ಬ್ರಿಜೇಶ್ ಪಟೇಲ್ – ಕರ‍್ನಾಟಕದ ಬ್ಯಾಟಿಂಗ್ ದಿಗ್ಗಜ
ಕರ‍್ನಾಟಕ ರಾಜ್ಯದಿಂದ ಗುಂಡಪ್ಪ ವಿಶ್ವನಾತ್ ಹಾಗೂ ರಾಹುಲ್ ದ್ರಾವಿಡ್ ರಂತಹ ಸರ‍್ವಶ್ರೇಶ್ಟ ಬ್ಯಾಟ್ಸ್ಮನ್ ಗಳು ಅಂತರಾಶ್ಟ್ರೀಯ ಮಟ್ಟದಲ್ಲಿ ಮಿಂಚಿ ದಿಗ್ಗಜರು ಎನಿಸಿಕೊಂಡಿದ್ದರೂ ದೇಸೀ ಕ್ರಿಕೆಟ್ ನಲ್ಲಿ ಮಾತ್ರ ರಾಜ್ಯ ತಂಡದ ಪರ ಅತಿ ಹೆಚ್ಚು ರನ್ ಹಾಗೂ ಶತಕ ಗಳಿಸಿದ ದಾಕಲೆ ಮಾತ್ರ ಈಗಲೂ ಬಿರುಸಿನ ಹೊಡೆತಗಳಿಗೆ ಹೆಸರುವಾಸಿಯಾಗಿದ್ದ ಈ ಬ್ಯಾಟ್ಸ್ಮನ್ ಹೆಸರಲ್ಲೇ ಇದೆ. ಆ ಹೆಸರೇ ಬ್ರಿಜೇಶ್ ಪರುಶರಾಮ್ ಪಟೇಲ್.
ಹುಟ್ಟು – ಎಳವೆಯ ಕ್ರಿಕೆಟ್
ಬರೋಡದಲ್ಲಿ 24 ನವಂಬರ್, 1952 ರಂದು ಪರಶುರಾಮ್ ಪಟೇಲ್ ಮತ್ತು ಇಂದಿರಾ ಪಟೇಲ್ ರ ಮಗನಾಗಿ ಒಂದು ಕ್ರಿಕೆಟ್ ಕುಟುಂಬದಲ್ಲಿ ಬ್ರಿಜೇಶ್ ಪಟೇಲ್ ಹುಟ್ಟಿದರು. ಸಹಜವಾಗಿ ಆಟದ ಬಗ್ಗೆ ಕುಟುಂಬದವರಿಂದ ಪ್ರೋತ್ಸಾಹ ದೊರೆತಿದ್ದರಿಂದ ಬೆಂಗಳೂರಿನ ಬಿಶಪ್ ಕಾಟನ್ ಶಾಲೆಯಲ್ಲಿ ಕಲಿಯುತ್ತಿರುವಾಗಲೇ ಕ್ರಿಕೆಟ್ ಆಡುವುದನ್ನೂ ಬ್ರಿಜೇಶ್ ಮೊದಲು ಮಾಡಿದರು. ತರಬೇತುದಾರರಾದ ಸಲುಸ್ ನಸರತ್ ಮತ್ತು ಕೆ.ಕೆ ತಾರಾಪೂರ್ ನಡೆಸುತ್ತಿದ್ದ ರೀಜನಲ್ ಕೋಚಿಂಗ್ ಕ್ಯಾಂಪ್ ನಲ್ಲಿ ಪುಟ್ಟ ಬ್ರಿಜೇಶ್ ಕ್ರಿಕೆಟ್ ನ ಮೊದಲ ಪಟ್ಟುಗಳನ್ನು ಕಲಿತರು. 1968/69 ರ ವೇಳೆಗಾಗಲೇ ಹದಿನಾರರ ಹರೆಯದಲ್ಲಿ ದಕ್ಶಿಣ ವಲಯದ ಶಾಲಾ ತಂಡದ ಪರ ‘ರೊಹಿಂಗ್ಟನ್ ಬಾರಿಯ’ ಟೂರ‍್ನಿಯಲ್ಲಿ ಆಡಿದರು. ನಂತರ ‘ಕಾಟೊನಿಯನ್ ಶೀಲ್ಡ್’ ಅಂತರ ಶಾಲಾ ಟೂರ‍್ನಿಯಲ್ಲಿ ರನ್ ಗೋಪುರ ಕಟ್ಟಿ ಹೆಸರು ಗಳಿಸಿದರು. ಬ್ರಿಜೇಶ್ ರಿಗೆ ಕ್ರಿಕೆಟ್ ಮೇಲೆ ಪ್ರೀತಿ ಎಶ್ಟಿತ್ತು ಎಂದರೆ, ತಾವು ಓದುತ್ತಿದ್ದ ಪ್ರತಿಶ್ಟಿತ ಬಿಶಪ್ ಕಾಟನ್ ಶಾಲೆಯಲ್ಲಿ ಕ್ರಿಕೆಟ್ ರುತುವಿನ ಹೊತ್ತಿನಲ್ಲಿ ಪರೀಕ್ಶೆಗಳು ಇರುತ್ತಿದ್ದುದರಿಂದ ಆ ಶಾಲೆಯನ್ನು ತೊರೆದು ಕ್ರಿಕೆಟ್ ಸಲುವಾಗಿ ಬೆಂಗಳೂರು ಹೈಸ್ಕೂಲ್ ಸೇರಿದರು. ಆ ವೇಳೆ ಬಿ.ಟಿ ರಾಮಯ್ಯ ಶೀಲ್ಡ್ ಪಂದ್ಯಗಳಲ್ಲಿಯೂ ಮಿಂಚಿದ ಅವರನ್ನು 1969 ರ ಆಸ್ಟ್ರೇಲಿಯಾ ಪ್ರವಾಸಕ್ಕೆ ಬಾರತದ ಶಾಲಾ ತಂಡಕ್ಕೆ ಆಯ್ಕೆ ಮಾಡಲಾಯಿತು. ಸ್ವಸ್ತಿಕ್ ಯೂನಿಯನ್ ಕ್ಲಬ್ ತಂಡದ ಪರ ಮೊದಲ ಡಿವಿಶನ್ ಕ್ರಿಕೆಟ್ ನಲ್ಲೂ ಅವರ ಬ್ಯಾಟಿಂಗ್ ನಿಂದ ಚಾಪು ಮೂಡಿಸಿದರು. ಬಳಿಕ ಮೈಸೂರು ರಾಜ್ಯದ ಕಿರಿಯರ ತಂಡದ ಪರ ತಮಿಳುನಾಡು ಎದುರು ಶತಕ ಬಾರಿಸಿ ರಾಜ್ಯ ರಣಜಿ ತಂಡದಲ್ಲಿ ಬ್ರಿಜೇಶ್ ಎಡೆ ಪಡೆದರು.
ರಣಜಿ ಪಾದಾರ‍್ಪಣೆ
ಆಂದ್ರ ಎದುರು 1969 ರಲ್ಲಿ ಬ್ರಿಜೇಶ್ ಗುಂಟೂರಿನಲ್ಲಿ ತಮ್ಮ ಚೊಚ್ಚಲ ರಣಜಿ ಪಂದ್ಯ ಆಡಿದರು. ಅವರಿಗೆ ಮೊದಲ ದರ‍್ಜೆ ಕ್ರಿಕೆಟ್ ನಲ್ಲಿ ಲಯ ಕಂಡುಕೊಳ್ಳಲು ಕೊಂಚ ಹೊತ್ತು ಹಿಡಿಯಿತು. ಸರಾಸರಿ ಪ್ರದರ‍್ಶನಗಳಿಂದ ತಂಡದಲ್ಲಿ ತಮ್ಮ ಸ್ತಾನ ಉಳಿಸಿಕೊಂಡಿದ್ದ ಅವರು 1973/74 ರ ಸಾಲಿನ ರಣಜಿ ಟೂರ‍್ನಿಯಲ್ಲಿ ತಮ್ಮ ಬ್ಯಾಟಿಂಗ್ ಉತ್ತುಂಗ ತಲುಪಿದರು. ಸೆಮೀಸ್ ನಲ್ಲಿ ಬಲಾಡ್ಯ ಬಾಂಬೆ ಎದುರು ಶತಕ ಗಳಿಸಿ ಅವರ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕಲು ನೆರವಾದರು. ಕರ‍್ನಾಟಕ ತಂಡ ಮೊದಲ ರಣಜಿ ಟೂರ‍್ನಿ ಗೆದ್ದ ಈ ಸಾಲಿನಲ್ಲಿ ಬ್ರಿಜೇಶ್ 3 ಶತಕ ಹಾಗೂ 3 ಅರ‍್ದಶತಕಗಳೊಂದಿಗೆ ಬರೋಬ್ಬರಿ 618 ರನ್ ಪೇರಿಸಿ ರಾಶ್ಟ್ರೀಯ ಆಯ್ಕೆಗಾರರ ಗಮನ ಸೆಳೆದು 1974 ರ ಇಂಗ್ಲೆಂಡ್ ಪ್ರವಾಸಕ್ಕೆ ಬಾರತ ತಂಡಕ್ಕೆ ಆಯ್ಕೆಯಾದರು.
ಅಂತರಾಶ್ಟ್ರೀಯ ಕ್ರಿಕೆಟ್ ಬದುಕು
ಮ್ಯಾಂಚೆಸ್ಟರ್ ನಲ್ಲಿ ಇಂಗ್ಲೆಂಡ್ ಎದುರು ಟೆಸ್ಟ್ ಪಾದಾರ‍್ಪಣೆ ಮಾಡಿದ ಬ್ರಿಜೇಶ್ ತಾವಾಡಿದ ಮೊದಲ ನಾಲ್ಕು ಟೆಸ್ಟ್ ಗಳಲ್ಲಿ ವೈಪಲ್ಯ ಅನುಬವಿಸಿದರು. ಅತ್ಯುತ್ತಮ ಪೀಲ್ಡರ್ ಆಗಿದ್ದ ಅವರು ಅಂಗಳದಲ್ಲಿ ಹೆಚ್ಚು ಕ್ಯಾಚ್ ಗಳನ್ನು ಹಿಡಿದು ರನ್ ತಡೆದು ಮೆಚ್ಚುಗೆ ಗಳಿಸಿದರೂ ಬ್ಯಾಟ್ ನಿಂದ ರನ್ ಗಳಿಸಲು ಕೊಂಚ ಹೊತ್ತು ತಗೆದುಕೊಳ್ಳುತ್ತಾರೆ. 1975 ರಲ್ಲಿ ವೆಸ್ಟ್ ಇಂಡೀಸ್ ಎದುರು ಬಾಂಬೆಯಲ್ಲಿ ಔಟಾಗದೆ 73 ರನ್ ಗಳಿಸಿ ತಮ್ಮ ಚೊಚ್ಚಲ ಅರ‍್ದಶತಕ ದಾಕಲಿಸಿದರು. ನಂತರ 1976 ರ ನ್ಯೂಜಿಲ್ಯಾಂಡ್ ಪ್ರವಾಸದ ವೇಳೆ ವೆಲ್ಲಿಂಗ್ಟನ್ ನಲ್ಲಿ 81 ರನ್ ಗಳಿಸಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಆಯ್ಕೆಯಾದರು. ಹೋಲ್ಡಿಂಗ್, ರಾಬರ‍್ಟ್ಸ್ ರಂತಹ ಗಟಾನುಗಟಿ ವೇಗಿಗಳಿದ್ದ ವೆಸ್ಟ್ ಇಂಡೀಸ್ ಎದುರು ಟ್ರಿನಿಡಾಡ್ ನಲ್ಲಿ ಔಟಾಗದೆ 115 ಸಿಡಿಸಿ ತಮ್ಮ ಮೊದಲ ಟೆಸ್ಟ್ ಶತಕ ಗಳಿಸಿದರು. ಬಳಿಕ ಅದೇ ಅಂಗಳದಲ್ಲಿ ಮೂರನೇ ಟೆಸ್ಟ್ ನ ನಾಲ್ಕನೇ ಇನ್ನಿಂಗ್ಸ್ ನಲ್ಲಿ ಬಾರತಕ್ಕೆ ಗೆಲ್ಲಲು 403 ರನ್ ಗಳ ಅಸಾದ್ಯ ಗುರಿ ಎದುರಾದಾಗ ಗಾವಸ್ಕರ್ ಹಾಗೂ ವಿಶ್ವನಾತ್ ಅವರ ಶತಕದ ನಂತರ ಬ್ರಿಜೇಶ್ ಔಟಾಗದೆ ತಾಳ್ಮೆಯ 49 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಪ್ರವಾಸದ ಬಳಿಕ ತವರಿನಲ್ಲಿ ನ್ಯೂಜಿಲ್ಯಾಂಡ್ ಹಾಗೂ ಇಂಗ್ಲೆಂಡ್ ಎದುರು ಅವರು ಒಟ್ಟು 3 ಅರ‍್ದಶತಕಗಳನ್ನು ಗಳಿಸಿದರೂ ನಿರಂತರತೆ ಕಾಪಾಡಿಕೊಳ್ಳಲಾಗದೆ ಹೆಚ್ಚು ಇನ್ನಿಂಗ್ಸ್ ಗಳಲ್ಲಿ ನಿರಾಸೆ ಮೂಡಿಸಿದರು. ಹಾಗಾಗಿ 1977 ರ ನೀರಸ ಆಸ್ಟ್ರೇಲಿಯಾ ಪ್ರವಾಸದ ಬಳಿಕ ಅವರನ್ನು ತಂಡದಿಂದ ಕೈಬಿಡಲಾಗುತ್ತದೆ. ಅಲ್ಲಿಗೆ 21 ಟೆಸ್ಟ್ ಗಳಿಂದ 1 ಶತಕ ಹಾಗೂ 5 ಅರ‍್ದಶತಕಗಳೊಂದಿಗೆ 30 ರ ಸರಾಸರಿಯಲ್ಲಿ 972 ಗಳಿಸಿದ ಬ್ರಿಜೇಶ್ ಪಟೇಲ್ ರ ಟೆಸ್ಟ್ ವ್ರುತ್ತಿ ಬದುಕು ಕೊನೆಗೊಳ್ಳುತ್ತದೆ. ವ್ರುತ್ತಿಬದುಕಿನಲ್ಲಿ ಅವರು ಅತಿ ಹೆಚ್ಚು ರನ್ ಗಳಿಸಿದ್ದು ಹೊರದೇಶಗಳಲ್ಲಿ ಎಂಬುದು ಗಮನಿಸಬೇಕಾದ ವಿಶಯ. ಅವರು ಇಂಗ್ಲೆಂಡ್ ನ ಯಾರ‍್ಕ್ ಶೈರ್ ನ ಹರ‍್ಡರ‍್ಸ್ ಪೀಲ್ಡ್ ಲೀಗ್ ಮತ್ತು ನ್ಯೂಜಿಲ್ಯಾಂಡ್‌ನ ವೆಲ್ಲಿಂಗ್ಟನ್ ತಂಡಗಳ ಪರ ಕೂಡ ದೇಸೀ ಪಂದ್ಯಗಳನ್ನಾಡಿದ್ದಾರೆ. 1975 ರ ಮೊದಲ ವಿಶ್ವಕಪ್ ಮತ್ತು ಆ ನಂತರದ 1979 ರ ವಿಶ್ವಕಪ್ ನಲ್ಲಿ ಬಾರತವನ್ನು ಪ್ರತಿನಿದಿಸಿದ ಹೆಗ್ಗಳಿಕೆ ಹೊಂದಿರುವ ಬ್ರಿಜೇಶ್ ಒಟ್ಟು 10 ಒಂದು ದಿನದ ಪಂದ್ಯಗಳನ್ನಾಡಿ 1 ಅರ‍್ದಶತಕದೊಂದಿಗೆ 243 ರನ್ ಗಳಿಸಿದ್ದಾರೆ. 1974 ರಲ್ಲಿ ಇಂಗ್ಲೆಂಡ್ ಎದುರು ಲೀಡ್ಸ್ ನಲ್ಲಿ ತಮ್ಮ ಚೊಚ್ಚಲ ಒಂದು ದಿನದ ಪಂದ್ಯದಲ್ಲಿ ಅವರು ಗಳಿಸಿದ 82 ರನ್ ಪಾದಾರ‍್ಪಣೆ ಪಂದ್ಯದಲ್ಲಿ ಬಾರತೀಯನೊಬ್ಬನ ಗರಿಶ್ಟ ರನ್ ಗಳಿಕೆಯಾಗಿತ್ತು. ಈ ದಾಕಲೆಯನ್ನು 32 ವರುಶಗಳ ಬಳಿಕ 2006 ರಲ್ಲಿ ಕರ‍್ನಾಟಕದ ರಾಬಿನ್ ಉತ್ತಪ್ಪ (86 ರನ್ ಗಳಿಸಿ) ಮುರಿದರೆ, ಆ ಬಳಿಕ 2016 ರಲ್ಲಿ ಮತ್ತೊಬ್ಬ ಕರ‍್ನಾಟಕದ ಬ್ಯಾಟ್ಸ್ಮನ್ ಕೆ.ಎಲ್ ರಾಹುಲ್ ತಾವಾಡಿದ ಮೊದಲ ಪಂದ್ಯದಲ್ಲೇ ಔಟಾಗದೆ 100 ರನ್ ಗಳಿಸಿ ಆ ದಾಕಲೆಯನ್ನು ಈಗ ತಮ್ಮದಾಗಿಸಿಕೊಂಡಿದ್ದಾರೆ.
ಕರ‍್ನಾಟಕದ ಬ್ಯಾಟಿಂಗ್ ದಿಗ್ಗಜ ಬ್ರಿಜೇಶ್ ಪಟೇಲ್
ಅಂತರಾಶ್ಟ್ರೀಯ ಮಟ್ಟದಲ್ಲಿ ನೆಲೆ ಕಂಡುಕೊಳ್ಳಲು ಆಗದ್ದಿದ್ದರೂ ದೇಸೀ ಕ್ರಿಕೆಟ್ ನಲ್ಲಿ ಕರ‍್ನಾಟಕದ ಮಟ್ಟಿಗೆ ಬ್ರಿಜೇಶ್ ಪಟೇಲ್ ಒಬ್ಬ ದಿಗ್ಗಜ ಬ್ಯಾಟ್ಸ್ಮನ್. ಅವರು 1987/88 ರಲ್ಲಿ ಕ್ರಿಕೆಟ್ ನಿಂದ ದೂರವಾದಾಗ ರಣಜಿ ಟೂರ‍್ನಿಯ ಎಲ್ಲಾ ಬಗೆಯ ಬ್ಯಾಟಿಂಗ್ ದಾಕಲೆಗಳು : ಅತ್ಯದಿಕ ಶತಕ (26) ಹಾಗೂ ಅತ್ಯದಿಕ ರನ್ (7,216) ಅವರ ಹೆಸರಲ್ಲಿದ್ದವು. ಈ ದಾಕಲೆ ಈಗ ಮುಂಬೈನ ವಸೀಮ್ ಜಾಪರ್ ರ ಹೆಸರಲ್ಲಿದೆ. ಬಾರತ ತಂಡದಿಂದ ಹಿಂದಿರುಗಿದ ಮೇಲೆ ಮತ್ತೊಮ್ಮೆ ತಂಡದಲ್ಲಿ ಎಡೆ ಪಡೆಯುವ ಉದ್ದೇಶದಿಂದ ಬ್ರಿಜೇಶ್ ದೇಸೀ ಕ್ರಿಕೆಟ್ ನಲ್ಲಿ ಹೇರಳವಾಗಿ ರನ್ ಗಳಿಸಿದರೂ ಅವರಿಗೆ ಅವಕಾಶ ಸಿಗುವುದಿಲ್ಲ. 1982/83 ರಲ್ಲಿ ನಾಯಕನಾಗಿ ಬಾಂಬೆ ತಂಡವನ್ನು ಬಾಂಬೆಯಲ್ಲಿ ಮಣಿಸಿ ಕರ‍್ನಾಟಕಕ್ಕೆ ಮೂರನೇ ರಣಜಿ ಕಿರೀಟ ತೊಡಿಸಿದ ಹೆಗ್ಗಳಿಕೆ ಬ್ರಿಜೇಶ್ ರ ಪಾಲಾಯಿತು. ಆ ಪಂದ್ಯದಲ್ಲಿ ಅವರು ತಂಡವನ್ನು ಮುನ್ನಡೆಸಿದ ರೀತಿ ಕ್ರಿಕೆಟ್ ಪಂಡಿತರ ಮೆಚ್ಚುಗೆ ಗಳಿಸಿತು. ಈ ಸಾಲಿನಲ್ಲಿ 121 ರ ಸರಾಸರಿಯಲ್ಲಿ ಅವರು ಅತಿ ಹೆಚ್ಚು (850) ರನ್ ಗಳಿಸಿ ದಾಕಲೆ ಮಾಡಿದರು. ಹೋರಾಟದ ಮನೋಬಾವದ ನಾಯಕನಾಗಿದ್ದ ಬ್ರಿಜೇಶ್ ತಮ್ಮ ಸಹ ಆಟಗಾರರನ್ನು ಕೂಡ ಹುರಿದುಂಬಿಸಿ ಅದೇ ಬಗೆಯ ಆಟವನ್ನು ಎದುರು ನೋಡುತ್ತಿದ್ದರು. ಪಂದ್ಯವನ್ನು ಗೆಲ್ಲಬೇಕೆಂದು ಆಡಬೇಕೆ ಹೊರತು ರಕ್ಶಣಾತ್ಮಕವಾಗಿ ಆಡಿ ಡ್ರಾ ಮಾಡಿಕೊಂಡು ಅಂಕ ಗಳಿಸುವುದಲ್ಲ ಎಂದು ನಾಯಕನಾಗಿ ಅವರು ನಂಬಿದ್ದರು. ಒಮ್ಮೆ ಗೋವಾ ಎದುರು ಬದ್ರಾವತಿಯಲ್ಲಿ ನಡೆದ ಪಂದ್ಯದಲ್ಲಿ ಸ್ಪಿನ್ನರ್ ರಗುರಾಮ್ ಬಟ್ ಕಾಲಿಗೆ ಪೆಟ್ಟು ಮಾಡಿಕೊಂಡು ಹೊರನಡೆಯಲು ಮುಂದಾದಾಗ ನಾಯಕ ಬ್ರಿಜೇಶ್ ಅವರಿಗೆ, ಈಗಾಗಲೇ ಎದುರಾಳಿ ತಂಡ 5 ವಿಕೆಟ್ ಕಳೆದುಕೊಂಡಿದೆ. ತಿರುಗುತ್ತಿರುವ ಈ ಪಿಚ್ ನಲ್ಲಿ ನಿಮ್ಮ ಬೌಲಿಂಗ್ ಎದುರಿಸಲು ಅವರು ಹೆದರುತ್ತಿದ್ದಾರೆ. ಓಡಿ ಬೌಲ್ ಮಾಡಲಾಗದಿದ್ದರೆ ನಿಂತೇ ಬೌಲ್ ಮಾಡಿ ಎಂದು ಪ್ರೋತ್ಸಾಹಿಸುತ್ತಾರೆ. ನಾಯಕನ ಮಾತಿನಂತೆ ನಿಂತು ಬೌಲ್ ಮಾಡಿದ ರಗುರಾಮ್ ಬಟ್ ಕಡೇ 5 ವಿಕೆಟ್ ಗಳಲ್ಲಿ 3 ವಿಕೆಟ್ ಪಡೆದು ಗೆಲುವಿನ ರೂವಾರಿಯಾಗುತ್ತಾರೆ. ಈ ಗೆಲುವು ಬ್ರಿಜೇಶ್ ರ ತನ್ನಂಬಿಕೆ ಹಾಗೂ ನಾಯಕತ್ವದ ಗುಣಕ್ಕೆ ಎತ್ತುಗೆ ಎಂದೇ ಹೇಳಬೇಕು. 1978 ಮತ್ತು 1979 ರಲ್ಲಿ ಎರಡು ಬಾರಿ ವೇಗದ ಶತಕ ಸಿಡಿಸಿ ಎಲ್.ಪಿ. ಜೈ ಪ್ರಶಸ್ತಿ ಕೂಡ ಬ್ರಿಜೇಶ್ ಪಡೆದರು. ಅವರ ಮುಂದಾಳ್ತನದಲ್ಲೇ ರಾಜ್ಯ ತಂಡ ಒಂದು ದಿನದ ಪಂದ್ಯಾವಳಿಯಾದ ಸುಬ್ಬಯ್ಯ ಪಿಳ್ಳೈ ಟ್ರೋಪಿಯನ್ನೂ ಗೆದ್ದು ಬೀಗಿತು. ತಮ್ಮ ಆಟದ ಸಂದ್ಯಾ ಕಾಲದಲ್ಲೂ 1986 ರಲ್ಲಿ 611 ರನ್ ಮತ್ತು 1987 ರಲ್ಲಿ 596 ರನ್ ಗಳಿಸಿ ರಣಜಿ ರನ್ ಗಳಿಕೆಯಲ್ಲಿ ಅವರು ಮುಂಚೂಣಿಯಲ್ಲಿದ್ದರು. ತಮ್ಮ ಬ್ಯಾಟಿಂಗ್ ನಲ್ಲಿ ಇನ್ನು ಸಾಕಶ್ಟು ಕಸುವಿದ್ದಾಗಲೇ 36 ರಹರೆಯದಲ್ಲಿ ಬ್ರಿಜೇಶ್ ಪಟೇಲ್ ದೇಸೀ ಕ್ರಿಕೆಟ್ ನಿಂದ ನಿವ್ರುತ್ತಿ ಗೋಶಿಸಿದರು. ಕರ‍್ನಾಟಕ ತಂಡದೊಂದಿಗೆ ಮೂರು ರಣಜಿ ಟೂರ‍್ನಿ ಹಾಗೂ ಎರಡು ಇರಾನಿ ಕಪ್ ಗೆದ್ದಿರುವ ಅವರು ಒಟ್ಟು 203 ಮೊದಲ ದರ‍್ಜೆ ಪಂದ್ಯಗಳನ್ನಾಡಿ 37 ಶತಕ ಹಾಗೂ 55 ಅರ‍್ದಶತಕಗಳೊಂದಿಗೆ 46 ರ ಸರಾಸರಿಯಲ್ಲಿ 11,911 ರನ್ ಗಳಿಸಿದ್ದಾರೆ. ಬಾಂಬೆಯ ಲೀಗ್ ಗಳಲ್ಲಿ ಮಪತ್ ಲಾಲ್ ತಂಡದ ಪರ ಆಡಿ ಅಲ್ಲೂ ಸಾಕಶ್ಟು ರನ್ ಗಳಿಸಿದರು. ಒಟ್ಟಾರೆ ಕರ‍್ನಾಟಕ ರಾಜ್ಯ ತಂಡದ ಪರ ಬ್ರಿಜೇಶ್ ಪಟೇಲ್ ರ ದಾಕಲೆಗಳು ಅವರೊಬ್ಬ ಅಪ್ರತಿಮ ಆಟಗಾರ ಎಂಬುದನ್ನು ಸಾರಿ ಹೇಳುತ್ತವೆ.
ನಿವ್ರುತ್ತಿ ನಂತರದ ಬದುಕು
ತಮ್ಮ ಆಟದ ದಿನಗಳ ಬಳಿಕವೂ ಕ್ರಿಕೆಟ್ ನ ಹಲವಾರು ವಿಬಾಗಗಳಲ್ಲಿ ದುಡಿಯುತ್ತಾ ಬ್ರಿಜೇಶ್ ಪಟೇಲ್ ಆಟದೊಂದಿಗೆ ತಮ್ಮ ನಂಟನ್ನು ಉಳಿಸಿಕೊಂಡಿದ್ದಾರೆ. ತಮ್ಮದೇ ಕ್ರಿಕೆಟ್ ಅಕ್ಯಾಡೆಮಿಯನ್ನು ತೆರೆದು ಪುಟ್ಟ ಹುಡುಗರಿಗೆ ತರಬೇತಿ ನೀಡುತ್ತಿದ್ದಾರೆ. ರಾಬಿನ್ ಉತ್ತಪ್ಪ ಇವರ ಅಕ್ಯಾಡೆಮಿಯಿಂದ ಅಂತರಾಶ್ಟ್ರೀಯ ಕ್ರಿಕೆಟ್ ಆಡಿದ ಮೊದಲ ಆಟಗಾರ. ಮಾಜಿ ಆಟಗಾರರು ಒಳ್ಳೆ ಆಡಳಿತಗಾರರಾಗಲು ಸಾದ್ಯವಿಲ್ಲ ಎಂಬ ನಂಬಿಕೆಯಿದೆ. ಆದರೆ ಬ್ರಿಜೇಶ್ ಪಟೇಲ್ ಮಾತ್ರ ಇದಕ್ಕೆ ಅಪವಾದ. 90 ರ ದಶಕದಿಂದ ಕೆ.ಎಸ್.ಸಿ.ಎ ಹಾಗೂ ಬಿ.ಸಿ.ಸಿ.ಐ ನಲ್ಲಿ ಆಡಳಿತದ ಹೊಣೆ ಹೊತ್ತು ಯಶಸ್ಸು ಕಂಡಿದ್ದಾರೆ. ಕೆ.ಎಸ್.ಸಿ.ಎ ಅದ್ಯಕ್ಶರಾಗಿ ರಾಜ್ಯದ ಇತರೆ ನಗರಗಳಲ್ಲಿಯೂ ಕ್ರಿಕೆಟ್ ಹರಡುವ ಉದ್ದೇಶದಿಂದ ಗುಣಮಟ್ಟದ ಏರ‍್ಪಾಟುಳ್ಳ ಆಟದ ಅಂಗಳಗಳನ್ನು ಕಟ್ಟಿಸಲು ಮೊದಲು ಮಾಡಿದರು. ದೇಶದಲ್ಲೇ ಮೊದಲ ಬಾರಿಗೆ ಚಿನ್ನಸ್ವಾಮಿ ಅಂಗಳಕ್ಕೆ ಸೋಲಾರ್ ರೂಪ್ ಟಾಪ್ ಅಳವಡಿಸಿದರು. ಬಳಿಕ ಕೆ.ಪಿ.ಎಲ್ ಹುಟ್ಟುಹಾಕಿ ರಾಜ್ಯದ ಹಲವಾರು ಪ್ರತಿಬೆಯುಳ್ಳ ಆಟಗಾರರಿಗೆ ದೊಡ್ಡ ಮಟ್ಟದಲ್ಲಿ ಆಡಲು ವೇದಿಕೆ ಕಲ್ಪಿಸಿಕೊಟ್ಟರು. ಐ.ಪಿ.ಎಲ್ ನ ಬೆಂಗಳೂರು ತಂಡದ ವ್ಯವಸ್ತಾಪಕರಾಗಿ ಕೂಡ ಕೆಲ ವರುಶಗಳ ಕಾಲ ಕೆಲಸ ಮಾಡಿದರು. ಕರ‍್ನಾಟಕದ ರಣಜಿ ಆಟಗಾರರಿಗೆ ಪೆನ್ಶನ್ ಯೋಜನೆ ಜಾರಿಗೆ ಬಂದದ್ದು ಕೂಡ ಬ್ರಿಜೇಶ್ ರ ಆಡಳಿತಾವದಿಯಲ್ಲೇ ಎಂಬುದು ವಿಶೇಶ. ತಮ್ಮೊಟ್ಟಿಗೆ ಆಡಿದ ಪ್ರಸನ್ನ, ಚಂದ್ರಶೇಕರ್, ವಿಶ್ವನಾತ್, ಕಿರ‍್ಮಾನಿ ಹಾಗೂ ರೋಜರ್ ಬಿನ್ನಿರಿಗೆ ಜೀವಮಾನದ ಸಾದನೆ ಪ್ರಶಸ್ತಿ ನೀಡಿ ಗೌರವಿಸಿದರು. ಜೊತೆಗೆ ದಿಗ್ಗಜ ರಾಹುಲ್ ದ್ರಾವಿಡ್ ಟೆಸ್ಟ್ ಕ್ರಿಕೆಟ್ ನಲ್ಲಿ ಹತ್ತು ಸಾವಿರ ರನ್ ಗಳ ಸಾದನೆ ಮಾಡಿದಾಗ ಚಿನ್ನಸ್ವಾಮಿ ಅಂಗಳದಲ್ಲಿ ಹತ್ತು ಸಾವಿರ ಇಟ್ಟಿಗೆಗಳಿಂದ ಒಂದು ಗೋಡೆ ಕಟ್ಟಿಸಿ ದ್ರಾವಿಡ್ ರ ಗುಣಗಳಾದ ‘Commitment, Consistency, Class’ ಎಂದು ಅವರ ಬ್ಯಾಟಿಂಗ್ ಬಂಗಿಯೊಂದಿಗೆ ಅಚ್ಚು ಹಾಕಿಸಿ ಅವರ ಸಾದನೆಯನ್ನು ನೆನೆಯಲಾಯಿತು. ಬ್ರಿಜೇಶ್ ಅವರು ರಾಜ್ಯ ಕ್ರಿಕೆಟ್ ಸಂಸ್ತೆಯ ಅದಿಕಾರದ ಚುಕ್ಕಾಣಿ ಹಿಡಿದು ಆಡಳಿತಕ್ಕೆ ಹೊಸ ಆಯಾಮ ನೀಡಿದರು ಎಂದರೆ ತಪ್ಪಾಗಲಾರದು. 2007 ರಲ್ಲಿ ಅಂದಿನ ಬಿ.ಸಿ.ಸಿ.ಐ ನ ಅದ್ಯಕ್ಶ ಶರದ್ ಪವಾರ್ ರಾಜ್ಯ ಕ್ರಿಕೆಟ್ ನ ವ್ಯವಸ್ತೆಯನ್ನು ಹೊಗಳಿ, ಆಡಳಿತ ಹಾಗೂ ಕಾರ‍್ಯಾಚರಣೆ ಬಗ್ಗೆ ರೇಟಿಂಗ್ ಕೊಡುವ ಪದ್ದತಿ ನಮ್ಮಲ್ಲಿದ್ದಿದ್ದರೆ ಕರ‍್ನಾಟಕಕ್ಕೆ ಮೊದಲ ಸ್ತಾನ ಸಿಗುತ್ತಿತ್ತು ಎಂದದ್ದು ಬ್ರಿಜೇಶ್ ರ ಅಚ್ಚುಕಟ್ಟಾದ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ. ಬಳಿಕ 2002/03 ರಲ್ಲಿ ಕೆಲಕಾಲ ರಾಶ್ಟ್ರೀಯ ಆಯ್ಕೆ ಸಮಿತಿಯ ಅದ್ಯಕ್ಶರಾಗಿದ್ದ ಅವರು ಎರಡು ಬಾರಿ ಬೆಂಗಳೂರಿನಲ್ಲಿರುವ ರಾಶ್ಟ್ರೀಯ ಕ್ರಿಕೆಟ್ ಅಕ್ಯಾಡೆಮಿಯ ನಿರ‍್ದೇಶಕರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಹಲವಾರು ವಿದೇಶ ಪ್ರವಾಸಗಳಿಗೆ ಅವರು ಬಾರತ ತಂಡದ ಮ್ಯಾನೇಜರ್ ಕೂಡ ಆಗಿದ್ದುಂಟು. ಬ್ರಿಜೇಶ್ ಪಟೇಲ್ ಪ್ರಸ್ತುತ ವಿಶ್ವಮನ್ನಣೆ ಪಡೆದಿರುವ ಐ.ಪಿ.ಎಲ್ ನ ಅದ್ಯಕ್ಶರಾಗಿದ್ದಾರೆ. ಮುಂದೆ ಬಿ.ಸಿ.ಸಿ.ಐ ನ ಅದ್ಯಕ್ಶರಾಗುವವರ ಪೈಕಿ ಮುಂಚೂಣಿಯಲ್ಲಿದ್ದಾರೆ.
ಕ್ರಿಕೆಟ್ ಲೋಕದ ವಿಶೇಶ ಪ್ರತಿಬೆ ಬ್ರಿಜೇಶ್ ಪಟೇಲ್
ಬಾರತದಲ್ಲಿ ಕ್ರಿಕೆಟ್ ಆಟಗಾರನಾಗಿ ಆ ಬಳಿಕ ಆಡಳಿತಗಾರನಾಗಿಯೂ ಚಾಪು ಮೂಡಿಸಿರುವ ಏಕೈಕ ವ್ಯಕ್ತಿ ಬ್ರಿಜೇಶ್ ಪಟೇಲ್ ಅವರದ್ದು ವಿಶೇಶ ಸಾದನೆ ಎಂದೇ ಹೇಳಬೇಕು. ಹೀಗೆ ಕ್ರಿಕೆಟ್ ನ ಹಲವಾರು ಆಯಾಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಆಟದ ಏಳಿಗೆಗೆ ದುಡಿಯುತ್ತಿರುವ ಬ್ರಿಜೇಶ್ ರಿಗೆ ಕ್ರಿಕೆಟ್ ಜಗತ್ತಲ್ಲಿ ವಿಶಿಶ್ಟವಾದ ಮರ‍್ಯಾದೆ ಇದೆ. ಕರ‍್ನಾಟಕ ತಂಡದ ಪರ ದೇಸೀ ಕ್ರಿಕೆಟ್ ನಲ್ಲಿ ಅವರ ಸಾದನೆ ಅದ್ವಿತೀಯ. ತಂಡದ ನಾಯಕನಾಗಿ ಅವರು ಕರ‍್ನಾಟಕವನ್ನು ವರುಶಗಳ ಕಾಲ ಗೆಲ್ಲುವ ತುಡಿತದಿಂದ ಮುನ್ನಡೆಸಿದ ರೀತಿ ಇಂದಿನ ನಾಯಕ ಮನೀಶ್ ಪಾಂಡೆಯವರಿಗೂ ಮಾದರಿ. ರಾಜ್ಯ ತಂಡ ಆಡಲು ಕಣಕ್ಕಿಳಿದಾಗಲೆಲ್ಲಾ ನೇರುಲಿಗರು ಬ್ರಿಜೇಶ್ ರ ಹೆಸರನ್ನು ಪ್ರಸ್ತಾಪ ಮಾಡದೆ ಇರರು ಎಂದರೆ ಅವರ ಪ್ರಬಾವ ಎಂತದ್ದು ಎಂದು ಯಾರಾದರೂ ಊಹಿಸಬಹುದು. ಈ ದಿಗ್ಗಜ ಬ್ಯಾಟ್ಸ್ಮನ್ನರ ಕೊಡುಗೆಯನ್ನು ಎಂದೂ ಮರೆಯದಿರೋಣ.
(ಚಿತ್ರ ಸೆಲೆ: flickr.com, deccanherald.com)
Brijrsh Parashuram Patel is one of the rarest of rare cricket product. It is really amusing that, somehow he could not able reach the heights and quality though he was having all the Acumenship.
Karnataka has to really adore him for his immense service to cricket.