ಶಾಂತಾ ರಂಗಸ್ವಾಮಿ – ಹೆಣ್ಣುಮಕ್ಕಳ ಕ್ರಿಕೆಟ್ ಗೆ ಅಡಿಪಾಯ ಹಾಕಿಕೊಟ್ಟ ಮುಂದಾಳು
ಬಾರತದಲ್ಲಿ ಕ್ರಿಕೆಟ್, ಹಲವಾರು ದಶಕಗಳಿಂದ ಜನಪ್ರಿಯ ಆಟವಾಗಿದ್ದರೂ ಹೆಣ್ಣುಮಕ್ಕಳ ಕ್ರಿಕೆಟ್ ಗೆ ಮೊದಲ ದಿನಗಳಲ್ಲಿ ಸಿಗಬೇಕಾದ ಪ್ರೋತ್ಸಾಹವಾಗಲೀ ನೆರವಾಗಲೀ ಸಿಕ್ಕಿರಲಿಲ್ಲ. ಅಂತಹ ಹೊತ್ತಿನಲ್ಲಿ ಬಾರತ ಕ್ರಿಕೆಟ್ ತಂಡದ ನೊಗ ಹೊತ್ತು ಆಟದ ಅಂಗಳದ ಹೊರಗೂ-ಒಳಗೂ ದುಡಿದು ಹೆಣ್ಣುಮಕ್ಕಳ ಕ್ರಿಕೆಟ್ ನ ಹಲವಾರು ಮೊದಲುಗಳಿಗೆ ಕಾರಣರಾದ ಕ್ರಿಕೆಟ್ ಆಟಗಾರ‍್ತಿ, ಹೆಣ್ಣುಮಕ್ಕಳ ತಂಡದ ಮೊದಲ ಮುಂದಾಳು, ಬಲಗೈ ಬ್ಯಾಟರ್ ಹಾಗೂ ಬಲಗೈ ಮದ್ಯಮ-ವೇಗಿಯಾಗಿದ್ದ ನಮ್ಮಹೆಮ್ಮೆಯ ಕನ್ನಡತಿ ಶಾಂತಾ ರಂಗಸ್ವಾಮಿಯವರು.
ಹುಟ್ಟು-ಎಳವೆಯ ಆಟದ ತುಡಿತ
ಜನವರಿ 1, 1954 ರಂದು ರಂಗಸ್ವಾಮಿ ಹಾಗೂ ರಾಜಲಕ್ಶ್ಮಿರವರ ಮೂರನೇ ಮಗಳಾಗಿ ಶಾಂತಾ ಹುಟ್ಟಿದರು. ಅವರ ತಂದೆಯ ಅಕಾಲ ಸಾವಿನಿಂದ ಏಳು ಮಂದಿ ಹೆಣ್ಣು ಮಕ್ಕಳ ಕುಟುಂಬವನ್ನು ನಡೆಸೋ ಹೊಣೆ ಅವರ ತಾಯಿಯವರ ಮೇಲೆ ಬೀಳುತ್ತದೆ. ಎಳವೆಯಲ್ಲೇ ಇಂತಹ ದೊಡ್ಡ ಆಗಾತವನ್ನು ಕಂಡ ಶಾಂತಾ ಗಟ್ಟಿಗಿತ್ತಿಯಾಗಿ ರೂಪುಗೊಂಡರು. ಶಾಲಾ ದಿನಗಳಿಂದಲೇ ಆಟೋಟಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದ ಅವರು ಮೊದಲು ಬ್ಯಾಡ್ಮಿಂಟನ್ ಆಡತೊಡಗಿದರು. ಬೆಂಗಳೂರಿನ ಕೆ.ಆರ್ ರಸ್ತೆಯಲ್ಲಿನ ಮನೆಯಲ್ಲಿ ಸುಮಾರು 20 ಮಂದಿ ಸೋದರಸಂಬಂದಿ ಮಕ್ಕಳೊಂದಿಗೆ (cousins) ಒಂದು ಅವಿಬಕ್ತ ಕುಟುಂಬದಲ್ಲಿ ಶಾಂತಾ ಬೆಳೆದರು. ಕ್ರಿಕೆಟ್ ಅವರ ಕುಟುಂಬದಲ್ಲಿ ಮೊದಲಿಂದಲೂ ಅವಿಬಾಜ್ಯ ಅಂಗವಾಗಿತ್ತು. ಅವರ ತಂದೆ ರಂಗಸ್ವಾಮಿ ಬಿನ್ನಿ ಮಿಲ್ಸ್ ತಂಡದ ಪರ ಆಪ್-ಸ್ಪಿನ್ನರ್ ಆಗಿ ವ್ರುತ್ತಿಪರ ಕ್ರಿಕೆಟ್ ಆಡಿದ್ದರು. ಕುಟುಂಬ ಸದಸ್ಯರೊಂದಿಗೆ ಬಿಡುವಿನ ವೇಳೆಯಲ್ಲಿ ಶಾಂತಾ ಕೂಡ ಕ್ರಿಕೆಟ್ ಆಡುತ್ತಿದ್ದರು. ವಾರಾಂತ್ಯದಲ್ಲಿ ಈ ಕ್ರಿಕೆಟ್ ಪಂದ್ಯಗಳಿಗೆ ಅವರ ಎರಡನೇ ಅಕ್ಕನವರ ಸಹಪಾಟಿಯಾಗಿದ್ದ, ಮುಂದೆ ಕನ್ನಡದ ದಿಗ್ಗಜ ನಟನಾಗಿ ಬೆಳೆದ ವಿಶ್ಣುವರ‍್ದನ್ ಕೂಡ ಪಾಲ್ಗೊಳ್ಳುತ್ತಿದ್ದರು. ಪೆನ್ಸಿಲ್, ಪೆನ್, ಇರೇಸರ್ ನಂತಹ ಬಹುಮಾನಗಳಿಗಾಗಿ ಪಂದ್ಯ ನಡೆಯುತ್ತಿದ್ದದ್ದು ವಿಶೇಶ. ಶಾಂತಾ ಅವರು ಮಹಿಳಾ ಸೇವಾ ಸಮಾಜ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿರುವಾಗ ಪ್ರತಿಶ್ಟಿತ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಾಗಿದ್ದ ಗೀತಾ ಮೆಮೋರಿಯಲ್ ಇಂಟರ್ ಸ್ಕೂಲ್ ಟೂರ‍್ನಿಯಲ್ಲಿ ತಮ್ಮ ಶಾಲಾ ತಂಡವನ್ನು ಮುನ್ನಡೆಸಿದರು. ಆ ಬಳಿಕ ವಿಜಯಾ ಕಾಲೇಜ್ ನಲ್ಲಿ ಕಲಿಕೆ ಮುಂದುವರೆಸಿದ ಶಾಂತಾ ಬಾಲ್ ಬ್ಯಾಡ್ಮಿಂಟನ್ ನಲ್ಲೂ ಪಕ್ವಗೊಳ್ಳುತ್ತಾ ಹೋದರು. 1971/72 ಮತ್ತು 1972/73 ರಲ್ಲಿ ಸತತ ಎರಡು ಬಾರಿ ರಾಶ್ಟ್ರೀಯ ಬ್ಯಾಡ್ಮಿಂಟನ್ ಟೂರ‍್ನಿ ಗೆದ್ದ ರಾಜ್ಯ ತಂಡದಲ್ಲಿ ಶಾಂತಾ ಇದ್ದರು. ಸಾಪ್ಟ್ ಬಾಲ್ ಆಟವನ್ನೂ ಕರಗತ ಮಾಡಿಕೊಂಡಿದ್ದ ಅವರು ರಾಜ್ಯ ತಂಡದ ಮೊದಲ ಮುಂದಾಳುವಾದರು. ಪಂದ್ಯಾವಳಿಯಲ್ಲಿ ಮಹಾರಾಣಿ ಪದ್ಮಿನಿ ಶ್ರೇಶ್ಟ ಆಲ್‌ರೌಂಡರ್ ಪ್ರಶಸ್ತಿ ಗೆದ್ದದ್ದು ಶಾಂತಾರವರ ಬಹುಮುಕ ಪ್ರತಿಬೆಗೆ ಎತ್ತುಗೆ.
ವ್ರುತ್ತಿಪರ ಕ್ರಿಕೆಟರ್ ಶಾಂತಾ
1973 ರಲ್ಲಿ ಹೆಣ್ಣುಮಕ್ಕಳ ಕ್ರಿಕೆಟ್ ಅದಿಕ್ರುತವಾಗಿ ಮೊದಲ್ಗೊಳ್ಳುವ ಮುನ್ನವೇ ಶಾಂತಾ ಅವರೇ ತಂಡವೊಂದನ್ನು ಕಟ್ಟಿಕೊಂಡು ನ್ಯಾಶನಲ್ ಹೈಸ್ಕೂಲ್ ಮೈದಾನದಲ್ಲಿರುವ ಪಾಲ್ಕನ್ ಸ್ಪೋರ‍್ಟ್ಸ್ ನಲ್ಲಿ ಕ್ರಿಕೆಟ್ ಆಡುತ್ತಿದ್ದರು. 1973 ರ ನವಂಬರ್ ನಲ್ಲಿ ನಡೆದ ರಾಶ್ಟ್ರೀಯ ಪಂದ್ಯಾವಳಿಗೆ ಶಾಂತಾ ಮೈಸೂರು ರಾಜ್ಯ ತಂಡದ ಮೊದಲ ಮುಂದಾಳುವಾಗಿ ಪೈನಲ್ ವರೆಗೂ ತಂಡವನ್ನು ಕೊಂಡೊಯ್ದು ಶ್ರೇಶ್ಟ ಆಲ್‌ರೌಂಡರ್ ಪ್ರಶಸ್ತಿ ಪಡೆದರು. ದಕ್ಶಿಣ ವಲಯದ ಮುಂದಾಳುವಾಗಿ ಟೂರ‍್ನಿ ಕೂಡ ಗೆದ್ದರು. ಶಾಂತಾ ಅವರಿಗೆ ನಾಯಕತ್ವದ ಗುಣಗಳು ಹುಟ್ಟಿನಿಂದ ಬಳುವಳಿಯಾಗಿ ಬಂದಿದ್ದರೂ ಅವರ ನೇರ ನಡೆ-ನುಡಿ ವ್ಯಕ್ತಿತ್ವದಿಂದ ರೆಬೆಲ್ ಎಂಬ ಹಣೆಪಟ್ಟಿ ಪಡೆದಿದ್ದರು. 1975 ರಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡದ ಎದುರಿನ ಪಂದ್ಯದಲ್ಲಿ ದಕ್ಶಿಣ ವಲಯದ ಮುಂದಾಳ್ತನ ವಹಿಸಲು ತಮಿಳುನಾಡಿನ ಸುದಾ ಹಾಗೂ ಕರ‍್ನಾಟಕದ ಶಾಂತಾರವರ ನಡುವೆ ಪೈಪೋಟಿ ಏರ‍್ಪಟ್ಟಾಗ ಕರ‍್ನಾಟಕದ ಆಯ್ಕೆಗಾರರು ಶಾಂತಾರನ್ನು ಮುಂದಾಳು ಮಾಡಲು ರಾಜಿ ಸೂತ್ರದ ಮೇರೆಗೆ ತಮಿಳುನಾಡಿನ ಎಂಟು ಆಟಗಾರ‍್ತಿಯರನ್ನು ಕಣಕ್ಕಿಳಿಸಲು ಒಪ್ಪಿಕೊಳ್ಳುತ್ತಾರೆ. ಇದನ್ನು ತಿಳಿದು ಶಾಂತಾ ಆಯ್ಕೆಗಾರರನ್ನು ತರಾಟೆಗೆ ತಗೆದುಕೊಳ್ಳುತ್ತಾರೆ. ನಮ್ಮ ರಾಜ್ಯದ ಆಟಗಾರ‍್ತಿಯರ ಅವಕಾಶ ಕಸಿದುಕೊಂಡು ಮುಂದಾಳುವಾಗುವುದು ತರವಲ್ಲ ಎಂದು ವಾದಿಸಿ ಆಯ್ಕೆಗಾರರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಶಾಂತಾರವರ ವರ‍್ತನೆಯಿಂದ ಸಿಟ್ಟಾದ ಆಯ್ಕೆಗಾರರು ಆ ಬಳಿಕ ಅವರನ್ನು ತಂಡದಿಂದ ಕೈಬಿಡಲು ನೋಡುತ್ತಿದ್ದಾಗ ಎರಡನೇ ಪಂದ್ಯದಲ್ಲಿ 92 ರನ್ ಗಳಿಸಿ 3 ವಿಕೆಟ್ ಪಡೆದು ತಮ್ಮ ಅಳವನ್ನು ಮತ್ತೊಮ್ಮೆ ಸಾಬೀತು ಮಾಡುತ್ತಾರೆ.
1976 ರಲ್ಲಿ ವೆಸ್ಟ್ ಇಂಡೀಸ್ ಎದುರು ಬೆಂಗಳೂರಿನಲ್ಲಿ ಬಾರತ ತನ್ನ ಮೊದಲ ಅದಿಕ್ರುತ ಟೆಸ್ಟ್ ಆಡಲು ಶಾಂತಾರ ಮುಂದಾಳ್ತನದಲ್ಲಿ ಕಣಕ್ಕಿಳಿಯಿತು. ಅವರು ಚೊಚ್ಚಲ ಪಂದ್ಯದಲ್ಲೇ 74 ರನ್ ಗಳಿಸಿ ಪಂದ್ಯವನ್ನು ಡ್ರಾ ಮಾಡುವಲ್ಲಿ ಯಶಸ್ವಿಯಾದರು. ಆರು ಟೆಸ್ಟ್ ಗಳ ಸರಣಿ 1-1 ರಿಂದ ಕೊನೆಗೊಂಡರೂ ಶಾಂತಾ 4 ಅರ‍್ದಶತಕಗಳೊಂದಿಗೆ 381 ರನ್ ಗಳಿಸುವುದರ ಜೊತೆಗೆ 8 ವಿಕೆಟ್ ಕೂಡ ಪಡೆದು ಶ್ರೇಶ್ಟ ಆಲ್‌ರೌಂಡರ್ ಎನಿಸಿಕೊಂಡರು. ನಂತರ 1977 ರ ನ್ಯೂಜಿಲ್ಯಾಂಡ್ ಪ್ರವಾಸದ ಡುನೆಡಿನ್ ಟೆಸ್ಟ್ ನಲ್ಲಿ ಸೊಗಸಾದ 108 ರನ್ ಪೇರಿಸಿ ಹೆಣ್ಣುಮಕ್ಕಳ ಕ್ರಿಕೆಟ್ ನಲ್ಲಿ ಬಾರತದ ಮೊದಲ ಶತಕ ದಾಕಲಿಸಿದರು. ಬಾರತದ ಪರ ಮೊದಲ ಸಿಕ್ಸ್ ಕೂಡ ಬಂದದ್ದು ಕೂಡ ಶಾಂತಾರ ಬ್ಯಾಟ್ ನಿಂದಲೇ! ಬಿರುಸಿನ ಹೊಡೆತಗಳಿಗೆ ಹೆಸರುವಾಸಿಯಾಗಿದ್ದ ಅವರು ಬ್ಯಾಟ್ ನಿಂದ ಸ್ಪಿನ್ ಹಾಗೂ ವೇಗದ ಬೌಲಿಂಗ್ ಎರಡನ್ನೂ ದಿಟ್ಟತನದಿಂದ ಸಮರ‍್ತವಾಗಿ ಎದುರಿಸಿ ರನ್ ಕಲೆಹಾಕುತ್ತಿದ್ದರು. ಎಲ್ಲಾ ಬಗೆಯ ಹೊಡೆತಗಳು ಅವರ ಬ್ಯಾಟಿಂಗ್ ಬತ್ತಳಿಕೆಯಲ್ಲಿದ್ದವು. ಮದ್ಯಮ ವೇಗಿ ಬೌಲರ್ ಆಗಿದ್ದ ಅವರು ಶಿಸ್ತಿನಿಂದ ಬೌಲ್ ಮಾಡಿ ರನ್ ನೀಡದೆ ಎದುರಾಳಿಗಳನ್ನು ಕಟ್ಟಿಹಾಕಿ, ವಿಕೆಟ್ ಪಡೆಯುವುದರಲ್ಲಿ ನಿಪುಣೆಯರಾಗಿದ್ದರು. ಜೊತೆಗೆ ಒಳ್ಳೆ ಪೀಲ್ಡರ್ ಕೂಡ ಆಗಿದ್ದಅವರು ಸಹ-ಆಟಗಾರ‍್ತಿಯರಿಗೆ ಮಾದರಿಯಾಗಿದ್ದರು. ಹೆಚ್ಚು ಹೆಣ್ಣುಮಕ್ಕಳ ಕ್ರಿಕೆಟ್ ಪಂದ್ಯಗಳು ನಡೆಯದಿದ್ದ ಹೊತ್ತಿನಲ್ಲಿಒಟ್ಟು 15 ವರುಶಗಳ ಕಾಲ ಅಂತರಾಶ್ಟ್ರೀಯ ಕ್ರಿಕೆಟ್ ಆಡಿದ ಶಾಂತಾ 16 ಟೆಸ್ಟ್ ಗಳಿಂದ 6 ಅರ‍್ದಶತಕ ಹಾಗೂ 1 ಶತಕದೊಂದಿಗೆ ಒಟ್ಟು 750 ರನ್ ಹಾಗೂ 21 ವಿಕೆಟ್ ಗಳನ್ನು ಪಡೆದಿದ್ದಾರೆ. ಅತಿ ಹೆಚ್ಚು (12) ಟೆಸ್ಟ್ ಗಳಲ್ಲಿ ತಂಡವನ್ನು ಮುನ್ನಡೆಸಿದ ಹಿರಿಮೆ ಕೂಡ ಅವರದ್ದಾಗಿದೆ. ಜೊತೆಗೆ 19 ಒಂದು ದಿನದ ಪಂದ್ಯಗಳಲ್ಲಿ 1 ಅರ‍್ದಶತಕದೊಂದಿಗೆ 287 ರನ್ ಮತ್ತು 12 ವಿಕೆಟ್ ಕೆಡವಿದ್ದಾರೆ. ಅವರ ಕೊಡುಗೆಯನ್ನು ಮನಗೊಂಡು ಬಾರತ ಸರ‍್ಕಾರ ಅರ‍್ಜುನ ಪ್ರಶಸ್ತಿ ನೀಡಿ ಗೌರವಿಸಿದರೆ ಬಿಸಿಸಿಐ ಜೀವಮಾನ ಸಾದನೆ ಪ್ರಶಸ್ತಿ ನೀಡಿ ಗೌರವಿಸಿದೆ. ಬಿಸಿಸಿಐನಿಂದ ಈ ಗೌರವ ಪಡೆದ ಮೊದಲ ಆಟಗಾರ‍್ತಿ ಶಾಂತಾ ಅವರು.
ಆಟದ ನಂತರದ ಬದುಕು
ಬಿ.ಎ ಪದವಿ ಪಡೆದಿದ್ದ ಶಾಂತಾರವರು 1976 ರಲ್ಲಿ ಕೆನರಾ ಬ್ಯಾಂಕ್ ಸೇರಿದರು. ಎಂದೂ ಆಟಗಾರರ ಮೀಸಲಾತಿಯಲ್ಲಿ ಬಡ್ತಿ ಪಡೆಯದೆ, ಉದ್ಯೋಗಿಯಾಗಿ ದುಡಿದು ಜನರಲ್ ಮ್ಯಾನೇಜರ್ ಮಟ್ಟಕ್ಕೆ ಏರಿದರು. 1993 ರಲ್ಲಿ ಲಕ್ನೌಗೆ ವರ‍್ಗವಾದಾಗ ದೇಸೀ ಕ್ರಿಕೆಟ್ ನಿಂದಲೂ ದೂರ ಸರಿದರು. ಆ ಬಳಿಕ 1997 ರಲ್ಲಿ ಬೆಂಗಳೂರಿಗೆ ಹಿಂದಿರುಗಿ ಅವರು ಹೆಣ್ಣುಮಕ್ಕಳ ಕ್ರಿಕೆಟ್ ಆಡಳಿತದ ಹೊಣೆ ಹೊತ್ತರು. ತಮ್ಮ ಆಟದ ದಿನಗಳಲ್ಲಿ ರೈಲಿನಲ್ಲಿ ಎರಡನೇ ದರ‍್ಜೆ ಬೋಗಿಗಳಲ್ಲಿ ಪ್ರಯಾಣ ಮಾಡಿ ಸಾದಾರಣ ಡಾರ‍್ಮಿಟರಿಗಳಲ್ಲಿ ಉಳಿದುಕೊಳ್ಳುತ್ತಿದ್ದ ಅವರು ಹೆಣ್ಣುಮಕ್ಕಳ ತಂಡಕ್ಕೂ ಒಳ್ಳೆಯ ಸೌಲಬ್ಯಗಳನ್ನು ಕೊಡಿಸಬೇಕೆಂದು ಪಣ ತೊಟ್ಟರು. ತಮ್ಮ ವರ‍್ಚಸ್ಸನ್ನು ಬಳಸಿಕೊಂಡು ಹೆಣ್ಣುಮಕ್ಕಳ ಕ್ರಿಕೆಟ್‌ಗೆ ಪ್ರಾಯೋಜಕರನ್ನೂ ಸೆಳೆದರು.
1997 ರ ವಿಶ್ವಕಪ್ ವೇಳೆ, ಕರ‍್ನಾಟಕ ಕ್ರಿಕೆಟ್ ಸಂಸ್ತೆಯ ಸೆಕ್ರೆಟರಿಯಾಗಿದ್ದ ಸಿ.ನಾಗರಾಜ್ ರಿಂದ ಚಿನ್ನಸ್ವಾಮಿ ಅಂಗಳವನ್ನು ಉಚಿತವಾಗಿ ಪಡೆದು ಅಲ್ಲಿ ನಡೆಯಬೇಕಿದ್ದ ಗಂಡಸರ ದುಲೀಪ್ ಟೂರ‍್ನಿಯನ್ನೂ ಮುಂಚಿತವಾಗಿ ನಡೆಸುವಂತೆ ಬಿಸಿಸಿಐನ ಜಯವಂತ್ ಲೇಲೇರಿಗೆ ಮನವರಿಕೆ ಮಾಡಿ, ಹೆಣ್ಣುಮಕ್ಕಳ ಪಂದ್ಯಗಳನ್ನು ಅದೇ ಅಂಗಳದಲ್ಲಿ ಯಶಸ್ವಿಯಾಗಿ ನಡೆಸಿದ್ದು ಅವರ ಆಡಳಿತ ವ್ರುತ್ತಿಪರತೆಗೆ ಹಿಡಿದ ಕನ್ನಡಿ. ಮಂಡ್ಯದ ಪಿಇಎಸ್ ಕಾಲೇಜ್ ಅಂಗಳದಲ್ಲಿ ಅಬ್ಯಾಸ ಪಂದ್ಯವೊಂದರಲ್ಲಿ ಕರ‍್ನಾಟಕ ತಂಡ ಪಾಕಿಸ್ತಾನ ಎದುರು ಗೆಲುವು ಪಡೆದಾಗ ಸುಮಾರು 20,000 ಜನ ಅಲ್ಲಿ ಸೇರಿದ್ದು ಶಾಂತಾರವರ ಆಡಳಿತದಲ್ಲಿ ಹೆಣ್ಣುಮಕ್ಕಳ ಕ್ರಿಕೆಟ್ ಜನಪ್ರಿಯಗೊಳ್ಳುತ್ತಿದ್ದುದಕ್ಕೆ ಸಾಕ್ಶಿಯಾಯಿತು. ಬೆಂಗಳೂರಿನಲ್ಲಿ ಬಾರತ-ನ್ಯೂಜಿಲ್ಯಾಂಡ್ ನಡುವಿನ ಒಂದು ದಿನದ ಪಂದ್ಯಕ್ಕೆ ಕರ‍್ನಾಟಕ ಸರ‍್ಕಾರಕ್ಕೆ ಶಿಪಾರಸ್ಸು ಮಾಡಿ ಹೆಣ್ಣುಮಕ್ಕಳ ಕಾಲೇಜ್ ಹಾಗೂ ಶಾಲೆಗಳಿಂದ ವಿದ್ಯಾರ‍್ತಿಗಳು ಹೆಚ್ಚಿನ ಸಂಕ್ಯೆಯಲ್ಲಿ ಬಂದು ನೋಡುವಂತೆ ಮಾಡಿದರು. ಇನ್ಪೋಸಿಸ್ ಹುಟ್ಟು ಹಾಕಿದ ನಾರಾಯಣಮೂರ‍್ತಿ ಅವರನ್ನು ಕರೆತಂದು, ಬಾರತದ ತಂಡದ ಆಟಗಾರ‍್ತಿಯರೊಟ್ಟಿಗೆ ಸಮಾಲೋಚನೆ ನಡೆಸುವಂತೆ ಮಾಡಿ ಆಟಗಾರ‍್ತಿಯರನ್ನು ಹುರಿದುಂಬಿಸಿದರು. ಇದಲ್ಲದೆ ನೇರುಲಿಗರಾಗಿ, ತಂಡದ ಮ್ಯಾನೇಜರ್, ಸೆಕ್ರೆಟರಿ ಹಾಗೂ ಆಯ್ಕೆ ಸಮಿತಿಯ ಅದ್ಯಕ್ಶೆಯಾಗಿ ಕೂಡ ಶಾಂತಾರವರು ದುಡಿದಿದ್ದಾರೆ.
ಇಂದು ಹೆಣ್ಣುಮಕ್ಕಳ ಕ್ರಿಕೆಟ್ ತಂಡದ ಮಿತಾಲಿ ರಾಜ್, ಸ್ಮ್ರುತಿ ಮಂದಾನಾ, ಜೂಲನ್, ಕೌರ್ ಅಂತವರು ಕೂಡ ಕೊಹ್ಲಿ, ರೋಹಿತ್ ರಿಗೆ ಸರಿಸಾಟಿಯಾಗಿ ಜನಮನ್ನಣೆ ಹಾಗೂ ಮೆಚ್ಚುಗೆ ಗಳಿಸುತ್ತಿದ್ದಾರೆ ಎಂದರೆ ಅದಕ್ಕೆ 70 ರ ದಶಕದಲ್ಲಿ ಹೆಣ್ಣುಮಕ್ಕಳ ಕ್ರಿಕೆಟ್ ಗೆ ಅಡಿಪಾಯ ಹಾಕಿಕೊಟ್ಟ ಶಾಂತಾ ಮತ್ತವರ ತಂಡವೇ ಕಾರಣ. ಹೆಚ್ಚು ಹಣ ಸಿಗದಿದರೂ ಆಟದ ಮೇಲಿನ ಪ್ರೀತಿಗೆ ಆಡಿ ಇಡೀ ದೇಶವೇ ಹೆಣ್ಣುಮಕ್ಕಳ ಕ್ರಿಕೆಟ್‌ನತ್ತ ಆಸಕ್ತಿಯಿಂದ ನೋಡುವಂತೆ ಮಾಡಿದ ಶಾಂತರವರ ಕೊಡುಗೆ ಅದ್ವಿತೀಯ. ಬೆಂಗಳೂರಿನಲ್ಲಿಎಲೆಮರೆಕಾಯಿಯಂತೆ ಬದುಕುತ್ತಿರುವ ಅವರ ಸಾದನೆಯ ಯಶೋಗಾತೆಯನ್ನು ಮರೆಯದೆ ಪ್ರತಿಯೊಬ್ಬರಿಗೂ ಪರಿಚಯಿಸೋಣ.
(ಚಿತ್ರ ಸೆಲೆ: thehindu.com, thebridge.in)
ಇತ್ತೀಚಿನ ಅನಿಸಿಕೆಗಳು