನದಲ್ಲಿ, ಒಳಾಂಗಣ ಕ್ರೀಡೆಗಳಾದ ಚೆಸ್, ಪಿಂಗ್ ಪಾಂಗ್ ಮುಂತಾದವುಗಳನ್ನು ಆಡಲು ವ್ಯವಸ್ತೆಯಿದೆ. ಇದರೊಂದಿಗೆ ಮುಂಜಾನೆ ಮತ್ತು ಸಂಜೆಯ ಸಮಯದಲ್ಲಿ ಯೋಗ, ಏರೋಬಿಕ್ಸ್ ಗಳನ್ನು ಕಲಿಸಿಕೊಡಲಾಗುತ್ತದೆ. ಜಮೈಕಾದ ರಾಶ್ಟ್ರೀಯ ಮರ ‘ಲಿಗ್ನಮ್ ವಿಟಾ’ ಸಹ ಉದ್ಯಾನವನದಲ್ಲಿ ವ್ಯಾಪಕವಾಗಿ ಬೆಳೆಸಲಾಗಿದೆ. ಇದರೊಡನೆ ಅನೇಕ ಹೂಗಿಡಗಳಿದ್ದು ಉದ್ಯಾನವನದ ಉತ್ಕ್ರುಶ್ಟತೆ ಮತ್ತು ಸೌಂದರ‍್ಯವನ್ನು ಹೆಚ್ಚಿಸಿವೆ. ನ್ಯೂ ಕಿಂಗ್‌ಸ್ಟನ್‍ಗೆ ಹೋದವರು ಮರೆಯದೆ ನೋಡಲೇಬೇಕಾದ ಸ್ತಳ ಇದು.
(ಚಿತ್ರ ಸೆಲೆ: alluringworld.com, jamaicahotelreview.com, wikimedia.org)
ಇತ್ತೀಚಿನ ಅನಿಸಿಕೆಗಳು