ವಿಶ್ವದ ಅತಿದೊಡ್ಡ ಪಾದಚಾರಿ ಸೇತುವೆ – ಯುರೋಪಾವೆಗ್ ಸ್ಕೈವಾಕ್

– .

 

ನಿಮಗೆ ಅತಿ ಗಟ್ಟಿಯಾದ ಗುಂಡಿಗೆ ಇದೆಯೇ? ಇನ್ನೂರು ಮುನ್ನೂರು ಅಡಿ ಎತ್ತರದಿಂದ ಕೆಳಗೆ ಬಗ್ಗಿ ನೋಡುವ ಸಾಹಸ ಮಾಡಲು ತಯಾರಿದ್ದೀರಾ? ಯಾವುದೇ ಆದಾರವಿಲ್ಲದೆ ಗಾಳಿಯಲ್ಲಿ ತೂಗಾಡುತ್ತಿರುವ ಸ್ಕೈವಾಕ್ ಮೇಲೆ ನಡೆಯುವ ಎದೆಗಾರಿಕೆ ನಿಮಗಿದೆಯೇ? ಹಾಗಿದ್ದರೆ ನಿಮ್ಮ ಗುಂಡಿಗೆಗೆ ಸವಾಲೊಡ್ಡುವ, ಎದೆಗಾರಿಕೆಯನ್ನು ಪರೀಕ್ಶಿಸುವ ಸ್ಕೈವಾಕ್ ಒಂದಿದೆ. ಅದೇ ಸ್ವಿಟ್ಜರ್ ಲ್ಯಾಂಡಿನಲ್ಲಿನ, ವಿಶ್ವದ ಅತಿ ದೊಡ್ಡ ಪಾದಚಾರಿ ಸ್ಕೈವಾಕ್ ‘ಯುರೋಪಾವೆಗ್’.

ಈ ಸ್ಕೈವಾಕ್ ನ ವಿಶೇಶತೆ

ಸ್ವಿಸ್ ಇಂಜಿನಿಯರ್ ಗಳು ದಾಕಲೆ ಸಮಯದಲ್ಲಿ ನಿರ‍್ಮಿಸಿದ ಈ ಸ್ಕೈವಾಕ್ ತನ್ನದೇ ಆದ ವಿಶೇಶತೆಯನ್ನು ಹೊಂದಿದೆ. ಇಪ್ಪತ್ತೆಂಟು ಮಹಡಿಗಳ ಮನೆಯಶ್ಟು ಎತ್ತರದಲ್ಲಿ ಹಾದು ಹೋಗುವ ಈ ಸ್ಕೈವಾಕ್, ಪಾದಚಾರಿಗಳಿಗೆ ಅತ್ಯಂತ ಹ್ರುದಯಂಗಮ ದ್ರುಶ್ಯವನ್ನು ತೆರೆದಿಡುತ್ತದೆ. ಪಾದಚಾರಿಗಳು ಮಾತ್ರ ಬಳಸಬಹುದಾದ ಈ ಸ್ಕೈವಾಕ್, ನಿಜಕ್ಕೂ ಇಂಜಿನಿಯರಿಂಗ್ ಕ್ಶೇತ್ರದಲ್ಲಿನ ಅದ್ಬುತ ಸ್ರುಶ್ಟಿ. ಯುರೋಪಾವೆಗ್ ವಿನ್ಯಾಸದ ಹಿಂದೆ ಸಾಕಶ್ಟು ಅದ್ಯಯನಗಳು ನಡೆದಿವೆ. ಈ ಅದ್ಯಯನದ ಪ್ರತಿಪಲವೇ ಈ ‘ಅದ್ಬುತ ಸ್ಕೈವಾಕ್’ ಎಂಬುದು ಅದನ್ನು ಕಣ್ಣಾರೆ ಕಂಡವರ ಅಬಿಪ್ರಾಯ. ಈ ಪಾದಚಾರಿ ಸ್ಕೈವಾಕ್‍ನ ನಿರ‍್ಮಾಣದಲ್ಲಿ ಬಿಗಿಹಗ್ಗದಂತಹ ಕಬ್ಬಿಣದ ತಂತಿಗಳ ಜೊತೆ, ತೂಗಾಟ ನಿರೋದಕ ತಂತ್ರಜ್ನಾನದ ಬಳಕೆ ಸಹ ಆಗಿದೆ. ‘ಆ್ಯಂಟೀ ಸ್ವೇ’ ತಾಂತ್ರಿಕತೆಯನ್ನು ಇಲ್ಲಿ ಬಳಸಿರುವ ಕಾರಣ, ಈ ಸ್ಕೈವಾಕ್‍ಗಿಂತ ಕಡಿಮೆ ಉದ್ದವಿರುವ ಅನೇಕ ಸೇತುವೆಗಳು ತೂಗಾಡುವಶ್ಟು ಈ ಸ್ಕೈವಾಕ್ ತೂಗಾಡುವುದಿಲ್ಲ. ಈ ಸ್ಕೈವಾಕ್‍ನ ತೂಗಾಟ ಅತ್ಯಂತ ಕಡಿಮೆಯಿರುವ ಹಿನ್ನೆಯಲ್ಲಿ, ಅದರ ಮೇಲೆ ನಡೆದಾಡುವ ಪಾದಚಾರಿಗಳು ಹೆಚ್ಚು ಸುರಕ್ಶಿತರು. ಸಾಮಾನ್ಯವಾಗಿ ಅತಿ ಹೆಚ್ಚು ತೂಗಾಟದ ಅನುಬವ ಕಾಣಸಿಗುವುದು ಸೇತುವೆಯ ಮದ್ಯ ಬಾಗದಲ್ಲಿ. ಆದರೆ ಈ ಸ್ಕೈವಾಕ್‍ನ ಮದ್ಯದಲ್ಲಿ ತೂಗಾಟ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕಾಣುತ್ತದೆ. ಅಕ್ಕ ಪಕ್ಕಕ್ಕೆ ಜೋಲಾಡುವುದೂ ಸಹ ಕಡಿಮೆ. ಇಶ್ಟೆಲ್ಲಾ ವಿಶೇಶತೆಗಳಿಂದ ಕೂಡಿರುವ ಈ ಸ್ಕೈವಾಕ್, ಜುಲೈ 29, 2017ರಂದು ಲೋಕಾರ‍್ಪಣೆಯಾಯಿತು.

ಹೇಗಿದೆ ಈ ಸ್ಕೈವಾಕ್?

1,621 ಅಡಿ (494 ಮೀಟರ್) ಉದ್ದವಿರುವ ಯುರೋಪಾವೆಗ್ ಸ್ಕೈವಾಕ್, ಸಮುದ್ರ ಮಟ್ಟದಿಂದ 7,218 ಅಡಿ ಎತ್ತರದಲ್ಲಿ ನಿರ‍್ಮಾಣವಾಗಿದೆ. ಇದು ನೆಲದಿಂದ 282 ಅಡಿಗಳಶ್ಟು ಎತ್ತರದಲ್ಲಿದೆ. ಅಂದರೆ ಸರಿಸುಮಾರು 28 ಮಹಡಿಗಳಶ್ಟು ಎತ್ತರ. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಇದರ ಅಗಲ ಎರಡು ಅಡಿಗೂ ಕೊಂಚ ಜಾಸ್ತಿ. ನಿಕರವಾಗಿ ಹೇಳಬೇಕೆಂದರೆ ಕೇವಲ 25.6 ಇಂಚು. ಅಂದರೆ 65 ಸೆಂಟಿಮೀಟರ್ ಮಾತ್ರ. ಸೊಂಟದ ಸುತ್ತಳತೆ ಹೆಚ್ಚಿಗೆ ಇರುವವರು ಇದರ ಮೇಲೆ ನಡೆಯುವ ಅದ್ರುಶ್ಟದಿಂದ ವಂಚಿತರಾಗುತ್ತಾರೆ. ಇಶ್ಟು ಕಡಿಮೆ ಅಗಲವಿರುವ ಕಾರಣ, ಇದರ ಮೇಲೆ ನಡೆದಾಡುವ ಪಾದಚಾರಿಗಳು, ಹಾದಿಯಲ್ಲಿ ಎದುರು ಬರುವವರಿಗೆ ಜಾಗ ಕಲ್ಪಿಸಲು, ಅಡ್ಡಡ್ಡಕ್ಕೆ ಅತವಾ ಪಕ್ಕಕ್ಕೆ ತಿರುಗಲೇ ಬೇಕಾದದ್ದು ಅನಿವಾರ‍್ಯ. ಈ ಸ್ಕೈವಾಕ್ ಉಕ್ಕಿನಿಂದ ನಿರ‍್ಮಾಣವಾಗಿದ್ದು, ಪಾದಚಾರಿಗಳ ನೆಲ ಹಾಸು ಜಾಲರಿಯಂತಿದೆ. ಇದರ ಮುಕೇನ ಪಾದಚಾರಿಗಳು ಕೆಳಗಿರುವ ಕಣಿವೆಯ ಪ್ರಾಕ್ರುತಿಕ ಸೌಂದರ‍್ಯವನ್ನು ಸವಿಯಬಹುದು. ಹಾಗೇ ಜಾಲರಿಯಿಂದ ಕೆಳಗೆ ನೋಡಲೂ ಸಹ ಗಟ್ಟಿ ಗುಂಡಿಗೆ ಬೇಕು.

ಇದನ್ನ ಕಟ್ಟಿದ ಬಗೆ

ಯುರೋಪಾವೆಗ್ ಸ್ಕೈವಾಕ್‍ನ ನಿರ‍್ಮಾಣದಲ್ಲಿ ಬಳಸಲಾಗಿರುವ ಬಿಗಿತಂತಿಯ ಕರ‍್ಶಣ (ಟೆನ್ಶನ್) 440 ಕಿಲೋ ನ್ಯೂಟನ್‍ಗಳು. ಇದರಿಂದಾಗಿ ಈ ಸ್ಕೈವಾಕ್ ಒಮ್ಮೆಗೆ 250 ಪಾದಚಾರಿಗಳ ಬಾರವನ್ನು ಹೊರುವಶ್ಟು ಶಕ್ತವಾಗಿದೆ. ಇದರಲ್ಲಿ ಉಪಯೋಗಿಸಿರುವ ಕೇಬಲ್ ವೈರುಗಳ ವ್ಯಾಸ 53 ಮಿಮೀ ಹಾಗೂ ಅವುಗಳ ಒಟ್ಟಾರೆ ತೂಕ 8 ಟನ್ನುಗಳು. ಸ್ವಿಸ್ ರೋಪ್ ಕಂಪನಿ ಇದರ ನಿರ‍್ಮಾಣದ ಹೊಣೆ ಹೊತ್ತಿತ್ತು. ಇದಕ್ಕೆ ತಗುಲಿದ ವೆಚ್ಚ 7,75,000 ಪೌಂಡುಗಳು. ಇದರ ನಿರ‍್ಮಾಣಕ್ಕೆ ತಗುಲಿದ ಸಮಯ ಕೇವಲ 10 ವಾರ ಎಂದರೆ ನಿಜಕ್ಕೂ ಆಶ್ಚರ‍್ಯವಾಗುತ್ತದಲ್ಲವೇ? ಆದರೂ ಇದು ಸತ್ಯ. ಈ ಸ್ಕೈವಾಕ್ ಇದ್ದ ಜಾಗದಲ್ಲೇ ಹಿಂದೆ ಮತ್ತೊಂದು ಸೇತುವೆ ಇತ್ತು. 2010ರಲ್ಲಿ ಆದ ಬಂಡೆಯ ಕುಸಿತಕ್ಕೆ ಅದು ಗುರಿಯಾಗಿ ಸಂಪೂರ‍್ಣ ನಾಶವಾಗಿತ್ತು. ಯುರೋಪಾವೆಗ್ ಸ್ಕೈವಾಕ್‍ನಲ್ಲಿ ನಿಂತು, 14783 ಅಡಿ ಎತ್ತರದ ವೈಸ್ ಹಾರ‍್ನ್ ಶಿಕರವನ್ನು ನೋಡುವ ನೋಟವೇ ಆದ್ಬುತ. ಸ್ವಿಟ್ಜರ್ ಲ್ಯಾಂಡಿನ ಅತಿ ದೊಡ್ಡ ಹಿಮಚ್ಚಾದಿತ ಪರ‍್ವತ ಶ್ರೇಣಿಗಳಲ್ಲಿ ವೈಸ್ ಹಾರ‍್ನ್ ಶಿಕರ ಸಹ ಒಂದು. ಈ ಸ್ಕೈವಾಕ್ ಮೇಲೆ ನಿಂತು, ಶಿಕರದ ಮೇಲು ಹೊದಿಕೆಯಾದ ಅಚ್ಚ ಬಿಳಿಯ ಹಿಮರಾಶಿಯನ್ನು ನೋಡಿ ಆನಂದಿಸಬಹುದು. ಸ್ವಿಟ್ಜರ್ ಲ್ಯಾಂಡಿನ ಹಿಮಚ್ಚಾದಿತ ಪರ‍್ವತ ಶ್ರೇಣಿಗಳ ಅಬೂತಪೂರ‍್ವ ಸೊಬಗನ್ನು ವೀಕ್ಶಿಸಲು ಹಾಗೂ ನಿಸರ‍್ಗದ ಸುಂದರ ಅತ್ಯದ್ಬುತ ನೋಟವನ್ನು ಕಣ್ಮನಗಳಲ್ಲಿ ತುಂಬಿಕೊಳ್ಳಲು, ಯುರೋಪಾವೆಗ್ ಸ್ಕೈವಾಕ್‍ಗಿಂತ ಸೂಕ್ತ ಆಯ್ಕೆ ಇಲ್ಲವೇ ಇಲ್ಲ ಅನ್ನಬಹುದು.

(ಮಾಹಿತಿ ಮತ್ತು ಚಿತ್ರ ಸೆಲೆ: alpenwild.com, thelifeofluxury.com, ultimateadventures.com, velocoffee.co.nz, travelandleisure.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: