ಆದುನಿಕ ಕ್ರುಶಿ ಹೆಸರಿನಲ್ಲಿ ಗುರಿಯಿಲ್ಲದ ಓಟ

–  ರಾಜಬಕ್ಶಿ ನದಾಪ.

ನಿತ್ಯವೂ ನಾವು ಬಾರತದ ರೈತನ ಪರಿಸ್ತತಿಯ ಬಗ್ಗೆ ಒಂದಲ್ಲ ಒಂದು ಸುದ್ದಿಯನ್ನು ಕೇಳುತ್ತಲೇ ಇರುತ್ತೇವೆ. ಕೇಳಿದವರೆಲ್ಲರೂ ಒಂದು ದೀರ‍್ಗ ನಿಟ್ಟುಸಿರನ್ನು ಬಿಡುತ್ತಾರೆನ್ನುವುದುನ್ನು ಬಿಟ್ಟರೆ, ಅದರ ಕಾರಣಗಳು ಮತ್ತು ಪರಿಹಾರಗಳ ಬಗ್ಗೆ ಯೋಚಿಸುವವರು ವಿರಳ. ಮುಂದಿನ ದಿನಗಳಲ್ಲಿ ನಮ್ಮ ಮೂರು ಹೊತ್ತಿನ ಊಟಕ್ಕೆ ಸಂಕಶ್ಟ ಒದಗಬಾರದೆಂದಲ್ಲಿ ಆ ಬಗ್ಗೆ ಯೋಚಿಸುವುದು ಒಳಿತು. ಆಳುತ್ತಿರುವ ಸರ‍್ಕಾರ ರೈತನಿಗೆ ಆರ‍್ತಿಕವಾಗಿ ಸಹಾಯಹಸ್ತ ಚಾಚುವತ್ತ ಯೋಚಿಸುತ್ತಿದೆಯೇ ಹೊರತು, ಬೆಳೆಯ ಪ್ರತಿ ಹಂತದಲ್ಲಿ ಆತನೊಂದಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಹಾಗೂ ಕ್ರುಶಿಯ ಕ್ಶಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಾಣಕುರುಡು ನಡೆ ತೋರುತ್ತಿದೆ.

ರೈತರ ಈ ಪರಿಸ್ತಿತಿಗೆ ಕಾರಣಗಳು ಕೂಡ ಅಸಂಕ್ಯವಿದ್ದು, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಅದರಲ್ಲಿ ಪ್ರಮುಕವಾದುದು. ಇಂದು ರೈತನಿಗಾಗುವ ಲಾಬಕ್ಕೆ ದೊಡ್ಡ ಕಲ್ಲು ಹಾಕುತ್ತಿರುವುದು ರಾಸಾಯನಿಕಗಳ ಅವೈಜ್ನಾನಿಕ ಬಳಕೆ. ರೈತನ ಉತ್ಪಾದನಾ ವೆಚ್ಚದ ಪೈಕಿ ಶೇ.50ರಶ್ಟು ಪಾಲು ಗೊಬ್ಬರ, ಕೀಟನಾಶಕ, ರೋಗನಾಶಕ, ಕಳೆನಾಶಕಗಳೆಂಬ ರಾಸಾಯನಿಕಗಳದ್ದೇ ಆಗಿದೆ. ಈ ರಾಸಾಯನಿಕಗಳ ವಿಶವರ‍್ತುಲದಲ್ಲಿ ಸಿಕ್ಕ ರೈತ ಹಾಗೂ ಅವನ ಬೆಳೆ ಅದರಿಂದ ಹೊರಗೆ ಬರುವುದು ತುಂಬಾ ಕಶ್ಟ.

ಆದುನಿಕ ಕ್ರುಶಿ: ಬಹುಕೋಟಿ ವ್ಯಾಪಾರ

ಅದಿಕ ಲಾಬದಾಸೆಗೆ ‘ಆದುನಿಕ ಕ್ರುಶಿ’ ಎಂಬ ಹೆಸರಿನಲ್ಲಿ ಅನುಸರಿಸುತ್ತಿರುವ ಇಂದಿನ ಈ ಕ್ರುಶಿ, ಬಹುಕೋಟಿ ವ್ಯಾಪಾರವಾಗಿ ರಾಸಾಯನಿಕ ಉತ್ಪಾದಕರ ಹೊಟ್ಟೆ ತುಂಬಿಸುತ್ತಿದೆಯೇ ಹೊರತು ರೈತನ ಅವಸ್ತೆ ಮಾತ್ರ ಬದಲಾಗಿಲ್ಲ. ಈ ಪದ್ದತಿಯಿಂದ ಹಾನಿಕಾರಕ ಪೀಡೆನಾಶಕಗಳು ಮತ್ತು ಸಸ್ಯವರ‍್ದಕಗಳು ಕಟೋರ ವಿಶವಾಗಿ ನಮ್ಮ ದೇಹವನ್ನು ಸೇರುತ್ತಿವೆ. ಅದಲ್ಲದೇ ನಮ್ಮ ನೀರು, ಗಾಳಿ ಮತ್ತು ಮಣ್ಣು ಕಲುಶಿತಗೊಳ್ಳುತ್ತಿರುವುದು ವಿಪರ‍್ಯಾಸ. ಹಾಗೆಯೇ ಇಂದಿನ ಪರಿಸ್ತಿತಿಯಲ್ಲಿ ಅವುಗಳ ಹೊರತಾಗಿ ಕ್ರುಶಿ ಮಾಡುವುದು ಕೂಡ ಕಶ್ಟವೇ ಆಗಿದೆ. ಹೀಗಿರುವಾಗ, ಅವುಗಳ ಬಗ್ಗೆ ಶಿಸ್ತುಬದ್ದವಾದ ತಿಳುವಳಿಕೆ ಇರುವುದು ಅತ್ಯಗತ್ಯ. ದುರದ್ರುಶ್ಟವಶಾತ್ ರೈತರಿಗೆ, ಕೆಲವು ಮಾರಾಟಗಾರರಿಗೆ ಹಾಗೂ ಅದನ್ನು ಸರಬರಾಜು ಮಾಡುವ ಕಂಪನಿಯ ಕೆಲವು ಉದ್ಯೋಗಿಗಳಿಗೆ ಅದರ ಬಗ್ಗೆ ತಿಳುವಳಿಕೆ ಇಲ್ಲದೇ ಇರುವುದು ಒಂದು ಕಡೆಯ ಸಮಸ್ಯೆಯಾದರೆ, ಅತಿಯಾದ ಲಾಬಕೋರತನಕ್ಕೆ, ಗೊತ್ತಿದ್ದೂ ತಪ್ಪು ಮಾಹಿತಿ ನೀಡುತ್ತಿರುವ ಮಾರಾಟಗಾರರ ಮತ್ತು ಕಂಪನಿಯ ಉದ್ಯೋಗಿಗಳದ್ದು ಇನ್ನೊಂದು ಗಂಬೀರ ಸಮಸ್ಯೆ. ಈ ರಾಸಾಯನಿಕಗಳ ಮೇಲಿನ ವಿಪರೀತವಾದ ಅವಲಂಬನೆಯಿಂದ ಕೀಟಗಳ ಮತ್ತು ರೋಗಗಳ ಪ್ರತಿರೋದಕ ಶಕ್ತಿ ದಿನೇದಿನೇ ಹೆಚ್ಚುತ್ತಿದೆ. ರಾಸಾಯನಿಕಗಳನ್ನು ಬಳಸುವ ಪ್ರಮಾಣ, ಸಿಂಪಡಣೆಗಳ ಹಂತ ಮತ್ತು ಸಿಂಪಡಣೆಗಳ ಸಂಕ್ಯೆಗಳ ಬಗ್ಗೆ ರೈತರಿಗೆ ಅರಿವಿಲ್ಲದಿರುವುದೇ ಇದಕ್ಕೆಲ್ಲ ಮುಕ್ಯ ಕಾರಣ. ಪ್ರಾಯೋಗಿಕ ಉದಾಹರಣೆಗಳನ್ನು ಕೊಡುವುದಾದರೆ, ಸಾಮಾನ್ಯವಾಗಿ ರಸ ಹೀರುವ ಕೀಟಗಳ ನಿಯಂತ್ರಣಕ್ಕಾಗಿ ಸಿಂಪಡಿಸುವ ಇಮಿಡಾಕ್ಲೋಪ್ರಿಡ್ 17.8ಎಸ್.ಎಲ್ ಅನ್ನು ಪ್ರತಿ ಲೀಟರ್ ನೀರಿಗೆ 0.2ಮಿಲಿ(ಪ್ರಮಾಣಿತ ಶಿಪಾರಸು) ಉಪಯೋಗಿಸುವಲ್ಲಿ 1ಮಿಲಿ ಉಪಯೋಗಿಸಲಾಗುತ್ತಿದೆ, ಬೂಜು ರೋಗದ ನಿಯಂತ್ರಣಕ್ಕಾಗಿ ಸಿಂಪಡಿಸುವ ಡೈಮಿತೋಮಾರ‍್ಪ್ 50% ಡಬ್ಲೂ.ಪಿ ಅನ್ನು ಪ್ರತಿ ಲೀಟರ್ ನೀರಿಗೆ 1.3ಗ್ರಾಂ ಉಪಯೋಗಿಸುವಲ್ಲಿ 2 ರಿಂದ 3 ಗ್ರಾಂ ಉಪಯೋಗಿಸಲಾಗುತ್ತಿದೆ. ಅದಾಗಿಯೂ ಕೂಡ ನಿರೀಕ್ಶಿತ ಪಲಿತಾಂಶವನ್ನು ಪಡೆಯಲಾಗುತ್ತಿಲ್ಲ. ಹಾಗಾದರೆ ಇದಕ್ಕೆಲ್ಲ ಕಾರಣ ಯಾರು? ರೈತರೇ, ಮಾರಾಟಗಾರರೇ, ಸರಬರಾಜು ಮಾಡುವ ಕಂಪನಿಗಳೇ ಅತವಾ ಕ್ರುಶಿ ಇಲಾಕೆಯೇ ? ನಾವು ನೇರವಾಗಿ ಯಾರೋ ಒಬ್ಬರನ್ನು ದೂಶಿಸಲಾಗದು. ಎಲ್ಲರೂ ಇದರಲ್ಲಿ ಸಮಪಾಲುದಾರರೇ ಆಗಿದ್ದಾರೆ. ಇನ್ನು ಉಪಯೋಗಿಸಬೇಕಾದ ರಾಸಾಯನಿಕಗಳ ಬಗ್ಗೆ ನಿರ‍್ದರಿಸುವ ವಿಶಯಕ್ಕೆ ಬಂದರೆ, ಬೆರಳೆಣಿಕೆಯಶ್ಟು ರೈತರು ಮಾತ್ರ ಸ್ವತಂತ್ರ ನಿರ‍್ದಾರ ತೆಗೆದುಕೊಳ್ಳುವುದನ್ನು ಕಾಣಬಹುದು. ಉಳಿದ ರೈತರ ನಿರ‍್ದಾರದಲ್ಲಿ ಕೆಲವು ವ್ಯಕ್ತಿಗಳು ಮಹತ್ವದ ಪಾತ್ರ ವಹಿಸುತ್ತಾರೆ. ಅದರಲ್ಲಿ ಮೊದಲನೆಯವರು ರಾಸಾಯನಿಕಗಳ ಮಾರಾಟಗಾರರು, ಎರಡನೇಯವರು ರಾಸಾಯನಿಕ ಕಂಪನಿಗಳ ಸಿಬ್ಬಂದಿಗಳು ಹಾಗೂ ಮೂರನೆಯವರು ಕ್ರುಶಿ ಇಲಾಕೆಯವರು. ಇವರಲ್ಲಿ ಕೆಲವರಿಗೆ ಆ ಬಗ್ಗೆ ಜ್ನಾನವಿಲ್ಲವಾದರೆ, ಉಳಿದವರು ತಿಳಿದು ಕೂಡ ತಮ್ಮ ಲಾಬಕ್ಕಾಗಿ ರೈತರ ದಾರಿ ತಪ್ಪಿಸುತ್ತಿದ್ದಾರೆ.

ಅತಿಯಾಸೆಯ ಪರಿಣಾಮ

ವ್ಯಾಪಾರವೆಂದ ಮೇಲೆ ಲಾಬವಿರಲೇಬೇಕು, ಆದರೆ ಆ ಲಾಬಕ್ಕಾಗಿ ಅತಿಯಾಸೆ ಪಟ್ಟಾಗ ಅನಾಹುತಗಳೇ ಆಗಬಹುದು. ಪ್ರಸ್ತುತ ರಾಸಾಯನಿಕಗಳ ಮಾರಾಟ ಮಾಡಲು ಪರವಾನಿಗೆ ಹೊಂದಿರುವ ಶೇ.90ರಶ್ಟು ಮಾರಾಟಗಾರರು, ಅದರ ಸಂಬಂದಿತ ಶಿಕ್ಶಣ ಪೂರೈಸದವರು. ಹೀಗೆಂದ ಮಾತ್ರಕ್ಕೆ ಅವರಿಗೆ ರಾಸಾಯನಿಕಗಳ ಬಗೆಗೆ ಗೊತ್ತೇ ಇಲ್ಲವೆಂದಲ್ಲ, ಕಾಲಾನುಕ್ರಮದಲ್ಲಿ ಕೆಲವರು ತಮ್ಮ ಸ್ವಾನುಬವದಿಂದ ಪರಿಣಿತಿ ಸಾದಿಸಿರುತ್ತಾರೆ. ಆದರೆ ಬಹುಪಾಲು ಮಾರಾಟಗಾರರು ಈ ವಿಶಯದಲ್ಲಿ ಪರಿಣಿತಿ ಹೊಂದಿಲ್ಲದಿರುವುದಂತೂ ಸತ್ಯ. ಇನ್ನು ವ್ಯಾಪಾರದ ವಿಶಯಕ್ಕೆ ಬಂದರೆ, ಮಾರಾಟಗಾರರು ತಮ್ಮ ಲಾಬಕೋರತನಕ್ಕಾಗಿ ಅವ್ಯವಸ್ತಿತ ಮತ್ತು ಅವೈಜ್ನಾನಿಕ ರಾಸಾಯನಿಕಗಳ ಪ್ರಮಾಣಗಳನ್ನು ನೀಡುತ್ತಿದ್ದಾರೆ. ಇನ್ನು ಇದಕ್ಕೆ ತೆರೆಮರೆಯ ಪ್ರೋತ್ಸಾಹಕರೆಂದರೆ ರಾಸಾಯನಿಕಗಳ ತಯಾರಕ ಕಂಪನಿಗಳು. ರೈತನ ನೇರ ಸಂಪರ‍್ಕದಲ್ಲಿರುವ ಕಂಪನಿಯ ಸಿಬ್ಬಂದಿಗಳಲ್ಲಿ ಬಹುಪಾಲು ವಿಶಯ ಪರಿಣಿತಿಯಿಲ್ಲದೆ ತಮ್ಮ ಕಂಪನಿ ನೀಡಿದ ಗುರಿ ಮುಟ್ಟವ ಅವಸರದಲ್ಲಿ ಈ ಪ್ರಮಾದವೆಸಗುತ್ತಿದ್ದಾರೆ. ಸಾಮಾನ್ಯವಾಗಿ ಕೆಳಸ್ತರದಲ್ಲಿ ಕೆಲಸ ಮಾಡಲು ಕಂಪನಿಗಳು ಕಡಿಮೆ ಸಂಬಳ ನೀಡುವ ನಿಟ್ಟಿನಲ್ಲಿ ವ್ರುತ್ತಿಪರರಿಗಿಂತ, ವ್ರುತ್ತಿಪರ ಶಿಕ್ಶಣವಿಲ್ಲದವರನ್ನೇ ಆರಿಸುತ್ತಾರೆ. ಇವರಿಗೆ ಸೂಕ್ತ ತರಬೇತಿಯನ್ನು ನೀಡದೇ ಮುಟ್ಟಲಾಗದ ಗುರಿಯೊಂದನ್ನು ನೀಡಿರುತ್ತಾರೆ. ಪೀಡೆನಾಶಕಗಳ ಸರಿಯಾದ ಪ್ರಮಾಣ, ನೀಡುವ ಹಂತ, ಕಾರ‍್ಯವೈಕರಿ, ಪ್ರಮಾಣಿತ ಕೀಟ ಮತ್ತು ರೋಗದ ತೀವ್ರತೆ ಹಾಗೂ ತಮ್ಮ ಕಂಪನಿಯ ಉತ್ಪನ್ನದ ಗುಣಮಟ್ಟ ಇದಾವುದನ್ನು ಅರಿಯದ ಕಂಪನಿಯ ಸಿಬ್ಬಂದಿ ತಮ್ಮ ಕೆಲಸ ಉಳಿಸಿಕೊಳ್ಳುವ ಬರದಲ್ಲಿ ಮಾರಾಟಗಾರರಿಗೆ ಆಮಿಶ ಒಡ್ಡಿ ತಮ್ಮ ಉತ್ಪನ್ನಗಳನ್ನು ಸಾಗಹಾಕುತ್ತಾರೆ. ಇತ್ತ ಕಂಪನಿಯವರು ನೀಡುವ ದ್ವಿಚಕ್ರ ವಾಹನ, ಕಾರು, ವಿದೇಶ ಪ್ರವಾಸದಂತಹ ಕೊಡುಗೆಗಳಿಗೆ ಅರ‍್ಹತೆ ಗಿಟ್ಟಿಸಲು ಮಾರಾಟಗಾರರು ಅನವಶ್ಯಕ ಮತ್ತು ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ರೈತರ ಮಡಿಲಿಗೆ ಹಾಕಿ ಅವರ ಉತ್ಪಾದನಾ ವೆಚ್ಚ ಹೆಚ್ಚಿಸುವಲ್ಲಿ ಪ್ರಮುಕ ಪಾತ್ರ ವಹಿಸುತ್ತಾರೆ. ಇನ್ನು ಕ್ರುಶಿ ಸಂಬಂದಿತ ಶಿಕ್ಶಣ ಪೂರೈಸಿದವರ ಬಗ್ಗೆ ಹೇಳುವುದಾದರೆ, ಸಾಕಶ್ಟು ವಿದ್ಯಾರ‍್ತಿಗಳಿಗೆ ಪ್ರಯೋಗಾತ್ಮಕ ಜ್ನಾನದ ಕೊರತೆ ಇರುವುದನ್ನು ಕಾಣಬಹುದು. ಹಲವಾರು ವಿದ್ಯಾರ‍್ತಿಗಳು ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪಡೆದಾಗಿಯೂ ಕೂಡ ಬೆಳೆ ಸಂಬಂದಿತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಪಲರಾಗುತ್ತಿದ್ದಾರೆ. ಅಂದಮೇಲೆ ವಿಶ್ವವಿದ್ಯಾಲಯಗಳಲ್ಲಿ ಸದ್ಯ ಅನುಸರಿಸುತ್ತಿರುವ ಕಲಿಕಾ ವಿದಾನವನ್ನು ತಾರ‍್ಕಿಕವಾಗಿ ವಿಶ್ಲೇಶಿಸಲೇಬೇಕಾಗುತ್ತದೆ. ಅಂದಹಾಗೆ ಕ್ರುಶಿ ಕೇವಲ ಶೈಕ್ಶಣಿಕವಾಗಿ ಅರಿಯುವ ವಿಶಯವೂ ಅಲ್ಲ. ಇದನ್ನೆಲ್ಲ ಹೊರತು ಪಡಿಸಿ, ಅವರು ಪ್ರಾಯೋಗಿಕ ಅನುಬವ ಪಡೆದೂ ಕೂಡ ತಪ್ಪೆಸಗುತ್ತಿದ್ದಾರೆಂದರೆ, ಅದಕ್ಕೆ ಕಾರಣ ಕೆಲಸ ಉಳಿಸುಕೊಳ್ಳುವ ಕಸರತ್ತು ಅತವಾ ಕಂಪನಿಗಳ ಆಮಿಶ.

ಪರಿಹಾರ ಕಂಡುಕೊಳ್ಳುವತ್ತ ಹೆಜ್ಜೆಗಳು

ಪರಿಹಾರದತ್ತ ಇಣುಕಿದಾಗ ರೈತರ ಪರ ಹೋರಾಟವೆಂಬುದು ಪ್ರತಿಶ್ಟೆಯ ವಿಶಯವಾಗದೇ ರೈತರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಡೆಯಬೇಕು. ಆಳುವ ಸರ‍್ಕಾರಗಳು ತಮ್ಮ ಕರ‍್ತವ್ಯಗಳನ್ನರಿತು ಕಟೋರ ವಿಶರೂಪದ ರಾಸಾಯನಿಕಗಳ ವ್ಯವಸ್ತಿತ ಬಳಕೆಯ ಬಗ್ಗೆ ಅರಿವು ಮೂಡಿಸಬೇಕು, ಕಳಪೆ ಮಟ್ಟದ ರಾಸಾಯನಿಕ ಉತ್ಪಾದಕರ ಪರವಾನಿಗೆಗಳನ್ನು ರದ್ದುಪಡಿಸಬೇಕು. ನಕಲಿ ರಾಸಾಯನಿಕ ಮತ್ತು ರಾಸಾಯನಿಕಗಳ ಕಾಳಸಂತೆಗೆ ಕತ್ತರಿ ಹಾಕಬೇಕು. ಸೂಕ್ತ ಕ್ರುಶಿ ಆದಾರಿತ ರಾಸಾಯನಿಕ ಬಳಕೆಯ ರೂಪುರೇಶೆಯನ್ನು ಸಿದ್ದಗೊಳಿಸಿ ಅದನ್ನು ಕಟ್ಟುನಿಟ್ಟಾಗಿ ಅನುಶ್ಟಾನಗೊಳಿಸಬೇಕು. ರಾಸಾಯನಿಕ ಮಾರಾಟದ ಪ್ರಮಾಣ, ಅವುಗಳ ಬಳಕೆ, ಅವುಗಳ ಬೆಲೆ, ರೈತನ ಹೊಲದಲ್ಲಿ ಅದರಿಂದಾಗುವ ಪರಿಣಾಮ ಇವೆಲ್ಲವುದರ ಬಗ್ಗೆ ನಿಗಾ ವಹಿಸಬೇಕು. ಸಂಬಂದಿತ ಇಲಾಕೆಗಳಿಗೆ ಸೂಕ್ತ ಜವಾಬ್ದಾರಿ ನೀಡಬೇಕು. ಸದ್ಯದ ಪರಿಸ್ತಿತಿ ಹೀಗೆ ಮುಂದುವರೆದಲ್ಲಿ “ಕೃಷಿತೋ ನಾಸ್ತಿ ದುರ್ಭಿಕ್ಷಂ” ಎಂಬ ಯುಕ್ತಿಯ ಅರ‍್ತ ತಲೆಕೆಳಗಾಗುವುದರಲ್ಲಿ ತಡವಾಗಲಾರದು.

(ಚಿತ್ರಸೆಲೆ: pixabay.com )

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: