ಮಿತವಾಗಿರಲಿ ಟೀ-ಕಾಪಿ ಸೇವನೆ

– ಸಂಜೀವ್ ಹೆಚ್. ಎಸ್.ಟೀ, ಕಾಪಿ, tea, coffe

ಕಳೆದ ಕೆಲ ಶತಮಾನಗಳಲ್ಲಿ ಪರಕೀಯರು ಪರಿಚಯಿಸಿ ಕೊಟ್ಟ ಎರಡು ಅದ್ಬುತ ಪಾನೀಯಗಳು ಇಂದು ನಮ್ಮ ನಿತ್ಯ ಜೀವನದ ಬಹುದೊಡ್ಡ ಅಂಗವಾಗಿಬಿಟ್ಟಿವೆ. ಟೀ, ಕಾಪಿ ಜಗತ್ತಿನಲ್ಲೇ ಬಹಳ ಜನಪ್ರೀತಿ ಗಳಿಸಿದ ಪಾನೀಯ. ಅದರಲ್ಲೂ ಬಾರತೀಯರಿಗೆ ಟೀ ಅತವಾ ಕಾಪಿಯಿಲ್ಲದೆ ಕಣ್ಣುಗಳು ತೆರೆಯುವುದೇ ಇಲ್ಲ ಎನ್ನುವಂತಾಗಿದೆ. ಇನ್ನು ಬರಿಯ ಚಹಾ ಅಂಗಡಿ ಇಟ್ಟುಕೊಂಡು ಬಾರತದಲ್ಲಿ ಬದುಕು ಕಟ್ಟಿಕೊಳ್ಳಬಹುದು ಎಂದರೆ ಅದೆಶ್ಟು ಚಹಾ ಪ್ರಿಯರಿದ್ದಾರೆ ಲೆಕ್ಕ ಹಾಕಿ! ಪ್ರತಿ ಬೆಳಗ್ಗೆ ಎದ್ದ ಕೂಡಲೇ ಒಂದು ಲೋಟ ಕಾಪಿ ಅತವಾ ಟೀ ನಮ್ಮವರಿಗೆ ಆಗಲೇಬೇಕಲ್ಲವೇ? ನಮ್ಮಲ್ಲಿ ಹಲವರ ದೈನಂದಿನ ಅಬ್ಯಾಸವಿದು. ಅದಿಲ್ಲದೆ, ಜಗತ್ತಿನಲ್ಲಿ ಒಂದು ಹುಲ್ಲುಕಡ್ಡಿಯೂ ಚಲಿಸಲಾರದು ಎಂದು ನಂಬಿರುವವರ ಬಳಗ ನಮ್ಮದು. ಆದರೆ, ದಿನಾರಂಬಕ್ಕೆ ಕಾಪಿ, ಟೀ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ.

ಇಂದು ಕಾಪಿ ಮತ್ತು ಟೀ ನಮ್ಮೆಲ್ಲರ ನಿತ್ಯದ ಒಂದು ಅಗತ್ಯವೇ ಆಗಿಬಿಟ್ಟಿವೆ. ಪ್ರತಿಯೊಬ್ಬರೂ ದಿನಕ್ಕೆ ಎರಡು ಮೂರು ಕಪ್ ಟೀ ಅತವಾ ಕಾಪಿ ಕುಡಿಯುತ್ತೇವೆ. ಇದರಿಂದ ಆರೋಗ್ಯಕ್ಕೇನೂ ತೊಂದರೆ ಇಲ್ಲ, ಬದಲಿಗೆ ಒಳ್ಳೆಯದೇ ಎಂದು ನಾವೆಲ್ಲಾ ಬಾವಿಸಿದ್ದೇವೆ. ವಾಸ್ತವವಾಗಿ ನಿಯಮಿತ ಪ್ರಮಾಣದಲ್ಲಿ ಕುಡಿಯುವ ಟೀ ಆರೋಗ್ಯಕ್ಕೂ ಒಳ್ಳೆಯದು, ಇದನ್ನು ವಿಜ್ನಾನ ಸಹ ಪುರಸ್ಕರಿಸುತ್ತದೆ. ಆದರೆ ಒಂದು ವೇಳೆ ಇದರ ಅಬ್ಯಾಸ ವ್ಯಸನದ ರೂಪ ಪಡೆದುಕೊಂಡು ಬಿಟ್ಟರೆ ಮಾತ್ರ ಆರೋಗ್ಯಕ್ಕೆ ಮಾರಕವಾಗಿದೆ. ಹಾಗಾದರೆ ಎಶ್ಟು ಕಪ್ ವ್ಯಸನಕಾರಿಯಾಗಿದೆ ಎಂಬ ಪ್ರಶ್ನೆಗೆ ತಜ್ನರು ದಿನಕ್ಕೆ ಐದು ಕಪ್ ಗಿಂತ ಹೆಚ್ಚು ಟೀ ಅತವಾ ಕಾಪಿ ಕುಡಿದರೆ ಅದು ಒಳ್ಳೆಯದಲ್ಲ ಎನ್ನುತ್ತಾರೆ. ಹಾಗಾಗಿ ದಿನಕ್ಕೆ ಮೂರು ಕಪ್ ಮೀರದಂತಿದ್ದರೆ, ಮತ್ತು ಅಪರೂಪಕ್ಕೆ ಐದು ಕಪ್ ವರೆಗೂ ಸೇವನೆಯ ಮಿತಿ ಇದ್ದರೆ ಆರೋಗ್ಯಕರ ಎಂದು ತಜ್ನರು ಅಬಿಪ್ರಾಯ ಪಡುತ್ತಾರೆ. ಕಾಲಿ ಹೊಟ್ಟೆಯಲ್ಲಿ ಚಹಾ ಸೇವನೆಯಿಂದ ಅಪಾಯ ಬೆನ್ನೇರಿ ಕಾಡಲಿದೆ!

ಅಯ್ಯೋ ಇಶ್ಟು ವರ‍್ಶ ಕುಡಿದೆವಲ್ಲ; ಏನೂ ಆಗಲಿಲ್ಲ, ಬಂದ ನೆಂಟರಿಶ್ಟರಿಗೂ ಅದನ್ನೇ ಮಾಡಿಕೊಟ್ಟಿದ್ದು, ಅವರೂ ದೂರಲಿಲ್ಲ, ಹುಶಾರಿಲ್ಲದಾಗಲೂ ಅದನ್ನೇ ಕುಡಿದೆವು ಎಂದೆಲ್ಲ ನಿಮ್ಮ ಅಬ್ಯಾಸವನ್ನು ಸಮರ‍್ತಿಸಿಕೊಳ್ಳಲು ಬಂದಿರಾ? ನಾವು ಹೇಳಿದ್ದು ಕಾಲಿ ಹೊಟ್ಟೆಯಲ್ಲಿ ಕಾಪಿ, ಟೀ ಕುಡಿವ ಅಬ್ಯಾಸದ ಬಗ್ಗೆ ಮಾತ್ರ. ಯೋಚಿಸಿ ನೋಡಿ, ಹೀಗೆ ಮಾಡುವ ಅಬ್ಯಾಸ ನಿಮ್ಮದಾದರೆ, ಆಗಾಗ ಹೊಟ್ಟೆ ಗೊಡಗೊಡಿಸಿ ರಗಳೆಯಾಗಿಲ್ಲವೇ? ಅಜೀರ‍್ಣ ಸಮಸ್ಯೆ ಎದುರಾಗಿಲ್ಲವೇ?

ಬೆಳಗ್ಗೆ ಏಳುವಾಗ ನಮ್ಮ ಹೊಟ್ಟೆಯ ಅಸಿಡಿಕ್ ಪಿಎಚ್ ಮಟ್ಟ ಏರಿರುತ್ತದೆ. ಕಾಪಿ, ಟೀಯಲ್ಲಿ ಕೆಪೀನ್ ಇರುತ್ತದೆ. ಇದು ಅಸಿಡಿಕ್ ಆಗಿದ್ದು, ಮೊದಲೇ ಅಸಿಡಿಕ್ ಆಗಿರುವ ಹೊಟ್ಟೆಗೆ ಮತ್ತಶ್ಟು ಅದನ್ನೇ ತುಂಬಿದರೆ ಅಸಿಡಿಟಿ ಶುರುವಾಗುತ್ತದೆ. ಅಶ್ಟೇ ಅಲ್ಲ, ಮೆಟಬಾಲಿಸಂ ಏರುಪೇರಿನಿಂದ ಒದ್ದಾಡುವಂತಾಗುತ್ತದೆ. ಇದೇ ಕಾರಣಕ್ಕೆ ವೈದ್ಯರು ಹಾಗೂ ಆಹಾರ ತಜ್ನರು ಮಲಗುವ ಮುನ್ನ ಹಾಗೂ ಎದ್ದ ಕೂಡಲೇ ಕಾಪಿ, ಟೀ ಕುಡಿಯುವುದನ್ನು ಬೇಡ ಎಂದು ಹೇಳುತ್ತಾರೆ. ಇದಿಶ್ಟೇ ಅಲ್ಲದೆ ಚಹಾ ಡೈಯುರೆಟಿಕ್ ಆಗಿದೆ. ಅದು ಡಿಹೈಡ್ರೇಶನ್‌ಗೆ ಕಾರಣವಾಗುತ್ತದೆ. ವಿಶೇಶವಾಗಿ 8-9 ಗಂಟೆಗಳ ನಿದ್ದೆಯಿಂದಾಗಿ ದೇಹ ಆಹಾರ ಮತ್ತು ನೀರಿನ ಕೊರತೆ ಅನುಬವಿಸುವಾಗ ಟೀ ಕುಡಿದರೆ ಮತ್ತಶ್ಟು ಡಿಹೈಡ್ರೇಶನ್ ಆಗುವುದು ಪಕ್ಕಾ. ಇದರಿಂದ ಮಸಲ್ ಕ್ರ್ಯಾಂಪ್ ಆಗುವುದಲ್ಲದೆ, ದೇಹದ ಸಾಮಾನ್ಯ ಕೆಲಸಗಳಿಗೆ ಅಡ್ಡಿಯಾಗುತ್ತದೆ.

ಬಾರತದಲ್ಲಿ, ಜನರು ಸಾಮಾನ್ಯವಾಗಿ ಹಾಲಿನಿಂದ ತಯಾರಿಸಿದ ಚಹಾ ಸೇವಿಸುತ್ತಾರೆ. ಇದು ಗ್ಯಾಸ್ಟ್ರಿಕ್ ಹಾಗೂ ಮಲಬದ್ದತೆಗೂ ಕಾರಣವಾಗಬಹುದು. ಹೊಟ್ಟೆ ಕಾಲಿಯಿದ್ದಾಗ ಹಾಲಿನಲ್ಲಿರುವ ಲ್ಯಾಕ್ಟೋಸ್ ಪದಾರ‍್ತವು ರಿಯಾಕ್ಟ್ ಆಗಿ ಗ್ಯಾಸ್ ಹಾಗೂ ಮಲಬದ್ದತೆಗೆ ಕಾರಣವಾಗುತ್ತದೆ. ಇನ್ನು ಬೆಳಗ್ಗೆ ಎದ್ದ ಕೂಡಲೇ ಟೀ ಕುಡಿಯುವುದರಿಂದ ಬಾಯಿಯಲ್ಲೂ ಆ್ಯಸಿಡ್ ಮಟ್ಟ ಹೆಚ್ಚುತ್ತದೆ. ಇದು ಹಲ್ಲುಗಳ ಸವೆತಕ್ಕೆ ಕಾರಣವಾಗುತ್ತದೆ.

ಇತ್ತೀಚೆಗೆ ವರ‍್ಕ್ ಪ್ರಮ್ ಹೋಂ ಮಾಡುವವರು ಹೆಚ್ಚು. ಅತಿಯಾದ ಕೆಲಸದ ಒತ್ತಡ, ಮನೆ ಹೊರಗೆ ಕಾಲಿಡದೆ ಕೆಲಸ ಮಾಡುವವರು ತಲೆ ನೋವು ಕಡಿಮೆ ಮಾಡಲು ಒಂದೆರಡು ಕಪ್ ಟೀ ಕಾಪಿ ಸೇವನೆ ಹೆಚ್ಚಾಗಿ ಆರಂಬಿಸಿರಬಹುದು. ಏಕೆಂದರೆ ಕೆಪೀನ್ ತಕ್ಶಣ ಎನರ‍್ಜಿ ಬೂಸ್ಟ್ ಮಾಡುತ್ತದೆ, ನಿಜ. ಆದರೆ, ಪೂರ‍್ತಿ ರಿಲ್ಯಾಕ್ಸ್ ಆದ ಕಂಡಿಶನ್‌ನಲ್ಲಿದ್ದ ದೇಹಕ್ಕೆ ಒಮ್ಮಿಂದೊಮ್ಮೆಲೆ ಎನರ‍್ಜಿ ಏರುವುದರಿಂದ ತಲೆನೋವು, ಸಂಕಟ, ತಲೆ ಸುತ್ತುವಿಕೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಇನ್ನೂ ಕೆಲವರಿಗೆ ರಂಗು ರಂಗಿನ ಡಿಜೈನ್ ಕಾಪಿ ಮಗ್ ಅಲ್ಲಿ ಟೀ ಕಾಪಿ ಕುಡಿಯುವ ಚಟ. ಹೆಚ್ಚು ಕಡಿಮೆ 200-300 ಮಿ.ಲೀ. ತುಂಬುವ ಆ ಲೋಟದಲ್ಲಿ ಕುಡಿಯುವ ಚಹಾ-ಕಾಪಿ ನಮ್ಮ ಆಂತರಿಕ ಆರೋಗ್ಯಕ್ಕೆ ಎಶ್ಟು ಹಾನಿಕಾರಿಯಾಗಿದೆ ಎಂಬುವುದನ್ನು ಯಾರಾದರೂ ಬಲ್ಲಿರಾ? ನಮ್ಮ ಟೀ ಕಪ್ 30 ಮಿ.ಲೀ. ಪಾನೀಯ ಹಿಡಿಸುವಶ್ಟು ಇರಬೇಕು. ಏಕೆಂದರೆ ಒಂದು ಹೊತ್ತಿನ ಪ್ರಮಾಣಿತ ಬಳಕೆ 30 ಮಿ.ಲೀ. ಅಶ್ಟೇ ಆಗಿರುತ್ತದೆ.

ಕೆಪೀನ್ ಅನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸಿದಾಗ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. “ಕೆಪೀನಿಸಮ್” ಎಂಬ ಸ್ತಿತಿ ಸೇವಿಸುವವರಲ್ಲಿ ಉಂಟಾಗುತ್ತದೆ. ಕೆಪೀನ್ ಸೇವನೆಯ “ಚಟ” ಆರಂಬವಾಗುವುದಲ್ಲದೆ, ಆತಂಕ, ಅಸಹನೆ, ಮಾಂಸಕಂಡಗಳ ಅನೈಚ್ಚಿಕ ಅದುರುವಿಕೆ (muscle twitching), ನಿದ್ರಾಹೀನತೆ ಮತ್ತು ಹ್ರುದಯ ಬಡಿತದಲ್ಲಿ ಏರುಪೇರು ಮೊದಲಾದ ಅಡ್ಡ ಪರಿಣಾಮಗಳು ಕಂಡುಬರತೊಡಗುತ್ತವೆ. ಇಶ್ಟಲ್ಲದೆ, ಕೆಪೀನ್ ಜಟರದಲ್ಲಿ ಆಮ್ಲವಸ್ತುಗಳ ಉತ್ಪತ್ತಿಯನ್ನು ಪ್ರಚೋದಿಸುತ್ತದೆ. ಹೀಗಾಗಿ, ದೀರ‍್ಗ ಕಾಲ ಕೆಪೀನ್ ನ ಸೇವನೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಿದ್ದಾದರೆ ಅಸಿಡಿಟಿ, ಅಲ್ಸರ್ ಮೊದಲಾದ ತೊಂದರೆಗಳು ಆರಂಬವಾಗುವ ಸಾದ್ಯತೆ ಹೆಚ್ಚುತ್ತದೆ.

ಕೆಪೀನ್ ನ ಅತಿಯಾದ ಸೇವನೆಗೆ ಸಂಬಂದಪಟ್ಟ ನಾಲ್ಕು ಮಾನಸಿಕ ತೊಂದರೆಗಳಿವೆ: ಕೆಪೀನ್ ನಶೆ, ಕೆಪೀನ್ ಗೆ ಸಂಬಂದಪಟ್ಟ ಆತಂಕ ಮನೋಬಾವ, ಕೆಪೀನ್ ಗೆ ಸಂಬಂದಪಟ್ಟ ನಿದ್ರಾಹೀನತೆ, ಮತ್ತು ಇತರ ತೊಂದರೆಗಳು. ಕೆಪೀನ್ ಸೇವನೆಯ ಪ್ರಮಾಣ ಅತಿ ಹೆಚ್ಚಾದಾಗ – ಸುಮಾರು 250 ಮಿ. ಗ್ರಾಂ ಗಳನ್ನು ದಾಟಿದಾಗ (ಸುಮಾರು 3 ಲೋಟ ಕಾಪಿ), ಕೇಂದ್ರ ನರಮಂಡಲಕ್ಕೆ ದೊರಕುವ ಉತ್ತೇಜನೆ ಮಿತಿಮೀರುತ್ತದೆ. ಈ ಮಾನಸಿಕ ಪರಿಸ್ತಿತಿಯನ್ನು “ಕೆಪೀನ್ ನಶೆ” ಎಂದು ಕರೆಯಲಾಗುತ್ತದೆ. ಕೆಪೀನ್ ಸೇವನೆ ಮಿತಿ ಮೀರಿದರೆ, ಸಾವು ಸಹ ಪರಿಣಮಿಸಬಹುದು. ಮನುಶ್ಯರಲ್ಲಿ, ದೇಹದ ತೂಕದ ಪ್ರತಿ ಕೆಜಿಗೆ ಒಂದೇ ದಿನದಲ್ಲಿ 150-200 ಮಿ. ಗ್ರಾಂ ಗಳಶ್ಟು ಕೆಪೀನ್ (ಉದಾ: 150-200 ಕಪ್ ಕಾಪಿ) ಸೇವಿಸಿದಲ್ಲಿ ಜೀವಹಾನಿಯ ಸಂಬವ ಉಂಟಾಗುತ್ತದೆ. ಈ ಪ್ರಮಾಣದಲ್ಲಿ ಕಾಪಿಯನ್ನು ಯಾರೂ ಕುಡಿಯಲಾರರು, ಕೆಪೀನ್ ಮಾತ್ರೆಗಳ ಅತಿಯಾದ ಸೇವನೆಯಿಂದ ಸಾವು ಸಂಬವಿಸಿರುವ ಉದಾಹರಣೆಗಳುಂಟು.

ಹಾಗಾದರೆ ನೀವು ಕಾಪಿ, ಟೀ ಕುಡಿವ ಅಬ್ಯಾಸವನ್ನು ಸಂಪೂರ‍್ಣ ಬಿಡಲೇಬೇಕಾ? ಕಂಡಿತಾ ಇಲ್ಲ. ಆದರೆ, ಅದನ್ನು ತೆಗೆದುಕೊಳ್ಳುವ ವಿದಾನ ಹಾಗೂ ಸಮಯದಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಂಡರೆ ಸಾಕು. ಅತಿ ಆದಲ್ಲಿ ಅಮ್ರುತವೂ ವಿಶವೇ! ಆದ್ದರಿಂದ ಟೀ-ಕಾಪಿ ಸೇವನೆ ಹಿತ – ಮಿತವಾಗಿರಲಿ.

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: