ಮನೀಶ್ ಪಾಂಡೆ – ಕರ‍್ನಾಟಕ ಕ್ರಿಕೆಟ್ ಬ್ಯಾಟಿಂಗ್‌ನ ಬೆನ್ನೆಲುಬು

– ರಾಮಚಂದ್ರ ಮಹಾರುದ್ರಪ್ಪ.

ಬೆಂಗಳೂರಿನಲ್ಲಿ ಒಂದು ಕುಟುಂಬ ತಮ್ಮ ಮಗಳ ಮದುವೆಗೆ ಸಂಬ್ರಮದಿಂದ ಅಣಿಯಾಗುತ್ತಿರುತ್ತದೆ. ಆ ವೇಳೆ ಮನೆಯ ಮಗ ತನ್ನ ಒಡಹುಟ್ಟಿದ ಅಕ್ಕನ ಮದುವೆಗೆ ಬರಲಾರೆನೆಂದು ಹೇಳಿ ಎಲ್ಲಿರಿಗೂ ಅಚ್ಚರಿ ಉಂಟುಮಾಡುತ್ತಾನೆ. ಮದುವೆಯ ಹೊತ್ತಿನಲ್ಲಿ ನಡೆಯಲಿದ್ದ ರಣಜಿ ಟೂರ‍್ನಿಯ ಕ್ವಾರ‍್ಟರ್ ಪೈನಲ್ ನಲ್ಲಿ ತಾನು ಕರ‍್ನಾಟಕದ ಪರ ಆಡಲೇಬೇಕೆಂದೂ, ಈ ಪಂದ್ಯ ತನ್ನ ಕ್ರಿಕೆಟ್ ವ್ರುತ್ತಿ ಬದುಕಿಗೆ ಎಶ್ಟು ಮುಕ್ಯ ಎಂದು ಮನೆಯವರಿಗೆಲ್ಲಾ ಮನವರಿಕೆ ಮಾಡಿ ಆ ಹುಡುಗ ಕಡೆಗೂ ಅಕ್ಕನ ಮದುವೆ ತಪ್ಪಿಸಿ, ರಾಜ್ಯ ತಂಡದೊಂದಿಗೆ ಪ್ರಯಾಣ ಬೆಳೆಸುತ್ತಾನೆ. ಹೀಗೆ ತನ್ನ ಕುಟುಂಬದ ಒಂದು ಬಹುಮುಕ್ಯ ಕಾರ‍್ಯಕ್ರಮಕ್ಕೂ ಗೈರುಹಾಜರಾಗಿ ಕರ‍್ನಾಟಕದ ಪರ ಕಣಕ್ಕಿಳಿದ ಆ ಹುಡುಗನೇ ರಾಜ್ಯ ತಂಡದ ಹಾಲಿ ನಾಯಕ, ಪ್ರತಿಬಾನ್ವಿತ ವಿಶೇಶ ಬಲಗೈ ಬ್ಯಾಟ್ಸ್ಮನ್ ಹಾಗೂ ಮಿಂಚಿನಂತಹ ಪೀಲ್ಡರ್ ಮನೀಶ್ ಕ್ರಿಶ್ಣಾನಂದ್ ಪಾಂಡೆ.

ಹುಟ್ಟು – ಎಳವೆಯ ಕ್ರಿಕೆಟ್ ಒಲವು

ಸೆಪ್ಟೆಂಬರ್ 10, 1989 ರಂದು ಉತ್ತರಾಕಂಡ್ ನ ನೈನಿತಾಲ್ ನಲ್ಲಿ ಮನೀಶ್ ಹುಟ್ಟಿದರು. ಅವರ ತಂದೆ ಸೇನೆಯಲ್ಲಿ ಕರ‍್ನಲ್ ಆಗಿದ್ದರಿಂದ ದೇಶದ ಹಲವಾರು ಊರುಗಳಿಗೆ ಆಗಾಗ ಅವರಿಗೆ  ವರ‍್ಗಾವಣೆ ಆಗುತ್ತಲೇ ಇತ್ತು. ಕಡೆಗೆ ಪಾಂಡೆ ಕುಟುಂಬ ಬೆಂಗಳೂರಿಗೆ ಬಂದು ನೆಲೆಸಿತು. ಕೇಂದ್ರೀಯ ವಿದ್ಯಾಲಯ ಶಾಲೆಯಲ್ಲಿ ಕಲಿಯುತ್ತಿರುವಾಗ ಎಂಟನೇ ವಯಸ್ಸಿಗೆ ಸತೀಶ್ ಎಂಬುವರ ಗರಡಿಯಲ್ಲಿ ಆಟದ ಮೊದಲ ಪಟ್ಟುಗಳನ್ನು ಕಲಿತ ಮನೀಶ್ ಬಳಿಕ ಇರ‍್ಪಾನ್ ಸೇಟ್ ಅವರ ಜವಾನ್ಸ್ ಕ್ಲಬ್ ಸೇರಿ ಕರ‍್ನಾಟಕದ ಲೀಗ್ ಗಳಲ್ಲಿ ಆಡತೊಡಗಿದರು. ಸೇಟ್ ರ ಕರ‍್ನಾಟಕ ಇನ್ಸ್ಟಿಟ್ಯೂಟ್ ಆಪ್ ಕ್ರಿಕೆಟ್ ಸಂಸ್ತೆ, ಆಟಗಾರನಾಗಿ ಮನೀಶ್ ರ ಬೆಳವಣಿಗೆಗೆ ನೀರೆರೆದು ಪೋಶಿಸಿತು. ಸಾಂಪ್ರದಾಯಿಕವಾಗಿ ನೇರ ಬ್ಯಾಟ್ ನಿಂದ ಆಡುವುದನ್ನು ಕರಗತ ಮಾಡಿಕೊಳ್ಳದೆ ತಮ್ಮದೇ ವಿಶಿಶ್ಟ ಬ್ಯಾಟಿಂಗ್ ತಂತ್ರಗಾರಿಕೆಯನ್ನು ಅಳವಡಿಸಿಕೊಂಡರೂ ಅವರ ಬಿರುಸಿನ ಬ್ಯಾಟಿಂಗ್ ನೋಡಲು ಸೊಗಾಸಾಗಿತ್ತು. ರಾಜ್ಯದ ಎಲ್ಲಾ ಕಿರಿಯರ ಪಂದ್ಯಾವಳಿಗಳಲ್ಲಿ ರನ್ ಹೊಳೆ ಹರಿಸಿ ಅಲ್ಲಿಂದ 17 ನೇ ವಯಸ್ಸಿಗೆ ರಾಶ್ಟ್ರೀಯ ಆಯ್ಕೆಗಾರರ ಗಮನ ಸೆಳೆದು ಅವರು ಬಾರತ ಕಿರಿಯರ ತಂಡಕ್ಕೆ ಆಯ್ಕೆಯಾದರು. 2008ರಲ್ಲಿ ಮಲೇಶ್ಯಾದಲ್ಲಿ ವಿರಾಟ್ ಕೊಹ್ಲಿ ಮುಂದಾಳ್ತನದಲ್ಲಿ ಕಿರಿಯರ ವಿಶ್ವಕಪ್ ಗೆದ್ದ ಬಾರತ ತಂಡದಲ್ಲಿದ್ದ ಕರ‍್ನಾಟಕದ ಮನೀಶ್ ರಿಗೆ ಹೆಚ್ಚು ಬ್ಯಾಟಿಂಗ್ ಅವಕಾಶ ಸಿಗದೇ ಹೋದರೂ ತಮ್ಮ ಚುರುಕಾದ ಪೀಲ್ಡಿಂಗ್ ನಿಂದ ಗೆಲುವಿಗೆ ನೆರವಾದರು. ಮನೀಶ್ ರ ಅಳವನ್ನು ಅರಿತು ಮೊದಲಿಂದಲೇ ಅವರ ಪ್ರದರ‍್ಶನದ ಮೇಲೆ ನಿಗಾ ಇಟ್ಟಿದ್ದ ರಾಜ್ಯದ ಆಯ್ಕೆಗಾರರು ತಡಮಾಡದೆ ವಿಶ್ವಕಪ್ ನಿಂದ ಮರಳಿದ ಕೂಡಲೇ 2008ರ ಒಂದು ದಿನದ ಪಂದ್ಯಗಳ ಆವ್ರುತ್ತಿಯ ವಿಜಯ್ ಹಜಾರೆ ಟ್ರೋಪಿಗೆ ರಾಜ್ಯ ತಂಡದಲ್ಲಿ ಅವರಿಗೆ ಎಡೆ ಮಾಡಿಕೊಟ್ಟರು.

ದೇಸೀ ಕ್ರಿಕೆಟ್ ವ್ರುತ್ತಿ ಬದುಕು

ವಿಜಯ್ ಹಜಾರೆ ಟ್ರೋಪಿಯ ಕ್ವಾರ‍್ಟರ್ ಪೈನಲ್ ನಲ್ಲಿ ಸೌರಾಶ್ಟ್ರ ಎದುರು ಕರ‍್ನಾಟಕ ಪರ ತಮ್ಮ ಚೊಚ್ಚಲ ಪಂದ್ಯ ಆಡಿದ ಮನೀಶ್ 45 ರನ್ ಗಳಿಸಿ ಒಳ್ಳೆ ಆರಂಬ ಪಡೆದರು. ಆ ಬಳಿಕ 2008/09 ರ ಸಾಲಿನ ರಣಜಿ ಟೂರ‍್ನಿಗೂ ಆಯ್ಕೆಯಾದರು. ರೈಲ್ವೇಸ್ ಎದುರು ಬೆಂಗಳೂರಿನಲ್ಲಿ ರಾಬಿನ್ ಉತ್ತಪ್ಪ ನಾಯಕತ್ವದಲ್ಲಿ ಮನೀಶ್ ರಣಜಿ ಪಾದಾರ‍್ಪಣೆ ಮಾಡಿ, ಮೊದಲ ಇನ್ನಿಂಗ್ಸ್ ನಲ್ಲೇ ತಾಳ್ಮೆಯ ಅರ‍್ದಶತಕ (64) ರನ್ ಗಳಿಸಿದರು. ತಮಿಳು ನಾಡು ಎದುರು ಎರಡನೇ ಪಂದ್ಯದಲ್ಲೂ (57) ರನ್ ಬಾರಿಸಿ ತಂಡದಲ್ಲಿ ನೆಲೆ ಕಂಡರು. ನಂತರ 2009/10 ರ ಸಾಲಿನ ರಣಜಿ ಟೂರ‍್ನಿಯಲ್ಲಿ ತಮ್ಮ ಬ್ಯಾಟಿಂಗ್ ಉತ್ತುಂಗ ತಲುಪಿದ ಮನೀಶ್ 4 ಶತಕ ಹಾಗೂ 4 ಅರ‍್ದ ಶತಕಗಳಿಂದ 63 ರ ಸರಾಸರಿಯಲ್ಲಿ ಅತಿ ಹೆಚ್ಚು 882 ರನ್ ಪೇರಿಸಿ ದೇಸೀ ಕ್ರಿಕೆಟ್ ನಲ್ಲಿ ಸಂಚಲನ ಮೂಡಿಸಿದರು. ಅದರಲ್ಲಿಯೂ ಮೈಸೂರಿನಲ್ಲಿ ಮುಂಬೈ ಎದುರು ನಡೆದ ಪೈನಲ್ ನಲ್ಲಿ ಅವರು ಗಳಿಸಿದ ಸಿಡಿಲಬ್ಬರದ ಶತಕ (144) ಎಲ್ಲರನ್ನೂ ಬೆರಗಾಗಿಸಿತು. ನಾಲ್ಕನೇ ದಿನದ ಪಿಚ್ ಮೇಲೆ ಅಗರ‍್ಕರ್, ಸಾಲ್ವಿ, ಪವಾರ್, ಕುಲ್ಕರ‍್ಣಿ ರಂತಹ ಬೌಲರ್ ಗಳ ಎದುರು 338 ಗುರಿ ಬೆನ್ನತ್ತಿದ್ದ ಕರ‍್ನಾಟಕದ ಬ್ಯಾಟಿಂಗ್ ನೊಗ ಹೊತ್ತ 20 ರ ಹರೆಯದ ಮನೀಶ್ ಎಲ್ಲ ಬೌಲರ‍್‌ಗಳನ್ನು ಅಂಜಿಕೆಯಿಲ್ಲದೆ ದಂಡಿಸಿದ ರೀತಿ ಮೈನವಿರೇಳಿಸುವಂತಿತ್ತು. ರಾಜ್ಯ ತಂಡ ಕೂದಲೆಳೆಯಲ್ಲಿ ಪಂದ್ಯ ಸೋತರೂ ಮನೀಶ್ ದೊಡ್ಡ ಸುದ್ದಿಯಾದರು. ಈ ಪಂದ್ಯದಲ್ಲಿ ಅಬಿಶೇಕ್ ನಾಯರ್ ರನ್ನು ಔಟ್ ಮಾಡಲು ಅವರು ಲಾಂಗ್ ಆನ್ ನಲ್ಲಿ ಹಾರಿ ಹಿಡಿದ ನಂಬಲಸಾದ್ಯವಾದ ಸೊಗಸಾದ ಒಂದು ಕ್ಯಾಚ್ ಕೂಡ ಕಂಗೊಳಿಸಿತು. ಈ ಕ್ಯಾಚ್ ಬಾರತದ ದೇಸೀ ಕ್ರಿಕೆಟ್ ಇತಿಹಾಸದ ಅತ್ಯುತ್ತಮ ಕ್ಯಾಚ್ ಗಳಲ್ಲೊಂದು ಎಂಬ ಹೆಗ್ಗಳಿಕೆ ಪಡೆದಿದೆ. ಅಲ್ಲಿಂದ ಒಂದೊಂದೇ ಮೆಟ್ಟಿಲು ಏರುತ್ತಾ ಹೋದ ಕರ‍್ನಾಟಕದ ಈ ಹುಡುಗ 2011/12 ರ ಸಾಲಿನಲ್ಲಿ ಮುಂಬೈ ಎದುರು ಚೊಚ್ಚಲ ದ್ವಿಶತಕ (200*) ಸಿಡಿಸಿ ಆ ಬಳಿಕ ಅದೇ ಸಾಲಿನ ದುಲೀಪ್ ಟ್ರೋಪಿಯಲ್ಲೂ ದಕ್ಶಿಣ ವಲಯದ ಪರ ಕೇಂದ್ರದ ಎದುರು ಕೇವಲ 209 ಎಸೆತಗಳಲ್ಲಿ ದ್ವಿಶತಕ (218) ದಾಕಲಿಸಿದರು. ನಂತರ 2013 ರ ದುಲೀಪ್ ಟ್ರೋಪಿಯಲ್ಲಿ ಪಶ್ಚಿಮ ವಲಯದ ಎದುರು ಇನ್ನೊಂದು ದ್ವಿಶತಕ (213) ಪೇರಿಸಿ ದೊಡ್ಡ ಇನ್ನಿಂಗ್ಸ್ ಆಡುವ ತಮ್ಮ ಅಳವನ್ನು ಮತ್ತೊಮ್ಮೆ ಸಾಬೀತು ಮಾಡಿದರು. ಕ್ರಮೇಣ ಕರ‍್ನಾಟಕದ ಮುಕ್ಯ ಬ್ಯಾಟ್ಸ್ಮನ್ ಆಗಿ ಬೆಳೆದ ಮನೀಶ್ 2012/13, 2013/14 ಹಾಗೂ 2014/15 ರ ರಣಜಿ ಸಾಲಿನಲ್ಲಿ ಕ್ರಮವಾಗಿ 502, 729 ಮತ್ತು 570 ರನ್ ಕಲೆ ಹಾಕಿ ತಂಡದ ಸತತ ಎರಡು ರಣಜಿ ಟೂರ‍್ನಿ ಗೆಲುವುಗಳಿಗೆ ನೆರವಾದರು. ಇದೇ ವೇಳೆ ಇರಾನಿ ಹಾಗೂ ವಿಜಯ್ ಹಜಾರೆ ಟೂರ‍್ನಿಗಳಲ್ಲಿಯೂ ಅವರ ರನ್ ಗಳಿಕೆ ಎಡಬಿಡದೆ ಸಾಗಿತು. ಹೀಗೆ ಏಳು ವರುಶಗಳ ಕಾಲ ಸ್ತಿರ ಪ್ರದರ‍್ಶನದಿಂದ ದೇಸೀ ಕ್ರಿಕೆಟ್ ನ ಪ್ರಬಲ ಬ್ಯಾಟ್ಸ್ಮನ್ ಆಗಿ ರೂಪುಗೊಂಡ ಮನೀಶ್ ಬಾರತ ತಂಡದ ಕದ ತಟ್ಟಲಾರಂಬಿಸಿದರು.

ಐಪಿಎಲ್ ಕ್ರಿಕೆಟ್ ಬದುಕು

2008 ರ ಮೊದಲ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಮನೀಶ್ ರಿಗೆ ಹೆಚ್ಚು ಅವಕಾಶ ಸಿಗಲಿಲ್ಲ. 2009 ರ ಐಪಿಎಲ್ ಗೆ ಬೆಂಗಳೂರು ತಂಡ ಸೇರಿಕೊಂಡ ಅವರ ಅಳವನ್ನು ಅರಿತಿದ್ದ ನಾಯಕ ಅನಿಲ್ ಕುಂಬ್ಳೆ, ಹುಡುಗನಿಗೆ ಬ್ಯಾಟಿಂಗ್ ಬಡ್ತಿ ನೀಡುವ ಉದ್ದೇಶದಿಂದ, “ಏನಪ್ಪಾ ರೆಡಿ ಇದ್ದೀಯ?” ಎಂದು ಕೇಳಿದಾಗ ಅವರು ಹೌದೆನ್ನುತ್ತಾರೆ. ಡೆಕ್ಕನ್ ಚಾರ‍್ಜರ‍್ಸ್ ತಂಡದೆದುರು ಮೊದಲ ಬಾರಿಗೆ ಆರಂಬಿಕ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿದ 19ರ ಹರೆಯದ ಹುಡುಗ ಮನೀಶ್ 73 ಎಸೆತಗಳಲ್ಲಿ ಔಟಾಗದೆ 114 ರನ್ ಗಳಿಸಿ, ಐಪಿಎಲ್ ನಲ್ಲಿ ಶತಕ ಬಾರಿಸಿದ ಮೊದಲ ಬಾರತೀಯ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳುತ್ತಾರೆ. ಇದಾದ ಬಳಿಕ 2011-13 ರ ತನಕ ಪುಣೆ ತಂಡದ ಪರ ಆಡಿ ಸಾದಾರಣ ಯಶಸ್ಸು ಕಂಡು 2014 ಕ್ಕೆ ಕೊಲ್ಕತಾ ತಂಡದ ಪಾಲಾಗುತ್ತಾರೆ. ಈ ಸಾಲಿನ ಪೈನಲ್ ನಲ್ಲಿ ಪಂಜಾಬ್ ಎದುರು 50 ಎಸೆತಗಳಲ್ಲಿ 94 ರನ್ ಸಿಡಿಸಿ ಐಪಿಎಲ್ ಟ್ರೋಪಿಯನ್ನು ಕೊಲ್ಕತಾದ ತೆಕ್ಕೆಗೆ ಹಾಕುತ್ತಾರೆ. ಬ್ಯಾಟಿಂಗ್ ನಲ್ಲಿ ಕುಂದಿಲ್ಲದೆ ಸ್ಪಿನ್ನರ್ ಹಾಗೂ ವೇಗಿಗಳಿಬ್ಬರೆದುರೂ ನಿರಾಯಾಸವಾಗಿ ಬಿರುಸಾಗಿ ಬ್ಯಾಟ್ ಬೀಸಿದ ಅವರು ಅಬಿಮಾನಿಗಳ ಮತ್ತು ವಿಮರ‍್ಶಕರ ಮೆಚ್ಚುಗೆ ಗಳಿಸಿದರು. ಅದರಲ್ಲೂ ಒತ್ತಡದಲ್ಲಿ ಅವರು ಅಂಜಿಕೆಯಿಲ್ಲದೆ ದೊಡ್ಡ ಹೊಡೆತಗಳನ್ನು ಬಾರಿಸುತ್ತಿದ್ದ ರೀತಿಯನ್ನು ಎಲ್ಲರೂ ಕೊಂಡಾಡಿದರು. ಈ ಪರಿಯ ಸ್ತಿರ ಬ್ಯಾಟಿಂಗ್ ನಿಂದ ಚುಟುಕು ಕ್ರಿಕೆಟ್ ನಲ್ಲಿ ತಮ್ಮ ವರ‍್ಚಸ್ಸು ಹೆಚ್ಚಿಸಿಕೊಂಡ ಮನೀಶ್ ರಿಗೆ ಬರೋಬ್ಬರಿ 11 ಕೋಟಿ ರೂಪಾಯಿ ತೆತ್ತು 2018 ರಲ್ಲಿ ಹೈದರಾಬಾದ್ ತಂಡ ಅವರ ಬ್ಯಾಟಿಂಗ್ ಬಲ ಪಡೆಯಿತು. ಅಲ್ಲಿಂದ ಮೂರು ವರುಶಗಳ ಕಾಲ ಪ್ರಶಸ್ತಿ ಗೆಲ್ಲಿಸಲಾಗದಿದ್ದರೂ ಅವರು ನಿರಂತರ ರನ್ ಗಳಿಕೆಯಿಂದ ತಂಡದ ಬ್ಯಾಟಿಂಗ್ ಶಕ್ತಿಯಾಗಿ ತಂಡಕ್ಕೆ ಆಸರೆಯಾಗಿದ್ದಾರೆ. ಒಟ್ಟು 151 ಐಪಿಎಲ್ ಪಂದ್ಯಗಳನ್ನು ಐದು ತಂಡಗಳ ಪರ ಆಡಿರುವ ಮನೀಶ್ 1 ಶತಕ ಹಾಗೂ 20 ಅರ‍್ದಶತಕಗಳೊಂದಿಗೆ 122 ರ ಸ್ಟ್ರೈಕ್ ರೇಟ್ ನಲ್ಲಿ 3,461 ರನ್ ಗಳಿಸಿದ್ದಾರೆ. ದೇಸೀ ಕ್ರಿಕೆಟ್ ಹಾಗೂ ಎಪಿಎಲ್ ಎರಡರಲ್ಲೂ ಯಶಸ್ಸು ಕಂಡಿರುವ ಕೆಲವೇ ಕೆಲವು ಆಟಗಾರರ ಪೈಕಿ ಮನೀಶ್ ಕೂಡ ಒಬ್ಬರು. ಎಲ್ಲಾ ಬಗೆಯ ಆಟದಲ್ಲೂ ರನ್ ಗೋಪುರ ಕಟ್ಟಿದ್ದರಿಂದಲೇ ಅವರಿಗೆ ಬಾರತ ತಂಡದಲ್ಲಿ ಎಡೆ ದೊರಕಿತು.

ಅಂತರಾಶ್ಟ್ರೀಯ ಕ್ರಿಕೆಟ್ ಬದುಕು

ಸುಮಾರು ಏಳು ವರುಶಗಳ ನಿರಂತರ ಪರಿಶ್ರಮ ಹಾಗೂ ದೇಸೀ ಕ್ರಿಕೆಟ್ ನಲ್ಲಿ ಹೇರಳವಾದ ರನ್ ಗಳಿಕೆಯಿಂದ ಮನೀಶ್ ಕಡೆಗೂ ಅಂತರಾಶ್ಟ್ರೀಯ ಆಟಗಾರರಾಗುತ್ತಾರೆ. 2015 ರಲ್ಲಿ ಜಿಂಬಾಬ್ವೆ ಎದುರು ಹರಾರೆಯಲ್ಲಿ ಮನೀಶ್ ತಮ್ಮ ಚೊಚ್ಚಲ ಒಂದು ದಿನದ ಪಂದ್ಯದಲ್ಲೇ ಆಕರ‍್ಶಕ 71 ರನ್ ಗಳಿಸಿ ಅಂತರಾಶ್ಟ್ರೀಯ ಕ್ರಿಕೆಟ್ ಆಡಲು ತಮ್ಮಲ್ಲಿರುವ ಅಳವನ್ನು ಸಾಬೀತು ಮಾಡಿದರು. ಅದೇ ಪ್ರವಾಸದ ವೇಳೆ ಟಿ-20 ಪಂದ್ಯಗಳಲ್ಲಿಯೂ ಅವರು ಬಾರತದ ಪರ ಮೊದಲ ಬಾರಿಗೆ ಕಣಕ್ಕಿಳಿದರು. ಆ ಬಳಿಕ 2016 ರಲ್ಲಿ ಆಸ್ಟೇಲಿಯಾ ಎದುರು ಸಿಡ್ನಿಯಲ್ಲಿ 331 ರನ್ ಗಳ ಗುರಿ ಬೆನ್ನೆತ್ತಿ ಹೊರಟಿದ್ದ ಬಾರತವನ್ನು ಅವರು ಕೇವಲ 81 ಎಸೆತಗಳಲ್ಲಿ ಬಿರುಸಿನ ಶತಕ (104*) ಗಳಿಸಿ ದಡ ಸೇರಿಸಿದರು. ಈ ಶತಕ ಬಾರತಕ್ಕೆ 5-0 ಸೋಲಿನಿಂದ ಸರಣಿಯಲ್ಲಿ ಆಗಲಿದ್ದ ತೀವ್ರ ಮುಜುಗುರವನ್ನು ತಪ್ಪಿಸುವುದು ಮಾತ್ರವಲ್ಲದೆ ಆ ಸರಣಿಯಲ್ಲಿ ಬಾರತಕ್ಕೆ ದಕ್ಕಿದ ಏಕೈಕ ಗೆಲುವಿಗೆ ಕಾರಣರಾದ ಮನೀಶ್ ರ ಬವಿಶ್ಯಕ್ಕೆ ಬದ್ರ ಬುನಾದಿ ಕೂಡ ಹಾಕಿಕೊಟ್ಟಿತು. ಆದರೆ ನಂತರ ಅದೇ ವರುಶ ತವರಿನಲ್ಲಿ ನ್ಯೂಜಿಲ್ಯಾಂಡ್ ಎದುರು ನಡೆದ ಸರಣಿಯಲ್ಲಿ ವೈಪಲ್ಯ ಅನುಬವಿಸಿದ ಅವರಿಗೆ 2017 ರಿಂದಾಚೆಗೆ ನಿರಂತರವಾಗಿ ಅವಕಾಶಗಳು ಸಿಗಲೇ ಇಲ್ಲ. ಒಂದು ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಕಳುಹಿಸಿದರೆ ಅದರ ಮುಂದಿನ ಪಂದ್ಯದಲ್ಲೇ ಅವರನ್ನು ಆರನೇ ಕ್ರಮಾಂಕಕ್ಕೆ ತಳ್ಳಲ್ಪಡಲಾಗುತ್ತಿತ್ತು. ಈ ಗೊಂದಲದಿಂದ ಮನೀಶ್ ರಿಗೂ ನೆಲೆಯೂರಲು ಆಗಲೇ ಇಲ್ಲ. ಈ ಮದ್ಯೆ 2017 ರಲ್ಲಿ ಅವರು ಬಾರತ-ಎ ತಂಡದ ನಾಯಕನಾಗಿ ದಕ್ಶಿಣ ಆಪ್ರಿಕಾದಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಒಮ್ಮೆ ಮಾತ್ರ ಔಟಾಗಿ ಒಟ್ಟು 307 ರನ್ ಗಳಿಸಿ ಸರಣಿ ಗೆದ್ದರೆ, 2018 ರಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಶಿಣ ಆಪ್ರಿಕಾದೊಂದಿಗೆ ಬಾರತದಲ್ಲಿ ನಡೆದ ಕ್ವಾಡ್ರಾಂಗುಲರ್ ಸರಣಿಯನ್ನೂ ಬಾರತ-ಬಿ ನಾಯಕನಾಗಿ ಗೆಲ್ಲುವುದರ ಜೊತೆಗೆ ಒಮ್ಮೆಯೂ ಔಟಾಗದೆ ಒಟ್ಟು 306 ರನ್ ಗಳಿಸಿದರು. ಇದರ ಬೆನ್ನಲ್ಲೇ ಮತ್ತೊಮ್ಮೆ ಬಾರತ-ಎ ತಂಡದ ನಾಯಕನಾಗಿ ನ್ಯೂಜಿಲ್ಯಾಂಡ್ ನಲ್ಲಿ (3-0) ಸರಣಿ ಗೆಲ್ಲುವುದರ ಜೊತೆಗೆ 158 ರನ್ ಗಳಿಸಿ ಮಿಂಚಿದರು. ಬಳಿಕ 2019 ರಲ್ಲಿ ವೆಸ್ಟ್ ಇಂಡೀಸ್ ನಲ್ಲೂ ಮನೀಶ್ ಮತ್ತೊಮ್ಮೆ ಬಾರತ-ಎ ತಂಡದ ಮುಂದಾಳಾಗಿ 162 ರನ್ ಗಳಿಸಿ (4-1) ರಿಂದ ಸರಣಿ ಗೆಲ್ಲಿಸಿ, ಬಾರತ ತಂಡಕ್ಕೆ ಮರಳಿದರೂ ಅವರಿಗೆ ಒಂದು ಎಡೆಯಲ್ಲಿ ನಿಂತು ಬ್ಯಾಟಿಂಗ್ ಮಾಡಲು ಅವಕಾಶ ಸಿಗುವುದೇ ಇಲ್ಲ. ನಾಯಕ ಹಾಗೂ ಕೋಚ್ ನ ಎಡೆಬಿಡದ ಪ್ರಯೋಗಗಳಿಗೆ ಕರ‍್ನಾಟಕದ ಈ ಪ್ರತಿಬಾಶಾಲಿ ಬ್ಯಾಟ್ಸ್ಮನ್ ಬಲಿಯಾದದ್ದು ಸುಳ್ಳಲ್ಲ. ಹೀಗೆ ತಂಡದ ಒಳಗೂ ಹೊರಗೂ ಇದ್ದುದ್ದರಿಂದ 2019 ರ ವಿಶ್ವಕಪ್ ನಲ್ಲೂ ಆಡುವ ಅವಕಾಶ ಮನೀಶ್ ರ ಕೈ ತಪ್ಪಿತು. ನಂತರ 2020 ರಲ್ಲಿ ಮತ್ತೆ ಎರಡು ಪ್ರತ್ಯೇಕ ಸರಣಿಗಳಲ್ಲಿ ಮೂರು ಪಂದ್ಯಗಳಲ್ಲಿ ಮಾತ್ರ ಅವಕಾಶ ನೀಡಿ ಅವರನ್ನು ಕೈಬಿಡಲಾಯಿತು. ಬಳಿಕ 2021 ರ ಶ್ರೀಲಂಕಾ ಪ್ರವಾಸಕ್ಕೆ ಮುಕ್ಯ ಆಟಗಾರರು ಇಲ್ಲದ ಕಾರಣ ಮನೀಶ್ ರಿಗೆ ಮತ್ತೊಮ್ಮೆ ಮಣೆ ಹಾಕಲಾಯಿತು. ಆದರೆ ಆಡಿದ ಎಲ್ಲಾ ಪಂದ್ಯಗಳಲ್ಲಿ ಒಳ್ಳೆ ಆರಂಬ ಪಡೆದ ಮೇಲೂ ದೊಡ್ಡ ಮೊತ್ತ ಪೇರಿಸದೆ ನಿರಾಸೆ ಮೂಡಿಸಿದರು. ಆರು ವರುಶಗಳ ಕಾಲ 67 ಒಂದು ದಿನದ ಪಂದ್ಯಗಳಲ್ಲಿ ಬಾರತ ತಂಡದೊಂದಿಗೆ ಇದ್ದರೂ ಅವರಿಗೆ ಆಡುವ ಹನ್ನೊಂದರಲ್ಲಿ ಎಡೆ ಸಿಕ್ಕಿದ್ದು ಕೇವಲ 29 ಪಂದ್ಯಗಳಲ್ಲಿ ಎಂದರೆ ಮನೀಶ್ ರನ್ನು ತಂಡದ ಚುಕ್ಕಾಣಿ ಹಿಡಿದಿರುವವರು ನಡೆಸಿಕೊಂಡ ರೀತಿ ಎಂತಹುದು ಎಂದು ಯಾರಾದರೂ ಊಹಿಸಬಹುದು. ಹಾಗೂ 2017 ರಿಂದ 2020 ರ ವರೆಗೂ ನಿರಂತರವಾಗಿ ಕನಿಶ್ಟ ಮೂರು ಪಂದ್ಯಗಳಲ್ಲಿ ಆಡುವ ಅವಕಾಶ ಒಮ್ಮೆಯೂ ಸಿಕ್ಕಿಲ್ಲವೆಂಬುವುದೂ ಕೂಡ ಗಮನಿಸಬೇಕಾದ ವಿಶಯ. ಒಟ್ಟು 29 ಒಂದು ದಿನದ ಪಂದ್ಯಗಳನ್ನು ಆಡಿರುವ ಅವರು 1 ಶತಕ ಹಾಗೂ 2 ಅರ‍್ದ ಶತಕಗಳೊಂದಿಗೆ 33 ರಸರಾಸರಿಯಲ್ಲಿ 566 ರನ್ ಗಳಿಸಿದ್ದಾರೆ.

ಇನ್ನು ಇದೇ ಹೊತ್ತಿನಲ್ಲಿ ಟಿ-20 ಬಗೆಯ ಪಂದ್ಯಗಳಲ್ಲಿಯೂ ಸದಾ ತಂಡದ ಹೊರಗೂ ಒಳಗೂ ಇರುತ್ತಿದ್ದ ಮನೀಶ್ ರಿಗೆ ಬ್ಯಾಟಿಂಗ್ ಅವಕಾಶ ಹೆಚ್ಚಾಗಿ ಸಿಕ್ಕಿದ್ದು ಕೆಳಗಿನ ಕ್ರಮಾಂಕದಲ್ಲಿ. ಆದರೂ ಕಡಿಮೆ ಚೆಂಡುಗಳನ್ನು ಎದುರಿಸುವ ಪರಿಸ್ತಿತಿಯಲ್ಲೂ ಸಿಕ್ಕ ಅವಕಾಶಗಳನ್ನು ಪೋಲು ಮಾಡದೆ ಅವರು ಚಾಪು ಮೂಡಿಸಿದರು. ಆಡಿರುವ 39 ಟಿ-20 ಪಂದ್ಯಗಳಲ್ಲಿ 126 ರ ಸ್ಟ್ರೈಕ್ ರೇಟ್ ಹಾಗೂ 44 ರ ಸರಾಸರಿಯಲ್ಲಿ 3 ಅರ‍್ದಶತಕಗಳೊಂದಿಗೆ 709 ರನ್ ಗಳಸಿದ್ದಾರೆ. ಇನ್ನು ಪೀಲ್ಡಿಂಗ್ ನಲ್ಲಿ ಅವರು ತಂಡದ ಒಂದು ದೊಡ್ಡ ಶಕ್ತಿ ಎಂಬುದು ಜಗಜ್ಜಾಹೀರಾದ ಸಂಗತಿ. ಹೀಗಿರುವಾಗಲೂ 2021 ರಲ್ಲಿ ಹಟಾತ್ತನೆ ಮನೀಶ್ ರನ್ನು ಬಿ.ಸಿ.ಸಿ.ಐ ಆಟಗಾರರ ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಯಿತು. ಇದು ದೊಡ್ಡ ಆಗಾತ ಎಂದೇ ಹೇಳಬೇಕು. ಏಕೆಂದರೆ ಅವರಾಡಿದ ಕಡೇ ಎಂಟು ಟಿ-20 ಪಂದ್ಯಗಳಲ್ಲಿ ಔಟಾಗಿದ್ದದ್ದು ಒಮ್ಮೆ ಮಾತ್ರ. ಹೀಗೆ ಸ್ತಿರ ಪ್ರದರ‍್ಶನ ನೀಡುತ್ತಿದ್ದ ಒಬ್ಬ ಆಟಗಾರನನ್ನು ಏಕಾಏಕಿ ತಂಡದಿಂದ ಕೈಬಿಟ್ಟದ್ದು ಇದೇ ಮೊದಲು. ಇನ್ನೂ ಯಾವ ವಿಶ್ಲೇಶಕರೂ, ಮಾಜಿ ಆಟಗಾರರೂ ಮನೀಶ್ ರ ಪರ ಅವರಿಗಾದ ಅನ್ಯಾಯದ ಬಗ್ಗೆ ದನಿ ಎತ್ತದೇ ಇರುವುದು ವಿಶಾದನೀಯ.

ಕರ‍್ನಾಟಕದ ಬೆನ್ನೆಲುಬು ನಾಯಕ ಮನೀಶ್

ರಾಜ್ಯದ ಎಲ್ಲಾ ವಯೋಮಿತಿಯ ಪಂದ್ಯಾವಳಿಗಳಲ್ಲಿ ಆಡುವ ದಿನಗಳಿಂದಲೇ ಎಲ್ಲರೊಂದಿಗೆ ಬೆರೆತು ಕನ್ನಡ ಕಲಿತ ಮನೀಶ್ ಹಂತಹಂತವಾಗಿ ಬೆಳೆದು ಈಗ ಕರ‍್ನಾಟಕ ತಂಡದ ಪೂರ‍್ಣಪ್ರಮಾಣ ನಾಯಕನ ಮಟ್ಟಕ್ಕೆ ಏರಿದ್ದಾರೆ. ಸ್ಲಿಪ್ಸ್ ನಲ್ಲಿ ನಿಂತು ಮಾರ‍್ಗದರ‍್ಶನ ನೀಡುತ್ತಾ ಕನ್ನಡದಲ್ಲಿ ಅವರು ಬೌಲರ್ ಗಳನ್ನು ಹುರಿದುಂಬಿಸುವ ರೀತಿ ನಿಜಕ್ಕೂ ಮೆಚ್ಚುವಂತದ್ದು. ತಂಡ ಎಂತಹ ಸಂಕಶ್ಟದ ಪರಿಸ್ತಿತಿಯಲ್ಲಿದ್ದರೂ ಮನೀಶ್ ಕ್ರೀಸ್ ನಲ್ಲಿದ್ದಾರೆ ಎಂದರೆ ಸಹ ಆಟಗಾರರೂ, ಅಬಿಮಾನಿಗಳೂ ನಿರಾಳವಾಗಿರುತ್ತಾರೆ ಎಂಬುದು ದಿಟ. ಒತ್ತಡದಲ್ಲಿದ್ದರೂ, ದೊಡ್ಡ ಪಂದ್ಯಗಳಲ್ಲಿ ನಿರಾಯಾಸವಾಗಿ ರನ್ ಗಳಿಸುವುದು ಅವರ ವಿಶೇಶ ಚಳಕ. ತಮ್ಮ ಬಿರುಸಿನ ಬ್ಯಾಟಿಂಗ್ ನಿಂದ ಕರ‍್ನಾಟಕ ತಂಡಕ್ಕೆ ಸಾಕಶ್ಟು ಬಾರಿ ನೆರವಾಗಿ ಹಲವಾರು ಗೆಲುವುಗಳಿಗೆ ಮುನ್ನುಡಿ ಬರೆದಿರುವುದು ನಮ್ಮ ಮನೀಶ್ ರ ಹೆಗ್ಗಳಿಕೆ. 2013/14 ರಣಜಿ ಟೂರ‍್ನಿಯಲ್ಲಿ ಬೆಂಗಳೂರಿನಲ್ಲಿ ಮುಂಬೈ ಎದುರು ನಡೆದ ಪಂದ್ಯದಲ್ಲಿ ಇನ್ನಿಂಗ್ಸ್ ಹಿನ್ನಡೆ ಅನುಬವಿಸಿದ್ದ ರಾಜ್ಯ ತಂಡವನ್ನು ಎರಡನೇ ಇನ್ನಿಂಗ್ಸ್ ಲಿ ತಮ್ಮ ಸಿಡಿಲಬ್ಬರದ ಶತಕದಿಂದ (119) ಕಾಪಾಡಿ ಗೆಲುವು ತಂದಿತ್ತರು. ಇದು ಮುಂಬೈ ಎದುರು 80 ವರುಶಗಳಲ್ಲಿ ಕರ‍್ನಾಟಕ ದಾಕಲಿಸಿದ ಮೊದಲ ನೇರ (outright) ಐತಿಹಾಸಿಕ ಗೆಲುವು. 2015 ರ ಇರಾನಿ ಕಪ್ ಗೆಲುವಿನಲ್ಲೂ ತಮ್ಮ ವೇಗದ ಶತಕದಿಂದ (123*) ತಂಡಕ್ಕೆ ನೆರವಾದರು. ಹೀಗೆ ನಿಯಮಿತ ಓವರ್ ಗಳ ವಿಜಯ್ ಹಜಾರೆ ಮತ್ತು ಮುಶ್ತಾಕ್ ಅಲಿ ಟೂರ‍್ನಿ ಗೆಲುವುಗಳಲ್ಲಿಯೂ ತಮ್ಮ ಬ್ಯಾಟಿಂಗ್ ನಿಂದ ಕೊಡುಗೆ ನೀಡಿರುವ ಮನೀಶ್ ರಾಜ್ಯದ ಬ್ಯಾಟಿಂಗ್ ಬೆನ್ನೆಲುಬು ಎಂದರೆ ತಪ್ಪಾಗಲಾರದು. ಪಿಚ್ ಎಂತಹುದೇ ಇರಲಿ, ಎದುರಾಳಿ ಬೌಲರ್ ಗಳು ಎಂತವರೇ ಇರಲಿ, ಅವರ ರನ್ ಗಳಿಕೆ ಮಾತ್ರ ಸದಾ ಮಿಂಚಿನ ವೇಗದಲ್ಲೇ ಇರುವುದು ಅವರ ಬ್ಯಾಟಿಂಗ್ ನ ವಿಶೇಶತೆ. ಇನ್ನು ರಾಜ್ಯ ತಂಡದ ಪರ ಅವರ ಬದ್ದತೆ ಅಂತೂ ದಿಟವಾಗಿಯೂ ಅನನ್ಯವಾದುದು. 2019 ರ ಡಿಸೆಂಬರ್ ನಲ್ಲಿ ತಮ್ಮ ಮದುವೆ ಹಿಂದಿನ ದಿನ ನಾಯಕನಾಗಿ ಕರ‍್ನಾಟಕದ ಪರ ಮುಶ್ತಾಕ್ ಅಲಿ ಪಂದ್ಯಾವಳಿಯ ಪೈನಲ್ ನಲ್ಲಿ ತಮಿಳು ನಾಡು ಎದುರು ಸೂರತ್ ನಲ್ಲಿ ಕಣಕ್ಕಿಳಿದು, ಸೊಗಸಾದ ಅಜೇಯ 60 ರನ್ ಗಳಿಸಿ ಟೂರ‍್ನಿ ಗೆಲುವು ದಕ್ಕಿಸಿಕೊಟ್ಟರು. ಆ ಬಳಿಕ ತಡರಾತ್ರಿ ಪ್ರಯಾಣ ಮಾಡಿ ಮದುವೆ ದಿನದ ಬೆಳಗ್ಗೆಯಶ್ಟೇ ಊರು ತಲುಪಿದ್ದು ರಾಜ್ಯ ತಂಡದ ಮೇಲೆ ಅವರಿಗಿರುವ ಒಲವಿಗೆ ಸರಿಯಾದ ಎತ್ತುಗೆ. ಅಂತರಾಶ್ಟ್ರೀಯ ಕ್ರಿಕೆಟ್ ಆಡುತ್ತಿದ್ದ ಹೊತ್ತಿನಲ್ಲಿ ಬಿಡುವು ದೊರೆತಾಗಲೂ ಅವರು ತಡ ಮಾಡದೆ ಒಡನೆ ರಾಜ್ಯ ತಂಡವನ್ನು ಬಂದು ಸೇರಿಕೊಳ್ಳುತ್ತಿದ್ದದ್ದು ಮಾತ್ರವಲ್ಲದೆ, “ನನ್ನ ರಾಜ್ಯದ ಪರ ಆಡುವುದು ನನಗೆ ಹೆಮ್ಮೆಯ ವಿಶಯ” ಎಂದು ಹಿಂಜರಿಕೆಯಿಲ್ಲದೆ ಹೇಳಿಕೊಂಡಿದ್ದಾರೆ. ಹಾಗಾಗಿ ಮನೀಶ್ ಕರ‍್ನಾಟಕದ ಅಬಿಮಾನಿಗಳ ಮನಸ್ಸಿನಲ್ಲಿ ವಿಶೇಶ ಎಡೆ ಸಂಪಾದಿಸಿದ್ದಾರೆ. ಇಲ್ಲಿಯವೆರೆಗೂ 13 ವರುಶಗಳ ಕಾಲ ಕರ‍್ನಾಟಕದ ಪರ ಆಡಿರುವ ಮನೀಶ್ ಎರಡು ರಣಜಿ ಟೂರ‍್ನಿ, ಎರಡು ಇರಾನಿ ಟೂರ‍್ನಿ, ಮೂರು ವಿಜಯ್ ಹಜಾರೆ ಟೂರ‍್ನಿ ಹಾಗೂ ಎರಡು ಮುಶ್ತಾಕ್ ಅಲಿ ಟೂರ‍್ನಿ ಗೆದ್ದಿದ್ದಾರೆ. ಈ ಎಲ್ಲಾ ಗೆಲುವುಗಳಲ್ಲಿ ಅವರ ಅಪಾರ ಕೊಡುಗೆಯ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅವುಗಳಲ್ಲಿ ತಂಡದ ಮುಂದಾಳುವಾಗಿ ಒಂದು ವಿಜಯ್ ಹಜಾರೆ ಟೂರ‍್ನಿ ಹಾಗೂ ಎರಡು ಮುಶ್ತಾಕ್ ಅಲಿ ಟೂರ‍್ನಿ ಗೆದ್ದಿರುವುದು ವಿನಯ್ ರಂತಹ ದಿಗ್ಗಜ ನಾಯಕನ ಸ್ತಾನವನ್ನು ಅವರು ತುಂಬಿದ್ದಾರೆ ಎಂಬುದಕ್ಕೆ ಸಾಕ್ಶಿ. ರಾಜ್ಯದ ಟಿ-20 ಪಂದ್ಯಾವಳಿಯಾದ ನಮ್ಮ ಕೆ.ಪಿ.ಎಲ್ ನಲ್ಲೂ ಮೈಸೂರು ಮತ್ತು ಬೆಳಗಾವಿ ತಂಡಗಳ ಪರ ಆಡುತ್ತಾ ತಮ್ಮ ಅನುಬವದಿಂದ ಯುವ ಆಟಗಾರರಿಗೆ ಮಾರ‍್ಗದರ‍್ಶಕರಾಗಿದ್ದರು. ಒಟ್ಟು 91 ಮೊದಲ ದರ‍್ಜೆ ಪಂದ್ಯಗಳಲ್ಲಿ 5 ದ್ವಿಶತಕ, 19 ಶತಕ ಹಾಗೂ 29 ಅರ‍್ದಶತಕಗಳೊಂದಿಗೆ 51 ರಸರಾಸರಿಯಲ್ಲಿ 6,389 ರನ್ ಗಳಿಸಿರುವ ಮನೀಶ್ 166 ಲಿಸ್ಟ್-ಎ ಪಂದ್ಯಗಳಲ್ಲಿ 10 ಶತಕ ಮತ್ತು 33 ಅರ‍್ದಶತಕಗಳೊಂದಿಗೆ 94 ಸ್ಟ್ರೈಕ್ ರೇಟ್ ಹಾಗೂ 45 ರ ಸರಾಸರಿಯಲ್ಲಿ 5,485 ರನ್ ಗಳಿಸಿದ್ದಾರೆ. ದೇಸೀ ಕ್ರಿಕೆಟ್ ನಲ್ಲಿ ಅವರೊಬ್ಬ ದಿಗ್ಗಜ ಆಟಗಾರ ಎಂಬುದು ದಿಟ.

ಮನೀಶ್ ರಿಗೆ ಅದ್ರುಶ್ಟದ ಬಲ ಇದ್ದಿದ್ದರೆ?

ಸುಮಾರು ಒಂದೂವರೆ ದಶಕಗಳ ಕಾಲ ಮನೀಶ್ ರ ಆಟವನ್ನು ಕಂಡಿರುವ ಯಾರಾದರೂ ಅವರ ಅಳವಿಗೆ ಸರಿಯಾಗಿ ಸಿಗಬೇಕಾದ ಅವಕಾಶಗಳು ಸಿಗಲಿಲ್ಲ ಎಂದು ಹೇಳುತ್ತಾರೆ. ಸರಿಯಾಗಿ ಅವಕಾಶಗಳು ಸಿಕ್ಕಿದ್ದರೆ ಈ ವೇಳೆಗಾಗಲೇ ಅವರು ಕನಿಶ್ಟ 5 ಸಾವಿರ ಅಂತರಾಶ್ಟ್ರೀಯ ರನ್ ಗಳನ್ನು ಗಳಿಸಿರುತ್ತಿದ್ದರು ಎಂದು ಅವರ ಅಳವನ್ನು ತಿಳಿದವರಿಗೆ ಅನಿಸದೇ ಇರದು. ಆದರೆ ಎಲ್ಲಾ ಬಗೆಯ ಕ್ರಿಕೆಟ್ ನಲ್ಲೂ ಸೊಗಸಾದ ದಾಕಲೆ ಹೊಂದಿರುವ ಮನೀಶ್ ರ ಅಂತರಾಶ್ಟ್ರೀಯ ವ್ರುತ್ತಿ ಬದುಕು ಅವರು ನೆನೆದ ಹಾದಿಯಲ್ಲಿ ಸಾಗದಿರುವುದಕ್ಕೆ ಆಯ್ಕೆಗಾರರ ಮತ್ತು ತಂಡವನ್ನು ನಿಬಾಯಿಸುತ್ತಿರುವವರ ಬದಿಯೊಲವೇ ಕಾರಣ ಎಂಬುದು ಸುಳ್ಳಲ್ಲ. ಮೊದಲ ದರ‍್ಜೆ ಕ್ರಿಕೆಟ್ ನಲ್ಲಿ ಅಶ್ಟು ರನ್ಗಳಿಸಿರುವ ಈ ಕರ‍್ನಾಟಕದ ಬ್ಯಾಟ್ಸ್ಮನ್ ಗೆ ಟೆಸ್ಟ್ ಆಡಲು ಒಮ್ಮೆಯೂ ಅವಕಾಶ ನೀಡದೆ ಕೇವಲ ನಿಯಮಿತ ಓವರ್ ಗಳ ಆಟಗಾರ ಎಂಬ ಹಣೆಪಟ್ಟಿ ಹಚ್ಚಿದ್ದು ಬಾರತ ಕ್ರಿಕೆಟ್ ನ ಈ ದಶಕದ ದೊಡ್ಡ ದುರಂತಗಳಲ್ಲೊಂದು. ಸಾಂಪ್ರಾದಾಯಿಕ ಶೈಲಿಯಲ್ಲಿ ಅವರು ಬ್ಯಾಟ್ ಮಾಡುವುದಿಲ್ಲ, ಅವರ ಬ್ಯಾಟಿಂಗ್ ತಂತ್ರಗಾರಿಕೆ ಟೆಸ್ಟ್ ಗೆ ಹೊಂದಲ್ಲ ಎಂದು ಮೂದಲಿಸುವ ಮಾಜಿ ಆಟಗಾರರು ಮತ್ತು ವಿಮರ‍್ಶಕರು, ಮನೀಶ್ ತಮ್ಮದೇ ವಿಶೇಶ ಬಗೆಯಲ್ಲಿ ಆಡಿ ಸಾಂಪ್ರದಾಯಿಕ ಬ್ಯಾಟ್ಸ್ಮನ್ ಗಳಿಗಿಂತ ಹೆಚ್ಚು ರನ್ ಗಳಿಸಿರುವದನ್ನು, ದೊಡ್ಡ ದ್ವಿಶತಕಗಳನ್ನು ಬಾರಿಸಿರುವುದನ್ನು ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ಈಗಲೂ ವಿದೇಶದ ಟೆಸ್ಟ್ ಗಳಲ್ಲಿ ರನ್ ಗಳಿಸಲು ಹೆಣಗಾಡುವ ಆಟಗಾರರಿಗೆ ಮಣೆ ಹಾಕುವ ಆಯ್ಕೆಗಾರರ ಕಣ್ಣು ಮನೀಶ್ ಮೇಲೆ ಒಮ್ಮೆಯೂ ಬಿದ್ದಿಲ್ಲ ಎಂದರೆ ಅವರ ದುರಾದ್ರುಶ್ಟ ಎಂತಹುದು ಎಂದು ತಿಳಿಯುತ್ತದೆ. ಈ ಬಗೆಯ ಸಾಂಪ್ರದಾಯಿಕ ಬ್ಯಾಟಿಂಗ್ ಆಲೋಚನೆ ಇಂಗ್ಲೆಂಡ್ ಆಯ್ಕೆಗಾರರಿಗೆ ಇದ್ದಿದ್ದರೆ ಕೆವಿನ್ ಪೀಟರ‍್ಸನ್ ರಂತಹ ವಿಶೇಶ ಬಗೆಯ ದಿಗ್ಗಜ ಬ್ಯಾಟ್ಸ್ಮನ್ ನನ್ನು ನೋಡುವ ಅವಕಾಶ ವಿಶ್ವ ಕ್ರಿಕೆಟ್ ಕಳೆದುಕೊಳ್ಳುತ್ತಿತ್ತು ಎಂಬುದನ್ನು ಮರೆಯಬಾರದು. ಇಶ್ಟೆಲ್ಲಾ ತಾರತಮ್ಯಗಳನ್ನು ಅನುಬವಿಸಿದರೂ ಮನೀಶ್ ಮಾತ್ರ ತಮ್ಮ ಅಸಮಾದಾನವನ್ನು ಎಂದೂ ತೋರ‍್ಪಡಿಸಿಕೊಳ್ಳದೆ, ಬ್ಯಾಟ್ ನಿಂದ ಮಾತ್ರ ರನ್ ಗಳಿಕೆ ಇಂದಶ್ಟೇ ಸದ್ದು ಮಾಡುತ್ತಿದ್ದಾರೆ. ಕರ‍್ನಾಟಕ ಕ್ರಿಕೆಟ್ ನ ಸಂಬಾವಿತ ಆಟಗಾರರ ಪರಂಪರೆಯನ್ನು ಅಕ್ಶರಶಹ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. 31ರ ಹರೆಯದ ಮನೀಶ್ ರಲ್ಲಿ ಇನ್ನೂ ಸಾಕಶ್ಟು ಆಟ ಉಳಿದಿದೆ. ಅವರ ಬ್ಯಾಟಿಂಗ್ ನಲ್ಲಿ ಯಾವುದೇ ಬಗೆಯ ಕುಂದಿಲ್ಲ. ಈ ಸಾಲಿನ ರಣಜಿ ಟೂರ‍್ನಿಯನ್ನು ಕರ‍್ನಾಟಕದ ಮುಂದಾಳುವಾಗಿ ಗೆದ್ದು ಬಾರತ ತಂಡದ ಪರ ಟೆಸ್ಟ್ಆಡುವ ಅವಕಾಶ ಅವರು ಪಡೆಯಲಿ ಎಂದು ಹರಸೋಣ. ಹಾಗಾದರೆ ಮಾತ್ರ ಇಂತಹ ವಿಶೇಶ ಪ್ರತಿಬೆಗೆ ಸಿಗಬೇಕಾದ ಪುರಸ್ಕಾರ ಸಿಕ್ಕಂತೆ!

(ಚಿತ್ರ ಸೆಲೆ: facebook, espncricinfo.com, sportskeeda.com, sports.ndtv.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: