ಟೋಕಿಯೋ ಪ್ಯಾರಾಲಂಪಿಕ್ಸ್ 2021 – ಒಂದು ನೋಟ

– ರಾಮಚಂದ್ರ ಮಹಾರುದ್ರಪ್ಪ.

2021 ಟೋಕಿಯೋ ಪ್ಯಾರಾಲಂಪಿಕ್ಸ್

ಮೈಯಲ್ಲಿ ನಾನಾ ಬಗೆಯ ಕುಂದುಗಳು ಇರುವವರಿಗಾಗಿಯೇ ಒಲಂಪಿಕ್ಸ್ ಮಾದರಿಯಲ್ಲಿ ಈ ಆಟಗಾರರಿಗೂ ತಮ್ಮ ಅಳವು ತೋರಿಸಲು ಪ್ಯಾರಾಲಂಪಿಕ್ಸ್ ಅನ್ನು ಹುಟ್ಟು ಹಾಕಲಾಯಿತು. 1960 ರಲ್ಲಿ ಇಟಲಿಯ ರೋಮ್ ನಲ್ಲಿ ಮೊದಲ ಬಾರಿ ಪ್ಯಾರಾಲಂಪಿಕ್ಸ್ ನಡೆಯಿತು‌. ಅಲ್ಲಿಂದ ಪ್ರತೀ ನಾಲ್ಕು ವರುಶಗಳಿಗೆ ಒಮ್ಮೆ ಒಲಂಪಿಕ್ಸ್ ನಡೆಯುವ ಊರಿನಲ್ಲೇ ನಡೆಯುತ್ತಾ ಬಂದಿದೆ. ಈ ವಾಡಿಕೆಯಂತೆ ಈ ಬಾರಿಯ ಪ್ಯಾರಾಲಂಪಿಕ್ಸ್ ಟೋಕಿಯೋನಲ್ಲಿ ಇದೇ ಆಗಸ್ಟ್ 25 ರಿಂದ ಸೆಪ್ಟೆಂಬರ್ 6 ವರೆಗೂ ನಡೆಯಲಿದೆ.

ಪ್ಯಾರಾಲಂಪಿಕ್ಸ್ ನಲ್ಲಿ ಬಾರತದ ಸಾದನೆ

1968 ರ ಟೆಲ್-ಅವೀವ್ ಪ್ಯಾರಾಲಂಪಿಕ್ಸ್ ನಲ್ಲಿ ಮೊದಲ ಬಾರಿಗೆ ಪಾಲ್ಗೊಂಡ ಬಾರತ 1972 ರ ಹೈಡೆಲ್ಬರ‍್ಗ್ ಪ್ಯಾರಾಲಂಪಿಕ್ಸ್ ನಲ್ಲಿ ಗಂಡಸರ 50 ಮೀ ಪ್ರೀ-ಸ್ಟೈಲ್ ಈಜಿನಲ್ಲಿ ಮುರಳಿಕಾಂತ್ ಪೆಟ್ಕರ್ ರವರ ಬಂಗಾರದ ಪದಕದಿಂದ ಕಾತೆ ತೆರೆಯಿತು. ಆ ಬಳಿಕ 1976 ಹಾಗೂ 1980 ರ ಪೋಟಿಯಲ್ಲಿ ಪಾಲ್ಗೊಳ್ಳದಿದ್ದ ಬಾರತ 1984 ರಿಂದ ಪ್ರತೀ ಪ್ಯಾರಾಲಂಪಿಕ್ಸ್ ನಲ್ಲಿ ಕಣಕ್ಕಿಳಿದಿದೆ. 2016 ರ ರಿಯೋ ಪೋಟಿಯಲ್ಲಿ 2 ಬಂಗಾರ, 1 ಬೆಳ್ಳಿ ಹಾಗೂ 1 ಕಂಚಿನ ಪದಕದೊಂದಿಗೆ ಒಟ್ಟು 4 ಪದಕ ಗೆದ್ದಿರುವುದು ಈವರೆಗಿನ ಬಾರತದ ಶ್ರೇಶ್ಟ ಸಾದನೆ. 2012 ರ ಲಂಡನ್ ಪೋಟಿಯಲ್ಲಿ ಗಿರೀಶ ನಾಗರಾಜೇ ಗೌಡ ಹೈ-ಜಂಪ್ ನಲ್ಲಿ ಗೆದ್ದ ಬೆಳ್ಳಿ ಪದಕ ಕನ್ನಡಿಗನೊಬ್ಬನ ಮೊದಲ ಹಾಗೂ ಏಕೈಕ ಪದಕ. ಇಲ್ಲಿಯವರೆಗೂ ಬಾರತ 4 ಬಂಗಾರ, 4 ಬೆಳ್ಳಿ ಹಾಗೂ 4 ಕಂಚಿನ ಪದಗಳೊಂದಿಗೆ ಪ್ಯಾರಾಲಂಪಿಕ್ಸ್ ನಲ್ಲಿ ಒಟ್ಟು 12 ಪದಕಗಳನ್ನು ಗೆದ್ದಿದೆ.

2021 ರ ಪ್ಯಾರಾಲಂಪಿಕ್ಸ್

ಬಾರತ ಈ ಬಾರಿಯ ಟೋಕಿಯೋ ಪ್ಯಾರಾಲಂಪಿಕ್ಸ್ ಗೆ ಅತಿ ಹೆಚ್ಚು 54 ಆಟಗಾರರನ್ನು ಕಳಿಸಿದೆ. ಬಾರತದ ಪಡೆಯಲ್ಲಿ 40 ಗಂಡಸರು ಹಾಗೂ 14 ಹೆಂಗಸರು ಇದ್ದು, ಈ ಆಟಗಾರರು 9 ಬೇರೆ ಬೇರೆ ಪೋಟಿಗಳಲ್ಲಿ ಸೆಣಸಲಿದ್ದಾರೆ. ಇವರ ಪೈಕಿ ಕಳೆದ ಬಾರಿ ಜಾವೆಲಿನ್ ಎಸೆತದಲ್ಲಿ ಬಂಗಾರ ಗೆದ್ದಿದ್ದ ದೇವೇಂದ್ರ ಜಜಾರಿಯ ಮತ್ತು ಹೈ-ಜಂಪ್ ನಲ್ಲಿ ಬಂಗಾರ ಗೆದ್ದಿದ್ದ ಮರಿಯಪ್ಪನ್ ತಂಗವೇಲು ಕೂಡ ಇದ್ದಾರೆ. ಕರ‍್ನಾಟಕದ ಇಬ್ಬರು ಆಟಗಾರರು ಈ ಪಡೆಯಲ್ಲಿದ್ದಾರೆ. 2016 ರ ರಿಯೋ ಪೋಟಿಯಲ್ಲಿ ಕೇವಲ 19 ಮಂದಿ ಬಾರತೀಯರು ಪಾಲ್ಗೊಂಡಿದ್ದರು. ಈ ಬಾರಿ ಆ ಸಂಕ್ಯೆ ಸುಮಾರು ಮೂರು ಪಟ್ಟು ಹೆಚ್ಚು ಇರುವುದರಿಂದ ಹೆಚ್ಚು ಪದಕಗಳ ನಿರೀಕ್ಶೆ ಕೂಡ ಇದೆ. ಈ ಬಾರಿ ಬ್ಯಾಡ್ಮಿಂಟನ್ ಮತ್ತು ಟೇಕ್ವಾಂಡೋ[ಕಾಲು ಹಾಗೂ ಮುಶ್ಟಿಗಳನ್ನು ಬಳಸಿ ಆಡುವ ಸಮರ ಕಲೆ] ಪೋಟಿಗಳನ್ನು ಮೊದಲ ಬಾರಿಗೆ ಪ್ಯಾರಾಲಂಪಿಕ್ಸ್ ಗೆ ಸೇರಿಸಲಾಗಿದೆ. ಎರಡು ಬಾರಿ ವಿಶ್ವ ಚಾಂಪಿಯನ್ ಆಗಿರುವ ಪ್ರಮೋದ್ ಬಗತ್ ಮತ್ತು ಸದ್ಯಕ್ಕೆ 3ನೇ ರಾಂಕ್ ಪಡೆದಿರುವ ಸುಹಾಸ್ ಯತಿರಾಜ್ ರಿಂದ ಬ್ಯಾಡ್ಮಿಂಟನ್ ನಲ್ಲಿ ಬಾರತ ಪದಕ ಎದುರು ನೋಡುತ್ತಿದೆ. ಹಾಗೂ ಟೇಕ್ವಾಂಡೋನಲ್ಲಿ ಅರುಣಾ ತನ್ವಾರ್ ಕಣಕ್ಕಿಳಿಯಲಿದ್ದಾರೆ. ಹರ‍್ವಿಂದರ್‌ ಸಿಂಗ್ ಮತ್ತು ವಿವೇಕ್ ಚಿಕಾರ ಗಂಡಸರ ಬಿಲ್ಲುಗಾರಿಕೆಯಲ್ಲಿ ಅರ‍್ಹತೆ ಪಡೆದ ಮೊದಲ ಬಾರತೀಯರು ಎಂಬ ಹೆಗ್ಗಳಿಕೆಗೆ ಪಾತ್ರರಾದರೆ ಪ್ರಾಚೀ ಯಾದವ್ ಬಾರತದ ಮೊದಲ ಪ್ಯಾರಾಕನೂ ಪಟುವಾಗಲಿದ್ದಾರೆ. ಹಾಗೂ ಅವನಿ ಲೆಕೇರಾ ಹೆಂಗಸರ ಶೂಟಿಂಗ್ ನಲ್ಲಿ ಬಾರತವನ್ನು ಪ್ರತಿನಿದಿಸಲಿರುವ ಮೊದಲ ಆಟಗಾರ‍್ತಿ ಎಂಬ ಹಿರಿಮೆ ತಮ್ಮದಾಗಿಸಿಕೊಳ್ಳಲಿದ್ದಾರೆ. ಮತ್ತು ಕರ‍್ನಾಟಕದ ನಿರಂಜನ್ ಮುಕುಂದನ್ ಈಜಿನಲ್ಲಿ ಹಾಗೂ ಸಕೀನಾ ಕತುನ್ ಪವರ್ ಲಿಪ್ಟಿಂಗ್ ನಲ್ಲಿ ಸೆಣಸಲಿದ್ದಾರೆ.

ಪೋಟಿಗಳು ಮತ್ತು ಆಟಗಾರರು

ಆರ‍್ಚೆರಿ (ಬಿಲ್ಲುಗಾರಿಕೆ):

ಗಂಡಸರ ರೀಕರ‍್ವ್ ಒಂಟಿ ಪೋಟಿ : ಹರ‍್ವಿಂದರ್ ಸಿಂಗ್ ಮತ್ತು ವಿವೇಕ್ ಚಿಕಾರ.
ಗಂಡಸರ ಕಾಂಪೌಂಡ್ ಒಂಟಿ ಪೋಟಿ : ರಾಕೇಶ್ ಕುಮಾರ್ ಮತ್ತು ಶ್ಯಾಮ್ ಸುಂದರ್ ಸ್ವಾಮಿ.
ಹೆಂಗಸರ ಕಾಂಪೌಂಡ್ ಒಂಟಿ ಪೋಟಿ : ಜ್ಯೋತಿ ಬಲಿಯಾನ್.
ಕಾಂಪೌಂಡ್ ಮಿಶ್ರ ಪೋಟಿ : ಜ್ಯೋತಿ ಬಲಿಯಾನ್.

ಅತ್ಲೆಟಿಕ್ಸ್

ಗಂಡಸರು:

ಕ್ಲಬ್ ಎಸೆತ F51 : ಅಮಿತ್ ಕುಮಾರ್ ಸರೋಹಾ ಮತ್ತು ದರಂಬಿರ್ ನೈನ್.
ಡಿಸ್ಕಸ್ ಎಸೆತ F52 : ವಿನೋದ್ ಕುಮಾರ್.
ಡಿಸ್ಕಸ್ ಎಸೆತ F56 : ಯೋಗೇಶ್ ಕತೂನಿಯಾ.

ಹೈ-ಜಂಪ್ T47 : ನಿಶಾದ್ ಕುಮಾರ್ ಮತ್ತು ರಾಂಪಾಲ್.
ಹೈ-ಜಂಪ್ T63 : ಮರಿಯಪ್ಪನ್ ತಂಗವೇಲು, ಶರದ್ ಕುಮಾರ್ ಮತ್ತು ವರುಣ್ ಸಿಂಗ್ ಬಾಟಿ.
ಹೈ-ಜಂಪ್ T64 : ಪ್ರವೀಣ್ ಕುಮಾರ್.

ಜಾವೆಲಿನ್ ಎಸೆತ F41 : ನವದೀಪ್ ಸಿಂಗ್.
ಜಾವೆಲಿನ್ ಎಸೆತ F46 : ಸುಂದರ್ ಸಿಂಗ್ ಗುರ‍್ಜಾರ್, ಅಜೀತ್ ಸಿಂಗ್ ಮತ್ತು ದೇವಂದ್ರ ಜಜಾರಿಯಾ.
ಜಾವೆಲಿನ್ ಎಸೆತ F54 : ತೇಕ್ ಚಂದ್.
ಜಾವೆಲಿನ್ ಎಸೆತ F57 : ರಂಜೀತ್ ಬಾಟಿ.
ಜಾವೆಲಿನ್ ಎಸೆತ F64 : ಸಂದೀಪ್ ಚೌದರಿ ಮತ್ತು ಸುಮಿತ್ ಅಂತಿಲ್.

ಶಾಟ್ ಪುಟ್ ಎಸೆತ F35 : ಅರವಿಂದ್ ಮಲಿಕ್.
ಶಾಟ್ ಪುಟ್ ಎಸೆತ F57 : ಸೋಮನ್ ರಾಣಾ.

ಹೆಂಗಸರು:

100 ಮೀ ಓಟ T13 : ಸಿಮ್ರನ್ ಶರ‍್ಮಾ.
ಕ್ಲಬ್ ಎಸೆತ F51 : ಕಶೀಶ್ ಲಾಕ್ರಾ ಮತ್ತು ಏಕ್ತಾ ಬ್ಯಾನ್.
ಶಾಟ್ ಪುಟ್ ಎಸೆತ F54 : ಬಾಗ್ಯಶ್ರೀ ಮಾದವ್ರಾಯ್ ಜಾದವ್.

ಬ್ಯಾಡ್ಮಿಂಟನ್

ಗಂಡಸರು:

ಒಂಟಿ ಪೋಟಿ SL3 : ಪ್ರಮೋದ್ ಬಗತ್ ಮತ್ತು ಮನೋಜ್ ಸರ‍್ಕಾರ್.
ಒಂಟಿ ಪೋಟಿ SL4 : ತರುಣ್ ದಿಲ್ಲೊನ್ ಮತ್ತು ಸುಹಾಸ್ ಲಾಲಿನಕೆರೆ ಯತಿರಾಜ್.
ಒಂಟಿ ಪೋಟಿ SL4 : ಕ್ರಿಶ್ಣ ನಾಗರ್.

ಹೆಂಗಸರು:

ಒಂಟಿ ಪೋಟಿ SL4 : ಪರೂಲ್ ಪಾರ‍್ಮರ್.
ಒಂಟಿ ಪೋಟಿ SU5 : ಪಾಲಕ್ ಕೊಹ್ಲಿ.

ಜೋಡಿ ಪೋಟಿ SL3 – SU5 : ಪರೂಲ್ ಪಾರ‍್ಮರ್ ಮತ್ತು ಪಾಲಕ್ ಕೊಹ್ಲಿ.
ಮಿಶ್ರ ಜೋಡಿ ಪೋಟಿ SL3 – SU5 : ಪ್ರಮೋದ್ ಬಗತ್ ಮತ್ತು ಪಾಲಕ್ ಕೊಹ್ಲಿ.

ಪ್ಯಾರಾಕನೂ

ಹೆಂಗಸರ ಪೋಟಿ 200 ಮೀ VL2 : ಪ್ರಾಚೀ ಯಾದವ್.

ಪವರ್ ಲಿಪ್ಟಿಂಗ್

ಗಂಡಸರ 65 ಕೆಜಿ ಪೋಟಿ : ಜೈದೀಪ್ ದೆಸ್ವಾಲ್.
ಹೆಂಗಸರ 50 ಕೆಜಿ ಪೋಟಿ : ಸಕೀನಾ ಕತುನ್.

ಶೂಟಿಂಗ್

ಗಂಡಸರ 10 ಮೀ ಏರ್ ಪಿಸ್ತೋಲ್ (P1) : ಮನೀಶ್ ನರ‍್ವಾಲ್, ಸಿಂಗರಾಜ್ ಮತ್ತು ದೀಪೇಂದರ್ ಸಿಂಗ್.
ಗಂಡಸರ 10 ಮೀ ಏರ್ ರೈಪಲ್ ಸ್ಟಾಂಡಿಂಗ್ (R1) : ದೀಪಕ್ ಸೈನಿ ಮತ್ತು ಸ್ವರೂಪ್ ಮಹಾವೀರ್ ಉನ್ಹಾಲ್ಕರ್.
ಗಂಡಸರ 50 ಮೀ ರೈಪೆಲ್ 3P (R7) : ದೀಪಕ್ ಸೈನಿ.

ಹೆಂಗಸರ 10 ಮೀ ಏರ್ ಪಿಸ್ತೋಲ್ (P2) : ರುಬಿನಾ ಪ್ರಾನ್ಸಿಸ್.
ಹೆಂಗಸರ 10 ಮೀ ಏರ್ ರೈಪೆಲ್ ಸ್ಟಾಂಡಿಂಗ್ (R2) : ಅವನಿ ಲೆಕೇರಾ.
ಹೆಂಗಸರ 50 ಮೀ ಏರ್ ರೈಪೆಲ್ 3-P (R8) : ಅವನಿ ಲೆಕೇರಾ.

ಮಿಶ್ರ 25 ಮೀ ಪಿಸ್ತೋಲ್ (P3) : ರಾಹುಲ್ ಜಕಾರ್ ಮತ್ತು ಆಕಾಶ್.
ಮಿಶ್ರ 50 ಮೀ ಪಿಸ್ತೋಲ್ (P4) : ಮನೀಶ್ ನರ‍್ವಾಲ್, ಆಕಾಶ್ ಮತ್ತು ಸಿಂಗರಾಜ್.
ಮಿಶ್ರ 10 ಮೀ ಏರ್ ರೈಪೆಲ್ ಪ್ರೋನ್ (R3): ದೀಪಕ್ ಸೈನಿ, ಸಿದ್ದಾರ‍್ತ ಬಾಬು ಮತ್ತು ಅವನಿ ಲೆಕೇರಾ.
ಮಿಶ್ರ 50 ಮೀ ರೈಪೆಲ್ ಪ್ರೋನ್ (R6): ದೀಪಕ್ ಸೈನಿ, ಸಿದ್ದಾರ‍್ತ ಬಾಬು ಮತ್ತು ಅವನಿ ಲೆಕೇರಾ.

ಈಜು

ಗಂಡಸರ 50 ಮೀ ಬಟರ‍್ಪ್ಲೈ S7 : ನಿರಂಜನ್ ಮುಕುಂದನ್ ಮತ್ತು ಸುಯಾಶ್ ಜಾದವ್.
ಗಂಡಸರ 200 ಮೀ ಒಂಟಿ ಮೆಡ್ಲೀ SM7 : ಸುಯಾಶ್ ಜಾದವ್.

ಟೇಬಲ್ ಟೆನ್ನಿಸ್

ಹೆಂಗಸರ ಒಂಟಿ ಪೋಟಿ C3 : ಸೋನಲ್ಬೇನ್ ಮದುಬಾಯಿ ಪಟೇಲ್.
ಹೆಂಗಸರ ಒಂಟಿ ಪೋಟಿ C4 : ಬವೀನಾ ಹಸ್ಮುಕ್ ಬಾಯಿ ಪಟೇಲ್.

ಟೇಕ್ವಾಂಡೋ

ಹೆಂಗಸರ K44 – 49 ಕೆಜಿ ಪೋಟಿ : ಅರುಣಾ ತನ್ವಾರ್.

ಇತ್ತೀಚೆಗೆ ಕೊನೆಗೊಂಡ ಒಲಂಪಿಕ್ಸ್ ನಲ್ಲಿ ಬಾರತ ಒಟ್ಟು 7 ಪದಕಗಳನ್ನು ಗೆದ್ದು ಶ್ರೇಶ್ಟ ಸಾದನೆ ಮಾಡಿತು. ಇದೇ ರೀತಿ ಪ್ಯಾರಾಲಂಪಿಕ್ಸ್ ಪಟುಗಳು ಕೂಡ ಹೆಚ್ಚೆಚ್ಚು ಪದಕಗಳನ್ನು ಗೆಲ್ಲಲಿ ಎಂಬುವುದೇ ಎಲ್ಲರ ಹೆಬ್ಬಯಕೆ. ತಮ್ಮಲ್ಲಿರುವ ಕುಂದುಗಳಿಂದ ಎದೆಗುಂದದೆ ಅಂಜಿಕೆಯಿಲ್ಲದೆ ಮುನ್ನಡೆದು, ವರುಶಗಳ ಕಾಲ ಸಾಕಶ್ಟು ಶ್ರಮ ಪಟ್ಟು ಪ್ಯಾರಾಲಂಪಿಕ್ಸ್‌ಗೆ ಅರ‍್ಹತೆ ಪಡೆದಿರುವ ಪ್ರತೀ ಒಬ್ಬರೂ ದಂತಕತೆ ಎಂದರೆ ತಪ್ಪಾಗಲಾರದು. ಇವರ ಗಟ್ಟಿತನ, ತನ್ನಂಬಿಕೆ ಇತರರಿಗೂ ಮಾದರಿ. ಎಲೆ ಮರೆಯ ಕಾಯಿಯಂತಿರುವ ಈ ಪಟುಗಳನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಹೊಣೆ. ಈ ನಿಟ್ಟಿನಲ್ಲಿ ಕರ‍್ನಾಟಕ ಸರ‍್ಕಾರ, ಪ್ಯಾರಾಲಂಪಿಕ್ಸ್ ನಲ್ಲಿ ಪಾಲ್ಗೊಳ್ಳಲಿರುವ ನಮ್ಮ ನಾಡಿನ ನಿರಂಜನ್ ಮುಕುಂದನ್ ಮತ್ತು ಸಕೀನಾ ಕುತುನ್ ರಿಗೆ ಆಗಲೇ ತಲಾ 10 ಲಕ್ಶ ರೂಪಾಯಿಗಳ ಚೆಕ್ ನೀಡಿ ಮಂದಿಯಿಂದ ಮೆಚ್ಚುಗೆ ಗಳಿಸಿದೆ. ಹಾಗೂ ಬಂಗಾರದ ಪದಕ ಗೆದ್ದವರಿಗೆ 5 ಕೋಟಿ, ಬೆಳ್ಳಿಗೆ 3 ಕೋಟಿ ಮತ್ತು ಕಂಚಿಗೆ 2 ಕೋಟಿಗಳ ಉಡುಗೊರೆ ನೀಡುವುದಾಗಿ ಗೋಶಿಸಿ ನಮ್ಮ ಆಟಗಾರರನ್ನು ಪ್ರೋತ್ಸಾಹಿಸಿದೆ. ಇದೇ ಆಗಸ್ಟ್ 25 ರಂದು ಮೊದಲ್ಗೊಳ್ಳಲ್ಲಿರುವ ಪ್ಯಾರಾಲಂಪಿಕ್ಸ್ ನಲ್ಲಿ ಮಾರಿಯಪ್ಪನ್ ತಂಗವೇಲು ಬಾರತದ ಬಾವುಟ ಹಿಡಿದು (flag bearer) ಆಟಗಾರರನ್ನು ಮುನ್ನಡೆಸಲಿದ್ದಾರೆ. ನಮ್ಮ ಆಟಗಾರರು ಎಲ್ಲಾ ಪೋಟಿಗಳಲ್ಲೂ ಒಳ್ಳೆ ಸಾದನೆ ಮಾಡಿ ಹೆಚ್ಚು ಪದಕಗಳನ್ನು ಗೆದ್ದು ಬರಲಿ ಎಂದು ಹರಸೋಣ.

(ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *