ಮುನಿಸ್ವಾಮಿ ರಾಜಗೋಪಾಲ್ – ಕರ‍್ನಾಟಕದ ಹಾಕಿ ದಿಗ್ಗಜ

– ರಾಮಚಂದ್ರ ಮಹಾರುದ್ರಪ್ಪ.

ಕರ‍್ನಾಟಕದಿಂದ ಒಲಂಪಿಕ್ಸ್ ನಲ್ಲಿ ಒಂಟಿ ಪೋಟಿಯಲ್ಲಿ ಇಲ್ಲಿವರೆಗೂ ಯಾರೂ ಪದಕ ಗೆದ್ದಿಲ್ಲ ಎಂಬುದು ಬೇಸರದ ಸಂಗತಿಯಾದರೂ ಬಾರತದ ಹಾಕಿ ತಂಡ ಪ್ರಾಬಲ್ಯ ಮೆರೆದು 1952 ರ ಹೆಲ್ಸಿಂಕಿ ಒಲಂಪಿಕ್ಸ್ ನಲ್ಲಿ ಬಂಗಾರದ ಪದಕ ಗೆದ್ದಾಗ ಆ ತಂಡದಲ್ಲಿ ಇಬ್ಬರು ಕನ್ನಡಿಗರಿದ್ದದ್ದು ವಿಶೇಶ. ಹಾಗೂ ಆ ಗೆಲುವಿನ ಹಿಂದೆ ‘ದ್ಯಾನ್ ಚಂದ್ ಆಪ್ ಡೆಕ್ಕನ್’ ಎಂದೇ ಹೆಸರುವಾಸಿಯಾಗಿದ್ದ ಕನ್ನಡಿಗ ಮುನಿಸ್ವಾಮಿ ರಾಜಗೋಪಾಲ್ ರ ಅಚ್ಚುಕಟ್ಟಾದ ಸ್ಟಿಕ್ ಚಳಕ ಪ್ರಮುಕ ಕಾರಣವಾಗಿತ್ತು ಎಂಬುದು ಕನ್ನಡಿಗರಿಗೆಲ್ಲ ಹೆಮ್ಮೆಯ ಸಂಗತಿ. ಬಾರತ ತಂಡದ ಪರ ಆ ಒಲಂಪಿಕ್ಸ್ ನಲ್ಲಿ ಅತಿಹೆಚ್ಚು 9 ಗೋಲ್ ಗಳಿಸಿದ ಬಲ್ಬೀರ್ ಸಿಂಗ್ ಸೀನಿಯರ್ ರವರೇ ರಾಜಗೋಪಾಲ್ ರ ಆಕ್ರಮಣಕಾರಿ ಹಾಕಿಯಿಂದಲೇ ತಮಗೆ ಅಶ್ಟು ಗೋಲ್ ಗಳನ್ನು ಬಾರಿಸಲು ಸಾದ್ಯವಾಗಿದ್ದು ಎಂದು ಹೇಳಿಕೊಂಡಿರುವುದು ಕರ‍್ನಾಟಕದ ಈ ಆಟಗಾರನ ಶ್ರೇಶ್ಟತೆಗೆಸಾಕ್ಶಿ.

ಹುಟ್ಟು – ಹಾಕಿಯ ಮೊದಲ ದಿನಗಳು

ಮಾರ‍್ಚ್ 24, 1926 ರಂದು ಬೆಂಗಳೂರಿನಲ್ಲಿ ರಾಜಗೋಪಾಲ್ ಹುಟ್ಟಿದರು. ಕುಟುಂಬದ ಹಣಕಾಸಿನ ಸ್ತಿತಿ ಅವರ ಆಟಕ್ಕೆ ಪ್ರೋತ್ಸಾಹವಾಗಲಿ ನೆರವಾಗಲಿ ನೀಡುವ ಮಟ್ಟದಲ್ಲಿ ಇಲ್ಲದಿದ್ದರೂ ಅವರಲ್ಲಿ ಹಾಕಿಯ ಮೇಲಿನ ಪ್ರೀತಿ ಮಾತ್ರ ಕುಗ್ಗಲಿಲ್ಲ. ಬೆಂಗಳೂರಿನ ಕಂಟೋನ್ಮೆಂಟ್ ಪ್ರದೇಶದ ಮೈದಾನವೊಂದರಲ್ಲಿ ಬರಿಗಾಲಿನಲ್ಲಿ ಮುರಕಲು ಹಾಕಿ ಸ್ಟಿಕ್ ನಿಂದ ಆಡಲು ಮೊದಲು ಮಾಡಿದ ರಾಜಗೋಪಾಲ್ ಯಾವ ತರಬೇತುದಾರನ ನೆರವಿಲ್ಲದೆ ತಮ್ಮಶ್ಟಕ್ಕೆ ತಾವೇ ಆಟದ ಪಟ್ಟುಗಳನ್ನು ಕಲಿತರು. ಅವರ ಹಾಕಿ ಪ್ರತಿಬೆಯನ್ನು ಎಳವೆಯಲ್ಲೇ ಗುರುತಿಸಿ ಬೆಂಗಳೂರಿನ ಎಚ್.ಎ.ಎಲ್ ಸಂಸ್ತೆಅವರಿಗೆ ಕೆಲಸ ನೀಡಿ ಆಟಗಾರನಾಗಿ ಅವರ ಮುಂದಿನ ಬೆಳವಣಿಗೆಗೆ ನೀರೆರೆಯಿತು. ಅವರ ಸೊಗಸಾದ ಡ್ರಿಬ್ಲಿಂಗ್ ಮತ್ತು ಮಿಂಚಿನಂತಹ ಸ್ಟಿಕ್ ಚಳಕ ನೋಡುಗರ ಮನ ತಣಿಸುವುದಲ್ಲದೆ ಎಚ್.ಎ.ಎಲ್ ಕ್ಲಬ್ ತಂಡಕ್ಕೆ ಸಾಕಶ್ಟು ಪಂದ್ಯಾವಳಿಗಳಲ್ಲಿ ಗೆಲುವು ತಂದು ಕೊಟ್ಟಿತು. ಬಳಿಕ 1945 ರಲ್ಲಿ ಕೇವಲ ತಮ್ಮ 19ನೇ ವಯಸ್ಸಿನಲ್ಲಿ ರಾಜಗೋಪಾಲ್ ಮೈಸೂರು ರಾಜ್ಯ ತಂಡಕ್ಕೆ ಆಯ್ಕೆಯಾಗಿ ರಾಶ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಆಡತೊಡಗಿದರು. ಕೋಲ್ಕತಾದ ಪ್ರತಿಶ್ಟಿತ ಬೇಟನ್ ಕಪ್ ನಲ್ಲಿ 1951 ರಲ್ಲಿ ಎಚ್.ಎ.ಎಲ್ ತಂಡ ಲಾಹೋರ್ ನ ಬಾಟಾ ಸ್ಪೋರ‍್ಟ್ಸ್ ಅನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಾಗ ರಾಜಗೋಪಾಲ್ ಅವರ ಆಟ ಎಲ್ಲರ ಮನಸೂರೆಗೊಂಡಿತು. ಎದುರಾಳಿಯ ಪ್ರತೀ ಡಿಪೆಂಡರ್ ನ ಕಣ್ಣುತಪ್ಪಿಸಿ ಅವರು ಚೆಂಡನ್ನು ಕಸಿದುಕೊಂಡು ಮುನ್ನುಗ್ಗುತ್ತಿದ್ದ ರೋಚಕ ಶೈಲಿ ಹಾಕಿ ಅಬಿಮಾನಿಗಳ ಮೆಚ್ಚುಗೆ ಪಡೆಯಿತು. ರಾಶ್ಟ್ರೀಯ ರಂಗಸ್ವಾಮಿ ಪಂದ್ಯಾವಳಿಯಲ್ಲಿ ಒಮ್ಮೆ ಮೈಸೂರು ತಂಡದ ಪರ ರಾಜಗೋಪಾಲ್ ಅವರ ಆಟವನ್ನು ಕಂಡು ಮನಸೋತ ಹಾಕಿ ದಿಗ್ಗಜ ದ್ಯಾನ್ ಚಂದ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಪೂರ‍್ವ ಆಪ್ರಿಕಾ ಪ್ರವಾಸಕ್ಕೆ ಅವರಿಗೆ ಬಾರತ ತಂಡದಲ್ಲಿ ಎಡೆ ಮಾಡಿ ಕೊಟ್ಟರು. ದ್ಯಾನ್ ಚಂದ್ ಮತ್ತು ರೂಪ್ ಸಿಂಗ್ ರಂತಹ ದಿಗ್ಗಜರಿದ್ದ ತಂಡದಲ್ಲೂ ಕನ್ನಡದ ಈ ಪ್ರತಿಬೆ ಮಿಂಚಿ ಗಮನ ಸೆಳೆಯಿತು. ಆ ಬಳಿಕ 1952 ರಹೆಲ್ಸಿಂಕಿ ಒಲಂಪಿಕ್ಸ್ ಗೆ ರಾಜಗೋಪಾಲ್ ಬಾರತ ತಂಡದಲ್ಲಿ ಸ್ತಾನ ಪಡೆದರು. ಕರ‍್ನಾಟಕದ ಇನ್ನೊಬ್ಬ ಆಟಗಾರ ಚಿನ್ನದೊರೈ ದೇಶಮುತ್ತು ಕೂಡ ಈ ತಂಡದಲ್ಲಿದ್ದರು.

1952 ರ ಹೆಲ್ಸಿಂಕಿ ಒಲಂಪಿಕ್ಸ್ – ಬಂಗಾರದ ಬೇಟೆ

ನೇರ ಕ್ವಾರ‍್ಟರ್ ಪೈನಲ್ ಗೆ ಅರ‍್ಹತೆ ಪಡೆದ ಬಾರತ ತಂಡ ಅಲ್ಲಿನ ಹವಾಗುಣಗಳಿಗೆ ಹೊಂದಿಕೊಂಡು ಹೆಲ್ಸಿಂಕಿಯ ಕೊರೆಯುವ ಚಳಿಯಲ್ಲೂ ಸೊಗಾಸಾದ ಆಟದಿಂದ ಪ್ರಾಬಲ್ಯ ಮೆರೆಯಿತು. ಆಸ್ಟ್ರಿಯಾ ಎದುರು 4-0, ಸೆಮೀಸ್ ನಲ್ಲಿ ಗ್ರೇಟ್ ಬ್ರಿಟನ್ ಎದುರು 3-1, ಮತ್ತು ಪೈನಲ್ ನಲ್ಲಿ ನೆದರ‍್ಲೆಂಡ್ ಎದುರು 6-1 ಗೋಲ್ ಗಳಿಂದ ಗೆದ್ದು ಬಂಗಾರದ ಪದಕವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ರಾಜಗೋಪಾಲ್ ಮತ್ತು ದೇಶಮುತ್ತು ಕರ‍್ನಾಟಕದಿಂದ ಒಲಂಪಿಕ್ಸ್ ಪದಕ ಗೆದ್ದ ಮೊದಲಿಗರು ಎಂಬ ಹಿರಿಮೆಗೆ ಪಾತ್ರರಾದರು. ರಾಜಗೋಪಾಲ್ ಹೆಚ್ಚು ಗೋಲ್ ಗಳಿಸದೆ ಹೋದರೂ ಅವರು ಎದುರಾಳಿಯ ಆಕ್ರಮಣವನ್ನು ಬೇದಿಸಿ ಚೆಂಡನ್ನು ಗೋಲ್ ನೆಡೆಗೆ ಸರಾಗವಾಗಿ ಕೊಂಡೊಯ್ದು ಸಾಕಶ್ಟು ಗೋಲ್ ಗಳಿಗೆ ಕಾರಣರಾದರು. ರಾಜಗೋಪಾಲ್ ರ ಸ್ಟಿಕ್ ತಂತ್ರಗಾರಿಕೆ ಅಪರೂಪ ಹಾಗೂ ವಿಶೇಶವಾಗಿತ್ತು. ಅವರ ಶರವೇಗದ ಸ್ಟಿಕ್ ಚಳಕದಿಂದ ‘artful dodger’ ಎಂಬ ಬಿರುದು ಕೂಡ ಪಡೆದರು. ಇಂತಹ ಒಬ್ಬ ಆಟಗಾರನಿಗೆ ಮತ್ತೆಂದೂ ಒಲಂಪಿಕ್ಸ್ ನಲ್ಲಿ ಅವಕಾಶ ದೊರಕದೆ ಇದ್ದದ್ದು ಹಾಕಿಯ ದೊಡ್ಡ ದುರಂತಗಳಲ್ಲೊಂದು. ಅವರ ಎಡಬಿಡದ ಗಾಯದ ಸಮಸ್ಯೆ ಕೂಡ ಇದಕ್ಕೆ ಕಾರಣವಾಗಿತ್ತು.

ನಿವ್ರುತ್ತಿ ನಂತರದ ಬದುಕು

ರಾಜಗೋಪಾಲ್ ರ ಅಂತರಾಶ್ಟ್ರೀಯ ಹಾಕಿ ವ್ರುತ್ತಿ ಬದುಕು ಬೇಗನೆ ಕೊನೆಗೊಂಡರೂ ಕೋಚ್ ಆಗಿ ಅವರು ಆಟದೊಂದಿಗೆ ಸುಮಾರು ಕಾಲ ತಮ್ಮ ನಂಟನ್ನು ಉಳಿಸಿಕೊಂಡರು. ಎಚ್.ಎ.ಎಲ್ ತಂಡವಲ್ಲದೆ ಕರ‍್ನಾಟಕ ರಾಜ್ಯದ ಕಿರಿಯರ ಹಾಗೂ ಹಿರಿಯರ ತಂಡದ ಕೋಚ್ ಆಗಿ ಕೂಡ ಸಾಕಶ್ಟು ಹೊತ್ತು ದುಡಿದರು. ಅವರ ಅವದಿಯಲ್ಲೇ 1975 ರಲ್ಲಿ ಕರ‍್ನಾಟಕ ತಂಡ ಪುಣೆಯಲ್ಲಿ ಕಿರಿಯರ ರಾಶ್ಟ್ರೀಯ ಪಂದ್ಯಾವಳಿ ಗೆದ್ದು ಬೀಗಿತು. 1978-80 ರ ಹೊತ್ತಿನಲ್ಲಿ ಬಾರತದ ಕಿರಿಯರ ಹಾಗೂ ಹಿರಿಯರ ತಂಡದ ಕೋಚ್ ಆಗಿ ಏಶಿಯನ್ ಗೇಮ್ಸ್ ಮತ್ತು ಒಲಂಪಿಕ್ಸ್ ಗೆ ತಂಡವನ್ನು ಅಣಿಮಾಡುವಲ್ಲಿ ಪ್ರಮುಕ ಪಾತ್ರ ವಹಿಸಿದರು. 1980 ರ ಒಲಂಪಿಕ್ಸ್ ಗೂ ಕೆಲ ಹೊತ್ತು ಮುನ್ನ ಗಣೇಶ್ ರನ್ನು ಅದಿಕ್ರುತವಾಗಿ ಬಾರತದ ಕೋಚ್ ಆಗಿ ನೇಮಕ ಮಾಡಿದ್ದರಿಂದ ರಾಜಗೋಪಾಲ್ ರಿಗೆ ಮಾಸ್ಕೊ ಒಲಂಪಿಕ್ಸ್ ನ ಬಂಗಾರದ ಪದಕಕ್ಕೆ ಸಿಗಬೇಕಾದ ಶ್ರೇಯ ಸಿಗದೇ ಹೋದರೂ ಹಾಕಿ ವಲಯ ಮಾತ್ರ ಅವರ ಕೊಡುಗೆಯನ್ನು ಮರೆತಿಲ್ಲ. ತಮ್ಮ ವಿಶಿಶ್ಟ ಬಗೆಯ ಆಲೋಚನೆ ಹಾಗೂ ಸ್ಟಿಕ್ ತಂತ್ರಗಾರಿಕೆಯಿಂದ ಯಶಸ್ಸು ಕಂಡಿದ್ದ ರಾಜಗೋಪಾಲ್ ಇತ್ತೀಚಿನ ದಿನಗಳಲ್ಲಿ ಬಾರತೀಯರು ಯುರೋಪಿಯನ್ ಮಾದರಿಯ ಹಾಕಿಯ ನಕಲು ಮಾಡಲು ಹೋಗಿ ತಮ್ಮ ನೈಜ ಸಾಂಪ್ರಾದಾಯಿಕ ಆಟವನ್ನು ಬಲಿ ಕೊಟ್ಟು ಅತಂತ್ರವಾಗುತ್ತಿದ್ದಾರೆ ಎಂದು ಸದಾ ಬೇಸರ ಹೊರಹಾಕುತ್ತಿದ್ದರು. ಎಚ್.ಎ.ಎಲ್ ನಿಂದ ನಿವ್ರುತ್ತರಾದ ಮೇಲೆ ನೆಯ್ಯೇಲಿ ಲಿಗ್ನೈಟ್ ಕಾರ‍್ಪೋರೇಶನ್ ತಂಡದ ಕೋಚ್ ಆಗಿ ತಂಡವನ್ನು ದೊಡ್ಡ ಶಕ್ತಿಯನ್ನಾಗಿ ರೂಪಿಸಿದರು. ಹಾಕಿ ಆಟಕ್ಕೆ ರಾಜಗೋಪಾಲ್ ರ ಸೇವೆಯನ್ನು ಪರಿಗಣಿಸಿ 2000 ದಲ್ಲಿ ಕರ‍್ನಾಟಕ ಸರ‍್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು. ಕಡೆಗೆ ಮಾರ‍್ಚ್ 3, 2004 ರಂದು ಹಾಕಿ ದಿಗ್ಗಜ ರಾಜಗೋಪಾಲ್ ನಮ್ಮನ್ನು ಅಗಲಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದರು. ಬಾರತದಲ್ಲಿ ಮಾತ್ರವಲ್ಲದೆ ಅಂತರಾಶ್ಟ್ರೀಯ ಮಟ್ಟದಲ್ಲೂ ತಮ್ಮ ಸೊಗಸಾದ ಆಟದಿಂದ ಹೆಸರು, ಗೌರವ ಸಂಪಾದಿಸಿದ್ದ ಈ ಕನ್ನಡಿಗ ನಮ್ಮ ನಾಡಿನ ಹೆಮ್ಮೆ. ಇತಿಹಾಸದ ಪುಟಗಳಲ್ಲಿ ಕಳೆದುಹೋಗಿರುವ ಇಂತಹ ದಿಗ್ಗಜನನ್ನು ಮುಂದಿನ ಪೀಳಿಗೆಗೆ ತಪ್ಪದೇ ಪರಿಚಯಿಸೋಣ.

(ಚಿತ್ರ ಸೆಲೆ: SS Shreekumar, twitter.com/WeAreTeamIndia)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: