ರಗುರಾಮ್ ಬಟ್ – ಕರ‍್ನಾಟಕದ ಸ್ಪಿನ್ ದೈತ್ಯ
ಒಬ್ಬ ಆಟಗಾರನಲ್ಲಿ ಸಾಕಶ್ಟು ಪ್ರತಿಬೆಯಿದ್ದರೂ, ವರುಶಗಳ ಕಾಲ ದೇಸೀ ಕ್ರಿಕೆಟ್ ನಲ್ಲಿ ನಿರಂತರ ಪ್ರದರ‍್ಶನದಿಂದ ಪ್ರಾಬಲ್ಯ ಮೆರೆದರೂ ಅದ್ರುಶ್ಟದ ಬಲವಿಲ್ಲದಿದ್ದರೆ ಅಂತರಾಶ್ಟ್ರೀಯ ಮಟ್ಟದಲ್ಲಿ ನೆಲೆಯೂರಲು ಆಗುವುದಿಲ್ಲ ಎಂಬುದು ದಿಟ. ಇದಕ್ಕೆ ಜೀವಂತ ಎತ್ತುಗೆ ಕರ‍್ನಾಟಕದ ಮೇರು ಎಡಗೈ ಸ್ಪಿನ್ನರ್ ಅದ್ವಾಯ್ ರಗುರಾಮ್ ಬಟ್. 1980 ರ ದಶಕದಾದ್ಯಂತ ಕರ‍್ನಾಟಕದ ಬವ್ಯ ಸ್ಪಿನ್ ಪರಂಪರೆಯ ನೊಗ ಹೊತ್ತ ರಗುರಾಮ್ ಅಂತರಾಶ್ಟ್ರೀಯ ಮಟ್ಟದ ಬೌಲರ್ ಆಗಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ.
ಹುಟ್ಟು – ಎಳವೆಯ ಕ್ರಿಕೆಟ್
16 ಏಪ್ರಿಲ್ 1958 ರಂದು ದಕ್ಶಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ರಗುರಾಮ್ ಬಟ್ ಹುಟ್ಟಿದರು. ಬೆಂಗಳೂರಿನ ಸೇಂಟ್ ಜೋಸೆಪ್ ಇಂಡಿಯನ್ ಹೈಸ್ಕೂಲ್ ನಲ್ಲಿ ಕಲಿಯುತ್ತಿರುವಾಗಲೇ ಕ್ರಿಕೆಟ್ ಆಡುವ ತುಡಿತ ಅವರಲ್ಲಿ ಮೊಳಕೆಯೊಡೆಯಿತು. ಅದು ಯಾವ ಮಟ್ಟಕ್ಕೆ ಎಂದರೆ ಪಿಯುಸಿ ಕಲಿಕೆಯ ಬಳಿಕ ಕ್ರಿಕೆಟ್ ಕಡೆಗೆ ಹೆಚ್ಚು ಗಮನ ಕೊಡಲೆಂದು ಅವರು ಓದಿಗೆ ತಿಲಾಂಜಲಿ ಇಟ್ಟರು. ತಮ್ಮ ಶಾಲೆಯ ಕೋಚ್ ಕೆ.ಕೆ ತಾರಾಪೊರ್ ರಿಂದ ಆಟದ ಮೊದಲ ಪಟ್ಟುಗಳನ್ನು ಕಲಿತ ಅವರು ಪ್ರತಿಶ್ಟಿತ ಬಿ.ಯು.ಸಿ.ಸಿ ತಂಡದ ಪರ ಕ್ಲಬ್ ಕ್ರಿಕೆಟ್ ಆಡತೊಡಗಿದರು. 1975 ರಿಂದ 1979 ರ ತನಕ ಸಿ.ಕೆ ನಾಯ್ಡು ಟ್ರೋಪಿ, ಮೊಯಿನ್ ಉದೌಲಾ ಕಪ್ ಹಾಗೂ ಕೂಚ್ ಬೆಹಾರ್ ಟ್ರೋಪಿಗಳಲ್ಲಿ ತಮ್ಮ ಸ್ಪಿನ್ ಚಳಕದಿಂದ ಒಂದೊಂದೇ ಮೆಟ್ಟಿಲು ಏರುತ್ತಾ ಹೋದರು. ನಂತರ ಪಿ.ರಾಮಚಂದ್ರ ರಾವ್ ಮೆಮೋರಿಯಲ್ ಟೂರ‍್ನಿಯಲ್ಲಿ ಕೇವಲ 3 ಪಂದ್ಯಗಳಲ್ಲಿ 18 ವಿಕೆಟ್ ಗಳನ್ನು ಪಡೆದು ಕರ‍್ನಾಟಕ ರಾಜ್ಯದ ಆಯ್ಕೆಗಾರರು ತಮ್ಮತ್ತ ತಿರುಗಿ ನೋಡುವಂತೆ ಮಾಡಿದರು. ತಮ್ಮ 21 ನೇ ವಯಸ್ಸಿನಲ್ಲಿ ರಗುರಾಮ್ ಬಟ್ ರಾಜ್ಯ ರಣಜಿ ತಂಡದಲ್ಲಿ ಎಡೆ ಪಡೆದರು.
ರಣಜಿ ಕ್ರಿಕೆಟ್ ಬದುಕು
1979/80 ರ ಸಾಲಿನಲ್ಲಿ ತವರು ನೆಲ ಬೆಂಗಳೂರಿನಲ್ಲಿ ಗುಂಡಪ್ಪ ವಿಶ್ವನಾತ್ ರ ಮುಂದಾಳ್ತನದಲ್ಲಿ ರಗುರಾಮ್ ಬಟ್ ತಮಿಳುನಾಡು ಎದುರು ತಮ್ಮ ಚೊಚ್ಚಲ ರಣಜಿ ಪಂದ್ಯ ಆಡಿದರು. ಆ ಪಂದ್ಯದಲ್ಲಿ ಕೇವಲ 1 ವಿಕೆಟ್ ಪಡೆದ ಅವರು ಹೆಚ್ಚು ಪ್ರಬಾವ ಬೀರದೆ ಹೋದರೂ ದಿಗ್ಗಜ ಸ್ಪಿನ್ನರ್ ಗಳಾದ ಚಂದ್ರಶೇಕರ್ ಹಾಗೂ ವಿಜಯಕ್ರಿಶ್ಣ ಅವರೊಟ್ಟಿಗೆ ಬೌಲ್ ಮಾಡುವ ಅವಕಾಶ ಪಡೆದರು. ಅನುಬವಿ ಸ್ಪಿನ್ನರ್ ಗಳು ಹೇರಳವಾಗಿ ತಂಡದಲ್ಲಿ ಇದ್ದುದ್ದರಿಂದ ರಗುರಾಮ್ ಬಳಿಕ ತಂಡದಲ್ಲಿ ಎಡೆ ಕಳೆದುಕೊಂಡರು. ಮತ್ತೊಮ್ಮೆ ಡಿವಿಶನ್ ಕ್ರಿಕೆಟ್ ನಲ್ಲಿ ತಮ್ಮ ಎಂದಿನ ವಿಕೆಟ್ ಬೇಟೆ ಮುಂದುವರಿಸಿ 1981/82 ರ ಸಾಲಿನಲ್ಲಿ ರಾಜ್ಯ ತಂಡಕ್ಕೆ ಮರಳಿದರು. ದಾವಣಗೆರೆಯಲ್ಲಿ ಕೇರಳ ಎದುರು 9 ವಿಕೆಟ್ (4/63; 5/38) ಪಡೆದು ತಮ್ಮ ಅಳವಿನ ಬಗ್ಗೆ ಇದ್ದ ಅನುಮಾನಗಳನ್ನು ನಿವಾರಿಸಿದರು. ಬಳಿಕ ವಿಕೆಟ್ ಕಬಳಿಸುತ್ತ ಪಂದ್ಯದಿಂದ ಪಂದ್ಯಕ್ಕೆ ಬೆಳೆಯುತ್ತಾ ಹೋದ ರಗುರಾಮ್ ತಂಡದ ಮುಕ್ಯ ಸ್ಪಿನ್ನರ್ ಆದರು. ಇದೇ ಸಾಲಿನ ಬಾಂಬೆ ಎದುರಿನ ಸೆಮಿಪೈನಲ್ ನಲ್ಲಿ ಒಟ್ಟು 13 ವಿಕೆಟ್ ಕೆಡವಿ (8/123; 5/77) ಕರ‍್ನಾಟಕ ತಂಡವನ್ನು ಪೈನಲ್ ಗೆ ಕೊಂಡೊಯ್ದರು. ಬೆಂಗಳೂರಿನಲ್ಲಿ ನಡೆದ ಈ ಪಂದ್ಯದಲ್ಲಿ ಬಾಂಬೆಯ ಗುಲಾಮ್ ಪಾರ‍್ಕರ್, ಅಶೋಕ್ ಮಂಕಡ್ ಮತ್ತು ಸುರು ನಾಯಕ್ ರನ್ನು ಸತತ ಎಸೆತ ಗಳಲ್ಲಿ ಔಟ್ ಮಾಡಿ ಹ್ಯಾಟ್ರಿಕ್ ಪಡೆದ ಮೊದಲ ಕರ‍್ನಾಟಕದ ಬೌಲರ್ ಎಂಬ ಹೆಗ್ಗಳಿಕೆ ಪಡೆದರು. ಇದೇ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಸುನಿಲ್ ಗಾವಸ್ಕರ್, ಬಲಗೈ ಬ್ಯಾಟ್ಸ್ಮನ್ ನ ಲೆಗ್ ಸ್ಟಂಪ್ ಆಚೆ (ಎಡಗೈ ಸ್ಪಿನ್ನರ್ ಹೆಚ್ಚಾಗಿ ಬೌಲ್ ಮಾಡುವ ಎಡೆ) ಪಿಚ್ ಮೇಲೆ ಸಾಕಶ್ಟು ರಪ್ ಗಳು ಇದ್ದುದ್ದರಿಂದ ಬಲಗೈ ಬ್ಯಾಟಿಂಗ್ ಮಾಡಿದರೆ ಉಳಿಯುವುದು ಅಸಾದ್ಯ ಎಂದರಿತು ರಗುರಾಮ್ ರ ಸ್ಪಿನ್ ಎದುರಿಸಲು ಎಡಗೈ ಬ್ಯಾಟಿಂಗ್ ಮಾಡಿದ್ದು ಕ್ರಿಕೆಟ್ ಇತಿಹಾಸದ ಪುಟ ಸೇರಿ ಇಂದಿಗೂ ಚರ‍್ಚೆಯಾಗುತ್ತಿದೆ. ಈ ಸಾಲಿನ ರಣಜಿ ಟೂರ‍್ನಿಯಲ್ಲಿ ಅತಿ ಹೆಚ್ಚು (41) ವಿಕೆಟ್ ಗಳನ್ನು ಪಡೆದು ಅವರು ರಾಶ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಗಳಿಸಿದರು. ಬಳಿಕ 1982/83 ರ ರಣಜಿ ಟೂರ‍್ನಿಯಲ್ಲೂ ರಗುರಾಮ್ ರವರ ಎಡಗೈ ಸ್ಪಿನ್ ನಾಗಾಲೋಟ ಮುಂದುವರೆಯಿತು. ತಮ್ಮ ಸ್ಪಿನ್, ಲೂಪ್ ಹಾಗೂ ಕರಾರುವಾಕ್ ಆರ‍್ಮ್ ಬಾಲ್ ಎಸೆತಗಳಿಂದ ಬ್ಯಾಟ್ಸ್ಮನ್ ಗಳನ್ನು ಇನ್ನಿಲ್ಲದಂತೆ ಕಾಡಿದರು. ಕರ‍್ನಾಟಕ ತಂಡ ತನ್ನ ಮೂರನೇ ಟೂರ‍್ನಿ ಗೆದ್ದ ಈ ಸಾಲಿನಲ್ಲಿ ಮತ್ತೊಮ್ಮೆಅವರು ಅತಿ ಹೆಚ್ಚು (43) ವಿಕೆಟ್ ಪಡೆದರು. ಪಂಜಾಬ್ ವಿರುದ್ದ ಬೆಂಗಳೂರಿನಲ್ಲಿ ನಡೆದ ಕ್ವಾರ‍್ಟರ್ ಪೈನಲ್ ನಲ್ಲಿ ಹೆಚ್ಚು ರನ್ ನೀಡದೆ ಶಿಸ್ತಿನ ದಾಳಿಯಿಂದ 9 ವಿಕೆಟ್ (5/45; 4/35) ಪಡೆದು ಪಿಚ್ ಗೆ ಅನುಗುಣವಾಗಿ ತಮ್ಮ ಬೌಲಿಂಗ್ ಅನ್ನು ಮಾರ‍್ಪಡಿಸಿಕೊಳ್ಳುವ ಅವರ ಚಳಕವನ್ನು ಪರಿಚಯಿಸಿದರು. ಹೀಗೆ ನಿರಂತರ ವಿಕೆಟ್ ಗಳಿಕೆಯಿಂದ ರಗುರಾಮ್ ಬಾರತ ತಂಡದ ಕದ ತಟ್ಟಲಾರಂಬಿಸಿದರು.
ಅಂತರಾಶ್ಟ್ರೀಯ ಕ್ರಿಕೆಟ್ ಬದುಕು
1983 ರಲ್ಲಿ ಪಾಕಿಸ್ತಾನದ ಎದುರು ಕಪಿಲ್ ದೇವ್ ರ ಮುಂದಾಳ್ತನದಲ್ಲಿ ನಾಗ್ಪುರದಲ್ಲಿ ರಗುರಾಮ್ ಬಟ್ ತಮ್ಮ ಚೊಚ್ಚಲ ಟೆಸ್ಟ್ ಆಡಿದರು. ಬೌಲರ್ ಗಳಿಗೆ ನೆರವಿಲ್ಲದ ಸತ್ವವಿಲ್ಲದ ಪಿಚ್ ಮೇಲೆ ನಡೆದ ಈ ಪಂದ್ಯ ನೀರಸ ಡ್ರಾನಲ್ಲಿ ಕೊನೆಗೊಂಡರೂ ಶಿಸ್ತಿನ ಬೌಲಿಂಗ್ ನಿಂದ ಕನ್ನಡಿಗ ರಗುರಾಮ್ ಎಲ್ಲರ ಗಮನ ಸೆಳೆದರು. ಸ್ಪಿನ್ ಎದುರು ಲೀಲಾಜಾಲವಾಗಿ ಆಡುವ ಚಳಕ ಹೊಂದಿದ್ದ ಪಾಕಿಸ್ತಾನದ ಗಟಾನುಗಟಿ ಬ್ಯಾಟ್ಸ್ಮನ್ ಗಳ ಪೈಕಿ ಜಾವೀದ್ ಮಿಯಾಂದಾದ್ ಹಾಗೂ ಮುದಸ್ಸರ್ ನಜರ್ ರನ್ನು ಔಟ್ ಮಾಡಿ ಟೆಸ್ಟ್ ಕ್ರಿಕೆಟ್ ನಲ್ಲಿ ಒಳ್ಳೆ ಆರಂಬ ಪಡೆದರು. 39 ಓವರ್ ಗಳಲ್ಲಿ ಕೇವಲ 65 ರನ್ ನೀಡಿ 2 ವಿಕೆಟ್ ಪಡೆದದ್ದು ಅವರ ಕರಾರುವಾಕ್ ದಾಳಿಗೆ ಎತ್ತುಗೆಯಾಯಿತು. ಆರ‍್ಮ್ ಬಾಲ್ ನಿಂದ ಮಿಯಾಂದಾದ್ ರನ್ನು LBW ಬಲೆಗೆ ಕೆಡವಿ ಆ ಬಳಿಕ ನಜರ್ ರನ್ನು ಪ್ಲೈಟ್ ನಿಂದ ಯಾಮಾರಿಸಿ ಕಿರ‍್ಮಾನಿರಿಂದ ಸ್ಟಂಪ್ ಮಾಡಿಸಿದ್ದು ಯಾವುದೇ ಸ್ಪಿನ್ನರ್ ಹೆಮ್ಮೆ ಪಡುವಂತಹ ಎಸೆತಗಳಾಗಿದ್ದವು. ಮಿಯಾಂದಾದ್ ಕೂಡ ಆಟದ ಬಳಿಕ ಯುವ ಸ್ಪಿನ್ನರ್ ರಗುರಾಮ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು ವಿಶೇಶ. ಆ ನಂತರ ಬಲಾಡ್ಯ ವೆಸ್ಟ್ ಇಂಡೀಸ್ ಎದುರು ಕಾನ್ಪುರ್ ನಲ್ಲಿ ಎರಡನೇ ಟೆಸ್ಟ್ ಆಡಿದ ಅವರು ನಾಯಕ ಕ್ಲೈವ್ ಲಾಯ್ಡ್ ಮತ್ತು ಗಸ್ಲೋಗಿಯರ ವಿಕೆಟ್ ಪಡೆದರೂ ಬಾರತ ಇನ್ನಿಂಗ್ಸ್ ನಿಂದ ಹೀನಾಯ ಸೋಲು ಕಂಡಿತು. ತಮಗೆ ದೊರೆತ ಎರಡೂ ಅವಕಾಶಗಳಲ್ಲಿ ತಕ್ಕಮಟ್ಟಿಗೆ ಯಶಸ್ಸು ಕಂಡಿದ್ದ ರಗುರಾಮ್, ವೆಸ್ಟ್ ಇಂಡೀಸ್ ಎದುರು ಅಹ್ಮಾದಾಬಾದ್ ನಲ್ಲಿ ನಡೆಯಲಿದ್ದ ಟೆಸ್ಟ್ ಗೂ ಮುನ್ನ ಬುಜದ ನೋವಿಗೆ ತುತ್ತಾದರು. ಪ್ರಾಮಾಣಿಕವಾಗಿ ನಾಯಕ ಕಪಿಲ್ ದೇವ್ ಬಳಿ ಗಾಯದ ಸಮಸ್ಯೆ ಹೇಳಿಕೊಂಡು ಆ ಪಂದ್ಯದಿಂದ ಹಿಂದೆ ಸರಿದರು. ಆದರೆ ವಿಪರ‍್ಯಾಸ ಎಂದರೆ ಗಾಯದಿಂದ ಚೇತರಿಸಿಕೊಂಡ ಬಳಿಕ ಅವರಿಗೆ ಒಂದೂ ಅವಕಾಶ ಸಿಗುವುದಿಲ್ಲ. ಆ ಬಳಿಕ ರಗುರಾಮ್ ರ ಅಂತರಾಶ್ಟ್ರೀಯವ್ರುತ್ತಿ ಬದುಕು ಆಯ್ಕೆಗಾರರ ಬದಿವೊಲವಿನಿಂದ ಎರಡೇ ಟೆಸ್ಟ್ ಗಳಿಗೆ ಮೊಟಕುಗೊಂಡಿತು.
ಕರ‍್ನಾಟಕದ ಸ್ಪಿನ್ ದೈತ್ಯ ರಗುರಾಮ್ ಬಟ್
ರಾಜ್ಯ ತಂಡದಲ್ಲಿ ಪ್ರಸನ್ನ ಹಾಗೂ ಚಂದ್ರಶೇಕರ್ ರಂತಹ ದಿಗ್ಗಜ ಸ್ಪಿನ್ನರ್ ಗಳ ಎಡೆಯನ್ನು ದಶಕಗಳ ರಗುರಾಮ್ ಬಟ್ ಸಮರ‍್ತವಾಗಿ ತುಂಬಿದರು. ಒಂದು ಬದಿಯಿಂದ ತಮ್ಮ ಲಯ ಕಂಡುಕೊಂಡರೆಂದರೆ ದಿನವಿಡೀ ದಣಿಯದೆ ಬೌಲಿಂಗ್ ಮಾಡುವ ಅಳವನ್ನು ಹೊಂದಿದ್ದ ಅವರು ಕರ‍್ನಾಟಕಕ್ಕೆ ತಮ್ಮ ಸ್ಪಿನ್ ಕೈಚಳಕದಿಂದ ಹಲವಾರು ಗೆಲುವುಗಳಿಗೆ ಮುನ್ನುಡಿ ಬರೆದರು. ಬಾರತ ತಂಡದಿಂದ ಮರಳಿದ ಬಳಿಕ ಕೂಡ ಅವರು ಕರ‍್ನಾಟಕದ ಪರ ನಿರಂತರವಾಗಿ ವಿಕೆಟ್ ಪಡೆಯುತ್ತಾ ಹೋದರು. ಪ್ರತೀ ರಣಜಿ ಟೂರ‍್ನಿಯಲ್ಲೂ ಕನಿಶ್ಟ 25 ವಿಕೆಟ್ ಪಡೆದು ಮೇಲಿನ ಮಟ್ಟದಲ್ಲಿ ಆಡುವ ಸಾಮರ‍್ತ್ಯ ತಮ್ಮಲ್ಲಿದೆ ಎಂದು ಪದೇ ಪದೇ ಆಯ್ಕೆಗಾರರಿಗೆ ನೆನಪಿಸಿದರೂ ಅದು ಪಲಕಾರಿಯಾಗಲಿಲ್ಲ. 1987/88 ರಲ್ಲಿ ಬೆಂಗಳೂರಿನಲ್ಲಿ ತಮಿಳುನಾಡು ಎದುರು ಒಟ್ಟು 15 ವಿಕೆಟ್ ಗಳನ್ನು (8/43; 7/41) ಪಡೆದು ತಮ್ಮ ವ್ರುತ್ತಿ ಬದುಕಿನ ಶ್ರೇಶ್ಟ ಸಾದನೆ ಮಾಡಿದರು. 1992/93 ರಲ್ಲಿ ಮದ್ಯಪ್ರದೇಶದ ಎದುರು ಆಡಿದ ತಮ್ಮ ಕಡೇ ಪಂದ್ಯದಲ್ಲೂ 9 ವಿಕೆಟ್(4/116; 5/57) ಪಡೆದದ್ದು ರಗುರಾಮ್ ಬಟ್ ಎಂದೂ ಬೌಲರ್ ಆಗಿ ಕಳೆಗುಂದಲಿಲ್ಲ ಎನ್ನುವುದಕ್ಕೆ ಎತ್ತುಗೆ. ರಾಜ್ಯ ತಂಡದೊಂದಿಗೆ ಒಂದು ರಣಜಿ ಟೂರ‍್ನಿ ಹಾಗೂ ಒಂದು ಇರಾನಿ ಕಪ್ ಗೆದ್ದಿರುವ ಅವರು 71 ರಣಜಿ ಪಂದ್ಯಗಳಲ್ಲಿ 21 ರ ಸರಾಸರಿಯಲ್ಲಿ 343 ವಿಕೆಟ್ ಗಳನ್ನು ಪಡೆದಿದ್ದಾರೆ. ಹಾಗೂ ಒಟ್ಟು 82 ಮೊದಲ ದರ‍್ಜೆ ಪಂದ್ಯಗಳಲ್ಲಿ 373 ವಿಕೆಟ್ ಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದಾರೆ. ಅದರಲ್ಲಿ 25 ಬಾರಿ ಇನ್ನಿಂಗ್ಸ್ ನಲ್ಲಿ ಐದು ವಿಕೆಟ್ ಪಡೆದರೆ 5 ಬಾರಿ ಪಂದ್ಯದಲ್ಲಿ ಹತ್ತು ವಿಕೆಟ್ ಗಳ ಸಾದನೆ ಮಾಡಿದ್ದಾರೆ. ಮತ್ತು ಇನ್ನಿಂಗ್ಸ್ ಒಂದರಲ್ಲಿ ಮೂರು ಬಾರಿ 8 ವಿಕೆಟ್ ಪಡೆದ ಕರ‍್ನಾಟಕದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಕೂಡ ರಗುರಾಮ್ ಅವರದೇ. ದೇಸೀ ಕ್ರಿಕೆಟ್ ನಲ್ಲಿ ಗಾವಾಸ್ಕರ್, ವೆಂಗಸರ‍್ಕಾರ್, ಅಮರ್‌ನಾತ್ ರಂತಹ ವಿಶ್ವದರ‍್ಜೆಯ ಬ್ಯಾಟ್ಸ್ಮನ್ ಗಳೆದುರೂ ಕೂಡ ಪ್ರಾಬಲ್ಯ ಮೆರೆದ ರಗುರಾಮ್ ನಿಜಕ್ಕೂ ಕರ‍್ನಾಟಕದ ದೊಡ್ಡ ಶಕ್ತಿಯೇ ಆಗಿದ್ದರು. ಪಿಚ್ ಎಂತದೇ ಇರಲಿ ಅವರ ಎಸೆತಗಳು ಸದಾ ಸ್ಪಿನ್ ಪಡೆದು ಬ್ಯಾಟ್ಸ್ಮನ್ ಗಳನ್ನು ಗೊಂದಲಕ್ಕೆ ಸಿಲುಕಿಸುತ್ತಿದ್ದವು. ಅವರ ಎಡಗೈಸ್ಪಿನ್ ಎದುರಿಸುವ ಬಗೆ ಹೇಗೆಂದು ಎದುರಾಳಿ ತಂಡಗಳು ಹೆಚ್ಚು ಚರ‍್ಚೆ ಮಾಡುತ್ತಿದ್ದವು ಎಂದರೆ ಅವರು ಯಾವ ಮಟ್ಟಕ್ಕೆ ಚಾಪು ಮೂಡಿಸಿದ್ದರು ಎಂದು ವಿಶೇಶವಾಗಿ ಹೇಳಬೇಕಾಗಿಲ್ಲ. ಎಡಗೈ ಸ್ಪಿನ್ ಗೆ ಇನ್ನೊಂದು ಹೆಸರು ಎಂಬಂತಿದ್ದ ರಗುರಾಮ್ ಬಟ್ ಯುವ ಸ್ಪಿನ್ನರ್ ಗಳಾದ ಅನಿಲ್ ಕುಂಬ್ಳೆ ಹಾಗೂ ಸುನೀಲ್ ಜೋಶಿ ತಮ್ಮ ಎಡೆಯನ್ನು ತುಂಬಬಲ್ಲರು ಎಂದು ಮನವರಿಕೆಯಾದ ಕೂಡಲೇ 1992/93 ರಲ್ಲಿ 34ರ ಹರೆಯದಲ್ಲಿ ಎಲ್ಲಾ ಬಗೆಯ ಕ್ರಿಕೆಟ್ ನಿಂದ ದೂರ ಸರಿದರು. ಅಲ್ಲಿಗೆ ಕರ‍್ನಾಟಕ ಕ್ರಿಕೆಟ್ ನ ಬವ್ಯ ಸ್ಪಿನ್ಪರಂಪರೆಯ ಒಂದು ಕೊಂಡಿ ಕಳಚಿತು.
ನಿವ್ರುತ್ತಿ ನಂತರದ ಬದುಕು
ತಮ್ಮ ಆಟದ ದಿನಗಳ ಬಳಿಕ ರಗುರಾಮ್ ಕೆಲ ಕಾಲ ಅಂಪೈರ್ ಆಗಿದ್ದರು. ಬಳಿಕ ಮೂರು ವರ‍್ಶಗಳ ಕಾಲ ಬೆಂಗಳೂರಿನಲ್ಲಿರುವ ರಾಶ್ಟ್ರೀಯ ಕ್ರಿಕೆಟ್ ಅಕ್ಯಾಡೆಮಿಯ ಕೋಚ್ ಹಾಗೂ ಚೆನ್ನೈನ ಎಂ.ಎ.ಸಿ ಸ್ಪಿನ್ ಪೌಂಡೇಶನ್ ನಲ್ಲೂ ಕೋಚ್ ಆಗಿ ತಮ್ಮ ಅನುಬವವನ್ನು ದಾರೆ ಎರೆದರು. ಗೋವಾ ರಣಜಿ ತಂಡದ ಕೋಚ್ ಆಗಿ ಕೂಡ ದುಡಿದ ರಗುರಾಮ್ ಪ್ರಸ್ತುತ ಕರ‍್ನಾಟಕ ತಂಡದ ಮುಕ್ಯ ಆಯ್ಕೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕರ‍್ನಾಟಕದ ಯುವ ಸ್ಪಿನ್ನರ್ ಗಳಿಗೆ ಸದಾ ಮಾರ‍್ಗದರ‍್ಶಕರಾಗಿರುವ ಅವರು ರಾಜ್ಯದಾದ್ಯಂತ ಸುತ್ತಾಡಿ ಹಲವಾರು ವಯೋಮಿತಿಯ ಪಂದ್ಯಾವಳಿಗಳನ್ನು ಹತ್ತಿರದಿಂದ ನೋಡಿ ಪ್ರತಿಬೆಯುಳ್ಳ ಯುವಕರನ್ನು ಆರಿಸುತ್ತಿದ್ದಾರೆ. ಅವರು ಆಯ್ಕೆಗಾರರಾದ ಬಳಿಕ ಅನೇಕ ಯುವ ಆಟಗಾರರು ರಾಜ್ಯ ತಂಡದಲ್ಲಿ ಎಡೆ ಪಡೆದಿರುವುದೇ ಇದಕ್ಕೆ ಸಾಕ್ಶಿ.
ಕೊಂಚ ಅದ್ರುಶ್ಟದ ಬಲ ಇದ್ದು ಇನ್ನೊಂದು ಅವಕಾಶ ಸಿಕ್ಕಿದ್ದರೆ ರಗುರಾಮ್ ಬಟ್ ಅಂತರಾಶ್ಟ್ರೀಯ ಮಟ್ಟದಲ್ಲೂ ಮಿಂಚುತ್ತಿದ್ದರು ಎಂದು ಸಾಕಶ್ಟು ಕ್ರಿಕೆಟ್ ವಿಮರ‍್ಶಕರು ಹಾಗೂ ಮಾಜಿ ಆಟಗಾರರು ಈಗಲೂ ಕರ‍್ನಾಟಕದ ಸ್ಪಿನ್ನರ್ ಗೆ ಸಿಗದ ಅವಕಾಶದ ಬಗ್ಗೆ ಮರುಗುತ್ತಾರೆ. ಸಿಕ್ಕ ಎರಡೂ ಅವಕಾಶಗಳಲ್ಲಿ ಅವರು ಸಮಾದಾನಕರ ಪ್ರದರ‍್ಶನ ನೀಡಿದ್ದರು ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಇದರ ಬಗ್ಗೆ ಬೇಸರ ಇದ್ದರೂ ರಗುರಾಮ್ ಮಾತ್ರ ಪಾಲಿಗೆ ಬಂದದ್ದು ಪಂಚಾಮ್ರುತ ಎಂಬಂತೆ ತಮ್ಮ ನೋವನ್ನು ಮರೆತು, “ಬಾರತದ ಪರ ಟೆಸ್ಟ್ ಆಡಿದ್ದು ನನ್ನ ವ್ರುತ್ತಿಬದುಕಿನ ಮರೆಯಲಾಗದ ಗಳಿಗೆ. ಆ ಕನಿಶ್ಟ ಗೌರವ ಸಿಕ್ಕಿದ್ದು ನನ್ನ ಅದ್ರುಶ್ಟ” ಎಂದು ಒಂದು ಬಗೆಯಲ್ಲಿ ತ್ರುಪ್ತಿಯ ಮಾತುಗಳನ್ನಾಡುತ್ತಾರೆ. ಆಟಗಾರನಾಗಿ ತಮ್ಮ ಬೆಳವಣಿಗೆಯಲ್ಲಿ ಹಿರಿಯಣ್ಣನಂತೆ ಸಾಕಶ್ಟು ಪ್ರೋತ್ಸಾಹ ನೀಡಿದ ಗುಂಡಪ್ಪ ವಿಶ್ವನಾತ್ ರನ್ನು ರಗುರಾಮ್ ನೆನೆಯುತ್ತಾರೆ. ತಮ್ಮನ್ನು ವಿಜಯ ಬ್ಯಾಂಕ್ ನಿಂದ ಎಸ್.ಬಿ.ಐ ತಂಡಕ್ಕೆ ಕರೆ ತಂದು ತಮ್ಮ ಆಟವನ್ನು ಸುದಾರಿಸಿಕೊಳ್ಳಲು ನೆಟ್ಸ್ ನಲ್ಲಿ ಗಂಟೆಗಟ್ಟಲೆ ಬ್ಯಾಟಿಂಗ್ ಮಾಡಿ ಸಲಹೆ ಸೂಚನೆ ನೀಡುತ್ತಿದ್ದ ವಿಶ್ವನಾತ್ ರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. 1980 ರ ದಶಕದಲ್ಲಿ ಕರ‍್ನಾಟಕದ ಕ್ರಿಕೆಟ್ ಬೆಳವಣಿಗೆಯಲ್ಲಿ ಸ್ಪಿನ್ ದಿಗ್ಗಜರಾಗಿದ್ದ ರಗುರಾಮ್ ಬಟ್ ರ ಕೊಡುಗೆ ಅಪಾರ. ರಾಜ್ಯದ ಬವ್ಯ ಕ್ರಿಕೆಟ್ ಇತಿಹಾಸದಲ್ಲಿ ಅವರೊಂದು ಮೇರು ಸ್ತಾನ ಸಂಪಾದಿಸಿದ್ದಾರೆ. ಅವರನ್ನು ಅವರ ಸಾದನೆಯನ್ನು ಎಂದಿಗೂ ಮರೆಯದಿರೋಣ.
(ಚಿತ್ರ ಸೆಲೆ: alchetron.com, kioc.net)
ಇತ್ತೀಚಿನ ಅನಿಸಿಕೆಗಳು