ಟೋಕಿಯೋ ಒಲಿಂಪಿಕ್ಸ್ 2021 – ಒಂದು ಕಿರುನೋಟ
ಕಳೆದ ವರುಶ 2020 ರಲ್ಲಿ ನಡೆಯಬೇಕಿದ್ದ ಟೋಕಿಯೋ ಒಲಿಂಪಿಕ್ಸ್ ಕೋವಿಡ್ ನಿಂದಾಗಿ 2021 ಕ್ಕೆ ಮುಂದೂಡಲ್ಪಟ್ಟಿತ್ತು. ಈಗ ಪರಿಸ್ತಿತಿ ಕೊಂಚ ಮಟ್ಟಿಗೆ ಸುದಾರಿಸಿರುವುದರಿಂದ ಇದೇ ಜುಲೈ 23 ರಿಂದ ಆಗಸ್ಟ್ 8 ರವರೆಗೂ ನಡೆಯಲಿರುವ ಒಲಿಂಪಿಕ್ಸ್ ಗೆ ಟೋಕಿಯೋ ಅಣಿಯಾಗಿದೆ. 1996 ರ ಅಟ್ಲಾಂಟಾ ಒಲಿಂಪಿಕ್ಸ್ ನಲ್ಲಿ ಟೆನ್ನಿಸ್‌ನಲ್ಲಿ ಲಿಯಾಂಡರ್ ಪೇಸ್ ಕಂಚಿನ ಪದಕ ಗೆದ್ದ ಬಳಿಕ ಪ್ರತೀ ಒಲಿಂಪಿಕ್ಸ್ ನಲ್ಲೂ ಬಾರತ ಕನಿಶ್ಟ ಒಂದು ಪದಕವನ್ನಾದರೂ ಗೆಲ್ಲದೇ ಹಿಂದಿರುಗಿಲ್ಲ. 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಶೂಟಿಂಗ್ ನಲ್ಲಿ ಅಬಿನವ್ ಬಿಂದ್ರಾ ಗೆದ್ದ ಬಂಗಾರದ ಪದಕ ಒಂಟಿ ಪೋಟಿಯಲ್ಲಿ ಬಾರತದ ಮೊದಲ ಬಂಗಾರದ ಪದಕ ಎಂಬ ಹೆಗ್ಗಳಿಕೆ ಪಡೆಯಿತು. 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಒಟ್ಟು 6 ಪದಕ ಗಳಿಸಿರುವುದೇ ಇಲ್ಲಿಯ ತನಕ ಬಾರತದ ಶ್ರೇಶ್ಟ ಸಾದನೆ. ಹಾಗೂ ಒಲಿಂಪಿಕ್ಸ್ ಇತಿಹಾಸದಲ್ಲಿ ಪೀಲ್ಡ್ ಹಾಕಿಯಲ್ಲಿ ಅತಿ ಹೆಚ್ಚು ಬಂಗಾರದ ಪದಕ (8) ಪಡೆದ ಹಿರಿಮೆ ಕೂಡ ಈಗಲೂ ಬಾರತದ ಹೆಸರಿನಲ್ಲೇ ಇದೆ. ಆದರೆ, ನಂತರ 2008 ರ ಬೀಜಿಂಗ್ ಒಲಿಂಪಿಕ್ಸ್ ಗೆ ಮೊದಲ ಬಾರಿ ಅರ‍್ಹತೆ ಪಡೆಯಲಾಗದೆ ಹಾಕಿ ತಂಡ ತೀವ್ರ ಮುಜುಗರಕ್ಕೊಳಗಾಗಿತ್ತು. 1980 ರ ಮಾಸ್ಕೊ ಒಲಿಂಪಿಕ್ಸ್ ನಲ್ಲಿ ಬಂಗಾರದ ಪದಕ ಗೆದ್ದಾದ ಬಳಿಕ ಹಾಕಿ ತಂಡ ಒಂದೂ ಪದಕ ಗೆಲ್ಲದೇ ಇರುವುದು ಹಾಕಿಯಲ್ಲಿ ಬಾರತ ಕುಸಿದಿರುವುದಕ್ಕೆ ಹಿಡಿದ ಕನ್ನಡಿ. ಇತ್ತೀಚೆಗೆ ಹಾಕಿ ತಂಡ ಕಳೆಗುಂದಿದ್ದರೂ ಕಡೆಗಣಿಸುವಂತಿಲ್ಲ. ಪ್ರತಿಬಾವಂತ ಆಟಗಾರನ್ನೊಳಗೊಂಡ ಮನ್‌ಪ್ರೀತ್ ಸಿಂಗ್ ಮುಂದಾಳ್ತನದ ಹಾಕಿ ತಂಡದ ಮೇಲೆ ಕೊಂಚ ಬರವಸೆ ಈಗಲೂ ಇದೆ. ಒಲಿಂಪಿಕ್ಸ್ ನಲ್ಲಿ ಹೇಳಿಕೊಳ್ಳುವಂತಹ ಸಾದನೆ ಮಾಡದಿದ್ದರೂ ರಾಣಿ ರಾಂಪಾಲ್ ನಾಯಕತ್ವದ ಹೆಂಗಸರ ಹಾಕಿ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಗಂಡಸರ ಮತ್ತು ಹೆಂಗಸರ ಎರಡು ಹಾಕಿ ತಂಡಗಳೊಟ್ಟಿಗೆ ಬಾರತದ ಒಟ್ಟು 126 ಆಟಗಾರರು 18 ಬಗೆಯ ವಿವಿದ ಪೋಟಿಗಳಲ್ಲಿ ಸೆಣಸಲು ಈಗಾಗಲೇ ಜಪಾನ್ ನ ರಾಜದಾನಿ ಟೋಕಿಯೋ ತಲುಪಿದ್ದಾರೆ. ಇವರುಗಳ ಪೈಕಿ ಕರ‍್ನಾಟಕದ 4 ಆಟಗಾರರಿರುವುದು ಕನ್ನಡಿಗರಿಗೂ ಹೆಮ್ಮೆಯ ಸಂಗತಿ. 1900 ರಲ್ಲಿ ಮೊದಲ ಬಾರಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಪದಕಗಳ ಕಾತೆ ತೆರೆದ ಬಾರತ ಇದುವರೆಗೂ ಒಟ್ಟು 28 ಪದಕಗಳನ್ನು ಗಳಿಸಿದೆ. ಪ್ರತೀ ಬಾರಿಯಂತೆ ಈ ಬಾರಿಯೂ ಪದಕಗಳ ನಿರೀಕ್ಶೆ ಇದ್ದೇ ಇದೆ.
ಪೋಟಿಗಳು ಮತ್ತು ಆಟಗಾರರು
- ಆರ‍್ಚರಿ (ಬಿಲ್ಲುಗಾರಿಕೆ): ತರುಣ್‌ದೀಪ್ ರಾಯ್, ಅತನು ದಾಸ್, ಪ್ರವೀಣ್ ಜಾದವ್ ಮತ್ತು ದೀಪಿಕಾ ಕುಮಾರಿ.
ಪ್ಯಾರಿಸ್ ವರ‍್ಲ್ಡ್ ಕಪ್ ನಲ್ಲಿ ಇತ್ತೀಚಿಗೆ 3 ಬಂಗಾರದ ಪದಕ ಗೆದ್ದು ಪ್ರಸ್ತುತ ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ‍್ತಿಯಾಗಿರುವ ದೀಪಿಕಾರಿಂದ ಬಾರತ ಒಲಿಂಪಿಕ್ಸ್ ನಲ್ಲೂ ಕಂಡಿತ ಪದಕ ಎದುರು ನೋಡುತ್ತಿದೆ.
ಅತ್ಲೆಟಿಕ್ಸ್
ಗಂಡಸರು
- ಜಾವೆಲಿನ್ ಎಸೆತ: ನೀರಜ್ ಚೋಪ್ರಾ, ಶಿವಪಾಲ್ ಸಿಂಗ್
- 20 ಕಿ.ಮೀ ನಡಿಗೆ: ಕೆ.ಟಿ ಇರ‍್ಪಾನ್ ತೋಡಿ, ಸಂದೀಪ್ ಕುಮಾರ್, ರಾಹುಲ್ ರೋಹಿಲ್ಲ
- 50 ಕಿ.ಮೀ ನಡಿಗೆ: ಗುರುಪ್ರೀತ್ ಸಿಂಗ್
- 3000 ಮೀ ಸ್ಟೀಪಲ್ ಚೇಸ್: ಅವಿನಾಶ್ ಸಾಬ್ಲೆ
- ಲಾಂಗ್ ಜಂಪ್: ಎಮ್.ಶ್ರೀಶಂಕರ್
- ಶಾಟ್ ಪುಟ್: ತಜಿಂದರ್ ಪಾಲ್ ಸಿಂಗ್ ತೂರ್
- 400 ಮೀ ಹರ‍್ಡಲ್ಸ್: ಎಮ್.ಪಿ ಜಬೀರ್
- 4*400 ಮೀ ರಿಲೇ ತಂಡ: ಅಮೋಲ್ ಜೇಕಬ್, ರಾಜೀವ್ ಅರೋಕಿಯಾ, ಮೊಹಮ್ಮದ್ ಅನಾಸ್, ನಾಗನಾತನ್ಪಾಂಡಿ, ನೋಹ್ ನಿರ‍್ಮಲ್ ಟಾಮ್
ಹೆಂಗಸರು
- 20 ಕಿ.ಮೀ ನಡಿಗೆ: ಬಾವನಾ ಜಟ್, ಪ್ರಿಯಾಂಕಾ ಗೋಸ್ವಾಮಿ
- ಡಿಸ್ಕಸ್ ಎಸೆತ: ಕಮಲ್‌ಪ್ರೀತ್ ಕೌರ್, ಸೀಮಾ ಪೂನಿಯಾ
- 100 ಮತ್ತು 200 ಮೀ ಓಟ: ದುತೀ ಚಾಂದ್
- ಜಾವೆಲಿನ್ ಎಸೆತ: ಅನ್ನೂ ರಾಣಿ
- 4*400 ಮೀ ಮಿಶ್ರಿತ ರಿಲೇ ತಂಡ: ರೇವತಿ ವೀರಮಣಿ, ಅಲೆಕ್ಸ್ ಆಂತೋನಿ, ಶುಬಾ ವೆಂಕಟೇಶನ್, ದನಲಕ್ಶ್ಮಿ ಶೇಕರ್.
1900 ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ನಾರ‍್ಮನ್ ಪ್ರಿತ್ಚಾರ‍್ಡ್ ಎರಡು ಎರಡು ಬೆಳ್ಳಿ ಪದಕ ಗೆದ್ದ ಬಳಿಕ ಅತ್ಲೆಟಿಕ್ಸ್ ನಲ್ಲಿ ಬಾರತಕ್ಕೆ ಒಂದು ಶತಮಾನ ಕಳೆದರೂ ಒಂದೂ ಪದಕ ಬರದಿದ್ದರೂ ದುತೀ ಚಾಂದ್ ರ ಬೆಳವಣಿಗೆ ಈ ಸಾರಿ ಪದಕದ ಆಸೆ ಮೂಡಿಸಿದೆ.
ಬ್ಯಾಡ್ಮಿಂಟನ್
- ಹೆಂಗಸರ ಸಿಂಗಲ್ಸ್ ಪೋಟಿ: ಪಿ.ವಿ ಸಿಂದು
- ಗಂಡಸರ ಸಿಂಗಲ್ಸ್ ಪೋಟಿ: ಬಿ. ಸಾಯಿ ಪ್ರಣೀತ್
- ಗಂಡಸರ ಡಬಲ್ಸ್ ಪೋಟಿ: ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ.
ದಿಗ್ಗಜ ಪುಲ್ಲೇಲ ಗೋಪಿಚಂದ್ ರ ಗರಡಿಯಲ್ಲಿ ಪಳಗಿರುವ, 2016 ರ ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಪಿ.ವಿ ಸಿಂದೂರಿಂದ ಈ ಬಾರಿಯೂ ಬಾರತ ಪದಕವನ್ನು ಎದುರು ನೋಡುತ್ತಿದೆ. ಸಾಯಿ ಪ್ರಣೀತ್ ಕೂಡ ತಮ್ಮ ಆಟದ ಉತ್ತುಂಗ ತಲುಪಿ ಬರವಸೆ ನೀಡಿದ್ದಾರೆ. ಹಾಗೆ ಸೈನಾ ನೆಹ್ವಾಲ್ ಮತ್ತು ಕಿದಂಬಿ ಶ್ರೀಕಾಂತ್ ಅರ‍್ಹತೆ ಪಡೆಯದೇ ಇದ್ದುದು ಅಬಿಮಾನಿಗಳಿಗೆ ತೀವ್ರ ನಿರಾಸೆ ಉಂಟುಮಾಡಿದೆ.
ಬಾಕ್ಸಿಂಗ್
ಗಂಡಸರು:
- ಸತೀಶ್ ಕುಮಾರ್: 91+ ಕೆ.ಜಿ
- ಆಶಿಶ್ ಕುಮಾರ್: 75 ಕೆ.ಜಿ
- ವಿಕಾಸ್ ಕ್ರಿಶ್ಣನ್: 69 ಕೆ.ಜಿ
- ಮನೀಶ್ ಕೌಶಿಕ್: 63 ಕೆ.ಜಿ
- ಅಮಿತ್ ಪಂಗಲ್: 52 ಕೆ.ಜಿ
ಹೆಂಗಸರು
- ಪೂಜಾ ರಾಣಿ: 75 ಕೆ.ಜಿ
- ಲವ್ಲೀನಾ ಬೋರ‍್ಗೋಹೈನ್ : 69 ಕೆ.ಜಿ
- ಸಿಮ್ರನ್ಜೀತ್ ಕೌರ್ : 60 ಕೆ.ಜಿ
- ಮೇರಿ ಕೋಮ್ : 51 ಕೆ.ಜಿ
2008 ರಲ್ಲಿ ವಿಜೇಂದರ್ ಸಿಂಗ್ ಮತ್ತು 2012 ರಲ್ಲಿ ಮೇರಿ ಕೋಮ್ ಬಳಿಕ ಬಾರತಕ್ಕೆ ಬಾಕ್ಸಿಂಗ್ ನಲ್ಲಿ ಪದಕ ಕೈಗೆಟುಕಿಲ್ಲ. 2021 ರ ಏಶಿಯನ್ ಪಂದ್ಯಾವಳಿಯಲ್ಲಿ ಬಂಗಾರದ ಪದಕ ಗೆದ್ದ ಪೂಜಾ ರಾಣಿ ಮೇಲೆ ಬರವಸೆ ಇದೆ, ಮತ್ತು ಈ ಬಾರಿಯೂ ಹುಟ್ಟು ಹೋರಾಟಗಾರ‍್ತಿ ಎಂದೇ ಹೆಸರುವಾಸಿಯಾಗಿರುವ ಗಟ್ಟಿಗಿತ್ತಿ ಮೇರಿ ಕೋಮ್ ಅರ‍್ಹತೆ ಪಡೆದು ಸೆಣೆಸುತ್ತಿರುವುದು ನಿರೀಕ್ಶೆ ಹುಟ್ಟಿಸಿದೆ.
ಈಕ್ವೆಸ್ಟ್ರಿಯನ್ (ಕುದುರೆ ಸವಾರಿ)
- ಪೌಆದ್ ಮಿರ‍್ಜಾ: ಒಂಟಿ ಪೋಟಿ.
ಕರ‍್ನಾಟಕದ ಪೌಆದ್ ಮಿರ‍್ಜಾ ಪೋಟಿಗೆ ಅರ‍್ಹತೆ ಪಡೆದದ್ದು ದೊಡ್ಡ ಸಾದನೆ ಎಂದೇ ಪರಿಗಣಿಸಲಾಗಿದೆ.
ಪೆನ್ಸಿಂಗ್
ಪೆನ್ಸಿಂಗ್ ನಲ್ಲಿ ಯಾವುದೇ ಇತಿಹಾಸವಿಲ್ಲದ ಬಾರತದಿಂದ ಬವಾನಿ ದೇವಿ ಅರ‍್ಹತೆ ಪಡೆದು ಹೊಸ ಚರಿತ್ರೆ ಬರೆದಿದ್ದಾರೆ. ಏಶಿಯನ್ ಪಂದ್ಯಾವಳಿಗಳಲ್ಲಿ ಸತತವಾಗಿ ಪದಕ ಗೆದ್ದಿರುವ ಬವಾನಿ ಸಾಗಿರುವ ಹಾದಿ ನಿಜಕ್ಕೂ ಮೆಚ್ಚುವಂತದ್ದು.
ಗಾಲ್ಪ್
ಕರ‍್ನಾಟಕದ ಅದಿತಿ ಅಶೋಕ್ ಮತ್ತು ಅನಿರ‍್ಬನ್ ಲಹಿರಿ ಅವರೊಟ್ಟಿಗೆ ಉದಯನ್ ಮಾನೆ ಕೂಡ ಅರ‍್ಹತೆ ಪಡೆದು ಗಾಲ್ಪ್ ಪೋಟಿಯಲ್ಲೂ ಬಾರತ ಪಾಲ್ಗೊಳ್ಳುವಂತೆ ಮಾಡಿದ್ದಾರೆ. 2016 ರ ಬೀಜಿಂಗ್ ಒಲಿಂಪಿಕ್ಸ್ ನಲ್ಲೂ ಪಾಲ್ಗೊಂಡಿದ್ದ ಅದಿತಿ ಅಶೋಕ್ ಈಗ ಹೆಚ್ಚು ಅನುಬವ ಪಡೆದು ಪಕ್ವವಾಗಿರುವುದರಿಂದ ಪದಕದ ನಿರೀಕ್ಶೆ ಇಟ್ಟುಕೊಳ್ಳಬಹುದೆಂಬುದು ವಿಮರ‍್ಶಕರ ಅಂಬೋಣ.
ಜಿಮ್ನಾಸ್ಟಿಕ್ಸ್
- ಹೆಂಗಸರ ಆರ‍್ಟ್ಸಿಟಿಕ್: ಪ್ರಣತಿ ನಾಯಕ್
2016 ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಕೂದಲೆಳೆಯಿಂದ ಪದಕ ತಪ್ಪಿಸಿಕೊಂಡ ದೀಪಾ ಕರ‍್ಮಾಕರ್ ಈ ಬಾರಿಯ ಒಲಿಂಪಿಕ್ಸ್ ಗೆ ಅರ‍್ಹತೆ ಪಡೆಯದಿದ್ದುದು ದಿಗ್ಬ್ರಮೆ ಉಂಟುಮಾಡಿದೆ. ಆದರೂ ಪ್ರಣತಿರ ಪಾಲ್ಗೊಳ್ಳುವಿಕೆ ಸಮಾದಾನ ತಂದಿದೆ.
ಜೂಡೋ
- 48 ಕೆ.ಜಿ ಪೋಟಿ: ಸುಶೀಲಾ ದೇವಿ
ಜೂಡೋ ಆಟದಲ್ಲೂ ಬಾರತ ಅರ‍್ಹತೆ ಪಡೆದಿರುವುದು ಒಳ್ಳೆ ಬೆಳವಣಿಗೆ ಎಂದೇ ಹೇಳಬೇಕು. 2014 ರ ಗ್ಲಾಸ್ಗೋ ಬೆಳ್ಳಿಪದಕ ಮುಡಿಗೇರಿಸಿಕೊಂಡಿದ್ದ ಸುಶೀಲಾ ಬರವಸೆ ಮೂಡಿಸಿದ್ದಾರೆ.
ರೋಯಿಂಗ್
- ಗಂಡಸರ ಲೈಟ್‌ವೇಟ್ ಡಬಲ್ ಸ್ಕಲ್ಸ್ ಪೋಟಿ: ಅರ‍್ಜುನ್ ಲಾಲ್ ಮತ್ತು ಅರವಿಂದ್ ಸಿಂಗ್
ರೋಯಿಂಗ್ ಕಲಿಕೆ ಮತ್ತು ಅಬ್ಯಾಸಕ್ಕೆ ಬೇಕಾದ ಯಾವೊಂದು ಏರ‍್ಪಾಡು ಬಾರತದಲ್ಲಿ ಇಲ್ಲದಿದ್ದರೂ ಅರ‍್ಜುನ್ ಮತ್ತು ಅರವಿಂದ್ ಅರ‍್ಹತೆ ಪಡೆದಿರುವುದು ಮೆಚ್ಚುವಂತಹ ವಿಶಯ.
ಸೇಲಿಂಗ್
- ಗಂಡಸರ ಲೇಸರ್ ಸ್ಟಾಂಡರ‍್ಡ್: ವಿಶ್ಣು ಸರವಣನ್
- ಹೆಂಗಸರ ಲೇಸರ್ ರೇಡಿಯಲ್: ನೇತ್ರಾ ಕುಮಾನನ್
- ಗಂಡಸರ ಸ್ಕಿಪ್ 49er: ವರುಣ್ ಟಕ್ಕರ್ ಮತ್ತು ಕೆ.ಸಿ ಗಣಪತಿ
2008 ರ ಬಳಿಕ ಸೇಲಿಂಗ್ ನಲ್ಲಿ ಬಾರತ ಮೊದಲ ಬಾರಿಗೆ ಅರ‍್ಹತೆ ಪಡೆದಿರುವುದು ವಿಶೇಶ.
ಶೂಟಿಂಗ್
ಹೆಂಗಸರು
- 50 ಮೀ ರೈಪೆಲ್ 3 ಪೊಸಿಶನ್ : ತೇಜಸ್ವಿನಿ ಸಾವಂತ್ ಮತ್ತು ಅಂಜುಮ್ ಮೌದ್ಗಿಲ್
- 10 ಮೀ ಏರ್ ರೈಪೆಲ್: ಅಪೂರ‍್ವಿ ಚಂಡೇಲಾ ಮತ್ತು ಎಳವೆನಿಲ್ ವಳರಿವನ್
- 10 ಮೀ ಏರ್ ಪಿಸ್ಟಲ್: ಮನು ಬಾಕೆರ್ ಮತ್ತು ಯಶಸ್ವಿನಿ ಸಿಂಗ್ ದೆಸ್ವಾಲ್
- 25 ಮೀ ಪಿಸ್ಟಲ್: ರಾಹಿ ಸರ‍್ನೊಬಾತ್ ಮತ್ತು ಮನು ಬಾಕೆರ್
ಗಂಡಸರು
- 10 ಮೀ ಏರ್ ರೈಪೆಲ್ : ದೀಪಕ್ ಕುಮಾರ್ ಮತ್ತು ದಿವ್ಯಾನ್ಶ್ ಪನ್ವಾರ್
- 50 ಮೀ ರೈಪೆಲ್ 3 ಪೊಸಿಶನ್ : ಸಂಜೀವ್ ರಾಜ್‌ಪುತ್ ಮತ್ತು ಐಶ್ವರ‍್ಯ್ ಪ್ರತಾಪ್ ಸಿಂಗ್ ತೋಮರ್
- 10 ಮೀ ಏರ್ ಪಿಸ್ಟಲ್ : ಅಬಿಶೇಕ್ ವರ‍್ಮಾ ಮತ್ತು ಸೌರಬ್ ಚೌದರಿ
- ಸ್ಕೀಟ್: ಮೈರಾಜ್ ಅಹಮದ್ ಕಾನ್
- ಮಿಶ್ರಿತ 10 ಮೀ ಏರ್ ರೈಪೆಲ್ : ದಿವ್ಯಾನ್ಶ್ ಪನ್ವಾರ್ ಮತ್ತು ಎಳವೆನಿಲ್ ವಳರಿವನ್; ದೀಪಕ್ ಕುಮಾರ್ ಮತ್ತು ಅಂಜುಮ್ ಮೌದ್ಗಿಲ್
- ಮಿಶ್ರಿತ 10 ಮೀ ಏರ್ ಪಿಸ್ಟಲ್ : ಸೌರಬ್ ಚೌದರಿ ಮತ್ತು ಮನು ಬಾಕೆರ್; ಅಬಿಶೇಕ್ ವರ‍್ಮಾ ಯಶಸ್ವಿನಿ ಸಿಂಗ್‌ದೆಸ್ವಾಲ್
2004ರ ಲಂಡನ್ ಒಲಿಂಪಿಕ್ಸ್ ನಲ್ಲಿ ರಾಜವರ‍್ದನ್ ಸಿಂಗ್ ರಾತೋಡ್ ರ ಬೆಳ್ಳಿ ಪದಕದಿಂದ ಮೊದಲ್ಗೊಂಡ ಬಾರತೀಯರ ಶೂಟಿಂಗ್ ಪದಕಗಳ ಬೇಟೆ ಆ ಬಳಿಕ ಅಬಿನವ್ ಬಿಂದ್ರಾ, ವಿಜಯ್ ಕುಮಾರ್ ಮತ್ತು ಗಗನ್ ನಾರಂಗ್‌ರ ವರೆಗೂ ಮುಂದುವರೆಯಿತು. ಈ ಪೋಟಿಯಲ್ಲಿ ಬಾರತ ಒಟ್ಟು 4 ಪದಕ ಪಡೆದಿದೆ. ಬಾರತ ಹೆಚ್ಚು ಪಳಗಿರುವ ಒಲಿಂಪಿಕ್ಸ್ ಪೋಟಿಯಾಗಿರುವ ಶೂಟಿಂಗ್ ನಲ್ಲಿ ಈ ಬಾರಿಯೂ ಪದಕ ಗೆದ್ದರೆ ಅಚ್ಚರಿ ಇಲ್ಲ.
ಸ್ವಿಮ್ಮಿಂಗ್ (ಈಜು)
ಗಂಡಸರು
- 200 ಮೀ ಬಟರ್‌ಪ್ಲೈ ಸಜನ್ ಪ್ರಕಾಶ್
- 100 ಮೀ ಬ್ಯಾಕ್‌ಸ್ಟ್ರೋಕ್ : ಶ್ರೀಹರಿ ನಟರಾಜ್
ಹೆಂಗಸರು
- 100 ಮೀ ಬ್ಯಾಕ್‌ಸ್ಟ್ರೋಕ್: ಮಾನಾ ಪಟೇಲ್
ಒಲಿಂಪಿಕ್ಸ್ ಈಜು ಪೋಟಿಯಲ್ಲಿ ಬಾರತ ಐತಿಹಾಸಿಕವಾಗಿ ಹೇಳಿಕೊಳ್ಳುವಂತಹ ಸಾದನೆಯನ್ನು ಮಾಡದಿದ್ದರೂ ಇತ್ತೀಚಿನ ಬೆಳವಣಿಗೆ ನಂಬಿಕೆ ಮೂಡಿಸಿದೆ. ಕರ‍್ನಾಟಕದ ಶ್ರೀಹರಿ ನಟರಾಜ್ ಈ ಪೋಟಿಯಲ್ಲಿರುವುದು ವಿಶೇಶ.
ಟೇಬಲ್ ಟೆನ್ನಿಸ್
- ಗಂಡಸರ ಸಿಂಗಲ್ಸ್ ಪೋಟಿ: ಸತಿಯನ್ ಗ್ನಾನಸೇಕರನ್ ಮತ್ತು ಅಚಂತಾ ಶರತ್ ಕಮಲ್
- ಹೆಂಗಸರ ಸಿಂಗಲ್ಸ್ ಪೋಟಿ: ಮನಿಕಾ ಬಾತ್ರಾ ಮತ್ತು ಸುತೀರ‍್ತ ಮುಕರ‍್ಜೀ
- ಮಿಶ್ರ ಡಬಲ್ಸ್ ಪೋಟಿ: ಅಚಂತಾ ಶರತ್ ಕಮಲ್ ಮತ್ತು ಮನಿಕಾ ಬಾತ್ರಾ
ತುಂಬಾ ಕ್ಲಿಶ್ಟಕರ ಎಂದು ಪರಿಗಣಿಸಲ್ಪಡುವ ಟೇಬಲ್ ಟೆನ್ನಿಸ್ ಪೋಟಿಯಲ್ಲಿ ಬಾರತ ಅರ‍್ಹತೆ ಪಡೆದು ಮುನ್ನುಗ್ಗಿರುವುದು ಮುಂದಿನ ದಿನಗಳಿಗೆ ಒಳ್ಳೆ ಸೂಚನೆ.
ಟೆನ್ನಿಸ್
- ಹೆಂಗಸರ ಡಬಲ್ಸ್ ಪೋಟಿ: ಸಾನಿಯಾ ಮಿರ‍್ಜಾ ಮತ್ತು ಅಂಕಿತಾ ರೈನಾ.
1996 ರ ಲಿಯಾಂಡರ್ ಪೇಸ್ ರ ಕಂಚಿನ ಪದಕದ ಬಳಿಕ ಬಾರತಕ್ಕೆ ಟೆನ್ನಿಸ್ ನಲ್ಲಿ ಒಂದೂ ಪದಕ ಬರದೇ ಇರುವುದು ಬೇಸರದ ಸಂಗತಿ. ಈ ನಡುವೆ ಹಲವಾರು ಗ್ರಾಂಡ್‌ಸ್ಲಾಮ್ ಗಳನ್ನು ಗೆದ್ದಿರುವ ಆಟಗಾರರು ನಮ್ಮಲ್ಲಿದ್ದರೂ ಒಲಿಂಪಿಕ್ಸ್ ಪದಕದ ಕೊರತೆ ಇನ್ನೂ ಮುಂದುವರೆದಿದೆ.
ವೇಟ್ ಲಿಪ್ಟಿಂಗ್
ಹೆಂಗಸರ 48 ಕೆ.ಜಿ. ವಿಬಾಗದಲ್ಲಿ ಸೈಕೋಮ್ ಮೀರಾಬಾಯಿ ಚಾನೂ ಕಣಕ್ಕಿಳಿಯಲಿದ್ದಾರೆ. 2017 ರಲ್ಲಿ ಅಮೆರಿಕಾದಲ್ಲಿನಡೆದ ವರ‍್ಲ್ಡ್ ವೇಟ್ ಲಿಪ್ಟಿಂಗ್ ಪಂದ್ಯಾವಳಿಯಲ್ಲಿ ಬಂಗಾರದ ಪದಕ ಗೆದ್ದ ಮೀರಾಬಾಯಿ ಕಳೆದ ಕೆಲವು ವರುಶಗಳಲ್ಲಿ ಅನುಬವದಿಂದ ಸಾಕಶ್ಟು ಪಕ್ವಗೊಂಡಿದ್ದಾರೆ. ಹಾಗಾಗಿ ಸಹಜವಾಗಿಯೇ ಅವರಿಂದ ಪದಕದ ನಿರೀಕ್ಶೆಇದ್ದೇ ಇದೆ. 2000ದ ಸಿಡ್ನಿ ಒಲಿಂಪಿಕ್ಸ್ ನಲ್ಲಿ ಕರ‍್ಣಮ್ ಮಲ್ಲೇಶ್ವರಿರವರ ಕಂಚಿನ ಪದಕದ ಬಳಿಕ ವೇಟ್ ಲಿಪ್ಟಿಂಗ್ ನಲ್ಲಿ ಪದಕದ ಬರ ಎದುರಿಸುತ್ತಿರುವ ಬಾರತದ ಆಸೆ ಮೀರಾಬಾಯಿರಿಂದ ಕೈಗೂಡಿದರೆ ಅಚ್ಚರಿಯಿಲ್ಲ.
ರೆಸ್ಲಿಂಗ್ (ಕುಸ್ತಿ)
ಗಂಡಸರು
- 57 ಕೆ.ಜಿ ಪ್ರೀಸ್ಟೈಲ್: ರವಿ ದಹಿಯಾ
- 65 ಕೆ.ಜಿ ಪ್ರೀಸ್ಟೈಲ್: ಬಜರಂಗ್ ಪೂನಿಯಾ
- 86 ಕೆ.ಜಿ ಪ್ರೀಸ್ಟೈಲ್: ದೀಪಕ್ ಪೂನಿಯಾ
ಹೆಂಗಸರು
- 50 ಕೆ.ಜಿ ಪ್ರೀಸ್ಟೈಲ್: ಸೀಮಾ ಬಿಸ್ಲಾ
- 53 ಕೆ.ಜಿ ಪ್ರೀಸ್ಟೈಲ್: ವಿನೇಶ್ ಪೋಗಾಟ್
- 57 ಕೆ.ಜಿ ಪ್ರೀಸ್ಟೈಲ್: ಅನ್ಶೂ ಮಲಿಕ್
- 62 ಕೆ.ಜಿ ಪ್ರೀಸ್ಟೈಲ್: ಸೋನಮ್ ಮಲಿಕ್
2016 ರ ರಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದ ಸಾಕ್ಶಿ ಮಲಿಕ್ ಈ ಬಾರಿ ಅರ‍್ಹತೆ ಪಡೆಯದಿದ್ದರೂ ಕುಸ್ತಿ ಪೋಟಿಯಲ್ಲಿ ಪದಕ ಗೆಲ್ಲುವ ಅಳವುಳ್ಳ ಕೆಲವು ಆಟಗಾರರಿರುವುದು ಬಾರತಕ್ಕೆ ಸಮಾದಾನ ತಂದಿದೆ. 1952 ರ ಹೆಲ್ಸಿಂಕಿ ಒಲಿಂಪಿಕ್ಸ್ ನಲ್ಲಿ ಕೆ.ಡಿ ಜಾದವ್ ರ ಕಂಚಿನ ಪದಕದಿಂದ ಮೊದಲ್ಗೊಂಡ ಪಯಣ ಬಳಿಕ ಸುಶೀಲ್ ಕುಮಾರ್ ರ ಒಂದು ಕಂಚು ಮತ್ತು ಒಂದು ಬೆಳ್ಳಿ ಪದಕ ಆನಂತರ ಯೋಗೇಶ್ವರ್ ದತ್ ಹಾಗೂ ಸಾಕ್ಶಿ ಮಲಿಕ್ ರ ಕಂಚಿನ ಪದಕಗಳಿಂದ ಇಲ್ಲಿವರೆಗೂ ಬಾರತ ಅತಿಹೆಚ್ಚು (5) ಪದಕಗಳನ್ನು ತೆಕ್ಕೆಗೆ ಹಾಕಿಕೊಂಡು ಕುಸ್ತಿಯಲ್ಲಿ ಪ್ರಾಬಲ್ಯ ಮೆರೆದಿದೆ. ಈ ಬಾರಿಯೂ ಪದಕಗಳನ್ನು ಹೆಚ್ಚು ಎದುರು ನೋಡುತ್ತಿರುವುದು ಕುಸ್ತಿಯಲ್ಲೇ.
ನೂರು ಕೋಟಿಗೂ ಹೆಚ್ಚು ಮಂದಿ ಎಣಿಕೆ ಇರುವ ಬಾರತ ಒಲಿಂಪಿಕ್ಸ್ ನ ಪದಕ ಪಟ್ಟಿಯಲ್ಲಿ ಸದಾ ಕೆಳಗಿರುವುದನ್ನು ನೋಡಿ ಬೇಸತ್ತಿದ್ದ ಮಂದಿಗೆ ಇತ್ತೀಚಿನ ಬೆಳವಣಿಗೆಗಳು ಬರವಸೆ ಮೂಡಿಸಿದೆ. ಸರಕಾರಿ ಸಂಸ್ತೆಗಳೊಂದಿಗೆ ಕಾರ‍್ಪೊರೇಟ್ ಸಂಸ್ತೆಗಳೂ ಆಟಗಾರರ ಪ್ರಾಯೋಜಕತ್ವವನ್ನು ವಹಿಸಿ ಅವರ ಕರ‍್ಚು ವೆಚ್ಚಗಳಿಗೆ ನೆರವಾಗುತ್ತಿರುವುದರಿಂದ ಬಾರತ ಕ್ರಮೇಣ ಏಶಿಯನ್ ಕ್ರೀಡಾಕೂಟ ಮತ್ತು ಕಾಮನ್ ವೆಲ್ತ್ ಪೋಟಿಗಳಲ್ಲಿ ಸಾಕಶ್ಟು ಪದಕಗಳನ್ನು ಸತತವಾಗಿ ತೆಕ್ಕೆಗೆ ಹಾಕಿಕೊಳ್ಳುತ್ತಿದೆ. ಈ ಪದಕಗಳ ಬೇಟೆ ಒಲಿಂಪಿಕ್ಸ್ ನಲ್ಲೂ ಮುಂದುವರೆಯಲಿ ಎಂಬುದೇ ನಮ್ಮೆಲ್ಲರ ಹೆಬ್ಬಯಕೆ. ನಾಲ್ಕು ವರುಶಗಳಲ್ಲಿ ಒಮ್ಮೆ ನಡೆಯುವ ಒಲಿಂಪಿಕ್ಸ್ ಗಾಗಿ ಅಣಿಯಾಗಲು ಮನೆ ಕುಟುಂಬ ತೊರೆದು ಹಗಲಿರುಳು ಬೆವರು ಹರಿಸುವ ಈ ಒಲಿಂಪಿಕ್ಸ್ ಪಟುಗಳ ಶ್ರಮ ಮೆಚ್ಚುವಂತದ್ದು. ಅವರ ಬೆನ್ನಿಗೆ ನಿಂತು ಹುರಿದುಂಬಿಸೋಣ. ಇದೇ ಜುಲೈ 23 ರಂದು ಮೊದಲ್ಗೊಳ್ಳಲಿರುವ ಟೋಕಿಯೋ ಒಲಿಂಪಿಕ್ಸ್ ಗೆ ಬಾರತದಿಂದ ಮೇರಿ ಕೋಮ್ ಮತ್ತು ಮನ್‌ಪ್ರೀತ್ ಸಿಂಗ್ ಬಾವುಟ ಹೊತ್ತು ಮುನ್ನಡೆಯಲಿದ್ದಾರೆ. ದೇಶದ ಎಲ್ಲಾ 126 ಆಟಗಾರರಿಗೂ ಶುಬ ಕೋರುತ್ತಾ ಬಾರತ ಹೆಚ್ಚು ಪದಕಗಳೊಂದಿಗೆ ಹಿಂದಿರುಗಲಿ ಎಂದು ಹರಸೋಣ.
(ಚಿತ್ರ ಸೆಲೆ: insidesport.co, publicdomainpictures.net)
ಇತ್ತೀಚಿನ ಅನಿಸಿಕೆಗಳು